Ravi Belagere
Welcome to my website
ಬಹಳ ದಿನಗಳ ನಂತರ ಈ ತರಹದ್ದೊಂದು mega function ಏರ್ಪಡಿಸಿದ್ದೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ನೀವೆಲ್ಲ ಬಂದಿರಿ. ನನ್ನ ಬರವಣಿಗೆ, ತಿರುಗಾಟ, ಮುದ್ರಣ, ಬಣ್ಣ, ಈ ಸಿಂಗಾರ-ಬಂಗಾರ- ಇವೆಲ್ಲವೂ ನಿಮಗಾಗಿಯೇ ಅಲ್ಲವೆ? ಎಲ್ಲಿಯ ರಾಯಚೂರು, ಕೊಪ್ಪಳ, ಯಾದಗಿರಿ, ಗುಲಬರ್ಗ, ಚಿಂಚನ ಸೂರು, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ಮಂಗಳೂರು-ಎಲ್ಲೆಲ್ಲಿಂದ ಬಂದಿದ್ದರು ಓದುಗರು!. ಪ್ರತಿಯೊಬ್ಬರ ಕೈಲೂ ‘ಹಿಮಾಗ್ನಿ’. ಪ್ರತಿಯೊಬ್ಬರ ಕೈಲೂ ‘ಉಡುಗೊರೆ’, ‘ಅಮ್ಮ ಸಿಕ್ಕಿದ್ಲು’ ಮತ್ತು ಸಿಡಿಗಳು.
Home About Us Gallery Books Feedback Prarthana Contact Us

ಕರಾರುವಾಕ್ಕಾಗಿ ಐದನೇ ವರ್ಷ ಮೈ ಕೊಡವಿ ನಿಂತ ಹಳೆಯ ಹುಲಿಯ ಪಕ್ಕ ನಿಂತು...

ಹಳೆಯ ಹುಲಿ ಮೈ ಕೊಡವಿದೆ.

ನನ್ನ ಹಿರಿಯ ಮಿತ್ರರು, ನನ್ನ ಪಾಲಿಗೆ ಮನೆಯ ಹಿರಿಯರು, ನನ್ನನ್ನು ತಮ್ಮನಂತೆ ಕಾಣುವವರೂ ಆದ ವಿಜಯ ಸಂಕೇಶ್ವರರು \'ವಿಜಯವಾಣಿ\' ದಿನಪತ್ರಿಕೆ ಆರಂಭಿಸಿದ್ದಾರೆ. ನಾಳೆ ಏಪ್ರಿಲ್ ಒಂದಕ್ಕೆ ಉದ್ಘಾಟನೆ. ಅಚ್ಚರಿಯೆಂದರೆ, ಮೊದಲ ದಿನದ ಪ್ರಿಂಟ್ ಆರ್ಡರೇ ಒಂದು ಲಕ್ಷದ ಎಂಬತ್ತು ಸಾವಿರ ಪ್ರತಿಗಳು. ಮೊದಲು ಮೂರು ಕಡೆ ಮುದ್ರಣ: ಆಮೇಲೆ ಒಂಬತ್ತು ಎಡಿಷನ್. ಪತ್ರಿಕೆ ಆರಂಭವಾಗುತ್ತಿರುವುದೇ ಕನ್ನಡ ಪತ್ರಿಕೆಗಳ ಪೈಕಿ ಮೂರನೆಯ ಹಿರಿಯ ಪತ್ರಿಕೆಯಾಗಿ: ಪ್ರಸಾರ ಸಂಖ್ಯೆಯ ದೃಷ್ಟಿಯಿಂದ.

ಎರಡು ದಿನದ ಹಿಂದೆ ಬರೆಯುತ್ತ ಕೂತವನ ಬಳಿಗೆ ನನ್ನ ಸಂಸ್ಥೆಯ ಅತಿ ಹಿರಿಯ, ಹಳೆಯ ಸೆಕ್ಯುರಿಟಿ ಗಾರ್ಡ್ ಸಿದ್ದಪ್ಪ ಬಂದು \"ಆ ವಿಆರ್‌ಎಲ್‌ನೋರು ಬಂದಿದ್ದಾರೆ. ಒಳಕ್ಕೆ ಬಿಡಲಾ?\" ಅಂದ. ಆಗಿರಬಹುದಾದ ಅನಾಹುತದ ಅರಿವು ನನಗಾಯಿತು. ಎದ್ದು ನಾನೇ ಬಾಗಿಲಿಗೆ ಓಡಿದೆ. ಇದು ಶಾಲೆಯ ಅಡ್ಮಿಷನ್ ಸಮಯ. ಹೊತ್ತು ಗೊತ್ತಿಲ್ಲದೆ ಸೀಟಿಗೆ, ಅಡ್ಮಿಷನ್ನಿಗೆ, ಕನ್ಸೆಷನ್ನಿಗೆ ಅಂತ ಜನ ಬರುತ್ತಿರುತ್ತಾರೆ. ನಾನು ಬೇರೆ ಶಾಸ್ತ್ರಿಗಳ ಪುಸ್ತಕ ಮುಗಿಸುವ ಕೈಂ ಕರ್ಯದಲ್ಲಿ ತೊಡಗಿದ್ದೇನೆ. ನಿವೇದಿತಾ ಮೆಟ್ಟಿಲು ಇಳಿಯುವಾಗ ಜಾರಿ ಪಾದದ ಲೆಗಮೆಂಟ್ ಟೇರ್ ಆಗಿ ಸರಾಗವಾಗಿ ಓಡಾಡದಂತಾಗಿದ್ದಾಳೆ. ಹೀಗಾಗಿ ಮೇಲಕ್ಕೆ ಯಾರನ್ನೂ ಬಿಡಬೇಡ ಎಂದು ಸಿದ್ದಪ್ಪನಿಗೆ ಕಟ್ಟಪ್ಪಣೆ. ಅವನು ಸಹಜವಾಗಿಯೇ ಸಂಕೇಶ್ವರರನ್ನು ತಡೆದಿದ್ದಾನೆ.

ಇಲ್ಲದಿದ್ದರೆ, ಅವರು ಯಾವತ್ತೂ ಅವರಿವರನ್ನು ಕೇಳುವುದಿಲ್ಲ. ಫೋನು ಮಾಡಿ ಮೊದಲೇ ತಿಳಿಸುವುದೂ ಇಲ್ಲ. ಸುಮ್ಮನೆ ನಡೆದು ಛೇಂಬರಿಗೆ ಬಂದು ಕುಳಿತುಬಿಡುತ್ತಾರೆ. ಆ ಸಲುಗೆ ಅವರಿಗೆ ಮೊದಲಿನಿಂದಲೂ ನನ್ನೊಂದಿಗೆ ಇದೆ. \"ಸಿದ್ದಪ್ಪಾ, ಎಂಥ ಕೆಲಸ ಮಾಡಿದೆ. ಸಾಹೇಬರನ್ನು ನಿಲ್ಲಿಸಿಬಿಟ್ಟೆಯಲ್ಲೋ\" ಎಂದು ಬೈದೆ.

\"ಅದಕ್ಕೇ ನಿಮಗೆ management ಗೊತ್ತಿಲ್ಲ ಅನ್ನೋದು. ಅವನ ಕೆಲಸ ಅವನು ಮಾಡಿದ್ದಾನೆ. You must give him a medal\" ಅಂದರು ಸಂಕೇಶ್ವರ್.
ಅವರ ಕೈಯಲ್ಲಿ \'ವಿಜಯವಾಣಿ\' ಪತ್ರಿಕೆಯ ಬಿಡುಗಡೆಯ ಅತ್ಯಂತ ಸರಳವಾದ ಆಹ್ವಾನ ಪತ್ರಿಕೆಯಿತ್ತು. ಅದರಲ್ಲಿ ಪತ್ರಿಕೆಯ ಬಿಡುಗಡೆಯ ಸಮಯ, ದಿನಾಂಕ, ಸ್ಥಳ ಅಷ್ಟೇ ನಮೂದಾಗಿದ್ದವು.

\"ಮತ್ತೇನಿಲ್ಲ, ಪೇಜಾವರ ಶ್ರೀಗಳಿರ‍್ತಾರೆ. ಸುತ್ತೂರು ಶ್ರೀಗಳಿರ‍್ತಾರೆ. ನೀವಿರ‍್ತೀರಿ! ಬಿಡುಗಡೆ ಮಾಡ್ತೀರಿ\" ಅಂದಾಗ ಅಕ್ಷರಶಃ ನಾನು ಕಣ್ಣೀರಾಗಿಬಿಟ್ಟೆ.

ಎಷ್ಟೋ ತಿಂಗಳ ಹಿಂದಿನ ಮಾತು.

\"ರವಿಯವರೇ, ಆಗಸ್ಟ್ ಹದಿನೈದಕ್ಕೆ ಪತ್ರಿಕೆ ಬಿಡುಗಡೆ. ಅವತ್ತಿನ ಸಮಾರಂಭಕ್ಕೆ ನೀವು ಮುಖ್ಯ ಅತಿಥಿಯಾಗಿ ಬರ‍್ತೀರಿ. ಬರ‍್ಕೋರಿ\" ಅಂದ ಸಂಕೇಶ್ವರರು ತಮ್ಮ ಕಿಸೆಯೊಳಗಿನ ಪುಟ್ಟ ತಾತ್ಕಾಲಿಕ ಡೈರಿಯಲ್ಲಿ ಅದನ್ನು ಬರೆದಿಟ್ಟುಕೊಂಡಿದ್ದರು.

ಅವರು \'ವಿಜಯ ಕರ್ನಾಟಕ\'ವನ್ನು \'ಟೈಮ್ಸ್‌\' ಗ್ರೂಪಿಗೆ ಪರಭಾರೆ ಮಾಡಿದಾಗ ನಾನು ತುಂಬ ಅಸಮಾಧಾನಗೊಂಡಿದ್ದೆ. ನನಗೆ ಅವರ ಪರಿಚಯವಾದದ್ದೇ \'ವಿ.ಕ\' ಆರಂಭದ ನಂತರ. ಆ ಮೇಲೆ ಹತ್ತು-ಹನ್ನೆರಡು ವರ್ಷದ ಗೆಳೆತನ Time tested ಎಂಬ ರೀತಿಯಲ್ಲಿ ಬೆಳೆಯಿತು. ಅವರು ನನಗೆ ಯಾವತ್ತಿಗೂ ಹಣ ಕೊಡಲಿಲ್ಲ. ನಾನು \'ವಿ.ಕ\'ಕ್ಕೆಅಂಕಣ ಬರೆದೆ. ನಾನು ಯಾವತ್ತೂ ಹಣ ಕೊಡಲಿಲ್ಲ. ಅವರು ನನ್ನ \'ಪತ್ರಿಕೆ\'ಯ ಜಾಹಿರಾತು ಹಾಕಿದರು. ಇಂಥವರನ್ನು ನೌಕರಿಗೆ ತೆಗೆದುಕೊಳ್ಳಿ ಎಂದು ನಾನು ಯಾರನ್ನೂ ಶಿಫಾರಸು ಮಾಡಲಿಲ್ಲ. ಇಂಥವರ ಬಗ್ಗೆ ಬರೀಬೇಡಿ ಎಂದು ಅವರು ಎಂದೂ ನನ್ನ ಕೈ ತಡೆಯಲಿಲ್ಲ. ಅವರು ಕೇವಲ ಒಂದು ಲಾರಿ ಖರೀದಿಸಿ, ಇವತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಟ್ರಾನ್ಸ್‌ಪೋರ್ಟ್ ಟೈಕೂನ್. ಅವರೆಡೆಗೆ ನಾನು ಅಚ್ಚರಿ ಪಡಲೇ ಇಲ್ಲ. ಹುಬ್ಬಳ್ಳಿಗೆ ಹೋದಾಗ ಇಬ್ಬರಿಗೂ ಆತ್ಮೀಯರಾದ ಡಾ.ಸತ್ತೂರ್ ಅವರ ಮನೆಯಲ್ಲಿ ಸೇರುತ್ತಿದ್ದೆವು.

\"ನೀವು ನಮ್ಮ ಮನೀಗೆ ಬರಲಿಲ್ಲ. ಬ್ರಾಹ್ಮಣರು ಸತ್ತೂರ್ ಅವರು. ಅವರು ಕರೆದರೆ ಬಂದಿರಿ ನೋಡ್ರಿ`` ಅಂತ ತಮಾಷೆ ಮಾಡುತ್ತಿದ್ದರು ಸಂಕೇಶ್ವರರು.

\"ಇಲ್ಲ ಸರ್, ಊಟದ ಮಟ್ಟಿಗೆ ನಾನು ಹುಬ್ಬಳ್ಳಿಗೆ ಬಂದಾಗ ಬ್ರಾಹ್ಮಣರು ಮತ್ತು ಲಿಂಗಾಯತರು-ಇಬ್ಬರ ಮನೆಗೂ ಬರುವುದಿಲ್ಲ. ಇಲ್ಲಿ ನನ್ನ ಅನ್ನದಾತರು ಬೇರೆಯವರೇ ಇದ್ದಾರೆ. ಪಟ್ಟೇಗಾರರು!\" ಅಂತ ನಗೆಯಾಡಿದ್ದೆ.

ಮಧ್ಯೆ ಸಾಕಷ್ಟು ಕಾಲ ಕಳೆಯಿತು, ಘಟನೆ ನಡೆದವು. \'ವಿ.ಕ\' ಪರಭಾರೆ ಮಾಡುವಾಗ \'ಟೈಮ್ಸ್‌\' ಗ್ರೂಪಿನೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಐದು ವರ್ಷ ಸಂಕೇಶ್ವರರು ಇನ್ನೊಂದು ಪತ್ರಿಕೆ ಮಾಡುವಂತಿರಲಿಲ್ಲ. ಮನಸು ಮಾಡಿದ್ದಿದ್ದರೆ ಇನ್ನೇನೋ ತಂತ್ರ ಬಳಸಿ ಅವರು ಸರೋಗೇಟ್ methodನಲ್ಲಿ ಮಾಡಬಹುದಿತ್ತು. ಆದರೆ \'ಇನ್ನೇನೋ\' ಮಾಡುವುದು ಅವರ ಜಾಯಮಾನದಲ್ಲಿಲ್ಲ. \'ವಿ.ಕ\' ನಿಜಕ್ಕೂ ನಷ್ಟದಲ್ಲಿರಲಿಲ್ಲ: ಮಾರುವಾಗ. ಅದೊಂದು ರೀತಿಯಲ್ಲಿ ತನ್ನದೇ ಭಾರ ತಾಳಲಾಗದೆ ಕುಸಿದ ಸುಮೋ ಪೈಲ್ವಾನನಂತಾಗಿತ್ತು. ಹೀಗಾಗಿ ಅನಿವಾರ್ಯವಾಗಿ ಅದನ್ನು \'ಟೈಮ್ಸ್‌\' ಗ್ರೂಪಿಗೆ ಅವರು ಪರಭಾರೆ ಮಾಡಿದರು: ಖಂಡಿತವಾಗ್ಯೂ ಲಾಭಕ್ಕೆ.

ಆದರೆ ಸಂಕೇಶ್ವರ್, ಕೇವಲ ಲಾಭದಿಂದ ನೆಮ್ಮದಿಗೊಳ್ಳುವ, ಸಮಾಧಾನ ಪಡುವ ಸರಳ ಬಣಜಿಗರಲ್ಲ ಎಂಬುದು ನನಗೆ ಖಂಡಿತ ಗೊತ್ತಿತ್ತು. ಗೆಳೆಯರಿಗೆ ನಾನು ಹೇಳುತ್ತಲೇ ಇದ್ದೆ. The man with come back and with a bigger bang. ಅದಕ್ಕಾಗಿ ಐದು ವರ್ಷ ಕಾಯಬೇಕಾಯ್ತು. ಆದರೆ ಐದು ವರ್ಷ ಹೇಗೆ ಕಳೆದು ಹೋದವು ನೋಡಿ? ಮೊನ್ನೆ ನಾನು ಹುಬ್ಬಳ್ಳಿಗೆ ಹೋದಾಗ ಆಗಲೇ ಪ್ರಿಂಟಿಂಗ್ ಮಷೀನ್ ಸಿದ್ಧಗೊಂಡಿತ್ತು. ಆ ಹೊತ್ತಿಗೆ ಸಂಕೇಶ್ವರರು ಪತ್ರಿಕೆಯ ಟೈಟಲ್ ಹುಡುಕಿಟ್ಟಿದ್ದರು. ತುಮಕೂರಿನಲ್ಲಿ \'ವಿಜಯವಾಣಿ\' ಹೆಸರಿನ ಪತ್ರಿಕೆ ಬಹಳ ಕಾಲದಿಂದ ನಡೆಯುತ್ತಿತ್ತು. ಕಾಂಟ್ರಾಕ್ಟ್‌ನ ಅವಧಿ ಮುಗಿದಿತ್ತಾದರೂ \'ಟೈಮ್ಸ್‌\'ನವರು \'ವಿಜಯ\' ಎಂಬ ಹೆಸರು ಹೊಂದಿರುವ ಪತ್ರಿಕೆ ಮಾಡಬೇಡಿ ಎಂದು ಬೆನ್ನು ಹತ್ತಿದ್ದರು.

\"ನಾನು ಏನೇ ಮಾಡಲಿ, ಕೊನೆ ತನಕ ಎರಡೂ ಪತ್ರಿಕೆ ನನ್ನವೇ ಅಂತಾರೆ ಜನ\" ಎಂದು ತಳ್ಳಿ ಹಾಕಿದ್ದರು ಸಂಕೇಶ್ವರ್.

ಮಾಡುವುದೇ ಖರೇ ಎಂದು ತೀರ್ಮಾನವಾದ ಮೇಲೆ ಸಂಕೇಶ್ವರರು \'ವಿಜಯವಾಣಿ\' ಪತ್ರಿಕೆಯ ಒಂಬತ್ತು ಎಡಿಷನ್‌ಗಳಿಗೆ ಬೇಕಾದ ಸಿಬ್ಬಂದಿ, ಪ್ರಿಂಟಿಂಗ್ ಮಷೀನ್, ಕಚೇರಿಗಳು, ಅದಕ್ಕೆ ಬೇಕಾದ ಫರ್ನೀಚರ್, ಏಜಂಟರ ನೇಮಕಾತಿ, ಡೆಪಾಜಿಟ್ ಸಂಗ್ರಹ ಇತ್ಯಾದಿಗಳನ್ನು ಪ್ರಾರಂಭಿಸಿದರಲ್ಲ?ಅದಕ್ಕಾಗಿ ಅವರು ಹೂಡಿದ ಹಣವೆಷ್ಟು ಗೊತ್ತೆ?

ಇನ್ನೂರು ಕೋಟಿ ರುಪಾಯಿ!

ದಿನಪತ್ರಿಕೆಯೆಂದರೆ ಸುಮ್ಮನೆ ವ್ಯವಹಾರವಲ್ಲ. ಒಂದು ಟೀವಿ ಛಾನಲ್ ಆರಂಭಿಸಲಿಕ್ಕೆ ಇಪ್ಪತ್ತೈದರಿಂದ ಇಪ್ಪತ್ತೆಂಟು ಕೋಟಿ ಸಾಕು ಅನ್ನುತ್ತಾರೆ. ಕೆಲವರು ತಮ್ಮ ಛಾನಲ್ ಮಾರುವಾಗ ಅದನ್ನಷ್ಟೆ ಹೇಳುತ್ತಾರೆ. ಅಷ್ಟಕ್ಕೇ ಮಾರಿ ಕೈ ತೊಳೆದುಕೊಳ್ಳುತ್ತಾರೆ. ಆದರೆ ನಡೆಸುವುದು ಹೇಳಿ? ತಿಂಗಳಿಗೆ ಒಂದು ಛಾನಲ್ ನಡೆಸಲಿಕ್ಕೆ ಕನಿಷ್ಠ ಒಂದು ಕೋಟಿ ರುಪಾಯಿ, ತುಂಬ ಬುದ್ಧಿವಂತನಾಗಿದ್ದ ಪಕ್ಷದಲ್ಲಿ, ಬೇಕು. ಇಲ್ಲದಿದ್ದರೆ, ಖರ್ಚು ಒಂದೂವರೆ ಕೋಟಿ ದಾಟಿ ಬಿಡುತ್ತದೆ. ಅದು ಬಿಡಿ, ಭಯಂಕರ ತಲೆಯುಳ್ಳ ಜರ್ನಲಿಸ್ಟುಗಳು, ಕೋಟ್ಯಂತರ ಹಣ ಹೂಡುವ ಧಣಿಗಳು, ಬ್ರೇಕಿಂಗ್ ನ್ಯೂಸ್ ಅಪ್ಪಳಿಸಿ ಇಡೀ ರಾಜ್ಯವನ್ನೇ ಕಲ್ಲೋಲಗೊಳಿಸುವ ಮಹಾಮಹಿಮರು ಕಡೆಗೆ ಹೋಗಿ ಡೊಗ್ಗುವುದು ಯಾರ ಮುಂದೆ ಗೊತ್ತೆ?

ಚಿಕ್ಕದೊಂದು ಊರಿನ ಕೇಬಲ್ ಆಪರೇಟರನ ಮುಂದೆ!

ಟೀವಿ ಉದ್ಯಮದಲ್ಲಿ ಅದೇ ಒಂದು ಮಾಫಿಯಾ. ಅವರಿಗೆ ತಿಂಗಳಿಗಿಷ್ಟು ಅಂತ ಮುಡಿಪು ಸಲ್ಲಿಸಲೇಬೇಕು, ಛಾನಲ್‌ನ ಒಡೆಯ. ಇಲ್ಲದಿದ್ದರೆ ಮೊದಲ ಹತ್ತು ನಂಬರುಗಳಲ್ಲಿ ಸಿಗುವ ನಿಮ್ಮ TV 9, ನಿಮ್ಮ ಜನಶ್ರೀ, ನಿಮ್ಮ ಸುವರ್ಣ ನಾಳೆಯಿಂದ ಎಂಬತ್ತೇಳನೇ ಸ್ಲಾಟ್‌ನಲ್ಲಿ ಸಿಗುತ್ತದೆ. ಸಿಕ್ಕರೂ ಚಿತ್ರ ಅಸ್ಪಷ್ಟ. ಮಾತು ಕೇಳಿಸದು. ಅದನ್ನು ನೋಡುವವರು ಯಾರು? ನೋಡ ನೋಡುತ್ತ, ನಿಮ್ಮ ಎಲ್ಲ ಜಾಣತನ, ಬ್ರೇಕಿಂಗ್ ನ್ಯೂಸ್, ಮಾತು, ಸೀರಿಯಲ್ಲು ಜನರಿಗೆ ತಲುಪದೇನೇ ಹೋಗಿ TRP ಬಾರದೆ ಇಡೀ ಪ್ರಯತ್ನ ಹಳ್ಳ ಹಿಡಿದು ಹೋಗುತ್ತದೆ. ಈ ಕೇಬಲ್ ಮಾಫಿಯಾ ವಸೂಲಿ ಮಾಡುವ ಹಣ ಕೆಲವು ಕೋಟಿಗಳಲ್ಲಿರುತ್ತದೆ. ಛಾನಲ್ ಮಾಲಿಕ ಪ್ರತೀ ತಿಂಗಳು bleed ಆಗುತ್ತಲೇ ಇರುತ್ತಾನೆ. ಈ ಸಂಗತಿಯನ್ನು ನಿರಾಣಿಯಂಥ `ಅಮಾಯಕ` ಶ್ರೀಮಂತರು ಒಂದು ಛಾನಲ್ ಖರೀದಿಸುವಾಗ ತಿಳಿದುಕೊಂಡಿರುವುದೇ ಇಲ್ಲ.

ಆದರೆ ಸಂಕೇಶ್ವರ್ \'ವಿಜಯವಾಣಿ\'ಯನ್ನು ಎಂಥ ಭದ್ರ ಬುನಾದಿಯ ಮೇಲೆ ಕಟ್ಟತೊಡಗಿದ್ದಾರೆಂದರೆ ಅವರ ಬೆಂಗಳೂರು ಎಡಿಷನ್‌ಗಾಗಿ ಸ್ಥಾಪಿಸಿರುವ ಮುದ್ರಣ ಯಂತ್ರದ ಬೆಲೆ ಹನ್ನೆರಡು ಕೋಟಿ ರುಪಾಯಿ. ಇಪ್ಪತ್ತು ಪುಟ, ಪ್ರತಿ ಪುಟವೂ ಬಣ್ಣ, ಆ ಲೆಕ್ಕದಲ್ಲಿ ಗಂಟೆಗೆ ನಲವತ್ತು ಸಾವಿರ ಪ್ರತಿ ಪ್ರಿಂಟ್ ಮಾಡುವ ಒಂದು ಮಷೀನ್ ಅದು. ಅಂಥ ಎರಡು ಮಷೀನು ಈಗಾಗಲೇ ಬೆಂಗಳೂರಿಗೆ ಬಂದಿವೆ. ಉಳಿದಂತೆ ಏಳು ಕಡೆ ತಲಾ ಆರೂವರೆ ಕೋಟಿ ವೆಚ್ಚದ ಏಳು ಯಂತ್ರಗಳು. ಅವು ಹದಿನಾರು ಬಣ್ಣದ ಪುಟ ಮುದ್ರಿಸುತ್ತವೆ. ಉಹುಂ. ಪೀಣ್ಯದಲ್ಲಿ ಈಗ ಮಾಡಿಕೊಂಡಿರುವುದು ಆರು ಕೋಟಿ ರುಪಾಯಿ ಕೊಟ್ಟು ಖರೀದಿಸಿದ ಚಿಕ್ಕ ಜಾಗ. ತಾತ್ಕಾಲಿಕ ವ್ಯವಸ್ಥೆ. ಇದಕ್ಕಿಂತ ದೊಡ್ಡ ಜಾಗ ಬೇಕು. ಹುಡುಕುತ್ತಿದ್ದೇನೆ ಅಂದರು ಸಂಕೇಶ್ವರ್. ಈಗ \'ಪತ್ರಿಕೆ\'ಗಾಗಿ ಬಾಡಿಗೆ ಪಡೆದಿರುವ ಚಾಮರಾಜಪೇಟೆಯ ಕಟ್ಟಡವೂ ಅಷ್ಟೆ. ಇದೂ ತಾತ್ಕಾಲಿಕ. ಆದರೆ ಇದರ ಭವ್ಯತೆ?

ನನಗೆ ಸಂತೋಷವಾಗಿದ್ದೆಂದರೆ, ಸಂಕೇಶ್ವರರು ಪ್ರತಿಯೊಂದನ್ನೂ ತಾನೇ ಮಾಡುತ್ತೇನೆಂದು ಹೊರಡುವುದಿಲ್ಲ. ತಾವು ಮಾಡಬೇಕಾದುದನ್ನು ಕರಾರುವಾಕ್ಕಾಗಿ ತಾವೇ ಮಾಡುತ್ತಾರೆ. ಆದರೆ ಸರಿಸಮನಾದ ಜವಾಬ್ದಾರಿಯನ್ನು ತಮ್ಮ ಮಗ ಆನಂದ ಸಂಕೇಶ್ವರ್‌ಗೆ ಹೊರಿಸುತ್ತಾರೆ. ಇದಕ್ಕೆ ಸರಿಯಾಗಿ, ಅವರಿಗೆ ರಮಾನಂದ ಭಟ್ ಎಂಬ ಅದ್ಭುತ ಕಾರ್ಯ ಚತುರ, ಕಾರ್ಯ ಸಾಧಕ ಉದ್ಯೋಗಿ ದೊರೆತಿದ್ದಾರೆ. ಒಂದು ಸಲ ಪತ್ರಿಕೆ ಆರಂಭಿಸುವುದು ನಿಕ್ಕಿಯಾದ ಮೇಲೆ ಆನಂದ್ ಮತ್ತು ರಮಾನಂದ ಭಟ್ ಪತ್ರಿಕಾ ಕಚೇರಿಯ ಅಷ್ಟೂ ಜರೂರತ್ತು ಅಭ್ಯಸಿಸಿ, ಪಟ್ಟಿ ಮಾಡಿಕೊಂಡು ನೇರವಾಗಿ ಹೋದದ್ದು ಚೀನಕ್ಕೆ.

ನೀವು ನಂಬಲಿಕ್ಕಿಲ್ಲ. ಒಂದೊಂದು ಮೇಜು, ಕುರ್ಚಿ, ಸೋಫಾ, ಪತ್ರಕರ್ತರು ಕೂತು ಕೆಲಸ ಮಾಡುವ ಟೇಬಲ್-ಛೇರು, ಕ್ಯೂಬಿಕಲ್, ಕಡೆಗೆ ಅತಿಥಿಗಳೆದುರು ಇಡುವಂಥ ಟೀಪಾಯಿಯ ಸಮೇತ ಅವರು ಪ್ರತಿಯೊಂದನ್ನೂ ತಂದದ್ದು ಚೈನಾದಿಂದ. ಅದಕ್ಕಾಗಿ ಆನಂದ್ ಮತ್ತು ರಮಾನಂದ ಭಟ್ ತಮ್ಮ ಪ್ರಯಾಣದ ಖರ್ಚೂ ಸೇರಿ ವ್ಯಯ ಮಾಡಿದ್ದು ಐವತ್ತು ಲಕ್ಷ. ನನಗೆ ಅನಿಸಿದ್ದಿಷ್ಟು: ಈ ಪತ್ರಿಕೆ \'ವಿಜಯವಾಣಿ\' ಒಂದು ಭದ್ರ ಬುನಾದಿಯ ಮೇಲೆ ಏಳುತ್ತಿದೆ.

ವಿಜಯ ಸಂಕೇಶ್ವರರದು ಅದ್ಭುತವಾದ killing instinct ಅವರು \'ಪತ್ರಿಕೆ\'ಗೆ ಸಂಪಾದಕರನ್ನಾಗಿ ಆಯ್ಕೆ ಮಾಡಿರುವ ತಿಮ್ಮಪ್ಪ ಭಟ್ಟರು ನನಗಿಂತ ಹಿರಿಯರು. \'ಕನ್ನಡಪ್ರಭ\'ದಲ್ಲಿ ಅವರ ಕೈ ಕೆಳಗೆ ಕೆಲಸ ಮಾಡಿ ನಾನು ಕೆಲಸ ಕಲಿತಿದ್ದೇನೆ. ತುಂಬ ಸಭ್ಯ, ಪ್ರೊಫೆಷನಲ್ ಆದ ಮತ್ತು ಕೈಯೂ ಸೇರಿದಂತೆ ದೇಹದ ಪ್ರತಿಯೊಂದೂ ಶುದ್ಧವಿರುವ ವ್ಯಕ್ತಿ.

ನಿಜ ಹೇಳಬೇಕೆಂದರೆ, ಇವತ್ತು ದಿನ ಪತ್ರಿಕೆಗಳಿಗೆ ತುಂಬ ಹೆಸರಿರುವ star editorಗಳು ಬೇಕಾಗಿಲ್ಲ. ಅವೆಲ್ಲ ನಮ್ಮ ಟಾಬೊಲಾಯ್ಡ್‌ಗಳಿಗೆ ಬೇಕು. ಅಸಲು ಸಂಪಾದಕ ಯಾರು ಎಂಬುದೇ ಗೊತ್ತಿಲ್ಲದೆ ದಿನ ಪತ್ರಿಕೆಗಳು ನಡೆದು ಹೋಗುತ್ತವೆ. ಏಕೆಂದರೆ, ಅಲ್ಲಿ ಓದುಗನಿಗೆ ದಿನನಿತ್ಯದ ಸುದ್ದಿ ಬೇಕು. ಇವನು ಸತ್ಯ ಬರೆಯುತ್ತಾನಾ? ಇದ್ದದ್ದು ಬರೆಯುತ್ತಾನಾ? ಒಂದು ಪಕ್ಷ ವಹಿಸುತ್ತಾನಾ? ತಿರುಚುತ್ತಾನಾ? ಹಳಸಿದ ಸುದ್ದಿ ಕೊಡುತ್ತಾನಾ? ಸಾಮಾನ್ಯರ ಪಾಲಿಗೆ ಸುದ್ದಿ ಅನ್ನಿಸದೆ ಇರುವಂತಹುದನ್ನೂ ಸುದ್ದಿ ಮಾಡಿಕೊಡುತ್ತಾನಾ? ಸುಮ್ಮನೆ ಕೆಲಸಕ್ಕೆ ಬಾರದ್ದನ್ನು ತುಂಬಿಸಿ ಪುಟವನ್ನು ಪ್ರಿಂಟಿಗೆ ಕಳಿಸುತ್ತಾನಾ? ಇದನ್ನೆಲ್ಲ ಓದುಗ ಗಮನಿಸುತ್ತಾನೆ. ಅಸಲು ತನ್ನದು ಅಂತ ಒಂದು ಅಂಕಣವನ್ನ್ನೂ ಬರೆಯದೆ ಅತ್ಯಂತ ಯಶಸ್ವಿಯಾಗಿ ನಡೆಸಿದ ಸಂಪಾದಕರಿದ್ದಾರೆ.

ತಿಮ್ಮಪ್ಪ ಭಟ್ಟರು ಆ ಸಾಲಿಗೆ ಸೇರಿದ ಮಟೀರಿಯಲ್ಲು. ಮೊನ್ನೆ \'ವಿಜಯವಾಣಿ\' ಕಚೇರಿಗೆ ಹೋದೆ. ಅವರ ಸರಳವಾದ ಛೇಂಬರು, ಅವರ ಸಹೋದ್ಯೋಗಿಗಳು-ಎಲ್ಲರನ್ನೂ ನೋಡಿ ಖುಷಿಯಾಯಿತು. ಜಾತಿ ಜಂಜಡಗಳಿಲ್ಲದ ಮನುಷ್ಯ. ಕೊಟ್ಟ ಕೆಲಸ ತುಂಬ ಅಚ್ಚುಕಟ್ಟಾಗಿ ಮಾಡಿ ಮುಗಿಸುವ ಛಲವಾದಿ. ಜೊತೆಗೆ, ವೈಯೆನ್ಕೆ ತರಹದ ಹಿರಿಯರ ಕೈಲಿ ಪಳಗಿದ war hardened horse.

ಈ ಪತ್ರಿಕೆ ಗೆಲ್ತ್ತದೆ ಅನ್ನಿಸಿತು.

\"ನನಗೊಂದು ಆಫೀಸ್ ಬಾಯ್ ಕೆಲಸ ಕೊಡಿ. ಆಫೀಸು ಚೆನ್ನಾಗಿದೆಯಾದ್ದರಿಂದ ಕೇಳ್ತಿದೀನಿ\" ಅಂದೆ.

\"ಅದಕ್ಕೇನೂ ತಕರಾರಿಲ್ಲ. ಆದರೆ ರವೀ, ನಮ್ಮ ಆಫೀಸಿನೊಳಗ ಸಿಗರೇಟು ಸೇದೂ ಹಂಗಿಲ್ಲ... ಕೆಲಸಕ್ಕೆ ಯಾವಾಗ ಬೇಕಾದರೂ ಬರಬಹುದು\" ಎಂದು ನಕ್ಕರು ಸಂಕೇಶ್ವರ್.

ಅವರ ಮನಸು ದೊಡ್ಡದು. \'ವಿಜಯವಾಣಿ\' ಆಫೀಸಿನ ಮೂರನೆಯ ಮಹಡಿಯಲ್ಲಿ ನನಗೆ ಕೂತು ಬರೆಯಲಿಕ್ಕೊಂದು ಛೇಂಬರು ಕೊಟ್ಟಿದ್ದಾರೆ. ನಾನು ಪ್ರತೀವಾರ ಅವರ ಪತ್ರಿಕೆಗೆ ಬರೆಯುತ್ತೇನೆಂದು ಮಾತು ಕೊಟ್ಟಿದ್ದೇನೆ. ಜೊತೆಗೆ, ನನಗೆ ತಿಳಿದದ್ದು, ತಿಳಿದಾಗ. ಅವರ ಗೆಳೆತನವೇ ಸಂಬಳ. ತಿಮ್ಮಪ್ಪ ಭಟ್ಟರ ಪ್ರೀತಿಯೇ ಗ್ರಾಚ್ಯುಯಿಟಿ.

ನಂಗೊತ್ತು,ನಾನು ಯಾರ ಅಧೀನದಲ್ಲೂ ಕೆಲಸ ಮಾಡಲಾರೆ. ಅಂತೆಯೇ ಯಾರ ನೆತ್ತಿಯ ಮೇಲೂ ಕೂತು ಕೆಲಸ ಮಾಡಿಸಲಾರೆ. ಎಲ್ಲಾದರೂ ಕೆಲಸ ನಡೆಯುತ್ತಿದೆಯಾ? Yes, ಒಂದು ಮಂಕರಿ, ಒಂದು ಬುಟ್ಟಿ ಜಲ್ಲಿ ನಾನೂ ಹೊತ್ತೇನು.

ಹುಲಿ ಮನೆಯ ಗರ್ಜನೆಯ ಪ್ರತಿಧ್ವನಿಯಲ್ಲಿ ನನ್ನದೂ ಒಂದು ಓಂಕಾರವಿದೆ. \'ವಿಜಯವಾಣಿ\' ಗೆಲ್ಲಲಿ.

-ನಿಮ್ಮವನು
ಆರ್.ಬಿ.

Read Archieves of 03 April, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books