Ravi Belagere
Welcome to my website
ಇದು 2012ರ ಫೆಬ್ರವರಿ 14ರ ವ್ಯಾಲಂಟೈನ್ಸ್ ಡೇಗೆ ಸಮಸ್ತ ಪ್ರೇಮಿಗಳಿಗಾಗಿ ನಾನು ಕೊಡುತ್ತಿರುವ ಅಕ್ಕರೆಯ gift : ‘ಒಲವೇ...’. ಅರವತ್ತು ನಿಮಿಷಗಳ ಅರ್ಥಪೂರ್ಣ ಧ್ವನಿ ಮುದ್ರಿಕೆ. ಅಪ್ಪ-ಅಮ್ಮನ ನೆರಳಲ್ಲಿ ಮುದ್ದಾಗಿ ಬೆಳೆದ ಹುಡುಗಿ, ಅಷ್ಟೇ ಬೆಚ್ಚನೆಯ ಆರೈಕೆಯಲ್ಲಿ ಚೆಂದಗೆ ಬೆಳೆದ ಹುಡುಗ ಅದ್ಯಾವ ಮಾಯೆಯಲ್ಲೋ ಒಬ್ಬರನ್ನೊಬ್ಬರು ಪ್ರೀತಿಸತೊಡಗುತ್ತಾರೆ. ಅಲ್ಲಿಂದ ಶುರುವಾಗುತ್ತೆ ಅವರ ಪ್ರೇಮ ಯಾತ್ರೆ. ಫೆಬ್ರವರಿ 14 ನಿಮ್ಮ ಗೆಳೆಯ ಅಥವಾ ಗೆಳತಿಯನ್ನು ಭೇಟಿಯಾದಾಗ ಪ್ರೀತಿಯಿಂದ ‘ಒಲವೇ’ ಸಿಡಿ ಕೊಡಿ. ಅಷ್ಟೇ ಅಲ್ಲ, ಇಬ್ಬರೂ ಒಟ್ಟಿಗೇ ಕೂತ್ಕೊಂಡು ಸಮಾಧಾನವಾಗಿ ಕೇಳಿ. Be sure. ನಿಮ್ಮ ಒಲವು ಫಲಿಸುತ್ತೆ. ಮನಸು ಮುದಗೊಳ್ಳುತ್ತೆ. ಆಮೇಲೆ ಯಾವತ್ತೇ ಮನಸ್ಸಿಗೆ ಬೇಕೆನ್ನಿಸಿದರೂ ನೀವು ‘ಒಲವೇ...’ ಸಿಡಿ ಕೇಳ್ತಾನೇ ಇರ‍್ತೀರಿ...
Home About Us Gallery Books Feedback Prarthana Contact Us

ಡೀಟೇಲ್ಸ್ ಎಂಬುದು ಮರೆಯದ ಮೈಯ ಮಚ್ಚೆಯ ಹಾಗೆ!

ಅದು ನನ್ನ ಕಾದಂಬರಿ ‘ಹಿಮಾಗ್ನಿ’ಯಲ್ಲಿ ಬರುತ್ತೆ. ನೀವು ಓದಬೇಕು. Attention to the details ಅಂತಾರೆ ಅದಕ್ಕೆ. ಜಗತ್ತಿನಲ್ಲಿ ಇದು ಮೊದಲಿನಿಂದಲೂ ಇದ್ದಂತಹುದೇ. ಆದರೆ ಇಸ್ರೇಲ್‌ನ ಬೇಹು ಸಂಸ್ಥೆಯಾದ ‘ಮೊಸಾದ್’ ಇದನ್ನುspecialise ಮಾಡಿಕೊಂಡಿತು. ಅದನ್ನೇ ಭಾರತದ ಬೇಹು ಪಡೆ RAW ಅಳವಡಿಸಿಕೊಂಡಿತು.

ಒಬ್ಬ ಬೇಹುಗಾರನಿಗೆ ಅವನ ತರಬೇತಿಯ ಅವಯಲ್ಲೇ ಅದನ್ನು ಕಲಿಸಲಾಗುತ್ತದೆ. ಕಲಿಸಲಾಗುತ್ತದೆ ಎಂಬುದಕ್ಕಿಂತ ಹೆಚ್ಚಾಗಿ ರೂಢಿ ಮಾಡಿಸಲಾಗುತ್ತದೆ. ಸಾಮಾನ್ಯವಾಗಿ ಪತ್ರಕರ್ತರಿಗೆ ಮತ್ತು ಕೆಲವು ಜಾಡು-ಜಾಯಮಾನದ ಬರಹಗಾರರಿಗೆ ಇದು ಜನ್ಮತಃ ಅಥವಾ ಸ್ವಭಾವತಃ ಒಂದು ಗುಣವಾಗಿ ಬಂದುಬಿಟ್ಟಿರುತ್ತದೆ. ಜಗತ್ತಿನಲ್ಲಿ sportsನಿಂದ ಹಿಡಿದು ಭಾಷಣ ಕಲೆಯ ತನಕ ಏನನ್ನೇ ಮಾಡಿ, ಕೀರ್ತಿ-ಯಶಸ್ಸು ಗಳಿಸಿಕೊಂಡ ವ್ಯಕ್ತಿಯನ್ನು ನೋಡಿ-ಅವನಲ್ಲಿ ಈ ಗುಣವಿರುತ್ತದೆ.


“ನಿಮಗೆ ಅಷ್ಟೆಲ್ಲ ಹೇಗೆ ನೆನಪಿರ‍್ತದೆ? ನಿಮ್ಮ ನೆನಪಿನ ಶಕ್ತಿ ಬಿಡೀಪ್ಪಾ ಅದ್ಭುತ. ಅದ್ಹೇಗೆ ಅಷ್ಟೆಲ್ಲ ನೆನಪಿಟ್ಟುಕೊಳ್ತೀರಿ?" ಎಂದೆಲ್ಲ ನನ್ನನ್ನು ತುಂಬ ಜನ ಕೇಳುತ್ತಿರುತ್ತಾರೆ.

Actually speaking, ಇದು ನೆನಪಿನ ಶಕ್ತಿಗಿಂತ ಹೆಚ್ಚಾಗಿ attention to the details ಎಂಬ ವಿದ್ಯೆಗೆ ಸಂಬಂಸಿದ ಸಂಗತಿ. ನೆನಪಿನ ಶಕ್ತಿ ಕೆಲ ವಿಷಯಗಳಲ್ಲಿ ಎಷ್ಟು ಬಲಹೀನ ಅಂದರೆ ನನಗೆ ನನ್ನ ಯಾವ ಕಾರಿನ ನಂಬರೂ ನೆನಪಿಲ್ಲ. ಮನೆಯಿರುವ ಕ್ರಾಸು ಮರೆತು ಹೋಗುತ್ತೇನೆ. ವಾರ-ತಾರೀಕು ಅಯೋಮಯ. ಆದರೆ ಇಪ್ಪತ್ತೈದು ವರ್ಷಗಳ ಹಿಂದೆ ಇಂಟರ್‌ವ್ಯೂ ಮಾಡಿದ ಒಬ್ಬ ರೌಡಿ, ಅವತ್ತು ಯಾವ ಬಣ್ಣದ ಷರಟು ಹಾಕಿಕೊಂಡಿದ್ದ? ಎಲ್ಲಿ ನಿಂತಿದ್ದ? ಅವನ ದನಿಯ ಗಡಸು-ಗರಸು ಹೇಗಿತ್ತು? Yes, ನನಗೆ ನೆನಪಿರುತ್ತವೆ. ಓದಿದ ಪುಸ್ತಕದ ಪ್ರತಿ ಸಾಲೂ, ಪ್ರತಿ ಘಟ್ಟ ನೆನಪಿರುತ್ತದೆ. ಕೆಲವೊಮ್ಮೆ ಯಾವುದೋ data ಉಳಿದು, ಮಿಕ್ಕಿದ್ದೆಲ್ಲ delete ಆಗಿ ಬಿಟ್ಟಿರುತ್ತದೆ.

ನೋಡಿ, ಮೊಸಾದ್ ಅಥವಾ RAWದ ಬೇಹುಗಾರನೊಬ್ಬನನ್ನು ಒಂದು ಹೊಟೇಲಿಗೆ ಕಳಿಸುತ್ತಾರೆ. ಮಸ್ತು ಜಂಗುಳಿ ಸೇರುವ ಹೊಟೇಲು ಅದು. ಬೇರೇನೂ ಮಾಡಬೇಕಿಲ್ಲ. ಬೆಳಿಗ್ಗೆ ಒಂಬತ್ತರಿಂದ ಸಂಜೆ ಐದರ ತನಕ ಆ ಹೊಟೇಲಿನಲ್ಲಿ ಏನು ನಡೆಯಿತು ಅನ್ನೋದನ್ನ ಗಮನಿಸಿ, ಸಂಜೆ ಬಂದು ಒಂದು ವರದಿ ಕೊಡು ಅನ್ನುತ್ತಾರೆ. ಅವನು ಹೇಗೆ ವರದಿ ಮಾಡುತ್ತಾನೆ? ಗ್ರಹಿಸುತ್ತಾನೆ? ಯಾಂತ್ರಿಕವಾ? ಉತ್ಪ್ರೇಕ್ಷೆ? Detailsಗೆ ಹೋಗುತ್ತಾನೆ? Pin to pin ವಿವರಗಳಿವೆಯಾ? ಕೆಲವನ್ನು ಕೈ ಬಿಡುತ್ತಾನಾ? ಅವನಿಗೇ ಗೊತ್ತಿಲ್ಲದ ಒಂದು ಸಂಗತಿಯೆಂದರೆ, ಅದೇ ಹೊಟೇಲಿನಲ್ಲಿ ಅದೇ Mossad ಅಥವಾ RAWದ ಇನ್ನೊಬ್ಬ ಅಕಾರಿ ಕೂಡ ಕುಳಿತುಕೊಂಡು ಅದೇ ತರಹದ notes ಮಾಡಿಕೊಳ್ಳುತ್ತಿರುತ್ತಾನೆ. Notes ಅಂದರೆ, ಯಾವುದನ್ನೂ ಅಲ್ಲಿ ಕುಳಿತು ಬರೆದುಕೊಳ್ಳೋ ಹಾಗಿಲ್ಲ. ನಿಮ್ಮ ಕೆಲಸವೇನಿದ್ದರೂ ಕಣ್ಣಿಗೆ, ನೆನಪಿಗೆ, ಮನಸಿಗೆ, ನೆನಪಿನ ಕೆಮೆರಾಕ್ಕೆ.

ವಾಪಸು ಬಂದ ಮೇಲೆ ಎರಡೂ ವರದಿಗಳನ್ನು ಹಿರಿಯನೊಬ್ಬ ಕುಳಿತು compare ಮಾಡುತ್ತಾನೆ. ಇದು ಬೇಹುಗಾರರಿಗೆ ಕಡ್ಡಾಯವಾಗಿ ಕೊಡುವ ತರಬೇತಿ. ಸ್ಪೈ ಕೆಮೆರಾ ಎಲ್ಲಿದೆ ಎಂಬುದರಿಂದ ಹಿಡಿದು ಬೇರೆ ಯಾವ್ಯಾವ ತರಹದ ಉಪಕರಣಗಳನ್ನು ಎಲ್ಲೆಲ್ಲಿ ಅಳವಡಿಸಿದ್ದಾರೆ ಎಂಬುದರ ತನಕ ಪ್ರತಿ ವಿವರವನ್ನೂ ಬೇಹುಗಾರ ಗುರುತಿಸಬೇಕು. ನೀವು ನಂಬಲಿಕ್ಕಿಲ್ಲ. ಇಸ್ರೇಲ್‌ನ ಬೆನ್ ಗುರಿಯನ್ ಏರ್ಪೋರ್ಟಿನಲ್ಲಿ ಒಂದೇ ಒಂದು ಲೌಂಜ್‌ನಲ್ಲಿ ಅನಾಮತ್ತು ನೂರೈವತ್ತು ಕೆಮೆರಾಗಳನ್ನು ಫಿಕ್ಸ್ ಮಾಡಿದ್ದಾರೆ.


ನನ್ನನ್ನು ಭಾರತಕ್ಕೆ ಕಳಿಸಿಕೊಡಲು ಕರ್ನಾಟಕದ ಹುಡುಗರಾದ ಆಲ್ವಿನ್ ಮತ್ತು ರೋನಿ ಬಂದಿದ್ದರು. ಒಂದು ವಾರ ಜೊತೆಯಲ್ಲಿದ್ದು ಇಡೀ ದೇಶ ಸುತ್ತಿಸಿ, ಊಟ ಮಾಡಿಸಿ, ಪುಸ್ತಕ ಕೊಡಿಸಿ, ಹತ್ತಾರು ಜನರನ್ನು ಭೇಟಿ ಮಾಡಿಸಿ, ತಮ್ಮ ಕಷ್ಟ ಸುಖ ಹೇಳಿಕೊಂಡು ಸ್ವಂತ ತಮ್ಮಂದಿರೇನೋ ಎಂಬಂತಾಗಿ ಹೋಗಿದ್ದ ಹುಡುಗರು. ನಾನು ಹೊರಡುವ ಹೊತ್ತಿಗೆ ಇಬ್ಬರ ಕಣ್ಣಲ್ಲೂ ನೀರು. ನಾನೂ ಭಾವುಕನಾಗಿದ್ದೆ. ಆ ಕ್ಷಣದ ಅವಸರದಲ್ಲಿ ಅವರನ್ನು hug ಮಾಡಿಕೊಂಡು ಹೊರಟುಬಿಟ್ಟೆ. ಭಯಂಕರ ಕ್ಲಿಷ್ಟವಾದ ತಪಾಸಣೆ ಮುಗಿಸಿಕೊಂಡು ಒಳಕ್ಕೆ ಹೋದ ತಕ್ಷಣ ಗೊತ್ತಾಯಿತು, ನನ್ನ phone ಅಲ್ಲೇ ಬಿಟ್ಟು ಬಂದಿದ್ದೇನೆ. ಜಗತ್ತೇ ಒಮ್ಮೆಲೆ disconnect ಆದಂತಾಯಿತು.

ನೋಡಿ, ಆಗಲೇ ಕೆಲಸಕ್ಕೆ ಬರೋದು details. ನಾವು ಕುಳಿತಿದ್ದುದು ವಿಶಾಲವಾದ ಲೌಂಜ್‌ನ ಫಾರ್ಮಸ್ಯುಟಿಕಲ್ಸ್ ಅಂಗಡಿಯ ಮುಂದೆ. ಅಲ್ಲಿಂದ, ಅಂಗಡಿಯ ಹೆಬ್ಬಾಗಿಲಿನಿಂದ ಆರನೇ ಟೇಬಲ್ಲು. ನಾನು ಕೂತದ್ದು ಲೌಂಜ್‌ನ ಪ್ರವೇಶಕ್ಕೆ ಬೆನ್ನು ಮಾಡಿ. ಟೇಬಲ್ಲಿನ ಮೇಲೆ ಅರ್ಧ ತಿಂದ ಸ್ಯಾಂಡ್‌ವಿಚ್ ಹಾಗೂ ಮೂರು ಖಾಲಿ ಕಾಫಿ ಕಪ್‌ಗಳಿವೆ. ಒಂದು ash trayನಲ್ಲಿ ಮೂರು ಆರಿದ ಮಾರ‍್ಲ್‌ಬರೋ ತುಣುಕು. ಚಿತ್ರವೆಷ್ಟು ಕರಾರುವಾಕ್ಕಾಗಿ ಕಣ್ಣಿಗೆ ಕಟ್ಟಿತ್ತೆಂದರೆ, ಅಮ್ಮಾನ್ ಏರ್ಪೋರ್ಟಿಗೆ ಬಂದ ಕೂಡಲೆ ಆಲ್ವಿನ್ ಮತ್ತು ರೋನಿಗೆ mail ಕಳಿಸಿದೆ. ಅದಿಷ್ಟೂ ವಿವರ ಕಳಿಸಿದೆ. ತಕ್ಷಣ ಅವರು ಏರ್ಪೋರ್ಟಿಗೆ ಹೋದರು. ಕರಾರುವಾಕ್ಕಾಗಿ, ನಲವತ್ತೈದು ನಿಮಿಷದ ನಂತರವೂ ನನ್ನ ಇಂಟರ್ನ್ಯಾಷನಲ್ ರೋಮಿಂಗ್ ಇದ್ದ ಫೋನು ಅದೇ ಟೇಬಲ್ಲಿನ ಮೇಲಿತ್ತು.


ಇದೊಂದು ಘಟನೆಯಷ್ಟೆ. ನೀವು ವೆಂಕಟೇಶಮೂರ್ತಿಯವರ ‘ಅನಾತ್ಮಕಥನ’ ಓದಿ. ಅದರಲ್ಲಿ ಅವರು ತಮ್ಮ ಮದುವೆಯ ಮೊದಲ ರಾತ್ರಿಯ details ಬರೆಯುತ್ತಾರೆ. ಆಗ ಅದು ಏನೂ ಅನ್ನಿಸುವುದಿಲ್ಲ. ಆದರೆ ಕಡೆಗೆ ಅವರ ಶ್ರೀಮತಿಯವರಿಗೆ ಲಿವರ್ನ ತೊಂದರೆಯಿಂದಾಗಿ ತಾತ್ಕಾಲಿಕ ಮತಿ ಭ್ರಮಣೆಯಾಗುತ್ತದೆ. ಒಂದು ರಾತ್ರಿ ಆಕೆ ಕೋಣೆ ಸೇರಿಕೊಂಡುಬಿಡುತ್ತಾರೆ. ಎಷ್ಟೋ ಹೊತ್ತಿನ ನಂತರ ಒಳ ಹೋಗಿ ನೋಡಿದರೆ, ಅದೇ ಮದುವೆಯ ಮೊದಲ ರಾತ್ರಿಯ ಮದುಮಗಳ ಸಿಂಗಾರದ ನೆನಪು ಹುಟ್ಟಿಸುವ ಒಡವೆ. ಮತ್ತೆ ಅವುಗಳ ವಿವರಣೆ. ನಿಜಕ್ಕೂ ಮನಸು ಕಲಕಿ ಹೋಗುತ್ತದೆ. ಅದಾದ ಕೆಲವು ದಿನಗಳಿಗೆ ಅವರ ಶ್ರೀ ಮತಿಯವರು ತೀರಿಹೋಗುತ್ತಾರೆ. ವೆಂಕಟೇಶಮೂರ್ತಿಯವರು ಬಿಡಿ, ಅವರು ಚೆಂದದ ಬರಹಗಾರರು. ಅದನ್ನೆಲ್ಲ ಬರೆದಿದ್ದಾರೆ, ಮನ ಮುಟ್ಟುವಂತೆ... ಅನ್ನಬೇಡಿ. ಬರಹದ ಆ ಚೆಂದವಿರುವುದೇ detailsನಲ್ಲಿ. ನೀವು ಜಯಂತ ಕಾಯ್ಕಿಣಿಯ ಅತಿ ಚಿಕ್ಕ ಬರಹ, ಅತಿ ಚಿಕ್ಕ ಕಥೆಯಲ್ಲೂ ಒಂದು ಅದ್ಭುತವೆನ್ನಿಸುವಂತಹ ಆ details ಕಾಣಬಲ್ಲಿರಿ. ಭೈರಪ್ಪನವರೂ ಹಾಗೆಯೇ. ಇವರೆಲ್ಲ ಅರ್ಧ ಗೆದ್ದದ್ದು ತಮ್ಮ ಚಿಂತನೆ, ಕಥಾ ವಸ್ತು ಇತ್ಯಾದಿಗಳಿಂದಾದರೆ ಉಳಿದರ್ಧದ ಗೆಲುವು ಅವರ ಬರವಣಿಗೆಯಲ್ಲಿನ detailsನಿಂದಾಗಿ.

ಒಂದು ಅಡುಗೆ ಕಲಿಯುತ್ತೀರಿ. ಪಕ್ಕಾ details ಸಮೇತ ಕಲಿಯಿರಿ. Driving ಕಲಿಯುತ್ತೀರಿ. ಇವತ್ತಿಗೂ ನನಗೆ ಸರಿಯಾಗಿ park ಮಾಡಲಿಕ್ಕೆ ಬರುವುದಿಲ್ಲ. ಹಾಗಾಗಬಾರದು. Details ಗೊತ್ತಿರಲೇಬೇಕು. ನಾನು ಟೈರಿನ ಪಂಕ್ಚರ್ ಹಾಕುವವನ ಕೆಲಸ ಆ ಕುಸುರಿ, ಶ್ರಮ ಮತ್ತು Details ಗಮನಿಸುತ್ತಿರುತ್ತೇನೆ. ಈ ಮಾತು ಮಿಲನ ಮಹೋತ್ಸವಕ್ಕೂ ಅನ್ವಯಿಸುತ್ತದೆ. ಅದರಲ್ಲಿನ ವಿಶೇಷ, ವೈವಿಧ್ಯತೆ, ಭಂಗಿ, ಭಾವ, ಅಭಿರುಚಿ, ವಾಸನೆ, ರುಚಿ, ಸ್ಪರ್ಶ, ಶಬ್ದ, ಮೌನ, ತಾಟಸ್ಥ್ಯ ಮತ್ತೆ ಚಾಲನೆ, ಹಿಡಿಹಿಡಿದು ಚಿಮ್ಮುವುದರಲ್ಲಿನ ಮೋದ, ಮಧ್ಯೆ ಆಡುವ ಮಾತು, ಅದರ ಏರಿಳಿತ, ಆನಂತರದ relaxation... ಎಲ್ಲವೂ enormous details. ಅವು ಕೇವಲ ಸಂತಸಗಳಲ್ಲ. ನೀವು ಅವುಗಳನ್ನು ಗಮನಿಸಿದಷ್ಟೂ ವೃದ್ಧಿಸುವ, ನಿಮ್ಮನ್ನು fine tune ಮಾಡುವ, ಗೆಲುವಿನತ್ತ ಒಯ್ಯುವ most useful details. ಅಮ್ಮನ ಅಡುಗೆ, ಅಪ್ಪ ಬರೆದಿಡೋ ಕರೆಂಟ್ ಬಿಲ್ಲಿನ ಲೆಕ್ಕ, ನಿಮ್ಮ ಷುಗರ್ ರೇಟು, ಬಿ.ಪಿ ವಿವರ, ಹಣಕಾಸಿನ ಸ್ಥಿತಿ, ಗಳಿಸಿದ ಪರ್ಸೆಂಟೇಜು, ಮಕ್ಕಳ ಬೆಳವಣಿಗೆ, ಒಂದು ಸರ್ಕಾರದ ನಡವಳಿಕೆ- ಹೀಗೆ. ಎಷ್ಟೋ ಸಲ, ತುಂಬ ಮುಖ್ಯವಾದ ಕಡೆಗೆ ಹೋಗಿ, ಮುಖ್ಯವಾದ eventಗಳಿಗೆ ಹೋಗಿ, ಅಸಲಿ detailsನ ಉಪೇಕ್ಷೆ ಮಾಡಿ ಪೆದ್ದರಂತೆ ಎದ್ದು ಬಂದಿರುತ್ತೇವೆ. ನಾನು ವಿಲಿಯಂ ಡಾರ್ಲಿಂಪಲ್ ಎಂಬ ಬರಹಗಾರನನ್ನು ಓದ ತೊಡಗಿದಾಗಿನಿಂದ ಎಲ್ಲಿಗೇ, ಯಾವುದೇ ಜಾಗಕ್ಕೆ, ದೇಶಕ್ಕೆ ಹೋಗಲಿ, pin to pin details ಸಂಗ್ರಹಿಸಲು ಯತ್ನಿಸುತ್ತೇನೆ. ಆ ಕ್ಷಣಕ್ಕೆ notes ಮಾಡಿಕೊಳ್ಳುತ್ತೇನೆ. Photo ತೆಗೆಯುತ್ತೇನೆ. ಮಾಡಿದ notes ಕಳೆದೀತೆಂದು, notesನ photo ತೆಗೆದು ಕಂಪ್ಯೂಟರಿನಲ್ಲಿಟ್ಟುಕೊಳ್ಳುತ್ತೇನೆ.


ಯಾರಿಗೆ ಗೊತ್ತು? ಯವುದೋ ಖಾಯಿಲೆ. ಈ ಡಾಕ್ಟರುಗಳು ಯಾವುದೋ ಗುಳಿಗೆ ನುಂಗಿಸಿ, ಬುಡಕ್ಕೆ ಯಾವುದೋ ಸೂಜಿ ಚುಚ್ಚುತ್ತಾರೆ. ಏನೂ ಮಾಡಕ್ಕಾಗಲ್ಲ: memory loss ಅಂತಾರೆ. ಆಗ ಇವೆಲ್ಲ ಸಹಾಯಕ್ಕೆ ಬರುತ್ತವೆ.

ಅಂದಹಾಗೆ, ನೋಡಿಕೊಂಡಿದ್ದೀರಾ?

ನಿಮ್ಮ ಮೈಯ ಮಚ್ಚೆಗಳೆಷ್ಟು?

-ರವೀ

_______________________________________

ಲೇಖನದ ಬಗೆಗಿನ ನಿಮ್ಮ ಅನಿಸಿಕೆಗಳನ್ನು [email protected] ಗೆ ಕಳಿಸಿ.

Read Archieves of 15 February, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books