Ravi Belagere
Welcome to my website
ಬಹಳ ದಿನಗಳ ನಂತರ ಈ ತರಹದ್ದೊಂದು mega function ಏರ್ಪಡಿಸಿದ್ದೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ನೀವೆಲ್ಲ ಬಂದಿರಿ. ನನ್ನ ಬರವಣಿಗೆ, ತಿರುಗಾಟ, ಮುದ್ರಣ, ಬಣ್ಣ, ಈ ಸಿಂಗಾರ-ಬಂಗಾರ- ಇವೆಲ್ಲವೂ ನಿಮಗಾಗಿಯೇ ಅಲ್ಲವೆ? ಎಲ್ಲಿಯ ರಾಯಚೂರು, ಕೊಪ್ಪಳ, ಯಾದಗಿರಿ, ಗುಲಬರ್ಗ, ಚಿಂಚನ ಸೂರು, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ಮಂಗಳೂರು-ಎಲ್ಲೆಲ್ಲಿಂದ ಬಂದಿದ್ದರು ಓದುಗರು!. ಪ್ರತಿಯೊಬ್ಬರ ಕೈಲೂ ‘ಹಿಮಾಗ್ನಿ’. ಪ್ರತಿಯೊಬ್ಬರ ಕೈಲೂ ‘ಉಡುಗೊರೆ’, ‘ಅಮ್ಮ ಸಿಕ್ಕಿದ್ಲು’ ಮತ್ತು ಸಿಡಿಗಳು.
Home About Us Gallery Books Feedback Prarthana Contact Us

ನನ್ನ ಮಗ ಕರ್ನಲ್ ಆಗಲಿ ಅಂದಾತ ಮುಸಲ್ಮಾನ!

ನಮ್ಮ ಕಡೆ ಮಾರವಾಡೇರು ಪ್ರತಿ ದೀಪಾವಳಿಗೊಮ್ಮೆ ಖಾತೆ ಕಿರ್ದಿ ತೆಗೆದು ಆ ವರ್ಷಗಳ ಲಾಭ ನಷ್ಟದ ಲೆಕ್ಕ ನೋಡುತ್ತಾರೆ. ಆದರೆ ನಾನು ನೆನಪಾದಾಗೊಮ್ಮೆ ಒಂದೊಂದು ಪುಸ್ತಕದ್ದೂ ಖರ್ಚು ವೆಚ್ಚ, ಪ್ರೆಸ್‌ನಿಂದ ಬಂದ ಪ್ರತಿಗಳ ಸಂಖ್ಯೆ, ಆ ಪೈಕಿ ಎಷ್ಟು ಮಾರಾಟವಾದವು, ಅವುಗಳ ಹಣ ಬಂತೆ, re printಗೆ ಹೊರಡಬೇಕಾದಂಥವು ಯಾವು ಎಂಬೆಲ್ಲದರ ಲೆಕ್ಕ ಹಾಕುತ್ತಿರುತ್ತೇನೆ. ನಿಜ, ಬರೆಯುವವನು ಭಾವ ಜೀವಿ. ಅದರಲ್ಲೇ ಮೈ ಮರೆತರೆ ಮುಂದೆಂದೋ ಅಕೌಂಟು ಬಿಚ್ಚಿ ನೋಡಿದಾಗ ಕಿರುಲಿಕೊಳ್ಳುವಂತಾಗಬಾರದಲ್ಲ?

ನನಗೆ ಅಚ್ಚರಿ ಮತ್ತು ಸಂತಸ ಹುಟ್ಟಿಸಿರುವುದು \'ಹಿಮಾಗ್ನಿ\' ಕಾದಂಬರಿಯ ಮಾರಾಟ ಮತ್ತು ವೇಗ. \"ರವಿ ಬೆಳಗೆರೆಯ ಯಾವುದೇ ಪುಸ್ತಕವಿರಲಿ. ಹಿಂದು ಮುಂದು ಯೋಚಿಸದೆ ಮೊದಲ ಮುದ್ರಣಕ್ಕೇ 10 ಸಾವಿರ ಪ್ರತಿ ಹಾಕಿಸಿ\" ಅನ್ನುತ್ತಾರೆ. ಅದೇ ಧೈರ್ಯದಲ್ಲಿ ನಾನೂ \'ಹಿಮಾಗ್ನಿ\', \'ಅಮ್ಮ ಸಿಕ್ಕಿದ್ಲು\' ಮತ್ತು \'ಉಡುಗೊರೆ\' ತಲಾ ಹತ್ತು ಸಾವಿರದಂತೆ ಪ್ರಿಂಟ್ ಹಾಕಿಸಿದೆ. ನೀವು ಊಹಿಸಲಾರಿರಿ. ಇವತ್ತು \'ಅಮ್ಮ ಸಿಕ್ಕಿದ್ಲು\' ಪುಸ್ತಕದ ಪ್ರತಿಗಳು ಕೇವಲ 243 ಉಳಿದಿವೆ. ಬಿಡಿ, ಅದು ಬರೀ 100/- ರುಪಾಯಿಯ ಪುಟ್ಟ ಪುಸ್ತಕ.

ಆದರೆ ಹಿಮಾಗ್ನಿ? ಐದು ನೂರ ಇಪ್ಪತ್ತು ಪುಟಗಳ ರೆಟ್ಟೆ ಗಾತ್ರದ ಪುಸ್ತಕಕ್ಕೆ 350/- ರುಪಾಯಿ ಬೆಲೆ ಇಡುವಾಗ ನಿಜಕ್ಕೂ ಸಂಕೋಚವೆನ್ನಿಸಿತ್ತು. ಇಷ್ಟು ಬೆಲೆ ಕೊಟ್ಟು ನಮ್ಮ ಓದುಗರು ಓದಿಯಾರಾ ಎಂಬ ಆತಂಕವೂ ಇತ್ತು. ಅನೇಕ ದೇಶ ತಿರುಗಿ, ಖರ್ಚು ಮಾಡಿ, ಅನೇಕ ಪುಸ್ತಕ ತರಿಸಿ ಓದಿ, ಎಲ್ಲಂದರಲ್ಲಿ ತಲೆ ಮರೆಸಿಕೊಂಡು ಕುಳಿತು ಬರೆದ, ಅತ್ಯಂತ ಒಳ್ಳೆಯ ಕಾಗದ ಬಳಸಿ, case binding ಮಾಡಿಸಿ ಸಿದ್ಧ ಪಡಿಸಿದ ಕೃತಿಯದು. ಒಂದರ್ಥದಲ್ಲಿ \'ದೊಡ್ಡ ಕುದುರೆ ಚೇಷ್ಟೆ\'ಯಂತಹುದು. ಆದರೆ ಇವತ್ತು ಕಂಪ್ಯೂಟರ್ ಬಿಚ್ಚಿ ನೋಡಿದರೆ ಹತ್ತು ಸಾವಿರ ಪ್ರತಿಗಳ ಪೈಕಿ ಕೇವಲ 686 ಪ್ರತಿ ಉಳಿದಿವೆ. \'ಉಡುಗೊರೆ\'ಯಾದರೂ ಅಷ್ಟೆ. ಇನ್ನೊಂದು ತಿಂಗಳಲ್ಲಿ ಮರು ಮುದ್ರಣಕ್ಕೆ ಹೋಗಲೇಬೇಕು.

ಜನರನ್ನು ತಲುಪಲಾರದ್ದು, ಜನಕ್ಕೆ ಅರ್ಥವಾಗಲಾರದ್ದು ಯಾವತ್ತಿಗೂ ಬರೆಯಕೂಡದು. ಮಾರಾಟವೊಂದೇ ಪುಸ್ತಕದ ಶ್ರೇಷ್ಠತೆಯನ್ನು ನಿರ್ಧರಿಸುವುದಿಲ್ಲವೆಂಬುದು ನನಗೆ ಗೊತ್ತು. ಹಲ್ಲಿ ಶಕುನದ ಪುಸ್ತಕ ಅತಿ ಹೆಚ್ಚು ಮಾರಾಟವಾಗುತ್ತದೆ. ಅದನ್ನು ಶ್ರೇಷ್ಠ ಸಾಹಿತ್ಯವೆನ್ನಲಾದೀತೇ? ಜಗತ್ತಿನಲ್ಲಿ ಅತಿ ಹೆಚ್ಚು ಮಾರಾಟವಾಗುವ ಪುಸ್ತಕ ಬೈಬಲ್. ಆದರೆ ಎಷ್ಟು ಜನ ಓದುತ್ತಾರೆ? ಕ್ರೈಸ್ತರು ಹೆಚ್ಚಿರುವುದರಿಂದ, ಪ್ರತಿ ಕ್ರೈಸ್ತರೂ ಅದನ್ನು ಹೊಂದಿರಬೇಕೆಂಬ ನಿಯಮವಿರುವುದರಿಂದ ಬೈಬಲ್ ಖರೀದಿಯಾಗುತ್ತದೆ. ಆದರೆ ಪುಸ್ತಕದ ಸಾರ್ಥಕತೆಯ ಮಾನದಂಡ ಅದಲ್ಲ.

\'ಹಿಮಾಗ್ನಿ\' ಬರೆದಾಗ ಇದು ಎಲ್ಲೋ ಒಂದು ಕಡೆ ಮುಸ್ಲಿಂ ವಿರೋಧಿ ಕೃತಿ ಅನ್ನಿಸಿಕೊಂಡೀತಾ ಎಂಬ ಅಳುಕು ನನ್ನಲ್ಲಿತ್ತು. ಆದರೆ ಪುತ್ತೂರಿನ ಮನ್ಸೂರ್ ಎಂಬ ಓದುಗರೊಬ್ಬರು ನನಗೆ ಫೋನ್ ಮಾಡಿ \"ನನ್ನ ಮಗ ಮುಂದೆ ಭಾರತದ ಸೈನ್ಯದಲ್ಲಿ ಒಬ್ಬ ಕರ್ನಲ್ ಆಗಲಿ ಎಂಬ ಕನಸು ಕಾಣುವಂತೆ ಮಾಡಿತು ಹಿಮಾಗ್ನಿ\" ಎಂದು ಬರೆದಿದ್ದಾರೆ.

ಅಷ್ಟು ಸಾಕು: ಸಮಾಧಾನ, ನೆಮ್ಮದಿಗಳ ಅಕೌಂಟು ತುಂಬಿ ಹೋದಂತಾಗಿದೆ.

ಅಂದ್ಹಾಗೆ, ಹ್ಯಾಪಿ ಉಗಾದಿ.

-ಬೆಳಗೆರೆ

Read Archieves of 26 March, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books