Ravi Belagere
Welcome to my website
ಬಹಳ ದಿನಗಳ ನಂತರ ಈ ತರಹದ್ದೊಂದು mega function ಏರ್ಪಡಿಸಿದ್ದೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ನೀವೆಲ್ಲ ಬಂದಿರಿ. ನನ್ನ ಬರವಣಿಗೆ, ತಿರುಗಾಟ, ಮುದ್ರಣ, ಬಣ್ಣ, ಈ ಸಿಂಗಾರ-ಬಂಗಾರ- ಇವೆಲ್ಲವೂ ನಿಮಗಾಗಿಯೇ ಅಲ್ಲವೆ? ಎಲ್ಲಿಯ ರಾಯಚೂರು, ಕೊಪ್ಪಳ, ಯಾದಗಿರಿ, ಗುಲಬರ್ಗ, ಚಿಂಚನ ಸೂರು, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ಮಂಗಳೂರು-ಎಲ್ಲೆಲ್ಲಿಂದ ಬಂದಿದ್ದರು ಓದುಗರು!. ಪ್ರತಿಯೊಬ್ಬರ ಕೈಲೂ ‘ಹಿಮಾಗ್ನಿ’. ಪ್ರತಿಯೊಬ್ಬರ ಕೈಲೂ ‘ಉಡುಗೊರೆ’, ‘ಅಮ್ಮ ಸಿಕ್ಕಿದ್ಲು’ ಮತ್ತು ಸಿಡಿಗಳು.
Home About Us Gallery Books Feedback Prarthana Contact Us

ದಾಖಲೆ ಗಾತ್ರದ ಬಜೆಟ್ಟಿನಿಂದ ಅನುಕೂಲವೆಷ್ಟು?

ಕರ್ನಾಟಕದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿ ಒಂದು ಲಕ್ಷ ಕೋಟಿ ರುಪಾಯಿ ಗಾತ್ರ ಮೀರಿದ ಬಜೆಟ್‌ನ್ನು ಮುಖ್ಯಮಂತ್ರಿ ಸದಾನಂದಗೌಡ ಮಂಡಿಸಿದ್ದಾರೆ. ಇದಕ್ಕಾಗಿ ಅವರಿಗೊಂದು ಶುಭಾಶಯ ಹೇಳಲೇಬೇಕು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಗಾತ್ರದ ಬಜೆಟ್‌ನ್ನು ನಾನು ಮಂಡಿಸಲೇಬೇಕು ಅಂತ ಪಟ್ಟು ಹಿಡಿದವರು ಅವರ ಪಕ್ಷದವರೇ ಆದ ಯಡಿಯೂರಪ್ಪ. ಆದರೆ ಮಂಡಿಸುವ ಲಕ್ಕು ಸಿಕ್ಕಿದ್ದು ಸದಾನಂದಗೌಡರಿಗೆ.

ಹೀಗಾಗಿ ಯಡ್ಡಿಯ ಭ್ರಮ ನಿರಸನಕ್ಕೆ ಕಾರಣವಾದ ಒಂದು ಬೆಳವಣಿಗೆ ಮತ್ತೊಂದು ಕಡೆಯಿಂದ ಸದಾನಂದಗೌಡ ಹೊಸ ದಾಖಲೆ ಬರೆಯಲು ಕಾರಣವಾಯಿತು. ದಕ್ಷಿಣ ಭಾರತದ ಮಟ್ಟಿಗೆ ಹೇಳುವುದಾದರೆ ಲಕ್ಷ ಕೋಟಿ ರುಪಾಯಿ ಗಾತ್ರದ ಬಜೆಟ್ ಮಂಡಿಸಿ ಯಶಸ್ವಿಯಾದ ರಾಜ್ಯಗಳಲ್ಲಿ ಆಂಧ್ರ ಪ್ರದೇಶ ಒಂದು. ಇವತ್ತು ಒಂದು ಲಕ್ಷ ಕೋಟಿಗಿಂತಲೂ ದೊಡ್ಡ ಗಾತ್ರದ ಬಜೆಟ್ ಮಂಡಿಸಿದ ಸದಾನಂದಗೌಡರು ಒಂದು ಸಲ ಆಂಧ್ರ ಪ್ರದೇಶ ಇಂತಹ ಗಾತ್ರದ ಬಜೆಟ್‌ನ್ನು ಮಂಡಿಸಿ ಎಷ್ಟು ಕೆಲಸ ಮಾಡಿತು? ಇಡೀ ರಾಜ್ಯದುದ್ದಕ್ಕೂ ಅದರ ಫಲುಕು ಹೇಗೆ ಕಾಣಿಸಿತು? ಎಂಬುದನ್ನು ನೋಡಬೇಕು.

ಅಂದ ಹಾಗೆ ಕಳೆದ ವರ್ಷ ಯಡಿಯೂರಪ್ಪ ಮಂಡಿಸಿದ ಎಂಬತ್ತೈದು ಸಾವಿರ ಕೋಟಿ ರುಪಾಯಿ ಗಾತ್ರದ ಬಜೆಟ್‌ನ ಕತೆ ಏನಾಯಿತು ಅನ್ನುವುದನ್ನು ಗಮನಿಸಿ. ಈ ಪೈಕಿ ಯೋಜನಾ ವೆಚ್ಚಕ್ಕೆ, ಯೋಜನೇತರ ವೆಚ್ಚಕ್ಕೆ ಅಂತ ಕೊಟ್ಟ ಹಣದಲ್ಲಿ ಬಹುತೇಕ ಹಣ ವೆಚ್ಚವಾಗಿದ್ದು ಯೋಜನೇತರ ವೆಚ್ಚಕ್ಕೆ. ಒಂದು ರಾಜ್ಯ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆಯೇ ಎಂಬುದಕ್ಕೆ ಸಾಕ್ಷಿಯಾಗುವುದು ಯೋಜನಾ ವೆಚ್ಚಕ್ಕೆ ಅದು ಎಷ್ಟು ಹಣ ಕೊಟ್ಟಿದೆ ಎಂಬುದರಿಂದ ಮತ್ತು ಕೊಟ್ಟ ಹಣದಲ್ಲಿ ಎಷ್ಟು ಹಣವನ್ನು ಅದು ವೆಚ್ಚ ಮಾಡಿದೆ ಎಂಬುದರಿಂದ. ಆದರೆ ಕಳೆದ ವರ್ಷ ಯಡಿಯೂರಪ್ಪ ಯೋಜನಾ ವೆಚ್ಚಕ್ಕೆ ಅಂತ ಇಟ್ಟ ಹಣದಲ್ಲಿ ಬಹುತೇಕ ಹಣ ವರ್ಗಾವಣೆಯಾಗಿದ್ದು ಯೋಜನೇತರ ವೆಚ್ಚಕ್ಕೆ. ಯೋಜನಾ ವೆಚ್ಚ ಅಂದರೆ ಒಂದು ರಾಜ್ಯಕ್ಕೆ ಭವಿಷ್ಯದಲ್ಲಿ ನೇರವಾದ ಆದಾಯವನ್ನು ತಂದು ಕೊಡುವ ಬಾಬ್ತು ಎಂದರ್ಥ. ಯೋಜನೇತರ ವೆಚ್ಚದ ಒಂದು ಭಾಗ ಆಳದಲ್ಲಿ ರಾಜ್ಯದ ಹಿತಕ್ಕೇ ಅಂತ ಬಳಕೆಯಾಗುವುದು ನಿಜವಾದರೂ, ಅದು ನೇರವಾಗಿ ಕಾಣುವಂಥದಲ್ಲ. ಒಟ್ಟಿನಲ್ಲಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಯೋಜನಾ ವೆಚ್ಚಕ್ಕೆ ಅಂತ ಎಷ್ಟು ಹಣ ಇಟ್ಟಿದ್ದಾರೋ? ಆ ಪ್ರಮಾಣದ ಹಣವನ್ನು ಸರ್ಕಾರ ಖರ್ಚು ಮಾಡಿಲ್ಲ.

ಈ ಸಲವೂ ಅಷ್ಟೇ, ಯೋಜನಾ ವೆಚ್ಚಕ್ಕೆ ಅಂತ ನಲವತ್ತು ಸಾವಿರ ಚಿಲ್ಲರೆ ಕೋಟಿ ರುಪಾಯಿಗಳನ್ನು ಇಟ್ಟಿದ್ದೇವೆ. ಇದು ಕಳೆದ ಸಾಲಿಗೆ ಹೋಲಿಸಿದರೆ ಜಾಸ್ತಿ ಅಂತ ಸದಾನಂದಗೌಡರು ಕಿವಿ ಮೇಲೆ ಹೂವಿಟ್ಟಿದ್ದಾರೆ. ಆದರೆ ಒಟ್ಟಾರೆ ಬಜೆಟ್‌ನ ಶೇಕಡಾ ನಲವತ್ತರಷ್ಟು ಪ್ರಮಾಣದ ಹಣವನ್ನು ಯೋಜನಾ ವೆಚ್ಚಕ್ಕೆ ಅಂತ ಇಟ್ಟು, ಶೇಕಡಾ ಅರವತ್ತರಷ್ಟು ಪ್ರಮಾಣದ ಹಣವನ್ನು ಯೋಜನೇತರ ವೆಚ್ಚಕ್ಕೆ ಅಂತ ಇಡಲಾಗಿದ್ದರೆ ಅದರರ್ಥ ಏನು? ರಾಜ್ಯದ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಸಂಕಷ್ಟಕರ ಮಾರ್ಗದಲ್ಲಿ ನಡೆಯಲಿದೆ ಎಂದೇ ಅರ್ಥ. ಉತ್ತಮವಾದ ಆರ್ಥಿಕ ವ್ಯವಸ್ಥೆ ಎಂದರೆ ಯೋಜನೇತರ ವೆಚ್ಚ ಶೇಕಡಾ ಐವತ್ತನ್ನು ಮೀರಬಾರದು. ಆಗ ಅಭಿವೃದ್ಧಿಯ ಕಾರ್ಯಗಳಿಗೆ ಹೆಚ್ಚಿನ ಹಣ ದೊರೆತು ನೀರಾವರಿಯಿಂದ ಹಿಡಿದು ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯ ಎಂಬುದು ವೇಗವಾಗಿ ನಡೆಯುತ್ತಾ ಹೋಗುತ್ತದೆ. ಆದರೆ ಯೋಜನೇತರ ವೆಚ್ಚವೇ ಅರವತ್ತು ಪರ್ಸೆಂಟಿನಷ್ಟಾಗಿ, ಅಭಿವೃದ್ಧಿಯನ್ನೇ ಮೂಲಮಂತ್ರವನ್ನಾಗಿಸಿಕೊಳ್ಳುವ ಯೋಜನಾ ವೆಚ್ಚದ ಗಾತ್ರ ನಲವತ್ತು ಪರ್ಸೆಂಟು ಆದರೆ ಅದು ಆರ್ಥಿಕ ಪರಿಸ್ಥಿತಿ ಸಡಿಲವಾಗುತ್ತಿದೆ ಎಂಬುದರ ಸಂಕೇತ. ಈ ಸಲ ರಾಜ್ಯ ಸರ್ಕಾರ ತನ್ನ ಆದಾಯ ಒಂದು ಲಕ್ಷ ಕೋಟಿ ರುಪಾಯಿ ದಾಟುತ್ತದೆ ಅಂತ ನಿರೀಕ್ಷಿಸಿರುವುದು ಹೇಗೆ? ಟೋಪಾಜ್ ಬ್ಲೇಡ್ ಹಾಕಿ ತರಿದರೂ ಅದಕ್ಕೆ ದೊಡ್ಡ ಮಟ್ಟದ ಆದಾಯ ಮೂಲ ಅಂತಿರುವುದು ಅಬಕಾರಿ ಬಾಬ್ತಿನಿಂದ. ಅರ್ಥಾತ್ ಕುಡಿಯುವವರೇ ಈ ಸರ್ಕಾರದ ಪಾಲಿಗೆ ಮೂಲ ಆಸರೆ. ಕಳೆದ ವರ್ಷ ಮದ್ಯಪ್ರಿಯರು ಒಂಬತ್ತೂವರೆ ಸಾವಿರ ಕೋಟಿ ರುಪಾಯಿಗಳಷ್ಟು ಆದಾಯ ಕೊಟ್ಟಿದ್ದಾರೆ. ಈ ವರ್ಷ ಅದರ ಪ್ರಮಾಣ ಹತ್ತು ಸಾವಿರ ಕೋಟಿ ರುಪಾಯಿ ದಾಟುತ್ತದೆ ಎಂಬುದು ಸರ್ಕಾರದ ಲೆಕ್ಕಾಚಾರ.

ಇದೂ ಸೇರಿದಂತೆ ರಾಜ್ಯ ಸರ್ಕಾರ ತನ್ನ ಸ್ವಂತ ಶಕ್ತಿಯಲ್ಲಿ ಗಳಿಸುವ ಹಣದ ಪ್ರಮಾಣ ಐವತ್ತೊಂದು ಸಾವಿರದ ಎಂಟು ನೂರಿಪ್ಪತ್ತು ಕೋಟಿ. ಉಳಿದ ಹಣ ಹೇಗೆ ಬರುತ್ತದೆ? ಕೇಂದ್ರದ ತೆರಿಗೆಯಿಂದ ಹದಿಮೂರು ಸಾವಿರ ಕೋಟಿ, ಕೇಂದ್ರ ಸರ್ಕಾರದ ಅನುದಾನಗಳಿಂದ ಹದಿಮೂರು ಸಾವಿರದ ಮುನ್ನೂರೈವತ್ತು ಕೋಟಿ, ಉಳಿದಂತೆ ಬಹಿರಂಗ ಮಾರುಕಟ್ಟೆಯಿಂದ ಹಿಡಿದು ನಾನಾ ಹಣಕಾಸು ಸಂಸ್ಥೆಗಳ ಮೂಲಕ ಎತ್ತುವ ಹದಿನೈದು ಸಾವಿರ ಕೋಟಿ ರುಪಾಯಿ ಸಾಲ. ಹೀಗೆ ಸರ್ಕಾರದ ಆದಾಯ ಮೂಲಗಳನ್ನು ನೋಡಿದರೆ ಅಂತಿಮವಾಗಿ ಇದರಲ್ಲಿ ನಿರೀಕ್ಷೆ ಹೆಚ್ಚೇ ಹೊರತು ವಾಸ್ತವದಲ್ಲಿ ಇಷ್ಟು ಪ್ರಮಾಣದ ಹಣವನ್ನು ಸಂಗ್ರಹಿಸಲು ಸಾಧ್ಯವೇ ಇಲ್ಲ. ಇದ್ದುದರಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಕಡಿಮೆ ಮಾಡಿದ ಪ್ರಮಾಣವನ್ನು ಆ ಬಾಬ್ತಿನಿಂದ ಗಣನೀಯ ಪ್ರಮಾಣ ಹರಿದು ಬರಬಹುದು. ವಾಣಿಜ್ಯ ತೆರಿಗೆಯಿಂದ, ಅಬಕಾರಿ ಬಾಬ್ತಿನಿಂದ ಒಂದಷ್ಟು ಹಣ ಹರಿದು ಬರಬಹುದು. ಆದರೆ ಈ ಎಲ್ಲದರ ನಡುವೆ ಇಟ್ಟುಕೊಂಡ ಎಲ್ಲ ನಿರೀಕ್ಷೆಗಳೂ ಈಡೇರಬೇಕಲ್ಲ? ಹೀಗಾಗಿ ಆಳದಲ್ಲಿ ಒಂದು ಅಂದಾಜು ಅಂತ ಇಟ್ಟುಕೊಂಡು ನೋಡಿದರೆ ಸದಾನಂದಗೌಡರ ಸರ್ಕಾರ ಈ ವರ್ಷ ಎಂಬತ್ತೈದು ಸಾವಿರ ಕೋಟಿ ರುಪಾಯಿಗಳಿಗಿಂತ ಹೆಚ್ಚಿನ ಆದಾಯ ಪಡೆಯುತ್ತದೆ ಅಂತ ನಿರೀಕ್ಷೆ ಮಾಡುವುದು ಕಷ್ಟ.

ಯಾವಾಗ ಅಂದಾಜಿಗಿಂತ ಶೇಕಡಾ ಹದಿನೈದು-ಇಪ್ಪತ್ತು ಪರ್ಸೆಂಟು ಕಡಿಮೆ ಪ್ರಮಾಣದ ಹಣ ಸಂಗ್ರಹವಾಗುತ್ತದೋ? ಆಗ ಒಂದು ಸರ್ಕಾರ ಏನು ಮಾಡಬೇಕಾಗುತ್ತದೆ? ಯೋಜನಾ ವೆಚ್ಚಕ್ಕೆ ಅಂತ ನಿಗದಿ ಮಾಡಿದ ಹಣದಲ್ಲೇ ದೊಡ್ಡ ಪ್ರಮಾಣವನ್ನು ಯೋಜನೇತರ ವೆಚ್ಚಕ್ಕೆ ಅಂತ ವರ್ಗಾಯಿಸಬೇಕಾಗುತ್ತದೆ. ಯಾಕೆಂದರೆ ಏನೇ ಮಾಡಿದರೂ ಯೋಜನೇತರ ಬಾಬ್ತಿಗೆ ಕೊಡುವ ಹಣವನ್ನು ನಿಲ್ಲಿಸಲು ಸಾಧ್ಯವೇ ಇಲ್ಲ. ಸರ್ಕಾರಿ ನೌಕರರ ಸಂಬಳದಿಂದ ಹಿಡಿದು, ಸರ್ಕಾರ ಮಾಡಿರುವ ಸಾಲದ ಮೇಲಿನ ಅಸಲು, ಬಡ್ಡಿ ಮೊತ್ತ ಕಟ್ಟುವ ತನಕ ಯಾವುದನ್ನೂ ನಿಲ್ಲಿಸಲು ಸಾಧ್ಯವಿಲ್ಲ. ಯಾಕೆಂದರೆ ಈ ಬಾಬ್ತಿನಲ್ಲಿ ಏನೇ ಕಡಿಮೆ ಮಾಡಲು ಹೋದರೂ ಕತ್ತಿನ ಪಟ್ಟಿ ಹಿಡಿದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತದೆ. ಹೀಗಾಗಿ ಸರ್ಕಾರ ಆ ದಿಸೆಯಲ್ಲಿ ಯಾವುದೇ ರಿಸ್ಕು ತೆಗೆದುಕೊಳ್ಳಲು ಸಾಧ್ಯವೇ ಇಲ್ಲ. ಇದರ ಪರಿಣಾಮವಾಗಿ ನೋಡ ನೋಡುತ್ತಿದ್ದಂತೆಯೇ ಅಭಿವೃದ್ಧಿ ಕಾರ್ಯಕ್ಕೆ ಕೊಡುವ ಆದ್ಯತೆ ಕಡಿಮೆಯಾಗಿ ರಾಜ್ಯದ ಓಟ ನಿಧಾನವಾಗುತ್ತದೆ.

ಆಗ ಅಭಿವೃದ್ಧಿ ಎಂಬ ಮಂತ್ರಕ್ಕೆ ಸಾಥ್ ನೀಡಲು ಬೇಕಾಗುವುದು ಖಾಸಗಿಯವರೇ. ಆಗಲೇ ಅಶೋಕ್ ಖೇಣಿ ಥರದವರು, ದೊಡ್ಡ ದೊಡ್ಡ ಇಂಡಸ್ಟ್ರಿಯಲಿಸ್ಟ್‌ಗಳ ರಂಗ ಪ್ರವೇಶವಾಗುವುದು. ಅವರೇ ಹೀಗೆ ಮುಂದೆ ಬಂದು ನಾನು ರಸ್ತೆ ಮಾಡುತ್ತೇನೆ, ಪವರ್ ಪ್ರಾಜೆಕ್ಟ್ ಮಾಡುತ್ತೇನೆ. ಇನ್ನೇನೋ ಮಾಡುತ್ತೇನೆ ಎಂದು ಹೇಳುತ್ತಾರೆ. ಅಭಿವೃದ್ಧಿ ಏನಾಗಿದೆ ಅನ್ನುವುದನ್ನು ತೋರಿಸಲು ಸರ್ಕಾರಕ್ಕೂ ಇಂಥವರ ಅವಶ್ಯಕತೆ ಬೀಳುತ್ತದೆ. ಮುಂದೆ ಈ ಅವಶ್ಯಕತೆಯೇ ಧರ್ಮಸಂಕಟಕ್ಕೆ ತಿರುಗಿಕೊಂಡು ಬಡ, ಮಧ್ಯಮ ವರ್ಗದ ಜನ ಎಲ್ಲದಕ್ಕೂ ದಂಡ ತೆರುವ ಸನ್ನಿವೇಶ ಸೃಷ್ಟಿಯಾಗುತ್ತದೆ. ಕುಡಿಯುವ ನೀರಿನಿಂದ ಹಿಡಿದು ತಿರುಗುವ ರಸ್ತೆಯ ತನಕ ಎಲ್ಲಿ ಕಾಲಿಟ್ಟರೂ ದುಡ್ಡು ಕೊಡುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಆಗ ಹೆಚ್ಚಾಗುವುದೇ ಬಡವ, ಶ್ರೀಮಂತರ ಮಧ್ಯದ ಅಂತರ. ಇಂತಹ ಅಂತರ ಹೆಚ್ಚಾಗಬಾರದು ಎಂದರೆ ಒಂದು ಸರ್ಕಾರ ಯೋಜನಾ ವೆಚ್ಚಕ್ಕೆ ಅಂತ ಎಷ್ಟು ಹಣ ಎತ್ತಿಡಲಾಗಿದೆಯೋ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು.

ತುಂಬ ದೂರ ಹೋಗುವುದು ಬೇಡ. ಕುಡಿಯುವ ನೀರಿನ ಸಮಸ್ಯೆಯನ್ನೇ ನೋಡಿ. ನಮ್ಮ ರಾಜ್ಯ ಕಂಡ ಪ್ರಾಮಾಣಿಕ ಮಂತ್ರಿಗಳಲ್ಲಿ ಒಬ್ಬರಾದ ಸಣ್ಣ ನೀರಾವರಿ ಸಚಿವ ಗೋವಿಂದ ಕಾರಜೋಳ ಈ ಬಜೆಟ್ ಮಂಡನೆಯಾಗುವ ಕೆಲವೇ ದಿನಗಳ ಮುನ್ನ ಒಂದು ಆತಂಕಕಾರಿ ಸಂಗತಿಯನ್ನು ಬಹಿರಂಗ ಪಡಿಸಿದರು. ಅವರು ಮಾಡಿಸಿರುವ ಸರ್ವೇ ಪ್ರಕಾರ ರಾಜ್ಯದ ನೂರಾ ಎಪ್ಪತ್ತೈದು ತಾಲೂಕುಗಳ ಪೈಕಿ ನೂರಾ ಐದು ತಾಲೂಕುಗಳಲ್ಲಿ ಕುಡಿಯುವ ನೀರಿಗೆ ಅಗತ್ಯವಾದ ಅಂತರ್ಜಲದ ಮಟ್ಟ ಅಪಾಯಕಾರಿ ಹಂತದಲ್ಲಿದೆ. ಬಾಕಿ ಉಳಿದಂತೆ ಎಪ್ಪತ್ತು ತಾಲೂಕುಗಳಲ್ಲಿ ಮಾತ್ರವೇ ಅಂತರ್ಜಲದ ಮಟ್ಟ ಗಣನೀಯ ಪ್ರಮಾಣದಲ್ಲಿದೆ. ಅಂತರ್ಜಲದ ಮಟ್ಟ ಆತಂಕಕಾರಿ ಸ್ಥಿತಿಗೆ ತಲುಪಿರುವ ನೂರಾ ಐದು ತಾಲೂಕುಗಳ ಪೈಕಿ ಮೂವತ್ತೆಂಟು ತಾಲೂಕುಗಳ ಪರಿಸ್ಥಿತಿ ನಿಜಕ್ಕೂ ಘೋರ.ಅಲ್ಲಿ ಕುಡಿಯುವ ನೀರಿಗಾಗಿ ಅಗೆದರೆ ಸಿಗುವುದು ನೀರಲ್ಲ, ಕಾರ್ಕೋಟಕ ವಿಷ. ಅದನ್ನು ಕುಡಿಯುವುದು ಹಾಗಿರಲಿ, ಪಾತ್ರೆ ತೊಳೆಯಲೂ ಸಾಧ್ಯವಿಲ್ಲ. ಆದರೆ ಜನ ಅದನ್ನೇ ಕುಡಿದು ಅರಗಿಸಿಕೊಳ್ಳುವ ದಾರುಣ ಸ್ಥಿತಿಗೆ ಬಂದಿದ್ದಾರೆ. ನಿಮಗೆ ನೆನಪಿರಲಿ, ಇವತ್ತು ರಾಜ್ಯದಲ್ಲಿ ಕೃಷಿಗೆ, ಕರೆಂಟಿಗೆ ಬೇಕು ಅಂತ ನಾವು ಕಟ್ಟಿರುವ ಜಲಾಶಯಗಳೇನಿವೆಯೋ, ಈ ಜಲಾಶಯಗಳ ದೊಡ್ಡದೊಂದು ಪಾಲು ನೀರನ್ನು ಆಗಲೇ ಕುಡಿಯುವ ನೀರಿಗೆ ಅಂತ ಮೀಸಲಿಡುವ ಸ್ಥಿತಿ ಬಂದಿದೆ. ಅದು ಕೃಷ್ಣರಾಜ ಸಾಗರ ಅಣೆಕಟ್ಟೆ ಇರಬಹುದು, ಆಲಮಟ್ಟಿ ಅಣೆಕಟ್ಟೆ ಇರಬಹುದು, ಕರೆಂಟು ಉತ್ಪಾದನೆಗೆ ಅಂತ ಕಟ್ಟಿರುವ ಲಿಂಗನಮಕ್ಕಿ ಅಣೆಕಟ್ಟೆ ಇರಬಹುದು. ಒಟ್ಟಿನಲ್ಲಿ ಬಹುತೇಕ ಆಣೆಕಟ್ಟುಗಳಲ್ಲಿರುವ ನೀರನ್ನು ನಾವು ಕುಡಿಯುವ ಉದ್ದೇಶಕ್ಕಾಗಿ ಬಳಸುವ ಹಂತಕ್ಕೆ ಬಂದಿದ್ದೇವೆ. ಇದೇ ಪರಿಸ್ಥಿತಿ ಮುಂದುವರಿದರೆ ಇನ್ನು ಮುಂದಿನ ಹತ್ತು ವರ್ಷಗಳಲ್ಲಿ ಕುಡಿಯುವ ನೀರಿಗೆ ಜಲಾಶಯಗಳನ್ನೇ ಸಂಪೂರ್ಣವಾಗಿ ನೆಚ್ಚಿಕೊಳ್ಳುವ ಪರಿಸ್ಥಿತಿ ಬರಲಿದೆ. ಹಾಗೇನಾದರೂ ಆದರೆ ರೈತ ಬೆಳೆ ಬೆಳೆಯಲು ನೀರು ಸಿಗುವುದಿಲ್ಲ. ಆಗ ಪರಿಸ್ಥಿತಿ ಇನ್ನೂ ಘೋರವಾಗುತ್ತದೆ. ಇಂತಹ ಪರಿಸ್ಥಿತಿ ಬರಬಾರದು ಎಂದರೆ ನಾವು ಸಮರೋಪಾದಿಯಲ್ಲಿ ಮಾಡಬೇಕಾದ ಕೆಲಸ ಒಂದಿದೆ. ಅದು ಮಳೆ ನೀರನ್ನು ವ್ಯರ್ಥವಾಗದಂತೆ ತಡೆದು ಸಂಗ್ರಹಿಸಿಟ್ಟುಕೊಳ್ಳುವುದು. ಇದೇ ಕಾರಣಕ್ಕಾಗಿ ಸಣ್ಣ ನೀರಾವರಿ ಸಚಿವ ಗೋವಿಂದ ಕಾರಜೋಳ ಒಂದು ಯೋಜನೆಯನ್ನು ಸಿದ್ಧಪಡಿಸಿದ್ದಾರೆ.

ರಾಜ್ಯದ ಎರಡು ಸಾವಿರದ ಆರು ನೂರು ಭಾಗಗಳಲ್ಲಿ ಇದಕ್ಕಾಗಿ ಚೆಕ್ ಡ್ಯಾಂ, ಬಾಂದಾರ ಕಟ್ಟುವುದೂ ಸೇರಿದಂತೆ, ಒಟ್ಟು ಸಾವಿರದ ಐದು ನೂರು
ಕೋಟಿ ರುಪಾಯಿಗಳ ಯೋಜನೆ ಇದು. ಇದನ್ನು ತ್ವರಿತವಾಗಿ ಅನುಷ್ಠಾನಗೊಳಿಸಿದರೆ ಕುಡಿಯುವ ನೀರಿನ ಪರಿಸ್ಥಿತಿ ಒಂದು ಮಟ್ಟದಲ್ಲಿ ಸುಧಾರಿಸಿಕೊಳ್ಳುತ್ತದೆ. ಆದರೆ ಒಂದು ಲಕ್ಷ ಕೋಟಿ ರುಪಾಯಿ ಗಾತ್ರದ ಬಜೆಟ್ ಮಂಡಿಸಿರುವ ಸದಾನಂದಗೌಡ ಈ ಯೋಜನೆಗಾಗಿ ಅಂತ ತಮ್ಮ ಬಜೆಟ್‌ನಲ್ಲಿ ಎಷ್ಟು ಹಣ ಕೊಟ್ಟಿದ್ದಾರೆ? ಕನಿಷ್ಠ ಪಕ್ಷ ಈ ಯೋಜನೆಗೆ ಈ ವರ್ಷ ಒಂದು ಐನೂರು ಕೋಟಿ ರುಪಾಯಿ ಅಂತಾದರೂ ಮೀಸಲಿಟ್ಟಿದ್ದರೆ ಚೆನ್ನಾಗಿರುತ್ತಿತ್ತೇನೋ? ಆದರೆ ಸದು ಆ ಕಡೆ ಗಂಭೀರವಾಗಿ ನೋಡಿಯೇ ಇಲ್ಲ. ಕುಡಿಯುವ ನೀರು ಎಂಬುದು ಮನುಷ್ಯನ ಮೂಲ ಅಗತ್ಯ ಅಲ್ಲವೇ? ಅದರ ಬಗ್ಗೆ ಒಂದು ಬಜೆಟ್ ನಿರ್ಲಕ್ಷ ತೋರಿದರೆ ಅದು ಒಳ್ಳೆಯ ಬಜೆಟ್ ಅನ್ನಲು ಸಾಧ್ಯವೇ?

ಒಂದು ಲಕ್ಷ ಕೋಟಿ ರುಪಾಯಿ ಗಾತ್ರದ ಬಜೆಟ್ ಮಂಡಿಸುವುದು ದಾಖಲೆಯ ದೃಷ್ಟಿಯಿಂದ ಚೆಂದವೇ. ಆದರೆ ರಾಜ್ಯದ ಅಭಿವೃದ್ಧಿ ಎಂಬುದು ಬಜೆಟ್ ಗಾತ್ರಕ್ಕಿಂತ ಆ ಬಜೆಟ್‌ಗಿರುವ ಪ್ರಾಮಾಣಿಕತೆ ಎಷ್ಟು ಅನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಇವತ್ತು ಸಿಕ್ಕ ಸಿಕ್ಕ ಮಠ ಮಾನ್ಯಗಳಿಗೆ ಹಣ ಹಂಚುವ ಮೂಲಕ, ಎಲ್ಲ ಜಾತಿಗಳನ್ನು, ಮಠಾಧೀಶರನ್ನು ಸಂತೃಪ್ತಿ ಪಡಿಸುವ ಮೂಲಕ ಮತ ಬ್ಯಾಂಕ್ ಸೃಷ್ಟಿ ಮಾಡಿಕೊಳ್ಳಬಹುದು. ಆದರೆ ಜನಸಾಮಾನ್ಯರ ಹಿತ ರಕ್ಷಿಸುವುದು ಹೇಗೆ? ಹಿಂದೆ ಯಡಿಯೂರಪ್ಪ ಇದೇ ತಪ್ಪು ಮಾಡಿದರು. ಈಗ ಸದಾನಂದಗೌಡ ಕೂಡ ಅದೇ ತಪ್ಪು ಮಾಡುತ್ತಿದ್ದಾರೆ.

ಕರ್ನಾಟಕದ ಜನ ಸಮುದಾಯವನ್ನು ಒಂದು ಮಾಡುವ ಕೆಲಸ ದಿನದಿಂದ ದಿನಕ್ಕೆ ಯಾಕೆ ಕ್ಲಿಷ್ಟವಾಗುತ್ತಿದೆ? ಒಬ್ಬ ಹಗಲು ದರೋಡೆಕೋರ ಜೈಲಿಗೆ ಹೋಗುವ ಪರಿಸ್ಥಿತಿ ಬಂದರೆ ನೂರಾರು ವರ್ಷಗಳ ಇತಿಹಾಸವಿರುವ ಒಂದು ಮಠದ ಸ್ವಾಮೀಜಿ ಬೀದಿಗೆ ಬಂದು ನಾನು ಇವನಿಗೆ ಆಶೀರ್ವಾದ ಮಾಡ್ತೀನಿ ಅನ್ನುವ ಮಟ್ಟಕ್ಕೆ ಯಾಕೆ ಹೋಗುತ್ತಿದ್ದಾನೆ? ಇದನ್ನೆಲ್ಲ ಅರ್ಥ ಮಾಡಿಕೊಂಡಿದ್ದರೆ ಸದಾನಂದಗೌಡರು ಯಡಿಯೂರಪ್ಪ ಮಾಡಿದ್ದ ತಪ್ಪನ್ನೇ ಮಾಡುತ್ತಿರಲಿಲ್ಲ. ಅಂದ ಹಾಗೆ ಉಡುಪಿ-ಚಿಕ್ಕಮಗಳೂರು ಉಪ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿ ಸುನೀಲ್ ಕುಮಾರ್ ಸೋತಿದ್ದಕ್ಕೆ ಸದಾನಂದಗೌಡರೇನೂ ಸಂಕಟ ಪಡಬೇಕಾಗಿಲ್ಲ. ಮತ್ತು ನಾನು ರಣಾಂಗಣಕ್ಕಿಳಿದಿದ್ದರೆ ಬಿಜೆಪಿ ಗೆದ್ದೇ ಬಿಡುತ್ತಿತ್ತು ಎಂದು ಯಡಿಯೂರಪ್ಪ ಷೋ ಕೊಡುವ ಅಗತ್ಯವೂ ಇಲ್ಲ. ಯಾಕೆಂದರೆ ಯಡಿಯೂರಪ್ಪ ಉಡುಪಿ-ಚಿಕ್ಕಮಗಳೂರಿನ ಕಣಕ್ಕಿಳಿದು ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದರೆ ಸುನೀಲ್ ಕುಮಾರ್ ಗೆಲ್ಲಲೂಬಹುದಿತ್ತು. ಇಲ್ಲ ಅಂತೇನೂ ಹೇಳಲು ಆಗುವುದಿಲ್ಲ. ಆದರೆ ಇಲ್ಲಿ ನಾವು ಒಂದು ಅಂಶವನ್ನು ನೆನಪಿನಲ್ಲಿಡಬೇಕು. ಯಡಿಯೂರಪ್ಪ ಆ ಕಣದಿಂದ ದೂರ ಸರಿಯುವ ಮೂಲಕ ಹಣ, ಹೆಂಡ, ಜಾತಿಯ ಹಾವಳಿ ದೊಡ್ಡ ಮಟ್ಟದಲ್ಲಿ ತಾಂಡವವಾಡಲಿಲ್ಲ. ಹೀಗಾಗಿ ಒಬ್ಬ ಸಜ್ಜನ ಮನುಷ್ಯ, ಜನಪರ ಕಾಳಜಿಯುಳ್ಳ ಮನುಷ್ಯ ಲೋಕಸಭೆಗೆ ಆಯ್ಕೆಯಾಗಿ ಹೋಗುವಂತಾಯಿತು. ಆ ಮಟ್ಟಿಗೆ ನಾವೆಲ್ಲ ಖುಷಿ ಪಡಬೇಕು. ಅದೇ ರೀತಿ ಸುನೀಲ್ ಕುಮಾರ್ ಕೂಡ ಅಷ್ಟೇ. ಸೋಲು ಅನುಭವಿಸಿದ್ದರೂ ಆತನಿಗೆ ಬಂದ ಮತಗಳು ಗೌರವದ, ಒಂದು ವಿಚಾರದ ನೆಲೆಯಲ್ಲಿ ಬಂದ ಮತಗಳು. ದುಡ್ಡು, ಹೆಂಡ, ಜಾತಿಗೆ ಹುಟ್ಟಿದ ಮತಗಳನ್ನು ಪಡೆದು ಗೆದ್ದಿದ್ದರೆ ಅವರೇನೂ ದೊಡ್ಡ ಮನುಷ್ಯ ಅನ್ನಿಸಿಕೊಳ್ಳುತ್ತಿರಲಿಲ್ಲ. ಹೀಗಾಗಿ ಅವರಿಗೆ ಇನ್ನೂ ಭವಿಷ್ಯವಿದೆ. ಹೀಗಾಗಿ ಅವರು ಸಂಕಟಪಡುವ ಅಗತ್ಯವೇನೂ ಇಲ್ಲ. ಈಗಿನ ಸ್ಥಿತಿಯಲ್ಲಿ ಎಲ್ಲರೂ ಕುಳಿತು ಯೋಚಿಸಬೇಕಾದ ಸಂಗತಿ ಎಂದರೆ ಇಡೀ ಕರ್ನಾಟಕ ಜಾತಿಯ ನೆಲೆಯಲ್ಲಿ, ಹಣದ ನೆಲೆಯಲ್ಲಿ ಒಡೆದು ಹೋಗಿರುವ ಈ ಸಂದರ್ಭದಲ್ಲಿ ಅದನ್ನು ಸರಿಪಡಿಸುವುದು ಹೇಗೆ? ಎಂಬ ಕುರಿತು.

ಆದರೆ ಸದು ತಮ್ಮ ಬಜೆಟ್ ಮಂಡಿಸುವ ಭರದಲ್ಲಿ, ತಾವೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂಬ ಆತುರದಲ್ಲಿ ಹಿಂದೆ ಯಡ್ಡಿ ಮಾಡಿದ ತಪ್ಪುಗಳನ್ನೇ ಮಾಡಿದ್ದಾರೆ. ಇನ್ನು ಮುಂದೆ ಅಂತಹ ತಪ್ಪುಗಳು ಆಗದಿರಲಿ, ಒಂದು ಬಜೆಟ್ ಎಂಬುದು ಜಾತಿಗಳ ಸಂರಕ್ಷಣೆಯ ಕವಚವಾಗುವುದಕ್ಕಿಂತ ಒಟ್ಟಾರೆ ನಾಡಿನ ಹಿತ ಸಂರಕ್ಷಣೆಯ ಕವಚವಾದರೆ ಒಳ್ಳೆಯದು ಎಂಬುದನ್ನು ಅವರು ಈಗಲಾದರೂ ಗಮನಿಸಲಿ.

-ಆರ್.ಬಿ.

Read Archieves of 29 March, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books