Ravi Belagere
Welcome to my website
ನಾನು ಮೂವರನ್ನೂ ನೋಡಿದ್ದೆ. ಒಬ್ಬನನ್ನು ಪೊಲೀಸರು ಬಿಜಾಪುರ-ಗುಲಬರ್ಗ-ಸೊಲ್ಲಾಪುರದ ಬಯಲುಗಳಲ್ಲಿ ಬೇಟೆಯಾಡಿ ಆಡಿ ಕೊಂದರು. ಅವನ ಹೆಸರು ಚಂದಪ್ಪ ಹರಿಜನ. ಇನ್ನೊಬ್ಬನನ್ನು ನಾನು ನೋಡುವ ಹೊತ್ತಿಗಾಗಲೇ ಸಾವು ಅವನ ತಲೆಯ ಮೇಲೆ ‘ಕಫನ್’ ಹೊದಿಸಿತ್ತು. ಭೀಮಾ ತೀರದ ಆ ಹಂತಕ ಅಷ್ಟು ದೂರದಿಂದ ಬೆಂಗಳೂರಿಗೆ ಬಂದು ಆಸ್ಪತ್ರೆಯೊಂದರಲ್ಲಿ ಪ್ರಾಣ ಬಿಟ್ಟ. ಅವನ ಹೆಸರು ಕೇಶಪ್ಪ ತಾವರಖೇಡ.ಮೂರನೆಯವನು ಶಿವಾಜಿ ಬೋರಗಿ. ಭೀಮಾ ತೀರದ ಅಷ್ಟೂ ರಕ್ತಪಾತಕ್ಕೆ ಕಾರಣನಾದ ಹುಂಬ. ಭೀಮಾ ತೀರದ ಈ ಮೂವರು ಹಂತಕರ ಸಾವುಗಳೇ ಅಂಥವರ ಬದುಕುಗಳಿಗೆ ಬೆನ್ನುಡಿಗಳಾದವು. ನಾನು ಸುಮ್ಮನೆ ಕುಳಿತು ’ಭೀಮಾ ತೀರದ ಹಂತಕರು’ ಪುಸ್ತಕ ಬರೆದಿದ್ದೇನೆ.
Home About Us Gallery Books Feedback Prarthana Contact Us

ಬೇರೇ ಇಲ್ಲದ ಆಲ ಬಿದ್ದು ಹೋಗಲು ಎಷ್ಟು ಹೊತ್ತು ಬೇಕು?

\"ನೀವು ಸುಳ್ಳೇ ಹೇಳಲ್ವಾ?\"

ಆ ಹುಡುಗಿ ಕೇಳಿದಳು. ನಾನು ಕೊಂಚ ಹೊತ್ತು ಸುಮ್ಮನಿದ್ದು ಸುಮ್ಮನೆ ನಕ್ಕು ಬಿಟ್ಟೆ. ನನ್ನ ವೃತ್ತಿ ಪತ್ರಿಕೋದ್ಯಮ. ಸಾಧ್ಯವಾದಷ್ಟೂ, ನನ್ನ ಅರಿವಿಗೆ ನಿಲುಕಿದಷ್ಟೂ, ಮನಸ್ಸಿಗೆ ಖಚಿತವಾದಷ್ಟೂ ಸತ್ಯವನ್ನೇ ಬರೆಯುವುದು ಮತ್ತು ಅದನ್ನು ಪ್ರತಿಪಾದಿಸಿ ಒಂದು ವಿಷಯದ ಬಗ್ಗೆ ಖಚಿತ ಜನಾಭಿಪ್ರಾಯ ಮೂಡಿಸುವುದು. ಉದಾಹರಣೆಗೆ ಯಾವನೋ ಐದು ರೀತಿಯ ಎಣ್ಣೆ ಹಾಕಿ ಬತ್ತಿ ಹಚ್ಚಿ ನಮಸ್ಕರಿಸಿದರೆ ಅವತ್ತು ಪ್ರಳಯವಾದರೂ ನೀವು ಬದುಕುತ್ತೀರಿ ಎಂದು ಟೀವಿಯಲ್ಲಿ ಹೇಳುತ್ತಾನೆ. ಅದು definitely ಸುಳ್ಳು ಅಂತ ಬರೆಯುತ್ತೇನೆ. ಅದು ನನ್ನ ಕೆಲಸ.

ಶಾಲೆಯಲ್ಲಿ ನಾನ್ನೂರು ಸಿಬ್ಬಂದಿಯಿದ್ದಾರೆ. ಅಜಮಾಸು ಏಳು ಸಾವಿರ ಮಕ್ಕಳಿಗೆ ಅವರು ಪಾಠ ಮಾಡುತ್ತಾರೆ. ಹೆಚ್ಚಿನವರು ಒಳ್ಳೆಯ ಜನ. ಅವರೊಂದಿಗೆ ನಾನು ಅಪ್ಪಿ ತಪ್ಪಿಯೂ ಸುಳ್ಳಾಡುವುದಿಲ್ಲ. ಏಕೆಂದರೆ, ಅವರ ಮೂಲಕ ನಾನಾಡಿದ ಸುಳ್ಳು ಆ ಏಳು ಸಾವಿರ ಮಕ್ಕಳಿಗೆ communicate ಆಗುತ್ತೆ. ಚಿಕ್ಕ ಮಕ್ಕಳಿಗೆ ಸುಳ್ಳು ಹೇಳುವುದು ಮತ್ತು ಸುಳ್ಳು ಕಲಿಸುವುದು-ಎರಡೂ ಭಯಂಕರ ಅಪರಾಧಗಳು ಎಂಬುದು ನನ್ನ ಖಚಿತ ನಂಬಿಕೆ.

ಆದರೆ ನಾನು ಸುಳ್ಳೇ ಹೇಳುವುದಿಲ್ಲವಾ?

Come no. ಕೆಲವು ದಶಕ ಕುಡಿತದ ಅಭ್ಯಾಸದಲ್ಲಿದ್ದವನು ನಾನು. ಕುಡುಕರು ಕುಡಿದಾಗ ನಿಜ ಹೇಳುತ್ತಾರೆ ಎಂಬ ನಂಬಿಕೆಯೊಂದಿದೆ. ನಾನು ಹೇಳಲಾ? ಕುಡುಕರಷ್ಟು expert ಸುಳ್ಳರು (ಅಭ್ಯಾಸಕ್ಕೆ ಸಂಬಂಧಿಸಿದಂತೆ) ಈ ಜಗತ್ತಿನಲ್ಲೇ ಇಲ್ಲ. ಅವರು ಕುಡಿತಕ್ಕಾಗಿ, ಆ ಕ್ಷಣದ ತಲುಬಿಗಾಗಿ ಎಂಥ ಸುಳ್ಳನ್ನು ಯಾರಿಗೆ ಬೇಕಾದರೂ ಹೇಳುತ್ತಾರೆ.

ಕೆಲವರಿಗೆ ಸುಳ್ಳೇ ಒಂದು ಪ್ರೊಫೆಷನ್. ಅದು ಅವರ ಬಲಹೀನತೆಯೂ ಹೌದು. ನೋಡ ನೋಡುತ್ತಲೇ ಎಲ್ಲರನ್ನೂ ನಂಬಿಸುತ್ತಾರೆ. ತಮಾಷೆಯೆಂದರೆ, ಅನೇಕ ಸಲ ಅವರಿಗೆ ಅದರಿಂದ ಲಾಭವಿರುವುದಿಲ್ಲ. ವಿನಾಕಾರಣ ಸುಳ್ಳು ಹೇಳುತ್ತಾರೆ. ಅದ್ಭುತವಾಗಿಯೂ ಹೇಳುತ್ತಾರೆ. ಇವರಲ್ಲಿ ರಾಜಕಾರಣಿಗಳು, ವ್ಯಾಪಾರಸ್ಥರು, ವಕೀಲರು, ಪತ್ರಕರ್ತರು, ಜ್ಯೋತಿಷಿಗಳು, ಅಧಿಕಾರಿಗಳು, ಗೃಹಿಣಿಯರು, ವಿದ್ಯಾರ್ಥಿಗಳು, ಬರಹಗಾರರು- ಇಂಥವರಿಲ್ಲ ಅನ್ನಬೇಡಿ. ನೋಡ ನೋಡುತ್ತಲೇ ಅವರು ತಮ್ಮ ಸುತ್ತಲಿನ ಜನಕ್ಕೆ \'ಶುದ್ಧ ಸುಳ್ಳ\' ಎಂದು ಗೊತ್ತಾಗಿ ಹೋಗುತ್ತಾರೆ. ಅವರು ಎಷ್ಟು ಜಾಣರು ಅಂದರೆ, ಹಾಗೆ ಗೊತ್ತಾಯಿತು ಅಂದ ಕೂಡಲೆ ತಮ್ಮ ಸುಳ್ಳುಗಳ \'ಹೂವಿಡಲಿಕ್ಕೆ\' ಹೊಸ ಕಿವಿಗಳನ್ನು ಹುಡುಕಿಕೊಳ್ಳುತ್ತಾರೆ. ಅವರ ಇಡೀ ವ್ಯಕ್ತಿತ್ವ, ಅದರ ಸಂತೋಷ ಕೇವಲ ಸುಳ್ಳಿನ ಮೇಲೆಯೇ ಆಧಾರ ಪಟ್ಟಿರುತ್ತದೆ.

ಸುಳ್ಳಿನ ಬಹುದೊಡ್ಡ ಚೆಂದವೆಂದರೆ, ಅದು ಕೇಳುವವರನ್ನಷ್ಟೇ ಅಲ್ಲ: ಹೇಳುವವರನ್ನೂ ನಂಬಿಸಿ ಬಿಡುತ್ತದೆ. ಒಂದು ಸುಳ್ಳನ್ನು ನೀವು ಪದೇ ಪದೆ ಹೇಳುತ್ತಾ ಹೋಗಿ, ಕೊಂಚ ಹೊತ್ತಿಗೆ ಅದೇ ನಿಜ ಅಂತ ನಿಮಗೂ ಅನ್ನಿಸಿ ಅದರಲ್ಲಿ ತೇಲಿ ಮುಳುಗತೊಡಗುತ್ತೀರಿ. ಆನಂತರ ಆ ಸುಳ್ಳಿಗೆ ಕೊಂಬೆ ರೆಂಬೆಗಳು ಹುಟ್ಟಿಕೊಳ್ಳುತ್ತವೆ. ಅವು ಹೂವು ಹಣ್ಣು ಬಿಡುತ್ತವೆ. ಇನ್ನೊಂದೆಡೆ ಅದರ ಘಮ ಹರಡತೊಡಗುತ್ತದೆ. ಆದರೆ ನಿಮಗೆ ಗೊತ್ತೇ ಇರುವುದಿಲ್ಲ: ನೆಟ್ಟು, ಬೆಳೆಸಿ, ರೆಂಬೆ-ಕೊಂಬೆ ಮೂಡಿಸಿ, ಹೂವು ಮುಡಿಸಿ, ಘಮ ಹರಡಿಸಿದ ಹೂವಿನ ಗಿಡ ಅಸಲು ಬೇರುಗಳನ್ನೇ ಬಿಟ್ಟಿರುವುದಿಲ್ಲ.

ಇದಕ್ಕೆ best ಉದಾಹರಣೆಯೆಂದರೆ, ಸಾಯಿಬಾಬಾ. ಪುಟ್ಟಪರ್ತಿ ಸಾಯಿಬಾಬಾ ತನ್ನನ್ನು ತಾನು ದೇವರೆಂದು ಹೇಳಿ ನಂಬಿಸಿದ್ದ. ಸತ್ತ ಮರುದಿನವೇ ಪುಟ್ಟಪರ್ತಿ ಖಾಲಿ. ಅಲ್ಲಿ ಭಸ್ಮವೂ ಉಳಿಯಲಿಲ್ಲ. ಆಚಾರ್ಯ ರಜನೀಶ್‌ನ ಸುಳ್ಳುಗಳು ಪುಸ್ತಕ ಮತ್ತು ಕೆಸೆಟ್‌ಗಳಲ್ಲಿ ಉಳಿಯಿತು, ಅಮೆರಿಕದ \'ರಾಂಚ್‌\'ನಲ್ಲಿ ಉಳಿಯಲಿಲ್ಲ. ಆದರೆ ಅಂಥ ಹಂಪೆಯೆಂಬುದೇ ಹಾಳು ಬಿದ್ದು ಹೋಯಿತು: ಪುರಂದರ ದಾಸರ ಸತ್ಯಗಳು ಇವತ್ತಿಗೂ ಉಳಿದಿವೆ. ಏಕೆಂದರೆ, ಅವು ಸುಳ್ಳುಗಳಾಗಿರಲಿಲ್ಲ.

ಕೆಲವು ಸುಳ್ಳುಗಳು ಆ ಕ್ಷಣದ ಅವಶ್ಯಕತೆಗಳಾಗಿರುತ್ತವೆ. \"ಅಂಥವುಗಳನ್ನೂ ಹೇಳುವುದಿಲ್ಲ\" ಎಂದು ನಿರ್ಣಯಿಸಬಲ್ಲವರು ಸಂತರು: ನನ್ನ ಮಾಮ ಬೆಳಗೆರೆ ಕೃಷ್ಣಶಾಸ್ತ್ರಿಗಳಂಥವರು. ಎಲ್ಲೋ ಇರುತ್ತೇವೆ. \"ಎಲ್ಲಿದ್ದೀಯ?\" ಅಂತ ಹೆಂಡತಿ ಫೋನಿನಲ್ಲಿ ಕೇಳಿದರೆ \"ಒಂದು ಮೀಟಿಂಗ್‌ನಲ್ಲಿದ್ದೇನೆ\" ಅನ್ನುತ್ತೇವೆ. ಅದು ನಿರುಪದ್ರವಿ ಸುಳ್ಳೇ ಆದರೂ, ನಾವು ಹೇಳಿದ್ದು ಸುಳ್ಳು ಮತ್ತು ನಮಗೆ ಸುಳ್ಳು ಹೇಳುವ ಅಭ್ಯಾಸವಿದೆ ಎಂಬುದು ಆ ಕ್ಷಣಕ್ಕೆ ನಮ್ಮ ಸುತ್ತಲಿದ್ದವರಿಗೆ ಗೊತ್ತಾಗುತ್ತದೆ. ಮುಂದಿನ ಸಲ ಅವರ ಪೈಕಿಯೇ ಒಬ್ಬರು ಫೋನು ಮಾಡಿದಾಗ ನಾವು ನಿಜಕ್ಕೂ ಮೀಟಿಂಗಿನಲ್ಲಿದ್ದಾಗಲೂ ಅವರು ಹಾಗಂತ ಹೇಳಿದಾಗ ನಂಬುವುದಿಲ್ಲ. ನಿರುಪದ್ರವಿ ಸುಳ್ಳುಗಳ ಟ್ರಾಜಿಡಿಗಳು ಹೀಗಿರುತ್ತವೆ.

ಮೊನ್ನೆ ಹೀಗಾಯಿತು ನೋಡಿ. ಎಸ್ಸೆಂ ಕೃಷ್ಣ ಅವರೊಂದಿಗೆ ಇಸ್ರೇಲ್‌ಗೆ ಹೋದವನು, ಅವರು ಹಿಂತಿರುಗಿ ಬಂದ ನಂತರವೂ ಸುಮಾರು ದಿನ ನಾನು ಅಲ್ಲೇ ಉಳಿದೆ. ಹಾಗೆ ಉಳಿಯಲು ನನಗೆ ವೀಸಾ ಇತ್ತು. ಅದು over stay ಅಲ್ಲ. ಆದರೆ ಇಸ್ರೇಲ್ ಕಟ್ಟು ನಿಟ್ಟಿನ ದೇಶ.

\"ನೀನೇಕೆ ನಿಮ್ಮ ಮಂತ್ರಿಯೊಂದಿಗೆ ಹಿಂತಿರುಗಲಿಲ್ಲ?\" ಎಂದು ಅಧಿಕಾರಿ ಕೇಳಿದಳು. ಬೇರೆ ಏನು ಹೇಳಿದರೂ ಆಕೆ convince ಆಗುವುದಿಲ್ಲವೆಂಬುದು ಗೊತ್ತಿತ್ತು.

\"ನೋಡೂ, ನಾನೊಬ್ಬ ಹಿಂದೂ. ನನಗಿರುವುದು ಒಂದೇ ರಾಷ್ಟ್ರ ಭಾರತ. ನೀನೊಬ್ಬ ಯಹೂದಿ. ನಿನಗಿರುವುದು ಒಂದೇ ಇಸ್ರೇಲ್. ಇಲ್ಲಿಂದ ಹೊರ ಹಾಕಿದರೆ ನಿನ್ನ ಗತಿ? ಅದರ ವಿರುದ್ಧ ನೀನು ಏನು ಮಾಡುತ್ತೀ? ಅದನ್ನು ನೋಡಲು ಬಂದೆ\" ಅಂದೆ.

She was convinced.

ಆದರೆ ನಾನೇ convince ಆಗಿರಲಿಲ್ಲ. ಆಕೆ ಏನೆಂದುಕೊಂಡಳೆಂದರೆ, ಮುಸ್ಲಿಮರಿಗೆ ಹಲವು ರಾಷ್ಟ್ರಗಳಿವೆ. ಕ್ರಿಶ್ಚಿಯನ್ನರಿಗೆ ನೂರಾರು. ಹಿಂದೂಗಳಿಗೆ ಮತ್ತು ಯಹೂದಿಗಳಿಗೆ ಇರೋದು ಒಂದೊಂದೇ ರಾಷ್ಟ್ರ. ಅದನ್ನು ಅಭ್ಯಸಿಸಲು ಇವನು ಬಂದಿದ್ದಾನೆ ಅಂದುಕೊಂಡಳು. ಸತ್ಯ ಸಂಗತಿಯೆಂದರೆ, ಸ್ವತಃ ನಾನು ಹಿಂದೂ ಅಲ್ಲ. ಮುಸಲ್ಮಾನನಲ್ಲ. ಕ್ರೈಸ್ತನಲ್ಲ. ಯಹೂದಿಯಲ್ಲ. ಮಾನಸಿಕವಾಗಿ ಯಾವ ಧರ್ಮಕ್ಕೆ ಸೇರಿದವನೂ ಅಲ್ಲ. ನಾನೊಬ್ಬ ಯಾತ್ರಿ, ಪತ್ರಕರ್ತ, vovelist, a researcher working on a novel ಅಷ್ಟೆ.

ಆದರೆ ಅದನ್ನು ಹಾಗಂತ ಹೇಳಿಕೊಂಡರೆ ಅಲ್ಲಿ ಕೆಲಸವಾಗುವುದಿಲ್ಲ. ಒಂದು ಅನುನಯವಾದ ಸುಳ್ಳು ಹೇಳಲೇಬೇಕು.

Yes, ಅಷ್ಟೇ. ಅದನ್ನೇ ನಾನೂ ನಂಬಿಕೊಂಡು ಬಿಡಬಾರದು. ಮಾನಸಿಕವಾಗಿ ಒಬ್ಬ ಹಿಂದೂ ಆಗಿ ಬಿಡಬಾರದು. ಆಗಿಬಿಟ್ಟರೆ ನನ್ನ ಕಾದಂಬರಿಯ ದಿಕ್ಕೇ ತಪ್ಪಿ ಬಿಡುತ್ತದೆ. ಅಲ್ಲವೆ? ಪ್ರತಿ ನಿತ್ಯ ನಮಗೆ ಇಂಥ ಸಂದಿಗ್ಧಗಳು ಇದಿರಾಗಬಹುದು. ಸುಳ್ಳೇ ಹೇಳದೆ ಬದುಕಲು ನಾವು ಸಂತರಲ್ಲ. ಲೌಕಿಕರು. ಆದರೆ ಹೇಳಿದ ಸುಳ್ಳನ್ನು ಆಗಿಂದಾಗಲೇ ನಮ್ಮದೇ ಮಿದುಳಿನಿಂದ delete ಮಾಡದೆ, ಒಳಗೇ ಸಾಕಿಕೊಂಡು ಹೋದರೆ ನಮಗೇ ಗೊತ್ತಿಲ್ಲದಂತೆ ನಾವು fake ಆಗಿ ಬಿಡುತ್ತೇವೆ. ಸುಳ್ಳಿನ ರೆಂಬೆ ಕೊಂಬೆ ಬೆಳೆಸಿ, ಹೂ ಮುಡಿಸಿ ಏನೇ ಬೃಹತ್ ಸಾಮ್ರಾಜ್ಯ ಕಟ್ಟಬಹುದು.

ಆದರೆ ಬೇರೇ ಇಲ್ಲದ ಆಲ ಬಿದ್ದು ಹೋಗುವುದಕ್ಕೆ ಎಷ್ಟು ಹೊತ್ತು ಬೇಕು?

-ರವೀ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 12 April, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books