Ravi Belagere
Welcome to my website
ನಾನು ಮೂವರನ್ನೂ ನೋಡಿದ್ದೆ. ಒಬ್ಬನನ್ನು ಪೊಲೀಸರು ಬಿಜಾಪುರ-ಗುಲಬರ್ಗ-ಸೊಲ್ಲಾಪುರದ ಬಯಲುಗಳಲ್ಲಿ ಬೇಟೆಯಾಡಿ ಆಡಿ ಕೊಂದರು. ಅವನ ಹೆಸರು ಚಂದಪ್ಪ ಹರಿಜನ. ಇನ್ನೊಬ್ಬನನ್ನು ನಾನು ನೋಡುವ ಹೊತ್ತಿಗಾಗಲೇ ಸಾವು ಅವನ ತಲೆಯ ಮೇಲೆ ‘ಕಫನ್’ ಹೊದಿಸಿತ್ತು. ಭೀಮಾ ತೀರದ ಆ ಹಂತಕ ಅಷ್ಟು ದೂರದಿಂದ ಬೆಂಗಳೂರಿಗೆ ಬಂದು ಆಸ್ಪತ್ರೆಯೊಂದರಲ್ಲಿ ಪ್ರಾಣ ಬಿಟ್ಟ. ಅವನ ಹೆಸರು ಕೇಶಪ್ಪ ತಾವರಖೇಡ.ಮೂರನೆಯವನು ಶಿವಾಜಿ ಬೋರಗಿ. ಭೀಮಾ ತೀರದ ಅಷ್ಟೂ ರಕ್ತಪಾತಕ್ಕೆ ಕಾರಣನಾದ ಹುಂಬ. ಭೀಮಾ ತೀರದ ಈ ಮೂವರು ಹಂತಕರ ಸಾವುಗಳೇ ಅಂಥವರ ಬದುಕುಗಳಿಗೆ ಬೆನ್ನುಡಿಗಳಾದವು. ನಾನು ಸುಮ್ಮನೆ ಕುಳಿತು ’ಭೀಮಾ ತೀರದ ಹಂತಕರು’ ಪುಸ್ತಕ ಬರೆದಿದ್ದೇನೆ.
Home About Us Gallery Books Feedback Prarthana Contact Us

ಆ ಅಗಾಧ ದೇಹಿ ಸೀತಾರಾಮಪ್ಪನೊಂದಿಗೆ ಒಂದು ಒಣಕಲು ಕುದುರೆ ಯಾಕಿರುತ್ತಿತ್ತೋ?

\'\'ಅದನ್ನ ಹತ್ತಿಗಿತ್ತೀರಿ ಜೋಕೆ!\'\'

ಎಂದು ದೊಡ್ಡ ದನಿಯಲ್ಲಿ ಕೂಗಿದ್ದಳು ನನ್ನ ಅಮ್ಮ. ಯಾಕೋ ಗೊತ್ತಿಲ್ಲ, ನನಗೆ ಮೊದಲಿನಿಂದಲೂ ಪ್ರಾಣಿಗಳೆಂದರೆ ಹುಚ್ಚು. ನಾಯಿ, ಕುದುರೆ, ಪಾರಿವಾಳ, ಮಂಗ, ಹಾವು: ಹೀಗೆ. ಸದ್ಯಕ್ಕೆ ಅದು ನಾಯಿಗಳಿಗೇ ಸೀಮಿತವಾಗಿ ಅವುಗಳೊಂದಿಗೆ ಮುಗಿದೂ ಹೋಯಿತು. ಕುದುರೆ ಬಾಲದ ಹಿಂದೆ ಬಿದ್ದಿದ್ದರೆ ಯಾವತ್ತೋ ಗೋತಾ ಹೊಡೆದಿರುತ್ತಿದ್ದೆ. ಆದರೆ ಚಿಕ್ಕಂದಿನಲ್ಲಿ ಯಾರದೇ ಕುದುರೆ ಕಂಡರೂ, ಅದಕ್ಕೆ ಲಗಾಮು ಇರಲಿ ಬಿಡಲಿ ಛಕ್ಕನೆ ಹತ್ತಿ ಕುಳಿತು ಅದರ ಕಿವಿ ಹಿಡಿದುಕೊಂಡು ಕಾಲುಗಳಲ್ಲಿ ಅದರ ಡುಬ್ಬದಂಥ ಹೊಟ್ಟೆಗೆ ಛಪ್ಪ ಛಪ್ಪನೆ ಬಡಿಯುತ್ತಾ ಸವಾರಿ ಆರಂಭಿಸಿ ಬಿಡುತ್ತಿದ್ದೆವು. ಕೊಂಚ ಸಾತ್ವಿಕವಾದವು ಅಷ್ಟು ದೂರಕ್ಕೆ ಹೋಗುತ್ತಿದ್ದವು. ಪುಂಡ ಕುದುರೆಗಳು ನಾಲ್ಕು ಹೆಜ್ಜೆ ನಡೆದು ನನ್ನನ್ನು ಯಡಿಯೂರಪ್ಪನನ್ನು ಕುರ್ಚಿಯಿಂದ ಕೆಡವಿದಂತೆ ಕೆಡವಿ ಓಡಿ ಬಿಡುತ್ತಿದ್ದವು. ಒಮ್ಮೆ ಬಳ್ಳಾರಿಯಲ್ಲಿ ಹಾಗೆ ಕುದುರೆಯಿಂದ ಬಿದ್ದು ಕೈಯೂ ಮುರಿದುಕೊಂಡಿದ್ದೆ. ಆ ಭಯವಿದ್ದುದರಿಂದಲೇ ಅವತ್ತು ಬೆಳಗೆರೆಯಲ್ಲಿ ಅಮ್ಮ ಆ ಮಾತು ಹೇಳಿದ್ದಳು: \'\'ಹತ್ತಿಗಿತ್ತೀರಿ ಜೋಕೆ!\'\'

ಅದೊಂದು ಒಂಟೆಲುಬಿನ ಕುದುರೆ. ಬ್ರಾಹ್ಮಣರ ಮನೆಯ ಕುದುರೆಯೆಂದ ಮೇಲೆ ಇನ್ನು ಹೇಗಿರಲು ಸಾಧ್ಯ? ಅದನ್ನು ಸಾಕಿದಾತ ನನ್ನ ಬಂಧುವೇ ಆದ, ವರಸೆಯಲ್ಲಿ ಬಹುಶಃ ಸೋದರ ಮಾವನಾಗಿದ್ದಿರಬಹುದಾದ ಸೀತಾರಾಮಪ್ಪ. ಆತನನ್ನು ನಮ್ಮ ಮನೆಯ ತೆಲುಗರು \'ಗುರ್ರಮು ಸೀತಾರಾಮುಡು\' ಅಂತಲೂ, ಊರ ಜನ ಕುದುರೆ ಸೀತಾರಾಮಪ್ಪ ಅಂತಲೂ ಕರೆಯುತ್ತಿದ್ದರು. ಭಾರೀ ಆಳು. ಆಳ್ತನಕ್ಕಿಂತ ಆತನ ಹೊಟ್ಟೆ ದೊಡ್ಡದು. ವಿಶೇಷವೆಂದರೆ, ನನ್ನ ಹಿರಿಯ ಸೋದರ ಮಾವ ಬೆಳಗೆರೆ ಸೀತಾರಾಮ ಶಾಸ್ತ್ರಿಗಳೂ, ಕುದುರೆ ಸೀತಾರಾಮಪ್ಪನೂ ಒಂದೇ ದಿನ ಹುಟ್ಟಿದವರು. ಇಬ್ಬರಿಗೂ ಒಂದೇ ಹೆಸರಿಟ್ಟರು. ಆತ ಹುಟ್ಟಿದ ಕೆಲವೇ ದಿನಕ್ಕೆ ತಾಯಿ ತೀರಿಕೊಂಡಾಗ, ಆತನನ್ನು ತಂದು ಪೋಷಣೆಗೆಂದು ಕೊಟ್ಟಿದ್ದು ನಮ್ಮ ಕುಟುಂಬದ ಬಾಲ ವಿಧವೆ ಗಿರಿಯಮ್ಮಜ್ಜಿಯ ಕೈಗೆ. ಬೆಳಗೆರೆ ಸೀತಾರಾಮ ಶಾಸ್ತ್ರಿಗಳು ಕಲ್ಕತ್ತಾದಲ್ಲಿ ಮ್ಯಾಥಮೆಟಿಕ್ಸ್ ಓದಿ ಬಹುದೊಡ್ಡ ಹೆಸರಿನ ಪ್ರೊಫೆಸರರಾದರು. ಸೀತಾರಾಮಪ್ಪ ಪೌರೋಹಿತ್ಯ ಮಾಡಿ ಹಳ್ಳಿ ಹಳ್ಳಿ ಮನೆ ಮನೆ ಕುದುರೆಯೊಂದಿಗೆ ತಿರುಗಿ ಕುದುರೆ ಸೀತಾರಾಮಪ್ಪನಾದ.

ಸೀತಾರಾಮಪ್ಪನನ್ನು ಕುರಿತು ಬರೆಯುವ ಮುನ್ನ ಗಿರಿಯಮ್ಮನ ಬಗ್ಗೆ ಬರೆಯಬೇಕು. ಆಕೆ ನನ್ನ ಅಜ್ಜ (ಬೆಳಗೆರೆ ಚಂದ್ರಶೇಖರ ಶಾಸ್ತ್ರಿಗಳ)ನ ಅಕ್ಕ. ಆ ಕಾಲದ ನಿಯಮದಂತೆ ಎಂಟು ವರ್ಷಕ್ಕೇ ಮದುವೆ ಮಾಡಿದರು. ಹತ್ತಿರದ ಧರ್ಮಪುರದ ಗಂಡು. ಗಂಡನನ್ನು ನೋಡುವ ಮೊದಲೇ ಆಕೆ ಅದೊಂದು ದಿನ ಕನ್ನಡಿ ನೋಡಿಕೊಂಡಳು. ಆಗ ಹತ್ತು ವರ್ಷದ ಹುಡುಗಿ. ಹಣೆ ಬರಿದಾಗಿತ್ತು. ಕುಂಕುಮ ವಿಟ್ಟುಕೊಳ್ಳಲು ಹೋದಾಗ,
\'\'ನುವ್ವು ಪೆಟ್ಟುಕೋರಾದುವೇ ಇಂಕ!\'\' ನೀನು ಇಟ್ಟುಕೋಬಾರದು ಕಣೇ ಇನ್ನು ಅಂದರಂತೆ ಮನೆಯ ಜನ. ಹತ್ತು ವರ್ಷದ ಹುಡುಗಿಗೆ ಧರ್ಮಪುರದ ತನ್ನ ಗಂಡ ಸತ್ತಿದ್ದಾನೆಂದೂ, ತನಗೆ ವೈಧವ್ಯ ಬಂದಿದೆಯೆಂದೂ, ಗಂಡನ ಮನೆಗೆ ಹೋಗುವ ಮುನ್ನವೇ, ಬೆಳಗೆರೆಯ ಮನೆಯಲ್ಲೇ ಗೊತ್ತಾದದ್ದು ಹಾಗೆ. ಆದರೆ ಹತ್ತು ವರ್ಷದ ಮಗುವಿಗೆ ಅದೆಲ್ಲ ಏನರ್ಥ ವಾಗಬೇಕು? ಹಬ್ಬ ಬಂದರೆ
ಕುಂಕುಮ, ಬಳೆ, ಒಡವೆ, ಹೂವಿನ ಜಡೆ, ಜಡೆ ಬಿಲ್ಲೆ, ವಂಕಿ, ಡಾಬು ಎಲ್ಲಾ ಇಟ್ಟುಕೊಳ್ಳುವ ಆಸೆ. ವಿಧವೆಯಾ ದವಳಿಗೆ ಅದೆಲ್ಲ ಹಾಕುವುದುಂಟೆ? ಮೊದಲು \'\'ಆ ರಂಡೆಗೆ ತಲೆ ಬೋಳಿಸಿ\'\' ಎಂದು ಅಬ್ಬರಿಸಿದ್ದರು ಬ್ರಾಹ್ಮಣ ವರೇಣ್ಯರು. ಆದರೆ ಬೆಳಗೆರೆಯ ಮನೆ ಹಿರಿಯನಿಗೆ ಅಷ್ಟರ ಮಟ್ಟಿಗೆ ಪ್ರe ಇತ್ತು \'\'ಆಡೋ ಮಗುವಿಗೆ ಅದೆಲ್ಲ ಏನು ಗೊತ್ತಾಗುತ್ತೆ? ಹಟ ಮಾಡಿದರೆ ಒಡವೆ ಹಾಕಿ. ಆಡಿಕೊಂಡಿರಲಿ\'\' ಅಂದರಾತ.

ಆದರೆ ಆಡಿಕೊಂಡು ಮನೆಯಲ್ಲೇ ಇರುವ ವಯಸ್ಸಾ ಅದು. ಬೆಳಗೆರೆಯ ಕೆರೆ ಪಕ್ಕದಲ್ಲಿ ಮಾವಿನ ತೋಪು. ಚೆನ್ನಾಗಿ ಕಾಯಿ ಬಿಟ್ಟಿದ್ದ ಕಾಲ.
ಊರ ಜನವೆಲ್ಲ ಜಾತ್ರೆಯ ಗಡಿ ಬಿಡಿಯಲ್ಲಿದ್ದರೆ, ಈ ಗಿರಿಯಮ್ಮ ಮೈತುಂಬ ಒಡವೆ ಹಾಕಿಕೊಂಡು ತೋಪು ಸೇರಿ, ಮಾವಿನ ಮರ ಹತ್ತಿದ್ದಾಳೆ. ಆಗ ಅಲ್ಲಿಗೆ ಬಂದಿದ್ದಾನೆ ನಿಂಗ! ಅವನನ್ನು ಸುತ್ತ ಹಳ್ಳಿಯ ಜನ ಹಾಗಿರಲಿ: ತನ್ನನ್ನು ತಾನೇ \'ಕಳ್ನಿಂಗ\' (ಕಳ್ಳನಿಂಗ) ಎಂದು ಕರೆದುಕೊಳ್ಳುತ್ತಿದ್ದ. ಅಂಥ ಕಳ್ಳ. ಅವನನ್ನು ನೋಡಿದ ಕೂಡಲೆ ಈ ಹುಡುಗಿ ಗಿರಿಯಮ್ಮ ಮರದ ಮೇಲೆಯೇ ಉಚ್ಚೆ ಹುಯ್ದುಕೊಂಡಿದ್ದಾಳೆ. ಆರ್ಭ ಟಿಸಿ ಬೆದರಿಸಿ ಕೆಳಕ್ಕಿಳಿಸಿದ ಕಳ್ಳಿಂಗ,

\'\'ಯಾರು ನೀನು?\'\' ಅಂದಿದ್ದಾನೆ.

\'\'ಗಿರಿಯಮ್ಮ\'\' ಅಂದಿದ್ದಾಳೆ.

\'\'ಯಾರ ಮಗಳು?\'\'

\'\'ಊರ ಸ್ವಾಮೇರ (ಬ್ರಾಹ್ಮಣರ) ಮಗಳು\'\' ಅಂದಿ ದ್ದಾಳೆ.

\'\'ಅಂಥೋರ ಮಗಳಾಗಿ ಒಬ್ಬಳೇ ಒಡ್ವೆ ಆಕ್ಯಂಡು ತೋಪಿಗೆ ಬಂದಿದೀಯಾ... ನಡಿ\'\' ಎಂದವನೇ ಆಕೆ ಯನ್ನು ಊರಿನೆಡೆಗೆ ಗದುಮಿದ್ದಾನೆ. ಹಿಂದೆ ಒಂದು ಕಟ್ಟಿಗೆ ಹಿಡಿದುಕೊಂಡು ತಾನೂ ಹೂಂಕರಿಸುತ್ತಾ ಬೆಳ ಗೆರೆಯ ನಮ್ಮ ಮನೆಯ ತನಕ ಅಟ್ಟಿಸಿಕೊಂಡು ಬಂದಿದ್ದಾನೆ. ಸತ್ತೇ ಹೋಗುವಷ್ಟು ಹೆದರಿಕೆಯಾದ ಗಿರಿಯಮ್ಮ \'\'ಕಳ್ನಿಂಗ ಬರ‍್ತಿದಾನೇ...\'\' ಎಂದು ಕಿರುಚಿಕೊಂಡೇ ಮನೆಯೊಳಕ್ಕೆ ಬಂದಿದ್ದಾಳೆ. ಆಕೆಯ ತಂದೆಗೆ ಆಶ್ಚರ್ಯ. ಕಳ್ನಿಂಗ ಅಂದರೆ ಕೊಂಚ ಭಯವೂ ಇದ್ದಿರಬೇಕು. ಆದರೂ ಹೊರಕ್ಕೆ ಬಂದಿದ್ದಾರೆ.

\'\'ಆಯಮ್ಮಯ್ಯ ನಿಮ್ಮ ಮಗಳೋ?\'\' ಅಂಗಳದಲ್ಲಿ ನಿಂತು ಕೇಳಿದ್ದಾನೆ ಕಳ್ನಿಂಗ.

\'\'ಹೌದಪ್ಪ... ಯಾಕೆ?\'\'

\'\'ಅಲ್ಲಾ ಸ್ವಾಮೀ, ಇನ್ನೂ ಚಿಕ್ಕದು ಮಗು. ಅದ ರಲ್ಲೂ ಹೆಣ್ಣು ಮಗಳು. ಮೈತುಂಬ ಒಡವೆ ಹಾಕಿ ಮಧ್ಯಾಹ್ನದ ಹೊತ್ನಲ್ಲಿ ಒಬ್ಬಳ್ನೇ ಕೆರೆ ಪಕ್ಕದ ತೋಪಿಗೆ ಮಾವಿನ ಕಾಯಿ ಕೀಳಾಕೆ ಕಳಿಸಿದೀರಲ್ಲಾ? ನನ್ನ ಕೈಗೆ ಸಿಕ್ಕಳೂ ಸರಿ ಹೋಯ್ತು. ಬ್ಯಾರೆ ಯಾರದಾದರೂ ಕಣ್ಣಿಗೆ ಬಿದ್ದಿದ್ದಿದ್ರೆ ಏನು ಗತಿ? ನಿಮ್ಮ ಮಗಳು ಅಂತ ಹೇಳಿದ್ದಕ್ಕೆ ಮನೆ ತನಕ ಗದುಮಿಕ್ಯಂಡು ಬಂದೆ: ಮತ್ತೆ ಎಲ್ಲಿಗಾದರೂ ಹೋದಾಳು ಅಂತ\'\' ಅಂದನಂತೆ ಕಳ್ನಿಂಗ.

ಅದು ಅವನ ನಿಯತ್ತು. ಬೆಳಗೆರೆಯ ಸ್ವಾಮೇರ (ಬ್ರಾಹ್ಮಣರ) ಮನೆಯ ಮಗಳು ಎಂಬ ಗೌರವವೂ ಸೇರಿತ್ತೇನೋ? ಅವತ್ತು ಗಿರಿಯಮ್ಮನ ತಂದೆ ಕಳ್ನಿಂಗ ನಿಗೆ ಹೊಟ್ಟೆ ತುಂಬ ಹೋಳಿಗೆ ಊಟ ಹಾಕಿ, \'ದಕ್ಷಿಣೆ\' ಕೂಡ ಕೊಟ್ಟು ಕಳಿಸಿದ್ದರಂತೆ. ಮುಂದೊಮ್ಮೆ ಕೃಷ್ಣಶಾಸ್ತ್ರಿ ಗಳು ಶಾಲೆಯೊಂದಕ್ಕೆ ಏನೋ ಕಾರಣಕ್ಕೆ ಹೋದಾಗ ಎಂಬತ್ತು ವರ್ಷದ ವೃದ್ಧನೊಬ್ಬ ಶಾಲೆಯ ಮೇಲೆ ಮಲಗಿದ್ದು ಕಾಣಿಸಿದೆ. ಶಾಸ್ತ್ರಿಗಳು ಮಾತನಾಡಿಸಿದ್ದಾರೆ.

\'\'ನಾನು ಸ್ವಾಮೀ... ಕಳ್ನಿಂಗ\'\' ಅಂದಿದ್ದಾನೆ.

ಗಿರಿಯಮ್ಮನ ಪ್ರಕರಣ ವಿವರಿಸಿ, ಅವತ್ತು ಹೀಗಾಗಿತ್ತಂತೆ ನಿಜವೇ ಎಂದು ಕೇಳಿದಾಗ,

\'\'ನಿಜ ಸ್ವಾಮೀ, ನಾನು ಕಳ್ಳನೇ. ಆದರೆ ನನ್ನ ನಿಯತ್ತು ಹಂಗಿತ್ತು. ಇವಾಗಿನ ಕಳ್ರಿಗೆ ಇದೆಲ್ಲ ಎಲ್ಲೀದು?\'\' ಅಂದನಂತೆ.

ಅಷ್ಟು ಮುಗ್ಧೆಯಾದ ಗಿರಿಯಮ್ಮ ತನ್ನ ಇಡೀ ಜೀವನವನ್ನು ವಿಧವೆಯಾಗೇ ಕಳೆದಳು. ಹೇಗೆ ಕಳೆದಿದ್ದಾಳು? ಕೊಂಚ ವಯಸ್ಸಿಗೆ ಬಂದ ಮೇಲೆ ಗತಿಸಿ ಹೋದ ಗಂಡನ ಮನೆಗೆ ಹೋಗಿ ತನ್ನ ಗಂಡನ ಆಸ್ತಿಯ ಪಾಲು ಕೇಳಿದಳಾ? ಕೇಳಿದ್ದಿರಲೂಬಹುದು. ವೈಧವ್ಯ, ಅಂಗವೈಕಲ್ಯ, ಬಡತನ ಮತ್ತು ಅಸಹಾಯಕತೆಗಳು ಕೆಲವು ಸಲ ಎಂಥವರಲ್ಲೂ ಬಲು ದೊಡ್ಡ ಧೈರ್ಯ ತುಂಬುತ್ತವೆ. ಗಿರಿಯಮ್ಮ ತಾನಾಗಿಯೇ ಕೇಳಿದಳೋ, ಆಕೆಯ ಗಂಡನ ಮನೆಯವರೇ ಪಾಲು ಕೊಟ್ಟರೋ ಗೊತ್ತಿಲ್ಲ. ಕೊಟ್ಟಿದ್ದರೂ ಮಹಾ ಎಷ್ಟು? ಹೆಚ್ಚೆಂದರೆ ಮೂವತ್ತು ರುಪಾಯಿ. ಅದರಲ್ಲೇ ಮನೆಯೊಂದನ್ನು ಖರೀದಿಸಿದಳು. ಅದು ಬೆಳಗೆರೆಯ ಉಪ ಗ್ರಾಮವಾದ ನಾರಣಾಪುರದ ಶಾನುಭೋಗರು ಕಟ್ಟಿಸಿದ್ದ ಮನೆ. ಅದನ್ನು ಮಾರಿ ಅವರು ನಾರಣಾಪುರಕ್ಕೆ ಹೊರಟಿದ್ದರು. ಆ ಮನೆಯಲ್ಲಿ ದೆವ್ವವಿದೆಯೆಂದೂ ಅದನ್ನು ಕೊಳ್ಳಬೇಡವೆಂದೂ ಗಿರಿಯಮ್ಮನ ಬಂಧವೊಬ್ಬ ಹೆದರಿಸಿದನಂತೆ. ಅಂಥ ಕಳ್ನಿಂಗನೇ ತನ್ನನ್ನು ಏನೂ ಮಾಡದಿದ್ದಾಗ ದೆವ್ವವೇನು ಮಾಡೀತು ಅಂದು ಕೊಂಡಳೋ ಏನೋ?

ಗಿರಿಯಮ್ಮ ಮನೆ ಖರೀದಿಸಿದಳು. ಸಾಕಲಿಕ್ಕೆ ತಾಯಿ ಇಲ್ಲದ ಮಗ ಕುದುರೆ ಸೀತಾರಾಮಪ್ಪ ಇದ್ದ. ಆದರೆ ಆಕೆ ಸಾಕಿದ್ದು ಒಬ್ಬ ಸೀತಾರಾಮಪ್ಪನನ್ನೇನಾ? ಬೆಳಗೆರೆಯ ಮನೆಯಲ್ಲಿ ಯಾವ ಮಗು ಅತ್ತರೂ ಒಯ್ದು ಕೊಡುತ್ತಿದ್ದುದೇ ಗಿರಿಯಮ್ಮನ ಕೈಗೆ. ಜನ್ಮದಲ್ಲೇ ಗಂಡನನ್ನು ಕಾಣದ, ಗರ್ಭ ಧರಿಸದ, ತಾಯ್ತನ ಅನುಭವಿಸದ ಗಿರಿಯಮ್ಮ ಅಳುವ ಮಗುವಿಗೆ ಸುಮ್ಮನೆ ತನ್ನ ಬಚ್ಚ ಮೊಲೆಯಲ್ಲಿ ಹಾಲೂಡಿಸಿದಂತೆ ಮಾಡುತ್ತಾ, ಹಾಗೇ ಸಮಾಧಾನ ಮಾಡಿ, ಚುಕ್ಕು ತಟ್ಟಿ ಮಲಗಿಸುತ್ತಿದ್ದಳು. ಮನೆಯಲ್ಲಿ ಹಸುವಿತ್ತು. ಬಯಲು ಸೀಮೆಯಲ್ಲಿ ಮೊಸರು ನಿಜಕ್ಕೂ ಗಟ್ಟಿ. ಸೌಟಿನಲ್ಲಿ ಅನ್ನ ಬಗೆದಂತೆ ಬಗೆಯಬಹುದಾದಷ್ಟು ಸಾಂದ್ರ. ಚಿಕ್ಕವಳಾಗಿದ್ದ ನನ್ನ ತಾಯಿಯನ್ನು ಕರೆದು \'ದೇವತಾ ಪೆರುಗು ತಿಂದೂ ರಾವೇ\' (ದೇವತೆಯಂಥ ಮೊಸರು ತಿನ್ನುವಿಯಂತೆ ಬಾರೇ) ಎಂದು ಕರೆಯುತ್ತಿದ್ದಳಂತೆ. ಆ ಹೊತ್ತಿಗಾಗಲೇ ಗಿರಿಯಮ್ಮ, ಗಿರಿಯಮ್ಮಜ್ಜಿ ಯಾಗಿದ್ದಳು. ನಾನು ಅಥವಾ ನನ್ನ ಓರಗೆಯವ ರ‍್ಯಾರೂ ನೋಡಲಾಗಲಿಲ್ಲ. ಆಕೆ ತೀರಿಕೊಂಡಳು, ಬದುಕಿನುದ್ದಕ್ಕೂ ವಿಧವೆಯಾಗಿ, ಅಂಥ ಹೆಣ್ಣು ಮಕ್ಕಳು ಬೆಳಗೆರೆಯ ಮನೆಯಲ್ಲಿ, ಬ್ರಾಹ್ಮಣರ ಮನೆಗಳಲ್ಲಿ ಎಷ್ಟು ಜನವೋ?

ಇಷ್ಟಕ್ಕೂ ಸೀತಾರಾಮಪ್ಪನ ಕುದುರೆಯ ಬಗ್ಗೆ ಅಮ್ಮ ಯಾಕೆ ಅಂಥ ವಾರ್ನಿಂಗು ಕೊಟ್ಟಿದ್ದಳು ಅಂತ ಯೋಚಿಸಿದರೆ ನಗು ಬರುತ್ತದೆ. ಕುದುರೆ ಸೀತಾರಾಮಪ್ಪ ಊಟಕ್ಕೆ ಕುಳಿತರೆ ಆ ಮನೆಯ ಹೆಂಗಸರು ನಡುಗಿ ಹೋಗಬೇಕು. ಆ ಪರಿ ಉಣ್ಣುತ್ತಿದ್ದ. ಆದರೆ ಕುದುರೆಗೆ ಒಣಗಿದ ದರ್ಭೆಯೇ ಗತಿ. ಹೀಗಾಗಿ ಆ ಕುದುರೆ ಮನುಷ್ಯರಿರಲಿ, ಚಿಕ್ಕ ಮಕ್ಕಳನ್ನು ಹೊರುವಷ್ಟೂ ಗಟ್ಟಿಯಿರಲಿಲ್ಲ. ಅದರ ಮೇಲೆ ಕುಳಿತದ್ದೇ ಆದರೆ ಹಿಂದಿನ ಕಾಲು ಹಿಂದಕ್ಕೆ, ಮುಂದಿನ ಕಾಲು ಮುಂದಕ್ಕೆ ಚಾಚಿ ಮಲಗಿ ಬಿಟ್ಟೀತು ಎಂಬುದು ಅಮ್ಮನ ಆತಂಕ.

ಹಾಗಾದರೆ ಯಾವ ಪುರುಷಾರ್ಥಕ್ಕೆ ಕುದುರೆ ಯಿಟ್ಟುಕೊಂಡಿರುತ್ತಿದ್ದ ಆತ. ಅದನ್ನು ಎಲ್ಲಿಗೆ ಹೋದರೂ ಜೊತೆಯಲ್ಲಿ ನಡೆಸಿಕೊಂಡು ಹೋಗು ತ್ತಿದ್ದ. ಯಾರದೋ ಮನೆಯಲ್ಲಿ ತಿಥಿ, ಬ್ರಾಹ್ಮಣಾರ್ಥ, ಪೂಜೆ-ಪುನಸ್ಕಾರ ಆದರೆ ಅವರು ಕೊಡುವ ಅಕ್ಕಿ- ಬೇಳೆ-ತರಕಾರಿ ಮುಂತಾದ ಚಿಕ್ಕ ಗಾತ್ರದ ಗಂಟುಗಳನ್ನು ಆ ಕುದುರೆಯ ಮೇಲೆ ಹೊರಿಸಿ, ಅದಕ್ಕೆ ಹೆಚ್ಚಾದುದನ್ನು ತಾನೇ ಹೊತ್ತುಕೊಂಡು ನಿಧಾನವಾಗಿ ನಡೆದು ಬರುತ್ತಿದ್ದ. ಕುದುರೆಯ ಸಾರ್ಥಕ್ಯ ಅಷ್ಟೆ. ಆದರೆ ಕಡೆಯ ತನಕ ಅದೊಂದು ಕುದುರೆ ಆತನೊಂದಿಗೆ ಕಾಲೆಳೆಯುತ್ತಲೇ ಇತ್ತು. ಅದಿನ್ನೆಂಥ ಭಾವನಾತ್ಮಕ ಸಂಬಂಧವೋ? ಸೀತಾರಾಮಪ್ಪನಿಗೆ ವಯಸ್ಸೂ ಆಯಿತು. ವಿಪರೀತ ತಿಂದು ಸ್ಥೂಲ ದೇಹಿಯಾದದ್ದರಿಂದ ಡಯಾಬಿಟೀಸೂ ಬಂತು. ಯಾವಾಗಲೋ ನಡೆಯುವಾಗ ಕಾಲಿಗೆ ತೆಂಗಿನ ಗರಿಯ ಒರಟು ಕಡ್ಡಿಯೊಂದು ತಗುಲಿ ತರಚಿ ಗಾಯವಾಯಿತು. ಮುಂದೆ ಅದೇ ವ್ರಣವಾಗಿ, ವಿಪರೀತಕ್ಕಿಟ್ಟುಕೊಂಡು, ಕಾಲೇ ಕತ್ತರಿಸಬೇಕಾದ ಸ್ಥಿತಿ ಬಂದು, ಅಷ್ಟರಲ್ಲಿ ಆತ ಸತ್ತೇ ಹೋದ.

ಮೊನ್ನೆ ಬೆಳಗೆರೆಗೆ ಹೋದಾಗ ನಮ್ಮ ವರದಿಗಾರ ಅರಸು ಬೆಳಗೆರೆಯ ಬೀದಿ, ಗುಡಿ ಮುಂತಾದವುಗಳ ಫೊಟೋ ತೆಗೆದವನು ಕುದುರೆ ಸೀತಾರಾಮಪ್ಪನದೂ ಒಂದು ಫೊಟೋ ಸಂಗ್ರಹಿಸಿ ಕಳಿಸಿದ್ದಾನೆ. ಅದನ್ನು ನೋಡಿದ ಕೂಡಲೇ ಬಾಲ್ಯದಲ್ಲಿ ನಾನು ಕಂಡ ಕುದುರೆ ಸೀತಾರಾಮಪ್ಪನ ಚಿತ್ರವೂ ಕಣ್ಣೆದುರಿಗೆ ಬಂದಂತಾ ಯಿತು. ಒಮ್ಮೆ ಆತ ನಮ್ಮ ಮನೆಗೆ ಬಂದಿದ್ದ. ಮನೆಯಲ್ಲಿ ನನ್ನ ಅಮ್ಮನ ಎರಡನೆಯ ಅಕ್ಕ ರುಕ್ಮಿಣಮ್ಮ ಇದ್ದಳು\'\'ಸೀತಾರಾಮುಡು ವಚ್ಚಿನಾಡು!\'\' (ಸೀತಾ ರಾಮ ಬಂದಿದಾನೆ) ಎಂದು ಯಾವ ಪರಿ ಭಯ ಗೊಂಡು ಮಾತನಾಡುತ್ತಿದ್ದರೆಂದರೆ, ಅವನಿಗೆ ಅನ್ನ ಈಡು ಮಾಡುವುದು ಹೇಗೆ ಎಂಬುದೇ ಅವರ ಚಿಂತೆಯಾಗಿತ್ತು. ಅರ್ಧ ಊಟ ಮಾಡಿದವನು \'\'ಅಮ್ಮಯ್ಯಾ, ಅನ್ನ ಮುಗಿದು ಹೋಗಿದ್ರೆ ಇನ್ನೊಂದು ತಪ್ಪಲೆ ಇಡ್ರೇ... ಕಾಯ್ತಿರ‍್ತೀನಿ\'\' ಅಂದವನು ತಟ್ಟೆಯ ಮುಂದೆ ಪದ್ಮಾಸನ ಹಾಕಿಕೊಂಡು ಕುಳಿತೇ ಇದ್ದ. ಅಂಥ ಭೂಪ ಸೀತಾರಾಮಪ್ಪ.

ಇಂಥ ಅನೇಕ ಕ್ಯಾರೆಕ್ಟರುಗಳ ನೆನಪು ಮಾಡಿಕೊಡು ತ್ತದೆ ಶಾಸ್ತ್ರಿಗಳ ಜೀವನ ಕಥನವಾದ \'\' ಇದು ಜೀವ- ಇದುವೇ ಜೀವನ\'\'. ನನ್ನ ಗೆಳೆಯರೂ, ಅಣ್ಣನಂಥ ವರೂ ಆದ ಬಿ.ಆರ್.ಲಕ್ಷ್ಮಣರಾವ್ ಅವರ ತಮ್ಮ ಬಿ.ಆರ್.ಶಂಕರ್, ಬೆಳಗೆರೆ ಕೃಷ್ಣಶಾಸ್ತ್ರಿಗಳ ಕೆಲವು ಚೆಂದದ ಫೊಟೋಗಳನ್ನು ತೆಗೆದುಕೊಟ್ಟಿದ್ದಾರೆ. ನನ್ನ ಹುಡುಗ ವೀರೇಶ್ ಹೊಗೆಸೊಪ್ಪಿನವರ್ ತುಂಬ ಆಕರ್ಷಕವಾದ ಮುಖಪುಟ ಮಾಡಿದ್ದಾನೆ. ಇನ್ಸಿ ಡೆಂಟಲಿ, ಇತ್ತೀಚೆಗೆ ಐದಾರು ಪುಸ್ತಕ-ಸಿಡಿ ಇತ್ಯಾದಿ ಗಳನ್ನು ಬಿಡುಗಡೆ ಮಾಡಿದಾಗ ನಾನು ವೇದಿಕೆಯ ಮೇಲೆಯೇ ಶಾಸ್ತ್ರಿಗಳ ಹಿಂದೆ ನಿಂತು ಒಂದು ಫೊಟೋ ತೆಗೆಸಿಕೊಂಡಿದ್ದೆ. ಅದು ಪುಸ್ತಕದ ಬೆನ್ನು ಪುಟಕ್ಕೆ ಸೂಕ್ತ ಅಂತ ನನಗೇ ಅನ್ನಿಸಿತ್ತು. ಪುಸ್ತಕವನ್ನು ಮಾಮೂಲು ಹಾಳೆಯಲ್ಲಿ ಮುದ್ರಿಸಿ, ಫೊಟೋಗಳನ್ನಷ್ಟೆ ನುಣು ಪಾದ ಹಾಳೆಯಲ್ಲಿ ಮುದ್ರಿಸುವುದು ವಾಡಿಕೆ. ಆದರೆ ನಾನು ಇಡೀ ಪುಸ್ತಕವನ್ನು glossy ಆದ ನುಣುಪು ಕಾಗದದಲ್ಲೇ ಪ್ರಕಟಿಸೋಣ. ಆಯಾ ಸಂದರ್ಭಕ್ಕೆ ಛಾಪ್ಟರಿಗೆ, ವ್ಯಕ್ತಿಗಳಿಗೆ ಸಂಬಂಧಿಸಿದ ಫೊಟೋಗಳನ್ನು ಪುಸ್ತಕದುದ್ದಕ್ಕೂ ಹಾಕುತ್ತ ಹೋಗೋಣ ಅಂದೆ. ಎಲ್ಲರಿಗೂ ಅಂದು ಸಮಂಜಸವೆನ್ನಿಸಿತು. ಪುಸ್ತಕದ ಬಗ್ಗೆ ಶಾಸ್ತ್ರಿಗಳನ್ನೇ ಕೇಳೋಣವೆಂದು ಹೋದರೆ,

\'\'ನಿಂಗೊಂದು ಮಾಡಕ್ಕೆ ಕೆಲಸವಿಲ್ಲ. ನನ್ನ ಬಗ್ಗೆ ಪುಸ್ತಕ-ಗಿಸ್ತಕ ಯಾಕಯ್ಯಾ ಬರೀತೀಯ. ನಾನು ಸಾಮಾನ್ಯ ಮನುಷ್ಯ\'\' ಅಂದು ಬಿಟ್ಟ.
ಹಾಗೆ ಮಾತನಾಡುವ ಮನುಷ್ಯ ಸಾಮಾನ್ಯನಾಗಿರಲು ಹೇಗೆ ತಾನೆ ಸಾಧ್ಯ?

-ನಿಮ್ಮವನು ಆರ್. ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 18 April, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books