Ravi Belagere
Welcome to my website
ನಾನು ಮೂವರನ್ನೂ ನೋಡಿದ್ದೆ. ಒಬ್ಬನನ್ನು ಪೊಲೀಸರು ಬಿಜಾಪುರ-ಗುಲಬರ್ಗ-ಸೊಲ್ಲಾಪುರದ ಬಯಲುಗಳಲ್ಲಿ ಬೇಟೆಯಾಡಿ ಆಡಿ ಕೊಂದರು. ಅವನ ಹೆಸರು ಚಂದಪ್ಪ ಹರಿಜನ. ಇನ್ನೊಬ್ಬನನ್ನು ನಾನು ನೋಡುವ ಹೊತ್ತಿಗಾಗಲೇ ಸಾವು ಅವನ ತಲೆಯ ಮೇಲೆ ‘ಕಫನ್’ ಹೊದಿಸಿತ್ತು. ಭೀಮಾ ತೀರದ ಆ ಹಂತಕ ಅಷ್ಟು ದೂರದಿಂದ ಬೆಂಗಳೂರಿಗೆ ಬಂದು ಆಸ್ಪತ್ರೆಯೊಂದರಲ್ಲಿ ಪ್ರಾಣ ಬಿಟ್ಟ. ಅವನ ಹೆಸರು ಕೇಶಪ್ಪ ತಾವರಖೇಡ.ಮೂರನೆಯವನು ಶಿವಾಜಿ ಬೋರಗಿ. ಭೀಮಾ ತೀರದ ಅಷ್ಟೂ ರಕ್ತಪಾತಕ್ಕೆ ಕಾರಣನಾದ ಹುಂಬ. ಭೀಮಾ ತೀರದ ಈ ಮೂವರು ಹಂತಕರ ಸಾವುಗಳೇ ಅಂಥವರ ಬದುಕುಗಳಿಗೆ ಬೆನ್ನುಡಿಗಳಾದವು. ನಾನು ಸುಮ್ಮನೆ ಕುಳಿತು ’ಭೀಮಾ ತೀರದ ಹಂತಕರು’ ಪುಸ್ತಕ ಬರೆದಿದ್ದೇನೆ.
Home About Us Gallery Books Feedback Prarthana Contact Us

ಕದ್ದು ಕಕ್ಕಸ್ಸಿನಲ್ಲಿ ನಿಲ್ಲೋ \'ಧೀರ\'ರ ಮಧ್ಯೆ ಎದ್ದು ಕೆಲಸ ಮಾಡಿದವನೇ ಸದ್ದಾಂ ಮತ್ತು ಗಡಾಫಿ!

\'ವೀರಪ್ಪನ್ ಎಂಬ ನರಹಂತಕ : ಬಿದರಿ ಎಂಬ ಭಯೋತ್ಪಾದಕ\' ಎಂಬ ಹೆಡ್ಡಿಂಗ್ ಹೊತ್ತು ಬಂದದ್ದು \'ಹಾಯ್ ಬೆಂಗಳೂರ್!\'ನ ಬಹುಶಃ ಮೂರನೆಯ ಸಂಚಿಕೆ.

\"ಹೀಗೇಕೆ ಬರ‍್ದಿದೀರಿ?\" ಅಂತ ಅವತ್ತು ನನ್ನೊಂದಿಗೆ ಶರಂಪರ ಜಗಳವಾಡಿದವರು ಬಿದರಿಯವರಲ್ಲ. ಅವರೊಂದಿಗೆ ಸರಿಸುಮಾರು ನಾಲ್ಕು ವರ್ಷ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಕೆಲಸ ಮಾಡಿದ್ದ ಪೊಲೀಸ್ ಅಧಿಕಾರಿ ಮೀಸೆ ನಾಗರಾಜ್. ನಂತರ ಅವರು ಎಸಿಪಿ ಆದರು. \"ನಾಲ್ಕು ವರ್ಷವಾಯಿತು ನಾವು ಮನೆ ಬಿಟ್ಟು. ಮಕ್ಕಳು ಏನಾದರೋ? ಎಷ್ಟು ಜನ ಅಧಿಕಾರಿಗಳ ಮಕ್ಕಳು ಹಾದಿ ತಪ್ಪಿದರೋ? ನೂರಾರು ಗಂಧಕಳ್ಳರನ್ನ-ಹಂತಕರನ್ನ ಇಟ್ಟುಕೊಂಡು ಕಾಡಿನಲ್ಲಿ make shift villages ಮಾಡ್ತಾ ಗಂಧ ಕಡಿದು, ಆನೆ ಕೊಂದು, ತಡೆಯಲು ಹೋದ ನಮ್ಮ ಪೊಲೀಸ್ ಅಧಿಕಾರಿಗಳನ್ನೇ ಕೊಂದ ವೀರಪ್ಪನ್ ವಿರುದ್ಧ ಹೋರಾಟ ಮಾಡಲು ನಾವು ನಿಂತಿದ್ರೆ ಹೀಗೆ \'ಭಯೋತ್ಪಾದಕ\'ರು ಅಂತ ಬರೀತೀರಲ್ಲ?\" ಎಂದು ಮೀಸೆ ನಾಗರಾಜ್ ಜಗಳವಾಡಿದ್ದರು.

ಈ ಬರಹದ ಬಗ್ಗೆ ಅಂದು ಶಂಕರ ಬಿದರಿಯವರೊಂದಿಗೂ ವಾಗ್ವಾದವಾಗಿತ್ತು. ಅದಕ್ಕಿಂತ ತಮಾಷೆಯೆಂದರೆ, ಮೈಸೂರಿನಲ್ಲಿ ಬಿ.ಸಿ.ಪಾಟೀಲ್ ಒಂದು ಸಿನೆಮಾದ ಮುಹೂರ್ತ ಇರಿಸಿದ್ದರು. ಅದಕ್ಕೆ ನಾನು ಮತ್ತು ಬಿದರಿ ಇಬ್ಬರೂ ಅತಿಥಿಗಳು. ನಡೆದು ಹೋಗುತ್ತಿದ್ದವರಿಗೆ ಇದ್ದಕ್ಕಿದ್ದಂತೆ ಇದಿರಾದವರು ಮೈಸೂರಿನ ಪತ್ರಕರ್ತ ಅಂಶಿ ಪ್ರಸನ್ನಕುಮಾರ್. ಅಂದಿನ ವೀರಪ್ಪನ್ ವಿರೋಧಿ ಪೊಲೀಸ್ ಪಡೆಗಳ ಅಟ್ಟಹಾಸದ ಬಗ್ಗೆ ಅತಿ ಹೆಚ್ಚು ಬರೆದು ಬಿದರಿಯವರನ್ನು irritate ಮಾಡಿದುದೇ ಅಂಶಿ ಪ್ರಸನ್ನ.

ಬಿದರಿ ಕೆಲವೊಮ್ಮೆ ಸಿಟ್ಟಿಗೇಳುವ, ಭಯಂಕರ impulsive ಆದ ಮನುಷ್ಯ. ಮತ್ತೆ ಕೆಲಬಾರಿ ಎಲ್ಲವನ್ನೂ ತಮಾಷೆಯಾಗಿ ತೆಗೆದುಕೊಂಡು ಬಿಡುವ ಅತಿರೇಕದ democrat. ಆದರೆ ಅಂಶಿ ಪ್ರಸನ್ನ ಇದಿರಾದಾಗ ಹೇಗೆ ವರ್ತಿಸುತ್ತಾರೋ ಅಂತ ಆತಂಕಗೊಂಡಿದ್ದೆ.

\"ಏನು ಅಂಶಿಯವರೇ? ಪ್ರಸನ್ನ...ರಾಗಿದ್ದೀರೋ?\" ಎಂದು ನಗೆಯಾಡಿದರೇ ಹೊರತು ಮತ್ತೊಂದು ಚಕಾರವೆತ್ತಲಿಲ್ಲ.

ಇವೆಲ್ಲ ಕೆಲವು ಘಟನೆಗಳಷ್ಟೆ. ಏನೆಲ್ಲ ಕಟುವಾಗಿ ಬರೆದ ನಂತರವೂ ನಾನು-ಮೀಸೆ ನಾಗರಾಜ್ ಅಥವಾ ನಾನು-ಶಂಕರ ಬಿದರಿ ಆ ನಂತರದ ದಿನಗಳಲ್ಲಿ ಅನ್ಯೋನ್ಯವಾಗೇ ಇದ್ದೆವು, ಇದ್ದೇವೆ. ಹಿಂದೆ ನಾನು ಮಿರ್ಜಿಯವರನ್ನೂ ಟೀಕಿಸಿದ್ದೆ. ಮೊನ್ನೆ ಸಮಾರಂಭವೊಂದರಲ್ಲಿ ಸಿಕ್ಕಾಗ ನಿರುಮ್ಮಳವಾಗಿ ನಿಂತು ಹರಟಿದೆ. ಕಾರಣವಿಷ್ಟೆ, ರಾಜಕಾರಣಿಗಳನ್ನು ನೋಡಿದ ಹಾಗೆ ನಾವು ಪೊಲೀಸ್ ಅಧಿಕಾರಿಗಳನ್ನು ನೋಡಲಾಗುವುದಿಲ್ಲ. ಅವರು ಮಾಡಿದ ಒಂದು ಕೆಲಸ, ಜಾರಿಗೆ ತಂದ ಒಂದು ನಿಯಮ, ಕೈಗೊಂಡ ಕ್ರಮ ಅಥವಾ ವೈಫಲ್ಯಗಳ ಬಗ್ಗೆ ಬರೆಯುತ್ತೇವೆ. ವ್ಯಕ್ತಿಗಳ ರಾಗ ದ್ವೇಷಗಳನ್ನಿಟ್ಟುಕೊಂಡಲ್ಲ. ಅವರೂ ಹೆಚ್ಚಿನ ಸಲ ಅದನ್ನು ಪರ್ಸನಲ್ ಆಗಿ ತೆಗೆದುಕೊಳ್ಳುವುದಿಲ್ಲ. ತೀರ ಭ್ರಷ್ಟರ ಬಗ್ಗೆ ಬರೆದಾಗ, ಅಂಥವರನ್ನು ಭೇಟಿ ಮಾಡಲಿಕ್ಕೂ ನಾನು ಹೋಗುವುದಿಲ್ಲ. ಅವರೊಂದಿಗೆ ಸಂಧಾನವೆಂಬ ಮಾತು ಸುಳ್ಳು. ತೀರ ಇತ್ತೀಚೆಗೆ ನಿವೃತ್ತರಾದ ಒಬ್ಬ ಹಿರಿಯ ಅಧಿಕಾರಿ ನನ್ನನ್ನೂ-ನನ್ನ ವರದಿಗಾರ ಸುನೀಲ್ ಹೆಗ್ಗರವಳ್ಳಿಯನ್ನೂ ಒಂದು ಮಾನನಷ್ಟ ಮೊಕದ್ದಮೆಯ ಕೇಸಿನಲ್ಲಿ ಬಂಧಿಸಿ ಜೈಲಿಗೆ ಕಳಿಸಲು ಹರಸಾಹಸ ಮಾಡಿದರು. ಅಂಥ ಪ್ರಯತ್ನಗಳನ್ನು defeat ಮಾಡಿ ನ್ಯಾಯ ಪಡೆಯುವುದು ಹೇಗೆಂಬುದು ನಮಗೂ ಗೊತ್ತು.

ನಾನು ಈ ಹಿಂದೆ ಶಂಕರ ಮಹದೇವ ಬಿದರಿಯವರ ಕುರಿತು ಸಾಕಷ್ಟು ಬರೆದಿದ್ದೇನೆ. ಅವರ ಮನೆಗೆ ಹೋದಾಗ, ಅವರ ಪತ್ನಿ ಹಿರಿಯ ಕವಿ ಮಧುರ ಚನ್ನರ ಮಗಳು ಡಾ.ಸೂರ್ಯಮುಖಿಯವರು ನನ್ನನ್ನು ತಮ್ಮನೆಂಬ ವಿಶ್ವಾಸದಿಂದ ಕಂಡು ಎರಡು ಮೂರು ಬಾರಿ ರೊಟ್ಟಿ ಉಣ ಬಡಿಸಿದುದು ಬಿಟ್ಟರೆ, ಬಿದರಿಯವರಿಂದ ನಾನಾಗಲೀ, ನನ್ನಿಂದ ಬಿದರಿಯವರಾಗಲೀ ಏನನ್ನೂ ನಿರೀಕ್ಷಿಸಿಲ್ಲ, ಪಡೆದಿಲ್ಲ : ಪ್ರಾಂಜಲ ಗೆಳೆತನದ ಎರಡು ಮಾತುಗಳ ಹೊರತಾಗಿ.

ಕಳೆದ ಮೂವತ್ತು ವರ್ಷಗಳಿಂದ ನಾನು ಬಲ್ಲ, ಗಮನಿಸುತ್ತಿರುವ, ಅಭ್ಯಸಿಸುತ್ತಿರುವ ಪೊಲೀಸ್ ಅಧಿಕಾರಿ ಶಂಕರ ಬಿದರಿ. ಪ್ರತಿ ವಿಷಯವನ್ನೂ ಕ್ಷುಣ್ಣವಾಗಿ ಪರಿಶೀಲಿಸಬಲ್ಲ ಮತ್ತು ಬಹು ಬೇಗನೆ ಅರ್ಥ ಮಾಡಿಕೊಳ್ಳಬಲ್ಲ ಬಿದರಿ, ಕ್ರಮ ಕೈಗೊಳ್ಳುವ ವಿಷಯಕ್ಕೆ ಬಂದಾಗ ಮೀನ ಮೇಷ ಎಣಿಸುವವರಲ್ಲ. ಯಾರನ್ನು ಎದುರು ಹಾಕಿಕೊಂಡರೆ ಏನು ಗತಿಯೋ ಅಂತ ಹೆದರುವವರಲ್ಲ. \"ನೋಡ್ರಿ ರವೀ, ನನ್ನ ಕೈಗೆ ಸಾವಿರಾರು ಅಧಿಕಾರಿಗಳನ್ನ ಕೊಟ್ಟಿದೆ ಸರ್ಕಾರ. ಎಲ್ಲರೂ ಪ್ರಾಮಾಣಿಕರು-ಪ್ರತಾಪಿಗಳು ಅಲ್ಲ. ಅದರಲ್ಲಿ ಸುಳ್ಳರು, ಕಳ್ಳರು, ಮೋಸಗಾರರು, ಕುಂಟರು, ಕಿವುಡರು-ಎಲ್ಲ ತರಹದವರಿದ್ದಾರೆ. ಗಮನಿಸುತ್ತ ಇರಬೇಕು. ಸಿಕ್ಕು ಬಿದ್ದಾಗ ಒದ್ದು, ಸಸ್ಪೆಂಡ್ ಮಾಡಿ ಸರಿ ಮಾಡಬೇಕು. ಮತ್ತೆ ಕೆಲಸಕ್ಕೆ ತಗೊಂಡು ಜೊತೆಗಿಟ್ಟುಕೊಳ್ಳಬೇಕು, ದುಡಿಸಿಕೊಳ್ಳಬೇಕು.... ಹೌದಿಲ್ಲೋ?\"
ಇದು ಬಿದರಿ ಧಾಟಿ.

ಬಳ್ಳಾರಿಯ ಬಳಿ ಅಡಗಿಕೊಂಡಿದ್ದ ಫೇಕ್ ನಕ್ಸಲೀಯನ ಮನೆಗೆ ನುಗ್ಗಿದಾಗ ಬಿದರಿ, ಶುದ್ಧ ಮಿಲಿಟರಿ ಕಮ್ಯಾಂಡರನಂತೆ ಮುಂದಿನ ಸಾಲಿನಲ್ಲಿದ್ದರು. ಆದರೆ ಗುಂಡು ಬಡಿದು ಸತ್ತದ್ದು ಹೆಡ್ ಕಾನ್‌ಸ್ಟೇಬಲ್ ಹನುಮಂತಪ್ಪ. ಫೇಕ್ ನಕ್ಸಲೀಯನೊಂದಿಗೆ ಗಂಟೆಗಟ್ಟಲೆ ಬಡಿದಾಡಿ, ಕಡೆಗೆ ಅವನನ್ನು ಕೊಂದೇ ಹೆಣದ ಸಮೇತ ಆ ಅಡಗುತಾಣದಿಂದ ಹರ ಬಂದಿದ್ದರು ಬಿದರಿ. \"ಹೌದ್ದಲೆ ಗಂಡು\" ಎಂಬಂತೆ ಇಡೀ ಊರು ಅವರನ್ನು ನಿಂತು ನೋಡಿತ್ತು.

ಅದು ಅವರ ಸ್ವಭಾವ. ಬಡಿದಾಟಕ್ಕೆ ನಿಂತರೆ ಶುದ್ಧ scorpio. ಇಲ್ಲ ನೀನು-ಇಲ್ಲ ನಾನು : ಎಂಬಂತಹ ಬಡಿದಾಟ. To the last bullet. ವೀರಪ್ಪನ್ ಕಾರ್ಯಾಚರಣೆಯಲ್ಲಿ ಮಾಡಿದುದಾದರೂ ಏನು? ಅವನಿಗೊಂದು ಸೈನ್ಯವೇ ಇತ್ತು. ಅದರಲ್ಲಿ hard core ಕ್ರಿಮಿನಲ್‌ಗಳಿದ್ದರು. ಬಾತ್ಮೀದಾರರಿದ್ದರು. ಪೊಲೀಸರೊಂದಿಗೂ ಚೆನ್ನಾಗಿದ್ದು ಅವರನ್ನು ಯಾಮಾರಿಸಿ ನರಹಂತಕನ ಕೈಗೆ ಕೊಟ್ಟು ಕೊಲ್ಲಿಸುವವರಿದ್ದರು. ಅವನಿಗೆ ಅಡುಗೆ ಒಯ್ಯುವವರಿದ್ದರು. ಮದ್ದು ಗುಂಡು, ಯೂನಿಫಾರ್ಮ್, ಚಾದರ, ಟೆಂಟು ಇತ್ಯಾದಿಗಳನ್ನೆಲ್ಲ ಸರಬರಾಜು ಮಾಡುವ ಸುಮಾರು ಒಂದು ನೂರಕ್ಕೂ ಹೆಚ್ಚಿನ ಜನರಿದ್ದರು.

\"ಒಂದು ಕಡೆಯಿಂದ ಈ ಸೈನ್ಯ ತರಿದು ಹಾಕದಿದ್ದರೆ ವೀರಪ್ಪನ್‌ನನ್ನು ನಾವು ಮುಟ್ಟಲು ಸಾಧ್ಯವೇ ಇಲ್ಲ\" ಎಂದು ನಿರ್ಧರಿಸಿದ ನಂತರವೇ ಅಡುಗೆ ಒಯ್ಯುವವರಿಂದ ಹಿಡಿದು ಅವನ ಬಲಗೈ ಬಂಟರಂತಹ hard core criminalಗಳ ತನಕ ಒಬ್ಬೊಬ್ಬರನ್ನಾಗಿ ಒಯ್ದು-ಬೆನ್ನಟ್ಟಿ encounter ಮಾಡಲಾಯಿತು.

ಈ ಕೆಲಸವನ್ನು ಕೂಡ ಬಿದರಿ ಒಬ್ಬರೇ ಮಾಡಲಿಲ್ಲ. ಇದು ಕರ್ನಾಟಕ ಮತ್ತು ತಮಿಳುನಾಡು STFಗಳ, ಎರಡೂ ಸರ್ಕಾರಗಳ ಜಂಟಿ ನಿರ್ಣಯ. ನಿಜ, ಆಗ ಕೆಲವು ಅತಿರೇಕಗಳು ನಡೆದವು. ವರ್ಷಗಟ್ಟಲೆ ಕುಟುಂಬಗಳಿಂದ ದೂರವಿದ್ದ ಕೆಲವು ಕೆಳದರ್ಜೆ ಪೊಲೀಸರು ಕಾಡ ಮಧ್ಯದ ಅಮಾಯಕ ಹೆಂಗಸರೊಂದಿಗೆ ಸಂಬಂಧವಿಟ್ಟುಕೊಂಡರು. ಅಲ್ಲಿ ಅತ್ಯಾಚಾರಗಳೂ ಆದವು. ಇಲ್ಲಾದರೂ ಬಿದರಿ ಅತ್ಯಾಚಾರ ಮಾಡಿದರಾ? ಶ್ರೀಲಂಕಾದಲ್ಲಿ ತಮಿಳು ಹೆಂಗಸರ ಮೇಲೆ IPKF ಯೋಧರು ಅತ್ಯಾಚಾರ ಮಾಡಿದರು ಎಂಬ ಕಾರಣಕ್ಕೆ ಭಾರತದ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರನ್ನೇ ಕೊಂದು ಬಿಡುವ ನಿರ್ಣಯಕ್ಕೆ ಪ್ರಭಾಕರನ್ ಬಂದು ಬಿಟ್ಟನಲ್ಲ? ಹಾಗಾದರೆ ಹೇಗೆ?

ಈಗ ಆಗಿರುವುದೇ ಅದು.

ವೀರಪ್ಪನ್ ಕಥೆ ಮುಗಿದು ಹೋಗಿ ದಶಕವೇ ಆಗಿದೆ. ನಡೆದ ಎನ್‌ಕೌಂಟರುಗಳ, ಕೆಲವು ಅತ್ಯಾಚಾರ-ಅಕ್ರಮ ಸಂಬಂಧಗಳ ಕುರಿತು \'ಮಾನವ ಹಕ್ಕು ಆಯೋಗ\'ಕ್ಕೆ ಜನರಿಂದ ದೂರು ಕೊಡಿಸುವಂತೆ-ಆ ಮೂಲಕ STF ಕಾರ್ಯಾಚರಣೆಗೆ ಭಂಗ ತಂದು ಬಚಾವಾಗುವಂತೆ-ವೀರಪ್ಪನ್‌ಗೆ ಸಲಹೆ ನೀಡಿದವನು \'ನಕ್ಕೀರನ್‌\' ಗೋಪಾಲ್. ದೂರು ನೀಡಿದ್ದು ವಿಮೋಚನಾ ಸಂಸ್ಥೆ. ಸದಾಶಿವ ಆಯೋಗ ತನ್ನ ವರದಿಯಲ್ಲಿ STF ಅತಿರೇಕಗಳ ಬಗ್ಗೆ ಉಲ್ಲೇಖಿಸಿ, ಅದರಿಂದ ನೊಂದವರಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿತು. ನೆನಪಿರಲಿ, ಇದು ನ್ಯಾಯಾಲಯದ ಆಜ್ಞೆಯಲ್ಲ. ಇದನ್ನು ಸರ್ಕಾರ ಕೊಟ್ಟಿರಲೂ ಇಲ್ಲ.

ಆದರೆ ವೀರಪ್ಪನ್, ಚಿತ್ರನಟ ರಾಜಕುಮಾರ್‌ರನ್ನು ಅಪಹರಿಸಿ ಸರ್ಕಾರದ ಮೂಗು ಹಿಡಿದು ಬಿಟ್ಟ. \'ಆಯೋಗದ ಶಿಫಾರಸಿನಂತೆ ಐದು ಕೋಟಿ ವಿತರಿಸಿ\' ಎಂದು ಅಬ್ಬರಿಸಲು ಅವನಿಗೆ ಈ ಬಾರಿ ಸಲಹೆ ಮಾಡಿದ್ದು \'ನಕ್ಕೀರನ್‌\' ಗೋಪಾಲ್ ಮತ್ತು ವೀರಪ್ಪನ್‌ನೊಂದಿಗಿದ್ದ ತಮಿಳು ಉಗ್ರಗಾಮಿಗಳು. ಆಗ ಬಿದರಿ STF ನಲ್ಲಿರಲಿಲ್ಲ. ಪೊಲೀಸ್ ಮುಖ್ಯಸ್ಥರಾಗಿದ್ದವರು ದಿನಕರ್. ಕೃಷ್ಣ ಸರ್ಕಾರದ ಅಡ್ವೈಸರ್ ಆಗಿದ್ದವರು ನಿವೃತ್ತ IPS ಅಧಿಕಾರಿ ಶ್ರೀನಿವಾಸುಲು. \'ರಾಜ್‌ಕುಮಾರ್ ಬಿಡುಗಡೆಯಾದರೆ ಸಾಕು\' ಎಂದು ಕಂಗೆಟ್ಟ ಇಡೀ ಸಮೂಹ ಆ ಐದು ಕೋಟಿ ವಿತರಿಸಿತು. ಅದು ಆ ಸರ್ಕಾರ ಮಾಡಿದ helpless move.

ಅದರಿಂದ ಬಿದರಿ ತಪ್ಪಿತಸ್ಥರೆಂದು ತೀರ್ಮಾನಿಸಬಹುದೇ? ಮುಂಬಯಿಯಲ್ಲಿ ಭೂಗತರನ್ನು counter ಮಾಡದಿದ್ದರೆ ಇವತ್ತು ಮಹಾರಾಷ್ಟ್ರದಲ್ಲಿ ಸರ್ಕಾರವೇ ಇರುತ್ತಿರಲಿಲ್ಲ. ಆದರೆ ಮಾಡುತ್ತ ಮಾಡುತ್ತ ಅಲ್ಲಿನ ಅಧಿಕಾರಿಗಳೇ ಧನ ದಾಹಕ್ಕೆ, ರಕ್ತ ದಾಹಕ್ಕೆ ಬಿದ್ದರು. ಅಂಥ ಯಾವ ಕೆಲಸವನ್ನೂ ಬಿದರಿ ಮಾಡಲಿಲ್ಲ. ನೂರಾರು ಮಂದಿಯಿದ್ದ ವೀರಪ್ಪನ್ ತಂಡವನ್ನು ಕೇವಲ ಮೂರಕ್ಕೆ ಇಳಿಸಲು ಕಾರಣರಾಗಿ, ಬಹುಮಾನವಾಗಿ ಬಂದ ಹಣವನ್ನೆಲ್ಲ ಅಲ್ಲೇ ಕಾಡಿನಲ್ಲಿ ಹಂಚಿ ಬರಿಗೈಯೊಂದಿಗೆ ಹಿಂತಿರುಗಿದರು. ಬಂದ ಮೇಲೆ ಸರ್ಕಾರಗಳು ಬದಲಾದವು. ಕೆಲಸಕ್ಕೆ ಬಾರದ ಜಾಗೆಗಳಿಗೆ ಬಿದರಿಯಂಥ ಸಮರ್ಥರನ್ನು ಹಾಕಿ ಕೊಳೆಸಿದರು. ಬಿದರಿ \'ಚಕಾರ\'ವೆತ್ತಲಿಲ್ಲ. ಇದೆಲ್ಲದರ ಮಧ್ಯೆ ಬಿದರಿಯವರಿಗೆ ನಾಲ್ಕು ಪ್ರಮೋಷನ್‌ಗಳಾದವು. ಶೌರ್ಯ ಪ್ರಶಸ್ತಿಗಳ ಪ್ರವಾಹ ಹರಿಯಿತು. ಯಾರೂ ಕೂಡ ಸದಾಶಿವ ಆಯೋಗದ ವರದಿ ಕುರಿತು ಪ್ರಸ್ತಾಪಿಸಲಿಲ್ಲ. ಇನ್ನು ಎರಡು ತಿಂಗಳಿಗೆ ಅವರು ನಿವೃತ್ತರಾಗಬೇಕಿದೆ. ರಾಜ್ಯದ ಪೊಲೀಸ್ ಮಹಾ ನಿರ್ದೇಶಕರ ಹುದ್ದೆಗೆ ಅವರನ್ನು ಕೂರಿಸಲಾಗಿದೆ.

ಈ ಸಂದರ್ಭದಲ್ಲಿ ಆಯೋಗದ ಹಳೆಯ ಕಾಗದವನ್ನು ಅವರ ಮುಖಕ್ಕೆ ಹಿಡಿದರೆ, ಅದು ಸಮ್ಮತವೇ?

\"ಬಿದರಿಯವರ ನೇಮಕ ಸೇವಾ ಜೇಷ್ಠತೆಯನ್ನು ಉಲ್ಲಂಘಿಸಿದೆಯಾದ್ದರಿಂದ ಇನ್‌ಫೆಂಟ್ ಅವರಿಗೆ ಡಿಜಿ-ಐಜಿಪಿ ಹುದ್ದೆ ಬಿಟ್ಟು ಕೊಡಬೇಕು\" ಎಂದು ಒಂದೂವರೆ ಸಾಲಿನ ತೀರ್ಪು ಬರೆದ ನ್ಯಾಯಾಲಯವನ್ನು ಎಲ್ಲರೂ, ಬಿದರಿಯೂ ಸೇರಿದಂತೆ, ಗೌರವಿಸಬೇಕು. ಆದರೆ ರಕ್ಕಸನೊಬ್ಬನ ಅಟ್ಟಹಾಸ ಅಡಗಿಸಿ, ಮತ್ತೆ ಎಂದಿನಂತೆ ಶಿಸ್ತು ಬದ್ಧ ಅಧಿಕಾರಿಯಾಗಿ, ಒಂದೂ ದಿನ ರಜೆ ಹಾಕದೆ 41 ವರ್ಷ ದುಡಿದ ಅಧಿಕಾರಿಯನ್ನು \'ಈ ನಾಡಿಗೆ ಸದ್ದಾಂ ಹುಸೇನ್ ಅಥವಾ ಗಡಾಫಿಗಳ ಅವಶ್ಯಕತೆಯಿಲ್ಲ\' ಎಂಬ ಷರಾದೊಂದಿಗೆ ಮನೆಗೆ ಕಳಿಸುವುದು ಸಹನೀಯವೇ?

ರಾಜಕಾರಣಿಗಳ ಕಾಲಿಗೆ ಫುಲ್ ಡ್ರೆಸ್‌ನಲ್ಲಿ ಟೋಪಿ-ಬೆಲ್ಟು- ಮೆಡಲುಗಳ ಸಮೇತ ಬಿದ್ದ ಡಿಜಿ-ಐಜಿಪಿ ಭಾಸ್ಕರ್‌ರನ್ನು ನಾವು ಕಣ್ಣಾರೆ ಕಂಡಿದ್ದೇವೆ. ರೇಪ್ ಪ್ರಯತ್ನ ಮಾಡಿ ಜೈಲಿಗೆ ಹೋದ ಇತರೆ ರಾಜ್ಯವೊಂದರ ಮಹಾ ನಿರ್ದೇಶಕನನ್ನು ಇವತ್ತಿಗೂ ಜೈಲಿನಲ್ಲಿ ನೋಡುತ್ತಿದ್ದೇವೆ. ಇದೇ ರಾಮಾಪುರದಲ್ಲಿ ವೀರಪ್ಪನ್ ಸಾಲುಸಾಲು ಪೊಲೀಸರನ್ನು ಕೊಂದಾಗ ಶುದ್ಧ ಮುಂಡ ಮೋಪಿಯಂತೆ ಅಳುತ್ತಾ ಕುಳಿತಿದ್ದವರು ಮೈಸೂರಿನ ಎಸ್ಪಿ. ಕೆ.ಆರ್.ಶ್ರೀನಿವಾಸನ್. ವೀರಪ್ಪನ್ ಕೈಲಿ ಸರಿಯಾಗಿ ಕುತ್ತಿಗೆಗೆ ಗುಂಡೇಟು ತಿಂದು ಪ್ರಜ್ಞೆ ತಪ್ಪುವ ತನಕ ಫೈರ್ ಮಾಡುತ್ತಲೇ ಇದ್ದು ಬದುಕುಳಿದವರು ಇವತ್ತು ಹಿರಿಯ
ಅಧಿಕಾರದಲ್ಲಿರುವ ಗೋಪಾಲ ಹೊಸೂರ್. ಅಂಥವರು ರಾತ್ರಿ ಕ್ಲಬ್ಬೊಂದರ ಮೇಲೆ ದಾಳಿ ಮಾಡಿದಾಗ ಗಾಬರಿಯೆದ್ದು, ಹೆಂಗಸರ ಡಾನ್ಸ್ ನೋಡುತ್ತಿದ್ದವನು, ಓಡಿ ಹೋಗಿ ಬೆಳಗಿನ ಜಾವದ ತನಕ ಕಕ್ಕಸ್ಸಿನಲ್ಲಿ ನಿಂತಿದ್ದುದು ಅಂದಿನ ಡಿ.ಸಿ.ಪಿ ನಾರಾಯಣ ಗೌಡ.

ಕ್ಷಮಿಸಿ, ವಿಚಾರಣಾ ಆಯೋಗವೊಂದು ಪರಿಹಾರ ಕೊಡಿಸಿತೆಂದ ಮಾತ್ರಕ್ಕೆ ರೇಣುಕಾಚಾರ್ಯನಂಥ ಪುಂಡನ ಮುಕಳಿಯ ಮೇಲೆ ಬರೆ ಏಳುವಂತೆ ಬಡಿದ ಎಸ್ಪಿ ಸೋನಿಯಾ ನಾರಂಗ್, ರಾಜಕಾರಣಿಗಳನ್ನು ಸದಾ ಎದುರು ಹಾಕಿಕೊಂಡ ದಿನಕರ್, physical dangerನ್ನು ಗಮನಿಸದೆ ಶೌರ್ಯ ಪ್ರದರ್ಶಿಸಿದ ಕ್ರಿಮಿನಲ್‌ಗಳನ್ನು ಕೊಂದ ಬಿ.ಕೆ.ಶಿವರಾಂ, ಬಿ.ಬಿ.ಅಶೋಕ್ ಕುಮಾರ್, ಅಬ್ದುಲ್ ಅಜೀಮ್, ಜಿ.ವಿ.ಬಾವಾ, ಮೀಸೆ ನಾಗರಾಜ್-ಇಂಥವರನ್ನೆಲ್ಲ ನಾಳೆ ಸದ್ದಾಂ, ಗಡಾಫಿ, ಈದಿ ಅಮೀನ್ ಮುಂತಾದವರಿಗೆ ಹೋಲಿಸಿದರೆ ಗತಿಯೇನು?

ಶಂಕರ ಬಿದರಿ ಇವತ್ತು ಪೊಲೀಸ್ ಮಹಾನಿರ್ದೇಶಕರ ಸ್ಥಾನದಿಂದ ನಿರ್ಗಮಿಸಿರಬಹುದು. ಆದರೆ \'ಒಬ್ಬ ರಾತ್ರಿ ಬೀಟಿನ ಪೊಲೀಸ್ ಪೀಪಿ ಊದುತ್ತ ತಿರುಗುತ್ತಿದ್ದರೆ ಒಂದಿಡೀ ಬಡಾವಣೆ ನೆಮ್ಮದಿಯಾಗಿ ನಿದ್ರಿಸುತ್ತದೆ\' ಎಂದು ನಂಬುವ ನಾಗರಿಕರು ಧೀರ ಅಧಿಕಾರಿಗಳನ್ನು ಸದ್ದಾಂ ಮತ್ತು ಗಡಾಫಿಗಳಿಗೆ ಹೋಲಿಸಿ ಷರಾ ಬರೆಯುವುದಿಲ್ಲ.

ಬಿದರಿಯವರಂತೆಯೇ ಎರಡು ತಿಂಗಳ ಅಧಿಕಾರ ವಹಿಸಿಕೊಂಡಿರುವ ಎ.ಆರ್.ಇನ್‌ಫೆಂಟ್ ಶುಭ್ರ ಹಸ್ತದ ಅಧಿಕಾರಿ. ಅವರು ಕರಪ್ಟ್ ಅಲ್ಲ. ಆದರೆ ಅದ್ಭುತವಾದುದೇನನ್ನೂ ಮಾಡಿದವರಲ್ಲ. ಅವರನ್ನು ಅನೇಕರು ಕ್ರಿಶ್ಚಿಯನ್ನರೆಂದುಕೊಂಡಿದ್ದಾರೆ. ಅಬ್ದುಲ್ ರೆಹಮಾನ್ ಇನ್‌ಫಂಟ್ ಅನೇಕ ಸಲ ಮುಸ್ಲಿಂ ಅಧಿಕಾರಿಗಳ ರಕ್ಷಣೆಗೆ ನಿಂತ ಪರೋಕ್ಷ ಆರೋಪಗಳಿಗೆ ಗುರಿಯಾಗಿದ್ದಾರೆ. ಇಷ್ಟಾಗಿ, ಬಿದರಿ ನೇಮಕಾತಿಯ ಪರವಾಗಿ ಸುಪ್ರೀಮ್ ಕೋರ್ಟಿಗೆ ಹೋಗಲು ಸದಾನಂದಗೌಡ ಮತ್ತು ಗೃಹಮಂತ್ರಿ ಆರ್.ಅಶೋಕ್ ನಿರ್ಧರಿಸಿರುವುದು ಸ್ವಾಗತಾರ್ಹ.

ಸದ್ಯ, ಇಬ್ಬರೂ ಲಿಂಗಾಯತರಲ್ಲ.

-ರವಿ ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 10 April, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books