Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಮನೆಯಿಂದ ಅಜ್ಜೀನ ಹೊರಹಾಕಿ ಸ್ಪೈಡರ್ ಮ್ಯಾನ್‌ನ ಬಿಟ್ಕಂಡ್ವಿ!

ಇದೊಂದು ಸಮಸ್ಯೆ.

ಸಮಸ್ಯೆ ಎಂಬುದಕ್ಕಿಂತ ಹೆಚ್ಚಾಗಿ, ರಗಳೆ. ಶಾಲೆಯ ಅಡ್ಮಿಷನ್ ಸಮಯ ಹತ್ತಿರಾಯಿತೆಂದರೆ ಸಾಕು, ಮೊಬೈಲ್ ಆಫ್ ಮಾಡಿಕೊಂಡು ತಲೆ ತಪ್ಪಿಸಿಕೊಂಡು ಬಿಡಬೇಕೆನ್ನಿಸುತ್ತದೆ. ನಮ್ಮ ಶಾಲೆಯಲ್ಲಿ ಎಲ್.ಕೆ.ಜಿ.ಗೆ ಎಷ್ಟು ಸೆಕ್ಷನ್‌ಗಳಾಗಿವೆಯೆಂದರೆ, ಅದು \'P\' section ತನಕ ಬಂದು ನಿಂತಿದೆ. ಇಷ್ಟು ಸೆಕ್ಷನ್ನಿನ ಮಕ್ಕಳು ಎಸೆಸೆಲ್ಸಿಗೆ ಬರುವ ಹೊತ್ತಿಗೆ ಇವರನ್ನು ಕೂಡಿಸಲು ಕಟ್ಟಡಗಳೆಲ್ಲಿ? ಟೀಚರುಗಳನ್ನು ಎಲ್ಲಿಂದ ತರಲಿ? ಆದರೆ ಕೆಲವು ಬಡ, ಮಧ್ಯಮ ವರ್ಗದ ಮಕ್ಕಳನ್ನು ಕರೆ ತರುತ್ತಾರೆ. ಹಿಂದಿನ ವರ್ಷ ಉಚಿತ ಶಿಕ್ಷಣ ಕೊಟ್ಟ ಮಗು ಈ ವರ್ಷ ಎಷ್ಟು ಪರ್ಸೆಂಟೇಜ್ ತಂದಿದೆ? ಮಾರ್ಕ್ಸ್ ಕಾರ್ಡ್ ತೋರಿಸಿ ಅನ್ನುತ್ತೇನೆ. ಸೀಟು, ಕನ್ಸೆಷನ್ನು ಕೇಳಲಿಕ್ಕೆ ಗಂಡ-ಹೆಂಡತಿ ಇಬ್ಬರೂ ಬರಲೇಬೇಕು ಅನ್ನುತ್ತೇನೆ. ಇದರೊಂದಿಗೆ ನನ್ನ ಮತ್ತೂ ಕೆಲವು ಹಟಗಳಿವೆ.

\'\'ಮೊದಲು ನಿಮ್ಮ ಮನೆಯ ಟೀವಿಯ ಕೇಬಲ್ ಸಂಪರ್ಕ ಕಟ್ ಮಾಡಿಸಿ\'\' ಎಂಬುದು ಮೊದಲ ಹಟ. ಮೊದಲು ಚೆನ್ನಾಗಿದ್ದು, ಕಡಿಮೆ ಮಾರ್ಕು ತಂದುಕೊಂಡ ಮಗುವನ್ನು ಕರೆದು ಕೇಳಿದರೆ, ಅದು ಕೊಡುವ ಉತ್ತರವೇ ಅದು: ಟೀವಿಯಲ್ಲಿ ಬರುವ ಕಾರ್ಟೂನ್ ನೆಟ್‌ವರ್ಕ್! ಅದರ ಅಮ್ಮನನ್ನು ಕೇಳಿ? ದಿನಕ್ಕೆ ಕನಿಷ್ಠ ಮೂರು ಧಾರಾವಾಹಿ ನೋಡುತ್ತಾಳೆ. ಅಲ್ಲಿಗೆ ಮುಗಿಯಿತಲ್ಲ? ಅಮ್ಮ ಧಾರಾವಾಹಿಗೆ ಅಂಟಿಕೊಂಡರೆ, ಮಗು ತನ್ನ ದಾರಿ ಹಿಡಿಯುತ್ತದೆ. ಅದರ ಬದಲಿಗೆ ಮಗುವಿನೊಂದಿಗೆ ಕಾಲ ಕಳೆಯಿರಿ. ಅದಕ್ಕೆ ಕತೆ ಹೇಳಿ. ರಾಮಾಯಣ, ಮಹಾಭಾರತದ ಕತೆಗಳು, ಭೀಮ, ಹನುಮಂತ, ಘಟೋತ್ಕಚ- ಇಂಥವನ್ನು ಹೇಳಿ. ಧೃವನ ಕತೆ, ನಚಿಕೇತನ ಕಥೆ ಹೇಳಿ ಅಂತೀನಿ. ಆದರೆ ಆ ಕತೆಗಳು ಇವರಿಗೇ ಬರುವುದಿಲ್ಲವಲ್ಲ? ಸರಿ ಸುಮಾರು ಏಳು ಸಾವಿರ ಮಕ್ಕಳನ್ನು ನಾನು ಹೇಗೋ ಸಂಭಾಳಿಸಬಲ್ಲೆ. ತಿದ್ದ ಬಲ್ಲೆ. ಆದರೆ ಹದಿನಾಲ್ಕು ಸಾವಿರ ತಂದೆ ತಾಯಿಯರಿಗೆ ಯಾವ ಪಾಠ ಹೇಳಲಿ.

\'ಮಗುವಿಗೆ ಮೊಬೈಲ್ ಕೊಡಿಸಕೂಡದು\' ಅಂದರೆ, \'\'ನಮ್ಮ ಮಗ ಎಲ್ಲಿದಾನೆ ಅಂತ ತಿಳ್ಕೊಳ್ಳೋಕೆ ಕೊಡ್ತಿದೀವಿ\'\' ಅಂತಾರೆ. ಹಾಗಾದರೆ ನಿಮ್ಮಪ್ಪ ನೀವೆಲ್ಲಿದ್ದೀರಿ ಅಂತ ಮೊಬೈಲ್ ಇಲ್ಲದ ಕಾಲದಲ್ಲಿ ಹೇಗೆ ತಿಳಿದುಕೊಳ್ಳುತ್ತಿದ್ದರು? ಉಹುಂ, ಉತ್ತರವಿಲ್ಲ. ಮಗೂಗೆ pocket money ಕೊಡಕೂಡದು ಎಂಬ ನಿಯಮ ನಂದು. ಅದು ಶಾಲೆಯ ಅಕ್ಕಪಕ್ಕ ಬೇಕರಿಯಲ್ಲಿ ಕಾಣಿಸಿದರೆ, ಊಟದ ಬದಲು ಬೇಕರಿ food ತಂದರೆ ಅವತ್ತೇ ಟಿ.ಸಿ. ಕೊಟ್ಟು ಹೊರ ಹಾಕುತ್ತೇನೆ. ತಾಯಂದಿರಿಗೆ ತಿಂಡಿ ಮಾಡಲು ಸೋಮಾರಿತನ. ಕೈಗಿಷ್ಟು ಹಣ ಕೊಟ್ಟು ಕಳಿಸಿ ಬಿಡುತ್ತಾರೆ. \'\'ನೀವೆಲ್ಲ ಬೇಕರಿಯಲ್ಲಿ ತಿಂದು, ಪೆಪ್ಸಿ ಕುಡಿದು ಬೆಳೆದವರಾ?\'\' ಕೇಳಿದರೆ ಕಕ್ಕಾಬಿಕ್ಕಿಯಾಗುತ್ತಾರೆ.

ಹಾಗೇನೇ, ಮಕ್ಕಳು ಸೈಬರ್ ಕೆಫೆಗಳಿಗೆ ಹೋಗಬಾರದು ಎಂಬ ನಿಯಮ ನಂದು. ನಮ್ಮ ಶಾಲೆಯಲ್ಲಿ ಇಂಟರ್‌ನೆಟ್ ಸೌಲಭ್ಯವಿರುವ ಸುಮಾರು 150 ಕಂಪ್ಯೂಟರುಗಳಿವೆ. ಟೀಚರುಗಳ ಮೇಲ್ವಿಚಾರಣೆಯಲ್ಲಿ ಮಗು ಕಂಪ್ಯೂಟರ್ ಕಲಿಯುತ್ತದೆ. ಹಾಗಾದರೆ ಕೆಫೆಗಳಿಗೇಕೆ ಕಳಿಸುತ್ತೀರಿ?

ಇದನ್ನೆಲ್ಲ ಯೋಚಿಸಿದಾಗ ಈ ಕಾರ್ಟೂನ್ ನೆಟ್‌ವರ್ಕ್, ಈ ಹ್ಯಾರಿ ಪಾಟರ್, ಭೀಮ್ ಸೀರಿಯಲ್ ಮುಂತಾದವೆಲ್ಲ ನಮ್ಮವೇ ಮನೆಯೊಳಕ್ಕೆ ಬಿಟ್ಟುಕೊಂಡ ಪೆಡಂಭೂತಗಳು ಅನ್ನಿಸುತ್ತದೆ. ಯಾವಾಗ ನಾವು ಮನೇಲಿದ್ದ ತಾಯಂದಿರನ್ನು ಹೊರ ಹಾಕಿ, ಮಕ್ಕಳಿಗೆ ಅಜ್ಜಿಯರಿಲ್ಲದಂತೆ ಮಾಡಿದೆವೋ, ಆಗ ಸಹಜವಾಗಿಯೇ ಅವರಿಗೆ ಕಥೆ ಹೇಳುವವರಿಲ್ಲದಾಯಿತು. ಅದನ್ನು compensate ಮಾಡಿ ಹಣ ಮಾಡಿಕೊಳ್ಳುತ್ತಿರುವವರು \'ಸ್ಪೈಡರ್ ಮ್ಯಾನ್‌\'ನಂಥವುಗಳ ಸೃಷ್ಟಿಕರ್ತರಾದ ರಿಲಯನ್ಸ್ ಕಂಪೆನಿಯವರು.

ಅಂಥವುಗಳಿಗೆ ಪರ್ಯಾಯವಾಗಿ ಕನ್ನಡದಲ್ಲಿ ನಾವು ಏನನ್ನಾದರೂ ಏಕೆ ಮಾಡಬಾರದು?

ಯೋಚಿಸುತ್ತಿದ್ದೇನೆ.

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 30 April, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books