Ravi Belagere
Welcome to my website
ಬಹಳ ದಿನಗಳ ನಂತರ ಈ ತರಹದ್ದೊಂದು mega function ಏರ್ಪಡಿಸಿದ್ದೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ನೀವೆಲ್ಲ ಬಂದಿರಿ. ನನ್ನ ಬರವಣಿಗೆ, ತಿರುಗಾಟ, ಮುದ್ರಣ, ಬಣ್ಣ, ಈ ಸಿಂಗಾರ-ಬಂಗಾರ- ಇವೆಲ್ಲವೂ ನಿಮಗಾಗಿಯೇ ಅಲ್ಲವೆ? ಎಲ್ಲಿಯ ರಾಯಚೂರು, ಕೊಪ್ಪಳ, ಯಾದಗಿರಿ, ಗುಲಬರ್ಗ, ಚಿಂಚನ ಸೂರು, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ಮಂಗಳೂರು-ಎಲ್ಲೆಲ್ಲಿಂದ ಬಂದಿದ್ದರು ಓದುಗರು!. ಪ್ರತಿಯೊಬ್ಬರ ಕೈಲೂ ‘ಹಿಮಾಗ್ನಿ’. ಪ್ರತಿಯೊಬ್ಬರ ಕೈಲೂ ‘ಉಡುಗೊರೆ’, ‘ಅಮ್ಮ ಸಿಕ್ಕಿದ್ಲು’ ಮತ್ತು ಸಿಡಿಗಳು.
Home About Us Gallery Books Feedback Prarthana Contact Us

ಗೋರಿಯೆಡೆಗೆ ಇನ್ನೂ ಒಂದು ಹೆಜ್ಜೆ.

ಇನ್ನು ಕೆಲವು ಗಂಟೆ ಉರುಳಿದರೆ ಬದುಕಿನ ಐವತ್ನಾಲ್ಕನೆಯ ವರ್ಷಕ್ಕೆ ಚಿಯರ‍್ಸ್. ಅದೇನೂ ಮಹಾನ್ ದೊಡ್ಡ ಸಂಗತಿಯಲ್ಲ. ಐವತ್ಮೂರು ಮುಗಿದಿರುವುದರಿಂದ ಐವತ್ನಾಲ್ಕಾಗಿದೆ. ರಾತ್ರಿ ಕಳೆದು ಬೆಳಗಾಗುವುದರೊಳಗಾಗಿ ಏನು ಮಹಾ ಬದಲಾವಣೆಯಾಗುತ್ತದೆ? ಇನ್ನೆರಡು ಬೆಳ್ಳಿ ಕೂದಲು ಗಡ್ಡದಲ್ಲಿ ಹಣಿಕೆ ಹಾಕುತ್ತವೆ. ಕಾಲಿನ ಮಾಂಸಖಂಡದಲ್ಲಿ ಹೊಸ ನೋವು. ಯಾವ ಕಾರಣಕ್ಕೂ ಬರ್ತ್‌ಡೇ resolutions ಮಾಡಬಾರದು ಅಂತ ನಿರ್ಧರಿಸಿದ್ದೇನೆ. ಯಾವುದನ್ನೂ ನಾನು ಆಚರಣೆಗೆ ತರಲಾರೆ. ಸೇದಬಾರದು ಅಂತ ಸಿಗರೇಟು ಅದುಮಿಟ್ಟು ನಿರ್ಧರಿಸಿದ ಅರ್ಧ ಗಂಟೆಯಲ್ಲೇ ಬೆಂಕಿ ಕಡ್ಡಿ ಹುಡುಕುವ ನನ್ನಂಥವರು resolutions ಮಾಡಬಾರದು. ಅಕಸ್ಮಾತ್ ಮಾಡಿದರೆ, ಅದಕ್ಕೆ birthday, ವಾರ-ತಿಥಿ-ನಕ್ಷತ್ರ, new year\'s dayಗಳ ಹಂಗಿರಬಾರದು.

ಇವತ್ತು ಕೈಯಲ್ಲಿ ಹಿಡಿದಿರುವ ಕೆಲಸವನ್ನು, ಇದು ಕೊನೆಯ ಕೆಲಸವೇನೋ ಎಂಬಂತೆ ಶ್ರದ್ಧೆಯಿಂದ ಮಾಡುವುದಷ್ಟೆ ಬದುಕಿನ ಸಿದ್ಧಾಂತವನ್ನಾಗಿ ಮಾಡಿಕೊಂಡಿದ್ದೇನಾದ್ದರಿಂದ ನನ್ನ ಪಾಲಿಗೆ ಪ್ರತಿ ಸೂರ್ಯೋದಯವೂ ಒಂದು ಜನ್ಮ ದಿನ. ಪ್ರತಿ ಅತೃಪ್ತ ಕೆಲಸವೂ ಒಂದು ಮರಣ ಘಳಿಗೆ.

ಹೊಸದೇನನ್ನೋ ಮಾಡಬೇಕೆಂಬ ಹಂಬಲ ನನ್ನಲ್ಲಿ ಶಕ್ತಿ, ಉತ್ಸಾಹ, ಚುರುಕು, ವಿನೋದ, ಹಟ ಹುಟ್ಟಿಸುತ್ತವೆ. ಇನ್ನೇನು notes ಮುಗಿಸಿ \'ನೆತ್ತರು ಮೆತ್ತಿದ ಗೋಡೆಯಾಚೆಗೆ\' ಕಾದಂಬರಿ ಬರೆಯಲು ಕೂಡೋಣವೆಂದುಕೊಳ್ಳುವಷ್ಟರಲ್ಲಿ ಬೆಳಗೆರೆಯಿಂದ ಮಾಮ ಕೃಷ್ಣ ಶಾಸ್ತ್ರಿಗಳು ಬಂದರು. ಯಾಕೋ ಸುಸ್ತು. ಡಾಕ್ಟರರಲ್ಲಿಗೆ ಹೋದರೆ \"ಅಂಥ ಸಮಸ್ಯೆಯಿಲ್ಲ. ಆದರೆ ಎರಡು ಸಲ ಅವರಿಗೆ ಹೃದಯಾಘಾತವಾಗಿದೆ. ಒಂದು ತೆರೆದ ಹೃದಯದ ಚಿಕಿತ್ಸೆಯಾಗಿದೆ. ಸೆರಬ್ರಲ್ ಹೆಮೊರೇಜ್ ಆಗಿದೆ. ಈಗ ಸಣ್ಣದಾಗಿ ಹೃದಯದ ಒಂದು ಕವಾಟದಿಂದ ನೆತ್ತರು ಜಿನುಗುತ್ತಿದೆ. ಮತ್ತೆ operate ಮಾಡಲಿಕ್ಕೆ ಅವರ ವಯಸ್ಸು ಅನುಮತಿಸದು. ತೊಂಬತ್ತಾರು ವರ್ಷ. ಪೂರ್ತಿ rest ಕೊಡಿ. ಅವರಾಗಿ ಚೇತರಿಸಿಕೊಳ್ಳಬೇಕು\" ಅಂದಾಗ ಅಲರ್ಟ್ ಆದೆ.

ತಿಂಗಳುಗಟ್ಟಲೆ ಮನೆಯಲ್ಲೇ ಇದ್ದ. ಹಕ್ಕಿಯಂತೆ ಓಡಾಡಿಕೊಂಡಿದ್ದ. \'ಮೊದಲು ನಿಂದು ಹೇಳೋ? ಆರೋಗ್ಯ ಹೇಗಿದೇ?\' ಅನ್ನುತ್ತಿದ್ದ. ಈಗ ಹತ್ತು ನಿಮಿಷ ಮಾತಾಡಿದರೂ ಸುಸ್ತು. ಚೆನ್ನಾಗಿದ್ದಾಗ, ಆತನ \'ಜೀವನ ಕಥನ ಬರೆಯೋಣ ಬಿಡು : ಬರೆದರಾಯ್ತು ಬಿಡು\' ಅಂತ ಮುಂದಕ್ಕೆ ಹಾಕುತ್ತಿದ್ದೆ. ಈಗ ಯಾಕೋ ಕಳವಳವೆನ್ನಿಸಿ ಉಳಿದೆಲ್ಲ ಕೆಲಸ ಬಿಟ್ಟು ಅದನ್ನೇ ಬರೆಯಲು ಕುಳಿತಿದ್ದೇನೆ.

ಮಾಮನ ತೊಂಬತ್ತಾರು ವರ್ಷಗಳ ಬದುಕಿನ ಕಥೆ ಬರೆಯುವುದೆಂದರೆ, ಕರ್ನಾಟಕದ ಒಂದು ನೂರು ವರ್ಷದ ಇತಿಹಾಸ ಬರೆದಂತೆ. ಇಡೀ ಬೆಳಗೆರೆ clanನ ಇತಿಹಾಸ ಬರೆದಂತೆ. ಒಂದು ಕಾಲಘಟ್ಟದ ಆಗು ಹೋಗು ದಾಖಲಿಸಿದಂತೆ. ಬೆಳಗೆರೆ ಅಂದರೆ ಕೇವಲ ಬೆಳಗೆರೆ ಕುಟುಂಬವಲ್ಲ. ಮೋಕ್ಷಗುಂಡಂ, ತಳುಕು, ಹಿರಿಯೂರು, ಕಡೆಗೆ ದೇವುಡು ನರಸಿಂಹ ಶಾಸ್ತ್ರಿಗಳ ಕುಟುಂಬವೂ ಬೆಸೆದು ಅದೊಂದು ಬೇರೆಯದೇ ಕಥೆಯಾಗುತ್ತದೆ. ಅವೆಷ್ಟು ಸಾವು? ಎಂಥ ದಾರುಣ ಸಾವು? ಎಂಥ ಆಶಾ ಭಂಗ? ಎಂಥ ಹೀನ ಮದುವೆ? ಯಾವ ಪರಿಯ ನಿರ್ದಯತೆ? ತೀರ ಕೆಲಸಕ್ಕೇ ಬಾರದವರು ಎಂದು ತಿರಸ್ಕರಿಸಲಾದ ಹೆಂಗಸರು ಮೈಕೊಡವಿ ಎದ್ದು ನಿಂತು ಅವಡುಗಚ್ಚಿ ದುಡಿದು ಬಾಳಿದ ರೀತಿ. ಇನ್ನಿಲ್ಲದಂತೆ ಮೆರೆದವರು ಹುಳು ಬಿದ್ದು ಸತ್ತು ಹೋದ ಬಗೆ. ಪರಮ ಚಂಡಾಲ ಜಿಪುಣತನ. ತಂಗಿಯರ ಒಡವೆಗಳನ್ನೇ ಕದಿಯುವ ನೀಚತನ. ಇದನ್ನೆಲ್ಲ ದಾಖಲಿಸುತ್ತಿದ್ದರೆ-ಈ ಜಗತ್ತು ಗೌರವಿಸಬೇಕಾದ ಬ್ರಾಹ್ಮಣರು ಇವರೇನಾ ಅನ್ನಿಸಿಬಿಡುತ್ತದೆ.

ಹಾಗೇನೇ, ಮಾಮನ ಜೊತೆ ಜೊತೆಗೆ ನಡೆಯುತ್ತಾ ಮನುಷ್ಯರ ಔನ್ನತ್ಯವನ್ನೂ ಅರ್ಥ ಮಾಡಿಕೊಂಡು ದಾಖಲಿಸುತ್ತಾ ಹೋಗುತ್ತಿದ್ದೇನೆ. ಬೆಳಗೆರೆ ಕುಟುಂಬವೆಂಬುದು ನರಸಿಂಹ ಶಾಸ್ತ್ರಿ ಎಂಬ ಜ್ಯೋತಿಷ್ಯ ಶಾಸ್ತ್ರ ಪಂಡಿತನ ವಲಸೆ ಬರುವ ಮೂಲಕ ಆರಂಭವಾಗುತ್ತದೆ : ನೂರು ವರ್ಷಗಳಿಗೂ ಮುಂಚೆ. ಅದೇ ಕುಟುಂಬದ ಕೂಸು ಸಿದ್ಧಾರ್ಥ್ ಬೆಳಗೆರೆ ಇವತ್ತು ಅಮೆರಿಕದ ನ್ಯೂಜೆರ್ಸಿಯಲ್ಲಿದ್ದಾನೆ! ಎಲ್ಲಿಯ ವಲಸಿಗ ನರಸಿಂಹ ಶಾಸ್ತ್ರಿ? ಎಲ್ಲಿಯ ನ್ಯೂಜೆರ್ಸಿಯ ಸಿದ್ಧಾರ್ಥ್ ಬೆಳಗೆರೆ.

ಈ ತೊಂಬತ್ತಾರು ವರ್ಷಗಳ ಮಹಾನದಿಯ ಪ್ರವಾಹವನ್ನು ಬೆಳಗೆರೆಯ ಮಾಮ ನಿರ್ಲಿಪ್ತನಾಗಿ ನೋಡುತ್ತಾ ದಡದ ಮೇಲೆ ಕುಳಿತಿದ್ದಾನೆ. ಪಕ್ಕ ಹೋಗಿ ಕುಳಿತವನಿಗೆ ಎಷ್ಟು ಅರ್ಥವಾದೀತೋ?

-ಬೆಳಗೆರೆ

Read Archieves of 17 March, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books