Ravi Belagere
Welcome to my website
ಬಹಳ ದಿನಗಳ ನಂತರ ಈ ತರಹದ್ದೊಂದು mega function ಏರ್ಪಡಿಸಿದ್ದೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ನೀವೆಲ್ಲ ಬಂದಿರಿ. ನನ್ನ ಬರವಣಿಗೆ, ತಿರುಗಾಟ, ಮುದ್ರಣ, ಬಣ್ಣ, ಈ ಸಿಂಗಾರ-ಬಂಗಾರ- ಇವೆಲ್ಲವೂ ನಿಮಗಾಗಿಯೇ ಅಲ್ಲವೆ? ಎಲ್ಲಿಯ ರಾಯಚೂರು, ಕೊಪ್ಪಳ, ಯಾದಗಿರಿ, ಗುಲಬರ್ಗ, ಚಿಂಚನ ಸೂರು, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ಮಂಗಳೂರು-ಎಲ್ಲೆಲ್ಲಿಂದ ಬಂದಿದ್ದರು ಓದುಗರು!. ಪ್ರತಿಯೊಬ್ಬರ ಕೈಲೂ ‘ಹಿಮಾಗ್ನಿ’. ಪ್ರತಿಯೊಬ್ಬರ ಕೈಲೂ ‘ಉಡುಗೊರೆ’, ‘ಅಮ್ಮ ಸಿಕ್ಕಿದ್ಲು’ ಮತ್ತು ಸಿಡಿಗಳು.
Home About Us Gallery Books Feedback Prarthana Contact Us

ನೀವೆಲ್ಲ ಕಿಕ್ಕಿರಿದಿದ್ದ ಸಭೆಯಲ್ಲಿ ಕಂಬಾರರಂಥ ಹಿರಿಯರ ಬಾಯಲ್ಲಿ ಆ ಮಾತು ಕೇಳಿಸಿಕೊಂಡ ಸೌಭಾಗ್ಯ

“ನೀವು ಗಂಡ್ಸು ಕಣ್ರೀ!\" ಅಂದ ವ್ಯಕ್ತಿಯನ್ನೇ ದಿಟ್ಟಿಸಿ ನೋಡಿದೆ. ಹೆಚ್ಚು ಕಡಿಮೆ ನಂದೇ ವಯಸ್ಸು.

“ಯಾಕೆ ಹಾಗಂದ್ರಿ?\" ಅಂದೆ.

“ಇವತ್ತು ಭಾನುವಾರ, ಮೊದಲೇ ಇದು ಬೆಂಗಳೂರು. ಅಂಥದರಲ್ಲೂ ಇಷ್ಟೊಂದು ಜನರನ್ನ ಸೇರಿಸಿದ್ದೀರಲ್ಲಾ? ‘ಪತ್ರಿಕೆ’ ಶುರುವಾದಾಗಿನಿಂದ ಪ್ರತೀ ಕಾರ್ಯಕ್ರಮಕ್ಕೆ ಬರ‍್ತಿದೀವಿ. ಹೀಗೇ ಇದೆ ಕ್ರೌಡು. ಹದಿನೇಳು ವರ್ಷ ಜನರನ್ನ ಹೀಗೆ ಹಿಡಿದಿಡೋದು ಒಬ್ಬ ಪತ್ರಕರ್ತನಿಗೆ, ಬರಹಗಾರನಿಗೆ ಸಾಧ್ಯವಾಗೋದು ಅಂದ್ರೆ ಸುಮ್ನೇನಾ?\" ಅಂದರು ಆತ.

ನನ್ನ ಕಣ್ಣಲ್ಲಿ ಕೃತಜ್ಞತೆ.

ನನಗೆ ಗಾಂಧಿಬಜಾರ್‌ನ BBC ಬಳಿ ನೆರೆದಿದ್ದ ಜನರನ್ನು ಕಂಡೇ ದಂಗು ಬಡಿದಂತಾಗಿತ್ತು. ಆದರೆ ಸಂಜೆ ಹೊತ್ತಿಗೆ ಪದ್ಮನಾಭನಗರದ ಗ್ರೌಂಡು ಕಿಕ್ಕಿರಿದು ಹೋಗಿತ್ತಲ್ಲ? ಬೆಂಗಳೂರಿನಲ್ಲಿ ಜನ ಸೇರದೆ ಇರಲು ಸಾವಿರ ಕಾರಣಗಳಿರುತ್ತವೆ. ಟ್ರಾಫಿಕ್ಕು, ಸಿಗುವ ಅಪರೂಪದ ಭಾನುವಾರ, ಪದ್ಮನಾಭನಗರ ಎಂಬುದು ಊರ ಮೂಲೆ, ಅವತ್ತು ಮತ್ಯಾವುದೋ ಸಿನೆಮಾ, ಇನ್ಯಾವುದೋ ಮ್ಯಾಚು : ಹೀಗೆ ಬಾರದಿರಲು ಕಾರಣಗಳಿರುತ್ತವ. ಅದರಲ್ಲೂ ನಾನು ಹೊಸ ಮುಖವೇನಲ್ಲ. ಕಂಬಾರರಿಂದ ಹಿಡಿದು ಬೆಳಗೆರೆ ಶಾಸ್ತ್ರಿಗಳ ತನಕ ಯಾರೂ ಹೆಚ್ಚಿಗೆ ಮಾತನಾಡಲೂ ಇಲ್ಲ. in fact, ನಾನೇ ‘ಹಿಮಾಗ್ನಿ’ಯ ಬಗ್ಗೆ ಕೊಂಚ ಮಾತನಾಡಿದೆ.

ಆದರೆ ಬಂದವರೆಲ್ಲ ಪುಸ್ತಕ ಪ್ರಿಯರೇ. ಪುಸ್ತಕ ಕೊಳ್ಳಲೆಂದೇ ಬಂದಿದ್ದರು. ನಿವೇದಿತಾ ಕೆಲವು ಪುಸ್ತಕಗಳ-ಸಿಡಿಗಳ sets ಮಾಡಿ ಅವುಗಳಿಗೆ ಇಂತಿಷ್ಟು ಅಂತ ರಿಯಾಯಿತಿ ನಿಗದಿ ಪಡಿಸಿ ಸಂಜೆ ನಾಲ್ಕು ಗಂಟೆಯಿಂದಲೇ ಗ್ರೌಂಡಿನಲ್ಲಿ stall ಹಾಕಿ ಮಾರಾಟದ ವ್ಯವಸ್ಥೆ ಮಾಡಿದ್ದಳು. ಅಂಗಡಿ ಉದ್ಘಾಟನೆಯ ನೂಕು ನುಗ್ಗಲಿನಲ್ಲಿ ನನ್ನ ಷರಟು ಗಜಿಬಿಜಿಯಾಗಿತ್ತು. ಅದೆಂಥ ನೂಕು ನುಗ್ಗಲು ಅದು? ಹಿರಿಯರಾದ ವೆಂಕಟೇಶ್ ಮೂರ್ತಿಗಳು, ದೊಡ್ಡ ರಂಗೇಗೌಡರು, ಡಾ.ವಿಜಯಮ್ಮ, ರಮಾದೇವಿ ವಿಶ್ವೇಶ್ವರಯ್ಯ, ಸಿ.ವಿ.ಶಿವಶಂಕರ್, ಜಯಂತ್ ಕಾಯ್ಕಿಣಿ, ನಾಗತಿಹಳ್ಳಿ ಚಂದ್ರಶೇಖರ್, ಚಂದ್ರಶೇಖರ್ ಆಲೂರು, ಜೋಗಿ, ಯೋಗರಾಜ ಭಟ್, ಎಂ.ಎನ್. ವ್ಯಾಸರಾವ್, ಪ್ರಧಾನ್ ಗುರುದತ್, ಅಶೋಕ್ ಶೆಟ್ಟರ್, ಬಳ್ಳಾರಿಯ ಸುರೇಶ್ ಶೆಟ್ಟಿ ಮುಂತಾದವರನ್ನೆಲ್ಲ ಅಂಗಡಿಯೊಳಕ್ಕೆ ಕರೆತರುವುದೇ ದುಸ್ತರವಾಗಿ ಹೋಗಿತ್ತು. ನನ್ನ ಅಣ್ಣನಂಥವರಾದ ವಕೀಲ ರೇವಣ ಸಿದ್ದಯ್ಯನವರು ಮೊದಲ ದಿನವೇ ಹದಿನೈದು ಸಾವಿರ ರುಪಾಯಿಗಳ ಪುಸ್ತಕ ಕೊಂಡು ಮೊದಲ ಗಿರಾಕಿಯ ಪಟ್ಟ ಕಟ್ಟಿಸಿಕೊಂಡರು.

ಷರಟು ಬದಲಿಸಿಕೊಂಡು ಆಫೀಸಿನಿಂದ ಗ್ರೌಂಡಿಗೆ ಬರುವ ಹೊತ್ತಿಗೆ ‘ಹೋ’ ಅಂತ ಜನ. ಜಯಂತ್ ಕಾಯ್ಕಿಣಿಗೆ ಅವತ್ತು ಗೋಕರ್ಣಕ್ಕೆ ಹೋಗಲೇಬೇಕಿತ್ತು. ಅಮ್ಮನಿಗೆ ಸೌಖ್ಯವಿಲ್ಲ. ಇಡೀ ಬದುಕು ಗೋಕರ್ಣದಲ್ಲಿ ಸವೆಸಿದ ಅವರಿಗೆ ಬೆಂಗಳೂರು ಒಲ್ಲದು. ಅಣ್ಣ ಒಂದು ಮೆಸೇಜ್ ಬಿಟ್ಟು ಹೊರಬಿದ್ದ. ನನ್ನ ಮಗ ರವಿಚಂದ್ರನ್‌ರನ್ನು ಕರೆತರಲು ತಾನೇ ಹೋಗಿದ್ದ. ಕಂಬಾರರು ಆಗಷ್ಟೆ ಭುವನೇಶ್ವರದಿಂದ ಬಂದು ಮನೆ ತಲುಪಿದ್ದರು. ಮಂಗಳೂರಿನಿಂದ ಭುವನೇಶ್ವರಿ ಹೆಗಡೆಯನ್ನು ನನ್ನ ವರದಿಗಾರ ಕರೆತಂದಿದ್ದ. ಅತಿಥಿಗಳು ಬಂದು ವಿಧ್ಯುಕ್ತ ಕಾರ್ಯಕ್ರಮ ಆರಂಭವಾಗುವ ತನಕ ಪ್ರೇಕ್ಷಕರನ್ನು ಹಿಡಿದಿರಿಸಿದ್ದು ಬಿ.ಆರ್.ಛಾಯಾ ಗಾಯನ ಮತ್ತು ಪದ್ಮಪಾಣಿಯ ಮಾತು.

ಮೊದಲೇ ಅಂದುಕೊಂಡಂತೆ ‘ಹಿಮಾಗ್ನಿ’ಯನ್ನು ಕಂಬಾರರು ಬಿಡುಗಡೆ ಮಾಡಿದರು. ಅಜಮಾಸು ಮೂವತ್ತೈದು ವರ್ಷದಿಂದ ಬೇಂದ್ರೆಯವರ ಕಾವ್ಯ ಓದಿ ಬೆಳೆದವನು ನಾನು. ಆನಂತರ ನನ್ನನ್ನು ಬಹುವಾಗಿ ಕಲಕಿದ ಕವಿ ಗೋಪಾಲಕೃಷ್ಣ ಅಡಿಗರು. ಬಿಟ್ಟರೆ ಬಹಳ ಸಮರ್ಥರೆನ್ನಿಸಿದವರು ಕಂಬಾರರೇ. ಅಂಥ ಹಿರಿಯರ ಬಾಯಲ್ಲಿ ನನ್ನ ಬರವಣಿಗೆಯ ಕುರಿತು, ಕಾದಂಬರಿಗಳ ಕುರಿತು ಒಳ್ಳೆಯ ಮಾತು ಕೇಳಿಸಿಕೊಳ್ಳುವ ಸೌಭಾಗ್ಯ ನನ್ನದಾಯಿತಲ್ಲ? ಏನನ್ನೇ ಬರೆದರೂ ರವಿ ತನಿಖೆ ಮಾಡಿ, research ಮಾಡಿ, prepare ಆಗಿ ಬರೆಯುತ್ತಾನೆ ಅಂತ ಅವರು ಅಂದಾಗ ಜನ ಭಯಂಕರ ಸಂತೋಷಪಟ್ಟರು.

ದೊಡ್ಡ ರಂಗೇಗೌಡರು ಬಹುಶಃ ನನ್ನ ‘ಕಾಮರಾಜಮಾರ್ಗ’ ನೆನಪಿಸಿಕೊಂಡಿರಬೇಕು. ‘ಕನ್ನಡದ ವಾತ್ಸ್ಯಾಯನ ರವಿ ಬೆಳಗೆರೆ’ ‘ಅವನು ಓದುಗರನ್ನು ಆವರಿಸಿಕೊಳ್ಳುವ ಅನಕೊಂಡ’ ಅಂದರು. ಹಿರಿಯರು ಆಡಿದ ಮಾತೆಲ್ಲ ಹರಕೆಯೇ, ಹಾರೈಕೆಯೇ. ಅಂಥವೇ ಮಾತುಗಳನ್ನು ನನ್ನ ಬರಹದ ಕುರಿತು ಲಕ್ಷ್ಮೀನಾರಾಯಣ ಭಟ್ಟರು ಆಡಿದರು.

“ಕನ್ನಡ ಚಿತ್ರರಂಗ ಅವರಿವರಿಗೆ ನಮಸ್ಕಾರ ಮಾಡಿ, ಕಾಲಿಗೆ ಬಿದ್ದುಬಿದ್ದೇ ನೆಲ ಕಚ್ಚಿತು, ಯಾರಿಗೂ ತಲೆ ಬಾಗದೆ, ಅದನ್ನು ಅಹಂಕಾರವನ್ನಾಗಿಯೂ ಮಾಡಿಕೊಳ್ಳದೆ, ಆತ್ಮಾಭಿಮಾನವನ್ನಾಗಿ ಬೆಳೆಸಿಕೊಂಡ ಅವನೂ ರವಿ : ನಾನೂ ರವಿ. ಒಂದೇ ವ್ಯತ್ಯಾಸವೆಂದರೆ ಅವನು ರವಿಯೊಂದಿಗೆ ಚಂದ್ರನನ್ನೂ ಇಟ್ಟುಕೊಂಡಿದ್ದಾನೆ. ಸಮಾಧಾನವೆಂದರೆ ಚಂದ್ರ ಹದಿನೈದೇ ದಿನ ಇರುತ್ತಾನೆ\" ಅಂತ ರವಿಚಂದ್ರನ್ ಪರಿಚಯ ನಾನೇ ಮಾಡಿಕೊಟ್ಟೆ.

“ನಂಗೊತ್ತಿತ್ತು. ವೇದಿಕೆಯ ಮೇಲೆ ಇರೋರೆಲ್ಲ ಹಿರಿಯರು. ಅವರ ಕೈಲಿ ಗಂಭೀರವಾದ ಪುಸ್ತಕಗಳನ್ನೇ ಬಿಡುಗಡೆ ಮಾಡಿಸ್ತಾನೆ ರವಿ. ನನ್ನ ಪಾಲಿಗೆ ಬರೋದೇ bottom item!\" ಎಂದು ನಗೆಯಾಡಿದ ರವಿಚಂದ್ರನ್ “ರವಿ ಬೆಳಗೆರೆ is a combination of nuts\" ಅಂದ.

ನಾಡಿನ ಹಿರಿಯ ವಕೀಲರು, ಪತ್ರಿಕೆಯ ಹಿತೈಷಿಗಳೂ ಆದ ಟಿ.ಎನ್.ರಘುಪತಿಯವರು ವೇದಿಕೆಯಲ್ಲಿದ್ದರು. ಅವರ ಅಣ್ಣ ಡಾ.ಟಿ.ಎನ್.ಕೃಷ್ಣರಾಜು ಅವರ ‘ಕತೆಗಳು ಮತ್ತು ಕಾದಂಬರಿ’ ಕೃತಿಯನ್ನು ಬಿಡುಗಡೆ ಮಾಡಿ ನಾಲ್ಕು ಮಾತು ಸೊಗಸಾಗಿ ಆಡಿದರು.

ಯೂರಪ್‌ನ ಉದ್ದಗಲ ‘ಹಿಮಾಗ್ನಿ’ಗಾಗಿ ನನ್ನೊಂದಿಗೆ ಓಡಾಡಿದವನು ಗಿರೀಶ್ ಹಂಪಾಳಿ. ಅವನು ಬಿಡುಗಡೆ ಸಮಾರಂಭಕ್ಕೆಂದೇ ಬಂದಿದ್ದ. “ಈ ಮಹರಾಯ ಆಮ್‌ಸ್ಟರ್‌ಡ್ಯಾಮ್‌ನ ಸೂಳೆಯರ ಕೇರಿಯಲ್ಲಿ taste ನೋಡ್ತೀನಿ ಅಂತ ಒಂದು drug ಹೊಡೆದ ನೋಡ್ರೀ. ಹಿಡೀಲಿಕ್ಕೆ ನನಗೂ, ಸೀನಂಗೂ ಒಂಬತ್ತು ತಾಸು-ಸಾಕುಸಾಕಾಗಿ ಹೋಯ್ತು. ಮೈ ಮ್ಯಾಲ ಎಚ್ಚರವೇ ಇರಲಿಲ್ಲ. ಆದರೆ ವಾಪಸ್ ಬಂದು ಅದೇ ಸೂಳೆಗೇರಿ, ಸೂಳೆ ಮನೆಗಳ ಬಗ್ಗೆ ಕೂತು ಬರೆದ. i am susprised. Only he can right. ಆ ಪರಿ ನಶೆಯಲ್ಲಿದ್ದಾಗಲೂ ವಿವರಗಳನ್ನು ಗಮನಿಸಿ ನೆನಪಿನಲ್ಲಿಟ್ಟುಕೊಂಡು ಬರೀತಾನಲ್ಲ? ಅದು ಅವನ ಕೆಪ್ಯಾಸಿಟಿ\" ಅಂದಿದ್ದ ಹಂಪಾಳಿ. ‘ಹಿಮಾಗ್ನಿ’ಯ ಬಗ್ಗೆ ಮಾತನಾಡಿದವನೇ ಅವನು.

ನನ್ನ ಶಾಲೆಯ ಮಕ್ಕಳು ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕಿಯರು stageನಲ್ಲಿ ನೆರವಾದರು. ಮೊಟ್ಟ ಮೊದಲ ಬಾರಿಗೆ ಪತ್ರಿಕೆಯ ಕಾರ್ಯಕ್ರಮವನ್ನು ನಿರ್ವಹಣೆ ಮಾಡಲು ನಾನು ಇನ್ನೊಬ್ಬರಿಗೆ ಬಿಟ್ಟುಕೊಟ್ಟಿದ್ದೆ. ಅದನ್ನು ಕಾವ್ಯ ಶಾಸ್ತ್ರಿ ಮುದ್ದಾಗಿ ಮಾಡಿಕೊಟ್ಟಳು. it was a real grate show. ಇನ್ನು ಶ್ರೀನಗರ ಕಿಟ್ಟಿ. ಅವನು ಮನೆಯ ಮಗ. ಕಾರ್ಯಕ್ರಮದುದ್ದಕ್ಕೂ ಮನೆಯ ಮಗನಂತೆಯೇ ವರ್ತಿಸಿದ.
ಕೊನೆಯದಾಗಿ ಬಂತಲ್ಲ ತೇರು?

ಮಂಡ್ಯದ ಮಿಸ್ಟರ್ ಅಂಬರೀಷ್! ಅವನು ಮೈಸೂರಿನಲ್ಲಿದ್ದವನು ಕಾರ್ಯಕ್ರಮಕ್ಕೆಂದೇ ಧಡಗ್ಗನೆ ನೆನಪು ಮಾಡಿಕೊಂಡು, ಮಂಡ್ಯದ ಬಳಿ ಚಿಕ್ಕದೊಂದು ಆಕ್ಸಿಡೆಂಟೂ ಮಾಡಿಕೊಂಡು ಬಂದಿದ್ದ. ಪಕ್ಕದಲ್ಲಿ ಕುಳಿತವನು ಹಿರಿಯರನ್ನೆಲ್ಲ ನೋಡಿ “ಇದು ಪುಸ್ತಕದೋರ ಸಭೆ. ಎದುರಿರೋರೂ ಅದೇ ಜಾತಿಯೋರು. ಸಿನೆಮಾದೋರನ್ನ ನೋಡಕ್ಕೆ ಬಂದವರಲ್ಲ. ಇದರ ಮಧ್ಯೆ ನಾನೇನು ಮಾತಾಡ್ಲೋ?\" ಅಂದ.

“ನೀನು ಮಾತು ಆಡೋಕೆ ನಿಂತ್ಕೋ ಸಾಕು\" ಅಂದೆ.

ನಿಜಕ್ಕೂ ಅದ್ಭುತವಾಗಿ ಮಾತನಾಡಿದ.

“ಇಲ್ಲಿಗೆ ಬರಲು ಒಪ್ಪಿದುದಕ್ಕೆ ಕಾರಣವಿಷ್ಟೆ. ರವಿಯ ಸ್ನೇಹ. ಅವನ ನೇರ ಬರವಣಿಗೆ, ಚೆಂದದ ಕನ್ನಡ ಮಾತು, ಮಾತಾಡಿದಂತೆ ಬದುಕುವ ರೀತಿ ನನಗಿಷ್ಟ. ಏನು ಮಾಡಲಿ? ನನ್ನ ಫೀಲ್ಡೇ ಬೇರೆ. ಪಿಯುಸೀಲಿ ಎರಡು ಸಲ ಫೇಲಾದೆ. ಪಾಸಾಗಿದ್ರೆ ಡಾಕ್ಟರಾಗ್ತಿದ್ದೆ. ಫೇಲಾಗಿದ್ದಕ್ಕೆ ಆಕ್ಟರಾದೆ\" ಅಂದ. ಜನಕ್ಕೆ ಅವನ ನೇರವಂತಿಕೆಯೂ ಸಂತೋಷವೇ.

‘ಉಡುಗೊರೆ’ ಪುಸ್ತಕದ ಬಗ್ಗೆ ಅದನ್ನ ಮೊದಲ ಪುಟದಿಂದ ಕಡೆಯ ಪುಟದ ತನಕ ಎಡಿಟ್ ಮಾಡಿಕೊಟ್ಟ ಶಿವಮೊಗ್ಗದ ಹುಡುಗ ‘ಯುಧಿಷ್ಠಿರ’ ಮಾತನಾಡಬೇಕಿತ್ತು. ಹೆಸರು ಕರೆಯುವ ಹೊತ್ತಿಗೆ ಅವನೇ ನಾಪತ್ತೆ. in fact, ನನ್ನ ಅವನ ಗೆಳೆತನ ಆರಂಭಗೊಂಡದ್ದೇ ಒಂಥರಾ ಜಗಳದಿಂದ. ಅವನು ಮಠದ ಸ್ವಾಮಿಯೊಬ್ಬರ ಪರಮಭಕ್ತ. ಸ್ಫಟಿಕ ಸ್ಪಷ್ಟ ಲಿಂಗಾಯತ. ಆದರೆ ಅದಲ್ಲ ಕಣಯ್ಯಾ ಬದುಕೂ. ಮಠಗಳಾಚೆಗೂ ಸತ್ಯವಿದೆ, ಜೀವನವಿದೆ, ತಿಳುವಳಿಕೆಯಲ್ಲಿ ಬದುಕಿದೆ ಅಂತ ನಾನು ಮನವರಿಕೆ ಮಾಡಿಕೊಡುತ್ತ ಹೋದೆ. ಮೊದಲೆಲ್ಲ hate mail ನಂತೆ ಇದ್ದ ಪತ್ರಗಳು ಆಮೇಲೆ ಸ್ನೇಹದ ಮಾತುಗಳಾದವು. ಚಿಕ್ಕ ವಯಸ್ಸಿಗೇನೇ ಸಾಕಷ್ಟು ಓದಿ, ತಿಳುವಳಿಕೆ ಪಡೆದು, ಎರಡು ಪುಸ್ತಕಗಳನ್ನು ಬರೆದಿರುವ ಯುಷ್ಠಿರ ಒಬ್ಬ ಕೃಷಿಕ-ಮೇಷ್ಟ್ರ ಮಗ. ಅವನಿಗೆ ನನ್ನ ಬಾಟಂ ಐಟಂ ಹಾಗೂ ಖಾಸ್‌ಬಾತ್ ಕೃತಿಗಳನ್ನೆಲ್ಲ ಕೊಟ್ಟು, ಇವುಗಳಲ್ಲಿ ತಿಳುವಳಿಕೆ, ಜೀವನಾನುಭವ, ಅನಿಸಿಕೆ, ಅನುಭವ, ಬದುಕಿನ ಸತ್ಯ ಇಂಥವನ್ನು ಒಳಗೊಂಡಿರುವ, ಅರ್ಥಪೂರ್ಣ ಸೆಂಟೆನ್ಸ್‌ಗಳಿದ್ದರೆ ಆಯ್ದು mark ಮಾಡಿ ಕೊಡು. ‘ಉಡುಗೊರೆ’ ಅಂತ ಒಂದು ಪುಸ್ತಕ ಮಾಡೋಣ ಅಂದಿದ್ದೆ. ಅವನು ಪಾಪ, ಪರೀಕ್ಷೆಯ ಗಡಿಬಿಡಿಯ ನಡುವೆಯೇ ಶ್ರದ್ಧೆಯಿಂದ ಮಾಡಿಕೊಟ್ಟ. ಅವನಿಗೆ ಮಾತನಾಡಲು ಹೇಳಿ, ‘ಕನಸೆ’ ಸಿ.ಡಿಗೆ ಸಂಗೀತ ನೀಡಿದ, ಪ್ರವೀಣ ಗೋಡಖಿಂಡಿಗೆ ಹಾಗೂ ‘ಒಲವೇ’ ಸಿ.ಡಿಗೆ ಸಂಗೀತ ನೀಡಿದ ಡಾ.ನಾಗರಾಜ ಹವಾಲ್ದಾರ್‌ಗೆ ವೇದಿಕೆಯ ಮೇಲೆ ಮಾಲೆ ಹಾಕಿ ಸತ್ಕರಿಸಬೇಕು ಅಂದುಕೊಂಡೆ. ಮೂವರೂ ಸಿಗಲಿಲ್ಲ.

ಸದ್ಯ ನೀವು ಸಿಕ್ಕಿರಲ್ಲ.

ಸಭೆ ಮುಗಿಯುವ ಹೊತ್ತಿಗೆ ರಾತ್ರಿಯಾಗಿತ್ತು.

-ಆರ್.ಬಿ.

 

Read Archieves of 14 February, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books