ಅದರ ಹೆಸರು ಸಾಲ : ಕೊಡುವವನು ಪಡೆವವನು ಇಬ್ಬರೂ ಯೋಚಿಸಲಿ
\'ದೊಡ್ಡ ಲಾಭ!\'
ಉದ್ಗರಿಸಿದರು ಹುಡುಗರು. ಅವರಿಗೆ ನಾನು ಒಡೆಯನೇ ಆದರೂ, ಇನ್ನೂ ಅಪರಿಚಿತ. ಮೊದಲು ಪ್ರತಿನಿತ್ಯ ಕೆಲವು ಗಂಟೆಗಳ ಕಾಲ, at least ಸಾಯಂಕಾಲದ ಹೊತ್ತು ಗಾಂಧಿಬಜಾರ್ನ ನನ್ನ ಪುಸ್ತಕ ಮಳಿಗೆ ಬಿ.ಬಿ.ಸಿಯಲ್ಲಿ ಕಳೆಯಬೇಕು ಅಂದುಕೊಳ್ಳುತ್ತಿದ್ದೆ. ಅದು ಸಾಧ್ಯವಾಗಲಿಲ್ಲ. ಕಡೇಪಕ್ಷ ಶನಿವಾರ-ಭಾನುವಾರ ಹೋಗಿದ್ದು ಬರೋಣ ಅಂದುಕೊಂಡೆ. ಅದೂ ಕಷ್ಟವಾಯಿತು. ಆದರೆ ವ್ಯಾಪಾರ? ಶುಕ್ರವಾರದಿಂದ ಭಾನುವಾರದ ತನಕ ಪ್ರತಿನಿತ್ಯ ಏನಿಲ್ಲವೆಂದರೂ ನಲವತ್ತೈದು ಸಾವಿರ ರುಪಾಯಿಗಳ ವ್ಯಾಪಾರವಾಗುತ್ತಿದೆ ಅಂತ ಹುಡುಗರು ಹೇಳಿದಾಗ ಮನಸ್ಸಿಗೆ ಎಂಥದೋ ಸಮಾಧಾನ.
ನಾನು ತುಂಬ smart ಆದ ವ್ಯಾಪಾರಿಯಲ್ಲ. ಯಾವುದೇ MBA ತರಹದ ಡಿಗ್ರಿಗಳನ್ನು ಮಾಡಿಲ್ಲ. \'ನೀವು ಹೇಗೆ ಅತ್ಯುತ್ತಮ CEO ಆಗಬಹುದು\' ಅಥವಾ \'ವಿಜಯಕ್ಕೆ ಐದೇ ಮೆಟ್ಟಿಲು-ಎಂಟೇ ಇಂಚು\' ಎಂಬಂಥ ಪುಸ್ತಕಗಳನ್ನೂ ನಾನು ಈ ತನಕ ಓದಿಲ್ಲ. ಆದರೆ ನನಗೆ ಕಣ್ಣಂದಾಜಿನಲ್ಲಿ ಒಂದು ವ್ಯಾಪಾರ ಹೇಗೆ ನಡೆಯುತ್ತದೆ, ಇದರಲ್ಲಿ ಲಾಭವೆಷ್ಟು, ನಷ್ಟವೆಷ್ಟು ಎಂಬುದು by instinct ಗೊತ್ತಾಗುತ್ತದೆ. ವ್ಯಾಪಾರಕ್ಕೆ ಅಷ್ಟು ಸಾಕು. ಇತ್ತೀಚಿಗಿನ corporate ಭಾಷೆಯಲ್ಲಿ ROI ಎಂಬ ಪದ ಬಳಸುತ್ತಾರೆ. ಅದರರ್ಥ Return On Investment ಅಂತ. ನೀವು ಹಾಕಿದ ಹಣಕ್ಕೆ ಲಾಭವಾಗಿ ಎಷ್ಟು ಹಣ ಬರುತ್ತಿದೆ : ಎಷ್ಟು ಲಾಭ ಬರುತ್ತಿದೆ ಎಂಬ ಸರಳ ಲೆಕ್ಕಾಚಾರ. ಇದಕ್ಕೆ ROI ಅಂತ ನಮ್ಮ corporate ಮಂದಿ ಹೆಸರಿಟ್ಟಿರಬಹುದು. ಆದರೆ ಅನಾದಿ ಕಾಲದಿಂದ ವ್ಯಾಪಾರ ಮಾಡುತ್ತಿರುವ ಕೋಮಟಿ ಶೆಟ್ಟರು, ಮಾರ್ವಾಡಿಗಳು, ಬಂಟರು, ಹೊಟೇಲಿನ ಶಿವಳ್ಳಿ ಬ್ರಾಹ್ಮಣರು-ಇವರೆಲ್ಲ ROI ಮೇಲೆ ಕಣ್ಣಿಟ್ಟವರೇ. ನಾನಿಷ್ಟು ಹಣ ಹಾಕಿದೆ : ಅದಕ್ಕೆ ಲಾಭ ಬರುತ್ತಿದೆಯಾ? ಇಷ್ಟು ದುಡ್ಡು ಸುರಿದೆ : ಅದರ ಬಡ್ಡಿಯನ್ನಾದರೂ ದುಡಿಯುತ್ತಿದೆಯಾ? ವ್ಯಾಪಾರ ಎಂಬ ಶಬ್ದ ಹುಟ್ಟಿದಾಗಿನಿಂದ ಈ ಚರ್ಚೆ, ಲೆಕ್ಕಾಚಾರ ನಡೆದೇ ಇವೆ. ನಾನು ಹಚ್ಚ ಹಳೆಯ ಕೋಮಟಿ ಶೆಟ್ಟರ ರೀತಿಯಲ್ಲಿ ಕೂತು ಲೆಕ್ಕ ಹಾಕಿದರೂ, ನನ್ನ ಪುಸ್ತಕದ ಮಳಿಗೆ \'ಬಿಬಿಸಿ\' ನಿಜಕ್ಕೂ ಜನವರಿ 5ರಿಂದ ಇವತ್ತಿನ ತನಕ ಲಾಭದಲ್ಲಿದೆ.
ಇದನ್ನೆಲ್ಲ ಹೇಳುವುದಕ್ಕೆ ಮುಂಚೆ ನಿಮಗೊಂದು ಸಣ್ಣ ಅಶ್ಲೀಲ ಜೋಕು ಹೇಳಬೇಕು. ಒಬ್ಬ ಹುಡುಗಿ ಅಮೆರಿಕದ ಬಾರ್ನಲ್ಲಿ ಚಿತ್ತಾಗಿ ಕುಡಿದು, ಡ್ರಗ್ ಸೇವಿಸಿ, ಮೈಮೇಲೆ ಒಂದು ದಾರದ ಎಳೆಯೂ ಇಲ್ಲದಷ್ಟು ನಗ್ನಳಾಗಿ ಹೊರಬಂದು ಟ್ಯಾಕ್ಸಿಯೊಂದನ್ನು ನಿಲ್ಲಿಸುತ್ತಾಳೆ. ಇಂಥ ಜಾಗಕ್ಕೆ ಒಯ್ದು ಬಿಡಬೇಕು ಅಂತ ಟ್ಯಾಕ್ಸಿ ಡ್ರೈವರನಿಗೆ ಹೇಳುತ್ತಾಳೆ.
ಆದರೆ ಟ್ಯಾಕ್ಸಿಯ ಡ್ರೈವರ್ ಕಾರಿನ ಪಕ್ಕದಲ್ಲಿ ಸಂಪೂರ್ಣ ನಗ್ನಳಾಗಿ ನಿಂತ ಅವಳನ್ನೇ ಎಗಾದಿಗಾ ನೋಡುತ್ತಾನೆ. She is nude.
\'\'ಏನು ನೋಡ್ತಿದೀಯ? ಹೆಂಗಸರನ್ನು ಹೀಗೆ ನೋಡುವುದು ತಪ್ಪು. ಗೊತ್ತಿಲ್ವಾ? ಕಾರು ಓಡಿಸು\'\' ಎಂದು ಗದರುತ್ತಾಳೆ ಹುಡುಗಿ
\"Well, ನೀನು ಹೇಳಿದ್ದು ಸರಿಯಮ್ಮಾ. ಆದರೆ ನಾನು ನೋಡುತ್ತಿರುವುದು ನಿನ್ನ ನಗ್ನ ದೇಹವನ್ನಲ್ಲ. ನೀನು ಹೇಳಿದ ಕಡೆಗೆ ನಿನ್ನನ್ನು ಒಯ್ದು ಬಿಡುತ್ತೇನೆ. ಆದರೆ ಬಿಟ್ಟ ಮೇಲೆ ನೀನು ಟ್ಯಾಕ್ಸಿ ಫೇರ್ (ಬಾಡಿಗೆ ಹಣ) ಎಲ್ಲಿಂದ ತೆಗೆದುಕೊಡುತ್ತೀಯ? ಅದನ್ನು ಯೋಚಿಸುತ್ತಿದ್ದೇನೆ\'\' ಅಂದ.
He is so correct.
ನನ್ನ ಅಂಗಡಿಯಲ್ಲಿ ಹತ್ತು ಸಾವಿರ ರುಪಾಯಿ ಮೌಲ್ಯದ ಪುಸ್ತಕ ಕೊಂಡ ಮನುಷ್ಯ ಬರೀ ಚೆಡ್ಡಿ-ಬನೀನು ಹಾಕಿಕೊಂಡು ಬಂದಿದ್ದರೆ, ಅವನು ಅಷ್ಟು ಹಣ ಎಲ್ಲಿಟ್ಟುಕೊಂಡಿದ್ದಾನೆ ಮತ್ತು ಹೇಗೆ ಸಂದಾಯ ಮಾಡುತ್ತಾನೆ ಎಂದು ನಾನು ಯೋಚಿಸಲೇಬೇಕು.
ಗೆಳೆಯರೇ, ಇಷ್ಟು ಸರಳವಾದ, ಒಬ್ಬ ಟ್ಯಾಕ್ಸಿ ಡ್ರೈವರನಿಗೆ ತೋಚಿದ್ದು ಅಮೆರಿಕಾ ಎಂಬ ನಂಬರ್ ಒನ್ ದೇಶಕ್ಕೆ ತೋಚಲಿಲ್ಲ ಅಂದರೆ ಆಶ್ಚರ್ಯವಾಗುವುದಿಲ್ಲವೆ? ಅದು ಮನೆ ಕಟ್ಟಿಕೊಳ್ಳುವವರಿಗೆ ಸಾಲ ಕೊಡತೊಡಗಿತು. ಅಲ್ಲಿಂದಲೇ ಶುರುವಾದದ್ದು ಈ ರೋಗ. ಮನೆ ಕಟ್ಟಲಿಕ್ಕಾಗಿ ಸಾಲ ಕೇಳುವ ಮನುಷ್ಯನಿಗೆ ಕನಸುಗಳಿರುತ್ತವೆ, ನಿಜ. ಆದರೆ ತೆಗೆದ ಸಾಲ ಹಿಂತಿರುಗಿಸಲು ಅವನಿಗೆ ತಾಕತ್ತಿದೆಯಾ? ಅಂಥ ಆದಾಯವಿದೆಯಾ? ಆ ಮಟ್ಟದ ಪ್ರಾಮಾಣಿಕತೆ ಇದೆಯಾ? ಇದ್ಯಾವುದನ್ನೂ ಅಮೆರಿಕದ ಬ್ಯಾಂಕಿಂಗ್ ವ್ಯವಸ್ಥೆ ಪರಿಶೀಲಿಸಲೇ ಇಲ್ಲ. ಅದರ ಬಳಿ ಹೇರಳವಾದ ಹಣವಿತ್ತು. ಸಾಲ ಕೊಟ್ಟು ಬಡ್ಡಿ ದುಡಿಯುವ ಆಸೆ. ಕೆಲವೇ ವರ್ಷಗಳ ಹಿಂದೆ ಲೆಕ್ಕಕ್ಕೇ ಸಿಗದಂತೆ ಬಿಲಿಯನ್, ಟ್ರಿಲಿಯನ್ ಮತ್ತು ಜಿಲಿಯನ್ ಡಾಲರುಗಳನ್ನು ಅಮೆರಿಕಾ ತನ್ನ ಪ್ರಜೆಗಳಿಗೆ \'ಮನೆ ಸಾಲ\'ವಾಗಿ ಕೊಟ್ಟಿತು. Fine, ಮನೆಗಳೇನೋ ಎದ್ದು ನಿಂತವು.
ಆದರೆ ಇವತ್ತಿನ ಪರಿಸ್ಥಿತಿ ನೋಡಿ. ಅಮೆರಿಕದ ಡಾಲರ್ಗೆ ಕಿಮ್ಮತ್ತಿಲ್ಲ. ಆರ್ಥಿಕ ವ್ಯವಸ್ಥೆ ಕುಸಿದಿದೆ. ವಿಪರೀತ ನಿರುದ್ಯೋಗ. ಸಾಲ ತೆಗೆದುಕೊಂಡವನು ಅದನ್ನು ತೀರಿಸುವ ಸ್ಥಿತಿಯಲ್ಲಿಲ್ಲ. ಇದರ ಜೊತೆಗೆ ಅಮೆರಿಕದ ಯುದ್ಧ ಮತ್ತು ಶಸ್ತ್ರ ನೀತಿಯೂ ಉಲ್ಟಾ ಪಲ್ಟಾ ಆಗಿ ಅವರ ಯುದ್ಧಗಳಿಂದ ಲಾಭ ಬರುತ್ತಿಲ್ಲ. ಶಸ್ತ್ರಾಸ್ತ್ರ ಮಾರುಕಟ್ಟೆ ತಣ್ಣಗಾಗಿ ಬಿಟ್ಟಿದೆ. ಹೀಗಾಗಿ ಅಮೆರಿಕ ಆರ್ಥಿಕವಾಗಿ ದಿವಾಳಿಯೆದ್ದಿದೆ.
ಕ್ಷಮಿಸಿ, ಇಷ್ಟು ದೊಡ್ಡ ಉದಾಹರಣೆ ಏಕೆ ಕೊಡಬೇಕಾಯಿತೆಂದರೆ, ನೀವೂ ಸಾಲ ಕೊಡುತ್ತೀರಿ ಮತ್ತು ಕೇಳುತ್ತೀರಿ. ನನ್ನ ಪ್ರಶ್ನೆಯೆಂದರೆ, ತೆಗೆದುಕೊಂಡ ಸಾಲವನ್ನು ತೀರಿಸುವ ಹೈಸಿಯತ್ತು ನಿಮಗಿದೆಯಾ? \'ಹೆಂಗೋ ತೀರುತ್ತೆ ಬಿಡು\' ಎಂಬ ಭ್ರಮೆಯಲ್ಲಿ ಬದುಕಬೇಡಿ. ನಿಮಗಿರುವ ಆದಾಯದಲ್ಲಿ ನೀವೂ ಬದುಕಿ, ಉಳಿದದ್ದನ್ನು ಸಾಲಕ್ಕೆ ಕಟ್ಟಿದರೆ ಎಷ್ಟು ವರ್ಷಗಳಲ್ಲಿ ನೀವು ಸಾಲದಿಂದ ಮುಕ್ತರಾಗುತ್ತೀರಿ ಎಂಬುದನ್ನು ಯೋಚಿಸದೆ ಜನ್ಮದಲ್ಲಿ ಎಂದೂ ಐದೇ ಐದು ರುಪಾಯಿ ಸಾಲ ಮಾಡಬೇಡಿ. ಮಾಡೋ ಸಾಲದಿಂದ ಕೇವಲ ಮನೆ ಕಟ್ಟಿಕೊಂಡರೆ ಅದು ಮಾನಸಿಕ ಸಮಾಧಾನ ಕೊಡಬಹುದು. ಆದರೆ ನೀವು invest ಮಾಡಿದ ಹಣದ ಬಡ್ಡಿಯನ್ನಾದರೂ ಅದು ದುಡಿಯುತ್ತದಾ? ಯೋಚಿಸಿ ಕೇವಲ ನೀವು ಬದುಕಲಿಕ್ಕೇ ಆದರೆ, ಕೋಟಿಗಟ್ಟಲೆ ಸಾಲ ಮಾಡಿ ಮನೆ ಕಟ್ಟಿಸಬೇಕಾಗಿಲ್ಲ. ಲಕ್ಷಣವಾಗಿ ಬಾಡಿಗೆ ಮನೇಲಿ ಇರಬಹುದು.
ಹಾಗೆಯೇ ಸಾಲ ಕೊಡುವಾಗ, ಯಾವ ಕಾರಣಕ್ಕೆ ಕೊಡುತ್ತಿದ್ದೀರಿ ಅಂತ ದಯವಿಟ್ಟು ಯೋಚಿಸಿ. ಗೆಳೆಯನ ಹೆಂಡತಿಗೆ ಹಾರ್ಟ್ ಆಪರೇಷನ್ನು. ಸಾಲ ಕೊಡುತ್ತೀರಿ. ಅದು ನಿಮ್ಮ ದೊಡ್ಡತನ. ಆದರೆ ಗೆಳೆಯ, \'\'ಮೀನಿನ ಉಪ್ಪಿನ ಕಾಯಿಯ ಇಂಡಸ್ಟ್ರಿ ತೆಗೀಬೇಕು, ಸಾಲ ಕೊಡು\'\' ಅಂತ ಕೇಳುತ್ತಾನೆ. Think twice. ಮೀನಿನ ಉಪ್ಪಿನ ಕಾಯಿಗೆ, ಅಂದರೆ fist pickleಗೆ ಮಾರುಕಟ್ಟೆ ಇದೆಯಾ? ಅದರಲ್ಲಿ ಗೆಳೆಯ ಲಾಭ ಮಾಡುತ್ತಾನಾ? Study ಮಾಡಿ. \'ಹೇಗೋ ವಸೂಲಿ ಮಾಡಿ ಬಿಡುತ್ತೇನೆ\' ಎಂಬ ಹುಂಬ ಧೈರ್ಯಕ್ಕೆ ಬೀಳಬೇಡಿ. ಅವನು ಪೂರ್ತಿ ಲಾಸ್ ಆಗಿ ಲಂಗೋಟಿಯಲ್ಲಿ ನಿಂತಿರುವಾಗ ನೀವು ಎಷ್ಟೇ ಬಲಿಷ್ಠರಾದರೂ ವಸೂಲಿ ಮಾಡಲಾರಿರಿ.
ಸಾಲ ಪಡೆಯುವಾಗ ಮತ್ತು ಕೊಡುವಾಗ ನಾವು ಪಾಲಿಸಬೇಕಾದ್ದು ಒಂದೇ ನಿಯಮ : ಇದನ್ನು ತೀರಿಸಬಲ್ಲೆನಾ?
ಸಾಧ್ಯವಿಲ್ಲ ಅಂತ ಚಿಕ್ಕ ಅನುಮಾನ ಬಂದರೂ ಆತನಿಗೆ ಸಾಲ ಕೊಡಬೇಡಿ ಮತ್ತು ಆತನಿಂದ ಸಾಲ ಪಡೆಯಬೇಡಿ. ಇದನ್ನು ನಾನು economic discipline ಅಂತ ಕರೆಯುತ್ತೇನೆ. ಸಾಲ ಮಾಡದೆ ವ್ಯಾಪಾರ ಮಾಡುವುದು ಸಾಧ್ಯವಿಲ್ಲ. ಆದರೆ ಅದನ್ನು ಅವಧಿಗೆ ಮುಂಚೆಯೇ ಹಿಂತಿರುಗಿಸುವ, ಬಡ್ಡಿ ಕಟ್ಟುವ ಡಿಸಿಪ್ಲೀನ್ ನಮ್ಮಲ್ಲಿರಬೇಕು.
ಮೊನ್ನೆ ತುಂಬ ಆತ್ಮೀಯ ಗೆಳೆಯರೊಬ್ಬರು ಐದು ಲಕ್ಷ ರುಪಾಯಿ ಸಾಲ ಕೇಳಿದರು. \'\'ಹೆಂಡತಿಗೆ ಯೂರಪ್ ಟೂರ್ ಮಾಡಿಸ್ತೀನಿ ಅಂತ ಪ್ರಾಮಿಸ್ ಮಾಡಿದೀನಿ. ನಂಗೆ ಐದು ಲಕ್ಷ ಕೊಡು!\'\'
ತಕ್ಷಣ ನಿರ್ಧರಿಸಿದೆ. ಆ ಟೂರ್ನಿಂದ ದಂಪತಿಗಳಿಗೆ ಸಂತೋಷವಾಗಬಹುದು. ಆದರೆ ಯೂರಪ್ನಿಂದ ಅವರು ಐದು ರುಪಾಯಿ ತರಲಾರರು. ಹಾಗಾದರೆ ಸಾಲವೇಕೆ ಕೊಡುತ್ತೀರಿ?
\'\'Sorry\'\' ಎಂದಷ್ಟೆ ಹೇಳಿ ಕಳಿಸಿದೆ.
-ರವೀ |