Ravi Belagere
Welcome to my website
ಬಹಳ ದಿನಗಳ ನಂತರ ಈ ತರಹದ್ದೊಂದು mega function ಏರ್ಪಡಿಸಿದ್ದೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ನೀವೆಲ್ಲ ಬಂದಿರಿ. ನನ್ನ ಬರವಣಿಗೆ, ತಿರುಗಾಟ, ಮುದ್ರಣ, ಬಣ್ಣ, ಈ ಸಿಂಗಾರ-ಬಂಗಾರ- ಇವೆಲ್ಲವೂ ನಿಮಗಾಗಿಯೇ ಅಲ್ಲವೆ? ಎಲ್ಲಿಯ ರಾಯಚೂರು, ಕೊಪ್ಪಳ, ಯಾದಗಿರಿ, ಗುಲಬರ್ಗ, ಚಿಂಚನ ಸೂರು, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ಮಂಗಳೂರು-ಎಲ್ಲೆಲ್ಲಿಂದ ಬಂದಿದ್ದರು ಓದುಗರು!. ಪ್ರತಿಯೊಬ್ಬರ ಕೈಲೂ ‘ಹಿಮಾಗ್ನಿ’. ಪ್ರತಿಯೊಬ್ಬರ ಕೈಲೂ ‘ಉಡುಗೊರೆ’, ‘ಅಮ್ಮ ಸಿಕ್ಕಿದ್ಲು’ ಮತ್ತು ಸಿಡಿಗಳು.
Home About Us Gallery Books Feedback Prarthana Contact Us

ಬಸವ ಕಲ್ಯಾಣದಿಂದ ನಡೆದು ಅಖಿಲೇಶ್ ಯಾದವ್‌ನ ಸೇರುತ್ತಾನಾ ರಾಮುಲು?

ಹೇವರಿಕೆ!

ಭಿನ್ನಮತ, ಮನ ಒಲಿಕೆ, ಹೈಕಮ್ಯಾಂಡ್‌ನ ನಿಲುವು, ನಾಯಕತ್ವದ ಪ್ರಶ್ನೆ, ರೆಸಾರ್ಟ್ ರಾಜಕೀಯ ಈ ತರಹದ ಸುದ್ದಿಗಳನ್ನು ದಿನ ಪತ್ರಿಕೆಗಳಲ್ಲಿ ಓದುವಾಗ ನಿಮಗೂ-ನನಗೂ ಮೂಡಬಹುದಾದ ಒಂದೇ ಭಾವನೆಯೆಂದರೆ ಹೇವರಿಕೆ. As a state, ನಮಗೆ ಆಳಲಿಕ್ಕೆ ಒಂದು ಸರ್ಕಾರ, ಒಂದು ಪಕ್ಷ ಬೇಕು: ಸದ್ಯಕ್ಕೆ ಬಿಜೆಪಿಗೆ ಒಬ್ಬ ಮುಖ್ಯಮಂತ್ರಿ ಬೇಕು. ಈಗಿರುವಾತ ಸದಾನಂದ ಗೌಡ. ಆಯಿತು, ಅಲ್ಲಿಂದ ಮಾತು ಮುಂದಕ್ಕೆ ಹೋಗಬೇಕಲ್ಲ? ಆದರೆ ಮತ್ತೆ ಮತ್ತೆ ಯಡಿಯೂರಪ್ಪನವರನ್ನು ಅಧಿಕಾರಕ್ಕೆ ತರುವ, ಅದಕ್ಕಾಗಿ ಶಾಸಕ-ಮಂತ್ರಿಗಳನ್ನು ರೆಸಾರ್ಟಿಗೆ ಒಯ್ಯುವ, ಹೈಕಮ್ಯಾಂಡನ್ನು ದಿನಕ್ಕೊಮ್ಮೆ ಎತ್ತು ಬೆದರಿಸಿದಂತೆ ಬೆದರಿಸುವ, ಹೈಕಮ್ಯಾಂಡು ಕೂಡ ಬೆದರಿಯೂ ಬೆದರದಂತೆ ವರ್ತಿಸುವ ಅಸಹ್ಯಕರ ಪರಿಸ್ಥಿತಿಯನ್ನು ಇವತ್ತು ನೋಡುತ್ತಿದ್ದೇವೆ.

ಈ ಬಿಜೆಪಿಯವರು ಮೂಲತಃ ಯಾರು? ಗೋವು, ರಾಮಮಂದಿರ, ಇಂಡಿಯಾ ಈಸ್ ಷೈನಿಂಗ್ ಅಂತ ಹೊರಟವರು. ಕಡೆಗೆ ತಲುಪಿದ್ದೆಲ್ಲಿಗೆ? ಡಿನೋಟಿಫಿಕೇಶನ್ ಕೇಸ್, ರೇಪ್ ಕೇಸ್, ಗಣಿ ಕೇಸ್, ಬಹಿರಂಗ ಚುಂಬನ ಹಗರಣ, ಬ್ಲೂಫಿಲ್ಮ್ ವೀಕ್ಷಣೆ ಹಗರಣ- ಇವುಗಳಿಗೆ. `ಮಾತೆಯರ` ಪಾರ್ಟಿಯಾಗಿ ಹೊರ ಹೊಮ್ಮಿದ ಬಿಜೆಪಿ ಕಡೆಗೆ ಕರ್ನಾಟಕದಲ್ಲಿ ಅನಾವರಣಗೊಂಡದ್ದು ಶುದ್ಧ \'ಮಾದರ್‌ಛೋದ್‌\' ಪಕ್ಷವಾಗಿ.

ಇವರೆಲ್ಲರ ಮಧ್ಯದಲ್ಲೇ ಇದ್ದು, ಇದರ ಗೆಲುವಿಗೆ ಕೊಳ್ಳೇಗಾಲದಿಂದ ಬೀದರ್ ತನಕ ಪ್ರತೀ ಕ್ಷೇತ್ರಕ್ಕೂ ಹೆಲಿಕಾಪ್ಟರು ಕಳಿಸಿ ಅಜಮಾಸು ಇನ್ನೂರು ಕೋಟಿ ಹಂಚಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಕಾರಣರಾಗಿದ್ದು ನಾವು ಅಂತ ಹೇಳಿಕೊಂಡ ಶ್ರೀರಾಮುಲು. ಆಮೇಲೆ `ಆತ್ಮಾಭಿಮಾನ`ಕ್ಕೆ ಧಕ್ಕೆ ಬಂತು ಎಂದು ಸೆಟೆದುಕೊಂಡು ಬಿಜೆಪಿಯಿಂದ ಹೊರ ನಡೆದ. ಮಾರನೆಯ ದಿನವೇ ರೆಡ್ಡಿಯ ಬಂಧನವಾಗದೆ ಹೋಗಿದ್ದರೆ ಬಳ್ಳಾರಿ ಸೆಕ್ಟರ್‌ನ ರಾಜಕಾರಣ-ಕೊಂಚ ಮಟ್ಟಿಗೆ ರಾಜ್ಯದ ರಾಜಕಾರಣ ಬೇರೆಯದೇ ತಿರುವು ಪಡೆಯುತ್ತಿತ್ತು. ಆದರೆ ಶ್ರೀರಾಮುಲು ಮೂಲಕ ಕಟ್ಟಕಡೆಯ ತನಕ ಚಂಚಲಗೂಡಾ ಜೈಲಿನಲ್ಲಿದ್ದುಕೊಂಡೇ ಬಿಜೆಪಿಯೊಂದಿಗೆ ಸಂಧಾನ, armtwsting ಎಲ್ಲವನ್ನೂ ಮಾಡಿದ ರೆಡ್ಡಿ ಕಡೆಗೆ ರಾಮುಲುವನ್ನು ಚುನಾವಣೆಗೆ ಇಳಿಸಿಯೇ ಬಿಟ್ಟ.

ಶ್ರೀರಾಮುಲುವನ್ನು ನಾನು ಚಿಕ್ಕಂದಿನಿಂದ ನೋಡುತ್ತ ಬಂದಿದ್ದೇನೆ. ಅವನು ದೈತ್ಯ ತಾಕತ್ತಿನ ಕೆಲಸಗಾರ. ಏನನ್ನು ವಹಿಸಿದರೂ ಹಿಂದೆ ಮುಂದೆ ಯೋಚಿಸದೆ, ಅದು ಜನಾರೆಡ್ಡಿ ಮಾತಾದರಂತೂ ಶಿರಸಾವಹಿಸಿ ಮಾಡುತ್ತಾನೆ. ಬೀದಿಯಲ್ಲಿ ನಿಂತು ಬಡಿದಾಡಿದ. ಮುಂಡ್ಲೂರು ಚಿಟ್ಟಿಯ ತಲೆ ಬುರುಡೆ ಬಿಚ್ಚಿ ಹೋಗುವಂತೆ ಬಡಿದ. ತನ್ನ ಅಂಗೈಗೆ ಹೊಲಿಗೆ ಬೀಳುವ ಮಟ್ಟಕ್ಕೆ ಮಧ್ಯ ಬೀದಿಯಲ್ಲಿ ಓಡಾಡಿಸಿ ಬಡಿದ. ಅದೇ ಮುಂಡ್ಲೂರು ತಂಡದ ಬೆಂಬಲವಿಟ್ಟುಕೊಂಡು ಅನಿಲ್‌ಲಾಡ್ ಚುನಾವಣೆಯಲ್ಲಿ ಹಣ ಹಂಚಲು ನಿಂತರೆ, ಅವರ ಕಡೆಯವರನ್ನ ಖುದ್ದಾಗಿ ತಾನೇ ಹಿಡಿದು ಬಡಿದ. ಅದೆಲ್ಲ ರೌಡಿಯಿಸಂನಂತೆ ಕಂಡಿತ್ತಾದರೂ, ಅವತ್ತಿಗೆ ಬಳ್ಳಾರಿಯಲ್ಲಿ ಹಾಗೆ ಫ್ಯೂಡಲ್ ಶಕ್ತಿಗಳಿಗೆ ಉತ್ತರ ನೀಡುವುದು ಅನಿವಾರ್ಯವಾಗಿತ್ತು.

ಆದರೆ ಶ್ರೀರಾಮುಲುವಿನ ತಾಕತ್ತು ಅಲ್ಲಿಗೇ ಸೀಮಿತವಾಗಲಿಲ್ಲ. ಅವನ ಅಲೆದಾಟ, ಜನರೊಂದಿಗೆ ಬೆರೆಯುವಿಕೆ, ಹುಡುಗರನ್ನು ಹಚ್ಚಿಕೊಳ್ಳುವುದು, ಯಾವ ಜಿಲ್ಲೆಗೆ ಕಳಿಸಿದರೆ ಆ ಜಿಲ್ಲೆಯ ದುರ್ಬಲರಿಗೆ ನೆರವಾಗುವುದು, ಅಲ್ಲೂ ಹುಡುಗರನ್ನು ಸಂಘಟಿಸುವುದು, ಪ್ರತಿಯೊಬ್ಬರೊಂದಿಗೂ ತುಂಬ ವಿಧೇಯನಾಗಿ ಮಾತನಾಡುವುದು- Yes, ಅವನೊಬ್ಬ master organiser. ಇದನ್ನು ಮೊನ್ನೆ ನಿತಿನ್ ಗಡ್ಕರಿಯೇ ಬಹಿರಂಗವಾಗಿ ಒಪ್ಪಿಕೊಂಡರು.

ಇದರ ಜೊತೆಗೆ ಕೆಲವು ವಿಲಕ್ಷಣಗಳನ್ನೂ ರಾಮುಲು ಮಾಡಿದ. ಇದ್ದಕ್ಕಿದ್ದಂತೆ ತಲೆ ಬೋಳಿಸಿಕೊಂಡ. ಚಪ್ಪಲಿ ಬಿಟ್ಟ. ಬರಿಗಾಲಲ್ಲಿ ಊರೂರು ಅಲೆದ. ನೆಲದ ಮೇಲೆ ಮಲಗುವ, ಕೇವಲ ಧಾನ್ಯ ತಿನ್ನುವ ಶಪಥ ಮಾಡಿದ. \'ಹೋಗು ಮೈಸೂರಿಗೆ\' ಅಂದರೆ ಅಲ್ಲಿರುವ ನಾಯಕರನ್ನೆಲ್ಲ ಸಂಘಟಿಸಿ ಚಾಮುಂಡಿ ಬೆಟ್ಟ ಹತ್ತಿದ. ಯಾರೋ ಒಮ್ಮೆ ಬರೆದಿದ್ದರು, \'ರಾಮುಲುಗೆ ಏಡ್ಸ್ ಇದೆ\' ಅಂತ. ನಾಲ್ಕು ಮಕ್ಕಳ ತಂದೆ, ಆರಡಿ ಮೀರಿದ ದೈತ್ಯ ದೇಹಿ ಅವನು. ಉಳಿದೆಲ್ಲ ಮೆಟ್ಟಿಲ ಮೇಲೆ ತೇಕುತ್ತಿದ್ದರೆ ಸರಾಗವಾಗಿ ಚಾಮುಂಡಿ ಬೆಟ್ಟ ಹತ್ತಿ ನಿಂತಿದ್ದ. ಮೊನ್ನೆ ಉಸ್ಸೆನ್ನದೆ ಗದುಗಿನಲ್ಲಿ ಉಪವಾಸ ಮಾಡಿದ. ಇದೆಲ್ಲವನ್ನೂ ಅವನು ರೆಡ್ಡಿಯ ಅಪ್ಪಣೆಯಂತೆ ಮಾಡುತ್ತಾನಾ? ಅದರಲ್ಲಿ ಅನುಮಾನವೇನಿದೆ?

ಈಗ ಇನ್ನೊಂದು ಭಯಂಕರ ಸರ್ಕಸ್ಸಿಗೆ ಕೈ ಹಾಕಿದ್ದಾನೆ.

ಬಸವಕಲ್ಯಾಣದಿಂದ ಬೆಂಗಳೂರಿಗೆ 839 ಕಿಲೋಮೀಟರುಗಳ 54 ದಿನಗಳ ಪಾದಯಾತ್ರೆ ಘೋಷಿಸಿದ್ದಾನೆ. ಇದು ಕೆಟ್ಟ ಬಿಸಿಲು ಕಾಲ. ಆ ಸೀಮೆಯಂತೂ ಬೆಂಕಿಯುಂಡೆ. ದಾರಿಯುದ್ದಕ್ಕೂ ಬರ ಮಾತ್ರ ಸ್ವಾಗತಿಸುತ್ತದೆ. ಆದರೆ ಶ್ರೀರಾಮುಲು ಎಂಥ ಹಟಮಾರಿ, ಸಾಹಸಿ ಮತ್ತು ದೈತ್ಯ ಎಂಬುದು ನನಗೆ ಗೊತ್ತು. ಈ ತರಹದ ಮ್ಯಾರಥಾನ್ ನಡಿಗೆಗಳು ಮಾತ್ರ ಒಬ್ಬ ನಿಜವಾದ ಜನ ನಾಯಕನನ್ನು ಸೃಷ್ಟಿಸಬಲ್ಲವು ಎಂಬುದಕ್ಕೆ ಇತಿಹಾಸದಲ್ಲಿ ಮಾವೋ, ಮಹಾತ್ಮ ಗಾಂಧಿ, ಜಾರ್ಜ್ ಫರ್ನಾಂಡಿಸ್ ಮತ್ತು ವೈ.ಎಸ್.ರಾಜಶೇಖರ ರೆಡ್ಡಿ ಇದ್ದಾರೆ. ಬೆಂಗಳೂರಿನಿಂದ ಬಳ್ಳಾರಿಗೆ ನಡೆದ ಕಾಂಗ್ರೆಸ್ಸಿಗರು ಡೊಳ್ಳು ಕುಣಿತ, ಗೊರವರ ನೃತ್ಯ ಅಂತ ಕೋತಿಯಾಟ ಆಡಿ, ಸಿಎಂ. ಇಬ್ರಾಹಿಂರಂತಹ ಬಾಯಿ ಬಡುಕರನ್ನು ಮುಂದೆ ಬಿಡದೆ ಹೋಗಿದ್ದಿದ್ದರೆ ಈ ಕಾಲ್ನಡಿಗೆಯೂ ವ್ಯರ್ಥ ಹೋಗುತ್ತಿರಲಿಲ್ಲ. ಮೊನ್ನೆ ಅನೇಕ ತಿಂಗಳುಗಳ ನಂತರ ಟೆಲಿಫೋನಿಗೆ ಸಿಕ್ಕ ಶ್ರೀರಾಮುಲುವಿಗೆ ನಾನು ಹೇಳಿದ್ದಿಷ್ಟು:

\"ನಡೆಯುವ ನಿರ್ಧಾರ ಒಳ್ಳೆಯದು. ನಾಯಕ ರೂಪುಗೊಳ್ಳುವುದೇ ಹಾಗೆ. ಸಾವಿರಾರು ಕಿಲೋಮೀಟರು ನಡೆದ ವೈ.ಎಸ್.ರಾಜಶೇಖರ ರೆಡ್ಡಿಯವರನ್ನು ನಾನು ಸಂದರ್ಶಿಸಿದ್ದೆ. ಆತನಲ್ಲಿ ಆತನ ವ್ಯಕ್ತಿತ್ವದಲ್ಲೇ ಒಂದು ಬದಲಾವಣೆ ಬಂದಿತ್ತು. ಅದನ್ನು ಕಾಲ್ನಡಿಗೆ ಮತ್ತು ಜನ ಸಂಪರ್ಕ ಆತನಲ್ಲಿ ತಂದಿತ್ತು. ಆದರೆ ನೀನು ಬಸವಕಲ್ಯಾಣದಿಂದ ಬೆಂಗಳೂರಿಗೆ ಯಾತಕ್ಕೆ ನಡೆಯುತ್ತಿದ್ದೀಯ? ಆ ಬಗ್ಗೆ ನಿನಗೆ clarity ಇದೆಯಾ? ಇರಬೇಕು. ನೋಡೂ, ಉತ್ತರ ಕರ್ನಾಟಕ ಎಂಬ ಶಾಪಗ್ರಸ್ತ ಸೀಮೆಗೆ ಇವತ್ತು ನಾಯಕನೇ ಇಲ್ಲ. ಪ್ರಾಶಸ್ತ್ಯವಂತೂ ಇಲ್ಲವೇ ಇಲ್ಲ. ಅಲ್ಲಿಂದ ಬಂದವರು ಮಂತ್ರಿಗಳಾದರು, ಮುಖ್ಯಮಂತ್ರಿಗಳೂ ಆದರು. ಬಿಜೆಪಿಗೆ ಅತಿ ಹೆಚ್ಚಿನ ಶಾಸಕರನ್ನು ಉತ್ತರ ಕರ್ನಾಟಕ ಕೊಟ್ಟಿತು. ಆದರೆ ಇವರು ಆ ಸೀಮೆಗೆ ಕೊಟ್ಟದ್ದೇನು? ಬರ ಮತ್ತು ಪ್ರವಾಹ ಎರಡೂ ಕಾಡಿದ್ದು ಉತ್ತರ ಕರ್ನಾಟಕವನ್ನೇ. ನೀನು ಅದನ್ನೊಂದು ಮುಖ್ಯ agenda ಆಗಿ ತೆಗೆದುಕೊಂಡು, ಉತ್ತರ ಕರ್ನಾಟಕಕ್ಕೆ ಸರಿಯಾದ ಪ್ರಾತಿನಿಧ್ಯ ಅನುಕೂಲ ಮತ್ತು ಅವಕಾಶ ನೀಡದಿದ್ದರೆ ನಾನು ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಬೇಕೆಂಬ ಹೋರಾಟ ಆರಂಭಿಸುತ್ತೇನೆ ಎಂದು ಹಟ ಹಿಡಿದು, ಹಾಗಂತ ಘೋಷಿಸಿ ಈ ಪಾದಯಾತ್ರೆ ಆರಂಭಿಸದೆ ಇದ್ದರೆ, ಅಷ್ಟುದ್ದ ನಡೆದೂ ಅರ್ಥವಿಲ್ಲದಂತಾಗಿ ಬಿಡುತ್ತದೆ. ಬರೀ ಆತ್ಮಾಭಿಮಾನದ issue ಬಹಳ ದಿನ ಬದುಕುವುದಿಲ್ಲ. ಹಿಂದುಳಿದವರನ್ನು ನೀನು ಸಂಘಟಿಸ ಬಲ್ಲೆ. ಆದರೆ ಉತ್ತರ ಕರ್ನಾಟಕದ issue ಬಲವಾಗಿ ಕೈಗೆತ್ತಿಕೊಂಡೆಯಾದರೆ ಸಮಸ್ತ ಜನತೆ ನಿನ್ನ ಬೆನ್ನಿಗೆ ನಿಲ್ಲುತ್ತಾರೆ.\"

ಮರುದಿನ ಶ್ರೀರಾಮುಲು ನೀಡಿದ ಹೇಳಿಕೆಯಲ್ಲಿ ಉತ್ತರ ಕರ್ನಾಟಕದ ಪ್ರಸ್ತಾಪವಿತ್ತು. ನಾನು ಹೇಳಿದ್ದು ಅವನಿಗೆ ಎಷ್ಟರ ಮಟ್ಟಿಗೆ ಮನಸ್ಸಿಗೆ ಹೋಗಿದೆಯೋ ತಿಳಿಯದು. ಈ ನನ್ನ ಬಳ್ಳಾರಿಯ ಸ್ನೇಹಿತರಿಗೆ ಇದಕ್ಕಿಂತ ಹೆಚ್ಚಿನದನ್ನು ಹೇಳಲಾರೆ. ಹೇಳಕೂಡದು ಅಂತಲೂ ನಿರ್ಧರಿಸಿದ್ದೇನೆ.

ನನಗೆ ಗೊತ್ತು.

ಶ್ರೀರಾಮುಲು-ಅಖಿಲೇಶ್ ಯಾದವ್‌ನೊಂದಿಗೆ ಮಾತನಾಡುತ್ತಿದ್ದಾನೆ. ಹಿಂದುಳಿದವರ, ಅದರಲ್ಲೂ ನಾಯಕರ-ಕುರುಬರ ಮತ್ತು ಲಮಾಣಿಗರ ಮತ ಸೆಳೆಯಬಲ್ಲ ಶ್ರೀರಾಮುಲು ನಾಳೆ ಸ್ವತಂತ್ರವಾಗಿ ಒಂದು ಪಕ್ಷ ಕಟ್ಟಿದರೆ ಅದು ದೊಡ್ಡ ಯಶಸ್ಸು ಕಾಣುತ್ತದೆ ಅಂತ ಭವಿಷ್ಯ ನುಡಿಯುವುದು ಕಷ್ಟ. ದೇವರಾಜ ಅರಸು, ಮನೇಕಾ ಗಾಂಧಿ ಮುಂತಾದವರೆಲ್ಲ ಹೊಸ ಪಕ್ಷ ಕಟ್ಟಲು ಹೋಗಿ ಮಕಾಡೆ ಮಲಗಿದ್ದನ್ನು ಇತಿಹಾಸ ನೋಡಿದೆ. ಆದರೆ ಶ್ರೀರಾಮುಲು ಮೂಲಕ ಅಖಿಲೇಶ್ ಯಾದವ್ ಜೊತೆಗೆ ಬಾಂಧವ್ಯ ಕುದುರಿಸಿ, ಜನಾರ್ದನ ರೆಡ್ಡಿ ಇಲ್ಲಿ ಮುಲಾಯಂ ಅವರ ಸಮಾಜವಾದಿ ಪಕ್ಷದ ಸೈಕಲ್ಲು ಓಡಾಡಿಸಿ ಹೇಗಾದರೂ ಒಂದು ಮೂವತ್ತು ಸೀಟು ಕಬ್ಜಾ ಹಿಡಿಯುವ ಆಲೋಚನೆಯಲ್ಲಿದ್ದಾನಾ?

ಅಖಿಲೇಶ್ ಯಾದವ್ ನಿಜಕ್ಕೂ ತಾಕತ್ತಿನ ಹುಡುಗ. ಪ್ರತಿ ಕ್ಷೇತ್ರವನ್ನೂ ಸೈಕಲ್ಲು ಹತ್ತಿಯೇ ತಿರುಗಿ ಮತ ಕೇಳಿ ಸಮಾಜವಾದಿ ಪಕ್ಷವನ್ನು ಅಧಿಕಾರಕ್ಕೆ ತಂದ ಹುಡುಗ. ಅದೇ ತಂತ್ರವನ್ನು ರಾಮುಲು ಅನುಕರಿಸುತ್ತಿದ್ದರೆ ಅದರ ಪರಿಣಾಮ ಏನಾದೀತೋ ನೋಡಬೇಕು.

ಇನ್ನೊಂದು ಸುದ್ದಿ ಯಡಿಯೂರಪ್ಪನವರದು. ಅವರ ಮತ್ತು ಅವರ ಶಿಷ್ಯರ ನಡಾವಳಿ ನೋಡುತ್ತಿದ್ದರೆ, ಯಡಿಯೂರಪ್ಪ ಕಾಂಗ್ರೆಸ್ಸಿಗೆ ಹೋಗುತ್ತಾರಾ? ಹಾಗಂತ ಅನ್ನಿಸುತ್ತಿದೆ. ಹೋದರೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, ಸಿದ್ರಾಮಯ್ಯನನ್ನು ಡೆಪ್ಯುಟಿಯನ್ನಾಗಿ ಮಾಡಲಾಗುವುದು ಎಂಬ ಸೂಚನೆಯನ್ನು ಕಾಂಗ್ರೆಸ್ ನೀಡಿದೆಯಂತೆ.

ಮೂವತ್ತು-ನಲವತ್ತು ವರ್ಷ ಕಾಂಗ್ರೆಸ್ ವಿರುದ್ಧ ಹೋರಾಡಿ, ನಿಜಕ್ಕೂ ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ, ಮೂರು ವರ್ಷ ಯಥೇಚ್ಛವಾಗಿ ಅಧಿಕಾರದಲ್ಲಿದ್ದು ಮಿಂಡ್ಲು ಮೆರೆದು, ಈಗ ಕೇವಲ ಮುಖ್ಯಮಂತ್ರಿ ಪದವಿ ಸಿಗುತ್ತಿಲ್ಲವೆಂಬ ಕಾರಣಕ್ಕಾಗಿ ಕಾಂಗ್ರೆಸ್ಸಿಗೆ, `ಅದೂ ಕಾಂಗ್ರೆಸ್ಸಿಗೆ` ಹೋದರೆ ಯಡಿಯೂರಪ್ಪ ಅಲ್ಲಿಗೆ ತಮ್ಮ ರಾಜಕಾರಣದ ಆತ್ಮಹತ್ಯೆಯ death note ಬರೆದಿಟ್ಟಂತೆಯೇ.

ಒಟ್ಟಿನಲ್ಲಿ ಇನ್ನೊಂದು ವರ್ಷದ ಮೇಲಾದರೂ ಚುನಾವಣೆ ನಡೆಯಬೇಕು. ಅದಕ್ಕಾಗಿ ಒಲೆ ಕುದಿಯಬೇಕು. ನಿಧಾನವಾಗಿ ಅಲ್ಲಲ್ಲಿ ಒಲೆ ಹತ್ತುತ್ತಿರುವ ಸೂಚನೆಗಳಿವೆ. ಇದೆಲ್ಲದರ ಮಧ್ಯೆ ಬರ, ಪರಿಹಾರ, ನಾಗರ ಹೊಳೆಯ ಬೆಂಕಿ, ವಕ್ಫ್‌ನ ಭಯಾನಕ ಹಗರಣ- ಕೇಳುವವರ‍್ಯಾರು?

ಸದಾನಂದ ಗೌಡರು ನಗುತ್ತಲೇ ಇದ್ದಾರೆ.

Manufacturing defect.

ರವಿ ಬೆಳಗೆರೆ

Read Archieves of 04 April, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books