Ravi Belagere
Welcome to my website
ಬಹಳ ದಿನಗಳ ನಂತರ ಈ ತರಹದ್ದೊಂದು mega function ಏರ್ಪಡಿಸಿದ್ದೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ನೀವೆಲ್ಲ ಬಂದಿರಿ. ನನ್ನ ಬರವಣಿಗೆ, ತಿರುಗಾಟ, ಮುದ್ರಣ, ಬಣ್ಣ, ಈ ಸಿಂಗಾರ-ಬಂಗಾರ- ಇವೆಲ್ಲವೂ ನಿಮಗಾಗಿಯೇ ಅಲ್ಲವೆ? ಎಲ್ಲಿಯ ರಾಯಚೂರು, ಕೊಪ್ಪಳ, ಯಾದಗಿರಿ, ಗುಲಬರ್ಗ, ಚಿಂಚನ ಸೂರು, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ಮಂಗಳೂರು-ಎಲ್ಲೆಲ್ಲಿಂದ ಬಂದಿದ್ದರು ಓದುಗರು!. ಪ್ರತಿಯೊಬ್ಬರ ಕೈಲೂ ‘ಹಿಮಾಗ್ನಿ’. ಪ್ರತಿಯೊಬ್ಬರ ಕೈಲೂ ‘ಉಡುಗೊರೆ’, ‘ಅಮ್ಮ ಸಿಕ್ಕಿದ್ಲು’ ಮತ್ತು ಸಿಡಿಗಳು.
Home About Us Gallery Books Feedback Prarthana Contact Us

ಅವುಗಳಲ್ಲಿ ಕೆಲವನ್ನು ತಬ್ಬಿ ಗೆಳೆಯನ ಹೆಗಲ ಮೇಲೆ ತಲೆಯಿಟ್ಟು ಬಿಕ್ಕಿದಂತೆ...

“ವೋಮ ವೃಕ್ಷ"

ನಾನು ಫಕ್ಕನೆ ನಿಂತು ಕೇಳಿದುದಕ್ಕೆ ನರಸಿಂಹ ಹೆಚ್ಚಿಗೇನೂ ಯೋಚನೆ ಮಾಡದೆ ತಕ್ಷಣ ಹೇಳಿದ. ನಾನು ಕಾಡ ಹಾದಿಯಲ್ಲಿ ಸುಮ್ಮನೆ ನನ್ನ ಎಡಕ್ಕಿದ್ದ ಎತ್ತರನೆಯ ಮರವೊಂದರ ತೊಗಟೆಯನ್ನು ಬರಿಗೈಯಿಂದಲೇ ಹರಿದು ವಾಸನೆ ನೋಡಿದ್ದೆ. ಅದು ಘಮ್ಮೆನ್ನುತ್ತಿತ್ತು. ಪ್ರತಿ ಮರಕ್ಕೂ ಹಾಗೆಯೇ, ಒಂದು ವಾಸನೆ, ಒಂದು ಘಮ ಅಂತ ಇದ್ದೇ ಇರುತ್ತದೆ : ಆಗಷ್ಟೆ ತಾರುಣ್ಯಕ್ಕೆ ಬಂದ ಹೆಂಗಸಿಗೆ ಇದ್ದ ಹಾಗೆ. ಅದರ ಕಾಂಡವಿರಬಹುದು, ತೊಗಟೆಯಿರಬಹುದು, ಹೂವಿರಬಹುದು, ಫಲವಿರಬಹುದು : ಘಮವಿಲ್ಲದ ಮರವಿಲ್ಲ. ಎಲೆಯುದುರುವ ಅರಣ್ಯಗಳಲ್ಲಿ ನಡೆಯುವಾಗ ಆಗಷ್ಟೆ ಬೇಸಗೆ ಮುಗಿದು ಮೊದಲ ಮಳೆ ಬೀಳುತ್ತದಲ್ಲ? ಸೂರ್ಯನ ಘಾತಗಳಿಗೆ, ಆಗಸದ ವಿರಹಕ್ಕೆ, ತೊಟ್ಟು ತೊಟ್ಟು ನೀರಿಗೆ, ಅದರ ಭೋರ್ಗರೆತಕ್ಕೆ ಹಸಿದ ಹುಡಿ ಮಣ್ಣು-ಕಾದ ಭೂಮಿಗಳ ಮೇಲೆ ಕಾಡಿನಲ್ಲಿ ನಡೆಯುತ್ತಿದ್ದರೆ ಸಣ್ಣಗೊಂದು ಮಳೆ ಬಿದ್ದರೆ ನಿಮಗೆ ತಕ್ಷಣ ಗೊತ್ತಾಗುತ್ತದೆ, ಹತ್ತಿರದಲ್ಲೆಲ್ಲೋ ತೇಗದ ಮರವಿದೆ ಅಂತ. ಮುಟ್ಟಿನ ದಿನ ಮುಗಿಸಿ, ಹಂಡೆಯಲ್ಲಿ ಕಾಸಿದ ಬಿಸಿ ನೀರು ಹುಯ್ದುಕೊಂಡು ಸ್ನಾನ ಮಾಡಿ ಬಿಸಿಲು ಮಚ್ಚೆಗೆ ಬಂದ ಹುಡುಗಿ ಸಣ್ಣಗೆ ಬೆವರುತ್ತಾಳಲ್ಲ? ಹಾಗೆ ಬೆವೆಯುತ್ತದೆ ತೇಗ. ಅದಕ್ಕಿಂತಲೂ ವೇಗವಾಗಿ ಬೆಳೆಯುವ ಮರಗಳಿವೆಯಾದರೂ ಸಮೃದ್ಧವಾದ ಕಾಡಿನಲ್ಲಿ ಅದರ ಪಾಡಿಗದನ್ನು ಬೆಳೆಯಲು ಬಿಟ್ಟರೆ, ಒಂದು ತೇಗದ ಮರ ಬರೋಬ್ಬರಿ ನಲವತ್ತು ವರ್ಷ ತೆಗೆದುಕೊಳ್ಳುತ್ತದೆ ಬೆಳೆದು ನಿಲ್ಲುವುದಕ್ಕೆ! ಈಗಿನವರು ತಳ್ಳಿಬಿಳ್ಳಿ ಮಾಡಿ ಇಪ್ಪತ್ತೇ ವರ್ಷಕ್ಕೆ ಬೆಳೆಸುತ್ತೇನೆನ್ನುತ್ತಾರೆ. ಅದರೊಳಗಿನ tectol ಎಂಬ ಎಣ್ಣೆಯಂಥ ಅಂಶವೇ ತೇಗದ ಶ್ರೀರಕ್ಷೆ. ಅದು ತೇಗಕ್ಕೆ ಹುಳ ಹಿಡಿಯಲು ಸುತರಾಂ ಬಿಡುವುದಿಲ್ಲ. ಹೀಗಾಗಿ ತೇಗ ಭಯಂಕರ ಗಟ್ಟಿ. ಅದರಲ್ಲೂ ದಾಂಡೇಲಿಯ ತೇಗ : ಕಬ್ಬಿಣಕ್ಕಿಂತ ಗಟ್ಟಿ. ಪ್ರತಿ ಶ್ರೀಮಂತನಿಗೂ ಮನೆಗೆ ತೇಗವೇ ಬೇಕು.

ಆದರೆ ನಾನು ತೊಗಟೆ ಸಿಗಿದು ಮೂಸುತ್ತ ನಿಂತಿದ್ದು ನೀವು ದೊಡ್ಡ ಪತ್ರೆ, ಓಂ, ಓಂಕಾಳು ಅಂತೆಲ್ಲ ಅಂತೀರಲ್ಲ? ಆ ವಾಸನೆ ಬರುತ್ತಿದ್ದ ಮರವೊಂದರ ಕೆಳಗೆ. ಗಿಡ ಮರ, ಹೂವು, ಬಳ್ಳಿ, ಫಸಲು, ಬೆಳೆ, ತೋಟ, ಫಸಲು, ಕುಯಿಲು, ನೀರು ಹುಡುಕುವಿಕೆ, ಜಲದ ಮೂಲ, ಬಾವಿ ಹುಡುಕುವಿಕೆ ಮುಂತಾದ ನನ್ನ ಇತ್ತೀಚಿನ ತಿಕ್ಕಲುಗಳನ್ನು ಕಂಡು ನರಸಿಂಹ “ಅಣ್ಣಾ, ನೀನು ನಮ್ಮ ಹಾದಿಗೇ ಬಂದೆ" ಅಂದು ನಕ್ಕ.

“ನಾನು ನನ್ನದೇ ಹಾದಿ ಹುಡುಕಿಕೊಂಡು ಹರಡುವ, ತಿರುಗಿಕೊಳ್ಳುವ, ಅಮರಿಕೊಳ್ಳುವ, ವಿಸ್ತಾರಗೊಳ್ಳುವ ಹುಚ್ಚ" ಅಂದೆ.

ಹಿಮಾಗ್ನಿ, ಅಮ್ಮ ಸಿಕ್ಕಿದ್ಲು, ಉಡುಗೊರೆ, ಖಾಸ್‌ಬಾತ್, ಬಾಟಮ್ ಐಟಮ್, ಬಿ.ಬಿ.ಸಿ-ಹೀಗೆ ಎಲ್ಲವನ್ನೂ ಒಮ್ಮೆಲೆ ನಿಮ್ಮ ಮಡಿಲಿಗೆ ಒಪ್ಪಿಸಿದವನಿಗೆ ಮರುದಿನದಿಂದಲೇ ಜೊಯಿಡಾದ ಕಾಡು ನೆನಪಾಗತೊಡಗಿತ್ತು. ಹೊರಡುವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರೆ, ಅದನ್ನು ಮೊದಲು ಗಮನಿಸಿದ್ದೇ ನಿವೇದಿತಾ.

“ರವೀ, ಇನ್ನೆರಡು ದಿನ ಈ ಯಾತ್ರೆ ಮುಂದಕ್ಕೆ ಹಾಕಿ. ನಾನು ಅನಂತಪುರಕ್ಕೆ ಹೋಗಲೇಬೇಕು. ಎಷ್ಟು ದಿನಗಳಾದವು ಕುಮಾರ್‌ನ ನೋಡಿ. He needs me'' ಅಂದಿದ್ದಳು.

ಅವರದಾದರೂ ಒಂಥರಾ ವೀಕೆಂಡ್ ದಾಂಪತ್ಯವೇ. ಒಂದು ಶನಿ-ಭಾನುವಾರ ಇವಳು, ಮತ್ತೊಂದು ವಾರದ ಕೊನೆಗೆ ನಿವಿಯ ಗಂಡ ಕುಮಾರ್ ಬೆಂಗಳೂರಿನಲ್ಲಿ, ಅನಂತಪುರದಲ್ಲಿ ಭೇಟಿಯಾಗುತ್ತಿರುತ್ತಾರೆ. ಆದರೆ ಈ ಮಧ್ಯೆ ಕುಮಾರ್‌ಗೆ ಅನಂತಪುರದಲ್ಲಿ ವಿಪರೀತ ಕೆಲಸ. ಅವರು ಆಂಧ್ರದ ಸರ್ಕಾರಿ ಇಲಾಖೆಯೊಂದರಲ್ಲಿ ಅಧಿಕಾರಿ. ರಜೆ ಸಿಗದು. ರಾಶಿ ಪುಸ್ತಕಗಳ ಕೆಲಸದ ಮಧ್ಯೆ ಹೂತು ಹೋಗಿದ್ದ ನಿವೇದಿತಾಗೂ ಅನಂತಪುರಕ್ಕೆ ಹೋಗಲಾಗಿರಲಿಲ್ಲ. ಜೊಯಿಡಾದ ಹುಚ್ಚು ಕೊಂಚ ಮುಂದಕ್ಕೆ ಹಾಕಿ ನಾನು ಬೆಂಗಳೂರಿನಲ್ಲೇ ಉಳಿದುಕೊಂಡೆ. ನನಗಾದರೂ ಒಂದಷ್ಟು ಕೆಲಸಗಳಿದ್ದವಲ್ಲ?

ಆದರೆ ನಿವಿ ಬಂದ ಸುದ್ದಿ ತಿಳಿದದ್ದೇ ತಡ, ಮೊನ್ನೆ ರಾತ್ರಿ ಸೂಟ್‌ಕೇಸಿಗೆ ಬಟ್ಟೆ, ಹಾಳೆ ತುಂಬಿಕೊಂಡು ಹೊರಟು ಬಿಟ್ಟೆ. ರಾತ್ರಿ ಕಾರಿನ ಹಿಂದಿನ ಸೀಟಿನಲ್ಲಿ ಮುದುರಿ ಮಲಗಿದ್ದವನಿಗೆ ಗೊತ್ತಾಗಲಿಲ್ಲವಾದರೂ ಬೆಳಗ್ಗೆ ದಾಂಡೇಲಿಯಲ್ಲಿ ಕಾರಿನಿಂದ ಇಳಿದೆ ನೋಡಿ? ಆ ಚಳಿಗೆ ನಡುಗಿ ಹೋದೆ. ತಕ್ಷಣ ನರಸಿಂಹನಿಗೆ ಫೋನು ಮಾಡಿ “ಮೊದಲು ಅಂಗಳದಲ್ಲಿ ಚಳಿ ಬೆಂಕಿ ಹಾಕು" ಅಂತ ಫೋನು ಮಾಡಿ ಕಾರಿನ ಅಷ್ಟೂ ಕಿಟಕಿ ಹಾಕಿಸಿ ನನ್ನ ಕಾಡಿನ ಕಡೆಗೆ ಹೊರಟೆ.

ಮೊದಲಾದರೆ ನನಗೆ ಜೊಯಿಡಾದ ಕಾಡ ಮಧ್ಯೆ forest ಬಂಗ್ಲೆಗಳದೇ ರಕ್ಷಣೆ. ಅಲ್ಲಿ ಉಳಿಯಬೇಕೆಂದರೆ ಇಲಾಖೆಯ ಅಧಿಕಾರಿಗಳ ಅನುಮತಿ ಬೇಕು. ಎಲ್ಲ ಕಿರಿಕಿರಿಗಳ ನಡುವೆಯೂ ಅಧಿಕಾರಿಗಳಾದ ಮನೋಜ್, ಲಿಂಗರಾಜು, ಪನ್ವಾರ್ ನನಗೆ ಬಂಗಲೆ ಬಿಟ್ಟುಕೊಡುತ್ತಿದ್ದರು. ಆದರೆ ನನಗೊಂದು ನೆಲೆ ಅಂತ, ನನ್ನದೇ ನೆಲೆ ಅಂತ ಮಾಡಿಕೊಟ್ಟಿರುವುದು ನನ್ನ ತಮ್ಮನಂತಹ ಹುಡುಗ ಜೊಯಿಡಾದ ರವಿ ರೇಡಕರ್. ಅದೊಂದು ಮೂರೂವರೆ ಎಕರೆ, ಕಣಿವೆ ನಡುವಿನ ಬತ್ತ ಬೆಳೆಯುವ ಸಾಂಪ್ರದಾಯಿಕ ಗದ್ದೆ. ಒಂದಷ್ಟು ಜಾಗಕ್ಕೆ ಈಗಷ್ಟೆ ಅಡಿಕೆ ಹಾಕಲಾಗಿದೆ. ಗದ್ದೆ ನಡುವೆ ಎಂಟೇ ಎಂಟು ಅಡಿ ಅಗೆದಿದ್ದರಿಂದ ನೀರು ಬಿದ್ದು ಅಲ್ಲೊಂದು ಹೊಂಡವಾಗಿದೆ. ಕುಡಿಯುವ ನೀರಿಗೆ ರಗಳೆಯಿಲ್ಲ. ಜಮೀನಿನ ಹಿಂದೆ ಹೆಸರಿಲ್ಲದ ಝರಿಯೊಂದು ಹರಿಯುತ್ತದೆ. ಅದಕ್ಕೆ ತಡೆ ನಿರ್ಮಿಸಿ ನೀರು ಶೇಖರಣೆಯಾಗುವಂತೆ ಮಾಡಲಾಗಿದೆ : ಜೊಯಿಡಾದ ಭಾಷೆಯಲ್ಲಿ ಅದು ಕೆರೆ. ಉಳಿದಂತೆ ನನ್ನ ಜಮೀನಿಗೆ ನೆರೆಯವರಿಲ್ಲ. ಸುತ್ತಲೂ ಕಾಡು. ಜಮೀನಿನೊಳಕ್ಕೆ ಕಾಲಿಡುತ್ತಿದ್ದಂತೆಯೇ ಕಾಣುವ ಹಳದಿ ಬಣ್ಣದ, ಮಣ್ಣಿನ ಹಂಚಿನ ಮನೆ. ಅದಕ್ಕೆ ಸಗಣಿ ಸಾರಿಸಿದ ಅಂಗಳ. ಒಳ ಹೊಕ್ಕರೆ ಒಂದು ಉದ್ದನೆಯ ವರಾಂಡ. ಸುಮ್ಮನೆ ಕೂಡಲೊಂದು ಕಟ್ಟೆ. ಎರಡು ಮೆಟ್ಟಿಲೇರಿದರೆ ಬೆಡ್‌ರೂಮು. ಇಬ್ಬರು ಮಲಗಲು ಬೇಕಾದಂಥ ಸಾಗುವಾನಿ ಮಂಚ, ಹಾಸಿಗೆ, ಶುದ್ಧ ಮುಸ್ಲಿಮರ ಮನೆಯಲ್ಲಿ ಬಳಸುವ ಚಮ್ಕಿ ಚಮ್ಕಿ ರಗ್ಗು. ಒಂದೆರಡು ಕಿಂಡಿಯಿವೆ, ಹೆಂಚಿನ ಮಧ್ಯೆ. ಈಗೇನೋ ಬೆಳಕಿದೆ. ಮಳೆಗಾಲದಲ್ಲಿ ಭಗವಂತ ಬಟ್ಟೆ ಬಿಚ್ಚಿ ಬಂದರೂ ಕಾಣಲಾರನೇನೋ? ಇನ್ನೊಂದು ಮೆಟ್ಟಿಲು ಹತ್ತಿದರೆ, ವಾಹ್! ಅದು ಅಡುಗೆ ಮನೆ. ಉಪ್ಪಿಟ್ಟು, ಬಿಸಿಬೇಳೆ ಭಾತು, ಪಾಲಕ್ ಪನ್ನೀರ್, ವಾಂಗಿಭಾತ್, ವಡೆ, ಇಡ್ಲಿ... what not? ಎಲ್ಲವೂ Mama MTR ಕೃಪೆ. ಬೆಂಗಳೂರಿನಿಂದ ಒಯ್ದಿರುತ್ತೇವೆ. ನಮ್ಮ ಸೀನನಿಗೆ ಅವತ್ತೇನು ಮೂಡು ಬರುತ್ತದೋ ಅದೇ ತಿಂಡಿ. ಏಕ್‌ದಮ್ ಗರ್ಮಾ ಗರಂ ಮಾತ್ರ. ಅಡುಗೆ ಮನೆಯಲ್ಲಿ ಕುರುಡುಗಣ್ಣಿನ ಒಂದು ಗ್ಯಾಸ್ ಸ್ಟೋವು. ಕೊಂಚ ಮುಂದಕ್ಕೆ ಬಂದರೆ ಎಡಕ್ಕೆ ಒಂದು ಇಂಗ್ಲಿಷ್ toilet. ಬಲಕ್ಕೆ ಹಂಡೆಯಿಟ್ಟು, ಕಟ್ಟಿಗೆ ಹೂಡಿ ನೀರು ಕಾಯಿಸಿಕೊಂಡು ಲತಾ ಮಂಗೇಶ್ಕರಳಿಂದ ಸೋನು ನಿಗಮ್ ತನಕ ಯಾರ ಹಾಡನ್ನು ಬೇಕಾದರೂ ನಿಮ್ಮದೇ ಸುಶ್ರಾವ್ಯ ದನಿಯಲ್ಲಿ ಹಾಡಿಕೊಳ್ಳಬಹುದಾದ ದಿವ್ಯ ಫೆಸಿಲಿಟಿ.

ಇದನ್ನೆಲ್ಲ ಮಾಡುವುದಕ್ಕೆ ಮುಂಚೆ ಮನೆಯಂಗಳದ ತೆಗ್ಗಿನಲ್ಲಿ ನರಸಿಂಹ ಹಾಕಿದ ಚಳಿ ಬೆಂಕಿಯ ಮುಂದೆ ಒಂದಷ್ಟು ಹೊತ್ತು ಕುಳಿತು ಮೈಕಾಯಿಸಿಕೊಂಡೆ. ಅಲ್ಲೇ ಪಕ್ಕದಲ್ಲಿ ಅವನು ಇನ್ನೊಂದು ವೃತ್ತಾಕಾರದ ತೆಗ್ಗು ತೋಡಿಸಿದ್ದಾನೆ. ಬೆಂಗಳೂರಿನಲ್ಲಿ ನನ್ನ ಆಫೀಸಿಗೆ, ಶಾಲೆಗೆ, ಅಂಗಡಿಗೆ, ಮನೆಗೆ ಕೇಳಿದ ರೀತಿಯ ಫರ್ನೀಚರ್ ಮಾಡಿಕೊಡುವ ಶಕ್ತಿವೇಲು ಎಂಬ ಹುಡುಗ ಒಂದು folding ಟೇಬಲ್ ಮತ್ತು ಛೇರ್ ಮಾಡಿಕೊಟ್ಟಿದ್ದು, ಎರಡನ್ನೂ ನನ್ನ ಕಾರಿನ ಡಿಕ್ಕಿಯಲ್ಲಿ ಇಟ್ಟುಕೊಂಡು ಹೋಗಿದ್ದೆ. ತೆಗ್ಗಿನ ನೆರಳಿನಲ್ಲಿ ಹಾಕಿಕೊಂಡು ಕುಳಿತ ತಕ್ಷಣ ಮೂಗಿಗೆ ಅಡರಿದ್ದು ಆ ವಾಸನೆ.

ಅದು ಸಪೋಟ!

ನೀವು ಚಿಕ್ಕೂ ಅನ್ನುತ್ತೀರಿ.
ನನಗೆ ತಕ್ಷಣ ನೆನಪಾದವಳು ನನ್ನ ಬಾಲ್ಯದ ಟೀಚರ್ ಸುಕುಮಾರಿ. ಆಗ ನಮ್ಮ ಮನೆ ಬಳ್ಳಾರಿಯ ಪ್ರಭಾತ್ ಟಾಕೀಸ್ ಇದುರಿಗಿನ ಥಿಯಾಸಫಿಕಲ್ ಲಾಡ್ಜ್‌ನ ಕಂಪೋಂಡಿನಲ್ಲಿತ್ತು. ಒಂದೇ ಒಂದು ವರ್ಷದ ಮಟ್ಟಿಗೆ ನಾನು ಅಲ್ಲಿಗೆ ಹತ್ತಿರದ ಲಂಡನ್ ಮಿಷನ್ ಸ್ಕೂಲ್‌ನಲ್ಲಿ ಓದಿದ್ದೆ. ಹೆಡ್‌ಮಿಸ್ಟ್ರೆಸ್ ಸೋನಾಬಾಯಿ, ಎಸ್ತರ್ ಟೀಚರ್, ಗುಣವತಿ ಟೀಚರ್, ಅವರೆಲ್ಲರಂತೆಯೇ ಸುಕುಮಾರಿ ಟೀಚರ್. ಆಕೆ ಆಗ ಅವಿವಾಹಿತೆ. ಸೈಕಲ್ ತುಳಿಯುತ್ತಿದ್ದ, ಜೋರು ಗಂಟಲಿನ, ಸುಳ್ಳೇ ಭಿಡೆಗಳಿಲ್ಲದ ಹೆಣ್ಣು ಮಗಳು. ಆಕೆ ಇದಿರಿಗೆ ಸಿಕ್ಕರೆ, ಅವತ್ತಿಗಾಗಲೇ ಲೆಕ್ಚರರ್ ಆಗಿದ್ದ ನನ್ನ ಅಣ್ಣ ಕೂಡ ಹೆದರುತ್ತಿದ್ದ. ಆ ಕಾರಣಕ್ಕಾಗಿ ಅತ್ಯಂತ ತುಂಟನಾಗಿದ್ದ ನನ್ನನ್ನು ಅಮ್ಮ ಸುಕುಮಾರಿ ಟೀಚರ್ ಮನೆಗೆ ಟ್ಯೂಷನ್ನಿಗೆ ಕಳಿಸುತ್ತಿದ್ದಳು. ಸುಕುಮಾರಿ ಟೀಚರ್ ಅಂದ ಕೂಡಲೆ ನನಗೆ ಇವತ್ತಿಗೂ ನೆನಪಾಗುವುದು ಅವರ ಕಂಪೋಂಡಿನ ತುಂಬ ಇದ್ದ ಸಪೋಟ ಗಿಡಗಳ ಘಮ, ‘ರವಿಯಾ...’ ಎಂಬ ಆಕೆಯ ಕೂಗು ಮತ್ತು ಆಕೆಯ ಲೇಡೀಸ್ ಸೈಕಲ್ಲು.

ನೋಡಿ, ಅವೆಲ್ಲ ಹೇಗೆ ಒಂದು ಕ್ಷಣದಲ್ಲಿ connect ಆಗಿ ಹೋದವೋ! ಕಾಡ ಮಧ್ಯದ ಜಮೀನಿನಲ್ಲಿರುವ ಆ ಮಣ್ಣ-ಹೆಂಚಿನ ಮನೆಯ ಮುಂದಿನ ಪುಟ್ಟ ವೃತ್ತಾಕಾರದ ತೆಗ್ಗಿನಲ್ಲಿ ಕುರ್ಚಿ ಹಾಕಿಕೊಂಡು ಕುಳಿತವನಿಗೆ ಮನಸ್ಸಿಗೆ ಏನೋ ನೆಮ್ಮದಿ. ಯಾಕೋ ಸಂತೋಷ. ಇದನ್ನೆಲ್ಲ ನಾನು ಮಳಗಾಂವಕರ್‌ರ ಅನುಕರಣೆಯಾಗಿ ಮಾಡುತ್ತಿದ್ದೇನಾ? ಗೊತ್ತಿಲ್ಲ. ಕಾಡು ನನ್ನನ್ನು ಈ ಪರಿ ಆಕರ್ಷಿಸುವುದಾದರೂ ಏಕೋ ಗೊತ್ತಿಲ್ಲ. ಶುದ್ಧ ಬಯಲು ಸೀಮೆಯವನು ನಾನು. ಇಡೀ ಬಳ್ಳಾರಿ ಜಿಲ್ಲೆಯ ಒಂದು ಪ್ಯಾಚ್‌ನಂತೆ ಸಂಡೂರಿನ ಕಾಡಿತ್ತು. ಮೈನ್ಸ್‌ನ ಹಾವಳಿಯಲ್ಲಿ ಅದರ ನಾಮಾವಶೇಷ ಉಳಿದಿಲ್ಲ. ನಾನೀಗ ಜಮೀನು ಕೊಂಡಿರುವುದು ಪಾಂಜೇಲಿ ಎಂಬ ಹಳ್ಳಿಯಲ್ಲಿ. ಅಲ್ಲಿ ಇನ್ನೊಂದೆರಡು ಮನೆಗಳಿರಬಹುದೇನೋ? ಪಾಂಜೇಲಿಯಿಂದ ಹೊರಟರೆ ಸರಿಯಾಗಿ ಆರು ಕಿಲೋ ಮೀಟರುಗಳಾಚೆಗೆ ನಗೋಡಾ ಕ್ರಾಸ್ ದೊರೆಯುತ್ತದೆ. ಎಡಕ್ಕೆ ಎರಡು ಕಿಲೋ ಮೀಟರು ದೂರದಲ್ಲಿ ರವಿ ರೇಡಕರ್ ಮನೆಯಿರುವ ಜೊಯಿಡಾ ತಾಲೂಕು ಕೇಂದ್ರವಿದೆ. ಇಡೀ ಜೊಯಿಡಾ ತಾಲೂಕಿನ 87% ಕಾಡು. ಅಂದರೆ ಕೃಷಿಗೆ ಅಯೋಗ್ಯ. ಜೊಯಿಡಾ ತಾಲೂಕು ಕೇಂದ್ರವಾದರೂ ಅಲ್ಲಿ ಆಸ್ಪತ್ರೆಯಿಲ್ಲ. ಖಾಸಗಿ ಡಾಕ್ಟರೂ ಇಲ್ಲ. ಕಡೆಗೆ ಒಬ್ಬ chemist ಕೂಡ ಇಲ್ಲ. ಕೆಲವು ಹಳ್ಳಿಗಳಲ್ಲಿ ಜನ ಖಾಯಿಲೆ ಬಿದ್ದರೆ ಕಂಬಳಿಯಲ್ಲಿ ಸುತ್ತಿ ನಾಲ್ಕು ಜನ ಎತ್ತಿಕೊಂಡು ಹೋಗಬೇಕು. ಒಂದೇ ಒಂದು ಬೆಳೆ ಬತ್ತದ ಹೊರತು, ಅಲ್ಲಿ ಮತ್ತೇನೂ ಬೆಳೆಯಲು ಸಾಧ್ಯವಿಲ್ಲ. ಬದುಕು ಎಷ್ಟು ದುರ್ಭರವೆಂದರೆ ಜೊಯಿಡಾದ ಅರ್ಧ ಜನಸಂಖ್ಯೆಯಾದ ಕುಣಬಿಗಳು, ದೇಸಾಯಿಗಳು ಬತ್ತದ ಬೆಳೆ ತೆಗೆದಾದ ಮೇಲೆ ಗೋವೆಗೆ ಕೂಲಿಗೆ ಹೋಗಿ ಬಿಡುತ್ತಾರೆ. ಹೀಗಾಗಿ ಜೊಯಿಡಾದಲ್ಲಿ ಒಂದು square kilo metreಗೆ ಬದುಕುತ್ತಿರುವವರು ಮೂರೇ ಜನ. ಪ್ರತಿಯೊಬ್ಬರ ಸಮಸ್ಯೆಯನ್ನೂ ಹಿಡಿದುಕೊಂಡು ರವಿ ರೇಡಕರ್ ಬಡಿದಾಡುತ್ತಾನೆ. ಅವನಿಗಾದರೂ ದೊಡ್ಡ ಆದಾಯವಿದೆಯಾ? ಕೇಳಲೇಬೇಡಿ.

ಹೇಳಿದೆನಲ್ಲ, ಪಾಂಜೇಲಿಯಿಂದ ನಗೋಡಾ ಮಧ್ಯೆ ಆರು ಕಿಲೋ ಮೀಟರಿನ ರಸ್ತೆಯಿದೆ ಅಂತ. ಅಲ್ಲಿಂದ ಸೂಪಾ ಡ್ಯಾಮ್ 23ಕಿಲೋ ಮೀಟರ್ ಇದೆ. ಅಕಸ್ಮಾತ್ ವಿಪರೀತ ಮಳೆಯಾಗಿ ಡ್ಯಾಮ್ ತುಂಬಿದರೆ ಈ ರಸ್ತೆಯ ಒಂದು ಭಾಗ ಮುಳುಗಿ ಹೋಗುತ್ತದೆ. ಸರ್ಕಾರ ತಂದಿಡುವ ದೋಣಿಯಲ್ಲಿ ನೀವು, ನಿಮ್ಮ ತರಕಾರಿ, ಕುರಿ, ಬೈಕು, ಹೆಂಡತಿ ಹತ್ತಿಕೊಂಡು ಬರಬೇಕು.

ಇಲ್ಲಿ ಸುರಿಯುವ ಮಳೆಯಾದರೂ ಎಂತಹುದು? My Goodness. ಸಾಮಾನ್ಯವೆಂದರೂ ಎಂಟು-ಹತ್ತು ದಿನ ಸತತ ಹುಯ್ಯುತ್ತದೆ. ಅದಕ್ಕೆ ತಿಕ್ಕಲು ತಿರುಗಿತೋ? ಹದಿನೈದು ದಿನ ಬಿಟ್ಟೂ ಬಿಡದೆ ಸುರಿಯುತ್ತದೆ. ಒಮ್ಮೆ ಪಾಂಜೇಲಿಗೆ ಹೋಗಿ ಸಿಕ್ಕು ಬಿದ್ದರೆ ಹದಿನೈದು ದಿನ you are locked. ಕರೆಂಟಿದ್ದರೆ ಇತ್ತು : ಇಲ್ಲದಿದ್ದರೆ ಕತ್ತಲೆಯಲ್ಲೇ ಖಸಕ್ ಮಸಕ್. ಆನಂದದ ಸಂಗತಿಯೆಂದರೆ, ಹಾಗೆ ಸಿಕ್ಕು ಬಿದ್ದಾಗ ಅನಾಮತ್ತು ಒಂದು ಕಾದಂಬರಿ ಬರೆದು, ಅದನ್ನೆತ್ತಿಕೊಂಡೇ ಪಾಂಜೇಲಿಯ ಮನೆಯಿಂದ ಹೊರಟು ಬಿಡಬಹುದು.

ಹಾಗೆ ಪಾಂಜೇಲಿಯಿಂದ ನೀವು ನಗೋಡಾಕ್ಕೆ ಬಂದು ಬಲಕ್ಕೆ ತಿರುಗಿದರೆ ಅಲ್ಲಿಂದ ಸರಿಯಾಗಿ 20 ಕಿಲೋ ಮೀಟರು ದೂರದಲ್ಲಿದೆ ದಾಂಡೇಲಿ. ಏನೇ ಕೊಳ್ಳಬೇಕೆಂದರೂ ಅಲ್ಲಿಗೇ ಬರಬೇಕು. ಆದರೆ ನೀವು ನಿಜಕ್ಕೂ ನಿಸರ್ಗ ಪ್ರಿಯರಾದರೆ ನನ್ನ ಜಮೀನಿನ ಇದುರಿಗಿರುವ ಕಾಡಿಗೇ ಬರಬೇಕು. ಕಾಡು ಅಂದ ಕೂಡಲೆ ಒಂದಷ್ಟು ದಟ್ಟ ಮರಗಳ ಕಲ್ಪನೆ ಎಲ್ಲರಿಗೂ ಇರುತ್ತದೆ. ಅದಲ್ಲ ವಿಷಯ. ಕೆಲವೆಡೆ ನಿಮಗೆ ಉದುರೆಲೆ ಕಾಡು ಅಂತ. ಅತಿ ಹೆಚ್ಚು ಕಾಳ್ಗಿಚ್ಚು ಬೀಳುವುದೇ ಈ ಕಾಡುಗಳಲ್ಲಿ ಮತ್ತು ಅತಿ ಎತ್ತರದ, ಘನವಾದ ಮರಗಳಿರುವುದೂ ಇಲ್ಲೇ. ಆ ಕಡೆ ಸಮುದ್ರದ ದಿಕ್ಕಿಗೆ ಹೋದಂತೆಲ್ಲ ನಿಮಗೆ ‘ಕಾಂಡ್ಲ’ ಎಂಬ ರೀತಿಯ ಕಾಡು ಸಿಗುತ್ತದೆ. ಅದಕ್ಕೆ ಕಾಂಡ್ಲ ವನ ಅಂತಲೇ ಅಂತಾರೆ. ಅದು ಬಿಟ್ಟರೆ ನಿತ್ಯ ಹರಿದ್ವರ್ಣದ ಕಾಡು ಎಂಬುದು ಒಂದು ವೆರೈಟಿ. ಸೂರ್ಯನ ಕಿರಣ ನೆಲಕ್ಕೆ ತಾಕದಷ್ಟು ದಟ್ಟವಾದ, ಮಹಾನ್ ದೊಡ್ಡ ವೃಕ್ಷಗಳಿಲ್ಲದ ಒಂದು ಕಡೆ ಎಲೆಯುದುರಿದರೂ ಇನ್ನೊಂದು ಕಡೆ ಸಮೃದ್ಧವಾಗಿ ಚಿಗುರುತ್ತಲೇ ಇರುವ ಸೊಗಸಾದ ಕಾಡು : Ever green forest. ಇಲ್ಲಿ ಬೆಂಕಿ ಬೀಳುವುದೇ ಇಲ್ಲ. ಇದರಲ್ಲಿ ಮತ್ತೆ ಅರೆ ನಿತ್ಯಹರಿದ್ವರ್ಣದ ಕಾಡು ಬೇರೆ ಇದೆ.

ನನ್ನ ಅದೃಷ್ಟವೆಂದರೆ, ನನ್ನ ಜಮೀನು ಕೊನೆಯಾಗುವ ಜಾಗದಿಂದಲೇ ನಿತ್ಯ ಹರಿದ್ವರ್ಣದ ಕಾಡು ಆರಂಭವಾಗುತ್ತದೆ. ಆ ವ್ಯತ್ಯಾಸ ನಿಮಗೆ ಸುಮ್ಮನೆ ನಿಂತರೆ ನಿಚ್ಚಳವಾಗಿ ಕಾಣಬಹುದು. ಎದುರಿಗಿರುವ ಕಾಡಿದೆಯಲ್ಲ? ಅದು ನನ್ನ ಪಾಲಿಗೆ ಸಾವಿರ ಸಾವಿರ ಕಲ್ಪನೆಗಳನ್ನ, ಫ್ಯಾಂಟಸಿಗಳನ್ನ, ಕಥೆ-ಉಪ ಕಥೆಗಳನ್ನ ಮೂಡಿಸಬಲ್ಲ ಖಜಾನೆ. ಅಲ್ಲಿ ಭರ್ತಿ ಅಶೋಕ ವೃಕ್ಷಗಳಿವೆ. ನೀವು ನಗರಗಳಲ್ಲಿ ನೋಡುವ ashoka treeಗಳಲ್ಲ. ಅವು ಔಷಯ ಗುಣದ ಅಶೋಕ ವೃಕ್ಷಗಳು. ಶುದ್ಧ ವನದಂತೆ ಬೆಳೆಯುತ್ತವೆ. ಈಗಷ್ಟೆ ಅಶೋಕ ವೃಕ್ಷ-ಗಿಡ ಹೂ ಬಿಡತೊಡಗಿವೆ. ಮುದ್ದಾದ ಹುಡುಗಿಯ ಕಡುಗೆಂಪನೆಯ ತುಟಿಯಂತಹ ಹೂವು. “ನಿಮ್ಮ birth day ಹೊತ್ತಿಗೆ ಇಡೀ ಕಾಡು ಕೆಂಪಾಗಿರುತ್ತದೆ" ಅಂದ ನರಸಿಂಹ.

ಆದರೆ ನನ್ನನ್ನು ಯಾವುದೋ ದಿವ್ಯ ಕಲ್ಪನೆಗಳಿಗೆ ಕರೆದೊಯ್ದದ್ದು ಆ ಕಾಡಿನಲ್ಲಿ ಬೆಳೆದುಕೊಂಡಿರುವ ಬಳ್ಳಿಗಳು! ನೀವು ನಂಬಲಿಕ್ಕಿಲ್ಲ, ಒಂದೊಂದು ಬಳ್ಳಿ ಕನಿಷ್ಠ ಪಕ್ಷ 300 ವರ್ಷಗಳಿಗಿಂತ ಹಳೆಯದು. ಎಲ್ಲಿಂದ ಬೆಳೆದು ಎಲ್ಲಿ ಮಲಗಿ ಹರಿದು, ಯಾವ ಮರ ಅವಚಿ, ಯಾವ ಪುಟ್ಟ ಗಿಡದ ಸೊಂಟ ತಬ್ಬಿ, ಕತ್ತು ಕಿವುಚಿ, ಎಲ್ಲಿಗೆ ಹೋಗಿ ರಾಕ್ಷಸ ರೂಪ ಪಡೆದು, ನಿಂತಲ್ಲೇ ಸುಳಿದಿರುಗಿ, ತನ್ನನ್ನು ತಾನೇ ಸುತ್ತಿಕೊಂಡು, ಕಡೆಗೆ ಎಲ್ಲಿ ಅಂತ್ಯವಾಗುತ್ತದೆ ಎಂಬುದೇ ಗೊತ್ತಾಗದಂತಹ ಈ ಅಜಗರ ಗಾತ್ರದ ಬಳ್ಳಿಗೆ ಹೆಸರಿದೆಯಾ? ಗೊತ್ತಿಲ್ಲ. ಇವುಗಳಿಗೆ ಎಲೆಯಿವೆಯಾ? ಕಾಣಿಸಲಿಲ್ಲ. ಕೆಲವುಗಳ ಮೇಲೆ ಕೂಡಬಹುದು, ಚಕ್ಕಳ ಮಕ್ಕಳ. ಕೆಲವುಗಳ ಮೇಲೆ ಮಲಗಬಹುದು. ಕೆಲವನ್ನು ತಬ್ಬಿ ಗೆಳೆಯನ ಹೆಗಲ ಮೇಲೆ ತಲೆಯಿಟ್ಟು ಬಿಕ್ಕಿದಂತೆ ಬಿಕ್ಕಬಹುದು. ಕೆಲವು ಬಳ್ಳಿಗಳೊಂದಿಗೆ ಸುಮ್ಮಗೆ ಬೆಳೆಯುತ್ತ, ಹರಡುತ್ತ, ತಿರುವು ತಿರುಗುತ್ತ, ಅವಚುತ್ತ, ಅಮರುತ್ತ ನಾವೂ ಮುನ್ನೂರು ವರ್ಷ ಕಳೆದು ಬಿಡಬಹುದು ಅನ್ನಿಸಿತು.

ಯಾರವೂ ಅಲ್ಲದ ಈ ಕಾಡಿನಲ್ಲಿ ನನ್ನ ಕುರ್ಚಿ-ಟೇಬಲ್ಲು ಹಾಕಿಕೊಂಡು ಬೆಳಗಿನ ಜಾವಕ್ಕೇ ಬರೆಯಲು ಕೂತರೆ, ಅದೇನು ಮಹಾಕಾವ್ಯವಾದೀತೋ ಇಲ್ಲವೋ? ಆ ಮಾತು ಬೇರೆ. ಜಗತ್ತನ್ನಂತೂ ಮರೆತು ಬರೆಯುತ್ತೇನೆ. ಅಷ್ಟು ಸಾಕು.
ನಾನು ಹೋದ ಮರುದಿನ ಸಿದ್ಧಾಪುರದ ಬಳಿಯ ಐನಕೈಯಿಂದ ರಾಮಕೃಷ್ಣ ಅಣ್ಣ ಬಂದ. ಆ ಸೀಮೆಗೆ ಹೋದರೆ ಅಣ್ಣನನ್ನು ಕಾಡದೆ, ಕಾಣದೆ ನಾನು ಹಿಂತಿರುಗುವುದಿಲ್ಲ. ಜಮೀನೆಲ್ಲ ನೋಡಿ ಬಂದವನು “ಇಂಥ ಕಡೆ ಒಂದು ಬಾವಿ ತೋಡಿಸು" ಅಂತ ಸಲಹೆ ಕೊಟ್ಟ. “ಕಡೆಗೆ, ಈ ಮನೆಗೊಂದು ಹೆಸರು ಬ್ಯಾಡವಾ?" ಅಂದ.

“ವೃಕ್ಷಗಂಧ!" ಅಂದೆ.

ಅದು ನನ್ನ ಕಾದಂಬರಿಯ ಹೆಸರೂ ಹೌದು.

ನಿಮ್ಮವನು
ಆರ್.ಬಿ.

Read Archieves of 20 February, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books