Ravi Belagere
Welcome to my website
ಬಹಳ ದಿನಗಳ ನಂತರ ಈ ತರಹದ್ದೊಂದು mega function ಏರ್ಪಡಿಸಿದ್ದೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ನೀವೆಲ್ಲ ಬಂದಿರಿ. ನನ್ನ ಬರವಣಿಗೆ, ತಿರುಗಾಟ, ಮುದ್ರಣ, ಬಣ್ಣ, ಈ ಸಿಂಗಾರ-ಬಂಗಾರ- ಇವೆಲ್ಲವೂ ನಿಮಗಾಗಿಯೇ ಅಲ್ಲವೆ? ಎಲ್ಲಿಯ ರಾಯಚೂರು, ಕೊಪ್ಪಳ, ಯಾದಗಿರಿ, ಗುಲಬರ್ಗ, ಚಿಂಚನ ಸೂರು, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ಮಂಗಳೂರು-ಎಲ್ಲೆಲ್ಲಿಂದ ಬಂದಿದ್ದರು ಓದುಗರು!. ಪ್ರತಿಯೊಬ್ಬರ ಕೈಲೂ ‘ಹಿಮಾಗ್ನಿ’. ಪ್ರತಿಯೊಬ್ಬರ ಕೈಲೂ ‘ಉಡುಗೊರೆ’, ‘ಅಮ್ಮ ಸಿಕ್ಕಿದ್ಲು’ ಮತ್ತು ಸಿಡಿಗಳು.
Home About Us Gallery Books Feedback Prarthana Contact Us

ಒಂದು ಗಂಡು ಹೆಣ್ಣಿನ ಸಂಬಂಧವನ್ನು ನೋಡುವ ಬಗೆ ತಿಳಿಸಿದಾತ!

ಬಳ್ಳಾರಿಯ ಆಸ್ಪತ್ರೆಯಾ?

ಅಂಗಳದಲ್ಲಿ ನಿಂತಿದ್ದುದು ನನ್ನ ದೊಡ್ಡಪ್ಪ. ಆತ ದೊಡ್ಡ ಆಳಲ್ಲ. ಕಪ್ಪನೆಯ ಮನುಷ್ಯ. ಕರ್ನಾಟಿಕ್ ಸಂಗೀತ ಅರ್ಥವಾಗುತ್ತಿತ್ತೇ ಹೊರತು ಸಾಹಿತ್ಯ- ಅದೂ ಇದೂ ತಿಳಿಯುತ್ತಿರಲಿಲ್ಲ. ಆತನ ತಾಯಿ ಭೂದೇವಮ್ಮ, ಬೆಳಗೆರೆ ವಂಶದವಳಾದರೂ ಕೊಂಚ ಮನೋಭ್ರಾಂತಳು. ಅದು ಮೊದಲಿಂದ ಬಂದ ಖಾಯಿಲೆಯಾ? ಗೊತ್ತಿಲ್ಲ. ಒಮ್ಮೆ ದಾಳಿಂಬೆ ಹಣ್ಣು ಕಿತ್ತಿದಳು. ಕಿತ್ತಿದ ರಭಸಕ್ಕೆ ಅದರ ರೆಂಬೆ ಚಿಮ್ಮಿ ಬಂದು ಕಣ್ಣಿನ ಕೆಳಭಾಗಕ್ಕೆ ತಗುಲಿ ಇಡೀ ಗುಡ್ಡೆಯನ್ನು ಎಬ್ಬಿ ಹೊರಹಾಕಿ, ಶಾಶ್ವತವಾಗಿ ಒಂದು ಕಣ್ಣು ಕುರುಡಾಯಿತು. ಅದರಿಂದಾಗಿ ಮನೋವಿಕಲ್ಪ ಹೆಚ್ಚಾಯಿತಾ? ಆಕೆಯನ್ನು ಪಾವಗಡ-ಕಲ್ಯಾಣದುರ್ಗದ ಬಳಿಯ ಮಲ್ಲೂರಿ ಶೇಷಯ್ಯನಿಗೆ ಕೊಟ್ಟು ಮದುವೆ ಮಾಡಲಾಯಿತು. ಅವರ ಮಗನೇ ನನ್ನ ದೊಡ್ಡಪ್ಪ. ಮಲ್ಲೂರು ಕೃಷ್ಣಶಾಸ್ತ್ರಿ.

ಆತನಿಗೇ ಬೆಳಗೆರೆ ಜಾನಕಮ್ಮನವರನ್ನು ಕೊಟ್ಟು ಮದುವೆ ಮಾಡಿದ್ದು. ಹೇಳಿದೆನಲ್ಲ? ಆತ ಕಪ್ಪಗಿದ್ದ. ಮಾಮೂಲಿ ಆಳು. ಬಳ್ಳಾರಿಯ ಐರಿಷ್ ಹತ್ತಿ ಕಂಪೆನಿಯಾದ ವಾಲ್ಕಾಟ್ ಬ್ರದರ್ಸ್‌ನಲ್ಲಿ ಸಣ್ಣ ಸಂಬಳದ ಗುಮಾಸ್ತೆ. ಆದರೆ ಜಾನಕಮ್ಮನವರು ಪ್ರಸಿದ್ಧ ಕವಯಿತ್ರಿ. ಮಹಾನ್ ಚೆಲುವೆ. ಮೇಲಾಗಿ ಬೆಳಗೆರೆ ಕುಟುಂಬದ ಎಲ್ಲರೂ ಗೌರವಿಸುತ್ತಿದ್ದ ಹಿರಿಯ ಮಗಳು. ಆಕೆ ಬರೆಯುತ್ತಿದ್ದಳು. ಅದ್ಭುತವಾಗಿ ಹಾಡುತ್ತಿದ್ದಳು. ಭಾಷಣಗಳಿಗೆ ಹೋಗುತ್ತಿದ್ದಳು. ಮನೆಗೆ ಹಿರಿಯ ಕವಿ ಸಾಹಿತಿಗಳು ಬರುತ್ತಿದ್ದರು. ಅದ್ಯಾವುದಕ್ಕೂ ದೊಡ್ಡಪ್ಪ ತಕರಾರು ಮಾಡುತ್ತಿರಲಿಲ್ಲ. ಕವಿ ಸಾಹಿತಿಗಳು ಬಂದಾಗ ಅವರು ಒಳ ಮನೆ ಸೇರಿ ಕಾಫಿ-ತಿಂಡಿ ಮಾಡುತ್ತಿದ್ದರು. ಹೆಂಡತಿಯ ಕಾವ್ಯ ಅರ್ಥವಾಗದಿರಬಹುದು. ಆದರೆ ಆಕೆಯನ್ನು ಉತ್ತೇಜಿಸಬೇಕೆಂಬ ಅಭೀಪ್ಸೆಯಿತ್ತು.

ಅವರ ದಾಂಪತ್ಯ ಅನ್ಯೋನ್ಯವಾಗೇ ಇತ್ತು. ಆದರೆ ಒಮ್ಮೆ ಜಾನಕಮ್ಮನವರಿಗೆ ರಾಯಚೂರಿನಲ್ಲಿದ್ದಾಗ ಯಾವುದೋ ಧ್ಯಾಸದಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಒಂದು ಹುಚ್ಚು ನಾಯಿ ಕಚ್ಚಿಬಿಟ್ಟಿತು. ಕಚ್ಚುವುದೆಂದರೇನು? ಕಾಲಿನ ಮಾಂಸ ಖಂಡ ಕಿತ್ತು ಬಾಯಿಗೆ ಬರುವಂತೆ ಹರಿದು ಹಾಕಿತ್ತು. \"ಇಲ್ಲಿ ಸೇರಿಸಿದರೆ ಬದುಕುವುದು ಕಷ್ಟ. ಲಸಿಕೆ ಇಲ್ಲ. ಬಳ್ಳಾರಿಗೆ ಒಯ್ಯಿರಿ\" ಅಂದಿದ್ದರು ರಾಯಚೂರಿನ ಡಾಕ್ಟರ್.

ನಿಮಗೆ ಗೊತ್ತೋ ಏನೋ, ನಾವು ಬಯಲು ಸೀಮೆಯ ಜನ ನಿಜಕ್ಕೂ ಹಾವಿನ ಕಡಿತಕ್ಕಿಂತ ಹೆಚ್ಚಾಗಿ ಹೆದರುವುದು ಕಿರು ಬೆರಳಗಾತ್ರದ ಕೆಂಪು ಚೇಳಿನ ಕುಟುಕಿಗೆ. ಅದು ಅಕ್ಷರಶಃ ಕೆಲವೇ ಗಂಟೆಗಳಲ್ಲಿ ಒಬ್ಬ ಆರಡಿಯ ಆಳನ್ನು \'ತೆಗೆದು ಬಿಡುತ್ತದೆ.\' ಅಂತೆಯೇ ಬಿಸಿಲ ಕಾಲ ಬಂದ ಕೂಡಲೆ ನಾಯಿಗಳಲ್ಲಿ ರೇಬಿಸ್ ಹರಡುತ್ತದೆ. ಈಗೆಲ್ಲ ಲಸಿಕೆ, ಮೂರೇ ಇಂಜೆಕ್ಷನ್ನು ಸಾಕು ಅಂತಾರಾದರೂ ನಾವು ಹುಡುಗರಿದ್ದಾಗ ಹೊಕ್ಕುಳ ಸುತ್ತ ಇಪ್ಪತ್ತೊಂದು ಸೂಜಿ ಚುಚ್ಚಿಸಿಕೊಳ್ಳಲೇಬೇಕಿತ್ತು. ಕೊಂಚ ಮೋಡವಾಗಿ, ಮಳೆ ಹನಿದರೆ ಸಾಕು,

\"ಅಮ್ಮಯ್ಯಾ, ನಾನು ಹುಚ್ಚುಚ್ಚಾಗಿ ಮಾತಾಡ್ತಿದೀನೇನೇ\" ಅಂತ ದೊಡ್ಡಮ್ಮ ನನ್ನ ಅಮ್ಮನನ್ನು ಕೇಳುತ್ತಿದ್ದರಂತೆ. ನಾಯಿ ಕಡಿತದ ನಂಜಿನ ಬಗ್ಗೆ ಅಂಥ ಭಯ ಇರುತ್ತಿತ್ತು.

ಅಷ್ಟೇಕೆ, ಈಗೆ ಹದಿನೆಂಟಿಪ್ಪತ್ತು ವರ್ಷದ ಹಿಂದಿನ ಮಾತು ನಂಗೆ ಚೆನ್ನಾಗಿ ನೆನಪಿದೆ. \'ಸಂಯುಕ್ತ ಕರ್ನಾಟಕ\'ದ ನನ್ನ ಸಂಪಾದಕರಾಗಿದ್ದ ಎನ್.ವಿ.ಜೋಶಿಯವರು ಕರೆದು, \"ನನ್ನ ರಿಲೇಟಿವ್‌ನ ಕೆ.ಎಂ.ಸಿ. ಆಸ್ಪತ್ರೆಗೆ ತಂದಿದಾರಂತೆ. ಸ್ವಲ್ಪ ನೋಡಿಕೊಂಡು ಬನ್ನಿ\" ಅಂತ ಹೇಳಿ ಕಳಿಸಿದ್ದರು. ಹೋಗಿ ನೋಡಿದರೆ ಅದು ಟಿಪಿಕಲ್ ನಾಯಿ ಕಚ್ಚಿದ ಹೈಡ್ರೋಫೋಬಿಯಾ ಕೇಸು. ನಾಯಿ ಕಚ್ಚುವುದಕ್ಕೂ, ನೀರಿಗೂ ಏನು ಸಂಬಂಧವೋ ನಂಗೊತ್ತಿಲ್ಲ. ಮುಧೋಳದ ಕಡೆಯಿಂದ ಕಾರಿನಲ್ಲಿ ರೋಗಿಯನ್ನು ತರುತ್ತಿದ್ದಾಗ (ಬಹುಶಃ) ಕೃಷ್ಣಾ ನದಿಯ ಸೇತುವೆ ಮೇಲೆ ಕಾರು ಹೋಗುತ್ತಿದ್ದರೆ ಇದ್ದಕ್ಕಿದ್ದಂತೆ ರೋಗಿ ಭಯಗೊಂಡು, ಆರ್ದ್ರನಾಗಿ ಚೀರತೊಡಗಿದ್ದ. ಆತನನ್ನು ನೋಡಿದ ಕೂಡಲೆ ಮಂಚಕ್ಕೆ ಅಕ್ಷರಶಃ ಕಟ್ಟಿ ಹಾಕಿ, \"ಬದುಕುವ ಛಾನ್ಸೇ ಇಲ್ಲ\" ಅಂತ ಹೇಳಿದ್ದರು. ಅವರಿಗೆ ನಾಯಿ ಕಚ್ಚಿ ಅನೇಕ ತಿಂಗಳುಗಳಾಗಿದ್ದವು. ಆ ತನಕ dormant ಆಗಿದ್ದ ರೋಗ ಹಠಾತ್ತನೆ ಉಲ್ಬಣಿಸಿತ್ತು. ನಿಜಕ್ಕೂ ನಾಯಿ ಕಚ್ಚಿ ಅದರ ನಂಜು ಏರಿದವರು ನಾಯಿ ಬೊಗಳಿದಂತೆ ಬೊಗಳಿ ಬೊಗಳಿ ಸಾಯುತ್ತಾರೆ ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. ಅದು ಸುಳ್ಳು. ಮಿದುಳು ಮತ್ತು ಶ್ವಾಸಕೋಶ (ಬಹುಶಃ)ಗಳು infect ಆಗುವುದರಿಂದ ಕಫ ಕಟ್ಟಿ, ಗಂಟಲಿಗೆ ಅಡ್ಡ ಬಿದ್ದು ಗೊರ ಗೊರ ಸದ್ದು ಹೊರಟು, ಅದು ನಾಯಿಯ ಗುರುಗುಡುವಿಕೆಯಂತೆ ಕೇಳಿಸುತ್ತದೆ ಅಷ್ಟೆ. ಹಳ್ಳಿಗಳಲ್ಲಿ ಇವತ್ತಿಗೂ ಇರುವ ಅನಾಗರಿಕ ವಿಧಾನವೆಂದರೆ, ನಾಯಿ ನಂಜೇರಿದವರನ್ನು ಒಂದು ಕಂಬಕ್ಕೆ ಕಟ್ಟಿ ಗೋಣಿ ಚೀಲವನ್ನು ಚೆನ್ನಾಗಿ ತೋಯಿಸಿ, ಅದನ್ನು ಅವರಿಗೆ ಹೊದಿಸಿ ಮೇಲೆ ಮತ್ತಷ್ಟು ಕೊಡ ಸುರಿದುಬಿಡುತ್ತಾರೆ. ನೀರು ಕಂಡರೆ ಭೀತರಾಗಿ ಚೀತ್ಕರಿಸುವ ರೋಗಿಗಳು ಬೆಳಕು ಹರಿಯುವ ಹೊತ್ತಿಗೆ ಸತ್ತು ಹೋಗುತ್ತಾರೆ. ನಾನು ಆ ಪರಿ ಡಜನ್‌ಗಟ್ಟಲೆ ನಾಯಿ ಸಾಕುವ ಹುಚ್ಚಿನವನಲ್ಲ? ಏನೇ ರೇಬೀಸ್ ವ್ಯಾಕ್ಸೀನ್ ಕೊಡಿಸಿದ್ದರೂ, ಒಮ್ಮೆ ಒಂದು ನಾಯಿಯನ್ನು ಮುಟ್ಟಿದೆನೆಂದರೆ ಮೊಳಕೈ ತನಕ ಅಕ್ಷರಶಃ ಲೈಫ್ ಬಾಯ್ ಸೋಪಿನಿಂದ ಕೈ ತೊಳೆಯುತ್ತೇನೆ. ಅದನ್ನು ನಾನು ಕರೆಯುವುದೇ \'ನಾಯಿ ಸೋಪು. ಅಂತ.

ಆದರೆ ದೊಡ್ಡಮ್ಮ ಬೆಳಗೆರೆ ಜಾನಕಮ್ಮನವರನ್ನು ಅವರ ತಮ್ಮ ಬೆಳಗೆರೆ ಕೃಷ್ಣಶಾಸ್ತ್ರಿಗಳು ಸುಮಾರು ಇಪ್ಪತ್ತು ದಿನ ಚಿಕಿತ್ಸೆ ಕೊಡಿಸಿ ಪೂರ್ತಿ ಗುಣವಾದ ಮೇಲೆ ರಾಯಚೂರಿಗೆ ಕಳಿಸಿ ಬಂದಿದ್ದರು. ಮುಂದೆ ನಾಲ್ಕೈದು ವರ್ಷ ಉರುಳಿದ್ದವು. ಜಾನಕಮ್ಮನವರು ನನ್ನ ತಾಯಿಯನ್ನು ಹಾನಗಲ್ಲಿನ ಗಂಡನ ಮನೆಯಿಂದ ಹೊರ ತಂದು, ಓದಿಸಿ, ಎಂಟನೇ ಕ್ಲಾಸ್ ಪಾಸು ಮಾಡಿಸಿ, ಬಳ್ಳಾರಿಯಲ್ಲಿ ಟೀಚರ‍್ಸ್ ಟ್ರೇನಿಂಗ್ ಇನ್ಸ್‌ಟಿಟ್ಯೂಟ್‌ಗೆ ಸೇರಿಸಿದ್ದರು. ಗಂಡನೊಂದಿಗೆ ಇನ್ನು ಆಕೆ ಬಾಳಲಾರಳು ಎಂದು ತೀರ್ಮಾನಿಸಿದ್ದರಿಂದ ತಂಗಿ ವಿದ್ಯಾವಂತಳಾಗಿ, ಶಿಕ್ಷಕಿಯಾಗಿ, ನೌಕರಿ ಹಿಡಿದು ಸ್ವತಂತ್ರಳಾಗಲಿ ಎಂಬುದು ಜಾನಕಮ್ಮನವರ ಆಸೆಯಾಗಿತ್ತು. ಆಗ ಅವರ ಹಿರಿಯ ಮಗ ಎಸೆಸೆಲ್ಸಿ ಓದುತ್ತಿದ್ದ. ಕಿರಿಯ ಮಗ ಬಹುಶಃ ಆರನೇ ಕ್ಲಾಸು. ರಾಯಚೂರಿನಿಂದ ಅವರ ಪತಿಗೆ ಬಳ್ಳಾರಿಗೆ ವರ್ಗಾ ಆಗಿತ್ತು. ಮೊದಲಿಯಾರ್ ಬೀದಿಯಲ್ಲಿ ವಾಸ. ತಂಗಿ, ಬೆಳಗೆರೆ ಪಾರ್ವತಮ್ಮ ಹಾಸ್ಟೆಲಿನಲ್ಲಿದ್ದಳು.

ಆಗಲೇ ಶುರುವಾದದ್ದು ಬಾಧೆ. ಇಬ್ಬರು ಮಕ್ಕಳ ನಂತರ ಜಾನಕಮ್ಮನವರು ಮತ್ತೆ ಗರ್ಭ ಧರಿಸಿದ್ದರು. ಮೊದಲನೆಯವು ಸುಖ ಪ್ರಸವಗಳು. ಆದರೆ ಈ ಬಾರಿ ಹಾಗಾಗಲಿಲ್ಲ. ಏನೋ ಗರ್ಭ ಕಸುರು. ಏಳೂವರೆ ತಿಂಗಳಲ್ಲೇ ಅಸೌಖ್ಯದ ಹೊರಳಿಕೆ. ತಕ್ಷಣ ಆಸ್ಪತ್ರೆಗೆ ಒಯ್ದರು. ಅವತ್ತಿಗೆ ಬಳ್ಳಾರಿಯ ಹೆರಿಗೆ ಆಸ್ಪತ್ರೆ, ಊರ ಮಧ್ಯದ ಗೋಪುರ ಗಡಿಯಾರದ ಪಕ್ಕದ ಮುನಿಸಿಪಾಲಿಟಿ ಆಫೀಸ್ ಇದ್ದ ಜಾಗದಲ್ಲೇ ಇತ್ತಾ? ಗೊತ್ತಿಲ್ಲ. ಈಗ ಜನಾರ್ದನ ರೆಡ್ಡಿ ಮಾಯೆಯಿಂದಾಗಿ ಆ ಗೋಪುರ ಗಡಿಯಾರವೂ ಇಲ್ಲ. ಅಲ್ಲಿದ್ದ ಮುನಿಸಿಪಾಲಿಟಿ ಆಫೀಸೂ ಇದ್ದಂತಿಲ್ಲ. ನಮ್ಮಮ್ಮ ಹೇಳುತ್ತಿದ್ದುದೆಂದರೆ, ನಾನು ಹುಟ್ಟಿದ್ದು ಅದೇ ಮುನಿಸಿಪಾಲಿಟಿ ಆಫೀಸ್ ಇದ್ದ ಬಿಲ್ಡಿಂಗ್‌ನಲ್ಲಿ. ಅಲ್ಲಿ ಮೊದಲು ಸರ್ಕಾರಿ ಆಸ್ಪತ್ರೆಯಿತ್ತು.

\"ಇಲ್ಲ ಶಾಸ್ತ್ರಿಗಳೇ, ಏಳೂವರೆ ತಿಂಗಳ ಹೆರಿಗೆ. ಮಗುವನ್ನು ಉಳಿಸಲಿಕ್ಕೆ ಆಗಲಿಲ್ಲ.ಹೆಣ್ಣುಮಗು, ಅದು ಸತ್ತೇ ಹುಟ್ಟಿತ್ತು. ಆದರೆ oಟ್ಟ್ಟqs... ತಾಯಿ ಜೀವದ್ದೂ ನಮಗೆ ಅನುಮಾನವಿದೆ...\" ಅಂದಿದ್ದರು.

ಆಗಲೇ ಬೆಳಗೆರೆ ಜಾನಕಮ್ಮನವರ ಗಂಡ ಮಲ್ಲೂರು ಕೃಷ್ಣಶಾಸ್ತ್ರಿ ನಡುಗಿ ಹೋಗಿದ್ದು. ಆಸ್ಪತ್ರೆಯ ಅಂಗಳದಲ್ಲಿ ನಿಂತಿದ್ದುದು ಆತ, ಆತನ ಇಬ್ಬರು ನಿಸ್ಸಹಾಯಕ ಚಿಕ್ಕ ಮಕ್ಕಳು, ನನ್ನ ದಿಕ್ಕೆಟ್ಟ ಅಮ್ಮ ಮತ್ತು ಜಾನಕಮ್ಮನವರ ಸೋದರ ಬೆಳಗೆರೆ ಕೃಷ್ಣಶಾಸ್ತ್ರಿಗಳು. ಇನ್ನೇನು ಬೆಳಗೆರೆ ಜಾನಕಮ್ಮನವರ ಸಾವು ನಿಶ್ಚಿತ ಎಂದಾಗಿತ್ತು. ಹೆಚ್ಚಿನದಾಗಿ ಆಗಿನ ಹೆಣ್ಣುಮಕ್ಕಳು ಹೆರಿಗೆಯಲ್ಲಿ ಹೆಮೊರೇಜ್‌ನಿಂದಾಗಿ, ವಿಪರೀತ ರಕ್ತ ಸ್ರಾವದಿಂದಾಗಿ, ಇನ್‌ಫೆಕ್ಷನ್‌ಗಳಿಂದಾಗಿ ತೀರಿಕೊಳ್ಳುತ್ತಿದ್ದರು. ಇನ್ನೇನು ಆಕೆಯ ಸಾವಿನ ಸುದ್ದಿ ಹೆರಿಗೆ ಕೋಣೆಯಿಂದ ಆಗ ಬಂದೀತು, ಈಗ ಬಂದೀತು ಎಂದು ಕಾಯುವುದಷ್ಟೆ ಕೆಲಸ. ಅದಕ್ಕಿಂತ ಅಸಹ್ಯಕರ ಸ್ಥಿತಿ ಮತ್ತೊಂದಿಲ್ಲ. ಕಡೆಗೆ ಜಾನಕಮ್ಮನವರನ್ನು ವಾರ್ಡಿಗೆ ಹಾಕಿ ಎಂದು ವಿನಂತಿಸಿಕೊಂಡರೇನೋ?

ದೊಡ್ಡಪ್ಪನವರು ಹೆಂಡತಿಯನ್ನು ಏನಂತ ಕರೆಯುತ್ತಿದ್ದರು ಎಂಬುದೂ ನನಗೆ ಗೊತ್ತಿಲ್ಲ. ಆಕೆಗಿನ್ನೂ ಕುಟುಕು ಜೀವವಿತ್ತು. ಪ್ರಜ್ಞೆ ಕೂಡ ಕೊಂಚ ಕೊಂಚ. ಪಕ್ಕದಲ್ಲಿ ಹೋಗಿ ಕುಳಿತ ನನ್ನ ದೊಡ್ಡಪ್ಪ,

\"ನೋಡೂ, ಯಾವ ಕಾರಣಕ್ಕೂ ನಿನಗೇನಾದರೂ ಆದರೆ ನಾನು ಇನ್ನೊಂದು ಮದುವೆಯಾಗುವುದಿಲ್ಲ. ಮಕ್ಕಳನ್ನು ತುಂಬ ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ನನ್ನದು. ಆ ಬಗ್ಗೆ ಚಿಂತೆ ಮಾಡಬೇಡ...\" ಅಂದರು.

\"ಉಹುಂ... ಅವರದಲ್ಲ ಚಿಂತೆ. ಅವು ಗಂಡು ಮಕ್ಕಳು. ಹೇಗಾದರೂ ಬೆಳೆಯುತ್ತವೆ. ಆದರೆ ನನ್ನ ತಂಗಿ? ಅವಳು ಲೋಕವರಿಯದ ಅಮಾಯಕಳು. ಹಾನಗಲ್ಲಿನ ಗಂಡನ ಮನೆಯಿಂದ, ಅವಳ ಗಂಡನಿಂದ ಬಿಡಿಸಿಕೊಂಡು, ಬೇರ್ಪಡಿಸಿ ಕರೆದುಕೊಂಡು ಬಂದವಳೇ ನಾನು. ಅವಳನ್ನು ಸ್ವತಂತ್ರಳನ್ನಾಗಿ ಮಾಡುವ ಕನಸು ನನ್ನದು. ಅವಳ ಬದುಕು ಹಾಳಾಗಬಾರದು\" ಎಂದು ಕನವರಿಸಿದರಂತೆ ಬೆಳಗೆರೆ ಜಾನಕಮ್ಮ.

\"ಆಯಿತು. ಪಾರ್ವತಮ್ಮನನ್ನು ಓದಿಸಿ, ಅವಳಿಗೊಂದು ನೌಕರಿ ಕೊಡಿಸಿ, ಒಂದು ಮೆಟ್ಟಿಗೆ ಹತ್ತಿಸಿಯೇ ತೀರುತ್ತೇನೆ. ಈ ವಿಷಯದಲ್ಲಿ ನಿರ್ವಂಚನೆಯಿಂದಿರುತ್ತೇನೆ. ನಿನಗೆ ಕೊಡುತ್ತಿರುವ ಮಾತು ಇದು\" ಅಂದು ಕೈ ಹಿಡಿದುಕೊಂಡರಂತೆ ದೊಡ್ಡಪ್ಪ.

ಜಾನಕಮ್ಮನವರ ಪ್ರಾಣ ನಿಧಾನವಾಗಿ ಹೋದದ್ದೇ ಆವಾಗ.

ಅವತ್ತು ತಾರೀಕು ಮೇ ಇಪ್ಪತ್ತೆರಡು, 1948.

ಆ ಮೇಲೆ, ಅಮ್ಮ ಟ್ರೈನಿಂಗ್ ಹಾಸ್ಟೆಲಿನಿಂದ ತನ್ನ ಭಾವ ಮತ್ತು ಭಾವನ ಮಕ್ಕಳಿದ್ದ ಮುದಲಿಯಾರ್ ಸ್ಟ್ರೀಟ್‌ನ ಮನೆಗೆ ಬದಲಾದಳು. ಹಿರಿಯ ಮಗ ಕಮಲನಾಭ ಕೊಂಚ ಹಿರಿಯ. ಎಸೆಸೆಲ್ಸಿ ಓದುತ್ತಿದ್ದ. ಕಟ್ಟ ಕಡೆಯ ತನಕ ನನ್ನ ಅಮ್ಮನನ್ನು ಸ್ವಂತ ತಾಯಿಯೆಂದೇ ಭಾವಿಸಿದ್ದ. ನನ್ನ ತಾಯಿಗಿಂತ ಮೊದಲೇ ಸತ್ತ. ಆದರೆ ತುಂಬ ಚಿಕ್ಕವನಾದ ಪ್ರಸನ್ನ ಕುಮಾರ್‌ಗೆ ತಾಯಿ ತೀರಿಕೊಂಡಳು ಎಂಬುದು ಅರಿವಿಗೇ ಬಾರದಂತೆ ಮಡಿಲಲ್ಲಿ ಬಚ್ಚಿಟ್ಟುಕೊಂಡು ಅಕ್ಷರಶಃ ಇನ್ನೊಬ್ಬ ತಾಯಿಯಾಗಿ ಬೆಳೆಸಿದವಳು ನನ್ನ ಅಮ್ಮ. ಆ ಸ್ಮರಣೆ ಪ್ರಸನ್ನಕುಮಾರ್‌ಗೂ ಇತ್ತು, ಇದೆ.

ಆದರೆ ಮೇ ಇಪ್ಪತ್ತೆರಡು, 1948ರಿಂದ ಡಿಸೆಂಬರ್ ಹದಿನೇಳು 1982ರ ತನಕ ನನ್ನ ಅಮ್ಮ ಮತ್ತು ಆಕೆಯ ಭಾವ ದೊಡ್ಡಪ್ಪ (ಜಾನಕಮ್ಮನವರ ಗಂಡ) ಒಂದೇ ಮನೆಯಲ್ಲಿದ್ದರು. ಚಿಕ್ಕ ಊರು ಬಳ್ಳಾರಿ. ಗಂಡನಿಲ್ಲದ ಪಾರ್ವತಮ್ಮ ಎಂಬ ನಾದಿನಿ: ಹೆಂಡತಿಯನ್ನು ಕಳೆದುಕೊಂಡ ಜಾನಕಮ್ಮನವರ ಗಂಡ ವಿಧುರ ಮಲ್ಲೂರು ಕೃಷ್ಣಶಾಸ್ತ್ರಿ. ಮಾತನಾಡುವವರು ಏನು ಬೇಕಾದರೂ ಮಾತನಾಡಬಹುದಿತ್ತು. ಅದಕ್ಕೆ ಇವರು ಅವಕಾಶವನ್ನು ಕೊಡಬಹುದಿತ್ತು.

ಆದರೆ ನನ್ನ ದೊಡ್ಡಪ್ಪ ಕಪ್ಪಗಿದ್ದರೂ, ಕೇವಲ ಗುಮಾಸ್ತನಾಗಿದ್ದರೂ, ಸಾಹಿತ್ಯ ತಿಳಿಯದಿದ್ದರೂ ಮಾನಸಿಕವಾಗಿ ಅದೆಂಥ ಮಹರ್ಷಿಯಾಗಿದ್ದರೆಂದರೆ ಅವರು ಅಮ್ಮನನ್ನು ತಮ್ಮಿಬ್ಬರು ಮಕ್ಕಳ ಜೊತೆಗೆ ಮೂರನೆಯವಳಾಗಿ ಸಾಕಿದರು. ಅಷ್ಟೇ ಅಲ್ಲ, ನನ್ನನ್ನು ತಮ್ಮಿಬ್ಬರು ಮಕ್ಕಳಿಗಿಂತ ಹೆಚ್ಚಾಗಿ ಸಾಕಿದರು. ಕಡೆಗೆ ನನ್ನ ಮೊದಲ ಮಗಳು ಚೇತನಾಳನ್ನು ಎತ್ತಿಕೊಂಡು \'ಪಾಪಚ್ಚೀ\' ಎಂದು ಓಡಾಡಿದರು. ಅಂಥ ಮಹಾನ್ ಮನುಷ್ಯನನ್ನು, \'ತಾಯಿ\'ಯನ್ನ ನಾನು ಈ ತನಕ ನೋಡಿಲ್ಲ.

ಇದನ್ನೆಲ್ಲ ಇವತ್ತು ಏಕೆ ಹೇಳಿದೆನೆಂದರೆ, ಒಬ್ಬ ಗಂಡು (ಹೆಂಡತಿ ಇಲ್ಲದವನು) ಮತ್ತು ಒಬ್ಬ ಹೆಣ್ಣು ( ಗಂಡನಿಲ್ಲದವಳು) ಯಾವುದೇ ಕಸರು-ಕಪ್ಪು ಇಲ್ಲದೆ ಬದುಕಬಹುದು ಎಂಬುದನ್ನು ಅವರಿಬ್ಬರೂ prove ಮಾಡಿದುದಷ್ಟೆ ದೊಡ್ಡದಲ್ಲ. ಗಂಡು-ಹೆಣ್ಣಿನ ಸಂಬಂಧಗಳನ್ನು ಸೆಕ್ಸ್‌ನ ಪರಿಮಿತಿಯ ಆಚೆಗೂ ನೋಡಬೇಕು ಮತ್ತು ನೋಡಬಹುದು ಎಂಬುದನ್ನು ನಮಗೆ ಕಲಿಸಿ ಕೊಟ್ಟವರು ಬೆಳಗೆರೆ ಕೃಷ್ಣಶಾಸ್ತ್ರಿಗಳು. ಅವರು, ತಮ್ಮ ಗಂಡನನ್ನು ಬಿಟ್ಟ ತಂಗಿ ಹೆಂಡತಿ ತೀರಿಕೊಂಡ ಭಾವನೊಂದಿಗೆ ಇದ್ದಾಳೆ ಎಂಬುದನ್ನು ಒಂದು ಆಕ್ಷೇಪಣೆಯನ್ನಾಗಿ ಯಾವತ್ತೂ ತೆಗೆದುಕೊಳ್ಳಲಿಲ್ಲ.

ಅದಲ್ಲವೆ ಮುಖ್ಯ?

ಈ ಬಗ್ಗೆ ಅವರು ರಂಪಾಟ ಮಾಡಿ ಬಿಟ್ಟಿದ್ದಿದ್ದರೆ ನನಗೆ ಚಿಕ್ಕಂದಿನಿಂದಲೇ ಮಾನವೀಯ ಸಂಬಂಧಗಳ ಬಗ್ಗೆ ಮಡಿವಂತ ಭಾವನೆ ಬೆಳೆದುಬಿಡುತ್ತಿತ್ತು. ಈಗ ಮಾಮನ ಜೀವನ ಕಥನ ಬರೆಯುತ್ತಿರುವಾಗ, ಹೌದಲ್ಲವಾ ಒಂದು ಮಾತೂ ಆಡದೆ ಮಾಮ ಇದೆಂಥ ಮೌಲ್ಯ ರೂಢಿಸಿಕೊಟ್ಟ ಎಂಬುದು ಸ್ಫುರಿಸಿದಂತಾಯಿತು.

ನಿಮ್ಮೆದುರು ಸುಮ್ಮನೆ ಹೇಳಿಕೊಂಡೆ.

-ನಿಮ್ಮವನು
ಆರ್.ಬಿ

Read Archieves of 19 March, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books