Ravi Belagere
Welcome to my website
ನಾನು ಮೂವರನ್ನೂ ನೋಡಿದ್ದೆ. ಒಬ್ಬನನ್ನು ಪೊಲೀಸರು ಬಿಜಾಪುರ-ಗುಲಬರ್ಗ-ಸೊಲ್ಲಾಪುರದ ಬಯಲುಗಳಲ್ಲಿ ಬೇಟೆಯಾಡಿ ಆಡಿ ಕೊಂದರು. ಅವನ ಹೆಸರು ಚಂದಪ್ಪ ಹರಿಜನ. ಇನ್ನೊಬ್ಬನನ್ನು ನಾನು ನೋಡುವ ಹೊತ್ತಿಗಾಗಲೇ ಸಾವು ಅವನ ತಲೆಯ ಮೇಲೆ ‘ಕಫನ್’ ಹೊದಿಸಿತ್ತು. ಭೀಮಾ ತೀರದ ಆ ಹಂತಕ ಅಷ್ಟು ದೂರದಿಂದ ಬೆಂಗಳೂರಿಗೆ ಬಂದು ಆಸ್ಪತ್ರೆಯೊಂದರಲ್ಲಿ ಪ್ರಾಣ ಬಿಟ್ಟ. ಅವನ ಹೆಸರು ಕೇಶಪ್ಪ ತಾವರಖೇಡ.ಮೂರನೆಯವನು ಶಿವಾಜಿ ಬೋರಗಿ. ಭೀಮಾ ತೀರದ ಅಷ್ಟೂ ರಕ್ತಪಾತಕ್ಕೆ ಕಾರಣನಾದ ಹುಂಬ. ಭೀಮಾ ತೀರದ ಈ ಮೂವರು ಹಂತಕರ ಸಾವುಗಳೇ ಅಂಥವರ ಬದುಕುಗಳಿಗೆ ಬೆನ್ನುಡಿಗಳಾದವು. ನಾನು ಸುಮ್ಮನೆ ಕುಳಿತು ’ಭೀಮಾ ತೀರದ ಹಂತಕರು’ ಪುಸ್ತಕ ಬರೆದಿದ್ದೇನೆ.
Home About Us Gallery Books Feedback Prarthana Contact Us

ಪರಮ ಸಾತ್ವಿಕ ಕೃತಿಯೊಂದರ ನಂತರ ಬರೆಯಲಿಕ್ಕಿರುವುದು...

ಒಂದು ದೊಡ್ಡ ಸಮಾಧಾನದ ನಿಟ್ಟುಸಿರಿನೊಂದಿಗೆ \'ಇದು ಜೀವ-ಇದುವೇ ಜೀವನ\' ಎಂಬ ಹೆಸರಿನ ಕೃತಿಯ ಕೊನೆಯ ಸಾಲಿಗೆ ಪೂರ್ಣ ವಿದಾಯ ಚಿಹ್ನೆ ಇರಿಸಿದೆ. ಅದು ಬೆಳಗೆರೆ ಕೃಷ್ಣ ಶಾಸ್ತ್ರಿಗಳ ಜೀವನ ಕಥನ. ನಾನು ಅನೇಕರ ಬದುಕುಗಳ ಬಗ್ಗೆ ಬರೆದಿದ್ದೇನೆ : ಬಿಡಿ ಬಿಡಿಯಾಗಿ. ಹೀಗೆ ಸಮಗ್ರವಾಗಿ ಒಂದು ಬಯಾಗ್ರಫಿ ಅಂತ ಬರೆಯುತ್ತಿರುವುದು ನನಗೂ ಹೊಸ ಅನುಭವವೇ. ಕೆಲವಂತೂ ನನಗೇ ಅಚ್ಚರಿ ಹುಟ್ಟಿಸುವಂತಹ, ಸುಮಾರು ಎಪ್ಪತ್ತು-ಎಂಬತ್ತು ವರ್ಷಗಳ ಹಿಂದಿನ ಫೊಟೋಗಳು ಸಿಕ್ಕಿವೆ. ಅವರೆಲ್ಲ ನನ್ನ ಪೂರ್ವಜರು. ಅವರ ಬಗ್ಗೆ ತುಂಬ ಕೇಳಿದ್ದೆ. ಆದರೆ ನೋಡಿರಲಿಲ್ಲ. ಫೊಟೋ ನೋಡುತ್ತ ಕುಳಿತಾಗ ಈ ತನಕ ಅವರ ಬಗ್ಗೆ ನನ್ನ ಮನಸ್ಸಿನಲ್ಲಿದ್ದ ಚಿತ್ರಕ್ಕೂ ಅವರ ಭಾವ ಚಿತ್ರಗಳಿಗೂ ಎಲ್ಲಿಂದೆಲ್ಲಿಯ ಸಂಬಂಧ ಅನ್ನಿಸತೊಡಗಿದೆ.

ಇಡೀ ಕೃತಿಯ ಕುರಿತಾದ ಒಂದು ತಮಾಷೆಯೆಂದರೆ, ಇದು ಬೆಳಗೆರೆ ಮನೆತನದವರ ಇತಿಹಾಸ. ನಾನು ಅಸಲು ಬೆಳಗೆರೆಯವನೇ ಅಲ್ಲ. ರವಿ ಬೆಳಗೆರೆ ಅಂತ ಹೆಸರಿಟ್ಟುಕೊಂಡವನೂ ನಾನೇ. ಏಕೆಂದರೆ, ನನಗೆ ಅಮ್ಮ ಮಾತ್ರ ಗೊತ್ತಿದ್ದಳು. ಅಮ್ಮ ಬೆಳಗೆರೆ ಪಾರ್ವತಮ್ಮ. ಹೀಗಾಗಿ ನಾನು ರವಿ ಬೆಳಗೆರೆಯಾದೆ. ಅವತ್ತಿಗಿನ್ನೂ ನನ್ನ ತಂದೆಯ ಊರು ಮೊಳಕಾಲ್ಮೂರಿನ ಬಳಿಯ ಹಾನಗಲ್ಲು ಎಂಬುದು ನನಗೆ ಗೊತ್ತಿರಲಿಲ್ಲ. ನನ್ನ ತಂದೆ ಎಂಬಾತನ ಫೊಟೋ ಮೊದಲ ಬಾರಿಗೆ ನಾನು ನೋಡಿದಾಗ, ನನಗೆ ಸರಿಯಾಗಿ ಐವತ್ತು ವರ್ಷ.

ಬೆಳಗೆರೆ ಕೃಷ್ಣ ಶಾಸ್ತ್ರಿಗಳ ಬಗ್ಗೆ ಬರೆಯುವುದೆಂದರೆ, ಕೇವಲ ಬೆಳಗೆರೆ ಕುಟುಂಬದ ಬಗ್ಗೆ ಬರೆದಂತಾಗುವುದಿಲ್ಲ. ಅಲ್ಲಿ ತಳುಕಿನ ಕುಟುಂಬದ ಬಗ್ಗೆ ಬರೆಯಬೇಕು. ಏಕೆಂದರೆ, ಕುವೆಂಪು ಅವರ ಗುರುಗಳಾಗಿದ್ದ \'ತಳುಕಿನ\' ಟಿ.ಎಸ್.ವೆಂಕಣ್ಣಯ್ಯನವರ ತಂಗಿ ಸುಂದರಮ್ಮನವರು, ನನ್ನ ಇನ್ನೊಬ್ಬ ಸೋದರ ಮಾವನ ಹೆಂಡತಿ. ನನ್ನ ತಾಯಿಯ ತಾಯಿ ಅನ್ನಪೂರ್ಣಮ್ಮ \'ಮೋಕ್ಷಗುಂಡಂ\' ಕುಟುಂಬದ ಹೆಣ್ಣು ಮಗಳು. ಕೃಷ್ಣ ಶಾಸ್ತ್ರಿಗಳು ಮದುವೆಯಾದದ್ದು ಹಿರಿಯೂರಿನ \'ಅವಧಾನಿ\' ಕುಟುಂಬದಲ್ಲಿ. ನನ್ನ ದೊಡ್ಡಮ್ಮ ಬೆಳಗೆರೆ ಜಾನಕಮ್ಮ ಮದುವೆಯಾದದ್ದು \'ಮಲ್ಲೂರು\' ವಂಶದಲ್ಲಿ. ಅಲ್ಲಿಗಿದು ಮುಗಿಯಲಿಲ್ಲ. ನನ್ನ ಇನ್ನೊಬ್ಬ ಸೋದರ ಮಾವ ಬೆಳಗೆರೆ ಸೀತಾರಾಮ ಶಾಸ್ತ್ರಿಗಳ ಮಗ ಪ್ರಭಾಶಂಕರ ಮದುವೆಯಾದದ್ದು \'ದೇವುಡು\' ಕುಟುಂಬದ ಹೆಣ್ಣು ಮಗಳನ್ನು. ದೇವುಡು ನರಸಿಂಹ ಶಾಸ್ತ್ರಿಗಳ ಖಾಸಾ ಮಗನ ಮಗಳನ್ನ. ಅಲ್ಲಿಗೆ ಒಟ್ಟು ಎಷ್ಟು ಕುಟುಂಬಗಳಾದವು ನೋಡಿ? ಹೆಚ್ಚು ಕಡಿಮೆ ಎಲ್ಲರೂ ಮುಲಕನಾಡು ಬ್ರಾಹ್ಮಣರೇ. ವೀರಕೇಸರಿ ಸೀತಾರಾಮ ಶಾಸ್ತ್ರಿಗಳ ಕುಟುಂಬದೊಂದಿಗೂ ಈ ಎಳೆ ಸೇರಿಕೊಂಡಿದೆ. ಕುಟುಂಬಗಳೇನೋ ಸಾತ್ವಿಕ, ಬುದ್ಧಿವಂತ, ಅಲೌಕಿಕವೆನ್ನಬಹುದಾದಂಥ ಕುಟುಂಬಗಳೇ. ಆದರೆ ಇವುಗಳಲ್ಲಿರುವವರೆಲ್ಲರೂ ಸಾತ್ವಿಕರಲ್ಲ. ಬುದ್ಧಿವಂತರೂ ಅಲ್ಲ. ಅಲೌಕಿಕರು ಖಂಡಿತ ಅಲ್ಲ. At least, ನಾನು ಇದ್ಯಾವುದಕ್ಕೂ ಸೇರಿದವನಲ್ಲ. ಆದರೂ ನಾನು ಬರೆದ ಈವರೆಗಿನ ಎಪ್ಪತ್ತು ಪುಸ್ತಕಗಳಿಗೆ ಹೋಲಿಸಿದರೆ-ಶಾಸ್ತ್ರಿಗಳ ಜೀವನ ಕಥನ ಅತ್ಯಂತ ಸಾತ್ವಿಕವಾದದ್ದು. Pious ಆದದ್ದು.

ಇದನ್ನು ಪ್ರಿಂಟಿಗೆ ಕಳಿಸಿದವನೇ ಮೂರರ ಪೈಕಿ ಯಾವ ಪುಸ್ತಕ ಬರೆಯಲಾರಂಭಿಸಲಿ ಅಂತ ಯೋಚಿಸುತ್ತಿದ್ದೇನೆ. \'ಪ್ರಮೋದ್ ಮಹಾಜನ್ ಹತ್ಯೆ\' ಮುಕ್ಕಾಲು ಮುಗಿದಿದೆ. \'ನೆತ್ತರು ಮೆತ್ತಿದ ಗೋಡೆಯಾಚೆಗೆ\' ಕೃತಿಯ notes ಮುಗಿದಿದೆ. \'ಲವ್ ಇನ್ ದಿ ಟೈಮ್ ಆಫ್ ಫೇಸ್‌ಬುಕ್‌\' ನನಗೆ ಛಕ್ಕನೆ ಹೊಳೆದ ಸಬ್ಜೆಕ್ಟು. ಇವೆಲ್ಲದರ ಗರ್ಭದಲ್ಲೇ ಪತ್ರಕರ್ತ \'ಸತ್ಯನಾಥ ಭಟ್ಟನ ದಾಂಪತ್ಯ ಯೋಗ\' ಎಂಬ ಹೆಸರಿನ ಕಾದಂಬರಿಯೊಂದು ಮನಸ್ಸಿನಲ್ಲಿ ಛಳುಕು ಹೊಡೆಯುತ್ತಿದೆ.

ಚಂದಪ್ಪ ಹರಿಜನ ಸತ್ತು ಹನ್ನೆರಡು ವರ್ಷಗಳೇ ಆದವು. ಅವನ ಸಾವಿನೊಂದಿಗೆ ಭೀಮೆ ಬ್ರಿಡ್ಜಿನ ಅಡಿಯ ನೀರು ಕೆಂಪಗಾಗುವುದು ನಿಂತೀತೆಂಬ ನಂಬಿಕೆ ಹುಸಿಯಾಗಿ, ಈ ಹನ್ನೆರಡು ವರ್ಷಗಳಲ್ಲಿ, ಅದೇ ಹಳೆಯ ದ್ವೇಷದ ಸೆಳವಿನಲ್ಲಿ ಅನಾಮತ್ತು ಇಪ್ಪತ್ತೆಂಟು ಕೊಲೆಗಳಾಗಿವೆ. ನಿಜ ಹೇಳುವುದಾದರೆ ನನಗೆ ಕ್ರೈಂ ರೈಟಿಂಗ್‌ನಲ್ಲಿ ಉತ್ಸಾಹ ಉಳಿದಿಲ್ಲ. ಆದರೆ ಭೀಮಾತೀರಕ್ಕೆ ಸಂಬಂಧಿಸಿದಂತೆ 1998ರಿಂದಲೂ ಒಂದು ತೆರನಾದ docume ntationಗೆ ಕುಳಿತವನು ನಾನು. ಈಗ \'ಭೀಮಾತೀರದ ಹಂತಕರು -ಭಾಗ ಐಐ\' ತರಲೇಬೇಕಿದೆ. ಅದರಲ್ಲೂ ಈ ಹತ್ಯೆಗಳ ಅತಿ ಮುಖ್ಯ game player ಪುತ್ರಪ್ಪ ಬೈರಗೊಂಡ ಸಾವ್ಕಾರ ಕೊನೆಯುಸಿರೆಳೆದಿರುವಾಗ! ಬೇರೆ ದಾರಿಯಿಲ್ಲ.

ಇನ್ನು ಸಿನೆಮಾ ವಿವಾದ : ಬಾಯಲ್ಲಿ ಇರುವ ತನಕ ಅಡಿಕೆಯ ಹೋಳು ರುಚಿ. ಅದನ್ನು ಉಗಿದ ಮೇಲೆ ಅದನ್ನು ಯಾರು ತಿಂದರೇನು? ಈಗ ತಿಂದಿರುವವನ ಹೆಸರು ಓಂಪ್ರಕಾಶ್‌ರಾವ್.

ಅಷ್ಟು ಉತ್ತರ ಸಾಕಲ್ಲವೆ?

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 18 April, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books