Ravi Belagere
Welcome to my website
ಬಹಳ ದಿನಗಳ ನಂತರ ಈ ತರಹದ್ದೊಂದು mega function ಏರ್ಪಡಿಸಿದ್ದೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ನೀವೆಲ್ಲ ಬಂದಿರಿ. ನನ್ನ ಬರವಣಿಗೆ, ತಿರುಗಾಟ, ಮುದ್ರಣ, ಬಣ್ಣ, ಈ ಸಿಂಗಾರ-ಬಂಗಾರ- ಇವೆಲ್ಲವೂ ನಿಮಗಾಗಿಯೇ ಅಲ್ಲವೆ? ಎಲ್ಲಿಯ ರಾಯಚೂರು, ಕೊಪ್ಪಳ, ಯಾದಗಿರಿ, ಗುಲಬರ್ಗ, ಚಿಂಚನ ಸೂರು, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ಮಂಗಳೂರು-ಎಲ್ಲೆಲ್ಲಿಂದ ಬಂದಿದ್ದರು ಓದುಗರು!. ಪ್ರತಿಯೊಬ್ಬರ ಕೈಲೂ ‘ಹಿಮಾಗ್ನಿ’. ಪ್ರತಿಯೊಬ್ಬರ ಕೈಲೂ ‘ಉಡುಗೊರೆ’, ‘ಅಮ್ಮ ಸಿಕ್ಕಿದ್ಲು’ ಮತ್ತು ಸಿಡಿಗಳು.
Home About Us Gallery Books Feedback Prarthana Contact Us

ವಕೀಲರು ಬಡಿದರು ನಿಜ: ಅದಕ್ಕೆ ಇನ್ನೊಂದು ಮುಖವೂ ಇತ್ತೆ?

ನಮ್ಮಲ್ಲಿ ಕೆಲವರು ಕೆರಳಿದ್ದು, ಬಡಿದದ್ದು ತೋರಿಸಿದಿರಿ. ನಮ್ಮನ್ನು ಕೆರಳಿಸಿದ್ದನ್ನು ತೋರಿಸಲಿಲ್ಲ. ಪೆಟ್ಟು ನಮಗೆ ಬಿದ್ದಿದ್ದನ್ನು ತೋರಿಸಲಿಲ್ಲ. ಒಂದೇ ಗುಂಪಿನವರಿಂದ ಗಲಭೆಯಾಗಲು ಸಾಧ್ಯವೇ? ಲಾಯರುಗಳೆಲ್ಲರೂ ಮಹಾನ್ ಕ್ರೂರಿಗಳು, ಒರಟರು, ರೌಡಿಗಳು ಎಂಬಂತೆ ಚಿತ್ರಿಸಿದಿರಿ. ಇದು ಸರಿಯಾ? ಎರಡೂ ಕಡೆ ಸತ್ಯವೇನಿದೆ ಅಂತ ಅರ್ಥ ಮಾಡಿಕೊಂಡು ಒಬ್ಬರೂ ವರದಿ ಮಾಡಲಿಲ್ಲ ಎಂದು ನನ್ನ ಪರಿಚಯದ, ಪರಿಚಯವಿಲ್ಲದ ಅನೇಕ ವಕೀಲರು ಫೋನ್ ಮಾಡಿ, ಮೇಯ್ಲ್ ಕಳಿಸಿ ತಮ್ಮ ತಕರಾರು ವ್ಯಕ್ತಪಡಿಸಿದ್ದಾರೆ.

ಪತ್ರಕರ್ತರ ಹಾಗೂ ವಕೀಲರ ನಡುವೆ ಘರ್ಷಣೆಯಾದಾಗ ನಾನು ಊರಲ್ಲಿರಲಿಲ್ಲ. ಬರೋ ಹೊತ್ತಿಗೆ ಇಬ್ಬರು ವಕೀಲರು, ಇಬ್ಬರು ಪೊಲೀಸರು ಸತ್ತು ಹೋಗಿದ್ದಾರೆ ಅಂತ ಮೆಸೇಜು ಬಂದಿತ್ತು. ಅದು ಸುಳ್ಳೆಂದು ಬೆಳಿಗ್ಗೆಯೇ ಗೊತ್ತಾದದ್ದು.

ನಾನು ಕಳೆದ ಹದಿನಾರು ವರ್ಷಗಳಿಂದ ನಾನಾ ಊರುಗಳ ಕೋರ್ಟುಗಳಿಗೆ ಎಡತಾಕುತ್ತಿದ್ದೇನೆ. ಬೆಂಗಳೂರಿನಲ್ಲಿ ದಿವಂಗತ ದೇವದಾಸ್, ಟಾಮಿ ಸೆಬಾಸ್ಟಿಯನ್, ಹನುಮಂತರಾಯರು, ರಘುಪತಿಯವರು, ರೇವಣಸಿದ್ದಯ್ಯ, ಸಿ.ವಿ.ನಾಗೇಶ್, ಕೆ.ದಿವಾಕರ್, ಶಂಕರಪ್ಪ, ನಾಣಯ್ಯ, ಸುಬ್ಬಾರೆಡ್ಡಿ, ಹೊಳ್ಳ, ಹಾರನಹಳ್ಳಿ, ಪ್ರಮೀಳಾ ನೇಸರ್ಗಿ, ರಾಘವನ್, ಪುಟ್ಟೇಗೌಡ, ಡಿ.ಎಲ್.ಜಗದೀಶ್, ಚಂದ್ರಮೌಳಿ-ಹೀಗೆ ಖುದ್ದಾಗಿ ಪರಿಚಯವಿರುವವರೇ ಒಂದು ರೈಲ್ವೆ ಬೋಗಿಗಾಗುವಷ್ಟಿದ್ದಾರೆ. ನಾಡಿನುದ್ದಕ್ಕೂ ಇವರಿಗೆ ಸರಿ ಸಮನಾದ ಪ್ರಕಾಂಡ ಪಾಂಡಿತ್ಯದ ವಕೀಲರಿದ್ದಾರೆ. ನನಗೆ ಹೊಸ ತಲೆಮಾರಿನಲ್ಲೂ ಮಿತ್ರರಿದ್ದಾರೆ. ನನ್ನ ಓದುಗರು, ನನ್ನನ್ನು ಇಷ್ಟ ಪಡುವವರು, ಟೀಕಿಸುವವರು, ನನ್ನ ವಿರುದ್ಧ ವಾದಿಸುತ್ತಲೇ ನನ್ನೊಂದಿಗೆ ಸ್ನೇಹವಿಟ್ಟುಕೊಂಡವರು-ಎಲ್ಲ ಇದ್ದಾರೆ.

ಹಾಗೆಯೇ ಪತ್ರಕರ್ತರು.

ಅದು ನನ್ನ ಕುಟುಂಬ. ಮೊನ್ನೆ ಹಲ್ಲೆಗೊಳಗಾದವರಲ್ಲಿ ಹೆಚ್ಚಿನವರು ನನಗಿಂತ ಕಿರಿಯರು. ಟೀವಿಗಳವರು. ಕೈಯಲ್ಲಿ ಕೆಮೆರಾ, ಮೈಕು ಹಿಡಿದಿದ್ದರಾದ್ದರಿಂದ, ಅವರೊಂದಿಗೆ ಸುದ್ದಿ ಬಿತ್ತರಿಸಲು ಓ.ಬಿ.ವ್ಯಾನ್‌ ಗಳಿದ್ದವಾದ್ದರಿಂದ ಸುಲಭವಾಗಿ ಅವರೇ ಟಾರ್ಗೆಟ್‌ಗಳಾಗಿದ್ದಾರೆ. ಇದರೊಂದಿಗೆ ಸುಖಾಸುಮ್ಮನೆ ಪೆಟ್ಟು ತಿಂದವರೆಂದರೆ ಪೊಲೀಸರು.

ಒಂದು ಮೂಲದ ಪ್ರಕಾರ ನಡೆದದ್ದು ಇಷ್ಟು.

ಇಬ್ಬರು ವಕೀಲರು ಆಗಷ್ಟೆ ಕೋರ್ಟಿಗೆ ಬಂದು ತಮ್ಮ two wheeleಗಳನ್ನು park ಮಾಡಲೆತ್ನಿಸುತ್ತಿದ್ದಾಗ ಗಾಡಿ ನಿಲ್ಲಿಸುವ ಜಾಗದ ವಿಷಯದಲ್ಲಿ ಜಗಳವಾಡಿಕೊಂಡರು. ಅದು ಯಾವುದೇ ಆಫೀಸಿನಲ್ಲಿ ಸಹೋದ್ಯೋಗಿಗಳ ಮಧ್ಯೆ ಆಗಬಹುದಾಗಿದ್ದಂತಹ ದೈನಂದಿನ ಸಾಮಾನ್ಯ ಘಟನೆ. ಅಲ್ಲೇ ಇದ್ದ ಟೀವಿ ವರದಿಗಾರನೊಬ್ಬ ಜನಾರ್ದನ ರೆಡ್ಡಿಯ ಬರುವಿಕೆಯನ್ನು ಚಿತ್ರೀಕರಿಸಿಕೊಳ್ಳಲು ಬಂದಿದ್ದವನು, ಅದನ್ನು ಬಿಟ್ಟು ಈ ಯುವ ವಕೀಲರಿಬ್ಬರ ಪುಟ್ಟ ಜಗಳವನ್ನು ಚಿತ್ರೀಕರಿಸತೊಡಗಿದ. ಇದರಿಂದ ಕೆರಳಿದ ಅವರು ಖಾಸಗಿಯಾದ ಈ ಘಟನೇನ ಯಾಕೆ shoot ಮಾಡ್ತಿದೀಯ ಅಂದವರೇ ವರದಿಗಾರನ ಮೇಲೆ ರೇಗಿದರು. ಅದು ಸಣ್ಣ ಘರ್ಷಣೆಗೆ ಕಾರಣವಾಯಿತು.

ಕೋರ್ಟ್ ಆರಂಭವಾಗುವ ಹೊತ್ತು. ಹೇಗೆ ಪ್ರೆಸ್ ಕ್ಲಬ್‌ಗೆ ಅಥವಾ ವಿಧಾನ ಸೌಧಕ್ಕೆ ಹೋದರೆ ನಿಮಗೆ ಯಾವ ಪತ್ರಿಕೆಗೂ ವರದಿ ಮಾಡದ (ಅವರನ್ನು ನಾವು Non Reporting Reporters ಅಂತ ತಮಾಷೆ ಮಾಡ್ತೀವಿ), ಯಾವ ಪತ್ರಿಕೆ ಅಥವಾ ಟೀವಿಗೂ ಕೆಲಸ ಮಾಡದ, ಆದರೆ ಪತ್ರಕರ್ತರೆಂದು ಹೇಳಿಕೊಂಡು ಓಡಾಡುವ ಜನ ಇರುತ್ತಾರೋ, ಹಾಗೆಯೇ ಕೋರ್ಟ್ ಆವರಣದಲ್ಲಿ ಇನ್ನೂ ಸ್ಥಿರವಾದ ಪ್ರಾಕ್ಟೀಸ್ ಇಲ್ಲದ, ವಕೀಲಿಕೆಯನ್ನು ತುಂಬ ಗಂಭೀರವಾಗಿ ತೆಗೆದುಕೊಳ್ಳದ, ಕೆಲಬಾರಿ ಬೇರ‍್ಯಾವುದೋ ವೃತ್ತಿಯಲ್ಲಿ ತೊಡಗಿದ್ದು ಕೋರ್ಟಿನ ಹಾಜರಾತಿಯನ್ನು ಹಾಬಿಯನ್ನಾಗಿ ಮಾಡಿಕೊಂಡಿರುವ ವಕೀಲರೂ ಇರುತ್ತಾರೆ. ಅವರನ್ನು ವಕೀಲರೇ \'ಚೆಟ್ಟು ಕಿಂದ ಪ್ಲೀಡರು\' (ಮರದ ಕೆಳಗಿನ ಪ್ಲೀಡರು) ಅಥವಾ sunday pleaders ಅಂತೆಲ್ಲ ತಮಾಷೆ ಮಾಡುವುದುಂಟು. ಈ ಗುಂಪಿನಲ್ಲಿ ಅನೇಕರು ಯುವಕರು. ಕೆಲವರಿಗೆ ನಿರ್ದಿಷ್ಟ ಆಫೀಸು ಅಥವಾ ನಿರ್ದಿಷ್ಟ ಸೀನಿಯರ್ ಅಂತಲೂ ಇರುವುದಿಲ್ಲ. ಅವರಲ್ಲಿ ಕೆಲವರು ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿರುವುದೂ ಉಂಟು. ಆಗಷ್ಟೆ ಕಾಲೇಜು ಮುಗಿಸಿ ಕರೀ ಕೋಟು ಧರಿಸಿ ಬಂದಿರುತ್ತಾರಾದ್ದರಿಂದ ಅವರದು ತಕ್ಷಣವೇ ಸಿಟ್ಟಿಗೇಳುವ hot blood.

ವಕೀಲರು ಸಾಮೂಹಿಕವಾಗಿ ಸಿಟ್ಟಿಗೊಳ್ಳುವುದು, ಹಿಂಸಾಚಾರಕ್ಕಿಳಿಯುವುದು ಇದು ಪ್ರಥಮವೇನಲ್ಲ. ಹಿಂದೆ ತಿಕ್ಕಲನಾದ ಸೋಮಶೇಖರ್ ಎಂಬ ಐಪಿಎಸ್ ಅಧಿಕಾರಿಯೊಬ್ಬನಿದ್ದ. ಯಾವುದೋ ಕಾರಣಕ್ಕೆ ವಕೀಲರು ಎಷ್ಟು ಕ್ರುದ್ಧರಾಗಿ ಅವನನ್ನು ಕೋರ್ಟ್ ಆವರಣದಲ್ಲಿ ಬಡಿದರೆಂದರೆ, ಕೆಂಪಯ್ಯ ಪಿಸ್ತೂಲು ಹಿಡಿದು ನುಗ್ಗದಿದ್ದರೆ ಸೋಮಶೇಖರ್‌ನನ್ನು ಅವತ್ತು ವಕೀಲರು ಬರಿಗೈಲೇ ಗುದ್ದಿ ಕೊಂದುಬಿಡುತ್ತಿದ್ದರು. ನೆನಪಿರಲಿ, ಅವತ್ತು ಕೂಡ ಹಾಗೆ ರೊಚ್ಚಿಗೆದ್ದದ್ದು ತುಂಬ ಚಿಕ್ಕ ವಯಸ್ಸಿನ, ಈ ಮೇಲೆ ವಿವರಿಸಿದ ಕೆಟಗರಿಯ ವಕೀಲರೇ ಹೊರತು, ದಿವಂಗತ ದೇವದಾಸ್‌ರಂಥವರಲ್ಲ.

ಇತ್ತೀಚೆಗೆ ವಕೀಲರಿಗೂ-ಪೊಲೀಸರಿಗೂ ಬಹಿರಂಗ ಘರ್ಷಣೆಯಾದದ್ದು ನಿಮಗೆ ನೆನಪಿದೆ. ಒಬ್ಬ ಕಕ್ಷೀದಾರನನ್ನು ಹಿಡಿದುಕೊಂಡು ಹೋದರೆ, ಹಿಂದೆಯೇ ವಕೀಲರು ಠಾಣೆಗೆ ಹೋಗುತ್ತಾರೆ. ಯಾಕೆ ಬಂಧಿಸಿದಿರಿ? ಯಾಕೆ ಹಾಜರು ಪಡಿಸಿಲ್ಲ? ಯಾಕೆ ಹೊಡೆದಿರಿ? ನಮ್ಮೊಂದಿಗೆ ಮಾತನಾಡಲು ಬಿಡಿ. Human rights... ಹಾಳು ಮೂಳು ಅಂತ ವಾದಕ್ಕೆ ಬೀಳುತ್ತಾರೆ. ಪೊಲೀಸರಿಗೆ ಇದು ಕೊಂಚ ಕಿರಿಕಿರಿಯ ಸಂಗತಿಯೇ. ಅದೇನಿದ್ದರೂ ಕೋರ್ಟಿನಲ್ಲಿ ವಾದಿಸಿಕೊಳ್ಳಲಿ. ಠಾಣೆಗೆ ಬರುವುದೇಕೆ? ಎಷ್ಟೋ ಸಲ ಶುದ್ಧ ಪಾತಕಿಗಳನ್ನು ಹಿಡಿದು ತಂದಾಗಲೂ ಇವರು ಅವನ ಹಿಂದೆಯೇ ಬಂದು ದಂಡಿಸಲಿಕ್ಕೆ, ಕಳುವು ಮಾಡಿದ ವಸ್ತು recover ಮಾಡಲಿಕ್ಕೆ ಅವಕಾಶ ಮಾಡದೆ ಬಚಾವು ಮಾಡಿಬಿಡುತ್ತಾರೆ ಎಂದು ವಕೀಲರನ್ನು ದೂರುತ್ತಾರೆ. ಆದರೆ, ಪೊಲೀಸರಿಗೆ ನಾವು ಹೋಗುವುದರಿಂದ ಲಂಚ ತಿನ್ನುವ ಅವಕಾಶ ಸಿಗೋದಿಲ್ಲ. ಅದಕ್ಕೇ ನಮ್ಮ ಮೇಲೆ ಸಿಟ್ಟು ಎಂಬುದು ವಕೀಲರ ತಿರುಗುತ್ತರ.

ಒಟ್ಟಾರೆಯಾಗಿ ಇದರ ಫಲಿತಾಂಶವೇನಾಗಿದೆಯೆಂದರೆ, ವಕೀಲರಿಗೂ-ಪೊಲೀಸರಿಗೂ ಮಧ್ಯೆ ಒಂದು ಅಸೌಖ್ಯ ಬೆಂಗಳೂರೊಂದೇ ಅಲ್ಲ, ಎಲ್ಲ ಕಡೆಗೂ ಬೆಳೆದಿದೆ. ಇದು ವೃತ್ತಿ ಸಹಜ ತಿಕ್ಕಾಟ. ಇದೇ ತಿಕ್ಕಾಟ ಪೊಲೀಸ್ ಮತ್ತು ಪತ್ರಕರ್ತರ ನಡುವೆಯೂ ಉಂಟು. ಈ ಹಿಂದೆ ನಾರಾಯಣ್ ಎಂಬ ಪುಣ್ಯಾತ್ಮ ಬೆಳಗಾವಿ ಎಸ್ಪಿ ಆಗಿದ್ದಾಗ ಒಂದು ಸಭೆಗೆ ಪತ್ರಕರ್ತರು ಹೋದಾಗ ಅವರಿಗೆಲ್ಲ ವಿಶೇಷವಾದ badge ಹಾಕಿಕೊಳ್ಳಲು ಕೊಟ್ಟು, ಸಭೆಯಲ್ಲಿ ಗಲಾಟೆಯಾದ ಕೂಡಲೆ badge ಹಾಕಿಕೊಂಡವರನ್ನೇ ಗುರಿಯಿಟ್ಟು ಓಡಾಡಿಸಿ ಬಡಿಯುವಂತೆ ತನ್ನ ಸಿಬ್ಬಂದಿಗೆ ಸೂಚಿಸಿದ್ದ. ಆತನೇ ಗುಲಬರ್ಗಾದ ಪತ್ರಕರ್ತ ಸಿದ್ಧರಾಮೇಶ್ ಮತ್ತು ಕೇರಳದ ವಕೀಲ ರಶೀದ್‌ನನ್ನು ಕೊಂದದ್ದು.

ಇರಲಿ, ವಕೀಲ-ಪೊಲೀಸ್ ಅಸೌಖ್ಯದಿಂದಾಗಿ ಇತ್ತೀಚೆಗೆ ಆದ ಘಟನೆ ಕೊಂಚ ವಿಕೋಪಕ್ಕೂ ಹೋಗಿ ಸಾರ್ವಜನಿಕ ಜೀವನ ಅಸ್ತವ್ಯಸ್ತವಾಯಿತು. ಅದಕ್ಕೆ ವಕೀಲರೇ ಮುಖ್ಯವಾಗಿ ಕಾರಣರಾದರು ಎಂಬಂತೆ ಮಾಧ್ಯಮಗಳಲ್ಲಿ ಬಿಂಬಿಸಲಾಯಿತು. ಈ ವಿಷಯವೂ ಮೊನ್ನೆ ಕಂಪೋಂಡಿನಲ್ಲಿದ್ದ ಯುವ ವಕೀಲರಲ್ಲಿತ್ತು. ಇಬ್ಬರು ವಕೀಲರ ಪಾರ್ಕಿಂಗ್ ಗಲಾಟೆಯ ಕವರೇಜ್‌ನ ನೆಪದಲ್ಲಿ ಶುರುವಾದ ಗಲಭೆ ಹೇಗೆ ಹರಡಿತೆಂದರೆ ಇದ್ದ ಬದ್ದ ಕರೀಕೋಟಿನ ಯುವಕರೆಲ್ಲ ಒಂದಾದರು. ಶುದ್ಧ mob mentality. ಯಾರ ಕೈಲಿ ಕೆಮೆರಾ ಇತ್ತೋ, ಅವರನ್ನು ಬಡಿದರು. ಓ.ಬಿ ವ್ಯಾನುಗಳನ್ನು ಪುಡಿಗುಟ್ಟಿದರು.

ಜ್ಯೋತಿ ಪ್ರಕಾಶ್ ಮಿರ್ಜಿ ಅದೆಲ್ಲಿ ಮಿರ್ಚಿ ತಿನ್ನುತ್ತ ಕೂತಿದ್ದರೋ ಗೊತ್ತಿಲ್ಲ. ಅವರ ಜಾಗದಲ್ಲಿ ಶಂಕರ ಬಿದರಿಯಂಥವರಿದ್ದಿದ್ದರೆ ಆ ಕಥೆ ಬೇರೆಯೇ ಆಗುತ್ತಿತ್ತು. ಆ ಪರಿ ಹಲ್ಲೆಗಳಾಗುತ್ತಿದ್ದರೂ ಕೋರ್ಟಿನಲ್ಲಿದ್ದ ಬಹುತೇಕ DAR ಪೊಲೀಸರು ನಿರ್ದೇಶನವಿಲ್ಲದೆ ತೆಪ್ಪಗೆ ನಿಂತಿದ್ದರು. ಅವರ ನಿಷ್ಕ್ರಿಯತೆ ಕಂಡ ಕೆಲ ವಕೀಲರು ನೇರವಾಗಿ ಮೇಜು ಕುರ್ಚಿ ಎತ್ತಿಕೊಂಡು ಬಂದು ಪೊಲೀಸರ ನೆತ್ತಿಯ ಮೇಲಕ್ಕೆ ಹಾಕಿಬಿಟ್ಟರು.

ಇಲ್ಲಿ ಐಡೆಂಟಿಫೈ ಆದವರು ಮೂರು ತರಹದ ಜನ. ಮೊದಲನೆಯವರು ವಕೀಲರು. ಅವರು ಕರೀ ಕೋರ್ಟು ಧರಿಸಿದ್ದರು. ಕೈಯಲ್ಲಿ ಕಲ್ಲು. ಎರಡನೆಯವರು ಮೀಡಿಯಾದವರು. ಕೈಯಲ್ಲಿ ಕೆಮೆರಾ. ತಿನ್ನುತ್ತಿದ್ದುದು ಒದೆ. ಮೂರನೆಯವರು ಪೊಲೀಸರು. ಶುದ್ಧ ಯೂನಿಫಾರ್ಮ್, ಹಣೆ ತುಂಬ ರಕ್ತ. ಇಷ್ಟಾಗಿ ವಕೀಲರಿಗೂ ಒದೆ ಬೀಳಲಿಲ್ಲವಾ? ಬಿದ್ದವು. ಆದರೆ ಅದನ್ನು ಟೀವಿಗಳಲ್ಲಿ ತೋರಿಸಲಿಲ್ಲ. ಪತ್ರಿಕೆಗಳೂ ಪ್ರಕಟಿಸಲಿಲ್ಲ. ಏಟು ಬಿದ್ದುದು ನಮ್ಮ fraternityಯವರಿಗಾದ್ದರಿಂದ ಸಹಜವಾಗಿಯೇ ನಾವೆಲ್ಲ ವಕೀಲರ ವಿರುದ್ಧವೇ ನಿಂತೆವು.

ಆಯ್ತು, ಘಟನೆ ನಡೆದು ಹೋಗಿದೆ. ಇದು ತೆಪ್ಪಗೆ ಕೂತು ಯೋಚಿಸುವ ಸಮಯ. ವಕೀಲರು ಮತ್ತು ನಾವು ಒಟ್ಟೊಟ್ಟಿಗೇ ಕೆಲಸ ಮಾಡಲೇ ಬೇಕಾಗುತ್ತದೆ. ಕೇವಲ ಜನಾರ್ದನ ರೆಡ್ಡಿಯಂಥವರು ಬಂದಾಗ ಅಲ್ಲ, ಪ್ರತಿ ನಿತ್ಯದ ಕಲಾಪಗಳ coverageಗೆ, ನಮ್ಮವೇ ದಾವೆಗಳಿಗೆ, ಕೆಲ ಬಾರಿ ಹಳೇ ಪ್ರಕರಣಗಳ ಅಧ್ಯಯನಕ್ಕೆ, ವಕೀಲರ ಅಭಿಪ್ರಾಯ ಸಂಗ್ರಹಣೆಗೆ, ಸಲಹೆ ಅಭಿಪ್ರಾಯಗಳಿಗೆ ಅಲ್ಲಿಗೆ ಹೋಗಬೇಕಾಗುತ್ತದೆ. ಅಂತೆಯೇ ಅವರೂ ನೂರು ಬಾರಿ ಪತ್ರಿಕಾಲಯಗಳಿಗೆ ಬರುತ್ತಿರುತ್ತಾರೆ. ನಮ್ಮ ಕೇಸುಗಳನ್ನು ಪ್ರತಿನಿಧಿಸಿ ನಮ್ಮ ಪರವಾಗಿ ಬಡಿದಾಡುತ್ತಿರುತ್ತಾರೆ. ಜಾಮೀನು ಕೊಡಿಸುತ್ತಾರೆ. ಸಾರ್ವಜನಿಕ ವೇದಿಕೆ ಹಂಚಿಕೊಳ್ಳುತ್ತಾರೆ. ಅವರಲ್ಲೇ ಕೆಲವರು ಪತ್ರಕರ್ತರೂ ಆಗಿದ್ದಾರೆ.

ನೀವು ಸುದ್ದಿಗಾಗಿ ನಮ್ಮ ಕಂಪೋಂಡಿನೊಳಕ್ಕೆ ಬರಕೂಡದು ಅಂತ ಹಟ ಹಿಡಿದರೆ, ನಿಮ್ಮ ಪರವಾಗಿ ನಾವು ವಕಾಲತ್ತು ಹಾಕೋದಿಲ್ಲ ಎಂದು ಮೊಂಡುತನಕ್ಕೆ ಬಿದ್ದರೆ ಅದು un democratic ಆದೀತು. \'ಕೋರ್ಟ್ ಕಲಾಪಗಳನ್ನೇ ನಾವು ಪ್ರಕಟಿಸುವುದಿಲ್ಲ\' ಎಂದು ಪತ್ರಿಕೆ-ಟೀವಿಗಳು ನಿಲುವು ತಳೆದರೆ ಅದೂ ಅನಾಗರಿಕ ನಿಲುವಾದೀತು.

ನಿಜಕ್ಕೂ ನಮ್ಮ ಎರಡೂ ಸಮೂಹಗಳು ಸಮಾಜದ ಸ್ವಾಸ್ಥ್ಯ ಕಾಪಾಡುವ, ನ್ಯಾಯ ದೊರಕಿಸಿಕೊಡುವ, ಒಂದೇ ಹೋರಾಟವನ್ನು ಎರಡು ಬಗೆಯಲ್ಲಿ ಮಾಡುವ, ಅದರಿಂದಾಗಿಯೇ ಅನ್ನ ಹುಟ್ಟಿಸಿಕೊಳ್ಳುವ ಮತ್ತು ಗೌರವ ಪಡೆದಿರುವ ಸಮೂಹಗಳು. ಉಳಿದೆಲ್ಲರಿಗಿಂತ ಹೆಚ್ಚಿನ ಗೌರವ ಒಬ್ಬ ವಕೀಲನಿಗೆ, ಒಬ್ಬ ಪತ್ರಕರ್ತನಿಗೆ ನಾವು ಕೈಗೆತ್ತಿಕೊಂಡಿರುವ ವೃತ್ತಿಗಳಿಂದಾಗಿಯೇ ಇವೆ. ಅದು ಬಿಟ್ಟು ನಾವೇ ಕಿತ್ತಾಡಿಕೊಂಡರೆ ಪರಸ್ಪರ ಮೆರವಣಿಗೆ, ಜಾಥಾ, ಬಹಿಷ್ಕಾರ ರೂಪಿಸುತ್ತಾ ಕೂತರೆ ಅದು ಇಬ್ಬರನ್ನೂ ನಗೆಪಾಟಲಿಗೀಡು ಮಾಡೀತು.

ಸಾಮಾನ್ಯವಾಗಿ, ಪತ್ರಕರ್ತರ ಸಮೂಹ ಚಿಕ್ಕದು. ಒಂದು ಘಟನೆ cover ಮಾಡಲಿಕ್ಕೆ ಮೂವತ್ತು ಜನ ಹೋದೇವು. ಆದರೆ ವಕೀಲರು ನೂರಾರು ಜನ ಇರುತ್ತಾರೆ. ಪೊಲೀಸ್ ಕಾವಲಿನಲ್ಲೂ ಕೆಲಸ ಮಾಡಲಿಕ್ಕೆ ಇದು ಎಮರ್ಜೆನ್ಸಿಯಲ್ಲ, ಮಿಲಿಟರಿ ಸರ್ಕಾರವಲ್ಲ ಮತ್ತು ರೌಡಿ ರಾಜ್ಯವೂ ಅಲ್ಲ. ನ್ಯಾಯಮೂರ್ತಿ ಶ್ರೀಧರರಾಯರು ಸೂಚಿಸಿರುವ ಸೂತ್ರಗಳು ತುಂಬ practical ಆಗಿವೆ. ದೃಶ್ಯದ coverageಗೆ ಬರುವ ಪತ್ರಕರ್ತರಿಗೆ ಪ್ರತ್ಯೇಕ ಜಾಗ ಅಂತ ರೂಪಿಸುವ ಅವಶ್ಯಕತೆ ಖಂಡಿತ ಇದೆ. ಕೋರ್ಟುಗಳೆದುರಿಗಿನ ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸದೆ ಹೋದರೆ ನ್ಯಾಯಾಲಯಗಳಿಗೇ ದಂಡ ಹಾಕುವ ಕಾಲ ಬಂದೀತು. ಅದರ ಜೊತೆಗೆ, ಸನ್ನದು ಪಡೆದು ಪ್ರಾಕ್ಟೀಸ್ ಆರಂಭಿಸುವ ವಕೀಲರಿಗೂ, ನೌಕರಿ ಪಡೆದು ವರದಿಗಾರಿಕೆ ಪ್ರಾರಂಭಿಸುವ ಪತ್ರಕರ್ತರಿಗೂ ಕೆಲವು minimum ನಿಯಮಗಳನ್ನ, ಸರಿ-ತಪ್ಪುಗಳನ್ನ ವಿಷದಪಡಿಸುವ ಹೊಣೆ ಎರಡೂ ರಂಗಗಳ ಹಿರಿಯರಿಗಿದೆ.

ಇಸ್ರೇಲ್ ಮತ್ತು ಪಾಲಸ್ತೀನದಂಥ ದೇಶದಲ್ಲಿ ಎರಡು ರಾಷ್ಟ್ರಗಳ ಪ್ರಮುಖರ ಭೇಟಿ ನಡೆದರೆ ಮೊದಲು ಕೆಮೆರಾದವರನ್ನಷ್ಟೆ ಬಿಡುತ್ತಾರೆ. ಎರಡೇ ನಿಮಿಷ. ಸಾಂಕೇತಿಕವಾಗಿ ಕೈ ಕುಲುಕುವ ದೃಶ್ಯ ಚಿತ್ರಿಸಿಕೊಂಡ ತಕ್ಷಣ ಅವರ ಅರೆ ಕ್ಷಣವೂ ನಿಲ್ಲದಂತೆ ಅಲ್ಲಿಂದ ಹೊರಟು ಬಿಡಬೇಕು. ಆನಂತರ ಮತ್ತೊಂದೆಡೆ ಅಗತ್ಯಬಿದ್ದರೆ ಬ್ರೀಫಿಂಗ್ ನಡೆಯುತ್ತದೆ. ಇಂಥ ಕ್ರಮಗಳು ಜಾರಿಗೆ ಬಂದರೆ ಗಲಭೆ, ಘರ್ಷಣೆ, ನೂಕು ನುಗ್ಗಲು ಆಗುವುದೇ ಇಲ್ಲ. ನಮ್ಮಲ್ಲಿ ಗಮನಿಸಿ ನೋಡಿ, ಒಂದು ಸಭೆಯಲ್ಲಿ ಅಥವಾ ಪತ್ರಿಕಾ ಗೋಷ್ಠಿಯಲ್ಲಿ ಸುಮಾರು ಹತ್ತು ಫೊಟೋಗ್ರಾಫರುಗಳು ಒಬ್ಬೇ ವ್ಯಕ್ತಿಯ ಅಂದಾಜು ನೂರು ಫೊಟೋ ಮೊದಲಿಂದ ಕೊನೇತನಕ ತೆಗೆಯುತ್ತಲೇ ಇರುತ್ತಾರೆ. ಪತ್ರಿಕಾ ಗೋಷ್ಠಿಯ ಯಾವ ಚಿತ್ರವೂ ಯಾವ ಪತ್ರಿಕೆಯಲ್ಲೂ ಪ್ರಕಟವಾಗುವುದಿಲ್ಲ. ಹಾಗಾದರೆ ಏಕೆ ತೆಗೆಯುತ್ತಾರೆ?

ಅಂತೆಯೇ ಕೊಂಚ ಸೆನ್ಸೇಷನಲ್ ಕೇಸಿನ ವಿಚಾರಣೆ ಇದೆಯೆನ್ನಿಸಿದರೂ ವಿನಾಕಾರಣ ಕೇಸಿಗೆ ಸಂಬಂಧವೇ ಇಲ್ಲದ ವಕೀಲರು ಹಿಂಡುಗಟ್ಟಲೆ ಕೋಣೆಯಲ್ಲಿ ತುಂಬಿಕೊಂಡು ಬಿಡುತ್ತಾರೆ. ಬೇಕಾ? ಅನೇಕ ಅರಬ್ ದೇಶಗಳಲ್ಲಿ ಕೋರ್ಟ್‌ನ ಪ್ರವೇಶ ದ್ವಾರದಲ್ಲೇ ಕೇಳಲಾಗುತ್ತದೆ: ಱಇವತ್ತು ನಿಮ್ಮ ಕೇಸ್ ಇದೆಯಾ? ಅದರ ನಂಬರ್ ಏನು? ಕಂಪ್ಯೂಟರ್‌ನಲ್ಲಿ ಪರಿಶೀಲಿಸಿ ಕೇಸ್ ಇದ್ದರೆ ಮಾತ್ರ ಒಳ ಬಿಡುತ್ತಾರೆ.

ಹಾಗೆ ಮಾಡಿ ನೋಡಲಿ.

ಉಹುಂ, ನಾವು ಅಷ್ಟೆಲ್ಲ ಬೇಗ ಬದಲಾವಣೆಗಳನ್ನು ಒಪ್ಪುವುದಿಲ್ಲ.

-ರವಿ ಬೆಳಗೆರೆ

Read Archieves of 13 March, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books