Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ತಾಲಿಬಾನಿ ಯೋಧರ ಶವಗಳ ಮೇಲೆ ಅಮೆರಿಕದ ಸೈನಿಕರು ಉಚ್ಚೆ ಹುಯ್ದ ಚಿತ್ರ

ಇದು ಬದಲಾವಣೆಯಾ? ಮೊದಲ ಬಾರಿಗೆ ಪಾಕಿಸ್ತಾನ \'ಶಾಂತಿ\'ಯ ಕುರಿತು ಮಾತನಾಡುತ್ತಿದೆ: ಭಾರತದೊಂದಿಗೆ. ಇತ್ತೀಚೆಗೆ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಧಾರ್ಮಿಕ ಕಾರಣಗಳಿಗಾಗಿ ಅಜ್ಮೇರದ ಷೇಕ್ ಸಲೀಮ್ ಚಿಷ್ತಿ ಸಮಾಧಿಗೆ ಭೇಟಿ ನೀಡಿದರು. ಅದು ನೆಪವಿರಬಹುದು. ಆದರೆ ಭಾರತದ ಪ್ರಧಾನಿ ಮನಮೋಹನ ಸಿಂಗ್‌ರೊಂದಿಗೆ ಆಡಿದ ಮಾತುಗಳಲ್ಲಿ ಜರ್ದಾರಿಯ ಧಾಟಿ ಬೇರೆಯೇ ಇತ್ತು. ಎರಡೂ ದೇಶಗಳ ಮಧ್ಯೆ ಇರುವ ಹತ್ತಾರು ತಕರಾರುಗಳನ್ನು ನಾವು ಅರ್ಥಪೂರ್ಣವಾದ, ಕಣ್ಣೊರೆಸುವ ಮಾದರಿಯಲ್ಲಿ ಅಲ್ಲದ, pragmatic ಆದ ರೀತಿಯಲ್ಲಿ ಪರಿಹರಿಸಿಕೊಳ್ಳ ಬಯಸುತ್ತೇವೆ ಎಂದು ಹೇಳಿದರು.

ನೆನಪು ಮಾಡಿಕೊಳ್ಳಿ: ಪರ್ವೇಜ್ ಮುಷರ್ರಫ್ ತಾಜಮಹಲು ನೋಡಲು ಪತ್ನಿಯೊಂದಿಗೆ ಬಂದವನು, ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯೊಂದಿಗೆ ಮುನಿಸಿಕೊಂಡು ಭೇಟಿ ಕೂಡ ಮಾಡಲೊಲ್ಲೆ ಎಂಬಂತೆ ಕಡ್ಡಿ ಮುರಿದಿದ್ದ. ಎಷ್ಟಾದರೂ ಮುಷರ್ರಫ್ ಸೇನೆಯ ದಂಡನಾಯಕ. ಇಡೀ ಕಾರ್ಗಿಲ್ ಸಂಚಿನ ರೂವಾರಿ. ಆದರೆ ಈತ, ಅಸೀಫ್ ಅಲಿ ಜರ್ದಾರಿ ಒಬ್ಬ ರಾಜಕಾರಣಿ. ಪರಿಸ್ಥಿತಿ ಅರ್ಥ ಮಾದಿಕೊಳ್ಳಬಲ್ಲ. ಅಮೆರಿಕದ ಒದೆ ಪಾಕಿಸ್ತಾನದ ಮೇಲೆ ಯಾವ ಪರಿ ಬಿದ್ದಿದೆಯೆಂದರೆ, ಅಮೆರಿಕದ ಸ್ನೇಹಕ್ಕಿಂತ, ಭಾರತದೊಂದಿಗೆ ಸಂಬಂಧ ಸರಿಯಿಟ್ಟುಕೊಳ್ಳುವುದೇ ವಾಸಿ ಎಂಬ ಪರಿಸ್ಥಿತಿ ಅದಕ್ಕೆ ಬಂದಿದೆ.

ಅದರೆ ಬೆನ್ನಲ್ಲೇ ಪಾಕಿಸ್ತಾನ್ ಆಕ್ರಮಿಸಿಕೊಂಡ ಕಾಶ್ಮೀರ (Pak Occupied Kashmir) ಪ್ರಾಂತ್ಯದಲ್ಲಿ, ಅಂದರೆ ಸಿಯಾಚಿನ್ ಸಮೀಪದ ಕರಕೋರಮ್‌ನ ಘಯಾರಿ ಜಿಲ್ಲೆಯಲ್ಲಿ ಭಯಾನಕವಾದ ಆವಲಾಂಚ್ ಅಪ್ಪಳಿಸಿದೆ. ಬೀಸುವ ಬಲವಾದ ಕುಳಿರ್ಗಾಳಿಗೆ ಒಂದಿಡೀ ಹಿಮ ಬಂಡೆ ಸರಿದು ಹಾರಿ ಬಂದು ತನಗೆ ತೋಚಿದ ಜಾಗದಲ್ಲಿ ಬಿದ್ದುಬಿಡುತ್ತದೆ. ಆವಲಾಂಚ್ ಬೀಳುವುದು ಅಂದರೆ ಒಂದು ಹಿಮರಾಶಿ ಬೀಳುವುದು. ಒಮ್ಮೊಮ್ಮೆ ಐವತ್ತು ಅರವತ್ತು ಅಡಿಯಷ್ಟು ಹಿಮ ಕುಪ್ಪಳಿಸಿ ಬಿದ್ದು ಬಿಡುತ್ತದೆ. ಈ ಸಲ ಅದು ಬಿದ್ದಿರುವುದು ಪಾಕಿಸ್ತಾನದ ಸೈನ್ಯ ಬೀಡು ಬಿಟ್ಟಿದ್ದ ಹಿಮಾಲಯ ಪರ್ವತದ ಕರಕೋರಮ್ ಪ್ರಾಂತ್ಯದ ಮೇಲೆ. ದುರಂತವೆಂದರೆ ನೂರಾ ಇಪ್ಪತ್ನಾಲ್ಕು ಜನ ಪಾಕಿ ಯೋಧರೂ ಸೇರಿದಂತೆ ನೂರಾ ಮೂವತ್ತೈದು ಜನ ಆ ಹಿಮರಾಶಿಯ ಅಡಿಯಲ್ಲಿ ಹೂತು ಹೋಗಿದ್ದಾರೆ. ಅವರೆಲ್ಲ ಪಾಕ್‌ನ ನಾರ್ದರ್ನ್ ಲೈಟ್ ಇನ್‌ಫೆಂಟ್ರಿಯವರು.

ನಿಮಗೆ ಗೊತ್ತಿರಲಿ, ಸಿಯಾಚಿನ್ ಗ್ಲೇಷಿಯರ್ ಎಂಬುದು ಸಮುದ್ರ ಮಟ್ಟದಿಂದ ಇಪ್ಪತ್ತೆರಡು ಸಾವಿರ ಅಡಿ ಎತ್ತರದಲ್ಲಿದೆ ಮತ್ತು ಜಗತ್ತಿನಲ್ಲೇ ಅದು ಅತಿ ಎತ್ತರದ ಯುದ್ಧ ಭೂಮಿ. ಅಲ್ಲಿ ಬೇರೆ ಯಾರೂ ವಾಸಿಸುವುದಿಲ್ಲ. ಆ ಮಂಜಿನಲ್ಲಿ ಏನೂ ಬೆಳೆಯುವುದಿಲ್ಲ. ಆದರೆ ಎರಡೂ ದೇಶಗಳಿಗೆ ಸಿಯಾಚಿನ್‌ನ ವಿಷಯದಲ್ಲಿ ಭಯ ಮತ್ತು ಪ್ರತಿಷ್ಠೆ. ಈ ದುರ್ಗಮ ಹಿಮ ಸೀಮೆಯ ಮೇಲೆ ಯಾರು ಹಿಡಿತವಿಟ್ಟುಕೊಳ್ಳಬೇಕು ಎಂಬ ವಿವಾದ ತೀವ್ರಗೊಂಡದ್ದು 1948ರಲ್ಲಿ. \'\'ಸಿಯಾಚಿನ್‌ಗೆ ಮೊದಲು ಭಾರತ ತನ್ನ ಸೈನಿಕರನ್ನು ಕಳಿಸಿತು. ಅದಕ್ಕೆ ಪ್ರತಿಕ್ರಮವಾಗಿ ನಾವೂ ಸೈನ್ಯ ಕಳಿಸಿದೆವು\'\' ಎಂದು ಪಾಕಿಸ್ತಾನ್ 1984ರಿಂದಲೂ ವಾದಿಸುತ್ತ ಬಂದಿದೆ. ದುರಂತವೆಂದರೆ, ಅಲ್ಲಿ ನಡೆದ ಯುದ್ಧ್ದಕ್ಕಿಂತ, ಗುಂಡಿನ ಚಕಮಕಿಗಿಂತ ಹೆಚ್ಚು ಸೈನಿಕರನ್ನು ಕೊಂದಿರುವುದು ಹಿಮ. ಮೂವತ್ತು ವರ್ಷದಲ್ಲಿ ಅವೆಷ್ಟು ಸಾವುಗಳು ಎರಡೂ ಕಡೆ ಸಂಭವಿಸಿವೆಯೋ?

ಗೊತ್ತಿರಲಿ, ಪಾಕಿಸ್ತಾನ್ ಒಂದು ವರ್ಷಕ್ಕೆ ಮುನ್ನೂರು ಮಿಲಿಯನ್ ಡಾಲರ್‌ಗಳನ್ನು ಸಿಯಾಚಿನ್‌ನಲ್ಲಿ ಸೈನ್ಯ ಸಾಕಲಿಕ್ಕಾಗಿ ಬಳಸುತ್ತದೆ. ಅಷ್ಟೇ ಮೊತ್ತದ ಹಣವನ್ನು ಭಾರತವೂ ಖರ್ಚು ಮಾಡುತ್ತಿದೆ. ಅವತ್ತಿನ ೧೯೮೪ರಿಂದ ಈ ೨೦೧೨ರ ಮಧ್ಯೆ ಎರಡೂ ದೇಶಗಳ ಎಂಟು ಸಾವಿರ ಸೈನಿಕರು ಸತ್ತಿದ್ದಾರೆ. ಇಷ್ಟಾಗಿ ಹಿಮಾಚ್ಛಾದಿತ ಸಿಯಾಚಿನ್ ಗ್ಲೇಷಿಯರ್‌ನಿಂದ ಆದ ಲಾಭವೇನು?

ಅದೊಂದು senseless, stupid war.

ಇದು ಎರಡೂ ದೇಶಗಳಿಗೆ ಅರ್ಥವಾಗಿದೆ. ಆದರೆ ಪಾಕಿಸ್ತಾನದ ದಂಡನಾಯಕ ಜನರಲ್ ಕಯಾನಿಗೆ ಅರ್ಥವಾಗಿದೆಯಲ್ಲ? ಅದು ಅಚ್ಚರಿಯ ಸಂಗತಿ.

\'\'ಇಲ್ಲ, ನೆರೆಯ ದೇಶವಾದ ಭಾರತದೊಂದಿಗೆ ಸ್ನೇಹಪೂರ್ಣ ಸಂಬಂಧ ಪಾಕಿಸ್ತಾನಕ್ಕೆ ಅಗತ್ಯ. ಇದು ಇಬ್ಬರಿಗೂ ಒಳ್ಳೆಯದು. ಮುಖ್ಯವಾಗಿ ಜನಸಾಮಾನ್ಯರ ಒಳಿತಿಗೆ ಇದು ಸಹಕಾರಿ. ಅನಗತ್ಯವಾದ ಖರ್ಚನ್ನು ಇಬ್ಬರೂ ಉಳಿಸಬಹುದು. ಸೇನೆ ಒಯ್ದು ನಿಲ್ಲಿಸುವ ಮೂಲಕ ಪರಿಶುದ್ಧವಾದ ಸಿಯಾಚಿನ್ ಗ್ಲೇಷಿಯರ್‌ನ ಪರಿಸರವನ್ನು ನಾವು ಅದೆಷ್ಟು ಹಾಳು ಮಾಡಿದ್ದೇವೆ. ಅದರ ಬದಲು ನಾವು ನಮ್ಮ ದೇಶಗಳ ಅಭಿವೃದ್ಧಿಗಾಗಿ ಶ್ರಮಿಸಬೇಕು. ಗ್ಲೇಷಿಯರ್‌ನಿಂದ ಸೇನೆಗಳನ್ನು ಹಿಂದಕ್ಕೆ ಕರೆಸಿಕೊಂಡು ಆ ಹಣ ಪೋಲಾಗುವುದನ್ನು ನಿಲ್ಲಿಸಬೇಕು. ಮುಖ್ಯ ಸಂಗತಿಯೆಂದರೆ, ನಮ್ಮ ದೇಶಗಳ ಸರಹದ್ದನ್ನು ಪಕ್ಕದ ದೇಶದ ಸೇನೆಯ ಆಕ್ರಮಣದಿಂದ ರಕ್ಷಿಸುವುದಷ್ಟೇ ದೊಡ್ಡ ಕೆಲಸವಲ್ಲ. ಏನನ್ನೂ ಬೆಳೆಯಲಾಗದ, ಜನ ಜೀವನವೂ ಸಾಧ್ಯವಿಲ್ಲದ ಆ ಹಿಮ ರಾಶಿಯ ಮೇಲೆ ಬಿಲಿಯನ್‌ಗಟ್ಟಲೆ ಹಣ ಚೆಲ್ಲಿದರೆ ಏನು ಉಪಯೋಗ? ಅದರ ಬದಲಿಗೆ ನಾವು ದೇಶದ ಅಭಿವೃದ್ಧಿಯ ಬಗ್ಗೆ, ಜನ ಸಾಮಾನ್ಯರ ಅವಶ್ಯಕತೆ ಮತ್ತು ಹಸಿವಿನ ಬಗ್ಗೆ ಯೋಚಿಸಬೇಕು. ಸಿಯಾಚಿನ್ ಗ್ಲೇಷಿಯರ್ ಕಲುಷಿತಗೊಂಡರೆ ಸಿಂಧೂನದಿ ಹಾಳಾಗುತ್ತದೆ. ಇಂತಿಷ್ಟೇ ದಿನಗಳಲ್ಲಿ ಆಗಬೇಕು ಅಂತ ನಾನು ಹೇಳುತ್ತಿಲ್ಲ. ಆದರೆ ಇಸ್ಲಾಮಾಬಾದ್ ಮತ್ತು ದಿಲ್ಲಿ ಸಿಯಾಚಿನ್‌ನಿಂದ ಎರಡೂ ಕಡೆಯ ಸೈನ್ಯಗಳನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು\'\' ಅಂದಿದ್ದಾರೆ ಜನರಲ್ ಕಯಾನಿ.

ಪಾಕಿಸ್ತಾನದ ಒಬ್ಬ ಛೀಫ್ ಆಫೀಸರ್ ಆರ್ಮಿ ಸ್ಟ್ಯಾಫ್ ಈ ಧಾಟಿಯಲ್ಲಿ ಮಾತನಾಡಿದ್ದು ಇತಿಹಾಸದಲ್ಲಿ ಬಹುಶಃ ಇದೇ ಮೊದಲು. ಇದಕ್ಕೆ ಕರಕೋರಮ್‌ನಲ್ಲಿ ನೂರಾ ಮೂವತ್ತೈದು ಜನ ಹಿಮದಲ್ಲಿ ಹೂತು ಹೋಗಿರುವುದೊಂದೇ ಕಾರಣವಾ?

ಖಂಡಿತ ಅಲ್ಲ.

ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ್ ತನ್ನ ಮರ್ಯಾದೆ ಕಳೆದುಕೊಂಡಿದೆ. ಅದು ತನ್ನನ್ನು ತಾನು ಅಮೆರಿಕಕ್ಕೆ ಅಡವಿಟ್ಟು, ಶುದ್ಧ ವೇಶ್ಯೆಯಂತಾಗಿಹೋಯಿತು. ಇವತ್ತು ಒಸಾಮಾ ಬಿನ್ ಲ್ಯಾಡೆನ್‌ನನ್ನು ತನ್ನಲ್ಲಿಟ್ಟುಕೊಂಡು ಇದ್ದಕ್ಕಿದ್ದಂತೆ ಜಗತ್ತಿನೆದುರು rogue nation ಅನ್ನಿಸಿಕೊಂಡ ಮಾತು ಬಿಡಿ. ಸುಮಾರು ಐವತ್ತು ವರ್ಷಗಳ ಹಿಂದೆಯೇ ಇಂಡಿಯನ್ ಓಷನ್‌ನ ಡೈಗೋಗಾರ್ಸಿಯಾದಲ್ಲಿ ಅಮೆರಿಕವು ತನ್ನ ಮಿಲಿಟರಿ ನೆಲೆ ಹೊಂದಲು ಯತ್ನಿಸಿತ್ತು ಮತ್ತು ಅದು ಭಾರತದ ವಿರುದ್ಧ ಪಾಕಿಸ್ತಾನವನ್ನು ಬೆಂಬಲಿಸಿ ಇಡೀ ಈ ಭಾಗದ ಭೂಖಂಡದ ಮೇಲೆ ಹಿಡಿತ ಸಾಧಿಸಲು ಯತ್ನಿಸಿತ್ತು ಎಂಬುದು ತೀರ ನಿನ್ನೆ ಮೊನ್ನೆ ಬಯಲಾಗಿದೆ. ಡೈಗೋ ಗಾರ್ಸಿಯಾ ಎಂಬುದು ಹಿಂದೂ ಮಹಾಸಾಗರದ ಒಂದು ದ್ವೀಪ. ಅಲ್ಲಿಯ ಜನರನ್ನು ಒಕ್ಕಲೆಬ್ಬಿಸಿ, ಅಮೆರಿಕಾ ತನ್ನ ನೌಕಾ ನೆಲೆಯನ್ನು ಅಲ್ಲಿ ಸ್ಥಾಪಿಸಿತು. ಇದನ್ನು ಭಾರತ ಅವತ್ತಿನಿಂದಲೂ ಪ್ರತಿಭಟಿಸುತ್ತಿತ್ತು. ಆದರೆ ಅಮೆರಿಕದೊಂದಿಗೆ ಇಂಗ್ಲಂಡ್ ಕೈ ಜೋಡಿಸಿತ್ತು. ಆಗ ಭಾರತ ಮತ್ತು ಪಾಕಿಸ್ತಾನ್ ನಡುವೆ ಕುದಿಯುತ್ತಿದ್ದುದು ಶುದ್ಧ ದ್ವೇಷ. ಆಗ ಅಮೆರಿಕ ಮಾಡಿದ ತಂತ್ರವನ್ನು ಅವಿವೇಕಿ ಪಾಕಿಸ್ತಾನ್ ಬೆಂಬಲಿಸಿತು. ತೀರ ಮೊನ್ನೆ ಮೊನ್ನೆ ಅಫಘನಿಸ್ತಾನದ ವಿರುದ್ಧ \'war against terror\' ಎಂದು ಘೋಷಿಸಿ ಅಮೆರಿಕಾ ಬಂದೂಕು ಹಿಡಿಯಿತಲ್ಲ? ಆಗಲೂ ಅಮೆರಿಕದ ವಿಮಾನಗಳಿಗೆ ನೆಲೆಯಾದದ್ದು ಹಿಂದೂ ಮಹಾಸಾಗರದ ಡೈಗೋ ಗಾರ್ಸಿಯಾ ದ್ವೀಪವೇ. ಇಲ್ಲಿಂದಲೇ ಅದು ಇರಾಕ್‌ಗೂ ಮಿಸೈಲ್ ಹೊಡೆಯಿತು.

ಆದರೆ ಅಮೆರಿಕಕ್ಕೆ ಪೂರ್ತಿ ಹಾಸಿಗೆ ಒದಗಿಸಿ ಅಂಗಾತ ಮಲಗಿದ್ದ ಪಾಕಿಸ್ತಾನಕ್ಕೆ ಈಗ ಬುದ್ಧಿ ಬಂದಂತಿದೆ. ಪಾಕಿಸ್ತಾನದ ಸಂಪೂರ್ಣ ಮಿಲಿಟರಿ, ಪೊಲೀಸು-ಅಮೆರಿಕದ ಕಬ್ಜೆಯಲ್ಲಿದೆ. ಅಫಘನಿಸ್ತಾನದಲ್ಲಿ ಅಮೆರಿಕದ ಯೋಧರು ಎಸಗುತ್ತಿರುವ ಹಿಂಸಾಚಾರ ಕೇವಲ ಅಫಘಸ್ತಾನಿಗಳನ್ನಲ್ಲ: ಪಾಕಿಸ್ತಾನದ ಮುಸ್ಲಿಮರನ್ನೂ ರೊಚ್ಚಿಗೆಬ್ಬಿಸಿದೆ. ಬಿಡಿ, ತಾಲಿಬಾನ್ ಉಗ್ರವಾದಿಗಳು ಸಂಪನ್ನರಲ್ಲ. ಅವರಿಂದ ಸಾವು ನೋವುಗಳಾಗಿವೆ. ನೂರಾರು ಅಮೆರಿಕದ ಯೋಧರೇ ಸತ್ತಿದ್ದಾರೆ. ಆದರೆ ಪ್ರತಿ ಯುದ್ಧಕ್ಕೂ ಒಂದು ಘನತೆಯಿರಬೇಕು. ಜನವರಿ ಹನ್ನೊಂದು, 2012ರಂದು ತೆಗೆದ ಒಂದು ಚಿತ್ರದಲ್ಲಿ ನಾಲ್ವರು ಅಮೆರಿಕನ್ ಸೈನಿಕರು, ತಾವು ಕೊಂದ ತಾಲಿಬಾನ್ ಯೋಧರ ಹೆಣಗಳ ಮೇಲೆ ಉಚ್ಚೆ ಹುಯ್ಯುವ ದೃಶ್ಯ ಅಮೆರಿಕದ \'ಲಾಸ್ ಏಂಜಲೀಸ್ ಟೈಮ್ಸ್‌\'ನಲ್ಲೇ ಪ್ರಕಟವಾಗಿದೆ. ಎಂಥ ಹಾಹಾಕಾರವನ್ನು ಈ \'ಉಚ್ಚೆ ಹುಯ್ಯುವ\' ಫೊಟೋ ಎಬ್ಬಿಸಿದೆಯೆಂದರೆ ಇಡೀ ಅಮೆರಿಕ ತಲೆ ತಗ್ಗಿಸಿ ನಿಲ್ಲುವಂತಾಗಿದೆ. ಅದರ ಮುಖಂಡರು ಜಗತ್ತಿನ ಕ್ಷಮೆ ಕೇಳುವಂತಾಗಿದೆ.

ಜಿನೀವಾ ಒಪ್ಪಂದದ ಪ್ರಕಾರ ಸತ್ತವರು ಯಾರೇ ಇರಲಿ, ಅವರ ಮೃತದೇಹವನ್ನು ಅವಮಾನಿಸುವಂತಿಲ್ಲ: ಅವರು ಯಾರೇ ಆಗಿರಲಿ- ಎಂಥ ದುಷ್ಟರೇ ಆಗಿರಲಿ. ಮೊದಲೇ ಮುಸ್ಲಿಂ ಪ್ರಪಂಚದಲ್ಲಿ ಅಮೆರಿಕಾದ ಬಗ್ಗೆ ಹೇಸಿಗೆ ಹುಟ್ಟಿದೆ. ನೀವು ಷಾರುಕ್‌ಖಾನ್ ಪ್ರಕರಣವನೇ ತೆಗೆದುಕೊಳ್ಳಿ. ಅಮೆರಿಕದಲ್ಲಿ ಆತನಿಗೆ ಆದ ಅವಮಾನವಿದೆಯಲ್ಲ? ಕೇವಲ ಆತ ಮುಸ್ಲಿಮನೆಂಬ ಕಾರಣಕ್ಕೆ ಆಯಿತು. ಒಬ್ಬ ಸಭ್ಯ ಮುಸಲ್ಮಾನ ಆತ. ಅಂಥ ಲಕ್ಷಾಂತರ ಸಭ್ಯ ಮುಸಲ್ಮಾನರ ನೋವು ನಿಮಗೆ ಅರ್ಥವಾಗಬೇಕೆಂದರೆ ನೀವು \'Good Muslim: Bad Muslim\' ಎಂಬ ಕೃತಿ ಓದಬೇಕು. ಅಮೆರಿಕದ ಅರ್ಥಹೀನ ದಬ್ಬಾಳಿಕೆ ಯಾವ ಮಟ್ಟ ಮುಟ್ಟಿದೆಯೆಂದರೆ \'ನಾನು Good Muslim\' ಅಂತ ಸಾಬೀತು ಮಾಡಿಯೇ ಬದುಕಬೇಕು. ಇದು \'human deeency\'ಯ ಅಕ್ಷರಶಃ ಮಾನಭಂಗವಲ್ಲವೆ?

ನೆನಪಿರಲಿ, ಕಾರ್ಗಿಲ್‌ನ ಬೆಟ್ಟಗಳಲ್ಲಿ ಭಾರತೀಯರ ಗುಂಡೇಟಿನಿಂದ ಸತ್ತ ಪಾಕಿ ಸೈನಿಕರಿಗೆ ನಮ್ಮ ಸೇನೆ ಗೌರವಯುತ ಅಂತ್ಯಕ್ರಿಯೆಯನ್ನು ಮುಸ್ಲಿಂ ಧರ್ಮದ ಅನುಸಾರವಾಗಿಯೇ ನೀಡಿತ್ತು. ಆದರೆ ಅಫಘನಿಸ್ತಾನದಲ್ಲಿ ಅಮೆರಿಕದ ಸೈನಿಕರು ತಾಲಿಬಾನಿ ಯೋಧರ ಶವಗಳನ್ನು ರಸ್ತೆ ರಸ್ತೆಗಳಲ್ಲಿ ಎಳೆದಾಡಿದರು. ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ ಅನ್ನು ಬಹಿರಂಗವಾಗಿ ಸುಟ್ಟರು. ಕಡೆಗೆ ಶವಗಳ ಮೇಲೆ ಉಚ್ಚೆ ಹುಯ್ದರು. ಕತ್ತರಿಸಿದ ತಾಲಿಬಾನಿ ಯೋಧರ ಕಾಲುಗಳನ್ನು war trophyಗಳಂತೆ ಹಿಡಿದುಕೊಂಡು ಫೊಟೋ ತೆಗೆಸಿಕೊಂಡರು. ಅಷ್ಟೇ ಅಲ್ಲ, ಒಬ್ಬ ಅಮೆರಿಕನ್ ಸಾರ್ಜೆಂಟ್ ರಾತ್ರಿ ಕುಡಿದು ಅಫಘನಿಸ್ತಾನದ ಒಂದು ಹಳ್ಳಿಗೆ ನುಗ್ಗಿ ವಿನಾಕಾರಣ ಹದಿನೇಳು ಜನ ಅಮಾಯಕ ಅಫಘಾನಿಗಳನ್ನು ಕೊಂದುಬಿಟ್ಟ.

ಇಷ್ಟಾಗಿ, ಅಮೆರಿಕದ ಯುದ್ಧಕ್ಕೆ (on war of terror) ಅಂತ್ಯವಿದೆಯೆ? ಒಸಾಮಾ ಸಾಯುವುದರೊಂದಿಗೆ ಇದು ಮುಗಿಯುವ ಯುದ್ಧವಾ? ಅಫಘನಿಸ್ತಾನವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವುದರಿಂದ ಅಮೆರಿಕಕ್ಕೆ ಏನು ಲಾಭವಿದೆ ಎಂಬುದು ಜಗತ್ತಿಗೆ ಗೊತ್ತು. ಅದು ಈಗ ಪಾಕಿಸ್ತಾನಕ್ಕೂ ಗೊತ್ತಾಗಿದೆ. ಅದರಿಂದಾಗಿ, ಪಾಕ್‌ನ ಸರ್ಕಾರ ಮತ್ತು ಸೈನ್ಯ ಭಾರತದೊಂದಿಗೆ ಸಂಬಂಧ ಸರಿಪಡಿಸಿಕೊಳ್ಳುವ ಮಾತಾಡುತ್ತಿದ್ದಾರೆ. ಅದೂ ಒಂದರ್ಥದಲ್ಲಿ ಒಳ್ಳೆಯದೇ. ಪಕ್ಕದ ಮನೆಗೆ ಬೆಂಕಿ ಹೊತ್ತಿದರೆ ನಾವು ಸಂತೋಷ ಪಡಬಾರದು. ಬೆಂಕಿ ನಮ್ಮ ಮನೆಗೂ ಹರಡುತ್ತದೆ. ಇಂಥದೊಂದು ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಮತ್ತೊಂದು ಸಲ ಅಫಘನಿಸ್ತಾನಕ್ಕೆ ಹೋಗಿ ಬರಲಾ ಅಂತ ಯೋಚಿಸುತ್ತಿದ್ದೇನೆ.

ಅಫಘನಿಸ್ತಾನಕ್ಕೆ ಹೋಗಬೇಕೆಂದರೆ ಒಂದೋ ಪಾಕಿಸ್ತಾನದ ಮೂಲಕ ಹೋಗಬೇಕು. ಅಥವಾ ಇರಾಣದ ಮೂಲಕ ಹೋಗಬೇಕು ಅಂದುಕೊಳ್ಳುತ್ತಾರೆ, ಭೂಗೋಳ ಗೊತ್ತಿಲ್ಲದ ಅಮಾಯಕರು. ದಿಲ್ಲಿಯಿಂದ ತಾಷ್ಕೆಂಟ್‌ಗೆ ಹೋಗಿ. ಅದು ಉಜ್ಬೆಕಿಸ್ತಾನದ ರಾಜಧಾನಿ. ಅಲ್ಲಿಂದ ತಝಕಿಸ್ತಾನದ ರಾಜಧಾನಿ ದುಶಾನ್ಬೆ ಗೆ ಹೋಗಿ. ದುಶಾನ್ಬೆಯಿಂದ by road ಕೆಲವೇ ಕಿಲೋಮೀಟರು ಹೋದರೆ ನಿಮಗೆ \'ಅಮು ದರಿಯಾ\' ಎಂಬ ನದಿ ಸಿಗುತ್ತದೆ. ಅದನ್ನು ದಾಟಿದರೆ ನೀವು ಕಾಲಿಡುವುದೇ ಅಫಘನಿಸ್ತಾನದೊಳಕ್ಕೆ. ನಾನು ಈ ಹಿಂದೆ ಹೋದದ್ದೂ ಹಾಗೆಯೇ.

\'\'ಆದರೆ ಈಗ ಹೋಗುವುದು how safe?\'\' ಅಂತ ಗೆಳೆಯರೊಬ್ಬರಿಗೆ ಮೆಸೇಜು ಕೊಟ್ಟಿದ್ದೇನೆ.

ಉತ್ತರ ಬಂದಿಲ್ಲ.

-ರವಿ ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 28 April, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books