Ravi Belagere
Welcome to my website
ಬಹಳ ದಿನಗಳ ನಂತರ ಈ ತರಹದ್ದೊಂದು mega function ಏರ್ಪಡಿಸಿದ್ದೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ನೀವೆಲ್ಲ ಬಂದಿರಿ. ನನ್ನ ಬರವಣಿಗೆ, ತಿರುಗಾಟ, ಮುದ್ರಣ, ಬಣ್ಣ, ಈ ಸಿಂಗಾರ-ಬಂಗಾರ- ಇವೆಲ್ಲವೂ ನಿಮಗಾಗಿಯೇ ಅಲ್ಲವೆ? ಎಲ್ಲಿಯ ರಾಯಚೂರು, ಕೊಪ್ಪಳ, ಯಾದಗಿರಿ, ಗುಲಬರ್ಗ, ಚಿಂಚನ ಸೂರು, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ಮಂಗಳೂರು-ಎಲ್ಲೆಲ್ಲಿಂದ ಬಂದಿದ್ದರು ಓದುಗರು!. ಪ್ರತಿಯೊಬ್ಬರ ಕೈಲೂ ‘ಹಿಮಾಗ್ನಿ’. ಪ್ರತಿಯೊಬ್ಬರ ಕೈಲೂ ‘ಉಡುಗೊರೆ’, ‘ಅಮ್ಮ ಸಿಕ್ಕಿದ್ಲು’ ಮತ್ತು ಸಿಡಿಗಳು.
Home About Us Gallery Books Feedback Prarthana Contact Us

ಪುಟ್ಟೂ, ಬಾಗಿಲು ಹಾಕ್ಕೊಂಡು ಬಾ ಅಂತ ಕನ್ನಡದಲ್ಲಿ ಹೇಳಬೇಡಿ!

‘Option please?’

ಈ ಪ್ರಶ್ನೆ ಕಿವಿಗೆ ಬಿದ್ದು ಎಂಟು ಹತ್ತು ವರ್ಷಗಳಾಗಿರಬಹುದೇನೋ? ಪರೀಕ್ಷೆಯಲ್ಲಿ ಒಂದು ಪ್ರಶ್ನೆ ಕೇಳಿ ಅದಕ್ಕೆa b c d ಅಂತ ನಾಲ್ಕು ಉತ್ತರ ತಾವೇ ಕೊಟ್ಟು, ಇದರ ಪೈಕಿ ಯಾವ ಉತ್ತರ ಸರಿ ಎಂದು ಕೇಳುವ ಸಂಪ್ರದಾಯ ನಾನು ಎಲಿಮೆಂಟರಿ ಓದುವಾಗ ಇರಲಿಲ್ಲ. ಟೀವಿ ಕಾರ್ಯಕ್ರಮದಲ್ಲಿ ಇದೇ ಸಂಪ್ರದಾಯ ಬಂದು ಉತ್ತರಗಳ option ಇಟ್ಟು, ಅದಕ್ಕೆ ನೀವು ಯಾರಿಗೋ ಫೋನ್ ಮಾಡಿ ನೆರವೂ ಪಡೆಯಬಹುದೆಂದು ಹೇಳಿ, ‘ಲಾಕ್ ಕರ್ ದಿಯಾ ಜಾಯ್?’ ಎಂದು ಕೇಳಿ ಸರಿಯುತ್ತರಕ್ಕೆ ಲಕ್ಷ ಲಕ್ಷ, ಕೋಟಿ ಕೋಟಿ ಬಹುಮಾನ ಘೋಷಿಸುವುದಂತೂ ಗೊತ್ತೇ ಇರಲಿಲ್ಲ. ಈಗೀಗ ರೇಡಿಯೋಗಳಲ್ಲೂ ಈ ಜಾಡು-ಜಾಡ್ಯ ಆರಂಭವಾಗಿದೆ.

ನನ್ನ ಪುಣ್ಯವಾ? ಗೊತ್ತಿಲ್ಲ. ನನಗೆ ಜೀವನದಲ್ಲಿ options ಇರಲೇ ಇಲ್ಲ. ಹೀಗಾಗಿ ಏನೆಲ್ಲ ಕಲಿತೆನೋ, ಅದನ್ನೆಲ್ಲ perfect ಆಗಿ ಕಲಿತೆ. ನಿನ್ನೆ ನಾನು ಶಿಕ್ಷಕಿಯೊಬ್ಬರೊಂದಿಗೆ ಮಕ್ಕಳ ಇಂಗ್ಲಿಷ್ ಕಲಿಕೆಯ ಬಗ್ಗೆ ಮಾತನಾಡುತ್ತಿದ್ದೆ.

ಮೂಲತಃ ನಾನೊಬ್ಬ ಇಂಡಿಯನ್, ಭಾರತೀಯ, ನಂತರ ಕನ್ನಡಿಗ. ಕನ್ನಡ ನನ್ನ ಮಾತೃ ಭಾಷೆ. ಮಾತೃ ಭಾಷೆಯಲ್ಲಿ ಮಗು ಏನನ್ನು ಕಲಿಯುತ್ತದೋ ಅದನ್ನು ಚೆನ್ನಾಗಿ ಕಲಿಯುತ್ತದೆ ಎಂಬುದು ನನ್ನ ಸಿದ್ಧಾಂತ. ನಾವೆಲ್ಲ ನಾಲ್ಕನೇ ಕ್ಲಾಸಿನ ತನಕ ಮಾತೃ ಭಾಷೆಯಲ್ಲೇ ಕಲಿತವರು. ನಾಲ್ಕನೇ ಕ್ಲಾಸಿನಲ್ಲೇ ತಾನೆ ನಮಗೆ A B C D ತಿದ್ದಿಸಲಾರಂಭಿಸಿದ್ದು? ಇವತ್ತು ನಮ್ಮ ಇಂಗ್ಲಿಷಿಗೆ (ನನ್ನದೂ ಸೇರಿದಂತೆ) ಏನಾಗಿದೆ. Fine. ಚೆನ್ನಾಗಿಯೇ ಮಾತನಾಡುತ್ತೇನೆ. ಆಮೇಲಾಮೇಲೆ ಕಲಿತ ಹಿಂದಿ, ಉರ್ದುಗಳಂತೆಯೇ ಮಧ್ಯೆ ಕೆಲವು ತಪ್ಪುಗಳಾಗುತ್ತವೆ. ಕೆಲಬಾರಿ ಡಿಕ್ಷನರಿ ಬೇಕು. ಸ್ಪೆಲಿಂಗ್ ತಪ್ಪುತ್ತದೆ. ಸರಿಯಪ್ಪ, ಅದೆಲ್ಲ ಮಹಾಪರಾಧವಲ್ಲವಲ್ಲ?

ಆದರೆ ಈಗ ಮಗುವಿಗೆ ಇಂಗ್ಲಿಷ್ ಕಲಿಸಲೇ ಬೇಕು, ಆರಂಭದಿಂದಲೇ ಮಾತು, ಓದು ಎರಡನ್ನೂ ಕಲಿಸಬೇಕು. ಅಂದರೆ, ಅದರ thinking language ಮಾತೃ ಭಾಷೆಯಾಗಿರದೆ ಇಂಗ್ಲಿಷ್ಷೇ ಆಗಿರಬೇಕು ಎಂಬ ಸಿದ್ಧಾಂತ ಜಾರಿಗೆ ಬಂದಿದೆ. ನೀವು ಪ್ರಖ್ಯಾತ(?), ಶ್ರೀಮಂತ ಶಾಲೆಗಳಿಗೆ ನಿಮ್ಮ ಮಗುವನ್ನು ಪ್ರಿ ನರ್ಸರಿಗೆ ಸೇರಿಸಲು ಹೋಗಿ, ಮಗುವನ್ನಲ್ಲ: ನಿಮ್ಮನ್ನು ಇಂಟರ್‌ವ್ಯೂ ಮಾಡುತ್ತಾರೆ. ನಾನೂ ಮಾಡುತ್ತೇನೆ. ಗಂಡ ಹೆಂಡಿರಿಬ್ಬರೂ ಜೊತೆಯಾಗಿ ಬರದಿದ್ದರೆ ಅಪ್ಲಿಕೇಶನ್ ಮುಖಕ್ಕೆಸೆದು “ಒಟ್ಟಿಗೇ ಬನ್ನಿ. ನಿಮ್ಮ ಮದುವೆ ದಿನ ನೀವು ಒಟ್ಟಿಗಿರಲಿಲ್ವಾ? ಸಿನೆಮಾಗೆ, ಪಾರ್ಟಿಗೆ, ಜಾತ್ರೆಗೆ, ಗೃಹ ಪ್ರವೇಶಕ್ಕೆ, ರಾತ್ರಿ ಮಲಗೋಕೆ- ಒಟ್ಟಿಗಿರೋದಿಲ್ವಾ? ಮಗೂನ ಸೇರಿಸೋ ವಿಷಯದಲ್ಲಿ ಯಾಕೆ ಅಸಡ್ಡೆ?" ಅಂತ ಬಯ್ದು ಕಳಿಸುತ್ತೇನೆ. ಕಾರಣವಿಷ್ಟೆ, ನಿಮ್ಮ ಮಗುವಿನ ಶಿಕ್ಷಣದ ಬಗ್ಗೆ ನಿಮಗೆಷ್ಟು ಶ್ರದ್ಧೆಯಿದೆ ಅಂತ ತಿಳಿದುಕೊಳ್ಳುವುದಷ್ಟೆ ನನ್ನ ಉದ್ದೇಶ.

ಶ್ರೀಮಂತ ಶಾಲೆಗಳದು ಆ ಉದ್ದೇಶವಲ್ಲ. ಮೊದಲನೆಯದಾಗಿ ನಿಮ್ಮ ವಾರ್ಷಿಕ ಆದಾಯವೇನು ಅಂತ ನೋಡುತ್ತಾರೆ. ಅದು ಇಂತಿಷ್ಟು ಲಕ್ಷ ಅಥವಾ ಕೋಟಿಗಳ rangeನಲ್ಲಿ ಇರದಿದ್ದರೆ ಅವರು ನಿಮ್ಮನ್ನು ಇಂಟರ್‌ವ್ಯೂಗೆ ಕರೆಯುವುದೇ ಇಲ್ಲ. ಎರಡನೆಯದಾಗಿ, ನಿಮಗೆ ಇಂಗ್ಲಿಷ್ ಬರುತ್ತದಾ? ನಿಮ್ಮ ಮಗುವಿನೊಂದಿಗೆ ಇಂಗ್ಲಿಷ್ ಮಾತನಾಡುತ್ತೀರಾ? ಈಗಾಗಲೇ ಮಾತಾಡತೊಡಗಿದ್ದೀರಾ? Come, ಹೇಗೆ ಮಾತಾಡ್ತೀರಿ ತೋರಿಸಿ? ಅಂತಾರೆ.

ಆಗಲೇ options ಬಗ್ಗೆ ಆಕೆ ಚರ್ಚಿಸಿದ್ದು.

ನೋಡಿ, ಮನುಷ್ಯ ಸ್ವಭಾವತಃ ಸುಲಭವಾದದ್ದನ್ನೇ ಆಯ್ದುಕೊಳ್ಳುವವನು. ಅಲ್ಲಿ ಎರಡು ಪ್ಲಾಸ್ಟಿಕ್ ಛೇರು, ಒಂದು ಚಾಪೆ ಮತ್ತು ಸೋಫಾ ಇದ್ದರೆ ಸೋಫಾ ಮೇಲೇ ಕೂಡುತ್ತೀರಿ. ಬಸ್ಸು, ವಿಮಾನ ಇದ್ದರೆ ವಿಮಾನ opt ಮಾಡುತ್ತೀರಿ. ಮಕ್ಕಳಾದರೂ ಅಷ್ಟೆ: ನೀವು ಇಂಗ್ಲಿಷಿನಲ್ಲಿ ಒಂದು ಸಂಗತಿ ಹೇಳಿ. ಅವು ಮುಖಮುಖ ನೋಡುತ್ತವೆ. ತಕ್ಷಣ ಕನ್ನಡದಲ್ಲಿ ಹೇಳಿ, ಅರ್ಥ ಮಾಡಿಕೊಳ್ಳುತ್ತವೆ. ಮಗು ನಿಮ್ಮ ಇಂಗ್ಲಿಷನ್ನು ಅರ್ಥ ಮಾಡಿಕೊಂಡಿತು ಅಂತ ನೀವಂದುಕೊಳ್ಳುತ್ತೀರಿ. You are fooling yourself. ಅದು ತನಗೆ ಸುಲಭವಾದ್ದನ್ನು ಆಯ್ಕೆ ಮಾಡಿಕೊಂಡಿದೆ.

“ಪುಟ್ಟೂ, close the door, ಬಾಗಿಲು ಹಾಕ್ಕೊಂಡು ಬಾ..." ಅನ್ನಬೇಡಿ.

“ಪುಟ್ಟೂ, close the door!" ಅಲ್ಲಿಗೆ ನಿಲ್ಲಿಸಿ. ಅದು ಕಷ್ಟ ಪಡಲಿ. ಕೈಸನ್ನೆ ಮಾಡಬೇಡಿ. ನಿಮ್ಮ ಕನ್ನಡವನ್ನು ಆರಂಭದಲ್ಲಿ ಅದು ಕೈಸನ್ನೆಯ ಮೂಲಕವೇನೂ ಅರ್ಥ ಮಾಡಿಕೊಳ್ಳಲಿಲ್ಲವಲ್ಲ? ಪ್ರಾಣಿಯೊಂದು ತನ್ನ ತಾಯಿಯ ಕೂಗನ್ನು ಅರ್ಥ ಮಾಡಿಕೊಂಡಂತೆ, ಪಕ್ಷಿಯೊಂದು ತನ್ನ ಗೆಳತಿಯ ಕುಕಿಲು ಅರ್ಥ ಮಾಡಿಕೊಂಡಂತೆ ಅದು ಕನ್ನಡವನ್ನು ಅರ್ಥ ಮಾಡಿಕೊಂಡಿತು. ನಿಮ್ಮ ಪ್ರೀತಿ, ಸಿಟ್ಟು, ಅಪ್ಪಣೆ, ಅಣತಿ- ಎಲ್ಲ. ಹಾಗೆಯೇ ನೇರವಾಗಿ ಕೇವಲ ಇಂಗ್ಲಿಷಿನಲ್ಲಿ, ಏನೇನೂ helpಮಾಡದೆ ಇಂಗ್ಲಿಷಿನಲ್ಲಿ ಮಾತನಾಡಿ. ಅದು ಕನ್ನಡದಲ್ಲಿ ಪ್ರಶ್ನೆ ಕೇಳಿದರೆ ಇಂಗ್ಲಿಷಿನಲ್ಲಿ ಉತ್ತರ ಕೊಡಿ. ಎರಡೂವರೆ ಮೂರು ವರ್ಷದ ಮಗುವಿಗೆ ಇಂಗ್ಲಿಷ್ ಕಲಿಸುವುದಕ್ಕೆ ಇರುವ ದಾರಿ ಇದೊಂದೇ.

ಇದು ಬಿಟ್ಟರೆ ನಿಮ್ಮ ಇಡೀ ದಿನದ ಒಂದಷ್ಟು ತಾಸಿನ value time ನಿಮ್ಮ ಮಗುವಿಗೆ ಕೊಡಿ. ಸಿಗುವ ಎಲ್ಲ ಕಥಾ ಪುಸ್ತಕ ತಂದು ಗುಡ್ಡೆ ಹಾಕಿಕೊಳ್ಳಿ. ಅವು ಇಂಗ್ಲಿಷಿನಲ್ಲಿರಲಿ. ಅವುಗಳ ತುಂಬ ಚಿತ್ರಗಳಿರಲಿ. ಇಡೀ ಕಥೆಯನ್ನ, ಚಿತ್ರವನ್ನ, ಪುಸ್ತಕವನ್ನ ಇಂಗ್ಲಿಷಿನಲ್ಲಿ, ನೆನಪಿರಲಿ- ಇಂಗ್ಲಿಷೊಂದರಲ್ಲೇ ಓದುತ್ತಾ-ವಿವರಿಸುತ್ತಾ ಹೋಗಿ.

ಮುಖ್ಯವಾಗಿ ನೀವು ಗಂಡ ಹೆಂಡತಿ, ಸಾಧ್ಯವಾದಷ್ಟೂ ಮನೆ ಮಂದಿ ಪರಸ್ಪರರೊಂದಿಗೆ ಇಂಗ್ಲಿಷಿನಲ್ಲಿ ಮಾತನಾಡಿ.

ಹಾಗಾದರೆ ಕನ್ನಡ? ಕನ್ನಡ ಸಂಸ್ಕೃತಿ ?

ಅಲ್ರೀ, ತಿಂಡಿ ಅಂದ ಕೂಡಲೆ ನಿಮಗೆ ಪಿಜ್ಜಾ, ಮೆಕ್‌ಡೊನಾಲ್ಡ್, ಕೆಂಟುಕಿ ಫ್ರೈಡ್ ಚಿಕನ್, ಡಾಮಿನೋಗಳು ನೆನಪಾಗುತ್ತವೆ. ಚಡ್ಡಿಯೆಂದರೆ ಟಾಮಿ ಹಿಲ್‌ಫಿಗರ್ ಬೇಕು. ಪೆಪೆ ಜೀನ್ಸ್ ಬೇಕು. ಕಂಕುಳಿಗೆ ಇಂಪೋರ್ಟೆಡ್ ಬಾಡಿ ಸ್ಪ್ರೇ ಬೇಕು. ಮತ್ತಿದೆಂಥ ಕನ್ನಡದ ಮಾತು?

ನಮ್ಮ ಬೀದಿಯಲ್ಲಿ, ನೆರೆಯಲ್ಲಿ, ಮಾರ್ಕೆಟ್ಟಿನಲ್ಲಿ, ಬೇಂದ್ರೆಯಲ್ಲಿ, ಅಡಿಗರಲ್ಲಿ, ಸಿನೆಮಾಗಳಲ್ಲಿ, ಬೈಗುಳಲ್ಲಿ ಪ್ರತೀ ಕಡೆ ಕನ್ನಡವಿದೆ. ಮಗುವನ್ನು ಅಲ್ಲಿಗೆಲ್ಲ ಧಾರಾಳವಾಗಿ expose ಮಾಡಿ, ಕಲಿಕೆಯ ವಿಷಯಕ್ಕೆ ಬಂದಾಗ ಮಾತ್ರ options ಇಡಬೇಡಿ.

ನನಗೆ options ಇರಲಿಲ್ಲ: ನಾನು ಬರಹಗಾರನಾದೆ. ನಮ್ಮಪ್ಪ ಸಾರಾಯಿ ಮಾರುವವನಾಗಿದ್ದಿದ್ದರೆ ವೈನ್‌ಷಾಪ್ ಇಡುತ್ತಿದ್ದೆ. ಅಪ್ಪನೇ ಇರಲಿಲ್ಲವಲ್ಲ? ಬದುಕು ಒಂದೆಡೆ ನೆಲೆ ನಿಲ್ಲಲು ಬಿಡಲಿಲ್ಲ. ಸುಮ್ಮನೆ ತಿರುಗಿದೆ. ತಿರುಗಿದ್ದರ ಕರ್ಮ: ಅದನ್ನೆಲ್ಲ ಬರೆಯಲೇ ಬೇಕಾಯಿತು. ಗಂಟೆಗಟ್ಟಲೆ ಟೀವಿ ನೋಡುವುದಿಲ್ಲವಾದ್ದರಿಂದ ಗಂಟೆಗಟ್ಟಲೆ ಓದಬೇಕಾಯಿತು. ಸ್ವತಃ ಕಷ್ಟಗಳನ್ನು ಮುಳ್ಳಿನ ಕಿರೀಟಗಳಂತೆ ಧರಿಸಿಕೊಂಡು ಬದುಕಿದೆನಾದ್ದರಿಂದ ನೊಂದವರಲ್ಲೆಲ್ಲ ಏಸುವನ್ನು ಕಾಣುವಂತಾಯಿತು. ಅತಿ ಶ್ರೀಮಂತ ವಿಲಾಸಿ ದೇಶಗಳಿಗೆ ಹೋದಾಗಲೂ ನಾನು ಆಸ್ಪತ್ರೆಗಳನ್ನ, ರೋಗಿಷ್ಟರನ್ನ, ಬಚ್ಚ ಸೂಳೆಯರನ್ನ, ಹೆಂಡ ಕುಡುಕರನ್ನ, ಕತ್ತಲ ಲೋಕವನ್ನ ಹುಡುಕಿಕೊಂಡು ಹೋದೆ. ಬೆಚ್ಚಗೆ ಕುಳಿತು ಕ್ರಿಕೆಟ್ ನೋಡಬಹುದಿತ್ತು. ಮನಸ್ಸಿಗೆ options ಕಲಿಸಲಿಲ್ಲ. ಕಾರ್ಗಿಲ್ ಬೆಟ್ಟಕ್ಕೆ ಯುದ್ಧ ವರದಿ ತರಲು ಹೋದೆ.

ಇದೆಲ್ಲದರ ತಿರುಳಿಷ್ಟೆ: ನಿಮ್ಮ ಮಗುವಿಗೆ ಇಂಗ್ಲಿಷ್ ಕಲಿಸಿರಿ ಎಂಬುದಲ್ಲ.

ನೀವು ಸುಖದ, ಸುಲಭದ options ಹುಡುಕಬೇಡಿ ಅಂತ!

-ರವೀ

Read Archieves of 22 February, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books