Ravi Belagere
Welcome to my website
ಬಹಳ ದಿನಗಳ ನಂತರ ಈ ತರಹದ್ದೊಂದು mega function ಏರ್ಪಡಿಸಿದ್ದೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ನೀವೆಲ್ಲ ಬಂದಿರಿ. ನನ್ನ ಬರವಣಿಗೆ, ತಿರುಗಾಟ, ಮುದ್ರಣ, ಬಣ್ಣ, ಈ ಸಿಂಗಾರ-ಬಂಗಾರ- ಇವೆಲ್ಲವೂ ನಿಮಗಾಗಿಯೇ ಅಲ್ಲವೆ? ಎಲ್ಲಿಯ ರಾಯಚೂರು, ಕೊಪ್ಪಳ, ಯಾದಗಿರಿ, ಗುಲಬರ್ಗ, ಚಿಂಚನ ಸೂರು, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ಮಂಗಳೂರು-ಎಲ್ಲೆಲ್ಲಿಂದ ಬಂದಿದ್ದರು ಓದುಗರು!. ಪ್ರತಿಯೊಬ್ಬರ ಕೈಲೂ ‘ಹಿಮಾಗ್ನಿ’. ಪ್ರತಿಯೊಬ್ಬರ ಕೈಲೂ ‘ಉಡುಗೊರೆ’, ‘ಅಮ್ಮ ಸಿಕ್ಕಿದ್ಲು’ ಮತ್ತು ಸಿಡಿಗಳು.
Home About Us Gallery Books Feedback Prarthana Contact Us

ಎಲ್ಲ ಸಾಹಸ ಮಾಡಿ ಎಲ್ಲದರಲ್ಲೂ ಗೆದ್ದು ಕೊನೆಗೆ ಒಬ್ಬ ಶುದ್ಧ ಮಗನಾಗಿ ಉಳಿದು...

ಅವರನ್ನು ಅಣ್ಣ ಅನ್ನಲಾ?

ಯಜಮಾನ ಅನ್ನಲಾ? ಒಂದು ಕಾಲದ ಅನ್ನದಾತ ಅನ್ನಲಾ? ಹಿರಿಯ ಮಿತ್ರ ಹಿತೈಷಿ ಅನ್ನಲಾ? ನೆರಳು ಕೊಟ್ಟವರು ಅನ್ನಲಾ? ಗೊತ್ತಿಲ್ಲ. ‘ಅಭಿಮಾನಿ’ ಪ್ರಕಾಶನದ ಟಿ.ವೆಂಕಟೇಶ್, ಒಂದರ್ಥದಲ್ಲಿ ಕನ್ನಡ ಪತ್ರಿಕೋದ್ಯಮದ ಭಯಂಕರ ಹಟಮಾರಿ ಕನಸುಗಾರ. ಅಭಿಮಾನಿ, ಅರಗಿಣಿ, ತಾಯಿ, ಪೊಲೀಸ್ ಫೈಲ್, ಅಭಿಮಾನ, ಈ ಸಂಜೆ-ಹೀಗೆ ಸಾಲು ಸಾಲು ಪತ್ರಿಕೆ ಹುಟ್ಟು ಹಾಕಿದ, ನೂರಾರು ಪತ್ರಿಕೋದ್ಯಮಿಗಳಿಗೆ-ಅದರಲ್ಲೂ ವಡ್ಡರ್ಸೆ ರಘುರಾಮ ಶೆಟ್ಟರು, ಕೆ.ಎಸ್.ನಾರಾಯಣ ಸ್ವಾಮಿ ಮುಂತಾದ ಹಿರಿಯರಿಗೆ ಆಶ್ರಯ, ನೌಕರಿ, ಅದಕ್ಕಿಂತ ಹೆಚ್ಚಾಗಿ ಸ್ನೇಹ ಕೊಟ್ಟವರು.

“ರೀ, ಅವ್ರು ಕಥೆ ಬರೆಯೋರಲ್ವಾ? ಒಳ್ಳೆ ಜರ್ನಲಿಸ್ಟು. ಯಾಕ್ರೀ ಆಫೀಸೆದುರಿಗೆ ನಿಲ್ಸಿದೀರಿ? ಕರೀರಿ ಒಳಕ್ಕೆ. ಅವರಿಗೊಂದು ಕೆಲ್ಸ ಕೊಡ್ರೀ. ನಾವು ತಿನ್ನೋ ರೊಟ್ಟೀಲಿ ಅವರರ್ಧ ತಿಂದ್ರೆ ಏನು ಗಂಟು ಹೋಗಬೇಕು? ಕರೀರಿ ಕರೀರಿ" ಎಂದು ಅಬ್ಬೇಪಾರಿಯಂತೆ ರಾಜಾಜಿನಗರದ 80 ಅಡಿ ರಸ್ತೆಯ ಹಳೇ ಅಭಿಮಾನಿ ಆಫೀಸಿನ ಫುಟ್‌ಪಾತಿನ ಮೇಲೆ ನಿಂತಿದ್ದ ನನ್ನನ್ನು ಕರೆದು ನೌಕರಿ ಕೊಟ್ಟವರು ಟಿ.ವೆಂಕಟೇಶ್. ಅಲ್ಲಿಗೆ ನಮ್ಮ ಸ್ನೇಹ ನಿಲ್ಲಲಿಲ್ಲ. ಅವರು ಅದೇಕೋ ನನ್ನೊಂದಿಗೆ ಎಂದಿಗೂ ಮಾಲೀಕನಂತೆ ನಡೆದುಕೊಳ್ಳಲಿಲ್ಲ. ಅವರ ತಾಯಿ ಪ್ರತೀ ಮಧ್ಯಾಹ್ನ ಐದು ಡಬ್ಬಿಯ ಸ್ಟೀಲಿನ ಕ್ಯಾರಿಯರ್ ಕಳಿಸುತ್ತಿದ್ದರು. ಸ್ವತಃ ವೆಂಕಟೇಶ್ ಅವರ ತಮ್ಮಂದಿರೇ ಅಭಿಮಾನಿ ಪ್ರೆಸ್‌ನಲ್ಲಿ ಇರುತ್ತಿದ್ದರೂ ವೆಂಕಟೇಶ್ ನೆಲದ ಮೇಲೆ ಚಾಪೆ ಹಾಸಿ, ಪದ್ಮಾಸನ ಹಾಕಿಕೊಂಡು ಕುಳಿತು, ಎದುರಿಗೆ ಇನ್ನೊಂದು ತಟ್ಟೆ ಇಟ್ಟು, “ರವಿ ಬೆಳಗೆರೇನ ಕರೀರೀ ಊಟಕ್ಕೆ" ಅನ್ನುತ್ತಿದ್ದರು.

ರಾತ್ರಿ ತುಂಬ ತಡವಾಗಿ ಕೆಲಸ ಮಾಡುವುದು ನನ್ನ ಸಂಪ್ರದಾಯ, ವಾಡಿಕೆ.

“ಇದೇನ್ರೀ ಈ ಮನುಷ್ಯ ದೆವ್ವ ಹಿಡಿದೋರ ಹಂಗೆ ಕೆಲ್ಸ ಮಾಡ್ತಾನೆ" ಅನ್ನುತ್ತಿದ್ದರು. ತೀರಾ ದಣಿದಿದ್ದೇನೆ ಅನ್ನಿಸಿದಾಗ ಕಿಸೆಯಲ್ಲಿದ್ದಷ್ಟು ಪುಡಿಕೆ ಹಣ ತೆಗೆದುಕೊಟ್ಟು, “ಗೊತ್ತು ಹೋಗಿ, tired ಆಗಿದೀರ. ಪಕ್ಕದಲ್ಲೇ shivas bar ಇದೆ" ಅಂತ ನಗುತ್ತಿದ್ದರು.

ಟಿ.ವೆಂಕಟೇಶ್ ಅವರಿಗೆ ಕುಮಾರಸ್ವಾಮಿ ತುಂಬ ಆತ್ಮೀಯರು. ‘ಕಾಮರಾಜ ಮಾರ್ಗ’ ಕಾದಂಬರಿಯಲ್ಲಿ ವೆಂಕಟೇಶ್ ಅವರಿಗೆ ಚನ್ನಕೇಶವಣ್ಣ ಅಂತ ಒಂದು ಹೆಸರು ಕೊಟ್ಟು ಒಂದು negative ಅಲ್ಲದ ಪಾತ್ರವನ್ನೂ ಕೊಟ್ಟಿದ್ದೆ. ಆ ಬಗ್ಗೆ ಅವರು ಇವತ್ತಿಗೂ ನನ್ನೊಂದಿಗೆ ಚರ್ಚಿಸಿಲ್ಲ. ಕುಮಾರಸ್ವಾಮಿಗೆ ಆತ್ಮೀಯರು ಎಂಬ ಕಾರಣಕ್ಕೆ ಟಿ.ವೆಂಕಟೇಶ್ ಸದಾ ವಕ್ಕಲಿಗ ಗುಂಪು ಕಟ್ಟಿಕೊಂಡು ಕುಳಿತವರಲ್ಲ. ಮೈಸೂರಿನ ಪ್ರಾಜ್ಞ, ಸಾಹಸಿ ಪತ್ರಕರ್ತರಾದ ರಾಜಶೇಖರ ಕೋಟಿ, ವೆಂಕಟೇಶರಿಗೆ ಪರಮಾಪ್ತರು. ‘ಪೊಲೀಸ್ ನ್ಯೂಸ್’ನ ಮಲ್ಲಿಕಾರ್ಜುನಯ್ಯ ಆಪ್ತರಾಗಿದ್ದವರು. ನನಗೆ ಯಾವಾಗ ಫೋನು ಮಾಡಿದರೂ “ನೀವೊಬ್ಬ ಸಾಹಸಿ ಕಣ್ರೀ" ಅಂತಲೇ ಅನ್ನುತ್ತಾರೆ.

ಆದರೆ ನಿಜವಾದ ಸಾಹಸಿ ಟಿ.ವೆಂಕಟೇಶ್. ಕೇವಲ ಒಬ್ಬ ರೈತರ ಮಗನಾಗಿ, ನಟ ರಾಜ್ ಅವರ ಅಭಿಮಾನಿಯಾಗಿ ಬೆಳಕಿಗೆ ಬಂದು, ಏನೂ ಇಲ್ಲದ ಕಾಲದಲ್ಲಿ ‘ಅಭಿಮಾನಿ’ ಪತ್ರಿಕೆ ಮಾಡಿ, ಆನಂತರ ಸರಣಿ ಪತ್ರಿಕೆಗಳನ್ನು ಮಾಡಿ, ಅದೇ ೮೦ ಅಡಿ ರಸ್ತೆಯಲ್ಲಿ ಸ್ವಂತ ಕಟ್ಟಡ ಕಟ್ಟಿಸಿ, ಅದ್ಭುತವಾದ ಹೊಟೇಲು ಮಾಡಿ, ಮುದ್ರಣ ವಿಭಾಗದಲ್ಲಿ expertise ಸಾಸಿ, ತಮ್ಮಂದಿರನ್ನ-ಮಕ್ಕಳನ್ನ ದುಡಿಮೆಗೆ ಹಚ್ಚಿ, ಅಪರೂಪದ ಸಾಂಸ್ಕೃತಿಕ ‘ಸಿ.ಡಿ.’ಗಳನ್ನು ಮಾಡಿ, ಶಾಲಾ ನೋಟ್‌ಬುಕ್‌ಗಳನ್ನು ಮಾಡಿ, ಇದೆಲ್ಲಕ್ಕೂ ಸಂಬಂಧವೇ ಇಲ್ಲದಂತೆ ಕಾಂಕ್ರೀಟ್ ಬ್ಲಾಕ್‌ಗಳದೊಂದು unit ಮಾಡಿ ಪ್ರತಿಯೊಂದರಲ್ಲೂ ಗೆಲುವು ಸಾಧಿಸಿದ್ದಾರೆ. ಇದೆಲ್ಲಕ್ಕಿಂತ ದೊಡ್ಡದು, ಅವರು ಇಡೀ ಕುಟುಂಬವನ್ನು ಜೇನುಗೂಡಿನಂತೆ ಹಿಡಿದಿಟ್ಟಿರುವ ರೀತಿ. ಒಬ್ಬ ಮಗ ತಾಯಿಯನ್ನು ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ನೀವು ಅವರಿಂದಲೇ ಕಲಿಯಬೇಕು.

ಹೀಗೆ ಕನ್ನಡಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿದ ಟಿ.ವೆಂಕಟೇಶ್ ಮುದ್ರಣ ಯಂತ್ರಗಳಿಗೆ ಸಂಬಂಸಿದಂತೆ ಜಪಾನ್-ಜರ್ಮನಿ ಅಂತ ಅನೇಕ ದೇಶಗಳನ್ನು, ಅನೇಕ ಸಲ ಸುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಮಗನ ಮದುವೆಗೆ ಕರೆಯಲು ಬಂದಾಗ ಯಾಕೋ ವಿಪರೀತ ಯೋಗ-ಆಧ್ಯಾತ್ಮ ಅಂತ ರಿಲಿಜಿಯಸ್ ಆಗಿ ಮಾತನಾಡಿದರು. ಯಜಮಾನರಲ್ಲವೆ ಎಷ್ಟಾದರೂ?

“ನಾವಿನ್ನೂ ಯೋಗ-ಪಾಗ ಅಂತ ಮಾತಾಡಲಿಕ್ಕೆ ಟೈಮಿದೆ" ಎಂದು ನಕ್ಕೆ.

ಈಗ ನೋಡಿ, ಅವರ ‘ಈ ಸಂಜೆ’ ಪತ್ರಿಕೆ 20 ವರ್ಷದ ಪ್ರಕಟಣೆ ಮುಗಿಸಿ 21ನೇ ವರ್ಷಕ್ಕೆ ಕಾಲಿಟ್ಟಿದೆ. ಸಿನೆಮಾ ಪತ್ರಿಕೆಯಾದ ‘ಅರಗಿಣಿ’ಯ ಚಿಲಿಪಿಲಿ 26 ವರ್ಷಗಳಿಂದ ಕೇಳಿಸುತ್ತಲೇ ಇದೆ. ಶುಭ್ರ ಶ್ವೇತ ವಸ್ತ್ರಧಾರಿಯಾದ ವೆಂಕಟೇಶ್‌ಗೆ ಎಷ್ಟು ವರ್ಷ?

ಮೂವತ್ತೈದನ್ನು ಅವರು ದಾಟಲೇ ಇಲ್ಲವೇನೋ ಎಂಬಷ್ಟು ಸಧೃಡರಾಗಿದ್ದಾರೆ.

ಅವರಿಗೆ ಹೃತ್ಪೂರ್ವಕವಾಗಿ ಶುಭ ಹಾರೈಸುತ್ತೇನೆ.

-ರವಿ ಬೆಳಗೆರೆ

Read Archieves of 23 February, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books