Ravi Belagere
Welcome to my website
ಬಹಳ ದಿನಗಳ ನಂತರ ಈ ತರಹದ್ದೊಂದು mega function ಏರ್ಪಡಿಸಿದ್ದೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ನೀವೆಲ್ಲ ಬಂದಿರಿ. ನನ್ನ ಬರವಣಿಗೆ, ತಿರುಗಾಟ, ಮುದ್ರಣ, ಬಣ್ಣ, ಈ ಸಿಂಗಾರ-ಬಂಗಾರ- ಇವೆಲ್ಲವೂ ನಿಮಗಾಗಿಯೇ ಅಲ್ಲವೆ? ಎಲ್ಲಿಯ ರಾಯಚೂರು, ಕೊಪ್ಪಳ, ಯಾದಗಿರಿ, ಗುಲಬರ್ಗ, ಚಿಂಚನ ಸೂರು, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ಮಂಗಳೂರು-ಎಲ್ಲೆಲ್ಲಿಂದ ಬಂದಿದ್ದರು ಓದುಗರು!. ಪ್ರತಿಯೊಬ್ಬರ ಕೈಲೂ ‘ಹಿಮಾಗ್ನಿ’. ಪ್ರತಿಯೊಬ್ಬರ ಕೈಲೂ ‘ಉಡುಗೊರೆ’, ‘ಅಮ್ಮ ಸಿಕ್ಕಿದ್ಲು’ ಮತ್ತು ಸಿಡಿಗಳು.
Home About Us Gallery Books Feedback Prarthana Contact Us

ಈಗೇನು ಬಿಡಿ, ಟಾಯ್ಲೆಟ್ಟಿಗೆ ಹೊರಟರೂ ಒಂದು ಗುಡ್ಲಕ್ ಮೆಸೇಜಿರುತ್ತೆ...

\"ನಾಳೆ ಮಂಗಳೂರಿಗೆ ಹೋಗ್ತಿದೀನಿ\" ಅಂತ ಫೇಸ್‌ಬುಕ್‌ನಲ್ಲಿ ಯಾರಿಗೋ ಉತ್ತರ ಕೊಟ್ಟೆ.

\"ಗುಡ್‌ಲಕ್ ಸರ್‌\" ಅಂತ ಮೂವರು ಮೆಸೇಜು ಕಳಿಸಿದರು.

Funny. ನನ್ನಂಥ ಅಪರ ನಾಸ್ತಿಕನು ಕೂಡ ದಿನದಲ್ಲಿ ಮೂರಾದರೂ ಸಲ, ಮೂರಾದರೂ ಜನಕ್ಕೆ ಗುಡ್‌ಲಕ್ ಹೇಳುತ್ತಿರುತ್ತೇನೆ. ಏನಾದರೂ ಹೊಸದನ್ನು ಬರೆಯಲಾರಂಭಿಸಿದಾಗ, ಎಲ್ಲಿಗಾದರೂ ಹೊರಟಾಗ, ಹೊಸ ಪ್ರಯತ್ನಕ್ಕೆ ಕೈ ಹಾಕಿದಾಗ ತೀರ ಆತ್ಮೀಯರ‍್ಯಾರಾದರೂ ನಂಗೊಂದು ಗುಡ್ಲಕ್ ಬಿಸಾಕಲಿ ಅಂತ ನಿರೀಕ್ಷಿಸುತ್ತಿರುತ್ತೇನೆ. ಬಹುಶಃ ಮನುಷ್ಯನ ಸಹಜ ಗುಣ.

ಮೊದಲೆಲ್ಲ ಪತ್ರಿಕೆಗಳಲ್ಲಿ ದಿನ ಭವಿಷ್ಯ ಓದುತ್ತಿದ್ದೆ. ಅದನ್ನು ನಂಬುತ್ತಿದ್ದೆನೋ, ಬಿಡುತ್ತಿದ್ದೆನೋ ಬೇರೆ ಮಾತು. ಓದಂತೂ ಓದುತ್ತಿದ್ದೆ. ಆಮೇಲೆ ನಾನೇ ಪತ್ರಿಕೆಯಲ್ಲಿ ಕೆಲಸಕ್ಕೆ ಸೇರಿದೆನಲ್ಲ? ಕೆಲವು ಸಲ ಭವಿಷ್ಯ ಬರೆಯುವವನು ಬರೆದು ಕಳಿಸುತ್ತಿರಲಿಲ್ಲ. ಎಲ್ಲ ಉಪ ಸಂಪಾದಕರಿಗೂ ಹೇಳಿ ಕೊಡುವ ಟ್ರಿಕ್ಕನ್ನೇ ನಮ್ಮ ಸಂಪಾದಕರು ನನಗೂ ಹೇಳಿಕೊಟ್ಟರು: \"ಮೇಷದ್ದು ಮಿಥುನಕ್ಕೆ ಹಾಕು: ಇವತ್ತಿನ ಕುಂಭದ್ದು ತೆಗೆದು ನಾಳಿನ ಕಟಕಕ್ಕೆ\" finish! ಅವತ್ತಿನಿಂದ ಯಾವುದೇ ಪತ್ರಿಕೆಯ ದಿನ ಭವಿಷ್ಯ ಓದುವುದು ಬಿಟ್ಟೆ. ಅಷ್ಟೇ ಅಲ್ಲ, ಅಮೆರಿಕದಲ್ಲಿ ಒಂದು ಪತ್ರಿಕೆ ತನ್ನಲ್ಲಿ ಪ್ರಕಟವಾಗುತ್ತಿದ್ದ ದಿನ ಭವಿಷ್ಯದ ಅಂಕಣದಿಂದಲೇ ಲಕ್ಷಾಂತರ ಪ್ರತಿಗಳಷ್ಟು ಖರ್ಚಾಗುತ್ತಿತ್ತು. ಅದರೊಂದಿಗೆ ಸ್ಪರ್ಧೆಗೆ ಬಿದ್ದ ಪತ್ರಿಕೆಗಳೆಲ್ಲ ತಿಪ್ಪರಲಾಗ ಹಾಕಿದರೂ ಪ್ರಸಾರ ಸಂಖ್ಯೆ ದಾಟಿ ಬೆಳೆಯಲಿಲ್ಲ. ಒಬ್ಬ ಜಾಣ ಪ್ರತಿಸ್ಪರ್ಧಿ ಸಂಪಾದಕ ಅದೊಂದು ದಿನ ಒಂದು ಪಟಾಕಿ ಸಿಡಿಸಿದ.

\"ನೀವು ಯಾವ ಪತ್ರಿಕೆಯನ್ನು ಕೇವಲ ದಿನ ಭವಿಷ್ಯದ ಸತ್ಯತೆಗಾಗಿ ಓದುತ್ತಿದ್ದೀರೋ, ಆ ಪತ್ರಿಕೆಗೆ ದಿನ ಭವಿಷ್ಯ ಬರೆಯುವ ಜ್ಯೋತಿಷಿ ಸತ್ತು ಹೋಗಿ ಸರಿಯಾಗಿ ನಾಲ್ಕು ವರ್ಷಗಳಾಗಿವೆ!\"

ಖಲಾಸ್

ಇದರ ಸರ್ಕ್ಯುಲೇಷನ್ನು ಬಕ್ಕಬಾರಲ ಬಿತ್ತು. ದಿನ ಭವಿಷ್ಯ, ವಾರ ಭವಿಷ್ಯ, ಕೆಲ ಬಾರಿ ಮಟ್ಕಾ ನಂಬರು, ರೇಸ್ ಪ್ರಿಡಿಕ್ಷನ್, ಷೇರ್ ಮಾರುಕಟ್ಟೆಯ ಪ್ರಿಡಿಕ್ಷನ್ ಮುಂತಾದವುಗಳನ್ನಷ್ಟೆ ನಂಬಿ ಆರಂಭಿಸಿದ ಪತ್ರಿಕೆಗಳು ತಾತ್ಕಾಲಿಕ ವಿಜಯ ಸಾಧಿಸಬಹುದಾದರೂ, ಅವು ಶಾಶ್ವತವಲ್ಲ. ನಾನು \'ಹಾಯ್ ಬೆಂಗಳೂರ್!\' ಆರಂಭಿಸಿದಾಗ ನಂಬಿಕೊಂಡದ್ದು ನನ್ನ ಬರಹವೊಂದನ್ನೇ. ಇವತ್ತಿಗೂ ಅದೇ ಉಳಿದಿದೆ.

ಆದರೆ ಆರಂಭಿಸುವ ಮುನ್ನಾದಿನ ಲಲಿತೆಯನ್ನು ದೀನ ನೇತ್ರನಾಗಿ ನೋಡಿ ಕೇಳಿದ್ದೆ: ಒಂದು ಗುಡ್‌ಲಕ್ ಹೇಳು!

ಅದಕ್ಕಿಂತ ಅನೇಕರಿಗೆ ಆಶ್ಚರ್ಯವಾದದ್ದು ದೇವರನ್ನೇ ನಂಬದ ನಾನು ನನ್ನ ಶಾಲೆಗೆ \'ಪ್ರಾರ್ಥನಾ\' ಅಂತ ಹೆಸರಿಟ್ಟಾಗ. ನಿಮ್ಮ ದೇವರನ್ನು ನಾನು ನಂಬುವುದಿಲ್ಲ. ಆದರೆ ನಿಮ್ಮ ಪ್ರಾರ್ಥನೆಯನ್ನು ನಂಬುತ್ತೇನೆ. ಅದರಲ್ಲಿನ ಆಸೆ, ಕಳಕಳಿ, ಪ್ರಾಮಾಣಿಕತೆ, ಆರ್ದ್ರಭಾವ, ಅನಿವಾರ್ಯತೆ, ಅಂತಃಕರಣ, ಒಳ್ಳೆಯತನಗಳನ್ನು ನಂಬುತ್ತೇನೆ. ನನ್ನ ಮುಸಲ್ಮಾನ ಮಿತ್ರನೊಬ್ಬ \"ಇವತ್ತು ಸೈಂಟಿಸ್ಟುಗಳು ಏನೇನು ಮಾತಾಡುತ್ತಿದ್ದಾರಲ್ಲಾ?ಅದೆಲ್ಲ ಕುರಾನ್‌ನಲ್ಲಿದೆ\" ಅಂದಾಗ, \"ಸುಮ್ನಿರು ಸಾಬಣ್ಣಾ, ನಮ್ಮ ಪುರಾಣ ಹೇಳೋ ಹರಿಕಥೆ ದಾಸರೂ ಇದನ್ನೇ ಹೇಳ್ತಾರೆ. ಮೆಕ್ಯಾನಿಕ್ಕು ಕೂತು ಕಾರಿನ ಫ್ರೀ ವೀಲ್ ಬಗ್ಗೆ ವಿವರಿಸ್ತಿದ್ರೆ ಇವರು ಇದನ್ನೇ ಶ್ರೀ ಕೃಷ್ಣ ತನ್ನ ವಿಷ್ಣು ಚಕ್ರಕ್ಕೆ ಆ ಯುಗದಲ್ಲೇ fix ಮಾಡಿಕೊಂಡಿದ್ದ ಅಂತಾರೆ. ಇಂಥ ಮೂರ್ಖತನ ಎಲ್ಲ ಜಾತಿಗಳಲ್ಲೂ ಇದೆ\" ಅನ್ನುತ್ತೇನೆ. ಆದರೆ ಅದೇ ಮುಸ್ಲಿಂ ಗೆಳೆಯ \"ನಿಜಾಮ್ ಉದ್ದೀನ್ ಔಲಿಯಾ ಅವರ ಸಮಾಧಿಯ ಮುಂದೆ ದುವಾ ಮಾಡುವಾಗ ನಿಮ್ಮ ಪರವಾಗಿಯೂ ಪ್ರಾರ್ಥನೆ ಸಲ್ಲಿಸಿದೆ\" ಅಂದಾಗ ಅವನ ಕಂಗಳಲ್ಲಿನ ಪ್ರೀತಿ, ಪ್ರಾಮಾಣಿಕತೆ ನಂಬುತ್ತೇನೆ.

ಈ Good luck ಕೂಡ ಅಂತಹುದೇ.
Good luck ಎಂಬ ಎಂಟು ಅಕ್ಷರಗಳ ಎರಡು ಶಬ್ದಗಳಿಗೆ ಯಾವತ್ತೋ ಒಂದು ದಿನ, ನಮಗೆ ಏನೋ ಒಳ್ಳೆಯದನ್ನು, ಹೇಗೋ ಮಾಡಿ ಬಿಡುವ ತಾಕತ್ತಿದೆ ಎಂಬ ನಿರೀಕ್ಷೆ ನನ್ನನ್ನೂ ಸೇರಿಸಿ ಎಲ್ಲರಿಗೂ ಇರುತ್ತದೆ. Human mind ಎಂಬುದು ನಿರೀಕ್ಷೆಗಳ ನಿರಂತರ ಅಡಿಕ್ಟ್. ಈ ಅಡಿಕ್ಷನ್, ಈ ಆಸೆ, ಈ ಭರವಸೆ ಇಲ್ಲದೆ ಹೋದರೆ ಬದುಕೇ ಇಲ್ಲ. ಎಂಥ ನಿರಾಶಾವಾದಿಯಾದರೂ, ಎಂಥ hopeless fellow ಆದರೂ ಯಾರದೋ Good luck ಬಗ್ಗೆ ನಂಬಿಕೆ ಇಟ್ಟುಕೊಂಡಿರುತ್ತಾನೆ. ಅಮ್ಮನ ಆಶೀರ್ವಾದ, ಅಪ್ಪನ ಹಾರೈಕೆ, ಹೆಂಡತಿಯ ವ್ರತ, ತಂಗಿಯ ಉಪವಾಸ, ಮೇಷ್ಟ್ರ ಆಶೀರ್ವಾದ, ಗುರುಗಳ ಮಂತ್ರಾಕ್ಷತೆ, ನೆಚ್ಚಿನ ಲೇಖಕ ಬರೆದ ಪತ್ರ, ಮಾಡಿದ ಫೋನು, ಗೆಳತಿಯ ಶುಭಾಶಯ, ಕೆಲವೊಮ್ಮೆ ಒಂದು shot strong ವಿಸ್ಕಿ ಕೂಡ- ಯಾವತ್ತೋ, ಹೇಗೋ, ಏನೋ ಒಳ್ಳೆಯದಾಗುತ್ತದೆಂಬ ನಿರೀಕ್ಷೆಯನ್ನು ನಮ್ಮಲ್ಲಿ ಹುಟ್ಟಿಸುತ್ತದೆ.

\'ನಿನ್ನ ಮೂವತ್ತಾರನೆಯ ವಯಸ್ಸಿನಲ್ಲಿ ನೀನು ಗೆಲ್ತೀಯ. ಮುಟ್ಟಿದ್ದೆಲ್ಲ ಚಿನ್ನ\' ಅಂತ ನನಗೆ ಅನೇಕ ಜ್ಯೋತಿಷ್ಯರು ಹೇಳಿದ್ದರು.

ಮೂವತ್ತಾರನೆಯ ವಯಸ್ಸಿಗಿಂತ ನನ್ನ ಖಾಸ್‌ಬಾತ್ ನನ್ನನ್ನು ಗೆಲ್ಲಿಸುತ್ತದೆಂಬ ವಿಶ್ವಾಸ ನನಗಿತ್ತಾದರೂ, ಆ ಜ್ಯೋತಿಷ್ಯದ ಬಗ್ಗೆ ತೀರ ನಿರಾದರಣೆಯೇನಿರಲಿಲ್ಲ: ಪತ್ರಿಕೆಗಳಲ್ಲಿನ ದಿನ ಭವಿಷ್ಯವಿರುವಂತೆ.

ಆದರೆ Good luckನ ವಿಷಯದಲ್ಲಿ ಮೊನ್ನೆ ಆಯುರ್‌ಧಾಮದ ಡಾ.ಸಿ.ಎ.ಕಿಶೋರ್ ಎಂಬುವವರು quote ಮಾಡಿದ ಒಂದು ಮೆಸೇಜ್ ಓದಿದೆ. ಫಕ್ಕನೆ ಅದರೆಡೆಗಿನ ನನ್ನ ಒಟ್ಟಾರೆ ಭಾವನೆ ಬದಲಾಗಿ ಹೋಯಿತು. ಇಷ್ಟು ದಿನದ ಸಂಗತಿಯೆಂದರೆ, Good luck ಎಂಬುದು ನಮಗೆ ಯಾವತ್ತೋ ಒಂದು ದಿನ ಹೇಗೋ, ಎಂಥದೋ ಒಳ್ಳೆಯದನ್ನು ಮಾಡುತ್ತದೆ ಎಂಬುದು. ಆದರೆ ಡಾ.ಕಿಶೋರ್ ಅದಕ್ಕೊಂದು ಸಾಲು ಸೇರಿಸಿದ್ದರು. \"ಆದರೆ ನಮ್ಮಲ್ಲಿ ಅನೇಕರಿಗೆ ಗೊತ್ತಿಲ್ಲ. Good luck ಎಂಬುದು ಕೂಡ ಯಾವತ್ತೋ ಒಂದು ದಿನ, ಹೇಗೋ, ಎಂಥದೋ ಒಂದು ಒಳ್ಳೆಯ ಪ್ರಯತ್ನವನ್ನು, ಯಾರೋ ಮಾಡುತ್ತಾರೆಂಬ ನಿರೀಕ್ಷೆಯಲ್ಲಿರುತ್ತದೆ!\" ಎಂಬ ಸಾಲು.

How wonderful.

ಡಾ.ಕಿಶೋರ್ ಯಾರೋ ನಾನು ಕಾಣೆ. ಇದು ಅವರು ಸೇರಿಸಿದ ಸಾಲೇನಾ? ಗೊತ್ತಿಲ್ಲ. ಪದೇ ಪದೇ ಇದನ್ನು ಓದಿಕೊಂಡೆ. Good luckನ ಅಷ್ಟೆಲ್ಲ ನಿರೀಕ್ಷಿಸುವ ನಾವು ಆ ಅಗೋಚರ ಎಂಟಕ್ಷರಗಳ, ಎರಡು ಶಬ್ದಗಳ Good luck ನಮ್ಮಿಂದ ಏನನ್ನು ನಿರೀಕ್ಷಿಸುತ್ತದೆ ಎಂಬುದರ ಬಗ್ಗೆ ಯೋಚಿಸಿಯೇ ಇರುವುದಿಲ್ಲವಲ್ಲ? ಐದಕ್ಕಿಂತ ಹೆಚ್ಚು ಭಾಷೆ ಕಲಿತು, ಡಿಗ್ರಿ ಗಳಿಸಿ, ಪಾಸ್‌ಪೋರ್ಟ್ ಇಟ್ಟುಕೊಂಡು, ಒಂದೇನೋ ನೌಕರಿ ಮಾಡುತ್ತ, software industryಯಲ್ಲಿ Good luck ನಿರೀಕ್ಷಿಸುತ್ತಾ ಕುಳಿತರೆ ಅದು ಆಗುವ ಮಾತು. ನೂರು ಸಿನೆಮಾ ನೋಡಿ, ಸಾಹಿತ್ಯ ಓದಿ, ಡೈರೆಕ್ಷನ್ ಬಗ್ಗೆ ಓದಿ, ಕೋರ್ಸ್ ಮುಗಿಸಿ, ಇಂಡಸ್ಟ್ರಿಯ ಪರಿಚಯ ಮಾಡಿಕೊಂಡು ಪ್ರೊಡ್ಯೂಸರ್ ಸಿಗುತ್ತಾನೆಂಬ Good luckಗೆ ಕಾತರಿಸಿದರೆ ಅದು ಪ್ರಜ್ಞಾವಂತಿಕೆಯ ಮಾತು. ಇನ್ನೇನು ನೆಗೆದು ಮುಂದಕ್ಕೆ ಓಡಿ ಸ್ವರ್ಣ ಪದಕ ಗೆಲ್ಲಬೇಕು: ಆ ಹುಡುಗಿ Good luck ನಿರೀಕ್ಷಿಸಲಿ. ಒಂಬತ್ತು ತಿಂಗಳ ಸುದೀರ್ಘ ಬಸುರಿನ ಮಿಸುಕಿನಲ್ಲಿ ಆ ಒದೆತದ ಬಿರುಸು ಅನುಭವಿಸುತ್ತಾ \'ಗಂಡೇ ಆಗಲಿ\' ಎಂದು ಬಯಸುವ ತಂಗಿ Good luck ನಿರೀಕ್ಷಿಸಲಿ. ಏಕೆಂದರೆ, Good luck ಎಂಬುದು ಸಾಕ್ಷಾತ್ತು ಏಸು ಕ್ರಿಸ್ತನೇ ಆಗಿದ್ದರೂ ತನ್ನ ಬಳಿಗೆ ಬರುವವನಿಗೆ ವೈನ್‌ನಲ್ಲಿ ಅದ್ದಿದ ರೊಟ್ಟಿ ಕೊಡಲಿಕ್ಕೆ, ಅವನು ನಡೆದು ಬರಲಿ: ಆನಂತರವೇ wine & breadನ Good luck ಲಭಿಸಲಿ ಅಂತ ನಿರೀಕ್ಷಿಸುತ್ತಾನಲ್ಲವೆ?

ನಾನು ಡಾ.ಕಿಶೋರ್ ಅವರ ಸಾಲು ಓದಿದ ಮೇಲೆ ಪ್ರತಿಯೊಂದು Good luck ಬಯಸುವಾಗ ಮತ್ತು ಹೇಳುವಾಗ ಅದಕ್ಕೆ \'ನಾವಿಬ್ಬರೂ ಅರ್ಹರಾ?\' ಅಂತ ಯೋಚಿಸಲಾರಂಭಿಸಿದ್ದೇನೆ.

By the way, ಒಂದು ಹೊಸ ಕೆಲಸಕ್ಕೆ ಕೈತುಂಬ ಕಸುವು, ಬಂಗಾರದ ಕವಡೆ ಇಟ್ಟುಕೊಂಡು ಕುಳಿತಿದ್ದೇನೆ: ಒಂದು Good luck ಬಿಸಾಕಿ ಪ್ಲೀಸ್!

-ರವೀ

Read Archieves of 15 March, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books