Ravi Belagere
Welcome to my website
ಬಹಳ ದಿನಗಳ ನಂತರ ಈ ತರಹದ್ದೊಂದು mega function ಏರ್ಪಡಿಸಿದ್ದೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ನೀವೆಲ್ಲ ಬಂದಿರಿ. ನನ್ನ ಬರವಣಿಗೆ, ತಿರುಗಾಟ, ಮುದ್ರಣ, ಬಣ್ಣ, ಈ ಸಿಂಗಾರ-ಬಂಗಾರ- ಇವೆಲ್ಲವೂ ನಿಮಗಾಗಿಯೇ ಅಲ್ಲವೆ? ಎಲ್ಲಿಯ ರಾಯಚೂರು, ಕೊಪ್ಪಳ, ಯಾದಗಿರಿ, ಗುಲಬರ್ಗ, ಚಿಂಚನ ಸೂರು, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ಮಂಗಳೂರು-ಎಲ್ಲೆಲ್ಲಿಂದ ಬಂದಿದ್ದರು ಓದುಗರು!. ಪ್ರತಿಯೊಬ್ಬರ ಕೈಲೂ ‘ಹಿಮಾಗ್ನಿ’. ಪ್ರತಿಯೊಬ್ಬರ ಕೈಲೂ ‘ಉಡುಗೊರೆ’, ‘ಅಮ್ಮ ಸಿಕ್ಕಿದ್ಲು’ ಮತ್ತು ಸಿಡಿಗಳು.
Home About Us Gallery Books Feedback Prarthana Contact Us

ಹನುಮಂತರಾಯನ ಹೆಸರಲ್ಲಿ ಸೆರಗಿಗೆ ಗಂಟುಹಾಕಿ ಹರಕೆ ಹೊತ್ತಾಕೆ!

ನಿಮಗಿದು ಗೊತ್ತು.

ನಂಬಿಕೆ-ಅಪನಂಬಿಕೆಗಳ ಮಧ್ಯದ ಗೆರೆ ವಿಪರೀತ ತೆಳುವಾದದ್ದು. ರೈಲ್ವೆ ಕೌಂಟರಿನ ಹೊರಗೆ ನೀವು. ಟಿಕೆಟ್ಟಿಗೆ ಬೇಕಾದ ಹಣ ಕೊಟ್ಟಿದ್ದೀರಿ. ಕೌಂಟರಿನ ಒಳಗೆ ಅವನಿದ್ದಾನೆ. ಹಣ ಪಡೆದಿದ್ದಾನೆ. ಆದರೆ ನೀವು ಹಣ ಕೊಟ್ಟೇ ಇಲ್ಲವೆನ್ನುತ್ತಾನೆ. ಬಗೆಹರಿಸುವುದು ಹೇಗೆ?

ಬಸ್ಸಿಗೆ ಹೊರಟಿರುತ್ತೀರಿ. ತುಂಬ ಲೇಟಾಗಿದೆ. ಈ ಬಸ್ಸು ತಪ್ಪಿದರೆ ಆ ವಿಮಾನಕ್ಕೆ ತಡ. ಆ ವಿಮಾನ ಮಿಸ್ಸಾದರೆ, ಮುಂದಿನ ಇಂಟರ್‌ನ್ಯಾಷನಲ್ ವಿಮಾನ ಮಿಸ್. ಅಂದುಕೊಂಡ ಕೆಲಸವೆಲ್ಲ ಚೌಪಟ್. ಬಸ್ಸಿಗೆ ಹೊರಡಲು ನಿನ್ನಿಂದಲೇ ತಡವಾಯಿತು ಅಂತ ನಿಮ್ಮ ಗಂಡ ಬಯ್ಯುತ್ತಾ ಪಕ್ಕದಲ್ಲಿ ಕುಳಿರುತ್ತಾನೆ. ನೀವು ಸೀರೆಯ ಸೆರಗಿಗೆ ಗಂಟು ಹಾಕಿ, ಈ ಬಸ್ಸು ಮಿಸ್ಸಾಗದೆ ಹೋದರೆ ಕೋಲಾರದ ಹನುಮಪ್ಪನಿಗೆ ಬೆಳ್ಳಿ ಕಣ್ಣು ಮಾಡಿಸ್ತೀನಿ ಅಂತ ಹರಕೆ ಹೊರುತ್ತೀರಿ. ಅದು ಆ ಕ್ಷಣದ ನಿರ್ಣಯ. Finally, ಬಸ್ ಸಿಕ್ಕುಬಿಡುತ್ತೆ. ನಿಮ್ಮ ಗಂಡ ನಿಟ್ಟುಸಿರು ಬಿಡುತ್ತಾನೆ. ನೀವು ಹನುಮಪ್ಪನಿಗೆ ವಂದಿಸುತ್ತೀರಿ. ಹರಕೆ ಹೊತ್ತು ಸೀರೆ ಸೆರಗಿನ ತುದಿಗೆ ಗಂಟು ಹಾಕಿದ್ದರಿಂದಲೇ ಬಸ್ಸು ಸಿಕ್ತು ಎಂಬ ನಂಬಿಕೆ ನಿಮ್ಮದು. ಅಲ್ಲ ಅನ್ನಲು ಗಂಡನ ಬಳಿ ಎವಿಡೆನ್ಸ್ ಇದೆಯಾ?

ಇಪ್ಪತ್ತೊಂದು ಸೋಮವಾರ ಉಪವಾಸ ಮಾಡಿಬಿಡಿ. ಆರೋಗ್ಯ ಸರಿಯಾಗುತ್ತೆ ಅಂತಾನೆ ಪುರೋಹಿತ. ಇಪ್ಪತ್ತೆರಡನೆಯ ಸೋಮವಾರ ನಿಮ್ಮ ಆರೋಗ್ಯ fine. ಹಾಗೇನೇ ಮನೇಲಿ ತುಪ್ಪದ ದೀಪ ಹಚ್ಚಿ, ಧರ್ಮಸ್ಥಳಕ್ಕೆ ನೂರು ರುಪಾಯಿ ಮನಿ ಆರ್ಡರ್ ಮಾಡಿ ಅಂತಾರೆ ಯಾರೋ? ಸೈಟಿನ ವ್ಯವಹಾರ ನಿಮ್ಮಂತೆಯೇ ಆಗಿರುತ್ತದೆ.

ಇದಕ್ಕೆಲ್ಲ ಸೈಂಟಿಫಿಕ್ ಎವಿಡೆನ್ಸ್ ಎಲ್ಲಿಂದ ತರೋಣ?

ಯಾಕೆ ಇದನ್ನು ಬರೆಯುತ್ತಿದ್ದೇನೆಂದರೆ, ಇತ್ತೀಚೆಗೆ ನಾನು ದೀಪಾವಳಿ-ಯುಗಾದಿ ಪುರವಣಿಗೆಗಳನ್ನು ತಿರುವಿ ಹಾಕುತ್ತಿದ್ದೆ. ವರ್ಷ ಭವಿಷ್ಯದ ಪುಟಗಳಿಲ್ಲದ ಪುರವಣಿಗಳೇ ಇಲ್ಲ. ಪತ್ರಿಕೆಗಳೂ ದಿನ ಭವಿಷ್ಯ ಇಲ್ಲದೆ ಪ್ರಕಟವಾಗುವುದಿಲ್ಲ. ಸೈನ್ಸ್ ಬಗ್ಗೆ ಪುಟಗಟ್ಟಲೆ ಲೇಖನ ಪ್ರಕಟಿಸುವ ಪತ್ರಿಕೆಗಳು ಕೂಡ ಭವಿಷ್ಯ ಬರೆಯಿಸಿ ಪ್ರಕಟಿಸುತ್ತವೆ. ನನಗೆ ಅವುಗಳಲ್ಲಿ ಆಸಕ್ತಿ, ನಂಬಿಕೆ, ಅವುಗಳಿಂದ ಬರಬಹುದಾದ ಲಾಭ, ರೀಡರ್‌ಷಿಪ್-ಯಾವುದರಲ್ಲೂ ನಂಬಿಕೆಯಿಲ್ಲ, ಉತ್ಸಾಹವಿಲ್ಲ.

\"ಆದರೆ ರವೀ, ನಾವು ನಿಮ್ಮSun sign study ಮಾಡದೆ ನಿಮ್ಮೊಂದಿಗೆ ವ್ಯವಹರಿಸುವುದಿಲ್ಲ. ನಿಮ್ಮ sun sign ನೋಡದೆ ನೌಕರಿ ಕೊಡುವುದಿಲ್ಲ. ನಮಗೆ ನಮ್ಮದೇ ಆದ ಕೆಲವು ವಿಧಾನಗಳಿವೆ. We go scientifically\" ಅಂತ ಪ್ರಸಿದ್ಧ ಕಂಪೆನಿಯೊಂದರ ಅಧಿಕಾರಿ ಮೊನ್ನೆ ಹೇಳಿದಾಗ ಇದೇನಿದು ವಿಚಿತ್ರ ಅನ್ನಿಸಿತು.

ನಾವು ಸಂಸ್ಕೃತ ಅಥವಾ ಕನ್ನಡದಲ್ಲಿ `ರಾಶಿ`ಅಂತ ಏನಂತೀವೋ ಅದನ್ನೇ ಇಂಗ್ಲಿಷಿನಲ್ಲಿ sun sign ಅಂತಾರೆ. ನಮ್ಮ ಪ್ರಕಾರ ನಾವು ಹುಟ್ಟಿದ ಘಳಿಗೆ ಒಂದು ನಕ್ಷತ್ರಕ್ಕೆ ಸಂಬಂಧಿಸಿದುದಾಗಿರುತ್ತದೆ. ಪ್ರತಿ ನಕ್ಷತ್ರಕ್ಕೂ ನಾಲ್ಕು ಪಾದಗಳಿರುತ್ತವೆ. (ಯಾಕೋ? ಅವು ಪ್ರಾಣಿಗಳಾ?) ಒಂದೊಂದು ಪಾದಕ್ಕೆ ಒಂದೊಂದು ರಾಶಿ assign ಆಗುತ್ತದೆ. ನನ್ನದು ಉತ್ತರಾಷಾಢ: ಮಕರ ರಾಶಿ. ನನ್ನ ಅಮ್ಮನದೂ ಮಕರ ರಾಶಿಯೇ. ಜೀವನವೆಲ್ಲ ಬಡತನದಲ್ಲೇ ಕರಗಿಹೋದ ನನ್ನ ಅಮ್ಮನಿಗೆ ತದ್ವಿರುದ್ಧವಾದ ಬದುಕು ನನ್ನದು. ಹೀಗಾಗಿ, ನಾನು \'ನಮ್ಮಿಬ್ಬರದೂ ಕಕರ ಮಕರ\' ಅನ್ನುತ್ತಿರುತ್ತೇನೆ.

ಆದರೆ ಇಂಗ್ಲಿಷ್ ಕ್ಯಾಲೆಂಡರಿನ ಪ್ರಕಾರ ನಾನು ಹುಟ್ಟಿದ್ದು ಮಾರ್ಚ್ ಹದಿನೈದು. ಹೀಗಾಗಿ ನಾನು Piscian. ಅಂದರೆ ಮೀನ ರಾಶಿ. ಅದನ್ನೇ ನೆಪವಾಗಿಟ್ಟುಕೊಂಡು (of coure ಚುಮ್ಮಾ, ಅದರಲ್ಲಿ ನಂಬಿಕೆಯೇನಿಲ್ಲ) ನನ್ನ ಪ್ರಕಾಶನದ ಗುರುತನ್ನು ಮೀನಿನ ಚಿಹ್ನೆಯಾಗಿ ಇರಿಸಿಕೊಂಡಿದ್ದೇನೆ. ಯಾರಾದರೂ ಕೇಳಿದರೆ ಮೀನು ನಂಗಿಷ್ಟ. ಮೀನು ನಿದ್ದೆ ಮಾಡಲ್ಲ: ಕಣ್ಣು ಮುಚ್ಚಿಕೊಂಡು. ಅದು ಸದಾ ಜಾಗೃತ. ಮೀನು ಸುಮ್ಮನೆ ಕೈಗೆ ಸಿಗಲ್ಲ. ವಿಪರೀತ ಸ್ಲಿಪ್ಪರಿ. ಮೀನು ಪ್ರವಾಹದ ವಿರುದ್ಧ ಈಜುತ್ತದೆ. ಮೀನು ಬಣ್ಣ ಬಣ್ಣದ್ದು. ಮೀನು ಚಲನ ಶೀಲ. ನಿಂತೇ ಇರುವ ಮೀನು ನೋಡಿದ್ದೀರಾ? ಮೀನು ಗುಂಪಿನಲ್ಲಿ ಬದುಕುವ ಸಂಘಜೀವಿ. ಮೀನು ನನ್ನಂತೆಯೇ ಕೊಂಚ mean fellow ಅಂತೆಲ್ಲ ಬೂಸಿ ಬಿಟ್ಟು ತಮಾಷೆ ಕೂಡ ಮಾಡುತ್ತಿರುತ್ತೇನೆ.

ನಮ್ಮ ಗುಂಪಿನಲ್ಲಿ ನಿವೇದಿತಾ, ಮನೆಯಲ್ಲಿ ಚೇತನಾ ಕೊಂಚ sun signಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಜನ. ಚೇತನಾಳ ಗಂಡ ಮಾರ್ಚ್ ಹದಿನಾಲ್ಕರಂದು ಹುಟ್ಟಿದವನಾದ್ದರಿಂದ ಅವನೂ ಮೀನ ರಾಶಿಯೇ. \"ನೋಡಪ್ಪಾ, ಕೆಲವು ವಿಷಯಗಳಲ್ಲಿ ಎಷ್ಟು ನಿಮ್ಮ ಥರಾ ಆಡ್ತಾನೆ.Typical fish\" ಅನ್ನುತ್ತಿರುತ್ತಾಳೆ. ನಾವು ಮಾವ ಅಳಿಯ ಮಾತ್ರ ಅದ್ಯಾವುದೂ ಕಿವಿಗೆ ಹಾಕಿಕೊಳ್ಳದೆ ಲಕ್ಷಣವಾಗಿ ಪ್ಲೇಟುಗಟ್ಟಲೆ ಮೀನು ತಿಂದೇಳುತ್ತಿರುತ್ತೇವೆ.

ಆದರೆ ಒಂದು ಪ್ರತಿಷ್ಠಿತ ಕಂಪೆನಿಯವರು ನೌಕರಿ ಕೊಡುವಾಗ, ವ್ಯಾಪಾರ ವ್ಯವಹಾರ ಮಾಡುವಾಗ ಕೂಡ ಒಬ್ಬ ವ್ಯಕ್ತಿಯ sun sign ನೋಡುತ್ತಾರೆ ಎಂಬುದನ್ನು ನಾನು ಕೇಳಿದ್ದು ಇದೇ ಮೊದಲು. ಅದಕ್ಕೆ ಕಾರಣವೇನು ಅಂದಾಗ ಅವರು ಕೊಟ್ಟ ವಿವರಣೆ ಮತ್ತೂ ಇಂಟರೆಸ್ಟಿಂಗ್ ಆಗಿತ್ತು. \'ನೋಡಿ, ನಿಮ್ಮದೇ ಉದಾಹರಣೆ ತಗೊಳ್ಳಿ. ಒಬ್ಬ ಮೀನ ರಾಶಿಯವನಿಗೆ ನಾವು ಕೆಲಸ ಕೊಡೋದಾದರೆ ಕೇವಲ ಪ್ಲಾನಿಂಗ್ ವಿಭಾಗದಲ್ಲಿ ಕೊಡ್ತೀವಿ. ಏಕೆಂದರೆ ಮೀನ ರಾಶಿಯವರು best dreamers. ಆದರೆ ಅವರು execute ಮಾಡುವವರಲ್ಲ. ಅವರ ಕೈಗೇ execute ಮಾಡಲಿಕ್ಕೆ ಬಿಟ್ಟುಬಿಟ್ಟರೆ ಅವರು ವರ್ಷಗಟ್ಟಲೆಯಾದರೂ ಮಾಡುವುದಿಲ್ಲ. ಹಾಗಂತ ಅವರು lazy ಅಲ್ಲ. \'ಮಾಡೋಣ ಮಾಡೋಣ\' ಅಂದುಕೊಳ್ಳುತ್ತಲೇ ಇರುತ್ತಾರೆ. ಅದರ ಕನಸನ್ನೇ ಹಿಂಜುತ್ತಾ ಹೋಗುತ್ತಾರೆ. ಬೇಕಾದರೆ ನೋಡಿ, ಒಂದು ಬೀಚ್‌ನ ಪಕ್ಕದಲ್ಲಿ ಸಾಲಾಗಿ ಮಲಗಿರುವವರನ್ನು ವಿಚಾರಿಸಿ, ಹೆಚ್ಚಿನವರು ಮೀನ ರಾಶಿಯವರೇ. ಬಾರುಗಳಲ್ಲಿ ಕೇಳಿ ನೋಡಿ. ಕೂತು ಕೋಟಿಗಟ್ಟಲೆ ಯೋಜನೆಗಳ ಕುರಿತು plan ಮಾಡುತ್ತಿರುತ್ತಾರೆ. ಆದರೆ ಯಾವುದನ್ನೂ ರಿಯಲೈಸ್ ಮಾಡಲ್ಲ. ಕೈಯಲ್ಲಿ ಉಳಿಯೋದು ಬಾರ್ ಬಿಲ್ ಒಂದೇ.

ಸ್ಕಾರ್ಪಿಯೋಗಳು ಹಾಗಲ್ಲ. ವೃಶ್ಚಿಕ ರಾಶಿಯವರು. ಅವರನ್ನು ನಾವು ಎಕ್ಸಿಕ್ಯೂಷನ್‌ಗೆ ನೇಮಿಸುತ್ತೇವೆ. ಶತಾಯ ಗತಾಯ, ಕೆಲಸವಾಗೋ ತನಕ ಬಿಡಲ್ಲ ನಾವು. ತಾವು ನಾಶವಾದರೂ ಸರಿಯೇ. ಸ್ಪರ್ಧಿಸುವವನನ್ನು ಕೊಂದು ತೀರುತ್ತಾರೆ. We want such men. ಇದೆಲ್ಲ ಒಂದು ವೈಜ್ಞಾನಿಕ ಅಧ್ಯಯನವಿದೆ. ಕೆಲವು ರಾಶಿಯವರಿಗೆ ನಾವು ಸಾಲ ಕೊಡಲ್ಲ. ಅಷ್ಟೇಕೆ ವ್ಯವಹಾರವನ್ನೇ ಇಟ್ಟುಕೊಳ್ಳಲ್ಲ. ಏಕೆಂದರೆ, ಅವರು bad pay masters. ಕೊಡಬೇಕು ಅಂತ ಇರುತ್ತೆ. ಮೋಸಗಾರರಲ್ಲ. ಆದರೆ ಅವರು ಕೊಡಲ್ಲ. ನೀವು ಬೇಕಾದರೆ ಪರೀಕ್ಷೆ ಮಾಡಿ ನೋಡಿ` ಅಂದರು ಆತ.

ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಪುಸ್ತಕಗಳನ್ನು ಕೊಟ್ಟಿದ್ದಾರೆ. ಕೆಲವೆಲ್ಲ ತೀರ ಕಮರ್ಷಿಯಲ್ ಆಗಿ ನಮ್ಮ ಬೇಜಾನ್ ದಾರೂವಾಲಾ ತರಹದ ಹಲಾಲ್ ಟೋಪಿಗಳು ಬರೆದಂಥವು. ಉಳಿದಂತೆ ಬೇರೆ ಬೇರೆ ರೆಫರೆನ್ಸ್‌ಗಳನ್ನು ಮಾಡತೊಡಗಿದ್ದೇನೆ. ಒಟ್ಟಾರೆ ಮನುಷ್ಯ ಸಂಕುಲವನ್ನು ಹನ್ನೆರಡು ಗುಣಗಳ ಪ್ರಕಾರ ವಿಭಜಿಸಿ ಅವುಗಳನ್ನು ಒಂದೊಂದು ರಾಶಿಗೆ ಅನ್ವಯ ಮಾಡಿ ಸಿದ್ಧಾಂತ ರೂಪಿಸಿದಂತಿದೆ. ಎಷ್ಟು ನಿಜವೋ ಎಷ್ಟು ಸುಳ್ಳೋ?

ಕೋಲಾರದ ಹನುಮಂತರಾಯನ ಹೆಸರಿನಲ್ಲಿ ಹರಕೆ ಹೊತ್ತು ಸೆರಗಿಗೆ ಗಂಟು ಹಾಕಿದಾಕೆಯನ್ನು ಧಿಕ್ಕರಿಸುವಷ್ಟು ಸುಲಭವಾಗಿ ಇದನ್ನು ಧಿಕ್ಕರಿಸಲಾಗುತ್ತಿಲ್ಲ.

-ರವೀ

Read Archieves of 31 March, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books