Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಚಂಬಲ್ ದಾಟಿ ಹೋದವನಿಗೆ ಅಂದು ಕಂಡದ್ದು ಚಿತ್ರಕೂಟ್ ಎಂಬ ಶುದ್ಧ ನರಕ

ಚಿತ್ರಕೂಟದ ಬಗ್ಗೆ ಮಾತು ಬಂದದ್ದು ಹಾಗೆ.

ಇವತ್ತು ದಿಲ್ಲಿಯಿಂದ ಮಿತ್ರರಾದ ಅವನೀಂದ್ರನಾಥರಾವ್ ಬಂದಿದ್ದರು. ಅವರು ದಿಲ್ಲಿಯ ಸೆಕ್ರೆಟೇರಿಯಟ್‌ನ ಗ್ರಂಥಾಲಯದಲ್ಲಿ ಅಧಿಕಾರಿಯಾಗಿದ್ದಾರೆ. ನನಗೆ ಅವರ ಪರಿಚಯ ಮಾಡಿಕೊಟ್ಟವನು ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ವೀರೇಶ್ ಹೊಗೆಸೊಪ್ಪಿನವರ್. ಕೆಲಕಾಲ ಅವನು ದಿಲ್ಲಿಯಲ್ಲಿದ್ದ. ಹೀಗಾಗಿ ಅವನಿಗೆ ಅವನೀಂದ್ರನಾಥರ ಪರಿಚಯ.

ಹೆಸರು ಕೇಳಿದರೆ ಬಂಗಾಳದವರೇನೋ ಅನಿಸುತ್ತದೆ. ಆದರೆ ಕಾಪುವಿನ ಹತ್ತಿರದ ಯಲ್ಲೂರಿನವರು. ತಂದೆಗೆ ರವೀಂದ್ರನಾಥ ಟಾಗೋರರ ಮೇಲೆ ಪ್ರೀತಿ, ಭಕ್ತಿ. ಹೀಗಾಗಿ ಮಕ್ಕಳಿಗೆಲ್ಲ ಬಂಗಾಲಿ ಹೆಸರುಗಳನ್ನೇ ಇಟ್ಟಿದ್ದಾರೆ. ಅವನೀಂದ್ರನಾಥ್ ಸ್ಫುರದ್ರೂಪಿ. ನಟನೆ, ನಾಟಕ ಇಷ್ಟ. ಓದಿದ್ದು ಬಿ.ಕಾಂ. ಕೆಲಕಾಲ ಬೆಂಗಳೂರಿನ ಶ್ರೀರಾಮ್ ಚಿಟ್ ಫಂಡ್ಸ್‌ನಂಥ ಕಡೆ ಕೆಲಸ ಮಾಡಿದರು. ಆದರೆ ಮನಸು ಎಳೆಯುತ್ತಿದ್ದುದು ಪುಸ್ತಕ, ಸಾಹಿತ್ಯ, ಬರವಣಿಗೆಗಳ ಕಡೆಗೆ. ಚಿಟ್‌ಫಂಡ್‌ನಲ್ಲಿ ಕೆಲಸ ಮಾಡುತ್ತಲೇ ಲೈಬ್ರರಿ ಸೈನ್ಸ್ ಓದಿಕೊಂಡರು. ಕನ್ನಡ ಎಂ.ಎ.,ಮಾಡಿಕೊಂಡರು. ಮಂಗಳೂರು ಕಡೆಯ ಕಾಲೇಜುಗಳಲ್ಲಿ ಲೈಬ್ರೇರಿಯನ್ ಆಗಿ, ಲೆಕ್ಚರರ್ ಆಗಿ ಕೆಲಸ ಮಾಡಿದರು. ಆನಂತರ ನೌಕರಿ ಸಿಕ್ಕಿದ್ದು ದಿಲ್ಲಿಯ ಸೆಕ್ರೆಟೇರಿಯಟ್‌ನ ಗ್ರಂಥಾಲಯದಲ್ಲಿ. ಅಷ್ಟಕ್ಕೇ ತೃಪ್ತಿಗೊಳ್ಳಲಿಲ್ಲ. ಈಗ ರಿಸರ್ಚ್ ಮಾಡುತ್ತಿದ್ದಾರೆ.

ನಾನು ತುಂಬ ಇಷ್ಟಪಡುವುದೇ ಈ ತೆರನಾದ ಚೆಕ್ಕರ್ಡ್ ಕೆರೀರ್ ಹೊಂದಿದ, ಸದಾ ಹೊಸತರ ಅನ್ವೇಷಣೆಯಲ್ಲಿ ತೊಡಗುವ ಮತ್ತು ವೃತ್ತಿಯಲ್ಲಿ-ಚಿಂತನೆಯಲ್ಲಿ ನಿರಂತರವಾಗಿ ಟಿಸಿಲೊಡೆಯಲು ಹಾತೊರೆಯುವ ಮನುಷ್ಯರನ್ನ. ಇವತ್ತಲ್ಲ ನಾಳೆ, ನಾನು ಮೇಜರ್ ಮುರಳಿಯೊಂದಿಗೆ ಅಲೆದ ಅರುಣಾಚಲ ಪ್ರದೇಶ್, ಚೀನಾದ ಗಡಿ, ತವಾಂಗ್, ಲೂಮ್ಲಾಗಳ ಬಗ್ಗೆ ಬರೆಯಬೇಕು. 1994ರಲ್ಲಿ ಕರ್ಮವೀರದಲ್ಲಿ \'ಹಿಮಗರ್ಭದಲ್ಲಿ\' ಅಂತ ಒಂದು ಧಾರಾವಾಹಿ ಬರೆದೆ. ಚೆನ್ನಾಗಿದೆ ಅಂತ ಎಲ್ಲರೂ ಅಂದರಾದರೂ ನನಗೇ ಏಕೋ ಸಮಾಧಾನವಿರಲಿಲ್ಲ. ತವಾಂಗ್ ಜಿಲ್ಲೆಯ ಜನರ ಬದುಕಿನ ಬಗ್ಗೆ ಇನ್ನಷ್ಟು ವಿಸ್ತೃತವಾಗಿ ತಿಳಿದುಕೊಂಡು ಬರೆದು, ಎಲ್ಲ ಸೇರಿಸಿ ಒಂದು ಪುಸ್ತಕ ಮಾಡೋಣ ಅಂದುಕೊಂಡೆ. ಅಲ್ಲಿನ ಜನ ಜೀವನದ ಕುರಿತು ಬಂದಿರುವ ಕೆಲವೇ ಪುಸ್ತಕಗಳ ಪೈಕಿ ನೀರೂ ನಂದಾ ಎಂಬಾಕೆ ಬರೆದ \'Tawang: The Land of Mon\' ಎಂಬುದು ಉಪಯುಕ್ತ ಹಾಗೂ authentic. ಅದರ ಒಂದು ಪ್ರತಿಯನ್ನು ನಾನು ಅರುಣಾಚಲ ಪ್ರದೇಶದ ಅಂದಿನ ಮುಖ್ಯಮಂತ್ರಿ ಗೆಗಾಂಗ್ ಅಪಾಂಗ್ ಅವರ ಲೈಬ್ರರಿಯಿಂದ ತಂದಿದ್ದೆ.

ಆದರೆ ಪ್ರತಿ ಕಳೆದು ಹೋಯಿತು. ನೀರೂ ನಂದಾ ಕೆಲ ವರ್ಷ ತವಾಂಗ್ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದರು. ನಂತರ ದಿಲ್ಲಿಯಲ್ಲಿ ದೊಡ್ಡ ಮಟ್ಟದ ಅಧಿಕಾರಿಯಾಗಿದ್ದರು. ಆಕೆ IAS ಪದವೀಧರೆ. ಮುಂದೆ ಪಂಜಾಬದ ಗವರ್ನರ್‌ಗೆ ಸಲಹೆಗಾರ್ತಿಯಾಗಿ ಕೆಲಸ ಮಾಡಿ ಬಹುಶಃ ನಿವೃತ್ತರಾದರು. ಆಕೆಯನ್ನು ಪತ್ತೆ ಮಾಡುವುದು ಹೇಗೆ? ಎಲ್ಲೂ ವಿಳಾಸ ಸಿಗಲಿಲ್ಲ. ರಿಟೈರಾದ ಮೇಲೆ ಕೊಂಚ ಅಧ್ಯಾತ್ಮ, ಪರಿಸರ ರಕ್ಷಣೆ ಮುಂತಾದವುಗಳಲ್ಲಿ ತೊಡಗಿಕೊಂಡ ಆಕೆಯ ನಂಬರು ಪತ್ತೆ ಮಾಡುವ ಹೊತ್ತಿಗೆ ಸಾಕುಬೇಕಾಗಿತ್ತು. ಹೇಗೋ ಸಂಪರ್ಕಿಸಿ \'\'ಮೇಡಂ ನನಗೆ ಆ ಪುಸ್ತಕ ಬೇಕು\'\' ಅಂದರೆ,

\'\'Oh man! ಅಕಸ್ಮಾತ್ ಅದು ಸಿಕ್ಕರೆ ನಂಗೆ ಅದರ xerox ಆದರೂ ಕಳಿಸು. ನನ್ನಲ್ಲಿ ಒಂದೇ ಒಂದು ಪ್ರತಿಯೂ ಇಲ್ಲ.Please help me\'\' ಅನ್ನಬೇಕೆ?

ಕಡೆಗೆ ಅದರ ಪ್ರತಿ ಪತ್ತೆ ಹಚ್ಚಿ, ಅದರ xerox ಮಾಡಿಸಿ, ಬೈಂಡ್ ಮಾಡಿ ಬೆಂಗಳೂರಿಗೆ ಕಳಿಸಿಕೊಟ್ಟವರು ನನಗೆ ಅವತ್ತಿಗೆ ಪರಿಚಯವೇ ಇರದಿದ್ದ ಸೆಕ್ರೆಟೇರಿಯಟ್‌ನ ಗ್ರಂಥಾಲಯಾಧಿಕಾರಿ ಅವನೀಂದ್ರನಾಥ ರಾಯರು.

\'\'ಅವರು ಬೆಂಗಳೂರಿಗ ಬಂದಿದ್ದಾರೆ\'\' ಅಂತ ವೀರೇಶ್ ಹೇಳಿದ ತಕ್ಷಣ ಅವರಲ್ಲಿಗೆ ಕಾರು ಕಳಿಸಿ ಆಫೀಸಿಗೆ ಬನ್ನಿ ಅಂತ ವಿನಂತಿಸಿದೆ. ನನಗೆ ಒಂದು ವಿಷಯ ಗೊತ್ತಿತ್ತು. ಪುಸ್ತಕ ಪತ್ತೆ ಮಾಡಿ ಅದರ xerox ಕಳಿಸಿದರಲ್ಲ? ಅದಕ್ಕೆ ಕೆಲವೇ ದಿನಗಳಿಗೆ ಮುಂಚೆ ಅವರಿಗೊಂದು ಅಪಘಾತವಾಗಿತ್ತು. ಚಿಕಿತ್ಸೆಯಲ್ಲಿದ್ದು, ಭುಜದ ಮೂಳೆ ಮುರಿದು ಕೈ ಎತ್ತುವ ಸ್ಥಿತಿಯಲ್ಲೂ ಇರಲಿಲ್ಲ. ಹಾಗಿದ್ದಾಗಲೂ ಅವರು ಶ್ರದ್ಧೆ ವಹಿಸಿ ನನ್ನ ಕೆಲಸ ಮಾಡಿಕೊಟ್ಟಿದ್ದರು. ಈಗ ಬೆಂಗಳೂರಿಗೆ ಬಂದಿದ್ದಾರೆ ಅಂದಾಗ, ಭೇಟಿಯಾಗಿ ಕೃತಜ್ಞತೆಯನ್ನು ಹೇಳದಿದ್ದರೆ ಹೇಗೆ?

ಬರ ಮಾಡಿಕೊಂಡೆ.

\'\'ಇಷ್ಟಕ್ಕೂ ಅಫಘಾತ ಎಲ್ಲಾಯಿತು? ಹೇಗಾಯಿತು?\'\' ಅಂತ ಕೇಳಿದೆ.

\'\'ಚಿತ್ರಕೂಟದಲ್ಲಿ. ಚಲಿಸುತ್ತಿರುವ ರೈಲಿನಿಂದ ಬಿದ್ದುಬಿಟ್ಟಿದ್ದೆ\'\' ಅಂದರು.

My god! ಚಿತ್ರಕೂಟದ ಇಡೀ ಚಿತ್ರಣ ಕಣ್ಣೆದುರಿಗೆ ಬಂದುಹೋಯಿತು. ಜೀವನದಲ್ಲಿ ಬಡತನ, ಭೀತಿ, ಬಿಸಿಲು, ಬೇಸರ, ದುಃಖ- ಇವೆಲ್ಲವನ್ನೂ ಒಟ್ಟಿಗೆ ಅನುಭವಿಸಿ ಚೇತರಿಸಿಕೊಳ್ಳಲಾಗದಷ್ಟು ಖಿನ್ನರಾಗಬೇಕು ಅಂತ ನಿಮಗೆ ಅನ್ನಿಸಿದರೆ, ನೀವೊಮ್ಮೆ ಚಿತ್ರಕೂಟ್ ಎಂದು ಕರೆಯಲ್ಪಡುವ ಆ ಭೂಲೋಕ ನರಕಕ್ಕೆ ಹೋಗಿ ಬರಬೇಕು.

ಪ್ರತಿ ಪ್ರವಾಸವನ್ನೂ ಅದ್ಭುತವಾಗಿ enjoy ಮಾಡುವವನು ನಾನು. ಚಿಕ್ಕ ಚಿಕ್ಕ ಬೆರಗು, ಹೊಸಬರ ಪರಿಚಯ, ಹೊಸ ಜಾಗ, ಅದರ ಇತಿಹಾಸ-ಐತಿಹ್ಯ, ವಾತಾವರಣ ಮತ್ತು ನನ್ನ ಪ್ರೀತಿಯ ಬರಹಗಾರ ಅರ್ನೆಸ್ಟ್ ಹೆಮಿಂಗ್ವೆ ಹೇಳಿದಂತೆ \'how the air smelt?\' (ಅಲ್ಲಿನ ಹವೆಯ ಘಮ ಹೇಗಿತ್ತು) ಎಂಬುದನ್ನ್ನು ಗಾಢವಾಗಿ ಅನುಭವಿಸುತ್ತಾ, notes ಮಾಡಿಕೊಳ್ಳ್ಳುತ್ತಾ ಅಲೆಯುವ ಖುಷಿಗಾರ ನಾನು.

In fact, ಚಿತ್ರಕೂಟ್ ಎಂಬ ಊರಿನ ಹೆಸರು ನನ್ನ ಪ್ರವಾಸದ ಪಟ್ಟಿಯಲ್ಲಿರಲೇ ಇಲ್ಲ. ಅವತ್ತು ನಮ್ಮ ವರದಿಗಾರ ಸುನೀಲ್ ಹೆಗ್ಗರವಳ್ಳಿಯ ಮದುವೆ ಚಿಕ್ಕಮಗಳೂರಿನಲ್ಲಿ ಇತ್ತು. ಅದರ ಹಿಂದಿನ ದಿನ ಮನೆಯಲ್ಲಿ ಚೇತನಾ ಮತ್ತು ನಾನು, ಇಬ್ಬರೇ ಇದ್ದೆವು. ಅವಳು ಎಂಟು ತಿಂಗಳ ಬಸುರಿ. ಒಂಥರಾ baby sitting ಮಾಡಬೇಕಿದ್ದವನು ನಾನು. ಬೆಳತನಕ ಅವಳೊಂದಿಗಿದ್ದು, ಬೆಳಿಗ್ಗೆ ಬಂದ ಲಲಿತಾಳ ಗೆಳತಿ, ನನ್ನ ತಂಗಿಯಂಥ ಹುಡುಗಿ ಗಾಯತ್ರಿಯ ಸುಪರ್ದಿಗೆ ಚೇತನಾಳನ್ನು ಒಪ್ಪಿಸಿ, ನಾನು ಚಿಕ್ಕಮಗಳೂರಿಗೆ ಹೋದೆ. ಮದುವೆಯ ಊಟ ಮುಗಿಸಿದವನೇ ಬೆಂಗಳೂರಿಗೆ ಬಂದೆ. ಚೇತನಾ ಚೆನ್ನಾಗಿಯೇ ಇದ್ದಳು. ಲಲಿತ ಕೂಡ ತನ್ನ ತಮ್ಮನ ಮನೆಯಿರುವ ಶಿವಮೊಗ್ಗದಿಂದ ಹಿಂತಿರುಗಿದ್ದಳು. ಮರು ದಿನ ಬೆಳಗ್ಗೆಯ ಫ್ಲೈಟಿಗೆ ಸೀನನನ್ನು ಕರೆದುಕೊಂಡು ದಿಲ್ಲಿಗೆ ಹೋದೆ. ಅಲ್ಲಿ ವಿಮಾನವಿಳಿಯುತ್ತಿದ್ದಂತೆಯೇ ಭಾವನಾಳ ಫೋನು ಬಂದಿತ್ತು: ಚೇತನಾಳನ್ನು ಆಸ್ಪತ್ರೆಗೆ ಸೇರಿಸಿದ್ದೇವೆ! ಏನು ಮಾಡಲಿಕ್ಕೂ ತೋಚದ ಸ್ಥಿತಿ. ಅಷ್ಟರಲ್ಲಿ ವಾರಾಣಸಿಯ ಫ್ಲೈಟ್ ಹೊರಟು ನಿಂತಿತ್ತು. ಹತ್ತಿಬಿಟ್ಟೆ.

ವಾರಾಣಸಿಯಲ್ಲಿ ಫ್ಲೈಟ್ ಇಳಿಯುವ ಹೊತ್ತಿಗೆ ಮೊಬೈಲಿಗೆ ಮೆಸೇಜು ಬಂದಿತ್ತು: \'\'No problem. ಚೇತೂಗೆ ಗಂಡು ಮಗು. ಇಬ್ಬರೂ ಆರೋಗ್ಯವಾಗಿದ್ದಾರೆ!\'\'

ಸರಿ, ಆ ಧಾವಂತ ಬಿಟ್ಟ ಮೇಲೆ ವಾರಾಣಸಿಯಲ್ಲಿ ನನ್ನ ಕೆಲಸ ಆರಂಭಿಸಿದೆ. ಅದರ target ನಿಜಕ್ಕೂ ಕಠಿಣ. ಆದರೆ ಕೆಲಸ ತುಂಬ ಇಂಟರೆಸ್ಟಿಂಗ್ ಆದದ್ದು. ವಾರಾಣಸಿಯ ಅತ್ಯಂತ ದುರ್ಭರ ಪ್ರದೇಶವೆಂದರೆ ಅದು: ಮಣಿಕರ್ಣಿಕಾ ಘಾಟ್. ನನಗೆ ಬೇಕಾದವರು ಅಲ್ಲೇ ಸುತ್ತಮುತ್ತ ಸಿಗುತ್ತಾರೆ.

ಅಘೋರಿಗಳು!

ಮಣಿಕರ್ಣಿಕಾ ಘಾಟ್ ಅಂದರೇನೇ ಗಂಗೆಯ ಪಕ್ಕದ ಸ್ಮಶಾನ. ಒಂದೆರಡಲ್ಲ. ಇಂಥದ್ದೇ ದಿನ ಅಂತಿಲ್ಲ. ನಿರಂತರವಾಗಿ ಅಲ್ಲಿ ಶವ ಸುಡುತ್ತಲೇ ಇರುತ್ತವೆ. ಒಂದು
ಸಲಕ್ಕೆ ಎಂಟೆಂಟು ಶವ ದಹನ. My god! ಒಂದು ಮಧ್ಯಾಹ್ನ ನೆತ್ತಿಯ ಮೇಲೆ ಯಾವ ಪರಿ ಬಿಸಿಲು ಸುಡುತ್ತಿತ್ತೆಂದರೆ, ಎಂಟೂ ಉರಿವ ಚಿತೆಗಳ ಮಧ್ಯೆ ಮಧ್ಯವಯಸ್ಕ ಅಘೋರಿಯೊಬ್ಬನನ್ನು ಮಾತನಾಡಿಸುತ್ತ ನಿಂತಿದ್ದ ನಾನು ಫೊಟೋ ತೆಗೆಯುತ್ತಿದ್ದ ಸೀನನನ್ನು ಕರೆದು ಹೇಳಿದ್ದೆ,
\'\'ಫೊಟೋ ತೆಗೆದದ್ದು ಸಾಕು. ನೀನು ದೂರ ಹೋಗಿ ನಿಲ್ಲು. ಈ ಝಳಕ್ಕೆ ಕೆಮೆರಾ ಕರಗಿ ಹೋದೀತು\'\' ಅಂದಿದ್ದೆ.

ಆ ಬಿಸಿಲು, ಬೆಂಕಿಗಳ ನೆನಪಿನ ಜೊತೆಗೆ ಶವಗಳ ಸುಟ್ಟ ವಾಸನೆಯೂ ಮಿದುಳಲ್ಲಿ, ಮೂಗಿನ ಹೊಳ್ಳೆಗಳಲ್ಲಿ ಜ್ಞಾಪಕವಾಗಿ ಉಳಿದುಹೋಗಿದೆ. ನಾವು ಮಣಿಕರ್ಣಿಕಾ ಘಾಟ್‌ನಲ್ಲಿ ಅರೆ ನಗ್ನ ಅಘೋರಿಯನ್ನು ಭೇಟಿಯಾಗಿ, ಮಾತನಾಡಿಸಿ,ಫೊಟೋ ತೆಗೆಸಿದ್ದು ಮೇ ಹನ್ನೆರಡು, 2009. ಎಷ್ಟು ದಿನಗಳಾದವು? ಲೆಕ್ಕ ಹಾಕಿ. ಮರು ದಿನ ಅಲ್ಲಿರುವ ಅಘೋರ ಉಪಾಸನಾ ಕೇಂದ್ರಕ್ಕೆ ಹೋಗಿ ಮತ್ತು ಕೆಲವರನ್ನು ಮಾತನಾಡಿಸಿ, ವಾರಾಣಸಿಯಲ್ಲಿ ನನ್ನ ಆಸಕ್ತಿಗೆ ಬೇಕಾದ ಕೆಲಸಗಳನ್ನೆಲ್ಲ ಮಾಡಿಕೊಂಡು ಲಖನೌಗೆ ಬಂದೆವು.

ಆದರೆ ನಿಜವಾದ ಕೆಲಸ ಆರಂಭವಾಗಬೇಕಿದ್ದುದು ಕಾನ್‌ಪುರದಿಂದ. ಲಖನೌದಲ್ಲಿ ಎರಡು ಉರ್ದು-ಹಿಂದಿ ಡಿಕ್ಷನರಿಗಳನ್ನು ಕೊಳ್ಳಬೇಕಿತ್ತು. ಇಬ್ಬರು ಪತ್ರಕರ್ತರನ್ನು ಭೇಟಿಯಾಗುವುದಿತ್ತು. ಒಂದು ರಾತ್ರಿ ಅಲ್ಲೇ ಉಳಿದು, ಮರುದಿನ ಕಾನ್‌ಪುರ್ ತಲುಪಿಕೊಂಡಾಗ ಆಕಾಶದಿಂದ ಅಕ್ಷರಶಃ ಬೆಂಕಿ ಸುರಿಯುತ್ತಿದೆಯೇನೋ ಎಂಬಷ್ಟು ಧಗೆ. ಸಾಮಾನ್ಯವಾಗಿ ಇಂಥ ಪ್ರವಾಸಗಳಿಗೆ ಹೋದಾಗ ನಾನು ಬಸ್ಸು-ರೈಲು ಹತ್ತುವುದಿಲ್ಲ. ಕೊಂಚ ದುಬಾರಿಯಾದರೂ ಸರಿಯೇ, ಒಂದು ಟ್ಯಾಕ್ಸಿ ಹಿಡಿಯುತ್ತೇನೆ. ಕಾನ್‌ಪುರದಿಂದ ಹೊರಟ ನಾವು ನೆಟ್ಟ್ಟಗೆ ಚಂಬಲ್ ಕಣಿವೆಯೊಳಕ್ಕೇ ಡ್ರೈವ್ ಮಾಡಬೇಕಿತ್ತು. ನನಗೆ ಅಲ್ಲಿನ terrain ಗೊತ್ತಿರಲಿಲ್ಲ. ಕೆಲವು ಊರುಗಳನ್ನು ಗುರುತು ಮಾಡಿಕೊಂಡಿದ್ದೆ. ಪತ್ರಕರ್ತ ಮಿತ್ರನೊಬ್ಬ ಒಂದಷ್ಟು contact ನಂಬರುಗಳನ್ನು ಕೊಟ್ಟಿದ್ದ. ಮುಖ್ಯವಾಗಿ ಒರೈಯ್ಯಾ ಎಂಬ ಪಟ್ಟಣಕ್ಕೆ ಹೋಗುವುದಿತ್ತು. ಅಲ್ಲಿ ಮುಸ್ಲಿಂ ವಕೀಲರೊಬ್ಬರಿದ್ದಾರೆ. ಅವರನ್ನು ತಪ್ಪದೆ ಭೇಟಿಯಾಗು. ಆಕೆಯ ಅಷ್ಟೂ ಕೇಸುಗಳನ್ನೂ ನಡೆಸುವುದು ಅವರೇ. ನೀವು ಭೇಟಿಯಾಗಬಹುದಾದ ವ್ಯಕ್ತಿಯೆಂದರೆ ಆಕೆಯೇ ಅಂತ ಗೆಳೆಯ ನಿಚ್ಚಳವಾಗಿ ಹೇಳಿದ್ದ.

ಆಕೆಯ ಹೆಸರು ಸೀಮಾ ಪರಿಹಾರ್.

ನನ್ನ ಊಹೆ ಸುಳ್ಳಾಗಿರಲಿಲ್ಲ. ವಕೀಲರಾದ ಇಫ್ತಿಯಾರ್ ಸುಮಾರು ಅರವತ್ತರ ಹತ್ತಿರದವರು. ಒಬ್ಬ ಸೀಮಾ ಪರಿಹಾರ್‌ಗೆ ಅಷ್ಟೇ ಅಲ್ಲ: ಬುಂದೇಲ್ ಖಂಡದ ಅಷ್ಟೂ ಡಕಾಯಿತರಿಗೆ ಅವರು ವಕೀಲ. ತುಂಬ ಸೌಮ್ಯ, ಇಳಿದನಿಯ, ಕರುಣೆಯುಳ್ಳ ಮನುಷ್ಯ. \'\'ಇವತ್ತು ಇಲ್ಲೇ ಒಂದು ಹೊಟೇಲಿನಲ್ಲಿ ಉಳಿದುಕೊಳ್ಳಿ. ನಾಳೆ ಅವಳನ್ನು ಕರೆಸುತ್ತೇನೆ. ಹೇಗಿದ್ದರೂ, ಅವಳು ಕೇಸೊಂದಕ್ಕೆ ಅಟೆಂಡ್ ಆಗಬೇಕಿದೆ\'\' ಅಂದಿದ್ದರು. ಮಾರನೆಯ ಬೆಳಿಗ್ಗೆ ಅವರ ಆಫೀಸಿನಲ್ಲಿ ಸೀಮಾ ಪರಿಹಾರ್‌ಳ ಭೇಟಿಯಾಗಿತ್ತು. ಅವತ್ತಿಗೆ ಆಕೆ ಅಜಮಾಸು ಮೂವತ್ತೈದರ ಹೆಂಗಸು. ಅವಳದು ಒರೈಯ್ಯಾ ಸಮೀಪದ ಬವೈನ್ ಎಂಬ ಹಳ್ಳಿ. ಠಾಕೂರ್ ಕುಲದವಳೇ ಆದರೂ ಮನೆಯಲ್ಲಿ ನಿಗಿನಿಗಿ ಬಡತನ. ಇನ್ನೊಬ್ಬ ಠಾಕೂರ್‌ನ ಮಗ ಅವಳನ್ನು 1983ರಲ್ಲಿ, ಅವಳಿನ್ನೂ ಹದಿಮೂರು ವರ್ಷದವಳಿದ್ದಾಗ, ದನ ಕಾಯಲು ಹೋದವಳನ್ನು ಮಾನಭಂಗ ಮಾಡಿದ. ಇದನ್ನು ಅವಳ ಅಪ್ಪ ಪ್ರತಿಭಟಿಸಿದಾಗ ಅದೇ ಶ್ರೀಮಂತ ಠಾಕೂರ, ಭಯಂಕರ ಕ್ರೂರಿಗಳಾದ ಲಾಲಾರಾಮ್ ಮತ್ತೂ ಕುಸುಮಾ ನಾಯಿನ್‌ರಿಂದ ಅದೊಂದು ರಾತ್ರಿ ಕಿಡ್ನಾಪ್ ಮಾಡಿಸಿಬಿಟ್ಟ.

ಅಲ್ಲಿಂದ ಶುರುವಾಯಿತು ಚಿತ್ರಹಿಂಸೆ. ಮೊದಲು ಫೂಲನ್‌ದೇವಿಯ ಮತ್ತು ಅವಳ ಪ್ರಿಯಕರ ವಿಕ್ರಮ್ ಮಲ್ಲಾಹ್‌ನ ಜೊತೆಯಲ್ಲೇ ಇದ್ದ ಲಾಲಾರಾಮ್, ಅವರಿಗೆ ದ್ರೋಹ ಮಾಡಿ ವಿಕ್ರಮ್ ಮಲ್ಲಾಹ್‌ನನ್ನು ಮರಾಮೋಸದಲ್ಲಿ ಕೊಂದ. ಆನಂತರ ಫೂಲನ್‌ದೇವಿಯನ್ನು ಒಂದು ಹಳ್ಳಿಯ ಮನೆಯಲ್ಲಿ ದಿನಗಟ್ಟಲೆ ಇರಿಸಿ ಮಾನಭಂಗ ಮಾಡಿದುದಲ್ಲದೆ, ಆ ಗ್ರಾಮದ ಅನೇಕರಿಂದ ಮಾಡಿಸಿದ. ಕಡೆಗೆ ಅವನಿಂದ ತಪ್ಪಿಸಿಕೊಂಡು ಬಾಬಾ ಮುಷ್ತ್ತಕೀಮ್‌ನ ನೆರವಿನಿಂದ ಇನ್ನೊಂದು ತಂಡ ಕಟ್ಟಿ, ತನ್ನನ್ನು ಹಿಂಸಿಸಿ-ಮಾನಭಂಗ ಮಾಡಿದ ಅದೇ ಹಳ್ಳಿಗೆ ನುಗ್ಗಿ ಕೈಗೆ ಸಿಕ್ಕ ಹತ್ತೊಂಬತ್ತು ಜನ ಠಾಕೂರರನ್ನು ನಿರ್ದಯವಾಗಿ ಕೊಂದು ಹಾಕಿದಳು. ಮುಂದೆ ಪೊಲೀಸರು ಬೆನ್ನತ್ತಿ ಬೇಟೆಯಾಡಿದಾಗ ಕಂಗಾಲಾದ ಫೂಲನ್ ಹಿರಿಯ ಐಪಿಎಸ್ ಆಫೀಸರರೊಬ್ಬರ ನೆರವಿನಿಂದ ಸಾವಿರಾರು ಜನರ ಸಮ್ಮುಖದಲ್ಲಿ ಪೊಲೀಸರಿಗೆ ಶರಣಾದಳು.

ಆಮೇಲೆ ಜೈಲಿನಲ್ಲಿದ್ದು ಬಿಡುಗಡೆಯಾಗಿ, ಚುನಾವಣೆಗೆ ನಿಂತು ಎಂಪಿ ಆಗಿದ್ದಾಗಲೇ ಠಾಕೂರನೊಬ್ಬನ ಸೇಡಿನಿಂದಾಗಿ ಕೊಲೆಯಾದದ್ದು ಈಗ ಇತಿಹಾಸ.
ಹಾಗಾದರೆ ಫೂಲನ್ ಸಾಯುವುದರೊಂದಿಗೆ ಚಂಬಲ್ ಕಣಿವೆಯಲ್ಲಿ ಡಕಾಯಿತಿ ಮುಕ್ತಾಯವಾಯಿತಾ? No way. ಅವಳ ನಂತರ ಲಾಲಾ ರಾಮ್ ಮತ್ತು ಅವನ ಗೆಳತಿ ಕುಸುಮಾ ನಾಯಿನ್ ವಿಪರೀತ ಬಲಿಷ್ಠರಾದರು. ನಾಯಿನ್‌ಳ ಜೊತೆಗೆ ಲಾಲಾರಾಮ್ ಈ ಹುಡುಗಿ ಸೀಮಾ ಪರಿಹಾರ್‌ಳನ್ನೂ ದೈಹಿಕವಾಗಿ ಬಳಸಿಕೊಂಡ. ಕ್ರೌರ್ಯ ಯಾವ ಮಟ್ಟಿಗೆ ಕೆಲಸ ಮಾಡಿತೆಂದರೆ, ಕೆಲವು ದಿನಗಳಲ್ಲಿ ಸೀಮಾ ಪರಿಹಾರ್ ಸ್ವತಃ ಡಕಾಯಿತಳಾದಳು. ಒಂದೆರಡಲ್ಲ, ಅವಳು ಸುಮಾರು ಎಪ್ಪತ್ತು ಕೊಲೆ ಮಾಡಿದಳು. ಅಪಹರಣಗಳು ಅವೆಷ್ಟೋ? ಅವಳಿಗೆ ಮತ್ತೊಬ್ಬ ಫೂಲನ್ ಆಗುವ ಕನಸು. ಆದರೆ ಲಾಲಾರಾಮ್‌ನ ಸಖ್ಯ ಫಲ ನೀಡಿ, ಸೀಮಾ ಪರಿಹಾರ್ ಗರ್ಭಿಣಿಯಾದಳು. ಚಂಬಲ್‌ನ ಕೊರಕಲಿನಲ್ಲಿ ಗರ್ಭ ಮತ್ತು ಬಂದೂಕು ಹೊತ್ತು ಓಡಾಡುವುದು ಹೇಗೆ? ಬಂದೂಕು ಕೆಳಗಿಟ್ಟು ಹತ್ತಿರದ ಒರೈ ಸೇರಿಕೊಂಡು ಗಂಡು ಮಗು ಹೆತ್ತಳು. ಅಲ್ಲಿಗೆ ಅವಳಿಗೂ ಡಕೇತಿ ಬದುಕು ಸಾಕೆನ್ನಿಸಿತ್ತು.

ಆದರೆ ಇದ್ದಕ್ಕಿದ್ದಂತೆ ಲಾಲಾರಾಮ್ ಪೊಲೀಸರ ಗುಂಡಿಗೆ ಸಿಕ್ಕು ಸತ್ತುಬಿಟ್ಟ. ಅನಿವಾರ್ಯವಾಗಿ ಚಂಬಲ್‌ಗೆ ಹಿಂತಿರುಗಿ ಅವನ ಗ್ಯಾಂಗಿನ ನಾಯಕತ್ವ ವಹಿಸಿಕೊಂಡಳು. ಎಂದಿನಂತೆ ಹತ್ಯೆ, ಅಪಹರಣ, ದರೋಡೆ, ಕಿಡ್ನಾಪ್‌ಗಳ ಸರಣಿ ಮುಂದುವರೆಯಿತು. ಸೀಮಾ ಪರಿಹಾರ್ ನಿಜಕ್ಕೂ ಬುಂದೇಲ್‌ಖಂಡದ ಜನರ ಪಾಲಿಗೆ ಟೆರರ್ ಅನ್ನಿಸಿಕೊಂಡಳು. ಆದರೆ ವಯಸ್ಸು? ಎಷ್ಟು ದಿನ ಕೊರಕಲಿನಲ್ಲಿ ಬದುಕೋದು? ಇನ್ನೊಂದೆಡೆ ತಾಯ್ತನ ಸೆಳೆಯುತ್ತಿತ್ತು. ಕಡೆಗೊಂದು ದಿನ ಸೀಮಾ ಪರಿಹಾರ್ ಪೊಲೀಸರಿಗೆ ಶರಣಾದಳು. ಜೈಲು ಕಳೆದಳು. ನಾನು ಭೇಟಿಯಾದಾಗ ಎಪ್ಪತ್ತರ ಪೈಕಿ ಇನ್ನೂ ಹದಿನೈದು ಕೇಸು ಬಾಕಿ ಇದ್ದವು. ಅಷ್ಟರಲ್ಲಿ ಅವಳದೇ ಬದುಕಿನ ಕಥೆ ಇಟ್ಟುಕೊಂಡು, ಅವಳನ್ನೇ ನಾಯಕಿಯನ್ನಾಗಿ ಮಾಡಿ ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ \'wounded\' ಎಂಬ ಸಿನೆಮಾ ಮಾಡಲಾಗಿತ್ತು. ಸೀಮಾ ಪರಿಹಾರ್ ತುಂಬ ಸಹಜವಾಗಿ ನಟಿಸಿದ್ದಳು. ಸಮಾಜವಾದಿ ಪಾರ್ಟಿ ಸೇರಿ ಫೂಲನ್ ಗೆದ್ದಿದ್ದ ಅದೇ ಫಿರೋಜ್‌ಪುರ್ ಕ್ಷೇತ್ರದಿಂದ ಸ್ಪರ್ಧಿಸಿದ್ದಳು. ಅವಳ ಜೊತೆ ಇನ್ನೂ ಅನೇಕ ಡಕಾಯಿತರು ಶರಣಾಗಿದ್ದರು.

\'\'ಹಾಗಾದರೆ ಇಲ್ಲಿಗೆ ಡಕಾಯಿತರ ಸಂತತಿ ಮತ್ತು ಸಂಗತಿ ಮುಗಿದಂತಾಯಿತಾ?\'\'ಎಂದು ಕೇಳಿದ್ದಕ್ಕೆ ದೊಡ್ಡ ನಗೆ ನಕ್ಕ ಸೀಮಾ ಪರಿಹಾರ್,

\'\'ಚಂಬಲ್‌ನಲ್ಲಿ ನೀರು ಹರಿಯುತ್ತಿರುವ ತನಕ ಈ ಕೊರಕಲುಗಳಲ್ಲಿ ಡಕಾಯಿತಿ ನಿಲ್ಲುವುದಿಲ್ಲ. ಚಂಬಲ್‌ನ ನೀರೇ ಹಾಗೆ...\'\' ಅಂದಿದ್ದಳು.

ನಿಜ ಹೇಳಬೇಕೆಂದರೆ, ಫೂಲನ್‌ಳ ಶರಣಾಗತಿ ಮತ್ತು ಸಾವಿನ ನಂತರ ಯಾವ ಪತ್ರಕರ್ತನೂ ಚಂಬಲ್‌ನ ಕಡೆಗೆ ಮತ್ತೆ ಹೋಗಿರಲಿಲ್ಲ. ಫೂಲನ್‌ಳ ನಂತರ ಬುಂದೇಲ್‌ಖಂಡ್ ಹೇಗಿದೆ ಎಂದು ನೋಡಲೆಂದೇ ನಾನು ಅಲ್ಲಿಗೆ ಹೋಗಿದ್ದೆ.

\'\'ಇಲ್ಲಿಗೆ ಬಂದವರು, ನೀವು ಡಕಾಯಿತರ ಇನ್ನೊಂದು ಹುತ್ತವೇ ಆದ ಚಿತ್ರಕೂಟ್‌ಗೆ ಭೇಟಿ ನೀಡದಿದ್ದರೆ ಹೇಗೆ?\'\'ಅಂದಿದ್ದರು ವಕೀಲರಾದ ಇಷ್ತಿಯಾಕ್ ಸಾಹೇಬರು. ಹೀಗಾಗಿ ಚಿತ್ರಕೂಟ್ ಎಂಬ ರೌರವ ನರಕಕ್ಕೆ ನಾನು ಹೋದದ್ದು. ಅಲ್ಲಿ ಪರಿಚಯವಾದದ್ದು ಚಿತ್ರಕೂಟ್‌ನ ಪತ್ರಕರ್ತ ಶಶಿಶೇಖರ್. ನನ್ನೊಂದಿಗೆ ಆ ಬೆಂಗಾಡಿನಲ್ಲಿ, ಬಿಸಿಲಿನಲ್ಲಿ ಎಲ್ಲ ಕೆಲಸ ಬಿಟ್ಟು ಓಡಾಡಿದ ಶಶಿಶೇಖರ್, ಅಲ್ಲಿನ ಬಡತನದ ಭೀಕರತೆಯ ಪರಿಚಯ ಮಾಡಿಸಿದ. ಕೆಲವು ಡಕಾಯಿತರ ಹಳ್ಳಿಗಳಿಗೆ ಕರೆದೊಯ್ದ. ಜೈಲು ಕಳೆದು, ಬಂದೂಕು ಕೆಳಗಿಟ್ಟ \'ಬಾಗಿ\'(ಡಕಾಯಿತ)ಗಳನ್ನು ಭೇಟಿ ಮಾಡಿಸಿದ.

ಆದರೆ ಮನಸ್ಸಿನಲ್ಲಿ ಉಳಿದದ್ದು ಅದ್ಯಾವುದೂ ಅಲ್ಲ. ಕಾರು ಮುಂದಕ್ಕೆ ಹೋಗುತ್ತಿದ್ದರೆ ಅನತಿ ದೂರದಲ್ಲಿ ಒಂದು ಆಕೃತಿ ತಲೆಯ ಮೇಲೆ ಕಟ್ಟಿಗೆ ಹೊರೆ ಹೊತ್ತುಕೊಂಡು ಬರುವುದು ಕಾಣಿಸಿತು. ಕಪ್ಪಗಿನ, ತೆಳ್ಳನೆಯ ಆಕೃತಿ. ರಣ ಬಿಸಿಲಿನಲ್ಲಿ ಬರುತ್ತಿದೆ. ಅದು ಗಂಡಾ? ಹೆಣ್ಣಾ? ತೀರ ಹತ್ತಿರಕ್ಕೆ ಹೋದಾಗಲೇ ಗೊತ್ತಾದದ್ದು. ಆಕೆ! ಎದೆ ಅಕ್ಷರಶಃ ಒಣಗಿ ಹೋಗಿದೆ. ಮೊಲೆಗಳಿರುವ ಜಾಗದಲ್ಲಿ ಸವೆದು ಹೋದ ಮೊಲೆ ತೊಟ್ಟು. ಮೈಯಲ್ಲಿ ಎಲ್ಲ ಜಿವುರಿದರೂ ಅರ್ಧ ಕೆಜಿ ಮಾಂಸವಿಲ್ಲ. ಕಣ್ಣುಗಳಲ್ಲಿ ಹಸಿವು, ವೇದನೆ ಬಡತನ, ದುಃಖ, ನೆತ್ತಿಯ ಮೇಲಿನ ಹೊರೆಯ ಭಾರ ಎಲ್ಲ ಇದ್ದವು. ನನಗೆ ತಡೆಯಲಾಗಲಿಲ್ಲ. ಕೊಂಚ ದೂರ ಹೋಗಿ ಕಾರು ನಿಲ್ಲಿಸಿ, ಅದರಿಂದ ಹತ್ತು ಹೆಜ್ಜೆ ನಡೆದು ಹೋಗಿ ಬಿಕ್ಕಳಿಸಿ ಅತ್ತುಬಿಟ್ಟೆ.

ಯಾಕೋ ಫೂಲನ್ ಮತ್ತು ಸೀಮಾ ಪರಿಹಾರ್ ನೆನಪಾದರು. ಅಷ್ಟೆಲ್ಲ ಕೊಲೆ ಮಾಡಿದವರು ಇನ್ನೊಂದೇ ಒಂದು ಮಾಡಬೇಕಿತ್ತು ಎನ್ನಿಸಿತು.

ಏಕೆಂದರೆ, ಆಗ ಚಿತ್ರಕೂಟ್ ಆಳುತ್ತಿದ್ದುದು ಆನೆ ಗುರುತಿನ ರಾಣಿ ಮಾಯಾವತಿ. ಆಕೆಯ ಶ್ರೀಮಂತಿಕೆಗೂ, ಚಿತ್ರಕೂಟ್‌ನ ಬಡತನಕ್ಕೂ ಸಂಬಂಧವಿದೆಯೇ?

ಇವತ್ತು ಅವನೀಂದ್ರನಾಥರಾವ್ ಬಂದರು.

ಎಲ್ಲ ನೆನಪಾಯಿತು.

-ನಿಮ್ಮವನು
ಆರ್.ಬಿ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 25 April, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books