Ravi Belagere
Welcome to my website
ಬಹಳ ದಿನಗಳ ನಂತರ ಈ ತರಹದ್ದೊಂದು mega function ಏರ್ಪಡಿಸಿದ್ದೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ನೀವೆಲ್ಲ ಬಂದಿರಿ. ನನ್ನ ಬರವಣಿಗೆ, ತಿರುಗಾಟ, ಮುದ್ರಣ, ಬಣ್ಣ, ಈ ಸಿಂಗಾರ-ಬಂಗಾರ- ಇವೆಲ್ಲವೂ ನಿಮಗಾಗಿಯೇ ಅಲ್ಲವೆ? ಎಲ್ಲಿಯ ರಾಯಚೂರು, ಕೊಪ್ಪಳ, ಯಾದಗಿರಿ, ಗುಲಬರ್ಗ, ಚಿಂಚನ ಸೂರು, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ಮಂಗಳೂರು-ಎಲ್ಲೆಲ್ಲಿಂದ ಬಂದಿದ್ದರು ಓದುಗರು!. ಪ್ರತಿಯೊಬ್ಬರ ಕೈಲೂ ‘ಹಿಮಾಗ್ನಿ’. ಪ್ರತಿಯೊಬ್ಬರ ಕೈಲೂ ‘ಉಡುಗೊರೆ’, ‘ಅಮ್ಮ ಸಿಕ್ಕಿದ್ಲು’ ಮತ್ತು ಸಿಡಿಗಳು.
Home About Us Gallery Books Feedback Prarthana Contact Us

ಊರಿಂದೂರಿಗೆ ಟ್ರಾವೆಲ್ ಮಾಡುವ ಕಾದಂಬರಿಯ ಹೆಜ್ಜೆ ಜಾಡು ಹಿಡಿದು ನಡೀತಾ

ಒಂದಕ್ಕೆ ಸಂತೋಷ ಪಡೋಣವೆಂದುಕೊಳ್ಳುವಷ್ಟರಲ್ಲೇ ಒಂದು ಬೇಸರ ಬಂದು ಹೆಗಲ ಮೇಲೆ ಕೈಯಿಡುತ್ತದೆ. ಅಡಿಗರು ಅಂದ ಮಾತು ನೆನಪು ಮಾಡಿಕೊಳ್ಳುತ್ತೇನೆ.

ಇದನರಿತೆನೆಂದೆ : ಆ ಅರಿವು ಕಿರಣವನೆ ನುಂಗಿತೊಂದು ಮೇಘ / ಆ ಮುಗಿಲ ಬಸಿರನೇ ಬಗೆದು ಬಂತು ನವ ಕಿರಣವೊಂದಮೋಘ...

ನನಗೆ ಗೊತ್ತು : ಈ ಬದುಕು `ಯಾರ ಪಾಲಿಗೋ ಯಾರೋ ಏನೋ, ಗುರಿ ಇರದೆ ಬಿಟ್ಟ ಬಾಣ`. ಕತ್ತಲಲ್ಲಿ ಅದು ನಮಗೇ ಬಂದು ಬಡಿಯಬೇಕಾ?

ಕಳೆದ ವಾರ ಶುಭ್ರ ಮನಸ್ಸು ಹೊತ್ತು ಬರೆಯಲು ಬಂದು ಕುಳಿತೆ. ಒಂದಷ್ಟು ಅಂಕಣ ಬರೆದೂ ಬರೆದೆ. ಅಷ್ಟರಲ್ಲಿ ಉಮೇಶ ಕಳವಳದ ಮುಖ ಹೊತ್ತು ಬಂದವನು \"ಅಪ್ಪ ಹೋದ ಅಂತ ಕಾಣುತ್ತೆ\" ಅಂದು ಕಣ್ಣ ಹನಿ ಕೆಡವಿದ. ಶಿರಸಿ ಹತ್ತಿರದ ಕೊವೇಸರ ಅವನ ಊರು. ಅದರ ಪಕ್ಕದ ಮಾಣಿಗದ್ದೆಯಲ್ಲಿ ಅವನ ತಂದೆ ತಾಯಿ, ಒಬ್ಬ ಮಗ-ಸೊಸೆಯೊಂದಿಗೆ ಇದ್ದರು. ಹಿರಿ ಮಗ ಪುಣೆಯಲ್ಲಿ ಅಧಿಕಾರಿ. ಮೂರನೆಯವ ಉಮೇಶ. ನಾಲ್ಕನೆಯವ ರಮೇಶ ಶಿರಸಿಯಲ್ಲೇ ಇದ್ದಾನೆ. ಹೆಣ್ಣು ಮಕ್ಕಳಿಗೆ ಮದುವೆಯಾಗಿ, ಅವರ ಗಂಡಂದಿರು ರಿಟೈರಾಗಿ, ಅವರ ಮಕ್ಕಳಿಗೆ ಮದುವೆಯಾಗಿ, ಅವರಲ್ಲೊಬ್ಬ ಅಮೆರಿಕದಲ್ಲೂ ಇದ್ದಾನೆ. ಉಮೇಶನ ತಂದೆ ಕಳೆದ ವಾರವಷ್ಟೆ ಒಬ್ಬ ಮೊಮ್ಮಗನ ಮದುವೆ ನೋಡಿ ಬಂದಿದ್ದರು. ಕೊಂಚ ಉಸಿರಾಟದ ತೊಂದರೆ ಇತ್ತಾದರೂ ಎಂಬತ್ತೊಂದು ವರ್ಷ ಯಾರಿಗೂ ತೊಂದರೆ ಕೊಡದೆ ಆರೋಗ್ಯಕರವಾಗಿ, ಸಜ್ಜನಿಕೆಯ ಜೀವನ ಮಾಡಿದ ಕೃಷಿಕರು ಆತ, ಗಣಪತಿ ಹೆಗಡೆ.

ಮೊನ್ನೆ ಸ್ನಾನ ಮಾಡಿದವರು ಕೊಂಚ ಹೊತ್ತಿಗೆ ಬಾತ್‌ರೂಮಿಗೆ ಹೋಗಿ ಬಂದಿದ್ದಾರೆ. ಏನೋ ಕಷ್ಟ ಉಸಿರಾಟದಲ್ಲಿ. ದೊಡ್ಡಗೊಮ್ಮೆ ಉಸಿರೆಳೆದುಕೊಂಡು ಬಿಟ್ಟು ಹಿಂದಕ್ಕೆ ವಾಲಿದವರು, ಅಷ್ಟೆ. ಉಸಿರಾಟ ನಿಂತಿದೆ. ಎದೆ ಬಡಿತ ಸ್ತಬ್ದ. ಸಣ್ಣಗೆ pulse ಇತ್ತಂತೆ. ಆಫೀಸಿನದೇ ಕಾರು ಒಯ್ಯ. ನೀನು drive ಮಾಡಬೇಡ ಎಂದು ಉಮೇಶನಿಗೆ ಹೇಳಿ ಕಳಿಸಿದೆನಾದರೂ, ನನಗೇ ಆನಂತರ ಕುಳಿತು ಬರೆಯಲಾಗಲಿಲ್ಲ. ಉಮೇಶನ ಷಡ್ಡಕ ಹಾಗೂ ನನಗೆ ಅಣ್ಣನಂತೆಯೇ ಇರುವ ಸಿದ್ಧಾಪುರದ ಐನಕೈ ರಾಮಕೃಷ್ಣಣ್ಣನಿಗೆ ಫೋನು ಮಾಡಿ ವಿಚಾರ ತಿಳಿಸಿ, ನಾನೇ ಇಳಿ ಮಧ್ಯಾಹ್ನದ ಹೊತ್ತಿಗೆ ಶಿರಸಿಗೆ ಹೊರಟು ಬಿಟ್ಟೆ. ಪುಣೆಯಿಂದ ಉಮೇಶನ ಅಣ್ಣ ಬರುವ ತನಕ ಶವ ಸಂಸ್ಕಾರ ಮಾಡುವಂತಿರಲಿಲ್ಲ. ಆದರೆ, ನಾನು ಬರುವ ತನಕ ಮಾಡಬೇಡಿ. ನಾನು ನಿಮ್ಮ ಮನೆಗೆ ಹಿರಿ ಮಗನಂಥವನು ಎಂದು ಮೆಸೇಜು ಕಳಿಸಿದ್ದೆ.

ಸುಮಾರು 1989ರಿಂದ ಬೆಸೆದ ಬಾಂಧವ್ಯ ಅದು. ಭರತನಹಳ್ಳಿ, ಐನಕೈ, ಮಾಣಿಗದ್ದೆ, ಬೀಳಗಿ, ತದ್ದಲಸೆ-ಎಲ್ಲ ಹವ್ಯಕ ಕುಟುಂಬಗಳೇ ಆದರೂ ನನ್ನ-ಲಲಿತ ಮತ್ತು ಮಕ್ಕಳ ಪಾಲಿಗೆ ಇವೆಲ್ಲವೂ ಕರುಳುಬಳ್ಳಿ ಕೂಡಿದ ಕುಟುಂಬಗಳೇ. ಶಿರಸಿ ತಲುಪಿ ಕೊಂಚ ಹೊತ್ತು ಆರಾಮು ತೆಗೆದುಕೊಂಡವನಿಗೆ ಐನಕೈಯಿಂದ ರಾಮಕೃಷ್ಣಣ್ಣ ಬರುತ್ತಲೂ ತಳಮಳ ಶುರುವಾಯಿತು. ಬ್ರಾಹ್ಮಣರ ಮನೆಗಳಲ್ಲಿ ಪ್ರಾಣ ಹೋಗುವುದೊಂದು ಬಾಕಿ. ಈ ಮನೆಯಲ್ಲಿ ಆತ ಬದುಕಿದ್ದುದೇ ಸುಳ್ಳೇನೋ ಎಂಬಂತೆ ಶವ ಎತ್ತಿ ಅಂಗಳದಲ್ಲಿ ಮಲಗಿಸಿ ಬಿಡುತ್ತಾರೆ, ಕೆಲವು ಸಲ ಮನೆಯೊಳಗೇ ಪ್ರಾಣ ಬಿಟ್ಟರೆ, ಮನೆ ಖಾಲಿ ಮಾಡಬೇಕಾದೀತು ಅಂದುಕೊಂಡು ಕುಟುಕು ಜೀವವಿರುವಾಗಲೇ ಜಗುಲಿಗೆ ತಂದು ಮಲಗಿಸಿ ಅಲ್ಲಿ ಸ್ಮಶಾನದಲ್ಲಿ ಕಟ್ಟಿಗೆ ಪೇರಿಸಲಾರಂಭಿಸುತ್ತಾರೆ. ತುಂಬ ಜನ ಬರಬೇಕೆಂಬುದೂ ಇಲ್ಲ. ಬಂದವರು ಬಂದರು. ಪ್ರಾಣ ಹೋದ ಕೊಂಚವೇ ಹೊತ್ತಿನಲ್ಲಿ ಪುರೋಹಿತರು ಬಂದು ಮಂತ್ರ ಸಿಮರು ಹಾಕಿ, ಒಂದು ಹೋಮದ ಶಾಸ್ತ್ರ ಮಾಡಿ, ನಾಪಿತನನ್ನು ಕರೆಸಿ ಗಂಡು ಮಕ್ಕಳಿಗೆ ತಲೆ ಮೀಸೆ ಬೋಳಿಸಿ ಸ್ನಾನ ಮಾಡಿಸಿ, ಸಿದಿಗೆಗೆ ಬಿಗಿದ ಶವಕ್ಕೆ ಬಂದವರೆಲ್ಲರಿಂದಲೂ ಚೊಂಬು ನೀರು ಹಾಕಿಸಿ ಹೆಗಲಿಗೇರಿಸಿ ನಡೆದು ಬಿಟ್ಟರೆ ಹತ್ತೇ ನಿಮಿಷದಲ್ಲಿ ಬೆಂಕಿ ಕೊಟ್ಟು ಬಿಡುತ್ತಾರೆ. ಅಲ್ಲಿಗೆ ಮುಗಿಯಿತು. ತೀರಿಕೊಂಡವರ ಮನೆಯ ಕಡೆಗೆ ತಿರುಗಿಯೂ ನೋಡದಂತೆ ಬಂದವರೆಲ್ಲ ಹೊರಟು ಹೋಗಬೇಕು. ಸತ್ತವರ ಮನೆಯಲ್ಲಿ ಉಳಿಯುವುದು ಶುದ್ಧ ಸೂತಕದ ಭಣ.

ಆದರೆ ನಾನು ಹೋಗುವ ಹೊತ್ತಿಗೆ ಮಾಣಿಗದ್ದೆಯಲ್ಲಿ ಉಮೇಶನ ಹಿರಿಯಣ್ಣ ಕೇಶ ಮುಂಡನ ಮಾಡಿಸಿಕೊಳ್ಳುತ್ತಿದ್ದ. ಅಪ್ಪನನ್ನು ಬೆಚ್ಚನೆಯ ಚಾದರ ಹೊದಿಸಿ ಒಳ ಮನೆಯಲ್ಲಿ ಮಲಗಿಸಿದ್ದರು. \"ನಮ್ಮ ಮನೆಗೆ ನಿಮ್ಮ ಪಾದಧೂಳಿ ಸೋಂಕಬೇಕು\" ಅನ್ನುತ್ತಿದ್ದ ಗಣಪತಿ ಹೆಗಡೆ ಎಂಬ ಎಂಬತ್ತೊಂದು ವರ್ಷದ ಕರ್ಮಯೋಗಿ, ತಮ್ಮ ಆರು ಅಡಿ ಎತ್ತರದ ಕೋಲು ದೇಹ ಚಾಚಿ ತಣ್ಣಗೆ ಮಲಗಿದ್ದರು. ಜೊತೆಯಲ್ಲಿ ಗುಲಾಬಿ ಹಾರ ಒಯ್ದಿದ್ದೆ. ಆ ಮನೆಯ ಸೊಸೆಯಂದಿರು, ಹೆಣ್ಣು ಮಕ್ಕಳು ಬಾಗಿಲಲ್ಲಿ ನಿಂತಿದ್ದರು. ಕಣ್ಣು ಅತ್ತು ಕೆಂಪೇರಿದ್ದವು. ನನ್ನ ಕೈಯಲ್ಲಿ ಆಡಿ ಬೆಳೆದ ಕೂಸು, ಉಮೇಶನ ಮಗಳು ಪೂರ್ವಿ ತನ್ನ ಅಜ್ಜನ ಕಾಲ ಬಳಿ ಮುದ್ದೆಯಾಗಿ ಕುಳಿತಿದ್ದಳು. ಸಮಾಧಾನದ ಸಂಗತಿಯೆಂದರೆ, ಉಮೇಶನಿಗೆ ತುಂಬ ಆತ್ಮೀಯರಾದ, ಚಿಕ್ಕದಕ್ಕೂ \'ಮಾಮಾ\' ಅಂತ ಬೆನ್ನು ಬೀಳುವ ನನ್ನ ಮಗ ಕರ್ಣ ಹಾಗೂ ಅಳಿಯ ರಂಜಿತ್ ಬಂದಿಳಿದರು. ಕೇವಲ ಒಬ್ಬ ಕೃಷಿಕರಾಗಿದ್ದರೂ, ಸೋದರರು ಪಾಲಾದಾಗ ತೀರ ಕಳಪೆ ಜಮೀನು ಸಿಕ್ಕಿದ್ದಾಗ್ಯೂ, ಅದರಲ್ಲೇ ಶ್ರಮಪಟ್ಟು, ಅದನ್ನು ವೃದ್ಧಿ ಮಾಡಿ, ಗಂಡು ಮಕ್ಕಳಿಗೆ ಒಳ್ಳೆ ವಿದ್ಯಾಭ್ಯಾಸ ಕೊಡಿಸಿ, ಹೆಣ್ಣು ಮಕ್ಕಳಿಗೆ ತುಂಬ ಒಳ್ಳೆ ಕಡೆ ಮದುವೆ ಮಾಡಿ, ತಮಗೆ ಆದ ಅನ್ಯಾಯವನ್ನು ಎಲ್ಲೂ ಹೇಳಿಕೊಳ್ಳದೆ, ಬದುಕಿದಷ್ಟು ದಿನ ಸುತ್ತಲ ಸಮಾಜದಲ್ಲಿ ಎಲ್ಲರನ್ನೂ ಹಚ್ಚಿಕೊಂಡಿದ್ದ, ತುಂಬ ಜನಪ್ರಿಯರಾಗಿದ್ದ ಉಮೇಶನ ತಂದೆ ಗಣಪತಿ ಹೆಗಡೆಯವರ ಅಂತ್ಯಕ್ರಿಯೆಗೆ ಅವತ್ತು ತೋಟದ ತುಂಬ ಜನ ಸೇರಿದ್ದರು.

ಕೇವಲ ಎರಡು ಅಡಿಕೆ ಗಳುವಿಗೆ ಬಿಗಿದ ತೆಳ್ಳನೆಯ ದೇಹ ಹೊತ್ತು ತೋಟದಿಂದ ಅನತಿ ದೂರಕ್ಕೆ ನಡೆದರೆ, ಅಲ್ಲೇ ಕಾಡಿನಲ್ಲಿ ಕೊಂಚ ಬಯಲು. ಅದೆಂಥ ಬೇಸಿಗೆ ಆರಂಭವಾಗಿದೆಯೆಂದರೆ, ನೆತ್ತಿಯ ಮೇಲೆ ಬೆಂಕಿಯಂತೆ ಬಿಸಿಲು ಸುರಿಯುತ್ತಿತ್ತು. ಅಲ್ಲೇ ಚಿತೆ ಪೇರಿಸಿದ್ದರು. ಒಂದು ಕಡೆ ಮುಳ್ಳುಕಂಬಿಯಂತಹ ಕುರುಚಲು ಮರದ ಕೆಳಗೆ ನೆರಳಿನಲ್ಲಿ ಉಮೇಶನ ತಾಯಿ ಕೂತಿರುವುದು ಕಾಣಿಸಿತು. ಹೋಗಿ ಪಕ್ಕದಲ್ಲಿ ಕುಳಿತೆ. ಆಕೆ ಪಕ್ಕಕ್ಕೆ ಸರಿದುಕೊಂಡರು. ಗುರುತು ಸಿಗಲಿಲ್ಲವೇನೋ ಅಂದುಕೊಂಡು,

\"ಅಮ್ಮಾ... ನಾನು ರವೀ\" ಅಂದೆ.

\"ಮ್... ಗೊತ್ತು. ಅವರಿರುವಾಗ ಒಂದು ಸಲ ನೀವು ಬರಬೇಕಿತ್ತು. ತುಂಬ ಹಂಬಲಿಸ್ತಾ ಇದ್ದರು, ನೀವು ಬರಲಿ ಅಂತ. ಚಿಕ್ಕವಳಿದ್ದಾಗ ಭಾವನಾ ಬಂದಿದ್ದಳಲ್ಲ? ಉಮೇಶ ಇಲ್ಲೇ ಹೊಳೇಲಿ ಈಜು ಹೊಡೆಸಿದ್ದ ಅದಕ್ಕೆ. ಲಲಿತಕ್ಕ ಬರ‍್ತಿದ್ದಳೇನೋ? ಹ್ಯಾಗೆ ಬಂದಾಳು? ಮನೆಯಲ್ಲಿ ಮಗು-ಬಾಣಂತಿ. ಚೇತೂ ಹೇಗಿದ್ದಾಳೆ. ಅವಳ ಮಗು ಹೇಗಿದೆ?\" ಕೇಳಿದರು ಆ ತಾಯಿ.

ವಿಚಿತ್ರವೆಂದರೆ ನನಗೆ ಉಮೇಶ್‌ನ ತಾಯಿಯ ಹೆಸರೇ ಗೊತ್ತಿಲ್ಲ. ಈ ತನಕ ಕರೆಯುವುದು `ಅಮ್ಮಾ` ಅಂತಲೇ. ಆಕೆ ಕುಳಿತಿದ್ದ ಜಾಗದಿಂದ ಹತ್ತು ಹೆಜ್ಜೆ ದೂರದಲ್ಲಿ ಗಂಡನ ಚಿತೆ ಸಿದ್ಧವಾಗುತ್ತಿದೆ. ನಾನು ಆಕೆಗೆ ಸಮಾಧಾನ ಹೇಳಬೇಕು. ಎಲ್ಲಕ್ಕಿಂತ ಹೆಚ್ಚಾಗಿ, ಸುಮ್ಮನೆ ಆಕೆಯ ಪಕ್ಕದಲ್ಲಿ ಕುಳಿತಿದ್ದು ಬರಬೇಕು. ಅದಕ್ಕಿಂತ ದೊಡ್ಡದು ಮತ್ತೊಂದಿಲ್ಲ. ಮಾತು ಕೂಡ ಆಡದೆ ಪಕ್ಕದಲ್ಲಿ ಕೂತಿದ್ದು ಎದ್ದು ಬರುವುದು ನಿಜವಾದ comfort ಕೊಡುತ್ತದೆ. ಆದರೆ ಈ ತಾಯಿ ತನ್ನ ನೋವು, ಯಾತನೆಯ ಬಗ್ಗೆ ಮಾತೇ ಆಡುತ್ತಿಲ್ಲ. ಲಲಿತಳ ಬಗ್ಗೆ, ನನ್ನ ಮೊಮ್ಮಗಳ ಬಗ್ಗೆ ಕೇಳುತ್ತಿದ್ದಾಳೆ. ಬೇಕಂತಲೇ ನಾನು ಮಾತು ಬದಲಿಸಿದೆ.

\"ಎಷ್ಟಿದ್ದವು ವರ್ಷ?\" ಆಕೆ ನೆನಪಿಸಿಕೊಂಡರು. \"ಹ್ಞಾಂ, ನನಗೆ ಹದಿನೈದಿರಬೇಕು ಮದುವೆಯಾದಾಗ. ಅವುಕ್ಕೆ (ಅವರಿಗೆ) ಹತ್ತೊಂಬತ್ತಾ? ಅಷ್ಟೆ. ಈಗ ನನಗೆ ಎಪ್ಪತ್ತೇಳು. ಒಟ್ಟು ಎಷ್ಟಾದವು? ಹ್ಞಾಂ, ಅರವತ್ತೆರಡು ವರ್ಷದ ದಾಂಪತ್ಯ. ಒಬ್ಬರನ್ನೊಬ್ಬರು ಬಿಟ್ಟಿದ್ದವರಲ್ಲ. ಅದರಲ್ಲೂ ಕಳೆದ ಹತ್ತಿಪ್ಪತ್ತು ವರ್ಷ, ಅವುಕ್ಕೆ ಸ್ವಲ್ಪ ಅನಾರೋಗ್ಯ ಅಂತ ಆಗ್ತಿತ್ತಲ್ಲ. ಬಿಟ್ಟಿರ‍್ತಾನೇ ಇರಲಿಲ್ಲ\" ಅಂದರು.

ಅರವತ್ತೆರಡು ವರ್ಷದ ಗೆಳೆತನ, ಸಹಜೀವನ, ದಾಂಪತ್ಯ, ಒಡನಾಟ-ಎಲ್ಲವೂ ಕಳೆದು ಹೋಗುವ, ಬೂದಿಯಾಗಿ ಉರಿದು ಹೋಗುವ ಘಳಿಗೆ. ಚಿತೆಯ ಮೇಲೆ ಮಲಗಿದ ಆರು ಅಡಿ ಎತ್ತರದ, ತುಂಬ ತೆಳ್ಳನೆಯ ಆ ಬಲಹೀನ ದೇಹದ ಮೇಲೆ ಕಡೆಯ ಪಕ್ಷ ನೂರು ಕೇಜಿ ತೂಕದ, ಎಂಟು ಅಡಿ ಉದ್ದದ ಒಂದು ಮರದ ಮೊದ್ದು ಇರಿಸಿದಾಗ ಮಾತ್ರ ಸಂಕಟವಾಗಿ ಹೋಯಿತು. ಅಷ್ಟು ಭಾರವನ್ನು ಆ ಜೀವ ತಡೆದೀತೇ? ಅಷ್ಟು ಭಾರ ಹೇರದಿದ್ದರೆ, ಅರ್ಧ ಉರಿದ ಮೇಲೆ ಶವ ಪಕ್ಕಕ್ಕೆ ಜಾರಿಕೊಂಡು ಬಿಡುತ್ತದೆ. ನನಗೆ ಆದ ಸಂಕಟವೇ ಆಕೆಗೂ ಆಯಿತೇನೋ? ಉಮೇಶನ ಹಿರಿಯ ಅತ್ತಿಗೆ ಅಲ್ಲೆಲ್ಲೋ ಇದ್ದವರು ಸರ್ರನೆ ಬಂದು ತಮ್ಮ ಅತ್ತೆಯನ್ನು ತಬ್ಬಿಕೊಂಡು ಬಿಕ್ಕಿ ಅತ್ತರು. ಆಕೆ ಕೇವಲ ಆ ಮನೆಯ ಹಿರಿ ಸೊಸೆಯಷ್ಟೆ ಅಲ್ಲ. ತೀರಿಕೊಂಡ ಗಣಪತಿ ಹೆಗಡೆಯವರ ಖಾಸಾ ಸೋದರ ಸೊಸೆಯೂ ಹೌದು. ಸೋದರ ಮಾವ, ಅಕ್ಷರಶಃ ತಾಯಿಯಂಥವನು.

ನನಗೆ ಸಂತೋಷವಾದದ್ದೆಂದರೆ ಹವ್ಯಕ ಸಂಪ್ರದಾಯದಲ್ಲಿ ಸಂಸ್ಕಾರ ನಡೆಯುವ ಜಾಗಕ್ಕೆ ಹೆಂಗಸರು ಮಕ್ಕಳನ್ನು ಬಿಡುತ್ತಾರೆ. ನಮ್ಮ ಕಡೆ ಬ್ರಾಹ್ಮಣರಲ್ಲಿ ಅದು ನಿಷಿದ್ಧ. ಏನೇ ರೋದನವಿದ್ದರೂ ಅದು ಅಂಗಳ ದಾಟುವಂತಿಲ್ಲ. ಅಷ್ಟರ ಮಟ್ಟಿಗೆ ಹವ್ಯಕರು ಹೆಚ್ಚು democratic ಅನ್ನಿಸಿತು. ಶವ ಸಂಸ್ಕಾರ ಮುಗಿಸಿ ಕೋಣೆಗೆ ಬಂದು ಸ್ನಾನ ಮುಗಿಸಿ, ಶಿರಸಿಯಲ್ಲಿದ್ದ ಎರಡು ಕೇಸುಗಳಿಗೆ ಹಾಜರಾಗಿ ಅಲ್ಲಿನ ಗೆಳೆಯರೊಬ್ಬರ ಇಸಳೂರಿನ resortನಲ್ಲಿ ಸಂಜೆ ಕಳೆದು ಮರುದಿನ ದಾಂಡೇಲಿಯ ನನ್ನ \'ವೃಕ್ಷ ಗಂಧ\' ಮನೆಗೆ ಸೇರಿಕೊಂಡೆ. ಪಕ್ಕದ ಕಾಡಿನಲ್ಲಿ ಅಶೋಕವನ ದಿವ್ಯವಾಗಿ ಹೂ ಬಿಟ್ಟಿದೆ ಎಂಬ ವಾರ್ತೆಯಿತ್ತು. ಬೆಂಗಳೂರಿನಲ್ಲಿ trim ಮಾಡಿದ ಹೆಂಗಸರ ಉಗುರಿನಂತೆ, ಸಾಬರ ಗಡ್ಡದಂತೆ conical ಆಗಿ ಬೆಳೆಯುವ Ashoka tree ಅಲ್ಲ ಅದು. ಪಕ್ಕಾ ಔಷಧೀಯ ಗುಣಗಳುಳ್ಳ, ಒಂದು ವನವಾಗಿ-ಕಾಡಾಗಿ ಬೆಳೆಯುವ ಸಮೃದ್ಧ, ನಿತ್ಯ ಹರಿದ್ವರ್ಣದ ಅದ್ಭುತ ವೃಕ್ಷ. ಅದರಿಂದ ತೆಗೆಯುವ ಒಂದು \'ಅಶೋಕಾರಿಷ್ಟ\' ಎಂಬ ಔಷಧಿಯ ಬಗ್ಗೆ ನನಗೆ ಗೊತ್ತು. ಬಿಯರ್ ಬಾಟಲಿಯ ತುಂಬ ಕೊಡುತ್ತಾರೆ. ಮುಟ್ಟಿನ ತೊಂದರೆಗಳಿಗೆ ದಿವ್ಯೌಷಧ. In fact, ಚೇತನಾ ಹೊಟ್ಟೆಯಲ್ಲಿದ್ದಾಗ ಮಗು ಮತ್ತು ಲಲಿತಾಳನ್ನು ಬದುಕಿಸಿದುದೇ \'ಅಶೋಕಾರಿಷ್ಟ\'.

ಅಂಥ ವನ ಹೂ ಬಿಟ್ಟಿದೆ. ಆದರೆ ಯಾವತ್ತೂ camera ಒಯ್ಯುವ ನಾವು ಈ ಬಾರಿ ಸಾವಿಗೆ ಹೋದದ್ದರಿಂದ camera ಒಯ್ದಿರಲಿಲ್ಲ. ತಕ್ಷಣಾ ಜೊಯಿಡಾಗೆ phone ಮಾಡಿ ಗೆಳೆಯ ಪ್ರಸನ್ನನನ್ನು ಕರೆಸಿ ಅವನ ಕೈಲಿ ಫೊಟೋ ತೆಗೆಸಿದೆ. ಒಂದೆರಡಲ್ಲ : ನಾಲ್ಕು ನೂರು. ರಕ್ತಗೆಂಪಿನ, ಕೆಲ ಬಾರಿ ಟೊಂಗೆಗಳಿಗೆ ಸಂಬಂಧವೇ ಇಲ್ಲದ, ಮರದ ಬೊಡ್ಡೆ-ಕಾಂಡ-ಕೊಂಬೆಯ ಗಡಸು ಭಾಗಗಳಿಂದಲೇ ಚಿಮ್ಮಿದಂತೆ ಹುಟ್ಟಿಕೊಂಡು ಕೆಂಪು ಮಿಶ್ರಿತ bright ಆದ ಹಳದಿ ಹೂವು ಕ್ರಮೇಣ ರಕ್ತವರ್ಣಕ್ಕೆ ತಿರುಗಿ ಇಡೀ ಗಿಡಕ್ಕೆ ಪಸರಿಸಿ, ಕಾಡಿಗೆ ಕಾಡೇ ಕೆಂಪಾಗಿ ಲಂಕೇಶರ ಸಾಲು `ಕೆಂಪಾದವೋ ಎಲ್ಲಾ ಕೆಂಪಾದವೋ` ನೆನಪಿಗೆ ತರುತ್ತದೆ.
ನಾನು ಹುಚ್ಚನಂತೆ ಕಾಡ ಗರ್ಭದೊಳಕ್ಕೆ ನಡೆದು ಹೋಗಿ ಹೂಗಳ ಸಮ್ಮುಖ ಸನ್ನಿಧಿಯಲ್ಲಿ ನಿಂತು ಫೊಟೋ ತೆಗೆಸಿಕೊಂಡೆ. ಸಂಜೆಯ ಸಾಯುವ ಬಿಸಿಲಿನದೇ ಒಂದು ಮಾಟವಾದರೆ ಬೆಳಗಿನ ಬಾಲ ಬಿಸಿಲಿನದು ಮತ್ತೊಂದು ಮಾಟ. ಹೂವು ಹೂವಿಗೂ ಬೇರೆ ಬೇರೆ ಬಣ್ಣ. ನನ್ನ ಮನಸು \'ವೃಕ್ಷ ಗಂಧ\' ಕಾದಂಬರಿಯ ಹೊಸ ಟಿಸಿಲು, ಹೊಸ ಹೊರಳು, ಹೊಸ ಇಳಿಜಾರು, ಹೊಸ ಏರಿಕೆ, ಹೊಸ ಪತನ, ಹೊಸ ಹನನ, ಹೊಸ ಖನನಗಳಲ್ಲಿ ತೇಲಿ ಮುಳುಗುತ್ತಿತ್ತು.

ಮೊದಲು ನರಸಿಂಹನನ್ನು ಕೂಡಿಸಿಕೊಂಡು ಜೊಯಿಡಾ-ದಾಂಡೇಲಿಯ ಕಣಿವೆಯಲ್ಲಿ ಹೊಚ್ಚ ಹೊಸದಾಗಿ ಒಬ್ಬ ಮನುಷ್ಯ ಬತ್ತದ ಬೆಳೆ ಹೇಗೆ ಆರಂಭಿಸುತ್ತಾನೆ ಎಂಬುದರ ಅತಿ ಚಿಕ್ಕ ವಿವರವನ್ನೂ ಕೇಳಿ ಬರೆದುಕೊಂಡೆ. ಸ್ವತಃ ಮುಳುಗಡೆಯಾದ ಕೊಡಸಳ್ಳಿ ಪ್ರದೇಶದಿಂದ ಜೊಯಿಡಾದ ಛಾಪಖಂಡಕ್ಕೆ ವಲಸೆ ಹೋಗಿ ಕೃಷಿ ಆರಂಭಿಸಿದ ಕುಟುಂಬದವನು ನರಸಿಂಹ. He was explicit. ಆನಂತರ ರಾಮಕೃಷ್ಣಣ್ಣ ಕೂತು ಅಷ್ಟೇ ಸಾದ್ಯಂತವಾಗಿ ಅಡಿಕೆ ತೋಟ ಹಚ್ಚುವ ಕ್ರಮ ವಿವರಿಸಿದ. ಮೊಟ್ಟ ಮೊದಲ ಬಾರಿಗೆ `ಕುಡುಬಿ` ಎಂಬ ಹಿಂದುಳಿದ ಕಾಡು ಜನಾಂಗದ ಹುಡುಗರ ಪೈಕಿ ಎರಡು post graduate degtee ಮಾಡಿ ಈಗ ph.d ಮಾಡುತ್ತಿರುವ ಜಯಾನಂದ್ ಡೇರಿಯಾನನ್ನು ಕೂಡಿಸಿಕೊಂಡು ಕುಡುಬಿಗಳ ಜೀವನ, ಸಂಸ್ಕೃತಿ, ಊಟ, ಬೇಟೆ, ನಂಬುಗೆ, ಕಟ್ಟಳೆ, ಧರ್ಮಗಳ ವಿವರ ಕಲೆ ಹಾಕಿದೆ.

ಸಮಸ್ಯೆಯೆಂದರೆ, ನನ್ನ ಕಾದಂಬರಿ travel ಮಾಡುತ್ತದೆ. ಯಥಾಪ್ರಕಾರ ಬಳ್ಳಾರಿಯಿಂದ ಹುಬ್ಬಳ್ಳಿಗೆ, ಹುಬ್ಬಳ್ಳಿಯಿಂದ ಉಳವಿಗೆ. ಹುಬ್ಬಳ್ಳಿಯಿಂದ ಉಳವಿಗೆ ಬರುವಾಗ ದಾರಿಯಲ್ಲಿ ಯಾವ್ಯಾವ ಊರು ಬರುತ್ತವೆ? ನಂಗೆ ಬೇಕಿತ್ತು. ಅತ್ತಲಿಂದ ನಮ್ಮ ರವಿ ಕುಲಕರ್ಣಿ ತನ್ನ ಕಾರಿನಲ್ಲಿ notes ಮಾಡುತ್ತಾ ಬಂದ. ದಾಂಡೇಲಿಯಿಂದ ಉಳವಿಗೆ ಹೋಗುವ ಹಾದಿಯಲ್ಲಿ ಸಿಗೋ ಊರುಗಳ ಹೆಸರುಗಳ notes ನಾನೇ ಮಾಡುತ್ತ ಹೋದೆ. ಯಾಕಿಷ್ಟು threadbare details ಅಂದ್ರೆ, ಕಾದಂಬರಿಯಲ್ಲಿ ನನ್ನ ನಾಯಕ ಆ ಇಡೀ ರಸ್ತೆಯನ್ನು ನಡೆದೇ ಕ್ರಮಿಸುತ್ತಾನೆ. ನಡೆಯುತ್ತ ನಡೆಯುತ್ತ ಕಾದಂಬರಿ ಘಟಿಸುತ್ತದೆ. ಉಳವಿಗೆ ಬರುತ್ತಿದ್ದಂತೆಯೇ ಅದು ಧಿಡಕ್ಕನೆ ದಿಕ್ಕು ಬದಲಿಸಿ ಜೊಯಿಡಾಕ್ಕೆ ಓಡಿ ಹೋಗಿ ಅಲ್ಲಿನ ಕಾಡುಗಳ ಮಹಾನ್ ವೃಕ್ಷಗಳ ಗಂಧದೆಡೆಗೆ ಆಕರ್ಷಿತವಾಗುತ್ತದೆ. ಕಾಮ, ಹೊಲ, ತೋಟ, ಕಾಡು, ಅಧ್ಯಯನ, ಮಿಲಿಟರಿ, ಏಕಾಂಗಿತನ, ಬರವಣಿಗೆ, ಹತ್ಯೆಗಳು ಮತ್ತು ಬೇಟೆ! ಇವೆಲ್ಲ ಸೇರಿದರೆ \'ವೃಕ್ಷ ಗಂಧ\'. ಇದರ ನಾಯಕ ನಾನಾ? ಕಲ್ಪಿತ ವ್ಯಕ್ತಿಯಾ? ಮನೋಹರ ಮಳಗಾಂವಕರರಾ? ಈಗಲೇ ಹೇಗೆ ಹೇಳಲಿ?

ಈ ಮಧ್ಯೆ \'ಪ್ರಮೋದ್ ಮಹಾಜನ್ ಹತ್ಯೆ\' ಕುರಿತಂತೆ ಅವನ ಹಂತಕ ಸೋದರ ಪ್ರವೀಣ್ ಮಹಾಜನ್ ಬರೆದ \'ಮಾಝಾ ಆಲ್ಬಮ್‌\' ಅನುವಾದದ ಕೆಲಸ ಮುಗಿಸಿದೆ. ಆದರೆ ನನಗೆ `ಪ್ರಮೋದ್ ಮಹಾಜನ್‌`ನ ವಿಕೃತ ಮುಖ ಪರಿಚಯಿಸಿದರಷ್ಟೆ ಸಾಲದು. ಆತನ ಹತ್ಯೆಯ ನಂತರ ಇನ್ನೊಂದು ಸಾವು ಸಂಭವಿಸಿತು. ಕಾರ್ಯದರ್ಶಿ ವಿವೇಕ್ ಮೊಯಿತ್ರಾನದು. ಅದು ಮತ್ತೂ ಭಯಾನಕವಾಗಿತ್ತು. ಮುಂದೆ ರಾಹುಲ್ ಮಹಾಜನ್ ಎಂಬ ಕುಲಪುತ್ರ ಇಡೀ ಮಹಾಜನ್ ಕುಟುಂಬದ ಅಷ್ಟೂ ಹೊಲಸನ್ನು ಟೀವಿಗಳಿಂದ ಹಿಡಿದು ಬಿಜೆಪಿ ಕಚೇರಿಯ ಮೆಟ್ಟಿಲುಗಳ ಮೇಲಿನ ತನಕ ತಂದು ತೊಳೆದಿಟ್ಟ. ಅದೊಂದು ಐವತ್ತು ಪುಟ ಸೇರಿಸಿದರೆ ಪೂರ್ತಿಯಾಗಿ ಬಿಜೆಪಿಯ ಒರಿಜಿನಲ್ ಕಾಮರಾಜ ಮಾರ್ಗ ಮತ್ತು ಅದರ ಉಪ ಮಾರ್ಗಗಳು ಬಯಲಾದಂತಾಗಿ ಬಿಡುತ್ತವೆ ಎಂದುಕೊಂಡು ಆ ಕೆಲಸಕ್ಕೆ ಕುಳಿತೆ ನೋಡಿ ಬಂತು ಫೋನು.

ಲಲಿತಳ ದನಿಯಲ್ಲಿ ಆತಂಕವಿತ್ತು.

ಈ ಬಾರಿ ಬೆಳಗೆರೆಯಿಂದ ಬಂದ ನನ್ನ ಮಾವ ಕೃಷ್ಣ ಶಾಸ್ತ್ರಿಗಳು ಮೊದಲಿನಂತೆ ಪುಟಿಯುತ್ತ ಬಂದಿರಲಿಲ್ಲ. ಏನೋ ಸುಸ್ತು. ನಡೆದಾಡಲೂ ಕಷ್ಟ. ಅಂಥ ಮಾತುಗಾರರಾದ ಅವರಿಗೆ ಹತ್ತು ನಿಮಿಷದ ಮಾತೂ ಬೇಡ. ಡಾಕ್ಟರುಗಳು ಕೂಡ ಆತಂಕ ವ್ಯಕ್ತಪಡಿಸಿದ್ದರು. ತೀರ ಅಪಾಯಕರ ಸ್ಥಿತಿಯೇನಲ್ಲ. ಆದರೆ he is 96. ಇನ್ನು ನೀವು ರೆಸ್ಟ್ ಕೊಡದಿದ್ದರೆ ಕಷ್ಟ. ಬೆಂಗಳೂರಿನಿಂದ ಹೊರಕ್ಕೆ ಬಿಡಲೇಬೇಡಿ. ದಯವಿಟ್ಟು ಅತಿಥಿಗಳು ಬೇಡ.

ಅದೇ ಬಂದಿರುವುದು ಕಷ್ಟ. ನಾನು ಕೆಲವು ವರ್ಷಗಳಿಂದ ಒಂದು ಕೆಲಸವನ್ನು ಮುಂದಕ್ಕೆ ಹಾಕುತ್ತಾ ಬಂದಿದ್ದೇನೆ. ಶಾಸ್ತ್ರಿಗಳ ಜೀವನ ಕಥನ ಬರೆಯುವ ಕೆಲಸ. ಸೋಮಾರಿತನ, ಪಕ್ಕದಲ್ಲೇ ಇದ್ದಾನಲ್ಲ ಬರೆದರಾಯ್ತು ಎಂಬ ಅಸಡ್ಡೆ, ತೀರ ಸೋದರಮಾವನಾದ್ದರಿಂದ ಹೇಗೆ ಬರೆಯೋದು ಎಂಬ ಹಿಂಜರಿಕೆ, ದೇಶಗಳ ಸುತ್ತಾಟ-ಇವೆಲ್ಲವುಗಳ ಮಧ್ಯೆ ಈ ಕೆಲಸ ನೆನೆಗುದಿಗೆ ಬಿದ್ದಿತ್ತು. ಈಗ ಯಾಕೋ ಧಾವಂತ. ಆತನ ಸುಸ್ತನ್ನು ಗಮನದಲ್ಲಿಟ್ಟುಕೊಂಡು, ಕೊಂಚ ಹುರುಪಿನಲ್ಲಿದ್ದಾಗಲೇ ಮಾತಿಗೆಳೆದು, ವಿಷಯ ಸಂಗ್ರಹಿಸಿ ಬರೆಯತೊಡಗಿದ್ದೇನೆ. ಆದ್ಯತೆಯ ಮೇಲೆ ಆ ಕೆಲಸ ಮುಗಿಸಬೇಕಾಗಿದೆ. ನಂಗೊತ್ತು, ಆತ ನೂರು ದಾಟುತ್ತಾನೆ. ಆದರೆ ನೂರು ದಾಟಲಿಕ್ಕೆ ಉಳಿದಿರುವುದು ನಾಲ್ಕೇ ವರ್ಷ. ಆತನ ಬದುಕಿನ ಕುರಿತು ಬರೆಯುವುದೆಂದರೆ, ಒಂದು ಶತಮಾನದ ಕುರಿತು ಬರೆಯುವುದೆಂದೇ ಅರ್ಥ. ಅದೇನು ಸುಮ್ಮನೆ ಮಾತೇ?

-ನಿಮ್ಮವನು
ಆರ್.ಬಿ.

Read Archieves of 14 March, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books