Ravi Belagere
Welcome to my website
ಬಹಳ ದಿನಗಳ ನಂತರ ಈ ತರಹದ್ದೊಂದು mega function ಏರ್ಪಡಿಸಿದ್ದೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ನೀವೆಲ್ಲ ಬಂದಿರಿ. ನನ್ನ ಬರವಣಿಗೆ, ತಿರುಗಾಟ, ಮುದ್ರಣ, ಬಣ್ಣ, ಈ ಸಿಂಗಾರ-ಬಂಗಾರ- ಇವೆಲ್ಲವೂ ನಿಮಗಾಗಿಯೇ ಅಲ್ಲವೆ? ಎಲ್ಲಿಯ ರಾಯಚೂರು, ಕೊಪ್ಪಳ, ಯಾದಗಿರಿ, ಗುಲಬರ್ಗ, ಚಿಂಚನ ಸೂರು, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ಮಂಗಳೂರು-ಎಲ್ಲೆಲ್ಲಿಂದ ಬಂದಿದ್ದರು ಓದುಗರು!. ಪ್ರತಿಯೊಬ್ಬರ ಕೈಲೂ ‘ಹಿಮಾಗ್ನಿ’. ಪ್ರತಿಯೊಬ್ಬರ ಕೈಲೂ ‘ಉಡುಗೊರೆ’, ‘ಅಮ್ಮ ಸಿಕ್ಕಿದ್ಲು’ ಮತ್ತು ಸಿಡಿಗಳು.
Home About Us Gallery Books Feedback Prarthana Contact Us

ಬೀಡಿನಗುಡ್ಡೆ ಸ್ಮಶಾನದಲ್ಲಿ ನಿಂತ ಯಡ್ಡಿ ಎಲ್ಲರಿಗೂ ಕಾಲಕಸವಾಗಿದ್ದರು!

ಈತ ಹಟಮಾರಿ.

ಈತ ಶಕ್ತಿಶಾಲಿ. ನಿಜಕ್ಕೂ ಬುದ್ಧಿವಂತ. ಸಂಘಟಕ. ಪೂರ್ತಿ ಅದಕ್ಷನೇನಲ್ಲ. ಭಯಂಕರ ಚಟುವಟಿಕೆಯ, ಭೂಚಕ್ರದಂತೆ ತಿರುಗುವ, ಅಂದುಕೊಂಡಿದ್ದನ್ನು ಮಾಡಿ ಬಿಡುವ, ಜಗಳಕ್ಕೆ ಬಿದ್ದರೆ ಹೇಗಾದರೂ ಮಾಡಿ ಗೆಲ್ಲುವ, ಅವಶ್ಯಕತೆ ಬಿದ್ದರೆ ಕಾಲೇನು? ಏನನ್ನಾದರೂ ಹಿಡಿಯಬಲ್ಲ ಕಾರ್ಯ ಸಾಧಕ. ಸಾಕಷ್ಟು ವಯಸ್ಸಾದರೂ ದೈಹಿಕವಾಗಿ fit. ಮಾನಸಿಕವಾಗಿ alert. ಕೊಂಚ ಕಿವಿ ಮಂದ. ಸಿಟ್ಟು ಈತನಿಗಿಂತ ಮುಂಚೆ ಹುಟ್ಟಿದೆ. ಕುಡಿತ ಮತ್ತು ಇಸ್ಪೀಟಿನಂತಹ time consuming ಅಭ್ಯಾಸಗಳಿಲ್ಲ. ಆದರೆ ಸೊಂಟದ ಮೇಲೆ ಲಾಡಿಯೇ ನಿಲ್ಲದ ಕಚ್ಚೆ ಹರುಕ. ಬಗ್ಗಿದರೆ ಲಬಕ್ಕನೆ ಜುಟ್ಟು ಹಿಡಿಯುತ್ತಾನೆ. ಗೆಳೆತನದ hint ಸಿಕ್ಕರೆ ಭುಜ ಹಿಡಿದೆತ್ತುತ್ತಾನೆ. ಗಿಟ್ಟುವುದಾದರೆ ಬಾಚಿ ತಬ್ಬಿಕೊಳ್ಳುತ್ತಾನೆ. ತನ್ನ ಇಚ್ಛೆಗೆ ಅಡ್ಡ ಬಂದರೆ ಮಾಮೂಲಿ ಕಾರ್ಪೊರೇಟರ್‌ನಿಂದ ಹಿಡಿದು, ಕಳಕಪ್ಪ ಬಂಡಿಯಂಥ ಅಯೋಗ್ಯ ಶಾಸಕನ ತನಕ, ಕಡೆಗೆ ಲಾಲಕೃಷ್ಣ ಅದ್ವಾನಿ ಮತ್ತು ಆರೆಸ್ಸೆಸ್ ಮುಖಂಡ ಮೋಹನ್ ಭಗತ್‌ಸಿಂಗ್ ತನಕ ಎಲ್ಲರನ್ನೂ ಇದಿರು ಹಾಕಿಕೊಂಡು ತೊಡೆ ತಟ್ಟುತ್ತಾನೆ.

ಈತ ಯಡಿಯೂರಪ್ಪ.

ಇಂಥವನನ್ನು ಹೆಡೆಮುರಿ ಕಟ್ಟಿ ನೆಟ್ಟಗೆ ಜೈಲಿಗೆ ಅಟ್ಟಿ 26 ದಿನ ಜೈಲಿನಲ್ಲಿ ಮುದ್ದೆ ಮುರಿಯುವಂತೆ ಮಾಡಿದ, ಕರ್ನಾಟಕ ಇತಿಹಾಸಕ್ಕೆ ಹೊಸ ತಿರುವು ನೀಡಿದ ಮಹನೀಯರೆಂದರೆ ನ್ಯಾಯಾಧಿಶರಾದ, ಲೋಕಾಯುಕ್ತ ಕೋರ್ಟಿನ ಸುಂಧಿದ್ರರಾಯರು. ಆಗಲೂ ಯಡಿಯೂರಪ್ಪ ತನ್ನ ಆಟ ಮುಗಿಯಿತು ಅಂತಲೋ, ತನ್ನ ದಿನಗಳು ಮತ್ತೆ ಪ್ರಖರಗೊಂಡಾಗ ದನಿಯೆತ್ತುತ್ತೇನೆ, ದಾಳ ಹಾಕುತ್ತೇನೆ ಅಂತಲೋ ಸುಮ್ಮನಾಗಲಿಲ್ಲ. ಆತ ಜೈಲಿನಿಂದಲೇ ಆಟ ಹೂಡಿದ.

ಶೋಭಾ ಕರಂದ್ಲಾಜೆಯನ್ನು ಜೈಲಿಗೇ ಕರೆಸಿಕೊಂಡ. ನನ್ನ ಬಣಕ್ಕೆ ಸೇರಿದ ನಿಷ್ಠಾವಂತರ‍್ಯಾರೂ ಅದ್ವಾನಿಯ ರಥಯಾತ್ರೆಗೆ ಹಾಜರಾಗಕೂಡದು. ರಥಯಾತ್ರೆ ವಿಫಲವಾಗುವಂತೆ ನೋಡಿಕೊಳ್ಳಬೇಕು ಅಂತ ಆದೇಶಿಸಿದ. ಈ ಆದೇಶವನ್ನು ಇತರೆ 12 ಮಂತ್ರಿಗಳಿಗೂ ನೀಡಿದ. ಶೋಭಾ ಸೇರಿದಂತೆ 12 ಮಂತ್ರಿಗಳು, 20 ಶಾಸಕರು ಅವರು ಅದ್ವಾನಿ ರಥಯಾತ್ರೆಗೆ ಬೆಂಗಳೂರಿನಲ್ಲಿ ಹಾಜರಾಗಲಿಲ್ಲ. ಅದು ಅದ್ವಾನಿಯ ಸಿಡಿಮಿಡಿಗೆ ಕಾರಣವಾಯಿತು. ರಥಯಾತ್ರೆಯ ಸಭೆ ಹಾಳಾಗಿದ್ದುದಕ್ಕೆ ಮಳೆಯೂ ಕಾರಣವಾಯಿತು. ಆದರೆ ಮಂತ್ರಿ ಶಾಸಕರ ಗೈರು ಹಾಜರಿಯನ್ನು ವೃದ್ಧ, ಗಮನಿಸದೆ ಇರಲಿಲ್ಲ. ಮಂಗಳೂರೂ ಸೇರಿದಂತೆ ಕರಾವಳಿಯುದ್ದಕ್ಕೂ ರಥಯಾತ್ರೆಯಲ್ಲಿ ಶೋಭಾ ಕಾಣಿಸಿಕೊಳ್ಳಲಿಲ್ಲ.

ಮೊನ್ನೆ ವಿ.ಎಸ್.ಆಚಾರ್ಯರು ತೀರಿಕೊಂಡರು. ನಿಮಗೂ ಗೊತ್ತು: ಹಿಂದೆ ಬಂದರೆ ಹಾಯದ, ಮುಂದೆ ಬಂದರೆ ಒದೆಯದ ಆಚಾರ್ಯರನ್ನು ನಾನು ‘ಬಿಜೆಪಿಯ ಬಾಲ ವಿಧವೆ’ ಅಂತಲೇ ಗೇಲಿ ಮಾಡುತ್ತಿದ್ದೆ. ಅವರು ಹಣ ನುಂಗಲಿಲ್ಲ. ಕಚ್ಚೆ ಕೆಡಿಸಿಕೊಳ್ಳಲಿಲ್ಲ. ಆಗಾಗ ಪತ್ರಿಕೆಗಳ ಮೇಲೆ ಹರಿಹಾಯ್ದರು. ಶುದ್ಧ ಬಲಪಂಥೀಯರಾಗಿದ್ದ ಅವರ ಮನಸ್ಸಿನಲ್ಲಿ ಡೆಮಾಕ್ರಸಿಗೆ ಅರ್ಥವಿರಲಿಲ್ಲ. ಆದರೆ ಸಂಘಕ್ಕೆ ನಿಷ್ಠರು. ಏಳೆಂದಾಗ ಎದ್ದರು. ಕೂಡೆಂದಾಗ ಕೂತರು. ಮುಖ್ಯಮಂತ್ರಿಗಳ ಪದವಿಗೇ ಕಂಟಕ ತಂದಿದೆ ಅಂತ ಮುಜರಾಯಿ ಇಲಾಖೆ ಎಂಬ ಮುಂಡಮೋಪಿಯನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದಾಗ ಅದಕ್ಕೂ ತಾಳಿಕಟ್ಟಿ ಅದೊಂಥರಾ ವಿಧವಾ ವಿವಾಹ ಮಾಡಿಕೊಂಡ ‘ತ್ಯಾಗಿ’ ಡಾಕ್ಟರ್ ಆಚಾರ್ಯ. ಅವರು ಇಡೀ ಸಂಘದ, ಬಿಜೆಪಿಯ, ಸರ್ಕಾರದ ಪಾಲಿಗೆ ‘ಆಚಾರ್ಯ’. ಅವರಿಂದ ರೇಣುಕಾಚಾರ್ಯ, ಸವದಿ, ಸಿ.ಸಿ.ಪಾಟೀಲ, ಕೃಷ್ಣ ಪಾಲೇಮಾರ್‌ರಂತಹ ಶಿಷ್ಯರು ಏನು ಪಾಠ ಕಲಿತರೋ ಏನು ಬಿಟ್ಟರೋ ಭಗವಂತ ಬಲ್ಲ. ಆದರೆ ಸದಾನಂದ ಗೌಡರ ಬಜೆಟ್ ಮಂಡನೆಗೆ ಆಚಾರ್ಯರು ನೆರವಾಗಲಿದ್ದುದಂತೂ ಹೌದು. ಅಷ್ಟರ ಮಟ್ಟಿಗೆ ಆಚಾರ್ಯರು ಬಿಜೆಪಿಗೊಬ್ಬ ಲೆಕ್ಕ ಬಲ್ಲ, ದುಡ್ಡು ತಿನ್ನದ, ಯಾವತ್ತೂ ವಯಸ್ಸಿಗೆ ಬಾರದ, ಬಾಲ ವಿಧವೆ.

ಅಂಥವರು ಸತ್ತಾಗ ಹೋಗದೆ ಇರಲಾದೀತೇ?

ಬಳ್ಳಾರಿ ಚುನಾವಣಾ ಪ್ರಚಾರಕ್ಕೆ ಬರುವುದಿಲ್ಲ, ಹುಬ್ಬಳ್ಳಿಯ ಆರೆಸ್ಸೆಸ್ ಮಹಾಸಭೆಗೆ ಹೋಗುವುದಿಲ್ಲ ಅಂತ ರೊಳ್ಳೆ ತೆಗೆದು ಪಕ್ಷದಲ್ಲಿ ನಡುಕ (Bní?) ಉಂಟು ಮಾಡುತ್ತಿದ್ದ ಯಡಿಯೂರಪ್ಪ ಈ ಆಚಾರ್ಯರ ಮಣ್ಣಿಗೆ ಉಸಿರೆತ್ತದೆ ಹೋದರು. ಅಲ್ಲಿ ಉಡುಪಿ ಬಳಿಯ ಬೀಡಿನಗುಡ್ಡೆ ಸ್ಮಶಾನದಲ್ಲಿ ನಡೆದದ್ದಾದರೂ ಏನು ಅಂತ ನೋಡಿ? ಲಾಲಕೃಷ್ಣ ಅದ್ವಾನಿ, ಸದಾನಂದ ಗೌಡ, ಆರೆಸ್ಸೆಸ್ ಪ್ರಮುಖ ಮೋಹನ್ ಭಾಗವತ್ ಮತ್ತು ಅನಂತಕುಮಾರ್ ಮಾತನಾಡುತ್ತ ನಿಂತಿದ್ದಾಗ ಯಡಿಯೂರಪ್ಪ ಮಧ್ಯೆ ಮೂಗು ತೂರಿಸಲು ಹೋಗಿದ್ದಾರೆ.

ನೀವು ನಂಬುತ್ತೀರಾ? ಕರ್ನಾಟಕದಲ್ಲಿ ಮೂವತ್ತು ವರ್ಷ ಆರೆಸ್ಸೆಸ್ಸು, ಜನಸಂಘ, ಬಿಜೆಪಿ, ರೈತ ಹೋರಾಟ ಕಟ್ಟಿ, ಶಾಸಕನಾಗಿ, ಉಪ ಮುಖ್ಯಮಂತ್ರಿಯಾಗಿ, ಪಕ್ಷವನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯಾಗಿ, ರಾಷ್ಟ್ರ ರಾಜಕಾರಣದಲ್ಲೂ ಒಂದು ಸ್ಥಾನಗಳಿಸಿಕೊಂಡಿದ್ದ ಯಡಿಯೂರಪ್ಪನನ್ನು ಲಾಲಕೃಷ್ಣ ಅದ್ವಾನಿ ಮಾತನಾಡಿಸುವುದಿರಲಿ, ತಿರುಗಿಯೂ ನೋಡಲಿಲ್ಲ. Shame!

ಹಿರಿಯರಾದರೇನಂತೆ? ಮೈ.ಚ.ಜಯದೇವ, ನರಹರಿ, ನ.ಕೃಷ್ಣಪ್ಪ, ಸಂತೋಷ್.ಜಿಯವರಂತಹ ಹಿರಿಯರನ್ನೂ ಸೇರಿಸಿ ಇಡೀ ಆರೆಸ್ಸೆಸ್ಸನ್ನೇ ಭ್ರಷ್ಟಗೊಳಿಸಿ ನನ್ನ ಮುಷ್ಟಿಯಲ್ಲಿಟ್ಟುಕೊಂಡಿದ್ದೇನೆ. ಸಂಘದ ಯಾವ ಸಲಹೆಯನ್ನೂ ನಾನು ಕೇಳಬೇಕಿಲ್ಲ. ವಿಧಾನಸೌಧದ ಮೇಲೆ ಕೇಶವಶಿಲ್ಪದ ನೆರಳು ಬೀಳಬೇಕಿಲ್ಲ ಎಂಬಂತೆ ವರ್ತಿಸಿದ ಯಡಿಯೂರಪ್ಪನವರನ್ನು ಸಂಘದ ಪ್ರಮುಖ ಮೋಹನ್ ಭಾಗವತ್ ಸುಮ್ಮನೆ ನೆಪಕ್ಕಾದರೂ ಮಾತನಾಡಿಸಲಿಲ್ಲ. Shame Shame!

ಅನಂತಕುಮಾರ್ ಬಿಡಿ. ಮೊದಲಿಂದಲೂ ಅವರು ಎಣ್ಣೆ. ಯಡಿಯೂರಪ್ಪ ಸೀಗೆ. ಅಲ್ಲದೆ ತಮ್ಮ ಮಹಾಗುರುವು ಅದ್ವಾನಿಯವರೇ ಹೆಗಲ ಮೇಲಿನ ಕೊಳೆ ಝಾಡಿಸಿದಂತೆ ಅವರನ್ನು ದೂರವಿಟ್ಟಾಗ ಇವರಾದರೂ ಯಡಿಯೂರ‍್ಪ್ಪನವರನ್ನು ಕರೆದು ಮಾತನಾಡಿಸಿಯಾರು ಹೇಗೆ? He was stone faced. ಆದರೆ ಅಚ್ಚರಿಯೆನ್ನಿಸಿದ್ದು ಮುಖ್ಯಮಂತ್ರಿ ಸದಾನಂದ ಗೌಡರ ವರ್ತನೆ. ಎಲ್ಲರಿಗೂ ಗೊತ್ತಿದ್ದಂತೆ ಸದಾನಂದ ಗೌಡರು ಕರ್ನಾಟಕದ ಒಕ್ಕಲಿಗ ನಾಯಕರಲ್ಲ. ದಕ್ಷಿಣ ಕನ್ನಡದಲ್ಲೂ ಅವರು ಧೃಡವಾದ ಜನನಾಯಕರಲ್ಲ. State politicsನಲ್ಲಿ ಅದು ಮುಖ್ಯಮಂತ್ರಿಯಾಗುವುದಾಗಿರಲಿ, ಕೇವಲ ಒಬ್ಬ ಮೀನುಗಾರಿಕಾ ಮಂತ್ರಿಯಾಗಬಹುದಾದ material ಕೂಡ ಆಗಿರಲಿಲ್ಲ. ಅಂಥವರು ರಾತ್ರೋರಾತ್ರಿ ಮುಖ್ಯಮಂತ್ರಿಯಾಗಿ ಆಯ್ಕೆಯಾದದ್ದು, ಶುದ್ಧ ಅನಿರೀಕ್ಷಿತ ರಾಜಕೀಯ ಬೆಳವಣಿಗೆ.

ಲೋಕಾಯುಕ್ತ ವರದಿಯಲ್ಲಿ ಯಡಿಯೂರಪ್ಪ ಹಣ ತಿಂದದ್ದು ಖಚಿತವಾದದ್ದು ಗೊತ್ತಾಗುತ್ತಿದ್ದಂತೆಯೇ ದಿಲ್ಲಿಗೆ ಕರೆಸಿಕೊಂಡ ಹೈಕಮ್ಯಾಂಡ್, ಅವರಿಗೆ ರಾಜೀನಾಮೆ ಕೊಡಲು ಹೇಳಿತ್ತು. ಹಿಂತಿರುಗಿ ಬಂದು ಮೂರು ದಿನ ಹಟ ಹಿಡಿದರಾದರೂ ಕಡೆಗೆ ರಾಜೀನಾಮೆ ಕೊಡಲೇಬೇಕು ಅಂತ ಅನಿವಾರ್ಯವಾದಾಗ ಎರಡು ಹೆಸರು ಪ್ರಸ್ತಾಪಕ್ಕೆ ಬಂದವು. ಮೊದಲನೆಯದು ವಿ.ಎಸ್.ಆಚಾರ್ಯರದು. ಎರಡನೆಯದು ಸದಾನಂದ ಗೌಡರದು. ಇಲ್ಲಿ ಬಿಜೆಪಿಯ ಲಿಂಗಾಯತ ಶಾಸಕರು ಎರಡಕ್ಕೂ ಸಮ್ಮತಿಸಲಿಲ್ಲ. ಕಡೆಗೆ ಗೌಡರು, ಸಂಘ ನಿಷ್ಠರು, ತಿರುಗಿ ಬೀಳುವವರಲ್ಲ, ಆರೋಗ್ಯವೂ ಇದೆ, ಹೇಳಿದಾಗ ಕುರ್ಚಿ ಬಿಟ್ಟು ಕೊಡುತ್ತಾರೆ ಎಂಬೆಲ್ಲ ಕಾರಣಗಳಿಗೆ ಸದಾನಂದ ಗೌಡರ ಹೆಸರು emerge ಆಗಿ ಅವರನ್ನು ಮನೆಗೆ ಕರೆಸಿಕೊಂಡ ಯಡಿಯೂರಪ್ಪ, ಸದಾನಂದ ಗೌಡರನ್ನು ತಮ್ಮ ಮನೆಯ ದೇವರ ಕೋಣೆಯ ಮುಂದೆ ನಿಲ್ಲಿಸಿಕೊಂಡರು. ದೇವರ ಮೇಲೆ ಪ್ರಮಾಣ ಮಾಡಿದ ಸದಾನಂದ ಗೌಡ, “ನೀವು ಹೇಳಿದ ದಿನ ರಾಜೀನಾಮೆ ಕೊಡುತ್ತೇನೆ. ಅಲ್ಲಿಯ ತನಕ ಮುಖ್ಯಮಂತ್ರಿ ನಾನಲ್ಲ. ನೀವೇ" ಅಂದರು. ಅದರಂತೆಯೇ ಎರಡು ತಿಂಗಳು ಯಡಿಯೂರಪ್ಪನವರ ಅಪ್ಪಣೆಯಿಲ್ಲದೆ ವಿಧಾನಸೌಧದಿಂದ ಹಿಡಿದು ಬೀದರ್ ತನಕ ಹುಲ್ಲುಕಡ್ಡಿ ಕದಲಲಿಲ್ಲ.

ಆದರೆ ನಿಧಾನವಾಗಿ ಸದಾನಂದ ಗೌಡರ ವರ್ತನೆ ಬದಲಾಯಿತು. ಅದಕ್ಕೆ ಕಾರಣ ಕೇವಲ ಕುರ್ಚಿ ಮೇಲಿನ ವ್ಯಾಮೋಹವಲ್ಲ. ಆರೆಸ್ಸೆಸ್ ಮತ್ತು ಬಿಜೆಪಿ ಹೈಕಮ್ಯಾಂಡ್! “ನೀನು ಪಕ್ಷದಿಂದ ಮತ್ತು ಸಂಘದಿಂದಾಗಿ ಮುಖ್ಯಮಂತ್ರಿಯೇ ಹೊರತು ಯಡಿಯೂರಪ್ಪನಿಂದಾಗಿ ಅಲ್ಲ. ನಿನ್ನ ಅಧಿಕಾರ ಚಲಾಯಿಸು. ಸ್ಥಾನ ಸ್ಥಿರಗೊಳಿಸಿಕೋ. Assert yourself'' ಅಂದರು. ಆದರೆ ಯಡಿಯೂರಪ್ಪ ಕೆಂಡವಾಗಿದ್ದರು. “ನೀನು ರಾಜೀನಾಮೆ ಕೊಡದಿದ್ದರೆ ನಾಳೆ ವಿಧಾನಪರಿಷತ್ತಿನಲ್ಲಿ ನನ್ನ ಕಡೆಯ ಶಾಸಕರಿಂದ cross vote ಮಾಡಿಸಿ ಸೋಲಿಸಿ ಬಿಡುತ್ತೇನೆ" ಅಂತ ಹೆದರಿಸತೊಡಗಿದರು.

ಆಗ ಫೀಲ್ಡಿಗಿಳಿಯಿತು ಹಳೇ ಘಟ : ಪದ್ಮನಾಭನಗರದ ವೃದ್ಧ ಮಾಂತ್ರಿಕ! “ನೀನು ಚಿಂತೆ ಮಾಡಲೇಬೇಡ. ನನ್ನ ಪಕ್ಷದ ಸದಸ್ಯರು ಅವತ್ತು ಮತದಾನ ಮಾಡದೆ walk out ಮಾಡ್ತಾರೆ. ಯಡಿಯೂರಪ್ಪನ ಆಟ ನಡಿಯೋದಿಲ್ಲ. ನೀನು ಇನ್ನೂ ಒಂದೂ ಮುಕ್ಕಾಲು ವರ್ಷ ಮುಖ್ಯಮಂತ್ರಿಯಾಗಿ ಇದ್ದೇ ಇರ್ತೀಯ" ಅಂದು ಬಿಟ್ಟರು.

ಈ ಕಡೆ ಲೋಕಾಯುಕ್ತಕ್ಕೆ ಬನ್ನೂರುಮಠರನ್ನು ತಂದು ಸಂತೋಷ ಹೆಗ್ಡೆ ವರದಿಗೆ ಗ್ರಹಣ ಹಿಡಿಸುವ ಯತ್ನ ಯಡಿಯೂರಪ್ಪ ನಡೆಸಿದ್ದರಲ್ಲ. ದೇವೆಗೌಡರ ಶಿಫಾರಸು ಮೀರದಂತೆ ಸದಾನಂದಗೌಡರು ಚಂದ್ರಶೇಖರಯ್ಯನವರನ್ನು ಉಪ ಲೋಕಾಯುಕ್ತರನ್ನಾಗಿ ನೇಮಿಸಿ ಯಡಿಯೂರಪ್ಪನವರ ಅಂಗಾಂಗಕ್ಕೆ ಉರಿ ತಾಗುವಂತೆ ಮಾಡಿ ಬಿಟ್ಟರು. ಯಡಿಯೂರಪ್ಪನವರಿಗೆ ಸಿಟ್ಟು ಬಂದರೆ ಏನು ಮಾಡುತ್ತಾರೆ ಎಂಬುದು ಗೊತ್ತಲ್ಲ?

“ಸೂಳೆ ಮಗನೆ... ಬೋಳಿ ಮಗನೆ... ನಿನ್ನನ್ನ ಮುಖ್ಯ ಮಂತ್ರಿಯನ್ನಾಗಿ ಮಾಡಿದ್ದು ಹೈಕಮ್ಯಾಂಡ್ ಅಲ್ಲ. ಸಂಘ ಅಲ್ಲ. ನಾನು. ಈಗ ರಾಜೀನಾಮೆ ಕೊಡು" ಅಂತ ಮನೆಗೆ ಕರೆಸಿಕೊಂಡು ವಾಚಾಮಗೋಚರ ಬೈದಿದ್ದಾರೆ. ಸದಾನಂದ ಗೌಡ ನಿಜಕ್ಕೂ ಸೂಕ್ಷ್ಮ ಮನಸ್ಸಿನವರು. “ಬಜೆಟ್ ಮಂಡನೆ ನಂತರ ರಾಜೀನಾಮೆ ಕೊಡುತ್ತೇನೆ" ಅಂದವರೇ ಬಂದು “ಜ್ವರ ಬಂದಿದೆ" ಅಂತ ಘೋಷಿಸಿ ಮಲಗಿಬಿಟ್ಟರು.

ಈಗ ಪರಿಸ್ಥಿತಿಯೆಂದರೆ ಯಡ್ಡಿ ಸರ್ಕಾರದಲ್ಲಿ ತಿನ್ನುವ ಹಾಗೆ ಸದಾನಂದ ಗೌಡರ ಸರ್ಕಾರದಲ್ಲಿ ಮಂತ್ರಿ-ಶಾಸಕರಿಗೆ ತಿನ್ನಲು ಅವಕಾಶವಿಲ್ಲ. ಹೀಗಾಗಿ ಕನಿಷ್ಠ 60&70 ಜನಕ್ಕೆ ಸದಾನಂದ ಗೌಡರು ಅಧಿಕಾರದಿಂದ ಇಳಿಯಲಿ ಎಂಬ ಅಭಿಪ್ರಾಯವಿದೆ. ಸಹಜವಾಗಿಯೇ ಜಗದೀಶ ಶೆಟ್ಟರ್ ಮತ್ತು ಈಶ್ವರಪ್ಪ ಮುಖ್ಯಮಂತ್ರಿಯಾಗಲು ಹೊಸ ಸಫಾರಿ ಹೋಲಿಸಿಕೊಂಡಿದ್ದಾರೆ. ಆದರೆ ಎಲ್ಲರಿಗೂ ಆತಂಕವೆಂದರೆ ಮತ್ತೆ ಯಡಿಯೂರಪ್ಪ ಮುಖ್ಯಮಂತ್ರಿ ಪದವಿಗೆ ಬಂದು ಕೂಡುತ್ತಾರೆ ಎಂಬುದು.
ಅದಕ್ಕಿರುವ ಒಂದೇ ಪರಿಹಾರವೆಂದರೆ ಸಿ.ಬಿ.ಐ. ಗಣಿ ಹಗರಣದ ಜಾಡು ಹಿಡಿದು ನಿರಂತರ ಹೋರಾಟ ಮಾಡುತ್ತಿರುವ ಹಿರೇಮಠ ಅವರು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿ, ಈ ಪ್ರಕರಣವನ್ನು CBIಗೆ ಕೊಡುವಂತೆ ಕೋರಿದ್ದಾರೆ. ಅದು CBIಗೆ ಕೊಟ್ಟದ್ದೇ ಆದರೆ ಮೊಟ್ಟ ಮೊದಲಿಗೆ ಆಗುವ ಕೆಲಸವೇ ಯಡಿಯೂರಪ್ಪನವರ ಅರೆಸ್ಟ್! ಒಮ್ಮೆ CBI ಬಲೆಗೆ ಬಿದ್ದ ಮೇಲೆ ಜೈಲಿನಿಂದ ಹೊರ ಬರುವುದು ಸುಲಭವಲ್ಲ. ಅದು ಅನೇಕ ಪ್ರಕರಣಗಳಲ್ಲಿ ಸಾಬೀತಾಗಿದೆ. ಯಡ್ಡಿ ವಿರುದ್ಧ ಸಾಕಷ್ಟು ಸಾಕ್ಷ್ಯಗಳೂ ಇವೆ. ಹೀಗಾಗಿ ಸದಾನಂದಗೌಡರಿಗೂ ಆ ಬಗ್ಗೆ ಆಶಾಭಾವನೆ ಇದೆ. ಅಲ್ಲಿ ವಿ.ಎಸ್. ಆಚಾರ್ಯರ ಚಿತೆಗೆ ಬೆಂಕಿ ತಗಲುತ್ತಿದ್ದರೆ, ಅವರು ಅದ್ವಾನಿ ಪಕ್ಕದಲ್ಲಿ ತಣ್ಣಗೆ ನಿಂತಿದ್ದರು.

ಪಾಪ ಶೋಭಾ, ಯಡ್ಡಿಯ ಸಮೀಪದಲ್ಲೂ ಇರಲಿಲ್ಲ. ಮುಟ್ಟಬಾರದ ಹೆಂಗಸಿನಂತೆ ಸ್ಮಶಾನದ ತುದಿಯಲ್ಲಿ ಒಬ್ಬರೇ ನಿಂತಿದ್ದರು.

-ರವಿ ಬೆಳಗೆರೆ

Read Archieves of 21 February, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books