Ravi Belagere
Welcome to my website
ಬಹಳ ದಿನಗಳ ನಂತರ ಈ ತರಹದ್ದೊಂದು mega function ಏರ್ಪಡಿಸಿದ್ದೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ನೀವೆಲ್ಲ ಬಂದಿರಿ. ನನ್ನ ಬರವಣಿಗೆ, ತಿರುಗಾಟ, ಮುದ್ರಣ, ಬಣ್ಣ, ಈ ಸಿಂಗಾರ-ಬಂಗಾರ- ಇವೆಲ್ಲವೂ ನಿಮಗಾಗಿಯೇ ಅಲ್ಲವೆ? ಎಲ್ಲಿಯ ರಾಯಚೂರು, ಕೊಪ್ಪಳ, ಯಾದಗಿರಿ, ಗುಲಬರ್ಗ, ಚಿಂಚನ ಸೂರು, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ಮಂಗಳೂರು-ಎಲ್ಲೆಲ್ಲಿಂದ ಬಂದಿದ್ದರು ಓದುಗರು!. ಪ್ರತಿಯೊಬ್ಬರ ಕೈಲೂ ‘ಹಿಮಾಗ್ನಿ’. ಪ್ರತಿಯೊಬ್ಬರ ಕೈಲೂ ‘ಉಡುಗೊರೆ’, ‘ಅಮ್ಮ ಸಿಕ್ಕಿದ್ಲು’ ಮತ್ತು ಸಿಡಿಗಳು.
Home About Us Gallery Books Feedback Prarthana Contact Us

ಭೀಮಾ ತೀರದ ಹಂತಕರು...

\"ಕ್ಷಮಾ ಮಾಡಬೇಕು ಸಾಹೇಬರ. ನಿಮ್ಮ ಕಣ್ಣು ಕಟ್ಟಿ ಕರಕೊಂಡು ಹೋಗಬೇಕಾಗ್ಯದ. ಮನಸೀಗೆ ನೋವು ಮಾಡಿಕೋಬ್ಯಾಡ್ರಿ\" ಪಕ್ಕದ ಸೀಟಿನಲ್ಲಿ ಕುಳಿತ ಆ ಹುಡುಗ ಸಣ್ಣ ದನಿಯಲ್ಲಿ ಹೇಳುತ್ತಿದ್ದ. ಕಾರಿನ ವೀಲ್ ಹಿಡಿದು ಕುಳಿತವನು ಒಂದು ಹೊಸ ಸಿಗರೇಟು ಹಚ್ಚಿ ಅವನನ್ನೇ ನೋಡಿದೆ. ಹುಡುಗನ ಮುಖದಲ್ಲೊಂದು ಅಪಾಲಜಿ ಇತ್ತು. ಸಿಗರೇಟು ಮುಗಿಯುತ್ತಿದ್ದಂತೆಯೇ ಈತ ನನ್ನ ಕಣ್ಣು ಕಟ್ಟುತ್ತಾನೆ. ನನ್ನನ್ನು ಕಾರಿನ ಹಿಂದಿನ ಸೀಟಿನಲ್ಲಿ ಕೂಡಿಸಲಾಗುತ್ತದೆ. ಆ ತನಕ ಯಾವತ್ತೂ ನಾನು ಹಿಂದಿನ ಸೀಟಿನಲ್ಲಿ ಕೂತವನಲ್ಲ. ನನ್ನ ಕಾರು ನಾನೇ ಡ್ರೈವ್ ಮಾಡಬೇಕು. ಅಕಸ್ಮಾತ್ ಅಪಘಾತವಾದರೆ, ನಾನೇ ಅಪಘಾತ ಮಾಡಿಕೊಂಡೆನೆಂಬ ಸಮಾಧಾನವಾದರೂ ನನಗಿರಲಿ ಅಂತ ಬಯಸುವ ಹುಂಬ ನಾನು. ಡ್ರೈವಿಂಗ್ ಎಂಬುದು ನನ್ನ ಪಾಲಿಗೆ ಬಗೆಹರಿಯದ ಹಂಬಲದ ಕೆಲಸ. ಸ್ಪೀಡು, ಹಾಡು ಮತ್ತು ಮೂಡು ಸೆಟ್ಟಾದರೆ ಅನಾಯಾಸವಾಗಿ ಒಂದು ಸಾವಿರ ಕಿಲೋಮೀಟರುಗಳ ದೂರವನ್ನು ಕ್ರಮಿಸಿ ಬಿಡಬಲ್ಲೆ. ನನ್ನ ಕಾರಿನಲ್ಲಿ ಯಾವ ಘಳಿಗೆಯಲ್ಲಿ ಹುಡುಕಿದರೂ ಸುಮಾರು ಐವತ್ತು ಕೆಸೆಟ್ಟುಗಳ ಮೂಟೆ ಸಿಗುತ್ತೆ.
ಆದರೆ ಈಗ ಸಂಗೀತ ಸ್ತಬ್ದಗೊಳ್ಳಲಿದೆ. ಪತ್ರಿಕೋದ್ಯಮಕ್ಕೆ ಬಂದು ಒಂದೂವರೆ ದಶಕವಾಗಿದೆ. ಎಂತೆಂಥ ಪಾತಕಿಗಳನ್ನೋ ಭೇಟಿಯಾಗಿದ್ದೇನೆ. ತಮ್ಮ ತಾಣಗಳಿಗೆ, ಸ್ಥಾವರಗಳಿಗೆ ಅವರು ನನ್ನನ್ನು ಕರೆಸಿಕೊಂಡಿದ್ದಾರೆ. ಆದರೆ ಯಾರೂ ಹೀಗೆ ಕಣ್ಣು ಕಟ್ಟುತ್ತೇವೆ ಅಂದಿರಲಿಲ್ಲ. ನನ್ನದೇ ಕಾರಿನಲ್ಲಿ ನನ್ನನ್ನು ಹಿಂದಿನ ಸೀಟಿಗೆ ಕಣ್ಣು ಕಟ್ಟಿ ಕೆಡವಿ ಗೊತ್ತಿಲ್ಲದ ತಾಣಕ್ಕೆ ಕರೆದೊಯ್ದಿರಲಿಲ್ಲ.
\"ಆಯ್ತು ಕಟ್ರಿ\" ಅಂದವನೇ ವೀಲ್ ಬಿಟ್ಟಿಳಿದು ಸಿಗರೇಟು ನೆಲಕ್ಕೆ ಒಗೆದೆ. ಕಾರಿನಲ್ಲಿ ಅವರಿಬ್ಬರೇ ಇದ್ದರು. ರಾಜು ಮತ್ತು ರಾಜು! ನನ್ನನ್ನು ಬೆಳ್ಳಂಬೆಳಗ್ಗೆ ಬಿಜಾಪುರದ ಅದಿಲ್‌ಶಾಹಿ ಹೊಟೇಲಿನಿಂದ ಹೊರಡಿಸಿಕೊಂಡು ಸೊಲ್ಲಾಪುರಕ್ಕೆ ಕರೆತಂದಿದ್ದರು. ಎಷ್ಟು ಸಲ ಕೇಳಿದರೂ ತಮ್ಮಿಬ್ಬರ ಹೆಸರುಗಳನ್ನು ’ರಾಜು’ ಎಂದಷ್ಟೆ ಹೇಳುತ್ತಿದ್ದರು. ಅವು ಅವರ ನಿಜದ ಹೆಸರುಗಳಲ್ಲವೆಂಬುದು ನನಗೆ ಚೆನ್ನಾಗಿ ಗೊತ್ತಿತ್ತು. ಆದರೆ ಅನವಶ್ಯಕ ಕುತೂಹಲ ತೋರಿಸಿದರೆ ಕೆಲಸ ಕೆಡುತ್ತದೆ. ಸುಮ್ಮನೆ ಕುಳಿತೆ. ತೆಳ್ಳಗೆ ಕಪ್ಪಗಿದ್ದ, ಹೊಳೆಯುವ ಕಣ್ಣುಗಳ, ನಗು ಮುಖದ ಹುಡುಗ ಬಂದು ನನ್ನ ಪಕ್ಕಕ್ಕೆ ಕುಳಿತವನೇ ದೊಡ್ಡದೊಂದು ಸ್ಕಾರ್ಫ್ ನಿಂದ ನನ್ನ ಕಣ್ಣು ಕಟ್ಟಿದ. ಮತ್ತೊಬ್ಬ ರಾಜು ವೀಲ್ ಹಿಡಿದು ಕುಳಿತ. ಕಾರಿನ ಇಗ್ನಿಷನ್ ತಿರುವಿದ್ದು ಗೊತ್ತಾಯಿತು. ಸೊಲ್ಲಾಪುರದ ಪುಟ್ಟ ಸರ್ಕಲ್ ಒಂದರಿಂದ ನನ್ನ ಕಾರು ಕದಲುತ್ತಿದ್ದಂತೆಯೇ ಇಬ್ಬರು ವ್ಯಕ್ತಿಗಳು ನನ್ನ ಕಾರಿನೊಳಕ್ಕೆ ದಾಖಲಾದರು. ನನಗೀಗ ಏನೂ ಕಾಣುತ್ತಿರಲಿಲ್ಲ. ದೇಹಗಳ ವಾಸನೆ ಮಾತ್ರ ಗ್ರಹಿಕೆಗೆ ಬರುತ್ತಿತ್ತು. ಕಾರಿನಲ್ಲಿ ಯಾರೂ ಮಾತನಾಡುತ್ತಿರಲಿಲ್ಲ.

ಪತ್ರಿಕೆಯ ಕೆಲಸ ಮುಗಿಸಿ, ಪ್ರಿಂಟಿಗೆ ಕಳಿಸಿ, ಮೂರ‍್ನಾಲ್ಕು ದಿನಗಳ ನಿದ್ದೆಯನ್ನು ಒಂದೇ ರಾತ್ರಿಯಲ್ಲಿ ಮಾಡಿ ಮುಗಿಸಲು ಚಡಪಡಿಸುವ ದಣಿವಿನ ಗುರುವಾರ ಅದು. ಇನ್ನೇನು ಮಲಗಬೇಕು ಅಂದುಕೊಳ್ಳುತ್ತಿದ್ದಂತೆಯೇ ಮನೆಯ ಫೋನು ಒಂದೇ ಸಮನೆ ಮೊರೆಯತೊಡಗಿತು.
\"ನಾನು ರಾಜು ಮಾತಾಡತಿದ್ದೀನ್ರೀ ಸರs. ಇಂಡಿ ತಾಲೂಕಿನ ಸುದ್ದಿ ಬರೀತೀರೇನು? ಇವತ್ತಿನ ತನಕ ಯಾವ ಜರ್ನಲಿಸ್ಟೂ ಭೇಟಿ ಆಗದಂಥ ಮನಿಷಾನ್ನ ಭೇಟಿಯಾಗತೀರೇನು? ಬರಿಯೋ ತಾಕತ್ತಿದ್ದರ ಹೇಳ್ರಿ. ಬ್ಯಾರೆ ಯಾವ ಪೇಪರಿನೋರಿಗೂ ಸಿಗಲಾರದಂzs ಸುದ್ದಿ ಕೊಡತೀನಿ\" ಅತ್ತಲಿನ ದನಿ ತಣ್ಣಗೆ ವಿವರಿಸುತ್ತಿತ್ತು.

\"ಎಲ್ಲಿಗೆ ಬರಲಿ?\" ಕೇಳಿದೆ.
\"ಎಸೆಲ್ಪಿಗೆ ಬರ್ರಿ\" ಅಂದ ಹುಡುಗ.
\"ಎಸೆಲ್ಪಿ ಅಂದ್ರೆ?\"
\"ಸೊಲ್ಲಾಪುರ....\"

\"ನನಗಷ್ಟು ಪರಿಚಯ ಇಲ್ಲ ಸೊಲ್ಲಾಪುರದ್ದು. ಬಿಜಾಪುರಕ್ಕೆ ಬರ‍್ತೀನಿ. ಅದಿಲ್‌ಶಾಹಿ ಹೊಟೇಲ್‌ನ್ಯಾಗಿರ್ತೀನಿ. ಬಂದು ಭೇಟಿಯಾಗ್ರಿ\" ಅಂದೆ. ಅತ್ತಲಿನ ಫೋನು ಡಿಸ್‌ಕನೆಕ್ಟ್ ಆಯಿತು. ತಕ್ಷಣ ಎದ್ದು ಎರಡು ದಿನಕ್ಕಾಗುವಷ್ಟು ಬಟ್ಟೆ, ರಿಪೋರ್ಟಿಂಗಿಗೆ ಬೇಕಾಗುವ ಪ್ಯಾಡ್‌ಗಳು, ಒಂದು ಅತ್ಯಂತ ಮಾಮೂಲಿಯಾದ hot shot ಕೆಮೆರಾ, ಎರಡು ರೀಲು, ಒಂದಷ್ಟು ಹಣ್ಣು ತುಂಬಿಕೊಂಡು ಸೂಟ್‌ಕೇಸ್ ಕೈಗೆತ್ತಿಕೊಂಡೇ ಬಿಟ್ಟೆ. ಕಿಸೆಯಲ್ಲಿ ಅಂಗೈ ಗಾತ್ರದ ಪಾಯಿಂಟ್ ಟೂ ಫೈವ್ ಪಿಸ್ತೂಲು. ನನ್ನಷ್ಟೇ ದಣಿದು ಮಲಗಿದ್ದ ನನ್ನ ಹುಡುಗ ಸೀನನನ್ನು ಎಬ್ಬಿಸಿಕೊಂಡು ರಾತ್ರಿಯ ಮೂರನೇ ಜಾವದ ಹೊತ್ತಿಗೆ ನಾನು ಬಿಜಾಪುರದ ಹಾದಿ ಸವೆಸತೊಡಗಿದೆ.

ಹಾಗೆ ಅಪರಿಚಿತ ದನಿಯೊಂದನ್ನು ನಂಬಿಕೊಂಡು ಹೊರಟ ನನ್ನ ಮಿದುಳಿನಲ್ಲಿ ದಾಖಲಾಗಿದ್ದ ಎರಡೇ ಎರಡು ಹೆಸರುಗಳೆಂದರೆ - ಚಂದ್ಯಾ ಮತ್ತು ಶಿರಸ್ಯಾ.\"ಚಂದ್ಯಾ ಮತ್ತು ಶಿರಸ್ಯಾ ಅನ್ನೋರ ಮಾರಿ ಸೈತ ನೋಡಿಲ್ಲ ಅಂತ ಆಣಿ ಮಾಡ್ತಾನಲ್ರೀ ರವಿ ಪಾಟೀಲ? ಅವರ‍್ನೇ ಭೇಟಿ ಮಾಡಿಸ್ತೀನಿ ಬರ್ರಿ. ಅವರೇನಂತಾರೋ ಕೇಳ್ರಿ\" ಅಂದಿದ್ದ ರಾಜು. ನಂಬಿ ಹೊರಟಿದ್ದೆ.
ನಿಜಕ್ಕೂ ಚಂದಪ್ಪ ಹರಿಜನ ಭೇಟಿಯಾಗುತ್ತಾನಾ?

ತೆಪ್ಪಗೆ ರಾಜುವಿನ ಮಾತು ಕೇಳಿದ್ದಿದ್ದರೆ ರಗಳೆಯಿಲ್ಲದೆ ಭೇಟಿಯಾಗಿ ಬಿಡುತ್ತಿದ್ದನೋ ಏನೋ? ಶನಿವಾರ ಬೆಳಗ್ಗೆ ನಾನು ಚಂದಪ್ಪ ಹರಿಜನನನ್ನು ಭೇಟಿಯಾಗುವುದೆಂದು ನಿಶ್ಚಯವಾಗಿತ್ತು. ಬಿಜಾಪುರದ ಹೊಟೇಲ್ ಅದಿಲ್‌ಶಾಹಿಯಲ್ಲಿ ರಾಜು ನನ್ನನ್ನು ಶುಕ್ರವಾರ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಬಂದು ಕಾಣುತ್ತೇನೆಂದಿದ್ದ. ನಾನು ಅವಸರದ ಜೀವಿ. ಒಂದು ಕಡೆ ತೆಪ್ಪಗೆ ಕೂಡುವ ಜಾಯಮಾನದವನಲ್ಲ. ಶನಿವಾರ ಬೆಳಗ್ಗೆಯ ತನಕ ಏನು ಮಾಡಲಿ? ಇಡೀ ಶುಕ್ರವಾರ ಹೊಟೇಲಿನ ಕೋಣೆಯಲ್ಲಿ ಕುಳಿತು ಏನು ಮಾಡಲಿ? ಸುಮ್ಮನೆ ಬಿಜಾಪುರ ಸುತ್ತಿದೆ. ಇಂಡಿ ಪಟ್ಟಣದ ವರ್ತಕರ ಅಪಹರಣಗಳ ಬಗ್ಗೆ ಏನಾದರೂ ಮಾಹಿತಿ ಸಿಗುತ್ತದೇನೋ ಅಂತ ಪ್ರಯತ್ನಿಸಿದೆ. ಬಿಜಾಪುರದ ಒಂದಿಬ್ಬರು ಪತ್ರಕರ್ತರನ್ನು ಭೇಟಿಯಾದರೆ ಅಷ್ಟಿಷ್ಟು ಮಾಹಿತಿ ಸಿಗಬಹುದು. ಆದರೆ, ನಾನು ಬಿಜಾಪುರದ ತನಕ ಬಂದಿದ್ದೇನೆಂಬುದೇ ಸುದ್ದಿಯಾಗಿ ಬಿಡುತ್ತದೆ. ಇಲ್ಲದ ರಗಳೆ. ಪೊಲೀಸ್ ಅಧಿಕಾರಿಗಳನ್ನು ಕಾಣುವುದು ಮತ್ತೂ ಅಪಾಯಕಾರಿ ಅನ್ನಿಸಿತು. ಎಲ್ಲ ತಿರುಗಿದರೂ ಬಿಜಾಪುರ ಪಟ್ಟಣ ಅರ್ಧ ಗಂಟೆಯೊಳಗಾಗಿ ಮುಗಿದು ಹೋಗುತ್ತದೆ. ಗೋಳಗುಮ್ಮಟದ ತಂಪಿನಲ್ಲಿ ಜಾವೊತ್ತು ಕೂತು ಬರೋಣವೆಂದುಕೊಂಡವನಿಗೆ ಇದ್ದಕ್ಕಿದ್ದಂತೆ ಭೇಟಿಯಾದವನು ’ಸಂಯುಕ್ತ ಕರ್ನಾಟಕ’ದ ಬಿಜಾಪುರದ ವರದಿಗಾರ ಶಾಂತಕುಮಾರ್. ಮೂಲತಃ ದಾವಣಗೆರೆಯ ಹುಡುಗ. ಬಿಜಾಪುರಕ್ಕೆ ಬಂದು ಆರೆಂಟು ತಿಂಗಳಾಗಿರಬೇಕು. ಆತನಿಗೆ ಇಂಡಿ ಕುರಿತಂತೆ ಅಷ್ಟಿಷ್ಟು ಗೊತ್ತಿತ್ತು. ಗುಮ್ಮಟದ ಮುಂದಿನ ನೆರಳಲ್ಲಿ ಕುಳಿತು ಲೋಕಾಭಿರಾಮವಾಗಿ ಹರಟಿದೆ.

\"ಟ್ರೈ ಮಾಡ್ತಿದೀನಿ ನಾನು. ಇಷ್ಟರಲ್ಲೇ ಚಂದಪ್ಪ ಹರಿಜನ ಸಿಗೋ ಛಾನ್ಸಿದೆ. ಸಿಕ್ಕುಬಿಟ್ರೆ ಭರ್ಜರಿ ಸ್ಟೋರಿ ಆಗುತ್ತೆ. ನಿಮಗೆ ಖಂಡಿತ ತಿಳಿಸ್ತೀನಿ\" ಅಂದ.
\"ದಯವಿಟ್ಟು ತಿಳಿಸಿ\" ಅಂದೆ.

ನನಗೋಸ್ಕರ ಕಾಯುತ್ತಿದ್ದ ನನ್ನ ಹುಡುಗ ಶ್ರೀನಿವಾಸನೊಂದಿಗೆ ಅದಿಲ್‌ಶಾಹಿಯ ಊಟದ ಮನೆ ಹೊಕ್ಕು ಎರಡು ತುತ್ತು ಉಣ್ಣುವಷ್ಟರಲ್ಲೇ ಕಪ್ಪಗೆ ತೆಳ್ಳಗಿದ್ದ ಹೊಳಪುಗಣ್ಣಿನ ಹುಡುಗನೊಬ್ಬ ಬಂದು ನನ್ನ ಪಕ್ಕದ ಕುರ್ಚಿಯಲ್ಲಿ ಕುಳಿತು \"ನಾನು ರಾಜು!\" ಅಂದುಬಿಟ್ಟ. ಆತ ಅನಕ್ಷರಸ್ಥನಾಗಿರಲಿಲ್ಲ. ವಂಚಕನ ಯಾವ ಲಕ್ಷಣಗಳೂ ಇರಲಿಲ್ಲ. ಅಷ್ಟು ದೂರದಿಂದ ನನ್ನನ್ನು ನಂಬಿಕೊಂಡು ಬಂದು ಬಿಟ್ಟಿದ್ದೀರಿ. ನಾಳೆ ನಾನಾದರೂ ನಿಮ್ಮನ್ನು ಅಷ್ಟೇ ನಂಬಿಕೆಯಿಂದ ಚಂದಪ್ಪನ ತನಕ ಕರೆದೊಯ್ಯುತ್ತಿದ್ದೇನೆ. ಈ ಹತ್ಯೆಗಳಿಗೂ, ಚಂದಪ್ಪನ ಟೀಮಿಗೂ ನನಗೆ ಯಾವುದೇ ಸಂಬಂಧವಿಲ್ಲ. ನನ್ನನ್ನು ತೊಂದರೆಗೆ ಸಿಲುಕಿಸ ಬೇಡಿ. ಮೊದಲಿಂದಲೂ ನಿಮ್ಮ ಪತ್ರಿಕೆ ಓದಿದ್ದೇನೆ. ನಿಮ್ಮ ಅಭಿಮಾನಿ ಓದುಗ. ಆ ನಂಬಿಕೆ ಯಿಂದಲೇ ಕರೆಸಿದ್ದೇನೆ ಅಂದ.
ಊಟ ಮುಗಿದ ನಂತರ ಆತನನ್ನು ನನ್ನ ಕೋಣೆಗೆ ಕರೆದೊಯ್ದೆ. ಬಿಜಾಪುರದ ತನಕ ಬಂದಿರುವವರು ನಾನು ಮತ್ತು ಸೀನ ಇಬ್ಬರೇ ಎಂಬುದನ್ನು ಮನವರಿಕೆ ಮಾಡಿಕೊಟ್ಟೆ. ಚಂದಪ್ಪನನ್ನು ಭೇಟಿಯಾಗುವುದರಲ್ಲಿ ನನಗಿರುವುದು ಕೇವಲ ಒಬ್ಬ ಪತ್ರಕರ್ತನಿಗಿರುವಂತಹ ಆಸಕ್ತಿ. ಅದರ ಹೊರತಾಗಿ ಮತ್ತೇನೂ ಇಲ್ಲ. ಚಂದಪ್ಪನಿಗೆ ನನ್ನಿಂದ ಒಳ್ಳೆಯದೇನೂ ಆಗದಿರಬಹುದು; ಆದರೆ ಕೆಟ್ಟದಂತೂ ಆಗದು. ರವಿಕಾಂತ ಪಾಟೀಲನಂತಹ ಕ್ಷುದ್ರ ರಾಜಕಾರಣಿ ಯನ್ನ ಬೆತ್ತಲೆಗೊಳಿಸುವುದು ನನ್ನ ಮೂಲ ಆಸಕ್ತಿ. ಅದಕ್ಕೆ ಚಂದಪ್ಪ ಹರಿಜನ ಸಾಕಷ್ಟು ವಿವರ ನೀಡಿದರೆ, ಬಿಜಾಪುರದ ತನಕ ಬಂದಿದ್ದೂ ಸಾರ್ಥಕ ಅಂದೆ. ರಾಜು ಬೆಳಗ್ಗೆ ಬಂದು ನನ್ನನ್ನು ಕರೆದೊಯ್ಯುವುದಾಗಿ ಹೇಳಿ ಕೈಕುಲುಕಿ ಎದ್ದು ಹೋದ.

ಅವು ಜುಲೈ-ಆಗಸ್ಟ್ ತಿಂಗಳ ಮಳೆಯ ದಿನಗಳು. ಆಕಾಶದಲ್ಲಿ ಸೂರ್ಯ ಪ್ರಖರವಾಗಿದ್ದ ನಾದರೂ ಸಂಜೆ ಹೊತ್ತಿಗೆ ದೊಡ್ಡ ಮಳೆಯಾದರೆ ಆಶ್ಚರ್ಯವಿಲ್ಲ ಎನ್ನುವಂತಿತ್ತು ಪರಿಸ್ಥಿತಿ. ಹೇಳಿದ ಹೊತ್ತಿಗೆ ಸರಿಯಾಗಿ ಗಂಟೆ ಹೊಡೆದಂತೆ ಅದಿಲ್‌ಶಾಹಿಯ ಅಂಗಳದಲ್ಲಿ ರಾಜು ಹಾಜರಿದ್ದ. ಜೊತೆಗೆ ಮತ್ತೊಬ್ಬ ಯುವಕ.

\"ನನ್ನ ಹೆಸರೂ ರಾಜು ಅಂತ ಸರs\" ಪರಿಚಯ ಮಾಡಿಕೊಂಡ. ನಕ್ಕು ಸುಮ್ಮನಾದೆ. ಸೊಲ್ಲಾಪುರಕ್ಕೆ ಹೊರಡುವ ಮುನ್ನ ಕಿಸೆಯಲ್ಲಿದ್ದ ನನ್ನ ಪಾಯಿಂಟ್ ಟೂ ಫೈವ್ ಬೋರಿನ, ಆರು ಗುಂಡುಗಳ ಪಿಸ್ತೂಲನ್ನು ಸೀನನ ಕೈಗೆ ಕೊಟ್ಟು, \"ವಾಪಸು ಬರುವುದು ತಡವಾದರೆ ಗಾಬರಿಯಾಗಬೇಡ. ತೀರ ನಾಳೆ ರಾತ್ರಿಯ ತನಕ ನೋಡು. ನಾನು ಹಿಂತಿರುಗದಿದ್ದರೆ ಮನೆಗೆ-ಆಫೀಸಿಗೆ ಫೋನು ಮಾಡಿ ತಿಳಿಸಿಬಿಡು\" ಎಂದು ಹೇಳಿ ಕಾರಿನ ಪೆಡಲು ತುಳಿದೆ. ಸೀನನ ಮುಖದಲ್ಲಿ ಒಂದು ಆತಂಕದ ಮೋಡವಿತ್ತು.

ಅವನು ದಿನ್ನೆಯಿಂದಿಳಿದು ಬಂದು ತನ್ನ ಹತೋಡಾದಂತಹ ಬಲಗೈ ಮುಂದಕ್ಕೆ ಚಾಚಿ, \"ನನಗs ಚಂದಪ್ಪ ಅಂತಾರ್ರಿ. ಚಂದ್ರಕಾಂತ ನನ್ನ ಹೆಸರು. ಚಂದ್ರಕಾಂತ ಶರಣಪ್ಪ ಹರಿಜನ!\" ಎಂದು ಪರಿಚಯ ಮಾಡಿಕೊಂಡಿದ್ದ.

ಕಾರಿನಲ್ಲಿ ಸೊಲ್ಲಾಪುರದಿಂದ ನನ್ನೊಂದಿಗೇ ಬಂದು, ನನಗಿಂತ ಮುಂಚೆ ಇಳಿದು ಹೋಗಿ ದಿನ್ನೆಯ ಮೇಲೆ ನಿಂತು, ದಿನ್ನೆಯ ತನಕ ನನ್ನ ಕಣ್ಣು ಕಟ್ಟಿಸಿ ನಡೆಸಿ, ಕಡೆಗೆ ತಾನೇ ಆದೇಶ ನೀಡಿ ಪಟ್ಟಿ ಬಿಚ್ಚಿಸಿ, ಆಗಷ್ಟೆ ನೋಡಿದವನಂತೆ ನನ್ನೆಡೆಗೆ ನಡೆದು ಬಂದು ಕೈ ಕುಲುಕಿದ ಚಂದಪ್ಪ ಹರಿಜನ ಎಂಬ ದಂತ ಕಥೆಯನ್ನು ಕುತೂಹಲದಿಂದ ದಿಟ್ಟಿಸಿದ್ದೆ. ಅವನು ನ್ಯೂಸ್ ಪೇಪರೊಂದರಲ್ಲಿ ಮಟ್ಟಸವಾಗಿ ಸುತ್ತಿದ್ದ ರಿವಾಲ್ವರನ್ನು ಷರಟಿನ ಹಿಂದೆ ಅಡಗಿಸಿಟ್ಟುಕೊಂಡಿದ್ದ. ಅವತ್ತು ತಿಳಿನೀಲಿ ಷರಟು, ಮಣ್ಣಬಣ್ಣದ ಪ್ಯಾಂಟು ಧರಿಸಿದ್ದ. ಕಾಲಿಗೆ ತುಂಬ ದುಬಾರಿಯಾದ ಬೂಟು. ಅಂಥ ಆಜಾನುಬಾಹುವೇನಲ್ಲ. ಆದರೆ ಮೈಯ ಬಿರುಸು ಅವನ ಪ್ರತಿ ಚಲನವಲನದಲ್ಲೂ ಗೋಚರವಾಗುತ್ತಿತ್ತು. ಕಣ್ಣುಗಳಲ್ಲಿ ಮೃಗಸಹಜವಾದ ಚಾಂಚಲ್ಯ. ಎಚ್ಚರ ಮತ್ತು ಜಾಗರೂಕತೆಗಳು ಅವನ ವ್ಯಕ್ತಿತ್ವದ ಒಂದು ಭಾಗವೇನೋ ಎಂಬಂತಿದ್ದವು. ಅವನಾಗಿ ನನ್ನೆದುರು ಕುಳಿತು ತನ್ನ ಬದುಕಿನ ಕತೆ ಹೇಳಿಕೊಳ್ಳುವ ತನಕ, ಕರ್ನಾಟಕದ ಮೂರು ಜಿಲ್ಲೆಯ ಪೊಲೀಸರು ಹಗಲು-ರಾತ್ರಿಗಳೆನ್ನದೆ ಹುಡುಕುತ್ತಿರುವ ಒಬ್ಬ ನರಹಂತಕನೊಂದಿಗೆ ನಾನು ಮಾತಾಡುತ್ತಿದ್ದೇನೆ ಅಂತ ಖಂಡಿತ ನನಗನ್ನಿಸುತ್ತಿರಲಿಲ್ಲ.

ಚಂದಪ್ಪ ಹರಿಜನ ನಕ್ಕಿದ್ದು ಕಡಿಮೆ. ಭಾವುಕವಾಗಿ ಒಂದೇ ಒಂದು ವಾಕ್ಯ ಮಾತನಾಡಲಿಲ್ಲ. ಪ್ರತಿ ಮಾತನ್ನೂ ತೂಗಿ-ಅಳೆದು ಆಡುತ್ತಿದ್ದ. ಏನು ಬಾಯಿ ಬಡಿದುಕೊಂಡರೂ, ಅವನು ಬಿಜಾಪುರದಿಂದ ನಾನು ಒಯ್ದಿದ್ದ ಬ್ರೆಡ್ ತಿನ್ನಲಿಲ್ಲ. ಒಂದು ಸೇಬು ತಿನ್ನಿಸುವುದರೊಳಗಾಗಿ ಸಾಕುಬೇಕಾಯಿತು. ಸಂಜೆಯ ತನಕ ನನ್ನ ಕಾರಿನಲ್ಲಿದ್ದ ಚೀಲದೊಳಗಿನಿಂದ ಕೆಮೆರಾ ಈಚೆಗೆ ತೆಗೆಯಲು ಬಿಡಲಿಲ್ಲ. ಅವನು ಜನ್ಮದಲ್ಲೇ ಯಾರನ್ನಾದರೂ ನಂಬಿದ್ದ ಅಂತ ನನಗನ್ನಿಸಲಿಲ್ಲ. ಅನುಮಾನವೆಂಬುದು ಅವನ ಒಟ್ಟು ಸ್ವಭಾವದ ಕೆನೆಯಂತಿತ್ತು.

\"ನಾನು ಸತ್ರ... ನನ್ನ ಹೆಣದ ಪಂಚನಾಮಾ ಸೈತ ಆಗಲಿಕ್ಕಿಲ್ರೀ. ಈ ರಾಜಕಾರಣಿಗಳು, ಪೊಲೀಸರು ನನ್ನ ಕೆಡವಿ ಕೊಂದು ಬಿಡತಾರ. ಹಂಗ ಕೊಲ್ಲೂ ತನಕ ನಾನು ಓಡಿಕೋತ ಇರಬೇಕು ನೋಡ್ರಿ. ಓಡಿಕೋತ ಓಡಿಕೋತ ಹೋಗಿ ಕೊಲ್ಲಬೇಕು. ಓಡೋದು ನಿಲ್ಲಿಸಿದೆ ಅಂದ್ರ ಖಲಾಸ್! ನಾನೇ ಸತ್ತು ಬಿಡತೀನಿ....\" ಅಂದಿದ್ದ ಚಂದಪ್ಪ.

ಕಡೆಕಡೆಯ ದಿನಗಳಲ್ಲಿ ಚಂದಪ್ಪನನ್ನು ಪೊಲೀಸರಿಗೆ ಅಥವಾ ನ್ಯಾಯಾಲಯಕ್ಕೆ ಶರಣಾಗುವಂತೆ ಅವನ ಮನವೊಲಿಸಲು ಪ್ರಯತ್ನ ಪಟ್ಟೆ. ಅವನನ್ನು ಬೆಂಗಳೂರಿಗೆ ಕರೆಸಿಕೊಂಡೆ. ಊಟ ಮಾಡಿಸಿದೆ. ಗಂಟೆಗಟ್ಟಲೆ ಮಾತನಾಡಿದೆ. ಆ ಹುಂಬನಿಗೆ ಶರಣಾಗುವ ವಿಚಾರವೇ ಇರಲಿಲ್ಲ. ಅವನನ್ನು ನೇರವಾಗಿ ಪೊಲೀಸ್ ವರಿಷ್ಠ ಪ್ರತಾಪ ರೆಡ್ಡಿಯೊಂದಿಗೆ ಮಾತನಾಡುವಂತೆ ಮಾಡಿದೆ. ಮಾತೆಲ್ಲ ಮುಗಿದ ಮೇಲೆ ಫೋನು ಕೆಳಗಿಟ್ಟು,\"ಈ ಪ್ರತಾಪರೆಡ್ಡಿ ನನ್ನ ಕೊಲ್ತಾನ. ಇಲ್ಲಂದ್ರ, ನನ ಕೈಯ್ಯಾಗ ಸಾಯ್ತಾನ!\" ಅಂದುಬಿಟ್ಟಿದ್ದ ಚಂದಪ್ಪ. ಅವನಿಗೆ ಈ ವ್ಯವಸ್ಥೆ, ಇದರ ರೀತಿ ನೀತಿ, ಈ ನೆಲದ ಕಾನೂನು- ಯಾವುದೂ ಅರ್ಥವಾಗುತ್ತಿರಲಿಲ್ಲ. ಅದೊಂದು ಹುಂಬ ಮೃಗ. ಉತ್ತರ ಕರ್ನಾಟಕದ ಕುಗ್ರಾಮವೊಂದರಲ್ಲಿ ಹುಟ್ಟಿ ಬೆಳೆದ ಅಪ್ಪಟ ಹರಿಜನರ ಹುಡುಗ. ನಾನು ಕಾರ್ಗಿಲ್‌ಗೆ ಹೊರಟಾಗ; ನಾನೂ ಬರ‍್ತೇನಿ ಅಂದಿದ್ದ. ಇಲ್ಲಿದ್ದು ಪೊಲೀಸರ ಗುಂಡಿಗೆ ಸಿಕ್ಕು ಹೆಣವಾಗುವ ಬದಲು ಯುದ್ಧ ಮಾಡಿ ಸಾಯ್ತೀನಿ ಅಂದಿದ್ದ. ಸಾವು ಅವನ ಪ್ರತಿ ಮಾತಿನಲ್ಲೂ ಪ್ರತಿಧ್ವನಿಸುತ್ತಿತ್ತು.

ಕಡೆಗೆ ಸತ್ತೇ ಹೋದ.

ಈ ಪುಸ್ತಕದಲ್ಲಿ ಸಾಧ್ಯವಾದಷ್ಟೂ ಒಂದು ಕ್ರಮ, ಘಟನೆಗಳ ಕಾಲದ ಬಗೆಗಿನ (chronology) ಎಚ್ಚರ ಕಾದಿಟ್ಟುಕೊಳ್ಳಲು ಯತ್ನಿಸಿದ್ದೇನೆ. ಆದರೂ ಕೆಲವು ಘಟನೆಗಳ ವಿವರಣೆ ಕೊಂಚ ಹಿಂದು ಮುಂದಾಗಿರಬಹುದು. ಆದರೆ ಎಲ್ಲೂ ಅತಿಶಯ, ವಿಷಯಗಳ ಮರೆಮಾಚುವಿಕೆ, ವೈಭವೀಕರಣ, ಉದ್ದೇಶಪೂರ್ವಕ ಹೀಯಾಳಿಕೆ-ಇಂಥವ್ಯಾವೂ ಆಗಿಲ್ಲ. ಈ ಕಥನದಲ್ಲಿ ಪಾತ್ರಗಳಾಗಿ ಬಂದವರನೇಕರ ಫೋಟೋಗಳನ್ನು ಪುಸ್ತಕದುದ್ದಕ್ಕೂ ಪ್ರಕಟಿಸಿದ್ದೇನೆ.
ಉಳಿದದ್ದು ನಿಮ್ಮೆದುರಿಗಿದೆ.

- ರವಿ ಬೆಳಗೆರೆ, ಬೆಂಗಳೂರು
೧೮ ಮೇ ೨೦೦೧.

_________________________________________________________________

ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ಬರೆಯಿರಿ. 

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 07 April, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books