Ravi Belagere
Welcome to my website
ನಾನು ಮೂವರನ್ನೂ ನೋಡಿದ್ದೆ. ಒಬ್ಬನನ್ನು ಪೊಲೀಸರು ಬಿಜಾಪುರ-ಗುಲಬರ್ಗ-ಸೊಲ್ಲಾಪುರದ ಬಯಲುಗಳಲ್ಲಿ ಬೇಟೆಯಾಡಿ ಆಡಿ ಕೊಂದರು. ಅವನ ಹೆಸರು ಚಂದಪ್ಪ ಹರಿಜನ. ಇನ್ನೊಬ್ಬನನ್ನು ನಾನು ನೋಡುವ ಹೊತ್ತಿಗಾಗಲೇ ಸಾವು ಅವನ ತಲೆಯ ಮೇಲೆ ‘ಕಫನ್’ ಹೊದಿಸಿತ್ತು. ಭೀಮಾ ತೀರದ ಆ ಹಂತಕ ಅಷ್ಟು ದೂರದಿಂದ ಬೆಂಗಳೂರಿಗೆ ಬಂದು ಆಸ್ಪತ್ರೆಯೊಂದರಲ್ಲಿ ಪ್ರಾಣ ಬಿಟ್ಟ. ಅವನ ಹೆಸರು ಕೇಶಪ್ಪ ತಾವರಖೇಡ.ಮೂರನೆಯವನು ಶಿವಾಜಿ ಬೋರಗಿ. ಭೀಮಾ ತೀರದ ಅಷ್ಟೂ ರಕ್ತಪಾತಕ್ಕೆ ಕಾರಣನಾದ ಹುಂಬ. ಭೀಮಾ ತೀರದ ಈ ಮೂವರು ಹಂತಕರ ಸಾವುಗಳೇ ಅಂಥವರ ಬದುಕುಗಳಿಗೆ ಬೆನ್ನುಡಿಗಳಾದವು. ನಾನು ಸುಮ್ಮನೆ ಕುಳಿತು ’ಭೀಮಾ ತೀರದ ಹಂತಕರು’ ಪುಸ್ತಕ ಬರೆದಿದ್ದೇನೆ.
Home About Us Gallery Books Feedback Prarthana Contact Us

ಶಾಲೆ ನಡೆಸಲು ಯೋಗ್ಯತೆ ಇಲ್ಲದ ಸರ್ಕಾರ ತಂದಿರುವ ಹೊಸ ಕಾಯಿದೆ ನೋಡಿ...!

ರಾಜ್ ತೀರಿಕೊಂಡು ಆಗಲೇ ಆರು ವರ್ಷವಾದವಾ?

ಅದ್ಯಾವುದದು, ಅಪಾರ್ಟ್‌ಮೆಂಟಿನ ಮೇಲೆ ರೆಕ್ಕೆ ಮುದುರಿ ಇಳಿದುಬಿಟ್ಟ ಹೆಲಿಕಾಪ್ಟರ್? ಹೀಗೆ ಅಚ್ಚರಿಗೊಳ್ಳುತ್ತಿರುವಾಗಲೇ \'ಹಿನಾ\' ಎಂಬ ಹಸುಳೆಯನ್ನು ಅದರ ಅಪ್ಪ ಚಿತ್ರಹಿಂಸೆ ಮಾಡಿ ಕೊಂದ ಸುದ್ದಿ ಕೇಳಿ ಖಿನ್ನಗೊಂಡಿದ್ದಾರೆ ಜನ. ಕೇವಲ ಹೆಣ್ಣು ಮಗು ಎಂಬ ಕಾರಣಕ್ಕೆ ಕೊಂದು ಬಿಡುವುದಾ? ಗಂಡು ಹುಟ್ಟಿದರೂ,ಹೆಣ್ಣು ಹುಟ್ಟಿದರೂ ಅದಕ್ಕೆ ಗಂಡನೇ ಕಾರಣ: ಹೆಣ್ಣಲ್ಲ. ಇದು ವೈಜ್ಞಾನಿಕ ಸತ್ಯ. ಸಾಕಲಾಗದಿದ್ದರೆ ಮಗುವನ್ನು ಕೊಟ್ಟುಬಿಡಬಹುದಿತ್ತು. ದಯೆ ಇದ್ದವರು ಸಾಕಿಕೊಳ್ಳುತ್ತಿದ್ದರು. ಇವತ್ತಿಗೂ ನಾನು ನನ್ನಲ್ಲಿಗೆ ಬರುವವರಿಗೆ ಹೇಳುತ್ತೇನೆ. ಮಗು ಬೇಡವಾಗಿದೆಯಾ? ಸಾಕಲಾಗದ ಸ್ಥಿತಿಯಲ್ಲಿದ್ದೀರಾ? ನನಗೆ ಕೊಡಿ. ನಾನು ತಿನ್ನುವ ತುತ್ತಿನಲ್ಲಿ ಅದೂ ಒಂದು ಪಾಲು ತಿನ್ನಲಿ. ಹಾಗೆ ನನ್ನ ಮನೆಯಲ್ಲಿ ಇವತ್ತಿಗೂ ಉಂಡು ನೆಮ್ಮದಿಯಾಗಿರುವ, ಶಾಲೆಗೆ ಹೋಗುತ್ತಿರುವ ಮಕ್ಕಳಿದ್ದಾರೆ. ಒಬ್ಬಿಬ್ಬರಲ್ಲ. ನಾನು ಅವರನ್ನು ಯಾವತ್ತೂ ಮನೆಯ ನೌಕರರೆಂದು ಭಾವಿಸಿಲ್ಲ. ನಾನು ದೇವರನ್ನು ನಂಬಲಿಕ್ಕಿಲ್ಲ. ಮಗುವಿನಲ್ಲಿ ದೇವರನ್ನು ಕಾಣುವ ರೂಢಿ ನನಗಿದೆ.

ಇದೆಲ್ಲದರ ಮಧ್ಯೆ RTE Act ಜಾರಿಗೆ ಬಂದಿದೆ. ಸುಪ್ರೀಂಕೋರ್ಟ್ ಆದೇಶ ನೀಡಿದೆ. Right of Children to Free Compulsory Education Act ಎಂಬುದು ಅದರ ಅರ್ಥ. ಪ್ರತಿ ಮಗುವಿಗೂ ಉಚಿತವಾಗಿ ಓದುವ, ಕಡ್ಡಾಯವಾಗಿ ಓದುವ ಕಾಯಿದೆ. ಅದಕ್ಕೆ ನ್ಯಾಯಾಲಯ ನೀಡಿದ ಆದೇಶವೆಂದರೆ ಯಾವುದೇ ಶಾಲೆ, ಅದು ಅನುದಾನ ಪಡೆಯುತ್ತಿರಲಿ, ಬಿಡಲಿ: ಅದನ್ನು ಯಾರೇ ನಡೆಸುತ್ತಿರಲಿ, ಆ ಶಾಲೆ 25% ನಷ್ಟು ಆರ್ಥಿಕವಾಗಿ ಹಿಂದುಳಿದವರ ಮಕ್ಕಳಿಗೆ ಉಚಿತವಾಗಿ ಸೀಟು ಕೊಡಬೇಕು. ಇಂಥದೊಂದು ಕಾಯಿದೆ ತರಲು ಯೋಚಿಸಿದ್ದು ಮಂತ್ರಿ ಕಪಿಲ್ ಸಿಬಲ್.

ಭಾರತದಲ್ಲಿ ಸದ್ಯಕ್ಕೆ ಅತ್ಯಂತ ಲಾಭದಾಯಕವಾಗಿ ನಡೆಯುತ್ತಿರುವ ದಂಧೆಗಳ ಪೈಕಿ ರಿಯಲ್ ಎಸ್ಟೇಟ್ ಬಿಟ್ಟರೆ ಸ್ಕೂಲು ಮತ್ತು ಆಸ್ಪತ್ರೆ. Education and Health ಎಂಬೆರಡು ನಿಜಕ್ಕೂ ಚಿನ್ನದ ಗಣಿಗಳೇ. ಅದಕ್ಕೆ ಕಾರಣವೂ ಇದೆ. ಜನ ಸಾಮಾನ್ಯರಲ್ಲಿ ಕ್ರಮೇಣ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿದೆ. ನನ್ನಲ್ಲಿಗೆ ಬರುವ ಮಕ್ಕಳ ತಂದೆ ತಾಯಿಯರಲ್ಲಿ ಆ ಕಳಕಳಿ, ಧಾವಂತ, ಓದಿನೆಡೆಗಿನ ಅಭಿರುಚಿ, ಉತ್ಸಾಹ ಗಮನಿಸುತ್ತೇನೆ. ಇತ್ತೀಚೆಗೆ ಪ್ರಾರಂಭಿಸಿರುವ ನನ್ನ ಪುಸ್ತಕದ ಅಂಗಡಿ BBCಯಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವುದು ಮಕ್ಕಳ ಪುಸ್ತಕಗಳು. ಇದರಿಂದಾಗಿ ಎಷ್ಟು encourage ಆಗಿದ್ದೇನೆಂದರೆ, ಮಕ್ಕಳ ಪುಸ್ತಕ ಮಾರಲಿಕ್ಕೆಂದೇ ಇನ್ನೊಂದು ಮಳಿಗೆ ಆರಂಭಿಸಲು ಯೋಚಿಸುತ್ತಿದ್ದೇನೆ. ಈಗಿರುವುದು BBC(ಬೆಳಗೆರೆ ಬುಕ್ಸ್ ಅಂಡ್ ಕಾಫಿ)ಯಾದರೆ, ಆರಂಭಿಸಲಿರುವುದು CBI. ಅದು ಚಿಲ್ಡ್ರನ್ಸ್ ಬುಕ್ಸ್ ಅಂಡ್ ಐಸ್ ಕ್ರೀಂ. ಇಲ್ಲಿ ಕಾಫಿ ಉಚಿತವಾದರೆ, ಅಲ್ಲಿ ಐಸ್‌ಕ್ರೀಂ ಉಚಿತ.

ನಿಜ, ಶಾಲೆ ನಡೆಸುವುದರಲ್ಲಿ ಲಾಭವಿದೆ. ಆದರೆ ಲಾಭಕ್ಕೆಂದೇ ಶಾಲೆ ನಡೆಸುವವರದೊಂದು ದೊಡ್ಡ ಲಾಬಿಯೇ ಇದೆ. ಅವರಿಗೆ ಶಿಕ್ಷಣ ಮುಖ್ಯವಲ್ಲ. ಮಗು ಮುಖ್ಯವಲ್ಲ. ಅಲೀಶಾನ್ ಕಟ್ಟಡಗಳನ್ನು ಕಟ್ಟುತ್ತಾರೆ. ಸುತ್ತ ಬಯಲು, ಹುಲ್ಲು ಹಾಸು, ಅದೊಂದು ಸ್ಟಾರ್ ಹೊಟೇಲು! ಅಲ್ಲಿ ಫೀ ಎಷ್ಟು ಅಂತ ನಿಮಗೇನಾದರೂ ಗೊತ್ತೆ? ಎಲ್.ಕೆ.ಜಿಗೆ ಮುಂಚೆ ಪ್ರೀ.ಕೆ.ಜಿ ಅಂತ ಒಂದಿರುತ್ತೆ. ಅದಕ್ಕೆ ಒಂದು ಮಗುವನ್ನು ಸೇರಿಸಲಿಕ್ಕೆ ಸರಿ ಸುಮಾರು ತೊಂಬತ್ತು ಸಾವಿರ ರುಪಾಯಿ ಬೇಕು. ಅಲ್ಲೂ ಸ್ಪರ್ಧೆ. ತಂದೆ ತಾಯಿ ಸಾಲುಗಟ್ಟಿ ನಿಲ್ಲುತ್ತಾರೆ. ತೊಂಬತ್ತು ಸಾವಿರ ಹೋದರೆ ಹೋಗಲಿ: ನಮ್ಮ ಮಗು ಅತ್ಯುತ್ತಮ(?) ಶಾಲೆಯಲ್ಲಿ ಓದಲಿ ಎಂಬ ಕಾಂಕ್ಷೆ ಅವರದು.

ಹೀಗೆ ಲಕ್ಷಗಟ್ಟಲೆ ಕೊಟ್ಟು ಪ್ರತಿಷ್ಠಿತ ಶಾಲೆಗೆ ಮಗುವನ್ನು ಸೇರಿಸುವ ತಂದೆ ತಾಯಿಗೆ, ತಮ್ಮದೇ ವರ್ಗದ, ತಮ್ಮದೇ ಸಂಸ್ಕೃತಿಯ, ತಮ್ಮದೇ ಮಟ್ಟದ ಮನೆಗಳಿಂದ ಬರುವ ಮಕ್ಕಳ ಜೊತೆಯಲ್ಲೇ ತಮ್ಮ ಮಗು ಬೆಳೆಯಲಿ ಎಂಬ ಅಭಿಲಾಷೆಯಿರುತ್ತದೆ. ಆದರೆ ಈ fat purse ತಂದೆ ತಾಯಿಯ ಮಗುವಿನ ಪಕ್ಕದಲ್ಲಿ, RTE ಕಾಯಿದೆ ಪ್ರಕಾರ ಒಂದು ಸ್ಲಮ್‌ನ ಮಗು ಬಂದು ಕೂಡುತ್ತದೆ. ಅದರ ಭಾಷೆ, ಸಂಸ್ಕೃತಿ, ಪರಿಸರ, ಮನೋಭಾವ ಎಲ್ಲವೂ ಬೇರೆ. ಆ ಮಗುವಿನೊಂದಿಗೆ ನಮ್ಮ ಮಗು ಬೆರೆತರೆ ಸರಿಯೇ?

ಇದು ಪೋಷಕರ ಪ್ರಶ್ನೆ.

ನಾವು ಸ್ಟಾರ್ ಹೊಟೇಲಿನಂಥ ಶಾಲೆ ಕಟ್ಟಿದ್ದೇವೆ. ಶ್ರೀಮಂತರ ಮಕ್ಕಳಿಗೆಂದೇ ಕಟ್ಟಿದ್ದೇವೆ. ಅಂಥದರಲ್ಲಿ ನೀವು 25% ಉದ್ರಿ ಸೀಟು ಕೊಡಿ ಅಂದರೆ ನಮ್ಮ ಶಿಕ್ಷಕರಿಗೆ ಆ ಪರಿ ಸಂಬಳ ಎಲ್ಲಿಂದ ಕೊಡುವುದು? ನಮ್ಮ ಡೊನೇಷನ್‌ಗಳ ಗತಿ ಏನು? ನಾವು 25% ಕಳೆದುಕೊಂಡು ದೇಶ ಸೇವೆ ಮಾಡಲು ಈ ವ್ಯಾಪಾರ ಆರಂಭಿಸಿದ್ದೀವಾ? ಸ್ಲಮ್ ಮಗುವಿನೊಂದಿಗೆ ನಮ್ಮ ಮಗೂನ ಕೂಡಿಸುವುದಾದರೆ ನಾವು ನಮ್ಮ ಮಗೂನ ನಿಮ್ಮ ಶಾಲೆಗೆ ಸೇರಿಸುವುದೇ ಇಲ್ಲ ಅಂತ ಪೋಷಕರು ಗಲಾಟೆ ಮಾಡಿದರೆ ಏನು ಗತಿ?

ಇದು ಸಿರಿವಂತ ಶಾಲೆಗಳವರ ಪ್ರಶ್ನೆ.

ಮಕ್ಕಳಿಗೆ ಶಿಕ್ಷಣವನ್ನು ಉಚಿತವಾಗಿ, ಕಡ್ಡಾಯವಾಗಿ ನೀಡಬೇಕು ಎಂಬುದೇ ಸರ್ಕಾರದ ಇಚ್ಛೆಯಾದರೆ ಸರ್ಕಾರಿ ಶಾಲೆಗಳಿವೆಯಲ್ಲ? ಅಲ್ಲಿಗೆ ಕಳಿಸಿ ಎಂಬುದೂ ಒಂದು ವಾದ. ದುರಂತವೆಂದರೆ, ಇರುವ ಸರ್ಕಾರಿ ಶಾಲೆಗಳಿಗೆ ಮಕ್ಕಳೇ ಬರುತ್ತಿಲ್ಲವಾದ್ದರಿಂದ ನಾವು ಸಾವಿರಾರು ಶಾಲೆಗಳನ್ನು ಮುಚ್ಚುತ್ತೇವೆ ಎಂದು ಸರ್ಕಾರವೇ ಘೋಷಿಸಿದೆ.

ಇದನ್ನೆಲ್ಲ ಗಮನಿಸುತ್ತಿದ್ದರೆ ನಿಮಗೆ ಒಂದು ವಿಷಯ ಅರ್ಥವಾದೀತಲ್ಲವೆ? ಸರ್ಕಾರಕ್ಕೆ ಕೇವಲ ಮಗುವನ್ನು ಕೇಂದ್ರವಾಗಿಟ್ಟುಕೊಂಡು (child centred) ಅಚ್ಚುಕಟ್ಟಾಗಿ ಶಾಲೆ ನಡೆಸಲು ಬರುವುದಿಲ್ಲ. ಮೊದಲೆಲ್ಲ ಈ ಪರಿ ಕಾನ್ವೆಂಟುಗಳೂ, ಪಬ್ಲಿಕ್-ಇಂಟರ್‌ನ್ಯಾಷನಲ್ ಸ್ಕೂಲುಗಳು ಎಲ್ಲಿದ್ದವು? ನಾವೆಲ್ಲ ಸರ್ಕಾರಿ ಶಾಲೆಗಳಲ್ಲೇ ಅಲ್ಲವೆ ಓದಿದ್ದು? ನಮ್ಮ ಮೇಷ್ಟ್ರುಗಳು ಎಷ್ಟು ಚೆನ್ನಾಗಿದ್ದರು! ಶಾಲೆ ಎಷ್ಟು ಆಕರ್ಷಣೀಯವಾಗಿತ್ತು! Education ಎಂಬುದು ಎಷ್ಟು ಚಿಕ್ಕ ಮೊತ್ತದಲ್ಲಿ ಮುಗಿದು ಹೋಗುವಂತಹುದಾಗಿತ್ತು.

ಆದರೆ ಇವತ್ತು ಹೀಗೇಕಾಗಿದೆ?

ಖುದ್ದಾಗಿ ದೇಶದಾದ್ಯಂತ ಒಳ್ಳೆಯ ಶಾಲೆಗಳನ್ನು ನಡೆಸಲಾಗದ ಸರ್ಕಾರ ಮಾಡಿದ ಕೆಲಸವೆಂದರೆ, ಶಿಕ್ಷಣವನ್ನು ಲಾಭಕ್ಕಾಗಿ ಮಾಡಬಯಸಿದವರಿಗೆ ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ, ಬೇಕಾದಷ್ಟು ಫೀ ಇಟ್ಟು, ಡೊನೇಷನ್ ತೆಗೆದುಕೊಂಡು ಖಾಸಗಿ ಶಾಲೆಗಳನ್ನು ಆರಂಭಿಸಲು ಅನುಮತಿ ನೀಡಿದ್ದು. ದುಡ್ಡಿನ ವಿಷಯ ಒಂದೆಡೆಗಿಡಿ: ಈ ಶಾಲೆಗಳು ನಿಜಕ್ಕೂ (atleast ಹೆಚ್ಚಿನವು) ಚೆನ್ನಾಗಿ ನಡೆಯುತ್ತಿದ್ದವು. ನಡೆಯುತ್ತಿವೆ ಕೂಡ. ಹೀಗಾಗಿ, ಸಾಲವೋ-ಸೋಲವೋ ಮಾಡಿ ಮಕ್ಕಳನ್ನು ಈ ಶಾಲೆಗಳಿಗೆ ಸೇರಿಸಲು ಪೋಷಕರು ಮುಂದಾದರು. ಸರ್ಕಾರಿ ಶಾಲೆಗಳಿಗೆ ಮಕ್ಕಳು ಬಾರದಂತಾದರು. ಸರ್ಕಾರಿ ಶಾಲೆಗಳು ನಿಜಕ್ಕೂ ಕುಲಗೆಟ್ಟು ಹೋದವು. ಜಾತಿ, ರಾಜಕಾರಣ, ಸ್ಥಳೀಯ ಪುಢಾರಿಗಳ ತಲೆ ಹಾಕುವಿಕೆ, ಶಿಕ್ಷಕಿಯರ ದುರುಪಯೋಗ ಮುಂತಾದವೆಲ್ಲ ಆಗಿ ಸರ್ಕಾರಿ ಶಾಲೆಗಳ ವಾತಾವರಣವೇ ಹಾಳಾಯಿತು. ಮೇಷ್ಟ್ರುಗಳು ಮತ ತರುವ ಏಜೆಂಟರಾದರು. ಒಬ್ಬ ಶಿಕ್ಷಕನ ಹಿಂದೆ ಒಬ್ಬನಾದರೂ ಶಾಸಕ ಇದ್ದೇ ಇರುತ್ತಾನೆ ಎಂಬ ಪರಿಸ್ಥಿತಿ ನಿರ್ಮಾಣವಾಯಿತು.

ಯಾವಾಗ ಸರ್ಕಾರ ತನ್ನ ಶಾಲೆಗಳನ್ನು ನಡೆಸಲಾಗದ ಸ್ಥಿತಿಗೆ ಬಂತೋ, ಈಗ ಅದು ಖಾಸಗಿ ಶಾಲೆಗಳ ಮೇಲೆ ಬಿದ್ದಿದೆ: RTE ಕಾಯಿದೆಯ ನೆಪದಲ್ಲಿ, ನಾಳೆ ಸರ್ಕಾರಿ ಆಸ್ಪತ್ರೆಗಳದೂ ಇದೇ ಗತಿಯಾಗುತ್ತದೆ. ಆಗ Right to treatment act ತಂದು ಪ್ರತಿ ನರ್ಸಿಂಗ್ ಹೋಮ್‌ನಲ್ಲೂ 25% ಉಚಿತ ಚಿಕಿತ್ಸೆ ಕೊಡಬೇಕು ಎಂಬ ಕಾಯಿದೆ ತರುತ್ತದೆ ಸರ್ಕಾರ. ಸರ್ಕಾರಿ ಬಸ್ಸುಗಳಲ್ಲಿ ಅವ್ಯವಸ್ಥೆಯಾದರೆ ಖಾಸಗಿ ಬಸ್ಸಿನಲ್ಲಿ 25% ಸೀಟು ಪುಗಸಟ್ಟೆ ಕೊಡಿ ಅನ್ನುತ್ತದೆ.

ಇದು ಸರ್ಕಾರದ ವೈಫಲ್ಯದ ಫಲವಲ್ಲವೆ?

ಒಂದು ಶಾಲೆ ಉಳಿದೆಲ್ಲ ವ್ಯಾಪಾರಗಳಂತೆಯೇ ಒಂದು economic module (ಆರ್ಥಿಕ ಚೌಕಟ್ಟಿನಂತಹುದು) ಇಟ್ಟುಕೊಂಡು ನಡೆಯುತ್ತದೆ. ನೀವು ಒಂದು ಮಗುವನ್ನು \'ಪ್ರಾಥನಾ ಸ್ಕೂಲ್‌\'ಗೆ ಸೇರಿಸಿದರೆ ಅದರ ಪುಸ್ತಕ, ಚೀಲ, ರಬ್ಬರು, ಪೆನ್ಸಿಲ್ಲು- ಹೀಗೆ ಪ್ರತಿಯೊಂದನ್ನೂ ಶಾಲೆಯೇ ನೀಡುತ್ತದೆ. ಇಲ್ಲಿ donation ಇಲ್ಲ: absolutely. ಯಾವುದೇ ತರಹದ ಡೊನೇಷನ್, ಯಾವ ರೂಪದಲ್ಲೂ ನಾವು ತೆಗೆದುಕೊಳ್ಳುವುದಿಲ್ಲ. ನಿಮ್ಮ ಮಗು ನಾಟಕಕ್ಕೆ, dance ಅಥವಾ ಇನ್ಯಾವುದೇ ಚಟುವಟಿಕೆಗೆ ಆಯ್ಕೆಯಾದರೆ, ಅದರ ದಿರಿಸು ಅಥವಾ equipmentಕೂಡ ಶಾಲೆಯೇ ಕೊಡುತ್ತದೆ. ಪ್ರತೀ ವರ್ಷ ನಮ್ಮ ಶಾಲೆಯ 6,675 ಮಕ್ಕಳು ಎಕ್ಸ್‌ಕರ್ಷನ್‌ಗೆ ಹೋಗುತ್ತಾರೆ. ಆಗಲೂ ನಾವು ಪೋಷಕರಿಂದ ಹಣ ಕೇಳುವುದಿಲ್ಲ. ಆ ಖರ್ಚೂ ನಮ್ಮದೇ. ಅವರು ದಿಲ್ಲಿಗೆ ಒಂದು debateಗೆ ಹೋಗಿ ಬಂದರೆ ಅದರ ಖರ್ಚೂ ನಮ್ಮದೇ. ಕೆಲಬಾರಿ ಮಕ್ಕಳನ್ನು ನಾನು ವಿಮಾನದಲ್ಲಿ ಕಳಿಸಿರುವುದೂ ಉಂಟು.

ಇದಿಷ್ಟೂ ಮಕ್ಕಳದಾಯಿತಾ? ಇನ್ನು ಶಿಕ್ಷಕ-ಶಿಕ್ಷಕಿಯರದು. ಅವರಿಗೆ ನಿಜಕ್ಕೂ ಉತ್ತಮ ಸಂಬಳವಿದೆ. ಆಗಸ್ಟ್ 15 ಗೌರಿ ಹಬ್ಬದ ಆಸುಪಾಸಿಗೆ ಬರುತ್ತದಾದ್ದರಿಂದ ಪ್ರತೀ ಶಿಕ್ಷಕ ಶಿಕ್ಷಕಿಗೂ ಬಟ್ಟೆ (ಸೀರೆ-ಪ್ಯಾಂಟು ಅಂಗಿ) ಕೊಟ್ಟು ಗೌರವಿಸುತ್ತೇವೆ. ಉಳಿದಂತೆ ಸೆಪ್ಟಂಬರ್ 4ರಂದು non teaching staff (ಆಯಾಗಳು, ಸೆಕ್ಯೂರಿಟಿಯವರು ಮುಂದಾದವರು)ಗೆ ಎಂದಿನಂತೆ ಸೀರೆ-ಪ್ಯಾಂಟ್-ಷರ್ಟ್, ಒಂದು ಕುಟುಂಬಕ್ಕೆ ಒಂದು ದಿನಕ್ಕೆ ಆಗುವಷ್ಟು ಅಕ್ಕಿ, ಬೇಳೆ, ಬೆಲ್ಲ, ಹಾಲು, ಮುಂತಾದವನ್ನು ಕೊಟ್ಟು ಗೌರವಿಸುತ್ತೇನೆ. ಏಕೆಂದರೆ ಸೆಪ್ಟಂಬರ್ 4 ನನ್ನ ತಾಯಿ ತೀರಿಕೊಂಡ ದಿನ. ನಾನು ತಿಥಿ ಮಾಡುವುದಿಲ್ಲ. ಇದಲ್ಲದೆ, ಶಾಲೆಯ ಅಷ್ಟೂ ಸಿಬ್ಬಂದಿಯವರಿಗೆ ವರ್ಷದಲ್ಲಿ ಒಂದು ದಿನ ಊಟ ಮತ್ತು ಪ್ರತಿಯೊಬ್ಬರಿಗೂ ಒಂದು ದಿನದ ಪಿಕ್‌ನಿಕ್ ವ್ಯವಸ್ಥೆಯನ್ನು ಮಾಡುತ್ತೇನೆ. ನಿಮಗೆ ಗೊತ್ತಿರಲಿ: ನಮ್ಮ ಒಟ್ಟು ಸಿಬ್ಬಂದಿಯ ಸಂಖ್ಯೆ 400.

ಅಲ್ಲಿಗೆ ಖರ್ಚೆಷ್ಟಾಯಿತು?

ಉಳಿದ ಲಾಭವೇನು? ಇಷ್ಟೆಲ್ಲ ಸಾಲದು ಅಂತ ಪ್ರತಿ ಸಿಬ್ಬಂದಿಯವರಿಗೂ ತಮ್ಮ ಒಂದು ಮಗುವಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. ಇನ್ನು ಫೀ ಕಟ್ಟಲಾಗದೆ ಬರುವ ಮಕ್ಕಳು ಅಂತೀರಾ? ಅವರ ಸಂಖ್ಯೆ ಎಷ್ಟು ದೊಡ್ಡದು ಅಂದರೆ, ಈ ವರ್ಷ ನಾನು ನೀಡಿರುವ ಉಚಿತ ಸೀಟುಗಳ ಒಟ್ಟು ಮೊತ್ತ 26 ಲಕ್ಷ ರುಪಾಯಿ.

ಇದೆಲ್ಲಕ್ಕಿಂತ ಮುಖ್ಯವಾಗಿ ನಾವು ಮಕ್ಕಳ ಜಾತಿ ಕೇಳುವುದಿಲ್ಲ. ಸಿಬ್ಬಂದಿಯವರದೂ ಕೇಳುವುದಿಲ್ಲ. ತಂದೆ ತಾಯಿಯ ವರಮಾನ ಎಷ್ಟು ಅಂತ ಕೇಳುವುದಿಲ್ಲ. ಎಲಿಮೆಂಟರಿ ಕ್ಲಾಸುಗಳಿಗಾದರೆ ಯಾವುದೇ \'ಟೆಸ್ಟ್‌\' ಇಲ್ಲದೆ ಮಗುವನ್ನು ಸೇರಿಸಿಕೊಳ್ಳುತ್ತೇವೆ. ಹಿರಿಯ ತರಗತಿಗಳಿಗಾದರೆ ಅವರ ಬುದ್ಧಿವಂತಿಕೆ ಪರೀಕ್ಷಿಸಿ ಸೇರಿಸಿಕೊಳ್ಳುತ್ತೇವೆ. ಶಾಲೆಗೆ ನೀವು ಮಗುವನ್ನು ಸೇರಿಸಿದ ಮೇಲೆ, ಅದು ಅನಾಯಾಸವಾಗಿ SSLC ಮುಗಿಸುವ ತನಕ ಅದರ ಹೊಣೆ ನಮ್ಮದು. ಇಷ್ಟೆಲ್ಲ ಮಾಡಿಯೂ \'ಪ್ರಾರ್ಥನಾ ಸ್ಕೂಲ್‌\' ತನ್ನ ಸಾಲ ತಾನು ತೀರಿಸಿಕೊಳ್ಳುತ್ತಿದೆ. ಆರ್ಥಿಕವಾಗಿ ತುಂಬ ಸುಭದ್ರವಾಗಿದೆ.

ಇನ್ನು ಮಕ್ಕಳು. ನಮ್ಮಲ್ಲಿ ಐಎಎಸ್ ಅಧಿಕಾರಿಗಳ ಮಕ್ಕಳಿಂದ ಹಿಡಿದು ಆಟೋ ಡ್ರೈವರುಗಳ ಮಕ್ಕಳ ತನಕ ಎಲ್ಲ ವರ್ಗ, ಎಲ್ಲ ಜಾತಿಯವರೂ ಇದ್ದಾರೆ. ಸ್ಲಮ್‌ನಿಂದ ಬರುವ ಮಕ್ಕಳ ಜೊತೆಗೇ ಕೂಡುತ್ತಾರೆ. ಓದುತ್ತಾರೆ. ಆದರೆ ಪ್ರತೀ ಶಾಲೆಗೂ ಒಂದು ಸಂಸ್ಕೃತಿ ಅಂತ ಇರುತ್ತದೆ. ಒಳಕ್ಕೆ ಬಂದ ಮೇಲೆ ಯಾವ ಮಗುವಾದರೂ ಅದು ಮಗುವೇ. ಅದನ್ನು ಒಂದು ಸಂಸ್ಕೃತಿಯ, ಡಿಸಿಪ್ಲೀನ್‌ನ ಚೌಕಟ್ಟಿಗೆ ನಾವು ತಂದು ಬಿಡುತ್ತೇವೆ. ನೋಡಿ, \'ಪ್ರಾರ್ಥನಾ\'ದೊಳಕ್ಕೆ ಮಗು ಬೇಕರಿ ತಿಂಡಿ ತರುವಂತಿಲ್ಲ. ಪೆಪ್ಸಿ-ಕೋಲಾ ತರುವಂತಿಲ್ಲ. ಗಿಫ್ಟು-ರಿಟರ್ನ್ ಗಿಫ್ಟು ಮುಂತಾದವುಗಳ ಸಂಪ್ರದಾಯವೇ ಇಲ್ಲ. ಮಗುವಿನ ಬರ್ತ್‌ಡೇ ಇದೆಯಾ? ಅದು ಅವತ್ತು ಯಾವುದಾದರೂ ಒಂದು ಪುಸ್ತಕ ಕೊಂಡಿರಬೇಕು. ಟೀಚರ್‌ಗೆ ತೋರಿಸಬೇಕು. ಅಷ್ಟೆ. ನಮ್ಮಲ್ಲಿ ನಾಮ-ಮುದ್ರೆ-ವಿಭೂತಿ ಇತ್ಯಾದಿ ನಿಷಿದ್ಧ. ಹೆಣ್ಣು ಮಗು ತಿಲಕ, ಕುಂಕುಮ ಇಟ್ಟುಕೊಳ್ಳಬಹುದು.

ಶಾಲೆ ನಡೆಸುವುದೆಂದರೆ ಇಷ್ಟೇ ಸರಳ ಮತ್ತು ಇಷ್ಟೇ ಕಷ್ಟ. ಅಬ್ಬೇಪಾರಿ ಸರ್ಕಾರಕ್ಕೆ ಇದು ಗೊತ್ತಾಗದೆ ಹೋದರೆ RTE ACTನಂತಹ ಅವಿವೇಕ ಜಾರಿಗೆ ಬರುತ್ತದೆ.

ಅಲ್ಲವೆ?

-ರವಿ ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 16 April, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books