Ravi Belagere
Welcome to my website
ಇದು 2012ರ ಫೆಬ್ರವರಿ 14ರ ವ್ಯಾಲಂಟೈನ್ಸ್ ಡೇಗೆ ಸಮಸ್ತ ಪ್ರೇಮಿಗಳಿಗಾಗಿ ನಾನು ಕೊಡುತ್ತಿರುವ ಅಕ್ಕರೆಯ gift : ‘ಒಲವೇ...’. ಅರವತ್ತು ನಿಮಿಷಗಳ ಅರ್ಥಪೂರ್ಣ ಧ್ವನಿ ಮುದ್ರಿಕೆ. ಅಪ್ಪ-ಅಮ್ಮನ ನೆರಳಲ್ಲಿ ಮುದ್ದಾಗಿ ಬೆಳೆದ ಹುಡುಗಿ, ಅಷ್ಟೇ ಬೆಚ್ಚನೆಯ ಆರೈಕೆಯಲ್ಲಿ ಚೆಂದಗೆ ಬೆಳೆದ ಹುಡುಗ ಅದ್ಯಾವ ಮಾಯೆಯಲ್ಲೋ ಒಬ್ಬರನ್ನೊಬ್ಬರು ಪ್ರೀತಿಸತೊಡಗುತ್ತಾರೆ. ಅಲ್ಲಿಂದ ಶುರುವಾಗುತ್ತೆ ಅವರ ಪ್ರೇಮ ಯಾತ್ರೆ. ಫೆಬ್ರವರಿ 14 ನಿಮ್ಮ ಗೆಳೆಯ ಅಥವಾ ಗೆಳತಿಯನ್ನು ಭೇಟಿಯಾದಾಗ ಪ್ರೀತಿಯಿಂದ ‘ಒಲವೇ’ ಸಿಡಿ ಕೊಡಿ. ಅಷ್ಟೇ ಅಲ್ಲ, ಇಬ್ಬರೂ ಒಟ್ಟಿಗೇ ಕೂತ್ಕೊಂಡು ಸಮಾಧಾನವಾಗಿ ಕೇಳಿ. Be sure. ನಿಮ್ಮ ಒಲವು ಫಲಿಸುತ್ತೆ. ಮನಸು ಮುದಗೊಳ್ಳುತ್ತೆ. ಆಮೇಲೆ ಯಾವತ್ತೇ ಮನಸ್ಸಿಗೆ ಬೇಕೆನ್ನಿಸಿದರೂ ನೀವು ‘ಒಲವೇ...’ ಸಿಡಿ ಕೇಳ್ತಾನೇ ಇರ‍್ತೀರಿ...
Home About Us Gallery Books Feedback Prarthana Contact Us

ಅಮ್ಮ ಸಿಕ್ಕಿದ್ಲು ಎಂಬ ಕಾದಂಬರಿ ಏಕೆ ಬರೆದೆ ಅಂದ್ರೆ...

‘ಮೂರು ದಿನ’

ಹೌದು, ಮೂರು ದಿನ ಅದಕ್ಕೇ ಅಂತಲೇ ಇಟ್ಟುಕೊಂಡಿದ್ದೆ. ಬರೋಬ್ಬರಿ ಐನೂರ ಇಪ್ಪತ್ತು ಪುಟಗಳ ‘ಹಿಮಾಗ್ನಿ’ ಬರೆಯಲು ನಾನು ತಗೊಂಡಿದ್ದು ಒಂದೂವರೆ ವರ್ಷ. ಬರೆದ ಪ್ರತಿ ಅಕ್ಷರ ಕಂಪ್ಯೂಟರಿಗೆ feed ಮಾಡಿದ್ದು ಯಶೋಮತಿ. ಅದರ ಪ್ರತಿ ಅಕ್ಷರದ proof ನೋಡಿದ್ದು ನಿವೇದಿತಾ. ಅಷ್ಟಾದರೂ ಕೊನೆಯ ಸುತ್ತಿನ proofಗೆ, ನಡು ನಡುವೆ ಬಿಟ್ಟ detailsಗೆ ನಾನೇ ಕೂಡುವುದಿತ್ತು. ಇಸ್ರೇಲ್‌ನಿಂದ ಮುನ್ನುಡಿ ಕಳಿಸಿ, ವಿಮಾನವಿಳಿದವನೇ ಅದಕ್ಕೇ ಕುಳಿತು ಸುಮಾರು ಇಪ್ಪತ್ತು ತಾಸಿನಲ್ಲಿ ಆ ಕೆಲಸ ಮುಗಿಸಿ, cover page ಅಂತಿಮಗೊಳಿಸಿ “ಅಬ್ಬ! finished'' ಅಂದುಕೊಂಡಾಗ ಪುಸ್ತಕ ಬಿಡುಗಡೆಗೆ ಸರಿಯಾಗಿ ಐದು ದಿನ ಬಾಕಿಯಿತ್ತು. ಅಂದರೆ ಅದು ಜನವರಿ 30.

ಐದು ದಿನದೊಳಗೆ ಅತಿಥಿಗಳನ್ನು ಕರೆಯುವಿಕೆ, ವೇದಿಕೆ ಸಜ್ಜು, ಅಂಗಡಿ ಉದ್ಘಾಟನೆ ಸಿದ್ಧತೆ, ಇತರೆ ಸಿ.ಡಿಗಳ ಸಜ್ಜು, ನನ್ನ ಸಿಂಗಾರ ಬಂಗಾರ, ರೆಸ್ಟು, ಪತ್ರಿಕೆ-ಟೀವಿಗಳಿಗೆ ಆಹ್ವಾನ ಕಳಿಸೋದು ಹೀಗೆ ನೂರೆಂಟು ಕೆಲಸ ಮಾಡುವುದಿತ್ತು. ಆದರೆ ಇಸ್ರೇಲ್‌ನ ತಿರುಗಾಟ ಮತ್ತು ‘ಹಿಮಾಗ್ನಿ’ಯ ಸುಸ್ತು ನನ್ನನ್ನು ಅಕ್ಷರಶಃ ಈಯ್ದ ನಾಯಿಯ ಹಾಗೆ ಮಾಡಿ ಹಾಕಿದ್ದವು. ತುಂಬ ದಿನಗಳಿಂದ ನನ್ನ ರಕ್ತ ಪರೀಕ್ಷೆ ಮಾಡಿಸಿಲ್ಲ. ಕೆಲವು ಸಲ ಗ್ಲೂಕೋಸ್ ತುಂಬ ಕಡಿಮೆಯಾಗಿ ‘ಉಸ್ಸೋ’ ಎಂಬಂತೆ ಕಣ್ಣು ಕತ್ತಲೆ ಬಂದಂತಾಗಿ ಕೈ ಅಲುಗಿಸಲೂ ಆಗದೆ ಕುಳಿತುಬಿಡುತ್ತಿದ್ದೆ.

ಆದರೆ ಒಬ್ಬ writer ಹೇಗೆ ಹೆಡೆಯೆತ್ತುತ್ತಾನೆ ನೋಡಿ? ‘ಹಿಮಾಗ್ನಿ’ ಮುಗಿಸಿದ್ದೆ. ‘ಕನಸೇ’ ಸಿಡಿ record ಮಾಡಿದ್ದೆ. Valentines dayಗಾಗಿ ‘ಒಲವೇ’ ಸಿಡಿ record ಮಾಡಿದೆ. ‘ಉಡುಗೊರೆ’ ಪುಸ್ತಕವನ್ನು ಯುಷ್ಠಿರ compile ಮಾಡಿದ್ದ. ರವಿ ಅಜ್ಜೀಪುರ ಮತ್ತು ವಿಜಯಕುಮಾರ್ layout ಮಾಡಿ ಸಿದ್ಧಪಡಿಸಿದ್ದರು. ಆದರೂ final ಆಗಿ ಪ್ರಿಂಟ್‌ಗೆ ಕಳಿಸಬೇಕಿದ್ದುದು ನಾನೇ. ಅದನ್ನೂ ಮಾಡಿದ್ದೆ. ನನ್ನ ವಕೀಲರಾದ ರಘುಪತಿಯವರ ಸೋದರ ಡಾ.ಟಿ.ಎನ್.ಕೃಷ್ಣರಾಜು ಅವರ ‘ಕತೆಗಳು ಮತ್ತು ಕಾದಂಬರಿ’, ‘ಖಾಸ್‌ಬಾತ್-2004’ ‘ಬಾಟಮ್ ಐಟಮ್-6’ ಇವೆಲ್ಲವುಗಳ ಮೇಲೆ ಕಣ್ಣಾಡಿಸಿ ಅಚ್ಚಿಗೆ ಕಳಿಸಿದ್ದೆ. ನಾನು ತೆಪ್ಪಗಿರಬಹುದಿತ್ತು.


ನನ್ನದು ಬರಹಕ್ಕೆ ಸಂಬಂಸಿದಂತೆ ಅತೃಪ್ತ ಕಾಮ. “ನಿವೀ, ಇನ್ನೊಂದೇ ಒಂದು ಪುಟ್ಟ ಕಾದಂಬರಿ ಬರೆದು ಬಿಡ್ತೀನಿ. ಆಯ್ತಾ?" ಅಂದೆ.

ನಿವಿ ಗರ ಬಡಿದವಳಂತೆ ನಿಂತಳು.

ಕಾದಂಬರಿ ಬರೆಯೋದು ಅಂದರೆ ಸುಮ್ಮನೆ ಮಾತಲ್ಲ. ಒಬ್ಬನ ಮಾತೂ ಅಲ್ಲ. ನಾನು ಆಫೀಸಿನ ನನ್ನ ಛೇಂಬರು ಹೊಕ್ಕು, donot disturb ಅಂತ ಬಾಗಿಲಿಗೆ ಬೋರ್ಡು ಮೆತ್ತಿ ಕುಳಿತು ಬಿಡುತ್ತೇನೆ. ಹದಿನಾರಾ? ಹದಿನೆಂಟಾ? ಎಷ್ಟು ತಾಸು? ಬೆಲ್ಲು ಹೊಡೆದಾಗ ಅನ್ನ, ಮಾತ್ರೆ, ಸಿಗರೇಟು. ಒಳಗಿನಿಂದ ಪುಟಗಳು ಹೊರ ಬರುತ್ತಲೇ ಇರುತ್ತವೆ. ನಮ್ಮ ಆಫೀಸಿನ ಬಂಗಾರದಂಥ ಹುಡುಗಿ ಉಷಾ, ಇಡೀ ಕಾದಂಬರಿ ಟೈಪ್ ಮಾಡಲು ಕುಳಿತಳು. ವೀರೇಶ್ ಹೊಗೆಸೊಪ್ಪಿನವರ ಮುಖಪುಟ ಮಾಡುತ್ತೇನೆಂದ. ಅದನ್ನೆಲ್ಲ ಅವರಿಗೇ ಬಿಟ್ಟು ‘ಅಮ್ಮ ಸಿಕ್ಕಿದ್ಲು’ ಕಾದಂಬರಿಯನ್ನು ಬರೆಯಲು ಕುಳಿತೇ ಬಿಟ್ಟೆ. ಇಡೀ ನೂರಾನಾಲ್ಕು ಪುಟಗಳ ಕಾದಂಬರಿ. ಪುಟ್ಟದು ನಿಜ. It is about me. ಅದು ನನ್ನ ಬಗ್ಗೆಯೇ ಬರೆದುಕೊಂಡ ಹಾಗಿದ್ದ ವಸ್ತು. ತಲೆ ಎತ್ತದೆ ಬರೆದೆ. ನನ್ನ ಒಂದು ಪುಟದ hand writing ಅಂದರೆ ಮುದ್ರಣದಲ್ಲಿ ಒಂದೂಕಾಲು ಪುಟವಾಗುತ್ತೆ. ಬರೆಯೋದು ಕಷ್ಟವಲ್ಲ. ಉಷಾ ತಪ್ಪಿಲ್ಲದೆ ಕಂಪೋಸ್ ಮಾಡುತ್ತಾಳೆ. ಆದರೆ ಪ್ರೂಫ್ ನೋಡಲಿಕ್ಕೆ ಒಬ್ಬರು ಬೇಕಲ್ಲ? ನಂಗೆ ನಿವೇದಿತಾಳನ್ನ ಮಾತನಾಡಿಸಲಿಕ್ಕೂ ಹೆದರಿಕೆಯಾಗುತ್ತಿತ್ತು. ಅವಳು ‘ಹಿಮಾಗ್ನಿ’, ‘ಉಡುಗೊರೆ’, ‘ಖಾಸ್‌ಬಾತ್’, ‘ಬಾಟಮ್ ಐಟಮ್’, ‘ಕತೆಗಳು ಮತ್ತು ಕಾದಂಬರಿ’ ಇಷ್ಟು ಪುಸ್ತಕಗಳ proof ನೋಡಿ ಹೈರಾಣಾಗಿ ಬಿಟ್ಟಿದ್ದಳು.

“ಬಿಡು, ನಿವೀ... ನಮ್ಮ ಹಳೇ ಹುಡುಗ ಶ್ರೀನಿವಾಸ್‌ನನ್ನು ಕರೆಸೋಣ" ಅಂದೆ. ಅವನು ನನ್ನೊಂದಿಗೆ ಕೆಲಸ ಮಾಡಿ ಗೊತ್ತಿರುವವನು. ಮಗನಂತಹ ಹುಡುಗ. ಅವನು ಕರೆದ ಕೂಡಲೇ ಬಂದ. ಆದರೆ ನಿವಿ ಎಷ್ಟು possessive ಅಂದರೆ ‘proof ನಾನೇ ನೋಡಬೇಕು’ ಅಂದಳು. ‘ಅಮ್ಮ ಸಿಕ್ಕಿದ್ಲು’ ನನ್ನ ಎಪ್ಪತ್ತನೆಯ ಪುಸ್ತಕ. Fine, ಅವಳೇ ನೋಡಿದಳು.

ಬರೀ ಮೂರು ದಿನ.

ಒಂದು ಕಾದಂಬರಿ ಬರೆದು ಮುಗಿಸಿದೆ. ಅದರ ಉದ್ದಕ್ಕೂ ಇದ್ದದ್ದು, ಇರುವುದು, ನಾನು ಮತ್ತು ನನ್ನ ಅಮ್ಮ. ಈ ಬಾರಿ ಪುಸ್ತಕಗಳ ಮುದ್ರಣ ಹಂಚಿ ಬಿಟ್ಟಿದ್ದೆ. ನನ್ನ ಪತ್ರಿಕೆ ಮತ್ತು ಹೆಚ್ಚಿನ ಪುಸ್ತಕಗಳನ್ನು ಮುದ್ರಿಸುವುದು ‘ಗೀತಾಂಜಲಿ ಗ್ರಾಫಿಕ್ಸ್’ನ ನಾಗಸುಂದರ್. ಅವರಿಗೆ ‘ಹಿಮಾಗ್ನಿ’ ಕಾದಂಬರಿಯ ಹತ್ತು ಸಾವಿರ ಪ್ರತಿಗಳ ಮುದ್ರಣ, ಖಾಸ್‌ಬಾತ್ ಮತ್ತು ಬಾಟಮ್ ಐಟಮ್-6 ಅಮರಿಸಿದ್ದೆ. ‘ಉಡುಗೊರೆ’ ಪುಸ್ತಕವನ್ನು ಮೊದಲಬಾರಿಗೆ ಚಾಮರಾಜಪೇಟೆಯ Svan printersಗೆ ಕೊಟ್ಟೆ. ಆದರೆ ‘ಅಮ್ಮ ಸಿಕ್ಕಿದ್ಲು?’ ಅದನ್ನೂ ನಾನೇ ಮಾಡ್ತೀನಿ ಅಂದರು ಗೀತಾಂಜಲಿಯ ನಾಗಸುಂದರ್. ಭಾನುವಾರ ಸಂಜೆ ಬಿಡುಗಡೆಯಾಗಬೇಕು. ಒಂದೆರಡು ಸಾವಿರದ ಮಾತಲ್ಲ. ನನಗೆ ಹತ್ತು ಸಾವಿರ minimum ಪ್ರತಿಗಳು ಬೇಕು. ನಾಗಸುಂದರ್ ಫೆಬ್ರವರಿ ಐದರ ಬೆಳಗ್ಗೆಯ ಹೊತ್ತಿಗೆ ಹತ್ತು ಸಾವಿರ ಪ್ರತಿ ಆಫೀಸಿಗೆ ತಂದೇ ಬಿಟ್ಟರು.

ಅದು ನನ್ನ ಎಪ್ಪತ್ತನೆಯ ಪುಸ್ತಕ.

ಪುಸ್ತಕದ ಬಗ್ಗೆ ನಿಮಗೆ ಏನು ಹೇಳಲಿ? ಮಿಚ್ ಆಲ್ಬಮ್ ಎಂಬ ಇಂಗ್ಲಿಷ್ ಲೇಖಕನ For one more day ಎಂಬ ಕೃತಿಯಿಂದ inspire ಆದ ಕಾದಂಬರಿ. ಅದರಲ್ಲಿ ರವೀ ಎಂಬ ಭಯಂಕರ ಕುಡುಕನಾದ ಪತ್ರಕರ್ತ. ಕೆಲಸ ಕಳೆದುಕೊಳ್ಳುತ್ತಾನೆ. ಹೆಂಡತಿ ಮತ್ತು ಬೆಳೆದ ಮಗ ಬೇಸತ್ತು ಬಿಟ್ಟು ಹೋಗುತ್ತಾರೆ. ನಾಗತಿ ಚಂದ್ರು ಎಂಬ ಗೆಳೆಯ ಕುಡಿತ ಬಿಡಿಸಲು ಪ್ರಯತ್ನಿಸುತ್ತಾನೆ. ಕುಡಿತ ಬಿಡುವುದಾಗಿ ಹೇಳಿ ಹತ್ತು ಸಾವಿರ ಸಾಲ ತೆಗೆದುಕೊಂಡು, ಭರ್ತಿ ರಮ್ ಖರೀದಿಸಿ, ತನ್ನ ಸ್ಕೂಟರಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಮನೆಗೆ ಹೋಗುತ್ತಾನೆ. ಹೇಗೆಲ್ಲ ಮಾಡಿಕೊಳ್ಳಬಹುದು ಅಂತ ಪಟ್ಟಿ ಮಾಡಿದಾಗ, ಕಡೆಗೆ ಅವನಿಗೇ ಗೊತ್ತಿಲ್ಲದೆ “ಬಳ್ಳಾರಿ" ಅಂತ ಬರೆಯುತ್ತಾನೆ. Yes, ಬಳ್ಳಾರಿ ನನ್ನ ಊರು. ಅಲ್ಲಿಗೇ ಹೋಗಿ ಸಾಯಬೇಕು ಅಂತ ನಿರ್ಧರಿಸಿ ಚೀಲದ ತುಂಬ ರಮ್ ಇಟ್ಟುಕೊಂಡು ಬಳ್ಳಾರಿಗೆ ಸ್ಕೂಟರಿನ ಮೇಲೆ ಹೋಗುತ್ತಾನೆ. ತಲುಪಿದ ತಕ್ಷಣ ಒಂದು ಲಾರಿಗೆ ಗುದ್ದಿ ಸಾಯುವ ಪ್ರಯತ್ನ ಮಾಡುತ್ತಾನೆ. ಆದರೆ ವಿಪರೀತ ಗಾಯಗಳಾಗಿ ಉಳಿದುಕೊಂಡುಬಿಡುತ್ತಾನೆ. ಆಮೇಲೆ ಎಷ್ಟೋ ವರ್ಷಗಳ ಹಿಂದೆ ತಾನು ಬಿಟ್ಟು ಬಂದಿದ್ದ ತನ್ನ ಮನೆಗೆ ಹೋಗುತ್ತಾನೆ.


ಅಲ್ಲಿ ಅನಿರೀಕ್ಷಿತವಾಗಿ ಸಿಗುತ್ತಾಳೆ ಅಮ್ಮ.

ಮುಂದಿನದು ನೀವು ಓದಿಕೊಳ್ಳಿ. She changes everything. ನಾನು ಬರೆದ ಕಾದಂಬರಿಗಳ ಪೈಕಿ ತುಂಬ ಚೆಂದ ಅನ್ನಿಸಿದ್ದು, ನನಗೆ ಇದು. ಬಿಡುಗಡೆಯಾದ ದಿನವೇ ಎಂಟು ಸಾವಿರ ಕಾಪಿ ಮಾರಾಟವಾಗಿದೆ.


ನೀವು ಓದಬೇಕು. ನಿಮಗೆ ಅಮ್ಮ ಇದ್ದರೆ ಖಂಡಿತ ಓದಬೇಕು. ನೀವು ಕುಡುಕರಾಗಿದ್ದರೆ ಓದಲೇಬೇಕು. ಅಮ್ಮನನ್ನು ಕಳೆದುಕೊಂಡಿದ್ದೀರಾ?

ಈ ಕಾದಂಬರಿಯಲ್ಲಿ ಅಮ್ಮ ಸಿಗುತ್ತಾಳೆ. ಓದಿ.

-ರವೀ

Read Archieves of 14 February, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books