Ravi Belagere
Welcome to my website
ಬಹಳ ದಿನಗಳ ನಂತರ ಈ ತರಹದ್ದೊಂದು mega function ಏರ್ಪಡಿಸಿದ್ದೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ನೀವೆಲ್ಲ ಬಂದಿರಿ. ನನ್ನ ಬರವಣಿಗೆ, ತಿರುಗಾಟ, ಮುದ್ರಣ, ಬಣ್ಣ, ಈ ಸಿಂಗಾರ-ಬಂಗಾರ- ಇವೆಲ್ಲವೂ ನಿಮಗಾಗಿಯೇ ಅಲ್ಲವೆ? ಎಲ್ಲಿಯ ರಾಯಚೂರು, ಕೊಪ್ಪಳ, ಯಾದಗಿರಿ, ಗುಲಬರ್ಗ, ಚಿಂಚನ ಸೂರು, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ಮಂಗಳೂರು-ಎಲ್ಲೆಲ್ಲಿಂದ ಬಂದಿದ್ದರು ಓದುಗರು!. ಪ್ರತಿಯೊಬ್ಬರ ಕೈಲೂ ‘ಹಿಮಾಗ್ನಿ’. ಪ್ರತಿಯೊಬ್ಬರ ಕೈಲೂ ‘ಉಡುಗೊರೆ’, ‘ಅಮ್ಮ ಸಿಕ್ಕಿದ್ಲು’ ಮತ್ತು ಸಿಡಿಗಳು.
Home About Us Gallery Books Feedback Prarthana Contact Us

ನಿನ್ನದು ಯಾವ ಜಾತಿ ಎಂದು ಕೇಳದ ಆ ಸಂಪಾದಕರು!

ದೊಡ್ಡ ಸ್ನೇಹವೆಂದೇನಲ್ಲ.

ಆದರೆ ಅವರ ಸಾವಿನ ಸುದ್ದಿ ಓದಿ ಅರೆಕ್ಷಣ ಕಂಗಾಲಾಗಿ ಕುಳಿತು ಬಿಟ್ಟೆ. `ವಿಜಯ ಕರ್ನಾಟಕ`ವೂ ಸೇರಿದಂತೆ \'ಟೈಮ್ಸ್‌\' ಗ್ರೂಪ್‌ನ ವಿವಿಧ ಪತ್ರಿಕೆಗಳಿಗೆ ಸಂಪಾದಕರಾಗಿದ್ದ ಇ.ರಾಘವನ್ ಒಬ್ಬ ಪತ್ರಕರ್ತ ಹೇಗಿರಬೇಕು ಎಂಬುದಕ್ಕೆ, ಅದಕ್ಕಿಂತಲೂ ಹೆಚ್ಚಾಗಿ ಒಬ್ಬ ಸಂಪಾದಕ ಹೇಗೆ ವರ್ತಿಸಬೇಕು ಎಂಬುದಕ್ಕೆ ಉದಾಹರಣೆಯಂತಿದ್ದರು. \'ವಿಜಯ ಕರ್ನಾಟಕ\'ವನ್ನು ಕೈಗೆತ್ತಿಕೊಂಡ ಮೇಲೆ ಅವರು ಪತ್ರಿಕಾ ಕಚೇರಿಯ ಸಿಬ್ಬಂದಿಯ ತಂಟೆಗೆ ಹೋಗಲಿಲ್ಲ. ಬದಲಿಗೆ ಪತ್ರಿಕೆಯ ಪುಟಗಳನ್ನು ಒಂದು ಕಡೆಯಿಂದ sanitizeಮಾಡುತ್ತ ಬಂದರು. ಅತಿರೇಕಿ ಆರೆಸ್ಸೆಸ್‌ನ ಮುಖವಾಣಿಯಂತಾಗಿದ್ದ `ವಿಜಯ ಕರ್ನಾಟಕ`ಕ್ಕೆ ಅವತ್ತಿನ ಮಟ್ಟಿಗೆ ಒಂದು face lift ಬೇಕಾಗಿತ್ತು.

ಅದನ್ನು ರಾಘವನ್ ಎಷ್ಟು ಅಚ್ಚುಕಟ್ಟಾಗಿ ಮಾಡಿದರೆಂದರೆ, ಅಳಿದುಳಿದ ಅತಿರೇಕಿಗಳಲ್ಲಿ ಕೆಲವರು ತಾವಾಗೇ ಪತ್ರಿಕೆ ಬಿಟ್ಟು ಹೋದರು. ಮತ್ತೆ ಕೆಲವರು ರಾಘವನ್‌ರ ಜಾಡು ಅರಿತುಕೊಂಡು ಕೆಲಸ ಮಾಡತೊಡಗಿದರು. ಸಹಜವಾಗಿಯೇ \'ಪತ್ರಿಕೆ\'ಯ ಇಮೇಜು ಬದಲಾಗುವುದರೊಂದಿಗೆ ಅದರ ಕುಸಿದಿದ್ದ ಪ್ರಸಾರ ಸಂಖ್ಯೆ ಏರಿತು. ಅಷ್ಟೆಲ್ಲ ಮಾಡಿಯೂ ರಾಘವನ್ ನನಗೆ ನೆನಪಿದ್ದಂತೆ, ತಮ್ಮ ಫೊಟೋ ಒಂದೇ ಒಂದು ಸಲಕ್ಕೂ ಪತ್ರಿಕೆಗಳಲ್ಲಿ ಹಾಕಿಕೊಳ್ಳಲಿಲ್ಲ.

ಅದಕ್ಕಿಂತ ಹೆಚ್ಚಾಗಿ, ಪತ್ರಿಕೆಯನ್ನಷ್ಟೆ ಜಾತಿಗಳಿಂದ ದೂರವಿರಿಸಿದರೆ ಸಾಲದು, ಸಂಪಾದಕನೂ ಜಾತಿಗಳಿಂದ ದೂರ ಉಳಿಯಬೇಕು ಎಂದು ನಂಬಿದ್ದ ರಾಘವನ್, \'ನಿನ್ನದು ಯಾವ ಜಾತಿ\' ಅಂತ ಕೂಡ ಕೇಳದೆ \'ನಿನಗೆ ಕೆಲಸ ಮಾಡಲು ಬರುತ್ತಾ?\' ಅಂತಷ್ಟೆ ಕೇಳಿ ವರದಿಗಾರರನ್ನು, ಉಪ ಸಂಪಾದಕರನ್ನು ಪಕ್ಕಕ್ಕೆ ಕೂಡಿಸಿಕೊಂಡರು. ಅವರಿಗೆ \'ಟೈಮ್ಸ್‌\' ಗ್ರೂಪ್ ಎಂಥ ಪತ್ರಿಕೋದ್ಯಮವನ್ನು ಬಯಸುತ್ತದೆ ಮತ್ತು ಎಂಥ ಪತ್ರಿಕೋದ್ಯಮಿಯನ್ನು ಬಯಸುತ್ತದೆ ಎಂಬುದು ಗೊತ್ತಿತ್ತು. ಜೊತೆಗೆ ಇವತ್ತಿನ ಓದುಗನಿಗೆ ನಿಜಕ್ಕೂ ಏನನ್ನು ಕೊಡಬೇಕು ಎಂಬುದೂ ಗೊತ್ತಿತ್ತು.

ಆದರೆ ಪತ್ರಿಕೋದ್ಯಮದ ಧಡಕಿ ಎಂಥ ಆರೋಗ್ಯವಂತನನ್ನೂ ಒಳಗಿನಿಂದಲೇ ತಿಂದು ಕೋಖಲಾ ಮಾಡಿ ಬಿಡುತ್ತದೆ. ರಾಘವನ್ ಅಷ್ಟಿಷ್ಟು ಸಿಗರೇಟು ಸೇದುತ್ತಿದ್ದುದು ಬಿಟ್ಟರೆ chain smoker ಆಗಿರಲಿಲ್ಲ. ಅಳತೆ ಮೀರಿ ಕುಡಿದವರೂ ಅಲ್ಲ. ಅರವತ್ತೊಂದು ಎಂಬುದು ಸಾಯುವ ವಯಸ್ಸೇ ಅಲ್ಲ. ಆದರೆ ಪತ್ರಿಕೋದ್ಯಮಿಗೆ ಪ್ರತಿ ನಿತ್ಯದ ಧಾವಂತ, stressಗಳಿಗಿಂತ ಬೇರೆ ಶತ್ರುವೇ ಬೇಕಾಗಿಲ್ಲ. ಸುದ್ದಿ ಪ್ರಪಂಚದ ಎಲ್ಲ ಜಂಜಡ ಕೊಡವಿಕೊಂಡು ದಿನಕ್ಕೆ ಇಂತಿಷ್ಟು ಹೊತ್ತು ಅಂತ ರಿಲ್ಯಾಕ್ಸ್ ಆಗದಿದ್ದರೆ, ಕಳ್ಳ ಸಾವು ಹೊತ್ತಲ್ಲದ ಹೊತ್ತಿನಲ್ಲಿ ಬಂದು ಕದ ತಟ್ಟಿ ಬಿಡುತ್ತದೆ.

\"ರವೀ, ನಾಳೆ ನಾಡಿದ್ದರಲ್ಲಿ ನಾನು, ನೀವು ಮತ್ತು ಸುನೀಲ್ ರಾಜಶೇಖರ್ ಒಂದು ಊಟಕ್ಕೆ ಸೇರೋಣ. ಮುಂದಿನ ವಾರ ನಾನು ಮಗಳ ಮನೆಗೆ ಅಂತ ವಿದೇಶಕ್ಕೆ ಹೋಗ್ತಿದೀನಿ\" ಅಂತ ಫೋನು ಮಾಡಿದ್ದರು ರಾಘವನ್. ನಾನು ಅದೇಕೋ ಊಟಕ್ಕೆ ತಪ್ಪಿಸಿಕೊಂಡೆ. ಅವರು ವಿದೇಶಕ್ಕೆ ಹೋಗಿ ಬಂದ ಮೇಲೆ ನಾನು ದೇಶ ದೇಶ ಅಲೆದೆ. ವಾಪಸು ಬಂದ ಮೇಲೆ ನೀವು ಮತ್ತೆ `ಸೂರ್ಯ ಶಿಕಾರಿ` ಅಂಕಣ ಬರೆಯಬೇಕು ಅಂತ ಫೋನು ಮಾಡಿದ್ದರು.

\"ಇಷ್ಟರಲ್ಲೇ ಮಾತನಾಡಲು ಬರುತ್ತೇನೆ\" ಅಂದಿದ್ದೆ.

ಆದರೆ ಎಲ್ಲಿ?

ಅವರೇ ಹೊರಟು ಹೋಗಿದ್ದಾರೆ. ಪತ್ರಿಕೋದ್ಯಮವೆಂಬ ಹೆಬ್ಬಾವಿನಂಥ ಬೃಹತ್ ಯಂತ್ರ ಚಲಿಸುತ್ತಲೇ ಇದೆ. ಆದರೆ ರಾಘವನ್‌ರಂತಹ ಕೊಂಡಿ ಸದಾ ನೆನಪಿಗಿರುತ್ತದೆ.

-ಬೆಳಗೆರೆ

Read Archieves of 02 April, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books