Ravi Belagere
Welcome to my website
ಬಹಳ ದಿನಗಳ ನಂತರ ಈ ತರಹದ್ದೊಂದು mega function ಏರ್ಪಡಿಸಿದ್ದೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ನೀವೆಲ್ಲ ಬಂದಿರಿ. ನನ್ನ ಬರವಣಿಗೆ, ತಿರುಗಾಟ, ಮುದ್ರಣ, ಬಣ್ಣ, ಈ ಸಿಂಗಾರ-ಬಂಗಾರ- ಇವೆಲ್ಲವೂ ನಿಮಗಾಗಿಯೇ ಅಲ್ಲವೆ? ಎಲ್ಲಿಯ ರಾಯಚೂರು, ಕೊಪ್ಪಳ, ಯಾದಗಿರಿ, ಗುಲಬರ್ಗ, ಚಿಂಚನ ಸೂರು, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ಮಂಗಳೂರು-ಎಲ್ಲೆಲ್ಲಿಂದ ಬಂದಿದ್ದರು ಓದುಗರು!. ಪ್ರತಿಯೊಬ್ಬರ ಕೈಲೂ ‘ಹಿಮಾಗ್ನಿ’. ಪ್ರತಿಯೊಬ್ಬರ ಕೈಲೂ ‘ಉಡುಗೊರೆ’, ‘ಅಮ್ಮ ಸಿಕ್ಕಿದ್ಲು’ ಮತ್ತು ಸಿಡಿಗಳು.
Home About Us Gallery Books Feedback Prarthana Contact Us

ಸಮಸ್ತ ನದಿಗಳ ನೀರಿಗೆ ಭಸ್ಮ ಬೆರೆಸಿದಾಗ ಆತ ಮಂಜಿನಡಿ ಕಾಯುತ್ತ ಮಲಗಿದ್ದ

ಅಜಿತ್ ಬಂದಿದ್ದ.

ಅಜಿತ್ ಹನಮಕ್ಕನವರ್. ಮೊದಲು ಕೆಲಕಾಲ ನನ್ನಲ್ಲಿಯೇ ಇದ್ದ, ವರದಿಗಾರನಾಗಿ. ಹುಬ್ಬಳ್ಳಿಯ ಹತ್ತಿರದ ಗ್ರಾಮದ ಜೈನರ ಹುಡುಗ. ಅವನಿಗೂ ತಿರುಗಾಟ, ಕಾಡು ಸುತ್ತುವಿಕೆ, ಓದು ಮುಂತಾದ ಗೀಳುಗಳಿವೆ. ಯಲ್ಲಾಪುರದ ಬಳಿಯ, ಈಗ ಅವನ ಸಹೋದ್ಯೋಗಿಯೇ ಆಗಿರುವ ಸಹನಾಭಟ್ ಎಂಬ ಹುಡುಗಿಯನ್ನು ಮದುವೆಯಾಗುತ್ತಿದ್ದಾನೆ. ಲಗ್ನಪತ್ರಿಕೆ ಕೊಡಲು ಬಂದವನು ನನ್ನ ಬರಹಗಳ ಬಗ್ಗೆ ಮಾತನಾಡುತ್ತ ಕುಳಿತ.

\"ಏನೇ ಆದ್ರೂ, ನಿಮ್ಮ ಬರವಣಿಗೆಯ ಸ್ಪೀಡು ಕಡಿಮೆಯಾಗಲಿಲ್ಲ ನೋಡ್ರಿ\" ಅಂದ.

\"ಇನ್ನೂ ಡೀಸೆಲ್ ಇರೋ ಹಂಗೆ ಕಾಣ್ತದ. ಗಾಡಿ ಓಡ್ಲಿಕ್ಕೆ ಹತ್ಯದ\" ಅಂದು ನಕ್ಕೆ.

\"ನಿಮ್ಮ ಶೈಲಿಯಲ್ಲಿ ಒಂದು ಸಾದ್ಯಂತವಾದ ಪ್ರವಾಸ ಕಥನ ಬರೀ ಬೇಕು. ಉಳಿದವರದು ಓದಿ ಬೋರು ಹೊಡೆದು ಹೋಗ್ಯದೆ. ಅಲ್ಲಿ ಆ ದೇಶದೊಳಗೆ ರೋಡು ಸ್ವಚ್ಛ ಇರ‍್ತವೆ, ಅಲ್ಲಿ ತಿನ್ಲಿಕ್ಕೆ ಕೊತ್ತಂಬರಿ ಸಿಕ್ತದೆ, ಕಡ್ಲಿ ಬ್ಯಾಳಿ ಸಿಕ್ತವೆ, ಬರೀ ಇಂಥದ್ದೇ ಬರೀತಾರೆ... ನೀವೊಂದು ಪ್ರವಾಸ ಕಥನ, ಒಂದು non fiction\'\' ಅಂದ.

ನನ್ನ ಅನೇಕ ಪ್ರವಾಸಾನುಭವಗಳೇ ನನ್ನ ಖಾಸ್‌ಬಾತ್‌ಗಳಾಗಿವೆ. ಕೆಲವೆಲ್ಲ ಪುಸ್ತಕಗಳಾಗಿವೆ. ಧಾರಾವಾಹಿಗಳಾಗಿವೆ. ಕಾದಂಬರಿಗಳಲ್ಲಿ ಹಣಿಕಿ ಹಾಕಿವೆ. ಒಂದು ಪ್ರವಾಸ ನನ್ನಿಂದ ಒಂದಲ್ಲ ಒಂದು ಕೃತಿ ಬರೆಯಿಸಿಕೊಂಡಿದೆ : ಪ್ರತಿ ಮೈಥುನವೂ ಒಂದು ಮಗುವನ್ನು ಹುಟ್ಟಿಸಿಕೊಂಡಂತೆ. Sure shot. ಆದರೆ ಅಜಿತನಿಗೆ ಹೇಳಿದೆ :

ನೋಡೂ, ಅಲೆಮಾರಿತನವೇ ಜೀವನ ಶೈಲಿಯನ್ನಾಗಿ ಮಾಡಿಕೊಂಡವನಿಗೆ ಒಂದು ಮುಟಿಗೆಯಲ್ಲಿ, ಒಂದು ಬೈಂಡ್‌ನ ಅಡಿ ಚಿಕ್ಕದೊಂದು ಪ್ರವಾಸ ಕಥನ ಬರೆದು ಮುಗಿಸುವುದು ಕಷ್ಟದ ಕೆಲಸ. ಹಾಗೆ ನೋಡಿದರೆ ನನ್ನ ಪ್ರವಾಸ ಆರಂಭವಾಗೋದು ಸುಮಾರು 1968ರಿಂದ. ನನಗಾಗ ಹತ್ತು ವರ್ಷ. ಹೊಳಲ್ಕೆರೆಯಿಂದ ಮಲ್ಲಾಡಿಹಳ್ಳಿಗೆ ನಡೆದುಕೊಂಡು ಹೋಗಿದ್ದೆ. ನಡೆಯುವುದರಲ್ಲಿನ, ಚಲನೆಯಲ್ಲಿನ, ನೋಡುವುದರಲ್ಲಿನ, ಏಕಾಂತದಲ್ಲಿನ ಖುಷಿಯೇನೆಂಬುದು ಕಣ್ಣು, ನಾಲಗೆ, ಚರ್ಮ, ಬುದ್ಧಿ, ಪಾದಗಳಿಗೆ ಅರಿವಾದದ್ದೇ ಆಗ. ಮುಂದೆ ಹದಿನೇಳರವನಿದ್ದಾಗ ಶಿವಮೊಗ್ಗದಿಂದ ಕುಂಸಿ ಹಾಯ್ದು ಆನಂದಪುರದ ತನಕ ನಡೆದು, ಒಂದು ಕರೆಂಟ್ ಕಂಬಗಳನ್ನು ಒಯ್ಯುತ್ತಿದ್ದ ಲಾರಿ ಹತ್ತಿಕೊಂಡು ಜೋಗ ಜಲಪಾತಕ್ಕೆ ಹೋದೆ. ಅದೊಂದು ಪರ್ವ. ಆನಂತರ ನಾನು ನಡೆದದ್ದು ತೀರ್ಥಹಳ್ಳಿಯಿಂದ ಆಗುಂಬೆಗೆ. ಆಗುಂಬೆಯಿಂದ ಶಂಕರ್ ಬಸ್ ಹತ್ತಿ ಶೃಂಗೇರಿಗೆ ಹೋದದ್ದು ನೆನಪಿದೆ. ಮುಂದೆ ಒಂದೇ ವರ್ಷ. ಹಿಮಾಲಯದ ಜೋಶಿಮಠದಿಂದ ಬದರೀನಾಥದ ತನಕ ನೆತ್ತರು ಜಿನುಗುವ ಕಾಲುಗಳಲ್ಲೇ ನಡೆದೆ : ಜೈ ಬದ್ರಿ ವಿಶಾಲ್!
ಇದೆಲ್ಲಿಯ ಹುಚ್ಚಾಟ? ಯಾವುದೂ ಮರೆತಿಲ್ಲ. ಹೇಗಂತ ದಾಖಲಿಸಲಿ? ಕೈಯಲ್ಲಿ ಕಾಸಿಟ್ಟುಕೊಂಡು ಊರು, ದೇಶ ನೋಡಲಿಕ್ಕೆ, ರಜೆ ಕಳೆಯಲಿಕ್ಕೆ ಹೋಗುವವನ ಪರಿಯೇ ಬೇರೆ. ಅವನು ಅಲ್ಲಿ ಫೆಸಿಲಿಟಿ ಹುಡುಕುತ್ತಾನೆ. ಸುಖಕ್ಕಾಗಿ ಹಣುಕುತ್ತಾನೆ. Night life ಇದೆಯಾ, ವಿಚಾರಿಸುತ್ತಾನೆ. ಅನ್ನ, ಸಮಾಧಾನ, ದೇವರನ್ನು ಹುಡುಕಿಕೊಂಡು ನಡೆದ ಅಲೆಮಾರಿ ಏನು ಹುಡುಕಿದ ಅಂತ ಹೇಗಯ್ಯ ಬರೆಯಲಿ?

ಮುಂದೆ ಬಹಳ ದೀರ್ಘವಾದ ಪ್ರವಾಸ ಅಂತ ಮಾಡಿದ್ದು ಕ್ಯಾಪ್ಟನ್ ಡಾ.ಮುರಳಿಯೊಂದಿಗೆ. ಅವನು ಬೆಂಗಳೂರಿನ \'ಕನ್ನಡಪ್ರಭ\'ದಲ್ಲಿದ್ದ ನನ್ನ ನೌಕರಿಗೆ ಪಿಂಡ ಇಡಿಸಿಯೇ ಚೀನಾದ ಬಾರ್ಡರಿನ ಅರುಣಾಚಲ ಪ್ರದೇಶಕ್ಕೆ ಕರೆದೊಯ್ದ. ಯಾವ ಜಿಲ್ಲೆಯದು? ತವಾಂಗ್. ಅವನ ಕ್ಯಾಂಪ್‌ನ ಹೆಸರು ಲೂಮ್ಲಾ. ಅಲ್ಲಿಗೆ ತಲುಪಲಿಕ್ಕೇ ಬೆಂಗಳೂರಿನಿಂದ ಬರೋಬ್ಬರಿ ಏಳು ದಿನ ಹಿಡಿದಿದ್ದವು. ಅಲ್ಲಿಂದ ಮುಂದೆ ನೋಡು, ಬೂಮ್ಲಾ. ಬೂಮ್ಲಾದಿಂದ ಲುಂಪೋ. ಮುಂದೆ Upper Lumpo. ಅದೇ ಕಟ್ಟಕಡೆಯ ಗ್ರಾಮ. ಅಲ್ಲಿ ನಿಂತರೆ ಚೀನಾದ ಹಳ್ಳಿ, ಸೇತುವೆ, ರಸ್ತೆ, ಸೈನಿಕ ಶಿಬಿರ, wind mill ಕಾಣಿಸುತ್ತವೆ.

ಈಗ, ಇಷ್ಟೊಂದು ವರ್ಷಗಳ ನಂತರ 1994ನೇ ಇಸವಿಯ ಈ ಚಳಿಯಲ್ಲಿ, ನಿಧಾನವಾಗಿ ಪಟಿಯಾಲಾ ಪೆಗ್-ರಮ್ ಕುಡಿಯುತ್ತಾ ಬೆಚ್ಚನೆಯ ಬಟ್ಟೆ-ಬೂಟು ಹಾಕಿಕೊಂಡು, ನೆನಪಾದಾಗಲೆಲ್ಲ ಪ್ಯಾಂಟಿನೊಳಗಿನ ಗೊಂಬೆ ಸವರಿಕೊಂಡು ಬೆಚ್ಚಗಾಗುತ್ತಾ ಅಪ್ಪರ್ ಲುಂಪೋದ ಬಯಲಿನಲ್ಲಿ ನಿಂತರೆ ಏನೂ ಅನ್ನಿಸೋದಿಲ್ಲ. ಏನೂ ಗೊತ್ತಾಗೋದಿಲ್ಲ ರವೀ. You fucking civilians. ಅವತ್ತು 1962ರಲ್ಲಿ ನೀವೆಲ್ಲ ಬೆಚ್ಚಗೆ ನಿಮ್ಮ ನಿಮ್ಮ ಮನೆಗಳಲ್ಲಿ ಮಲಗಿದ್ದಿರಿ. ನಮ್ಮ ದೇಶದ ಕೆಲವೇ ಕೆಲವು ನೂರು ಸೈನಿಕರು ಇದ್ದಕ್ಕಿದ್ದಂತೆ ನಡೆದು ಬರತೊಡಗಿದ್ದ ಚೀನಾ ಸೈನ್ಯ ಕಂಡು ಬೆಚ್ಚಿ ಬಿದ್ದಿದೆ. ಅಸಲು ಯುದ್ಧದ ಸೂಚನೆಯೇ ಇರಲಿಲ್ಲ. ಮರಾಮೋಸದ ಅಸಾಲ್ಟ್. ಹಿಂದಿ-ಚೀನಿ ಭಾಯಿ ಭಾಯಿ ಅಂತ ಹೇಳುತ್ತಲೇ ಚೀನಿ ಶತ್ರು ನಮ್ಮ ದೇಶದ ಸರಹದ್ದಿನ ತನಕ ರಸ್ತೆ, ಸೇತುವೆ ನಿರ್ಮಿಸಿ, ಲಕ್ಷಣವಾಗಿ ಶಸ್ತ್ರಾಸ್ತ್ರ ತಂದು ಪೇರಿಸಿಟ್ಟಿದ್ದ. ಅವನ ಸೈನಿಕರು ಏರಿ ಬಂದ ವಾರ್ತೆ ಕೇಳಿದ ಹಿಜಡಾ ಜವಾಹರ ಲಾಲ್ ನೆಹರೂ ಕೊನೇ ಕ್ಷಣದಲ್ಲಿ ಮೂರು ಸಾವಿರ ಸೈನಿಕರನ್ನೇನೋ ಕಳಿಸಿದ.

ಆದರೆ ಬಂದವರು ಹೇಗಿದ್ದರು?

ನಿನ್ನನ್ನು ಬೆಂಗಳೂರಿನಿಂದ ನನ್ನ base camp ಇರುವ ಲೂಮ್ಲಾಗೆ ಕರೆತರಲು ಏಳು ದಿನ ಯಾಕೆ ತಗೊಂಡೆ ಗೊತ್ತಾ? ದೇಹ ಒಂದೇ ಸಲ ಸಾವಿರಾರು ಅಡಿ ಎತ್ತರಕ್ಕೆ ಹತ್ತುವುದಿಲ್ಲ. ಅಕ್ಲಮಟೈಸ್ ಆಗಬೇಕು. ಹಂತ ಹಂತ ಏರಬೇಕು. ಆದರೆ ಒಮ್ಮೆಲೆ 16 ಸಾವಿರ ಅಡಿ ಎತ್ತರದ ಸೇಲಾ ಪಾಸ್ ದಾಟಿ ಬಂದಿದ್ದ ಭಾರತೀಯ ಸೈನಿಕ, ಮಿದುಳಿಗೆ ಆಕ್ಸಿಜನ್ ಇಲ್ಲದಂತಾಗಿ ಕಂಗಾಲಾಗಿದ್ದ. ಅವನಿಗೆ ಚಳಿಯ ಅಭ್ಯಾಸವಿಲ್ಲ. ಈ terrainನಲ್ಲಿ ಯುದ್ಧ ಮಾಡಿ ಗೊತ್ತಿಲ್ಲ. ಚಳಿ ತಡೆಯೋಣವೆಂದರೆ ಮೈಮೇಲೆ ದಿರಿಸು, ಕಾಲಲ್ಲಿ ಬೂಟು, ಹಿಮದ ಪ್ರಖರತೆಗೆ ಕಣ್ಣು ಕಳೆಯದೆ ತಡೆಯುವ ವಿಂಟರ್ ಗ್ಲಾಸು, ಕೈಗೆ ಗ್ಲೌಸು, ಕಡೇ ಪಕ್ಷ ಒಂದು ಬಿಸೀ ಕಪ್ ಚಹ ಕೂಡ ಇಲ್ಲ. ಅಂಥದರಲ್ಲೂ ನಮ್ಮ ಬ್ರಿಗೇಡಿಯರ್ ಜಾನ್.ಪಿ.ದಳವಿ ಸಾಹೇಬರನ್ನು,

\"ಸಾಹಿಬ್, ನಮಗೆ ಮದ್ದುಗುಂಡು ಕೊಡಿ. ಚೀನೀ ಶತ್ರು ಇರುವೆ ಸಾಲಿನಂತೆ ಬರುತ್ತಿದ್ದಾನೆ. ನಾವು ಬಡಿದಾಡುತ್ತೇವೆ. ಇದು ಗೆಲ್ಲುವ ಯುದ್ಧವಲ್ಲ ಗೊತ್ತು. ಆದರೂ we will fight, to last man, last bullet\'\'ಅಂದವನೇ ಶತ್ರುವಿನೆಡೆಗೆ ನುಗ್ಗಿದ್ದ.

ಕೂಡು ರವೀ, ಸಾವರಿಸಿಕೊಂಡು ಪಟಿಯಾಲಾ ಪೆಗ್ ರಮ್ ಕುಡಿ. ನೀನು ಕುಳಿತಿರೋ ಜಾಗದಲ್ಲಿ ಶತ್ರುವಿನ ಗುಂಡೇಟು ತಿಂದು ನೆಲಕ್ಕೆ ಉರುಳಿದವನು ಜಾಠನೋ, ಮರಾಠನೋ ಪಂಜಾಬಿಯೋ, ಮದರಾಸಿಯೋ? ಹ್ಯಾಗೆ ಹೇಳೋದು? ಇಲ್ಲೆಲ್ಲ ಹೆಣಗಳು ಬಿದ್ದಿದ್ದವು. ಅವುಗಳ ಮೇಲೆಯೇ ನಡೆದು ಹೋದ ಚೀನೀ ಸೈನ್ಯ ಆರಾಮಾಗಿ ಅಸ್ಸಾಮದ ತನಕ ತಲುಪಿ ನೆಹರೂಗೆ ಫೋನ್ ಮಾಡಿ,

\"ನಾವು ಗೆದ್ದಾಗಿದೆ. ಇಷ್ಟು ದೊಡ್ಡ ಬಂಜರು ತಗೊಂಡು ಏನು ಮಾಡೋಣ? ನಿನ್ನ ಬಕ್ಕ ತಲೆಯಂಥ ಬಂಜರು. Keep it for yourself. ನಾವು ವಾಪಸು ಹೊಂಟೆವು. ಹಿಂದಿ ಚೀನಿ ಭಾಯಿ ಭಾಯಿ\" ಅಂದವರೇ ವಾಪಸು ನಡೆದು ಹೋದರು.

ನಮ್ಮ ಬ್ರಿಗೇಡಿಯರ್ ದಳವಿ ಸಾಹೇಬರನ್ನು ಬಂಧಿಸಿ ಕರೆದೊಯ್ದರು. ಅವರ ಪಾಲಿಗೆ ಐದು ಸಾವಿರ ಸಿಪಾಯಿಗಳ ಒಡೆಯನಾದ ಒಬ್ಬ ಬ್ರಿಗೇಡಿಯರ್‌ನನ್ನು ಬಂಧಿಸಿ ಒಯ್ಯುವುದೆಂದರೆ ಅದಕ್ಕಿಂತ ದೊಡ್ಡ war trophy ಬೇಕೆ?

ಕುಡಿ ಕುಡಿ, ರಮ್ ಕುಡಿ.

ಮುಂದೆ ಯುದ್ಧ ಸಂಧಾನಗಳಾದವು. ಬ್ರಿಗೇಡಿಯರ್ ಬಿಡುಗಡೆಯಾದರು. ಅದನ್ನು exchange of war prisoners ಅಂತ ಕರೆಯುತ್ತಾರೆ. ಆದರೆ ಭಾರತಕ್ಕೆ ಹಿಂತಿರುಗಿದ ಬ್ರಿಗೇಡಿಯರ್ ದಳವಿಯವರನ್ನು ನೆಹರೂ ಸರ್ಕಾರ ನೋಡಿದ್ದು ಹೇಗೆ? Like a dirt. ಚೀನಾದ ಬಂದೀಖಾನೆಯಲ್ಲಿ ನಿಮ್ಮ brain wash ಆಗಿ ಬಿಟ್ಟಿದ್ದರೆ? ನೀವು ಚೀನಾದ ಏಜೆಂಟರಾಗಿ ಬಿಟ್ಟಿದ್ದರೆ? ನೀವೀಗ ಭಾರತ ವಿರೋಧಿಯಾಗಿ ಬಿಟ್ಟಿದ್ದರೆ? ಹ್ಞಾಂ, ನಾವು ಎಚ್ಚರಿಕೆ ವಹಿಸಲೇಬೇಕು ಗೊತ್ತಾ?

ಸೂಳೆ ಮಗ ನೆಹರೂ, ಭಾರತದ ಗಡಿಯಲ್ಲಿ ಚೀನಾದವನು ರಸ್ತೆ, ಸೇತುವೆ ಮಾಡಿ, ಸೈನ್ಯ ಜಮಾಯಿಸುತ್ತಿದ್ದಾಗ ವಹಿಸದ ಎಚ್ಚರಿಕೆಯನ್ನು ಬ್ರಿಗೇಡಿಯರ್ ಹಿಂತಿರುವಾಗ ವಹಿಸಿದನಂತೆ. ಅದಕ್ಕೇ ರೇಗೋದು civilians ಮೇಲೆ. ಗಾಂಡೂ ಲೋಗ್. ನೀನು ರಮ್ ಕುಡಿ ರವೀ. ಮೂರು ಸಾವಿರ ಸೈನಿಕರು ಸತ್ತ ರುದ್ರಭೂಮಿಯಲ್ಲಿ ಕೊಂಚ ಹೊತ್ತು ಕುಳಿತು ಹಿಂತಿರುಗಿದರೆ ನಿನಗೆ ಕಡೇ ಪಕ್ಷ ಮೂವತ್ತೆರಡು ವರ್ಷಗಳ ಹಿಂದಿನ ಆ ಸೂತಕ, ಆ ದ್ರೋಹ, ಆ ತ್ಯಾಗ, ಆಕ್ರಂದನ, ಅಸಹಾಯಕತೆ, ಆದ ಮೋಸ, ನಮ್ಮ ನಾಯಕರ ಹಿಪಾಕ್ರಸಿ, ಅವರ ಗಾಂಡೂ ಮಾತು ಮತ್ತು ನನ್ನಂಥ ಸೈನಿಕನ ಒಳಗುದಿ ಅರ್ಥವಾಗುತ್ತೆ. Go slow. ನಂಗೊತ್ತು. You are sensitive a writer. ಹಿಂತಿರುಗಿದ ಮೇಲೆ ಏನನ್ನಾದರೂ ಬರೆಯುತ್ತೀಯ, about the war. ಅವತ್ತು 1962ರಲ್ಲಿ ಸತ್ತ ಯೋಧರಲ್ಲಿ ನಮ್ಮವರ‍್ಯಾರೂ ಇರಲಿಲ್ಲ. ನಿಮ್ಮಪ್ಪ ಇರಲಿಲ್ಲ, ನಮ್ಮಣ್ಣ ಇರಲಿಲ್ಲ. but.

ಮುರಳಿ ನಿಧಾನವಾಗಿ ಸಿಪ್ ಮಾಡುತ್ತಾ ಅಲ್ಲಿಂದಿಲ್ಲಿಗೆ ಓಡಾಡುತ್ತಾ ಅಪ್ಪರ್ ಲುಂಪೋದ ಆ ವಿಶಾಲ ರಣ ಭೂಮಿಯಲ್ಲಿ ಮಾತನಾಡುತ್ತಾ, ಆಗೊಮ್ಮೆ ಈಗೊಮ್ಮೆ ಚೀನದ ಸರಹದ್ದಿನ ಕಡೆಗೆ ಕೆಂಡದಂಥ ಕಣ್ಣುಗಳಲ್ಲಿ ನೋಡುತ್ತಾ ಇದ್ದದ್ದು, ನಾನು ಅವತ್ತಿನ ತನಕ ನೆಹರುವಿನ ಖೊಟ್ಟಿ ಚಿತ್ರಣವನ್ನೇ ಪೂಜಿಸುತ್ತಾ ಕುಳಿತಿದ್ದುದು ಈಗಲೂ ನನ್ನ ಕಣ್ಣೆದುರಿಗೆ ಕಟ್ಟಿದಂತಿದೆ.

ಅಜಿತನಿಗೆ ಹೇಳಬೇಕೆಂದುಕೊಂಡೆ. ಅಲ್ಲಿಂದ ಹಿಂತಿರುಗಿದ ಮೇಲೆ ನಾನು ಕೇವಲ ಅರುಣಾಚಲ ಪ್ರದೇಶ್ ಯಾತ್ರೆಗೆ ಸಂಬಂಧಿಸಿದ \'ಹಿಮಗಿರಿಯ ಕಂದರದಲ್ಲಿ\' ಅಂತ ಒಂದು ಪ್ರವಾಸ ಕಥನ ಬರೆದೆ. ಅದು ಕೇವಲ ಆ ಭಾಗದಲ್ಲಿ ಜೀವಿಸುವ Monpa ಬುಡಕಟ್ಟಿನ ಬದುಕಿನ ಚಿತ್ರಣವಾಗಿತ್ತು. ಆದರೆ ಚೀನೀ ಯುದ್ಧ ಒಂದು ಆರಿದ ಅಗ್ಗಿಷ್ಟಿಕೆಯಾಗಿ ಮನದಾಳದಲ್ಲಿ ಹುದುಗಿ ಹೋಗಿತ್ತು. ಮುಂದೆ ಧಗ್ಗನೆ ಅದು ಹೊತ್ತಿ ಉರಿದದ್ದು ಕಾರ್ಗಿಲ್ ಯುದ್ಧ ಕಾಲದಲ್ಲೇ.

ಅಲ್ಲಿಗೆ ಯಾಕೆ ಹೋದೆನೋ ಗೊತ್ತಿಲ್ಲ. ಇಡೀ ಪತ್ರಿಕಾ ಸಮೂಹ ಕ್ರಿಕೆಟ್ ನೋಡುತ್ತಾ ಕುಳಿತಿದ್ದಾಗ ನಾನು ಮತ್ತು ನನ್ನ ವರದಿಗಾರ ಆರ್.ಟಿ.ವಿಠ್ಠಲಮೂರ್ತಿ ಹೆಗಲಿಗೆ ಬ್ಯಾಕ್‌ಪ್ಯಾಕ್ ಕಟ್ಟಿಕೊಂಡು ಹಿಮಾಲಯದ ಇನ್ನೊಂದು ಭುಜಕ್ಕೆ ಮೆಟ್ಟಿಲು ಹುಡುಕಿದೆವು. ಎಲ್ಲಿತ್ತು ಕಾರ್ಗಿಲ್? ನಮಗೆ ದಿಕ್ಕೇ ಗೊತ್ತಿರಲಿಲ್ಲ. ಎಲ್ಲಿತ್ತು \'ಉಡಿ\' ಸೆಕ್ಟರ್? ಹೆಸರೇ ಕೇಳಿರಲಿಲ್ಲ. ಅಲ್ಲೀತನಕ ವಿನಾಕಾರಣ ಹೋದೆವು. ಭಾರತದ ಕಟ್ಟ ಕಡೆಯ ಇನ್ನೊಂದು ಗ್ರಾಮದಲ್ಲಿ ನಿಂತು ಅಲ್ಲಿಂದಾಚೆಗಿನ ಪಾಕಿಸ್ತಾನವನ್ನು ನೋಡಿದೆವು. ಎರಡರ ಮಧ್ಯೆ ಇದ್ದುದು ಒಂದೇ ಸೇತುವೆ: ಲಾಲ್ ಪುಲ್. ಅರ್ಧ ನಮ್ಮದು. ಅರ್ಧ ಅವರದು. ನಮ್ಮ ಸೈನಿಕ ಒಂದು ಹೆಜ್ಜೆ ಆ ಕಡೆ ಇರಿಸಿದರೆ ಪಾಕಿಸ್ತಾನದ ಫಿರಂಗಿ ಮೊರೆಯುತ್ತದೆ. ಪಾಕಿ ಯೋಧ ಈಚೆಗೆ ಬಂದರೆ ಅವನ ದೇಹದ ಬೋಟಿ ಛಲ್ನಿ: ಅಲ್ಲಾಹೋಅಕ್ಬರ್.

ಅಕ್ಷರಶಃ ಭಾರತ-ಪಾಕ್ ಯುದ್ಧ ನೋಡಿದೆ. ಹದಿನೆಂಟು-ಇಪ್ಪತ್ತು ವರ್ಷಗಳ ವಯಸ್ಸಿನ ನಮ್ಮ ಸೈನಿಕರು, ಕನ್ನಡದ ಹುಡುಗರು, ನಮ್ಮ ಕೊಡವರು ಎದೆಗೆ ಗುಂಡು ತಿಂದು ಕಟ್ಟಿಗೆಯ ಪೆಟ್ಟಿಗೆಗಳಲ್ಲಿ ಶವಗಳಾಗಿ ಇಳಿದು ಬರುತ್ತಿದಾಗ ಮತ್ತೆ ಮುರಳಿಯ ಮಾತೇ ಕಿವಿಯಲ್ಲಿ ಅನುರಣಿಸಿದವು. ಅಪ್ಪರ್ ಲುಂಪೋದ ಅಗ್ಗಿಷ್ಟಿಕೆ ಉರಿಯತೊಡಗಿತ್ತು. \'ಹಿಮಾಲಯನ್ ಬ್ಲಂಡರ್‌\' ಬರೆದೆ.

ಆದರೆ ಶುದ್ಧಾನು ಶುದ್ಧ ಪ್ರವಾಸ ಕಥನ ಅಂತ ಬರೆಯಬೇಕು ಎಂಬ ತಿವಿತ ಆಗಾಗ ಮೂಡಿ ಸುಮ್ಮನಾಗುತ್ತದೆ. ಹೊಳಲ್ಕೆರೆಯಿಂದ ಆರಂಭವಾಗಿ ಮೊನ್ನೆ ಇಸ್ರೇಲ್‌ವರೆಗಿನ ಪ್ರವಾಸ ಕಥನವನ್ನು ಸರಿಯಾಗಿ ನೆನಪು ಮಾಡಿಕೊಂಡು ಬರೆದದ್ದೇ ಆದರೆ, ಅದು ಒಂದರ್ಥಧಲ್ಲಿ ನನ್ನ ಆತ್ಮ ಚರಿತ್ರೆಯೇ ಆಗಬಹುದು. ಗೆಳೆಯರಾದ ಎಂ.ಪಿ.ಪ್ರಕಾಶ್ ಮಂತ್ರಿಯಾಗಿದ್ದಾಗ ಎರಡು ಬಾರಿ ಅವರಿಗೆ ಹೇಳಿದ್ದೆ. \"ನಿಮಗೆ ಅಲ್ಲಿಗೆ ಹೋಗುವುದು ಸುಲಭ. ಅರುಣಾಚಲದ ಮುಖ್ಯಮಂತ್ರಿಯೊಂದಿಗೆ ಮಾತನಾಡಿ. ನೇರವಾಗಿ ವಿಮಾನ, ಹೆಲಿಕಾಪ್ಟರುಗಳ ಸೌಲಭ್ಯ ಸಿಗುತ್ತೆ. ತವಾಂಗ್ ತನಕ ಹೋಗಿ ಅಲ್ಲಿಂದ ಮುಂದಕ್ಕೆ ಟ್ರೆಕ್ ಮಾಡೋಣ. ನನಗೆ ಇನ್ನೊಮ್ಮೆ ಆ ಚೀನಿ-ಭಾರತ ಕದನದ ಭೂಮಿ ನೋಡಬೇಕೆನ್ನಿಸಿದೆ\" ಅಂದಿದ್ದೆ. ಅದೇನು ಕೆಲಸವೋ? ಪ್ರಕಾಶ್ ಬ್ಯುಸಿಯಾದರು. ಅಧಿಕಾರದ ಅವಧಿ ಮುಗಿಯಿತು. ನಂತರ ತೀರಿಯೂ ಹೋದರು.

ಈಗ ನೋಡಿ, 1962ರ ಯುದ್ಧದಲ್ಲಿ ಸತ್ತ ಶವಗಳು ಅದೇ ಬಾರ್ಡರಿನಲ್ಲಿ ಐವತ್ತು ವರ್ಷಗಳ ನಂತರ ಸಿಗುತ್ತವೆ. ಎದೆಯ ಮೇಲೆ ಬ್ಯಾಡ್ಜು, ಹೆಸರು, ಯಾವ ಯೂನಿಟ್? ಕೈಯಲ್ಲಿ ಖಾಲಿ ಬಂದೂಕು. To the last bullet...! ಆತನ ಮನೆಯವರಿಗೆ ಹೇಗನ್ನಿಸುತ್ತಿದೆಯೋ? ಅಪ್ಪ ಯುದ್ಧದಿಂದ ಓಡಿ ಹೋಗಿರಬೇಕು ಅಂದುಕೊಂಡಿದ್ದರೇನೋ? ಎದೆಯಲ್ಲಿ ಗುಂಡು ತಿಂದು ಆ ಮಂಜಿನ ಅಡಿಯಲ್ಲಿ ಐದು ದಶಕ ಮಿಸುಕದೆ ಮಲಗಿದ್ದ. ನೆಹರೂ ಎಂಬ ವಂಚಕನ ದೇಹದ ಬೂದಿಯನ್ನು ಎಲ್ಲ ನದಿಗಳ ನೀರಿನಲ್ಲಿ ಬೆರೆಸಲಾಯಿತು. ಅಲ್ಲಿ ಒಬ್ಬ ವೀರಯೋಧ ಒಂದು ಗೌರವಯುತ ಶವ ಸಂಸ್ಕಾರಕ್ಕಾಗಿ ಕಾಯುತ್ತಲೇ ಇದ್ದ.

ಹೇಳು ಅಜಿತ್, ಟ್ರಾವೆಲಾಗ್ ಬರೆಯುವುದೆಂದರೆ ಇದೇ ತಾನೆ? ಹೀಗೆ ಬರೆಯದಿದ್ದರೆ ಅದು ಟ್ರಾವೆಲಾಗ್ ಅನ್ನಿಸಿಕೊಂಡೀತಾ? ನೋಡು, ವಿಲಿಯಂ ಡಾರ್ಲಿಂಪ್ಲ್ ಬರೆಯುವ ಟ್ರಾವೆಲಾಗ್ (ಪ್ರವಾಸ ಕಥನ)ಗಳ ಬಗ್ಗೆ ನಿನಗೆ ಗೊತ್ತು. ಅದನ್ನು ಟ್ರಾವೆಲ್ ಜರ್ನಲಿಸಂ ಅಂತಲೇ ಅಂತಾರೆ. ಅವನನ್ನು ಓದಿದಾಗ ಮಾತ್ರ ಭಯಂಕರ ಹೊಟ್ಟೆಕಿಚ್ಚಿಗೆ ಒಳಗಾಗುತ್ತೇನೆ. ಅವನಂತೆ ನನಗೆ ಬರೆಯುವುದು ಯಾವಾಗ ಸಾಧ್ಯವಾದೀತು ಅಜಿತ್? ಅಂದೆ.

ಪಾಪ, ಇಷ್ಟರಲ್ಲೇ ಮದುವೆಯಾಗಲಿರುವ ಹುಡುಗ. ಎದುರಿಗೇ ಕೂಡಿಸಿಕೊಂಡು ಪತ್ರಿಕೋದ್ಯಮ-ಪ್ರವಾಸೋದ್ಯಮಗಳ ನೀತಿಪಾಠ ಕೊರೆದು ಪರಚಿ ಹಾಕಿದೆನಲ್ಲಾ ಅನ್ನಿಸಿ ಅವನಿಗೂ, ಅವನ ಕೈಹಿಡಿಯಲಿರುವ ಸಹನಾಗೂ ಶುಭಾಶಯ ಹೇಳಿ ಕಳಿಸಿದೆ.

ಮದುವೆಯಲ್ಲಿ ಸರಳತೆ, ಬದುಕಿನಲ್ಲಿ ವಿಜೃಂಭಣೆ ಇರಬೇಕು. ಪರಸ್ಪರರಲ್ಲಿ ನಂಬಿಕೆ ಮತ್ತು ಶುದ್ಧ ವಿಶ್ವಾಸ ಇರಬೇಕು. ಇಬ್ಬರ ಸುತ್ತ ಒಂದು ಸಮಾಜವಿದೆ. ಅದಕ್ಕೇನಾದರೂ ಒಳ್ಳೆಯದು ಮಾಡಬೇಕೆಂಬ ವಿಶ್ವಾಸವಿರಬೇಕು.

ಅದು ಅಜಿತ್ ಮತ್ತು ಸಹನಾರ ದಾಂಪತ್ಯದಲ್ಲಿರಲಿ ಎಂದು ಹಾರೈಸುತ್ತಾ,

-ನಿಮ್ಮವನು
ಆರ್.ಬಿ

Read Archieves of 28 March, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books