Ravi Belagere
Welcome to my website
ಇದು 2012ರ ಫೆಬ್ರವರಿ 14ರ ವ್ಯಾಲಂಟೈನ್ಸ್ ಡೇಗೆ ಸಮಸ್ತ ಪ್ರೇಮಿಗಳಿಗಾಗಿ ನಾನು ಕೊಡುತ್ತಿರುವ ಅಕ್ಕರೆಯ gift : ‘ಒಲವೇ...’. ಅರವತ್ತು ನಿಮಿಷಗಳ ಅರ್ಥಪೂರ್ಣ ಧ್ವನಿ ಮುದ್ರಿಕೆ. ಅಪ್ಪ-ಅಮ್ಮನ ನೆರಳಲ್ಲಿ ಮುದ್ದಾಗಿ ಬೆಳೆದ ಹುಡುಗಿ, ಅಷ್ಟೇ ಬೆಚ್ಚನೆಯ ಆರೈಕೆಯಲ್ಲಿ ಚೆಂದಗೆ ಬೆಳೆದ ಹುಡುಗ ಅದ್ಯಾವ ಮಾಯೆಯಲ್ಲೋ ಒಬ್ಬರನ್ನೊಬ್ಬರು ಪ್ರೀತಿಸತೊಡಗುತ್ತಾರೆ. ಅಲ್ಲಿಂದ ಶುರುವಾಗುತ್ತೆ ಅವರ ಪ್ರೇಮ ಯಾತ್ರೆ. ಫೆಬ್ರವರಿ 14 ನಿಮ್ಮ ಗೆಳೆಯ ಅಥವಾ ಗೆಳತಿಯನ್ನು ಭೇಟಿಯಾದಾಗ ಪ್ರೀತಿಯಿಂದ ‘ಒಲವೇ’ ಸಿಡಿ ಕೊಡಿ. ಅಷ್ಟೇ ಅಲ್ಲ, ಇಬ್ಬರೂ ಒಟ್ಟಿಗೇ ಕೂತ್ಕೊಂಡು ಸಮಾಧಾನವಾಗಿ ಕೇಳಿ. Be sure. ನಿಮ್ಮ ಒಲವು ಫಲಿಸುತ್ತೆ. ಮನಸು ಮುದಗೊಳ್ಳುತ್ತೆ. ಆಮೇಲೆ ಯಾವತ್ತೇ ಮನಸ್ಸಿಗೆ ಬೇಕೆನ್ನಿಸಿದರೂ ನೀವು ‘ಒಲವೇ...’ ಸಿಡಿ ಕೇಳ್ತಾನೇ ಇರ‍್ತೀರಿ...
Home About Us Gallery Books Feedback Prarthana Contact Us

ಆತ ಕಮರಿಪೇಟೆಯಿಂದ ಬಂದಿದ್ದರು ರೊಟ್ಟಿ ಮಟನ್ನು ಮಾಡಿಸಿಕೊಂಡು!

ಬೇರೆ ಹೋಲಿಕೆ ಸಿಗುತ್ತಲೇ ಇಲ್ಲ.

ಬರೋಬ್ಬರಿ ಎಂಟು ಮರಿ ಈಯ್ದ ನಾಯಿಯ ಸುಸ್ತು. ರಾತ್ರಿ ಬೇಗ ಮಲಗಲು ಸಾಧ್ಯವಾಗಿರಲಿಲ್ಲ. ಎದ್ದು ಸ್ನಾನ ಮುಗಿಸುವ ಹೊತ್ತಿಗೆ ನಿವಿ ಫೋನು ಮಾಡಿ ಆಫೀಸಿಗೆ ಬನ್ನಿ : ಇಲ್ಲಿ ಜನ ಜನ ಜನ ಅಂದಳು. ನನ್ನ ಫೆಬ್ರುವರಿ 5 ಆರಂಭವಾದದ್ದು ಹಾಗೆ. ಆಮೇಲೆ ಬಂತಲ್ಲ, ಓದುಗರ ಟೋಳಿ? ಆಫೀಸು ದೊಡ್ಡದೊಂದು ಗಲಗಲದೊಂದಿಗೆ ತುಂಬಿ ಹೋಯಿತು.

“ನಾನು ಹುಬ್ಬಳ್ಳಿಯಿಂದ ಬಂದೇನ್ರೀ..." ಅಂದರು ಆತ.
“ನಾನೂ ಹುಬ್ಬಳ್ಳಿಯಿಂದ ಬಂದೇನಿ" ಅಂದೆ
“ನಾನು ಕಮರಿ ಪೇಟದಿಂದ ಬಂದೇನಿ" ಅಂದರು.
“ನಾನೂ ಕಮರಿ ಪೇಟದಿಂದಲೇ ಬಂದೇನಿ" ಅಂದು ನಕ್ಕೆ.
“ನೀವು ನಮ್ಮ ಅಂಗಡ್ಯಾಗೆ ಕುಡದು, ಹಾಡು ಹೇಳಿ, ರಾತ್ರಿ ಒಂದೂವರಿ ಮಟ ಧಾನ್ಲಿ ಹಾಕ್ತಿದ್ರಿ!" ಅಂದರು.
“ಸಾಲಿ ಗ್ರಾಫಿಕ್ಸ್ ಹಿಂದೆ ರೋಡಿನ ಪಕ್ಕ under groundಗೆ ಅದೇನು ನಿಮ್ಮ wine shop?'' ಕೇಳಿದೆ.
“ಹೌದು, ಒಮ್ಮೆ ನೀವು ಬೈಕು ಮರ್ತು ಮನೀಗೆ ಹೋಗಿದ್ರಿ" ಅಂದರು.

ಅವರ ಹೆಸರು ಪಾಂಡುರಂಗ ಕಠಾರೆ. ಹುಬ್ಬಳ್ಳಿಯ ಮಧ್ಯ ವಯಸ್ಕ, ಸಾವಜಿ ಸಮಾಜದ ವ್ಯಾಪಾರಿ. ಈಗ ಹಳೇ ಬಸ್‌ಸ್ಟ್ಯಾಂಡಿನ ಬಳಿ ‘ದುರ್ಗಾ ಹೊಟೇಲ್’ ನಡೆಸುತ್ತಾರೆ. ಅವರ ಅಂಗಡಿಯಲ್ಲಿ ನಾನು, ಉದಯ, ಸುರೇಶ್ ಕುಲಕರ್ಣಿ, ಗಣೇಶ ಜೋಶಿ, ಕೋಝೆ ಮುಂತಾದವರೆಲ್ಲ ಕುಡಿದು ರಾತ್ರಿ ಮೂರನೆ ಜಾವದ ತನಕ ಹಾಡಿ ದಾಂಧಲೆ ಮಾಡುತ್ತಿದ್ದೆವು. ಕೊಂಚ ಹಣ ಕರಗಿದ ಮೇಲೆ ಕಮರಿ ಪೇಟೆಯ ಅನಕೃತ ಫೆನ್ನಿ ಅಂಗಡಿ ಹೊಕ್ಕು ಕೇಶವನ ಅಡ್ಡೆ ಸೇರುತ್ತಿದ್ದೆವು. ತಿಂಗಳ ಕೊನೆಯಲ್ಲಿ ಮೇದಾರ ಗಲ್ಲಿಯ ಶಂಬಣ್ಣನ ಸಾರಾಯಿ ಅಂಗಡಿ!

ಇದೆಲ್ಲ ಹದಿನೆಂಟು ವರ್ಷದ ಹಿಂದಿನ ಮಾತು. ಅವತ್ತಿನ ಪಾಂಡುರಂಗ ಕಠಾರೆ ನನ್ನ ಓದುಗರಾಗಿ, ನೆನಪಿಟ್ಟುಕೊಂಡು ಪುಸ್ತಕ ಬಿಡುಗಡೆಗೆ ಬಂದುದಷ್ಟೆ ಅಲ್ಲ : ಹೆಂಡತಿಗೆ ಹೇಳಿ ನನಗೋಸ್ಕರ ಸಾವಜಿ (ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ) ಜಾತಿಯವರು ಮಾಡುವ ಶೈಲಿಯ ಮಾಂಸದ ಅಡುಗೆ ಮತ್ತು ರೊಟ್ಟಿ ಮಾಡಿಸಿಕೊಂಡು ಬಂದಿದ್ದರು. ಪ್ರೀತಿಗೆ ಎಷ್ಟೆಷ್ಟು ಮುಖ? “ಈಗಲೇ ಬಿಸಿ ಮಾಡಿ ಉಂಡು ಬಿಡ್ರಿ" ಅಂದರು ಕಠಾರೆ.

ಹುಬ್ಬಳ್ಳಿಯಿಂದ ಶಶಿ ಸಾಲಿ ಬಂದಿದ್ದರು. ಉಡುಪಿಯಿಂದ ಆರೂವರೆ ಅಡಿ ಎತ್ತರದ ದೇವದಾಸ್. ಮಂಗಳೂರು, ರಾಯಚೂರು, ಗುಲಬರ್ಗ ಅಳಂದ, ಚಿತ್ತಾಪುರದ ರವಿ ಇವಣಿ, ಕೋಲಾರ, ಮುಳಬಾಗಿಲು, ಬಾಗಲಕೋಟ, ಬಿಜಾಪುರ, ಬಳ್ಳಾರಿ, ಸುಳ್ಯ-ಹೀಗೆ ಒಂದು ಊರಾ? ಒಂದು ಜಿಲ್ಲೆಯಾ? ನಾನು ಸುಮ್ಮನೆ ಕುಳಿತು ಹರಟುತ್ತಾ, ಸಿಗರೇಟು ಸೇದುತ್ತಾ ಪುಸ್ತಕಗಳಿಗೆ ಸಹಿ ಮಾಡಿ ಕೊಡುತ್ತಿದ್ದೆ. ಚಿಕ್ಕಮಗಳೂರಿನ ಚಾಂದಿನಿ ಬಂದವಳು “uಛಿ mಜ್ಚಿಠ್ಠ್ಟಿಛಿ oಠಿZbಜ್ಞಿಜ?" ಅಂದಳು. ಫೊಟೋ ತೆಗೆಸಿಕೊಂಡೆ.

ಸುಮಾರು ಒಂದೂವರೆ ತಾಸಿನಿಂದ ಒಬ್ಬ ಹುಡುಗ ಅನತಿ ದೂರದಲ್ಲಿ ನಿಂತೇ ಇದ್ದ. ನಾನು ಮೊದಲು ಗಮನಿಸಿರಲಿಲ್ಲ. ಹತ್ತಿರಕ್ಕೆ ಕರೆದಾಗ ಗೊತ್ತಾಯಿತು. ಹುಡುಗನಿಗೆ ಎರಡೂ ಕಾಲಿಲ್ಲ. ಕಂಕುಳಲ್ಲಿ ಕೋಲಿವೆ. ತುಮಕೂರಿನಲ್ಲಿ ಡಿ.ಟಿ.ಪಿ. ಆಪರೇಟರು. ಪಕ್ಕ ನಿಲ್ಲಿಸಿಕೊಂಡು ಫೊಟೋ ತೆಗೆಸಿಕೊಂಡೆ. ಮನಸ್ಸಿಗೆ ಏನೋ ಸಂತೋಷ.

‘ಹಿಮಾಗ್ನಿ’ ಅತಿ ಹೆಚ್ಚು ಮಾರಾಟವಾಯಿತು. ಅತಿ ಹೆಚ್ಚು ಬೆಲೆಯ ಪುಸ್ತಕವೂ ಹೌದು. ಆದರೆ ಯಾರೋ ಹುಡುಗ ‘ಅಮ್ಮ ಸಿಕ್ಕಿದ್ಲು’ ಕೊಂಡು ತಂದು ಸಹಿ ಕೇಳಿದಾಗ ಹೆಚ್ಚಿನ ಆನಂದವಾಗುತ್ತಿತ್ತು. ಅದಕ್ಕೆ ನೂರೇ ರುಪಾಯಿ. ಮೂರೇ ದಿನದಲ್ಲಿ ಬರೆದ ಪುಸ್ತಕ. ಆದರೆ ಅದು ನನ್ನ ಆತ್ಮಕ್ಕೆ ಹತ್ತಿರವಾದದ್ದು. ಅದರಲ್ಲಿ ಅಮ್ಮ ಇದ್ದಾಳೆ. ನನ್ನಮ್ಮ. ನಿಮ್ಮಮ್ಮನೂ ಹೌದು.

ಇದೆಲ್ಲ ಸಂಭ್ರಮ ಅನುಭವಿಸಿ ಎಷ್ಟೆಲ್ಲ ದಿನಗಳಾದವು! ನನ್ನ ಆಫೀಸು ಸದಾ ಮೌನವಾಗಿರುತ್ತದೆ. ಕಡಿಮೆ ಮಾತಾಡಿ ಮತ್ತು ಮೆಲ್ಲಗೆ ಮಾತಾಡಿ ಎಂಬುದು ಇಲ್ಲಿನ ನಿಯಮ. ಆದರೆ ಪುಸ್ತಕ ಬಿಡುಗಡೆಯಂದು ನೀವು ಬರುವುದೇ ಮಾತಿಗೆ. ನಗೆಗೇ. ಭೇಟಿಗೆ. ಚಿತ್ರದುರ್ಗದಿಂದ ‘ಕೇಳಿ’ಗೆ ಪ್ರಶ್ನೆ ಕಳಿಸುವ ಎಚ್.ಆರ್.ಪಲ್ಲವಿ ಬಂದಿದ್ದಳು. ಗೊರೂರು ನಾಗನಿಲ್ಲದೆ ಯಾವ ಸಮಾರಂಭವಾಗಿದೆ? ಕಂಡಕ್ಟರ್ ಸೋಮು ಅಪಾರ ಕೀರ್ತಿವಂತವಾದ ತನ್ನ ಎಡೆಯೂರಿನ ಪೋಲಿ ನಗೆ ನಗುತ್ತ ನಿಂತಿದ್ದ. ಇವು ನಿಜವಾದ ಸಂತಸದ ಕ್ಷಣಗಳು. ನಾನು ದಿನಗಟ್ಟಲೆ ತಿರುಗಿ, ನಾನಾ ಪುಸ್ತಕ ಓದಿ, ನಿದ್ರೆಗೆಟ್ಟು ಬರೆದು, ಅದನ್ನು ಹತ್ತಾರು ಜನ ಕೆಲಸ ಮಾಡಿ ಪುಸ್ತಕ ರೂಪಕ್ಕೆ ತಂದಿರುತ್ತೇನೆ. ನೀವು ದಿನಗಟ್ಟಲೆ ದುಡಿದು, ಅದರಲ್ಲೇ ಹಣ ಉಳಿಸಿ, ಯಾವುದಕ್ಕೆ ಅಂತಲೋ ಎತ್ತಿಟ್ಟುಕೊಂಡದ್ದನ್ನು ಇದಕ್ಕೆ ಹೊರಳಿಸಿ, ರಜೆ ಹೊಂದಿಸಿಕೊಂಡು, ಇದ್ದ ಕೆಲಸವೆಲ್ಲ ಬಿಟ್ಟು, ನಿಮ್ಮ ಪ್ರೀತಿಯ ಲೇಖಕನನ್ನು ನೋಡಲು ಎಲ್ಲೆಲ್ಲಿಂದಲೋ ಬರುತ್ತೀರಿ. ಈ ಸಾಂಗತ್ಯ, ಒಡನಾಟ, ಅಕ್ಷರ ಸ್ನೇಹ, ಕಿರು ನಗೆ, ಯಾಕೋ ಉಕ್ಕಿ ಬರುವ ಆನಂದಬಾಷ್ಪ, ನೋವಿನಲ್ಲಿ ನೆನಪಾಗುವ ನಾನು, ಪುಸ್ತಕದ ಪುಟ ಕುಡಿಯುವ ಕಣ್ಣೀರು, ಓದಿ ಮುಗಿಸಿದಾಗಿನ ನಿಟ್ಟುಸಿರು-ಕೆಮೆರಾದಲ್ಲಿ, ಮೊಬೈಲಿನಲ್ಲಿ, ಮನಸ್ಸಿನಲ್ಲಿ ಉಳಿಯುವ ಶಾಶ್ವತ ಚಿತ್ರ.

ಬದುಕಿನ ಖುಷಿಯ ಪುಟಗಳಲ್ಲಿ ಇದೂ ಒಂದು. ಅಲ್ಲವೆ?

ಅಂದ್ಹಾಗೆ, ನೀವು ಬಂದಿರ‍್ಲಿಲ್ವಾ? ವೆವ್ವೆವ್ವೆ!

-ವೀ

ಚಿತ್ರಗಳಿಗೆ ಇಲ್ಲಿ ವೀಕ್ಷಿಸಿ. http://www.ravibelagere.com/gallery/index.php/readers-at-hi-bangalore

Read Archieves of 14 February, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books