Ravi Belagere
Welcome to my website
ಬಹಳ ದಿನಗಳ ನಂತರ ಈ ತರಹದ್ದೊಂದು mega function ಏರ್ಪಡಿಸಿದ್ದೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ನೀವೆಲ್ಲ ಬಂದಿರಿ. ನನ್ನ ಬರವಣಿಗೆ, ತಿರುಗಾಟ, ಮುದ್ರಣ, ಬಣ್ಣ, ಈ ಸಿಂಗಾರ-ಬಂಗಾರ- ಇವೆಲ್ಲವೂ ನಿಮಗಾಗಿಯೇ ಅಲ್ಲವೆ? ಎಲ್ಲಿಯ ರಾಯಚೂರು, ಕೊಪ್ಪಳ, ಯಾದಗಿರಿ, ಗುಲಬರ್ಗ, ಚಿಂಚನ ಸೂರು, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ಮಂಗಳೂರು-ಎಲ್ಲೆಲ್ಲಿಂದ ಬಂದಿದ್ದರು ಓದುಗರು!. ಪ್ರತಿಯೊಬ್ಬರ ಕೈಲೂ ‘ಹಿಮಾಗ್ನಿ’. ಪ್ರತಿಯೊಬ್ಬರ ಕೈಲೂ ‘ಉಡುಗೊರೆ’, ‘ಅಮ್ಮ ಸಿಕ್ಕಿದ್ಲು’ ಮತ್ತು ಸಿಡಿಗಳು.
Home About Us Gallery Books Feedback Prarthana Contact Us

ಕಾಂಗ್ರೆಸ್ಸಿನ ಉದ್ಧಾರಕ್ಕೆ ಕೃಷ್ಣ ಬರಬೇಕು : ಆದರೆ ಗಂಟೆ ಕಟ್ಟೋರು ಯಾರು?

\"ಕೊಳ್ಳೋದಿದ್ದರೆ ಈಗಲೇ ಕಾರು ಕೊಂಡುಬಿಡಿ. ಇಷ್ಟರಲ್ಲೇ ಬಜೆಟ್ಟು. ಡಿಸೇಲ್ ರೇಟು, ಡಿಸೇಲ್ ಕಾರುಗಳ ರೇಟು ಜಾಸ್ತಿಯಾಗಲಿದೆ\" ಅಂತ ಗೆಳೆಯರೊಬ್ಬರು ಸಲಹೆ ನೀಡಿದರು. ಒಂದು ಸಲಕ್ಕೆ ಕಣ್ಣೆದುರಿಗೆ ಬೆಂಗಳೂರಿನ ಜೆ.ಸಿ.ರೋಡ್‌ನ ಟ್ರಾಫಿಕ್‌ನ ಚಿತ್ರ ಮೂಡಿ ನಿಂತಿತ್ತು. ಬಂಪರ್ ಟು ಬಂಪರ್ ಟ್ರಾಫಿಕ್ಕು. ಇಷ್ಟೆಲ್ಲ ಕಾರು ಎಲ್ಲಿಂದ ಬರುತ್ತವೆ? ನಾನು 1995ರಲ್ಲಿ ಕಾರು ಕೊಂಡಾಗ ಸಲೀಸಾಗಿ ಓಡಿಸುತ್ತಿದ್ದೆ. 1988ರಲ್ಲಿ ಸುಝಕಿ ಹತ್ತಿ ಬೆಂಗಳೂರಿಗೆ ಬಂದಾಗ ರಸ್ತೆಗಳಲ್ಲಿ ಓಡಾಡುವುದೇ ಒಂದು ವಿನೋದ. ಶನಿವಾರ-ಭಾನುವಾರ ಬಂದರೆ ರೈಡಿಂಗ್‌ನ ಆನಂದವೇ ಬೇರೆ. ಈಗ ಆಫೀಸಿನೆದುರು ಬುರುಖಾ ಹೊದ್ದು ನಿಂತಿರುವ ಹೊಸ ಕಾರಿನ ಇಗ್ನಿಷನ್ ತಿರುವಲು ಒಂದು ವಾರದಿಂದ ಮೀನ ಮೇಷ ಏಣಿಸುತ್ತಿದ್ದೇನೆ.

ಅಂಥದರಲ್ಲಿ ಇವತ್ತು ಪತ್ರಿಕೆಯಲ್ಲಿ ಓದಿದೆ. ಫೆಬ್ರುವರಿಯಲ್ಲಿ 13% ಕಾರುಗಳ ಮಾರಾಟ ಹೆಚ್ಚಿದೆಯಂತೆ. ಕಾರಣ ಹೆಚ್ಚಲಿರುವ ಬಜೆಟ್ ತೆರಿಗೆ ಸುಂಕ. ಹೋದ ಫೆಬ್ರುವರಿಯಲ್ಲಿ 2.11 ಲಕ್ಷ ಕಾರು ಮಾರಾಟವಾಗಿದ್ದವು. ಈ ವರ್ಷ ಅದಕ್ಕಿಂತ ಜಾಸ್ತಿ. ಬೈಕು, ಸ್ಕೂಟರುಗಳ ಕಡೆಗೆ ನೋಡಿದರೆ 4.70 ಲಕ್ಷ ವಾಹನಗಳ ಮಾರಾಟ! ತೆರಿಗೆ ಸುಂಕ ಹೆಚ್ಚಲಿದೆ ಅಂತ ಸರ್ಕಾರ ಹುಟ್ಟಿಸುವ ಭಯ. ಅದಕ್ಕೆ ಭೂತಗನ್ನಡಿ ಹಿಡಿದು ಬೆದರಿಸುವ ಕಂಪೆನಿಗಳು. ಅಯ್ಯೋ ತುಟ್ಟಿಯಾಗಿ ಹೋದರೆ ಗತಿಯೇನು ಅಂತ ಚಡಪಡಿಸೋ ನಾವು. ಹೆದರಬೇಡಿ, ನಿಮ್ಮ ಮನೆಗೇ ಸಾಲ ಕೊಟ್ಟು ಕಾರು ತಂದು ನಿಲ್ಲಿಸುತ್ತೇವೆ ಎಂಬ ಬ್ಯಾಂಕುಗಳು. ಪರಿಣಾಮವೆಂದರೆ, ನಮಗೆ ಬೇಕಿರಲಿ ಬಿಡಲಿ : ಕಾರುಗಳ ಭರ್ಜರಿ ಮಾರಾಟ. ಎರಡನೆಯ ಪರಿಣಾಮವೆಂದರೆ ಬೆಂಗಳೂರಿನ ಪ್ರಶಾಂತ ರಸ್ತೆಗಳಲ್ಲಿ ಇರುಕ್ಕು ಟ್ರಾಫಿಕ್ ಉಂಟಾಗಿ, ಫುಟ್‌ಪಾತುಗಳು ನಶಿಸಿ, ನಡೆದಾಡಲು ಜಾಗವಿಲ್ಲದಂತಾಗಿ, ಕಡೆಗೆ ಹೂವು ಹಣ್ಣು ಮಾರುವವರ ಎತ್ತಂಗಡಿ. ಗೆಳೆಯರು ನಿಂತು ಹರಟುವ ಜಾಗದಲ್ಲಿ \'ಕಾಸು ಕೊಟ್ಟು ಪಾರ್ಕಿಂಗ್‌\'. ರೆಸಿಡೆನ್ಷಿಯಲ್ ಏರಿಯಾಗಳಲ್ಲಿ ಮನೆ ಮನೆಯ ಮುಂದೆ ಎರಡು ಮೂರು ಕಾರು.

ಗಮನಿಸಿ ನೋಡಿದರೆ, ಇದೆಲ್ಲವೂ ಒಂದು ವ್ಯವಸ್ಥಿತ ಮಾಫಿಯಾ ಅನ್ನಿಸುವುದಿಲ್ಲವೆ? ವನ್ನೆ ಮೊನ್ನೆಯವರೆಗೂ ನಾವು ಕಾರಿಲ್ಲದೆ ಬದುಕಿದವರು. ಊರಲ್ಲಿ ಒಬ್ಬ ಲಾಯರು, ಒಬ್ಬ ಡಾಕ್ಟರು, ಒಬ್ಬ ಯಾರೋ ಶ್ರೀಮಂತ ಒಂದು ಕಾರಿಟ್ಟುಕೊಂಡು ಇಪ್ಪತ್ತು ವರ್ಷ ಅದನ್ನೇ ಓಡಿಸುತ್ತಿದ್ದ. ನಮಗೆ ಲ್ಯಾಂಬ್ರೆಟ್ಟಾ, ಸುಝಕಿ, ರೋಡ್‌ಕಿಂಗು ಸಾಕಾಗುತ್ತಿದ್ದವು. ಈಗ ಮಧ್ಯಮ ವರ್ಗಕ್ಕೂ ಕಾರು ಲಕ್ಷುರಿಯಲ್ಲ : ನೆನೆಪಿಡಿ. ನಮ್ಮ ಎಕಾನಮಿ ದಾರಿ ತಪ್ಪಿತಾ? ಚಿಂತನೆ ದಾರಿ ತಪ್ಪಿತಾ? ಗ್ಲೋಬಲೈಸೇಷನ್ ದಾರಿ ತಪ್ಪಿಸಿತಾ? ಕಾಂಗ್ರೆಸ್ಸಿಗರು ಇದೆಲ್ಲಕ್ಕೂ ಕಾರಣರಾದರಾ?

ಮೊನ್ನೆ ಐದು ರಾಜ್ಯಗಳ ಚುನಾವಣಾ ಫಲಿತಾಂಶಗಳನ್ನು ಗಮನಿಸುತ್ತಿದ್ದೆ. ಸೋನಿಯಾ ಗಾಂಧಿ ಬಕ್ಕ ಬಾರಲು ಬಿದ್ದಿದ್ದಾರೆ. ಆಕೆಯ ಆರೋಗ್ಯ ಕೆಟ್ಟಿದೆ. ಈಗ ಸದ್ಯಕ್ಕೆ ಮಗನನ್ನು ಪ್ರಧಾನಿಯನ್ನಾಗಿ ನೋಡಿದರೆ ಉಂಟು. ಅದರ ಮರು ಚುನಾವಣೆ ಹೊತ್ತಿಗೆ ಆಕೆ ಇರ‍್ತಾರೆಂಬ ಖಾತರಿಯಿಲ್ಲ. ಒಳಗೇ ತಿಂದು ಹಾಕುತ್ತಿರುವ ಕ್ಯಾನ್ಸರಿನ ಬಗ್ಗೆ ಆಕೆ ಅಥವಾ ಕಾಂಗ್ರೆಸ್ಸಿಗರು ಮಾತನಾಡುತ್ತಿಲ್ಲ. ಉತ್ತರ ಪ್ರದೇಶದಲ್ಲಿ, ದೇಶದ ಅತಿ ದೊಡ್ಡ ನಿರ್ಣಾಯಕ ಹಿಂದಿ ಬೆಲ್ಟ್‌ನಲ್ಲಿ, ತಮ್ಮದೇ ತವರು ಕ್ಷೇತ್ರಗಳಲ್ಲಿ ನೆಹರೂ-ಗಾಂಧಿ ಕುಟುಂಬ ಭರಿಸಲಾಗದ ಱಥಪ್ಪಡ್‌ೞ ತಿಂದಿದೆ. ಅಲ್ಲಿ ದಲಿತರು ಮಾಯಾವತಿಯೊಂದಿಗೆ ಉಳಿದಿರುವಂತೆ ಕಂಡರೂ, ಬ್ರಾಹ್ಮಣರು ಸಾರಾಸಗಟಾಗಿ ಮುಲಾಯಂ ಸಿಂಗ್ ಯಾದವ್ ಕಡೆಗೆ ವಾಲಿದ್ದಾರೆ. ಮಾಯಾವತಿ ಗೆಲ್ಲುವ ಕುದುರೆಯಲ್ಲ ಅಂತ ಖಚಿತವಾದಾಗ ಮುಸ್ಲಿಮರು ಸಹಜವಾಗಿಯೇ ಮುಲಾಯಂನ ಬೆನ್ನಿಗೆ ನಿಂತಿದ್ದಾರೆ. ಈ ಮಧ್ಯೆ ಹೆಸರು ಕೆಡಿಸಿಕೊಳ್ಳದ, ಉತ್ತಮ ಶಿಕ್ಷಣ ಹಿನ್ನೆಲೆಯನ್ನೂ ಹೊಂದಿರುವ ಮುಲಾಯಂನ ಮಗ ಅಖಿಲೇಶ್ ಯಾದವ್ ಉತ್ತರ ಪ್ರದೇಶ್‌ದಲ್ಲಿ ಹೊಸ ತಲೆಮಾರಿನ ಅತ್ಯಂತ ಕಿರಿಯ ನಾಯಕನಾಗಿ ಹೊರಹೊಮ್ಮಿದ್ದಾನೆ.

ಇದು ಇಡೀ ರಾಷ್ಟ್ರ ರಾಜಕಾರಣಕ್ಕೆ ನೀಡಲಾದ ಸಂದೇಶವಾ? ಮುಲಾಯಂ ಸಿಂಗ್ ಯಾದವ್‌ಗೆ ಪ್ರಧಾನ ಮಂತ್ರಿಯಾಗುವ ನಿರೀಕ್ಷೆ, ಸಿದ್ಧತೆ ಮತ್ತು ಆಸೆ ಇದೆ. ಅದರರ್ಥ, ದೇಶದಲ್ಲಿ ಈ ಹಿಂದೆ ಖಚಿತವಾಗಿದ್ದ ತೃತೀಯ ರಂಗ ರಚನೆಯಾಗಲಿದೆಯಾ? ಹಿಂದೆ ದೇವೆಗೌಡ, ಚಂದ್ರಬಾಬು ನಾಯ್ಡು, ಕರುಣಾನಿಧಿ, ಲಾಲೂ ಪ್ರಸಾದ್ ಯಾದವ್ ಮತ್ತು ಕಮ್ಯುನಿಸ್ಟರು ಸೇರಿ ತೃತೀಯ ರಂಗ ರಚಿಸಿದ್ದರು. ಈಗಲೂ ದೇವಗೌಡರಿಗೆ ತೃತೀಯ ರಂಗ ಬೇಕು. ಕಾಂಗ್ರೆಸ್ಸೂ ಅಲ್ಲದ, ಬಿಜೆಪಿಯೂ ಅಲ್ಲದ ಒಂದು ವೇದಿಕೆ ಬೇಕು. ಅತ್ತ ಕನಿಮೋಳಿಯನ್ನು ತಿಹಾರ್ ಜೈಲಿಗೆ ಕಳಿಸಿದ ಕಾಂಗ್ರೆಸ್‌ನೊಂದಿಗೆ ಕರುಣಾನಿಧಿ ಮತ್ತೆ ಕೂಡಿಕೆ ಒಲ್ಲ. ಕಮ್ಯುನಿಸ್ಟರೂ ಶಾಶ್ವತವಾಗಿ ಹೊರಬಿದ್ದರೆ, ತೃತೀಯ ರಂಗ ಸ್ಥಿರಗೊಂಡೀತು.

ಇನ್ನು ಬಿಜೆಪಿಯ ಸ್ಥಿತಿ ಚಿಂತಾಜನಕ. ಪಂಜಾಬಿನಲ್ಲಿ ಬಾದಲ್‌ನ ಹೊರತಾಗಿ ಅದು ಶೂನ್ಯ. ಉತ್ತರ ಪ್ರದೇಶ್‌ದಲ್ಲಿ ಕಾಂಗ್ರೆಸ್ಸಿಗೆ ಸರಿಸಮವಾಗಿ \'ಥಪ್ಪಡ್‌\' ತಿಂದ ಪಕ್ಷವದು. ತೀರ ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ಕಿತ್ತಾಡಿಕೊಂಡರು. ಕರ್ನಾಟಕದಲ್ಲಿ ಬಿಜೆಪಿ ಪರಿಸ್ಥಿತಿ ಏನೆಂಬುದು ಎಲ್ಲರಿಗೂ ಗೊತ್ತಿದೆ. ಸದಾನಂದ ಗೌಡರನ್ನು ಇಳಿಸಿ ಮತ್ತೆ ತನ್ನನ್ನು ಮುಖ್ಯ ಮಂತ್ರಿಯನ್ನಾಗಿ ಮಾಡದಿದ್ದರೆ ನೆಟ್ಟಗಿರಲ್ಲ ಎಂದು ಯಡಿಯೂರಪ್ಪ ಗುಡುಗಿದ ಕೂಡಲೆ, ಅದಕ್ಕೆ ಮೊದಲು ಕಿವಿಗೊಟ್ಟಿದ್ದೇ ಸೋನಿಯಾ
ಗಾಂಧಿ. ಆಕೆಯ ಪರಿಸ್ಥಿತಿ ಈಗ ಹೇಗಿದೆಯೆಂದರೆ, ಯಾವ ರಾಜ್ಯದಲ್ಲಿ ಯಾವ ಪಕ್ಷದಲ್ಲಿ, ಯಾವ ಪ್ರಬಲಿಗನ ಬಂಡಾಯ ಇದ್ದರೆ ಅವನ ಹೆಗಲ ಮೇಲೆ ಕೈಯಿರಿಸಿ, ಆ ಪಕ್ಷ ಒಡೆದು, ಶತಾಯಗತಾಯ ಅಧಿಕಾರಕ್ಕೆ ಬರಬೇಕು. ಹೀಗಾಗಿ ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ನಿರ್ಧಾರ ಘೋಷಿಸುತ್ತೇನೆ ಎಂದು ಹೊರಟಾಕ್ಷಣ, ಹೆಗಲ ಮೇಲೆ ಕೈಯಿರಿಸಿ ಸಂದೇಶ ಕಳಿಸಿದರು. ಅಂದು ಯಡಿಯೂರಪ್ಪ ಪಕ್ಷ ಒಡೆದು ನಡೆದೇ ಬಿಡುತ್ತಾರೆ ಅಂದುಕೊಳ್ಳಲಾಗಿತ್ತು. ಆದರೆ ಒಳ ಮಾತುಕತೆ ಎಷ್ಟು ಪರಿಣಾಮಕಾರಿಯಾಗಿದ್ದವೆಂದರೆ, ಯಡ್ಡಿಯ ಧಾಟಿಯೇ ಬದಲಾಯಿತು. ಅದಕ್ಕೆ ಸರಿಯಾಗಿ ಯಡ್ಡಿ ಬಗ್ಗೆ ಬಿಜೆಪಿಯ ಹೈಕಮ್ಯಾಂಡೂ ಮೃದುವಾಯಿತು.

ಬಿಜೆಪಿಯಲ್ಲೂ ಎಲ್ಲ ಸರಿಯಿಲ್ಲ. ಮೋದಿಯನ್ನು ಪ್ರಧಾನಿಯನ್ನಾಗಿಸುತ್ತೇವೆ ಅಂದ ಮರುಕ್ಷಣ ಚಂದ್ರಬಾಬು ನಾಯ್ಡುವಿನಂತಹ ಸ್ನೇಹಿತರು ದೂರವಾಗಿ ಬಿಡುತ್ತಾರೆ. ಪಿತಾಮಹ ಲಾಲಕೃಷ್ಣ ಅದ್ವಾನಿ ಸುಮ್ಮನೆ ಬಿಡುವುದಿಲ್ಲ. ಗೆಳೆತನದಲ್ಲೇ ಈ ತನಕ ಇರುವ ನಿತೀಶ್ ಕುಮಾರ್ ಕೆರಳುತ್ತಾರೆ. ಅಮ್ಮ ಸುಷ್ಮಾ ಸ್ವರಾಜ್ ಸಿಡಿಮಿಡಿಗೊಳ್ಳುತ್ತಾರೆ. ಅವರೀಗ ಹಾಳೂರ ಕೋಟೆಯ ಬಾಗಿಲನ್ನಾದರೂ ಭದ್ರಪಡಿಸಿಕೊಳ್ಳಬೇಕು.

ಮತ್ತೇನಲ್ಲದಿದ್ದರೂ ಕರ್ನಾಟಕದಲ್ಲಿ ಕಾಂಗ್ರೆಸ್ಸು ಬೆಳೆಯದಂತೆ ಮತ್ತೆ ಚಿಗುರದಂತೆ ನೋಡಿಕೊಳ್ಳಬೇಕು. ಅವರಿಗಿರುವ ಮೊದಲ ಅಪಾಯವೆಂದರೆ ಎಸ್ಸೆಂ. ಕೃಷ್ಣ. ಕೇಂದ್ರದಲ್ಲಿ ಬಹುದೊಡ್ಡ ಸ್ಥಾನದಲ್ಲಿರುವ ಕೃಷ್ಣ ರಾಜ್ಯರಾಜಕಾರಣಕ್ಕೆ ಉಳಿದೆಲ್ಲ ಬಿಟ್ಟು ಹಿಂತಿರುಗಲಾರರೇನೋ? ಆದರೆ ಒಂದು ಕಾಲು ಅವರು ಈಚೆಗೆ ಇಡಲಿಕ್ಕೂ ಸಾಕು. ಅವರೊಂದಿಗೆ ಪರಮೇಶ್ವರ್ ಸೇರಿಕೊಳ್ಳುತ್ತಾರೆ. ಜೊತೆಗೆ ಹಣ ಬಲ ಮತ್ತು ಜಾತಿ ಬಲವಿರುವ ಶಾಮನೂರು ಮಲ್ಲಿಕಾರ್ಜುನರಂಥ ಯುವ ಲಿಂಗಾಯತ ನಾಯಕರು ಜೊತೆಯಾದರೆ ಆಗ ಮಾತ್ರ ಕಾಂಗ್ರೆಸ್ಸಿಗೆ ರಾಜ್ಯದಲ್ಲಿ ಬಲ ಬರಲು ಸಾಧ್ಯ. Face lift ಸಿಗಲು ಸಾಧ್ಯ. ಯಡಿಯೂರಪ್ಪನವರನ್ನು ದೊಡ್ಡ ಮಟ್ಟದಲ್ಲೇ ಹಣಿಯಬೇಕು. ಅದಕ್ಕೆ ಸಿಬಿಐ ಇದೆ. ಉಳಿದ ಚಿಳ್ಳಿಪಿಳ್ಳಿ ಲಿಂಗಾಯತ ನಾಯಕರನ್ನು ಹಣಿಯಲು ಕಾಂಗ್ರೆಸ್‌ನಲ್ಲಿ ಆಸಕ್ತಿ ಕಳೆದುಕೊಂಡು ಮಲಗಿದ ಹಳೇ ಪಂಟರುಗಳಿಗೆ ಜೀವ ನೀಡಬೇಕು. ದೇವೆಗೌಡರ ವಕ್ಕಲಿಗರ ಸವಾಲ್‌ಗೆ ಪ್ರತ್ಯುತ್ತರವನ್ನು ಎಸ್ಸೆಂ. ಕೃಷ್ಣ ಮಾತ್ರ ನೀಡಬಲ್ಲರು. ಇವತ್ತಿಗೂ ಅವರು ಸಭ್ಯ, ವಕ್ಕಲಿಗ ನಾಯಕ. ಜೊತೆಗೆ ಅವರನ್ನು urban voter ನಂಬುತ್ತಾನೆ. ಉಳಿದಂತೆ ಎಸ್ಸೆಂ. ಕೃಷ್ಣ ತಮ್ಮ ಹಾಗೂ ಪಕ್ಷದ ಇಮೇಜಿಗೆ ಧಕ್ಕೆ ತಂದುಕೊಳ್ಳದಂತೆ, ಹೈಕಮ್ಯಾಂಡಿನೊಂದಿಗೂ ಹಗ್ಗ ಹರಿದುಕೊಳ್ಳದಂತೆ ಕೆಲಸ ನಿರ್ವಹಿಸಬಲ್ಲರು. ಆದರೆ ಅವರನ್ನು ಕರ್ನಾಟಕಕ್ಕೆ ಕರೆತಂದು ಚುನಾವಣಾ ಜವಾಬ್ದಾರಿಯ ಗಂಟೆ ಕಟ್ಟುವವರು ಯಾರು?
***
ಇದೆಲ್ಲ ರಾಜಕಾರಣ, ಚುನಾವಣೆ ಇತ್ಯಾದಿಗಳ ಮಾತಾಯಿತು. ಕಳೆದ ಕೆಲದಿನಗಳಿಂದ ಬೆಳಗೆರೆ ಕೃಷ್ಣ ಶಾಸ್ತ್ರಿಗಳ ಜೀವನ ಕಥನ ಬರೆಯುವುದರಲ್ಲಿ ಮುಳುಗಿ ಹೋಗಿರುವುದರಿಂದ ನನಗೆ ಬೇರೇನನ್ನೂ ಮಾಡುವ, ಯೋಚಿಸುವ, enjoy ಮಾಡುವ ಕುತೂಹಲವೂ ಇಲ್ಲದಂತಾಗಿದೆ. ಇದರ ಮಧ್ಯೆಯೂ ಕೆಲವು ಸಂಗತಿಗಳನ್ನು ಹೇಳಬೇಕು.

ನನ್ನ ಮಗಳು ಭಾವನಾ ಮತ್ತು ಕಿಟ್ಟಿ ಸೇರಿಕೊಂಡು ಚಿಕ್ಕ ಬಜೆಟ್‌ನಲ್ಲಿ, ಅತಿ ನೂತನ ತಂತ್ರಜ್ಞಾನ ಬಳಸಿ \'ಬಾಲ್‌ಪೆನ್‌\' ಎಂಬ ಮಕ್ಕಳ ಚಿತ್ರ ನಿರ್ಮಿಸಿದ್ದಾರೆ. ಮಕ್ಕಳ, ಅದರಲ್ಲೂ ನಿರ್ಗತಿಕ ಮಕ್ಕಳ ಓದುವ ಹಂಬಲವನ್ನು ಬೆಳೆಸಬೇಕು ಎಂಬುದರ ಕುರಿತಾದ ಮುದ್ದಾದ, ಮಟ್ಟಸವಾದ ಸಿನೆಮಾ. ಅದರ ಆರಂಭ ಭಾವನಾಳ ಮಗಳು ಪರಿಣಿತಾಳೊಂದಿಗೆ ಆಗಿ, ಸಿನೆಮಾ ಅಂತ್ಯ ತೊಂಬತ್ತಾರರ ಹಿರಿಯ ಬೆಳಗೆರೆ ಕೃಷ್ಣ ಶಾಸ್ತ್ರಿಗಳೊಂದಿಗೆ ಆಗಿರುವುದೊಂದು ವೈಶಿಷ್ಟ್ಯ. ನನ್ನ ಮಿತ್ರ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಬೊಳುವಾರು ಮಹ್ಮದ್ ಕುಂಯ್ಞಿ ಮೊನ್ನೆ ಸಿನೆಮಾದ ಆಡಿಯೋ ರಿಲೀಸ್‌ಗೆ ಅತಿಥಿಯಾಗಿ ಬಂದಿದ್ದರು. ಏನೇ ಮಾಡಿದರೂ ಬೆಳಗೆರೆ ಕುಟುಂಬ ಅಕ್ಷರ ಪ್ರಪಂಚಕ್ಕೆ ಸಂಬಂಧಿಸಿದುದನ್ನೇ ಮಾಡುತ್ತದೆ ಎಂಬ ಸಮಾಧಾನ ನನ್ನದು. ಚಿಕ್ಕ ಬಜೆಟ್‌ನ ಚಿತ್ರವಾದರೂ ಕಮರ್ಷಿಯಲ್ ಚಿತ್ರಗಳಂತೆಯೇ ಬಿಡುಗಡೆಯಾಗಲಿರುವ \'ಬಾಲ್‌ಪೆನ್‌\' ಚಿತ್ರಕ್ಕೆ ನಿಮ್ಮ ಆಶೀರ್ವಾದವಿರಲಿ.
***
ನನ್ನ ಪಾಲಿನ ಅಣ್ಣ, ಮಾರ್ಗದರ್ಶಿ, ಹಿತೈಷಿ ಎಲ್ಲವೂ ಆದ ಟಿ.ಎನ್.ಸೀತಾರಾಂ ತಮ್ಮ ತಾಯಿಯನ್ನು ಕಳೆದುಕೊಂಡಿದ್ದಾರೆ. ಅವರು ಕೆಲ ತಿಂಗಳಿಂದ ಕೋಮಾವಸ್ಥೆಯಲ್ಲಿದ್ದರು. ಯಾವಾಗಲೋ ಬರುತ್ತಿದ್ದ ಪ್ರಜ್ಞೆ. ಆ ಸ್ಥಿತಿಯಲ್ಲಿ ನಾನು ನನ್ನ ತಾಯಿಯನ್ನು ಹದಿಮೂರು ದಿನ ನೋಡಿದ್ದೇನೆ. ನಿಜಕ್ಕೂ ಅದು ಯಾತನಾದಾಯಕ. ಸೀತಾರಾಂ ಮತ್ತು ಅವರ ಸೋದರ ಬಾಲಿ ತುಂಬ ಶ್ರದ್ಧೆಯಿಂದ ಇಳಿಗಾಲದಲ್ಲಿ ತಾಯಿಯನ್ನು ನೋಡಿಕೊಂಡರು. ಅವರ ಮನೆಗೆ ಹೋದಾಗಲೆಲ್ಲ ನಾನು ಸೀತಾರಾಂ ಅವರ ತಾಯಿಯನ್ನು ಮಾತನಾಡಿಸುತ್ತಿದ್ದೆ. ತೆಲುಗಿನಲ್ಲೇ ಮಾತನಾಡುತ್ತಿದ್ದರು. ನನ್ನ ಮನೆಯ ಪ್ರತಿಯೊಬ್ಬರ ಬಗ್ಗೆಯೂ ವಿಚಾರಿಸಿಕೊಳ್ಳುತ್ತಿದ್ದರು. ಅವರು ಆಸ್ಪತ್ರೆಯಲ್ಲಿದ್ದಾಗ ರಾತ್ರಿಗಳಲ್ಲಿ ಅವರ ದೇಖರೇಖಿಗೆ ನಿಲ್ಲುತ್ತಿದ್ದ ಸೀತಾರಾಂ ಅವರಿಗೆ ನನ್ನ ಪುಸ್ತಕ \'ಅಮ್ಮ ಸಿಕ್ಕಿದ್ಲು\' ಕಳಿಸಿದ್ದೆ. ನನ್ನದು ಇವತ್ತಿಗೂ ಅದೇ ಭಾವನೆ.

ಅಮ್ಮಂದಿರು ತೀರಿ ಹೋಗುವುದಿಲ್ಲ.

ಅವರು ನಾವಿರುವ ತನಕ ನಮ್ಮೊಂದಿಗಿರುತ್ತಾರೆ. ನಾವು ನಿಜಕ್ಕೂ ಬೇಕೆಂದಾಗ ನಮಗೆ ಸಿಕ್ಕುತ್ತಾರೆ. ಸೀತಾರಾಂ ಮನಸ್ಸಿಗೆ ನೆಮ್ಮದಿ ಕೋರುತ್ತೇನೆ.

-ರವಿ ಬೆಳಗೆರೆ

Read Archieves of 21 March, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books