Ravi Belagere
Welcome to my website
ಬಹಳ ದಿನಗಳ ನಂತರ ಈ ತರಹದ್ದೊಂದು mega function ಏರ್ಪಡಿಸಿದ್ದೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ನೀವೆಲ್ಲ ಬಂದಿರಿ. ನನ್ನ ಬರವಣಿಗೆ, ತಿರುಗಾಟ, ಮುದ್ರಣ, ಬಣ್ಣ, ಈ ಸಿಂಗಾರ-ಬಂಗಾರ- ಇವೆಲ್ಲವೂ ನಿಮಗಾಗಿಯೇ ಅಲ್ಲವೆ? ಎಲ್ಲಿಯ ರಾಯಚೂರು, ಕೊಪ್ಪಳ, ಯಾದಗಿರಿ, ಗುಲಬರ್ಗ, ಚಿಂಚನ ಸೂರು, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ಮಂಗಳೂರು-ಎಲ್ಲೆಲ್ಲಿಂದ ಬಂದಿದ್ದರು ಓದುಗರು!. ಪ್ರತಿಯೊಬ್ಬರ ಕೈಲೂ ‘ಹಿಮಾಗ್ನಿ’. ಪ್ರತಿಯೊಬ್ಬರ ಕೈಲೂ ‘ಉಡುಗೊರೆ’, ‘ಅಮ್ಮ ಸಿಕ್ಕಿದ್ಲು’ ಮತ್ತು ಸಿಡಿಗಳು.
Home About Us Gallery Books Feedback Prarthana Contact Us

ಬೇಡವಾದ್ದನ್ನು ಸುಮ್ಮನೆ ಡಿಲೀಟ್ ಮಾಡುವ ಒಂದು ನೆನಪಿನ ತಂತ್ರ?

ನೆನಪಿನ ಪಂದ್ಯ. ಹಾಗಂತ ಒಂದಿರುತ್ತಾ? ಇದ್ದಿದ್ದರೆ ನಂಗೆ ಪ್ರೈಜು ಬಂದೇ ಬರುತ್ತಿತ್ತೇನೋ? ಇತ್ತೀಚಿನ ನನ್ನ ದಿನಚರಿಯೇ ಹಾಗಾಗಿದೆ. ನೆನಪುಗಳ ಜೊತೆಗೆ ಪ್ರಯಾಣ, ಮುಖಾಮುಖಿ, ಅವುಗಳನ್ನು ದಾಖಲಿಸುವಿಕೆ. ನಿಮಗೆ ಗೊತ್ತು, ನನ್ನ ಮಾಮ ಬೆಳಗೆರೆ ಕೃಷ್ಣ ಶಾಸ್ತ್ರಿಗಳ ಬದುಕಿನ ಕಥನ ಬರೆಯುತ್ತಿದ್ದೇನೆ : \"ಇದು ಜೀವನ : ಇದುವೇ ಜೀವನ\".

ಇಷ್ಟೊಂದು ಸಾತ್ವಿಕ ಪುಸ್ತಕವನ್ನು ನಾನು ಹಿಂದೆಂದೂ ಬರೆದಿರಲಿಲ್ಲ. ನಿಜ ಹೇಳಲಾ? ಈ ತನಕ ನಾನು ಎಪ್ಪತ್ತು ಪುಸ್ತಕ ಬರೆದಿದ್ದೇನೆ. ಅವೆಲ್ಲವುಗಳದೂ ಒಂದು ತೂಕವಾದರೆ ಮಾಮನ ಜೀವನ ಕಥನದ ಪುಸ್ತಕದ್ದೇ ಒಂದು ತೂಕ. ಮನೆಗೆ ಹೋಗುವಾಗ ಆತನ ಪರ‍್ಮಿಷನ್ ಕೇಳಿಕೊಂಡೇ ಹೋಗಬೇಕು. ನಿದ್ರೆ, ಸುಸ್ತು, ಬೇಸರ, ಮಾತು ಬೇಡ ಎಂಬ ಸ್ಥಿತಿ ಎಲ್ಲ avoid ಆತನ ಮನೋದೈಹಿಕ ಅನುಕೂಲ ನೋಡಿಕೊಂಡು ಸಂದರ್ಶನಕ್ಕೆ ಹೋಗಬೇಕು. ಕೆಲವು ಸಲ ಇಳಿಸಂಜೆಗಳಲ್ಲಿ ನನ್ನ ಬನಶಂಕರಿ ಮನೆಯ ಬಾಲ್ಕನಿಯಲ್ಲಿ ಮಂಚ ಹಾಕಿ ಮಲಗಿಸಿ, ಪಕ್ಕ ಕುಳಿತು ಆತನನ್ನು ನಿಧಾನವಾಗಿ ಮಾತಿಗೆಳೆಯುತ್ತೇನೆ.

ತೊಂಬತ್ತಾರರ ಜೀವ. ದೇಹ ಕೃಶವಾಗಿದೆ. ಜಿನುಗುವ ಹೃದಯದ ಕವಾಟ. ತುಂಬ ನೀರೂ ಕೊಡಬೇಡಿ ಅನ್ನುತ್ತಾರೆ ಡಾಕ್ಟರು. ಒಮ್ಮೊಮ್ಮೆ ಆತನನ್ನು ಮಾತನಾಡಿಸಿ, ಇಲ್ಲದ್ದನ್ನೆಲ್ಲ ಕೇಳಿ ಹಿಂಸಿಸುತ್ತಿದ್ದೇನೇನೋ ಅನ್ನಿಸುತ್ತದೆ. ಅದರಲ್ಲೂ ಆತನ ವ್ಯಕ್ತಿಗತ ವಿವರಗಳಿಗೆ ಬಂದಾಗ. ನನ್ನ ಮಾಮ memory test ಇಟ್ಟರೆ ಈ ರಾಜ್ಯಕ್ಕಲ್ಲ, ದೇಶಕ್ಕಲ್ಲ, ಪ್ರಪಂಚಕ್ಕೇ ಮೊದಲಿಗನಾಗಿ ಗೆಲ್ಲಬಲ್ಲ ಛಾಂಪಿಯನ್. ಅಂಥ ಅದ್ಭುತ ನೆನಪಿನ ಶಕ್ತಿಯಿದೆ. ಅದು ಸೌಭಾಗ್ಯವೂ ಹೌದು. ಸರಿ ಸಮನಾದ ದೌರ್ಭಾಗ್ಯವೂ ಹೌದು. ಏಕೆಂದರೆ, ಆ ವಿಷಯದಲ್ಲಿ ನಾನು ಮಾಮನನ್ನೇ ಹೋತಿದ್ದೇನೆ. ನಮ್ಮಿಬ್ಬರಿಗೂ ಇರುವ ಎರಡು ಹೋಲಿಕೆಗಳೆಂದರೆ ನೆನಪಿನ ಶಕ್ತಿ ಮತ್ತು ಕಾಲಿನ ಮೀನ ಖಂಡ. ವಿಪರೀತ ನಡೆದು, ಸೈಕಲ್ ತುಳಿದ ಪರಿಣಾಮ : Second heat ಎಂದೇ ಕರೆಯಲ್ಪಡುವ ಮೀನ ಖಂಡ ನಮಗಿದೆ. Sorry, ಇತ್ತು. ತೂಕ ಕಳೆದುಕೊಂಡ ನಂತರ ನನ್ನ ಮೀನ ಖಂಡ ಬೆಕ್ಕಿನ ಅಂಡಿನಂತಾಗಿದೆ, ಬಿಡಿ.

ಮೊನ್ನೆ ಮಾಮನ ಬದುಕಿನ ಅತಿ ಸೂಕ್ಷ್ಮ ಸಂಗತಿಯ ಕುರಿತು ಕೇಳಬೇಕಿತ್ತು.

\"ಮಾಮಾ, ನಿನಗೆ ಅತ್ತೆ ನೆನಪಿದ್ದಾಳಾ? ಪದ್ಮಾವತಿ. ಪದ್ದತ್ತೆ?\" ಕೇಳಿದೆ.

\"ಇಲ್ಲದೆ ಏನು? ಮದುವೆ ಹೇಗಾಯ್ತು ಅಂತ ಹೇಳ್ತೀನಿ ಬರ‍್ಕೋ...\" ಅಂದವನು ತನ್ನ ಮತ್ತು ಹಿರಿಯೂರಿನ ಹನುಮಂತರಾವ್ ಅವಧಾನಿಗಳ ಒಬ್ಬಳೇ ಮಗಳು ಪದ್ಮಾವತಿಯೊಂದಿಗೆ ಆದ ಮದುವೆಯ ಬಗ್ಗೆ ಹೇಳಲಾರಂಭಿಸಿದ. ನಮ್ಮದು ಬೆಳಗೆರೆಯ ಬಡ ಕುಟುಂಬ. ಹಿರಿಯೂರಿನ ಅವಧಾನಿಗಳದು ಶ್ರೀಮಂತ ಮೋಕ್ಷಗುಂಡಂ ಕುಟುಂಬ. ಆದರೆ ಮಾಮ ಅವತ್ತಿಗೆ ಎಸೆಸೆಲ್ಸಿ ಪಾಸಾಗಿದ್ದ. ಅರ್ಹ ವರ ಅನ್ನಿಸಿಕೊಳ್ಳಲು ಅಷ್ಟು ಸಾಕಿತ್ತು. ಅವರೇ ಬೆಳಗೆರೆಗೆ ಬಂದು ಮಾತುಕತೆಯಾಡಿದರು.
ಲಗ್ನಪತ್ರಿಕೆ ಕಾರ್ಯ ಹಿರಿಯೂರಿನಲ್ಲಿ ಮಾಡುವುದಾಗಿ ನಿಶ್ಚಯವಾಯಿತು.

ಆದರೆ ಇದ್ದಕ್ಕಿದ್ದಂತೆ ನನ್ನ ದೊಡ್ಡಮ್ಮ, ಕೃಷ್ಣ ಶಾಸ್ತ್ರಿಗಳ ಅಕ್ಕ ಬೆಳಗೆರೆ ಜಾನಕಮ್ಮನವರಿಗೆ ಹುಚ್ಚು ನಾಯಿ ಕಚ್ಚಿ ಜೀವಕ್ಕೇ ಅಪಾಯವೆನ್ನಿಸಿ ಅವರನ್ನು ಬಳ್ಳಾರಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದರಿಂದ ತನ್ನ ಅಕ್ಕನನ್ನು ನೋಡಿಕೊಳ್ಳಲು ಶಾಸ್ತ್ರಿಗಳು ಬಳ್ಳಾರಿಗೆ ಹೋದರು. ಪ್ರಿಂಟಾದ ಲಗ್ನಪತ್ರಿಕೆ ಅಲ್ಲಿಗೇ ಬಂತು. \"ಹಾಗಾದರೆ, ನೀನು ಪದ್ದತ್ತೆಯನ್ನು ಮದುವೆಗೆ ಮುಂಚೆ ನೋಡಿದ್ದೆಯಾ?\" ಕೇಳಿದೆ.

\"ನೋಡೋದೆಲ್ಲಿ ಬಂತು? ಮದುವೆ ಮಣೆಯ ಮೇಲೆ ಕುಳಿತಾಗ ಗಂಡು ಹೆಣ್ಣಿನ ನಡುವೆ ಅಂತರ ಪಟ ತೆಗೆದಾಗಲೇ ನೋಡಿದ್ದು\" ಅಂತ ಬೋಸಿ ನಗೆ ನಕ್ಕ.

Fine. ಆಗ ಮಾಮನಿಗೆ ಹದಿನೇಳೋ ಹದಿನೆಂಟೋ. ಪದ್ದತ್ತೆಗೆ ಹತ್ತು. ಆಕೆ ಮೈನೆರೆತು ಪ್ರಸ್ತ ಮಾಡಿಕೊಟ್ಟ ಮೇಲೆ ಇವರ ಸಂಸಾರ ಶುರುವಾಯಿತು. ಆಗ ಮಾಮ ಬೆಂಗಳೂರಿನ H.A.Lನಲ್ಲಿ ಕೆಲಸ ಮಾಡುತ್ತಿದ್ದ. ಸಂಸಾರವಿದ್ದುದು ಪ್ಯಾಲೇಸ್ ಗುಟ್ಟಳ್ಳಿಯಲ್ಲಿ. ಎಲ್ಲವೂ ಪಕ್ಕಾ ನೆನಪಿದೆ. ಏಳೂವರೆ ತಿಂಗಳಲ್ಲಿ ಪದ್ದತ್ತೆಯನ್ನು ತವರಿಗೆ ಕರೆದೊಯ್ದರು. ಹೆರಿಗೆಯಾಗಿ, ಗಂಡು ಮಗು ಹುಟ್ಟಿತ್ತು.

\"ನೀನು ಮಗನಿಗೆ ಏನಂತ ಹೆಸರಿಟ್ಟಿದ್ದೆ?\" ಕೇಳಿದೆ. ತುಂಬ ಹೊತ್ತು ಯೋಚಿಸಿದವನು

\"ನೆನಪಿಲ್ಲ ಕಣೋ\" ಅಂದ. ನನಗೆ ನನ್ನ ಅಮ್ಮ ಹೇಳಿದ್ದು ನೆನಪಿತ್ತು.
\"ಗುಂಡಾ... ಅಂತ ಕರೀತಿರ‍್ಲಿಲ್ವಾ?\" ಕೇಳಿದೆ.

\"ಓ... ಹೌದು ನೋಡು. ತಲೇಲಿ ಕೂದಲು ಕಡಿಮೆ ಇದ್ವು. ಗುಂಡಾ ಅಂತಿದ್ದುದು ಹೌದು\" ಅಂದ. ಆದರೆ ಅವನಿಗೊಂದು ಅಧಿಕೃತ ಹೆಸರು ಅಂತ ಇತ್ತಲ್ಲ. ಏನು ಹರಸಾಹಸ ಮಾಡಿದರೂ ಮಾಮನಿಗೆ ನೆನಪೇ ಆಗಲಿಲ್ಲ.

ನಮ್ಮ ಕುಟುಂಬದಲ್ಲಿ ಅದೊಂದು ಭಯಾನಕ ಘಟನೆ. 1948ರಲ್ಲಿ ನಡೆದದ್ದು. ಏಳು ತಿಂಗಳ ಗರ್ಭಿಣಿ ಬೆಳಗೆರೆ ಜಾನಕಮ್ಮನವರಿಗೆ ತೊಂದರೆಯಾಗಿ ಒಂದು ಮಗು ಹುಟ್ಟಿ, ಅದು ಸತ್ತಿತ್ತು. ಕೆಲವೇ ಗಂಟೆಗಳಲ್ಲಿ ಜಾನಕಮ್ಮನವರೂ ಸತ್ತರು. ಮಾಮ ಆಕೆಯ ಸಂಸ್ಕಾರ ಮುಗಿಸಿ ಊರಿಗೆ ಹೋದ ಇಪ್ಪತ್ತು ದಿನಗಳಿಗೆ, ತಾನು ನೌಕರಿ ಮಾಡುತ್ತಿದ್ದ ಹೆಗ್ಗೆರೆ ಗ್ರಾಮದಿಂದ ಹಿರಿಯೂರಿಗೆ ವಿನಾಕಾರಣ ಹೋದ. ಬಸ್ಸಿಳಿಯುತ್ತಿದ್ದಂತೆಯೇ ಅವರ ಹೆಂಡತಿ (ಪದ್ದತ್ತೆ)ಯ ತಮ್ಮಂದಿರು ಓಡಿ ಬಂದು ’ಗುಂಡ’ನಿಗೆ ಯಾಕೋ ಹುಶಾರಿಲ್ಲ್ಲ ಅಂತ ಹೇಳಿದರು. ಇವರ ಮಗ ಗುಂಡ ನಾಲ್ಕೂವರೆ ವರ್ಷದವನು. ತೀರ ಮರೆತು ಹೋಗುವ ಎಳೆ ಮಗುವಲ್ಲ. ಹೋಗಿ ನೋಡಿದರೆ ಅವನಿಗೆ ಫಿಟ್ಸ್ ಬರುತ್ತಿದೆ. ನೋಡ ನೋಡ್ತ ’ಗುಂಡ’ ತೀರಿಕೊಂಡ. ಆಗ ಶುರುವಾಯ್ತು ಒಳಮನೆಯಲ್ಲಿ ಪದ್ದತ್ತೆಯ ರೋದನ. ಮಗನನ್ನು ಕಳೆದುಕೊಂಡ ಶಾಸ್ತ್ರಿಗಳು ಮನೆ ಎದುರಿನ ರಾಮಮಂದಿರದ ಜಗುಲಿಯ ಮೇಲೆ ಬೋರಲಾಗಿ ಮಲಗಿಬಿಟ್ಟರು. ಸಂಜೆ ಹೊತ್ತಿಗೆ ಏಳೂವರೆ ತಿಂಗಳ ಗರ್ಭಿಣಿ ಪದ್ದತ್ತೆಗೆ ಅತ್ತು ಅತ್ತೇ ಹೆರಿಗೆಯಾಗಿ ಹೋಯಿತು. ಹುಟ್ಟಿದ್ದು ಹೆಣ್ಣು ಮಗು. ಅದು ಸತ್ತು ಹುಟ್ಟಿತ್ತು. ಎರಡೂ ಮಕ್ಕಳನ್ನು ಹಿರಿಯೂರಿನ ಅವಧಾನಿಗಳ ಮನೆ ಹಿಂದಿನ ವೇದಾವತಿ ನದೀ ತೀರದಲ್ಲಿ ಮಣ್ಣು ಮಾಡಲಾಯಿತು. ಅದರ ವಿವರ ಸರಿಯಾಗಿ ಹೇಳಿದ ಮಾಮ. ಆ ಎರಡೂ ಮಕ್ಕಳು ಮಣ್ಣಾದ ಕೊಂಚ ಹೊತ್ತಿಗೇ, ಪದ್ದತ್ತೆಯ ತಂದೆ ಹನುಮಂತರಾಯರು ಬಂದು ರಾಮಮಂದಿರದ ಜಗುಲಿಯ ಮೇಲೆ ಗತಪ್ರಾಣ ಸ್ಥಿತಿಯಲ್ಲಿ ಮಲಗಿದ್ದ ಶಾಸ್ತ್ರಿಗಳ ಮೇಲೆ ಬಿದ್ದು,

\"ಪದ್ದೂನೂ ಹೋಗಿ ಬಿಟ್ಲು ಕಣೋ...\" ಎಂದು ರೋದಿಸುತ್ತಾರೆ.

ಎಲ್ಲವನ್ನೂ ತುಂಬ ನಿರ್ಮಮವಾಗಿ, emotionless ಆಗಿ, ಕರಾರುವಾಕ್ಕಾಗಿ ವಿವರಿಸುವ ಮಾಮ, ಪದ್ದತ್ತೆಯ ಬಾಯಿಗೆ ಅಕ್ಕಿ ಕಾಳು ಹಾಕಿದುದನ್ನೂ ಹೇಳುತ್ತಾನೆ. ಮರುದಿನ ಬಬ್ಬುರು ರಸ್ತೆಯಲ್ಲಿ ಅಸ್ಥಿ ಆರಿಸಿ ತಂದದ್ದೂ ಹೇಳುತ್ತಾನೆ. ಆದರೆ ತನ್ನೊಂದಿಗೆ ನಾಲ್ಕೂವರೆ ವರ್ಷ ಬೆಳೆದ ಆ ಮಗುವಿನ ಹೆಸರೇನು?

ಅವನಿಗೆ ನೆನಪಿಲ್ಲ.

ನನಗೆ ಗೊತ್ತಾಗುತ್ತದೆ. ಇದು ನಾಟಕವಲ್ಲ. ಮುಪ್ಪೂ ಅಲ್ಲ. ಮಾಮ ತನ್ನನ್ನು ನೇಣಿಗೇರಿಸಿದರೂ ಸುಳ್ಳು ಹೇಳುವುದಿಲ್ಲ. ಆದರೆ ಬದುಕಿನ ಬರೀ ಇಪ್ಪತ್ತು ದಿನಗಳಲ್ಲಿ ಆ ಐದು ಸಾವುಗಳು ಸಂಭವಿಸಿ ಹೋದವಲ್ಲ?

Delete.

ಉದ್ದೇಶಪೂರ್ವಕವಾಗಿ ಆ ಘಟನೆಯ, ಅದಕ್ಕೆ ಸಂಬಂಧಿಸಿದ ಅನೇಕ ವಿವರಗಳನ್ನು ಆತ ತನ್ನ ಸ್ಮರಣೆಯಿಂದ delete ಮಾಡಿದ್ದಾನೆ. ಅದೇ ಸಾಧನೆ. ಅದು ಸಾಧ್ಯವಾದದ್ದು ರಮಣರು ಕಲಿಸಿದ ಧ್ಯಾನದಿಂದ ಅಂತಾನೆ ಮಾಮ. ಒಂದು ದುಃಖವನ್ನು as a bunch, ಹಾಗೆ ಮರೆಯಲು ಸಾಧ್ಯ ಅಂತ prove ಮಾಡಿದ ಮೊದಲ ವ್ಯಕ್ತಿಯನ್ನು ನಾನು ನೋಡುತ್ತಿದ್ದೇನೆ. Short term memory loss ಅಂತಾರೆ. ಇದು ಅದಲ್ಲ. ಒಂದು ಒಲ್ಲದ ಕಹಿ ನೆನಪಿನ ಆ ಪ್ಯಾಚ್‌ನ ಒಟ್ಟಾರೆಯಾಗಿ delete ಮಾಡುವ ಅದ್ಭುತ ತಂತ್ರ.

ನನಗದು ಸಾಧ್ಯವಾ?

\"ನಂಗೆ ನೀನು ಕಲಿಸ್ತೀಯಾ?\"

ಮಾಮನನ್ನು ಕೇಳಬೇಕೆಂದುಕೊಂಡಿದ್ದೇನೆ.

ಆತ ಹೇಳಿಕೊಟ್ಟರೆ, ನಿಮಗೂ ಹೇಳಿಕೊಡ್ತೇನೆ. ಏಕೆಂದರೆ, ಮರೆಯಲೇ ಬೇಕಾದ bad patch ನಮ್ಮೆಲ್ಲರ ಜೀವನದಲ್ಲೂ ಇರುತ್ತದೆ ಅಲ್ಲವೆ?

-ರವೀ

Read Archieves of 06 April, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books