Ravi Belagere
Welcome to my website
ಇದು 2012ರ ಫೆಬ್ರವರಿ 14ರ ವ್ಯಾಲಂಟೈನ್ಸ್ ಡೇಗೆ ಸಮಸ್ತ ಪ್ರೇಮಿಗಳಿಗಾಗಿ ನಾನು ಕೊಡುತ್ತಿರುವ ಅಕ್ಕರೆಯ gift : ‘ಒಲವೇ...’. ಅರವತ್ತು ನಿಮಿಷಗಳ ಅರ್ಥಪೂರ್ಣ ಧ್ವನಿ ಮುದ್ರಿಕೆ. ಅಪ್ಪ-ಅಮ್ಮನ ನೆರಳಲ್ಲಿ ಮುದ್ದಾಗಿ ಬೆಳೆದ ಹುಡುಗಿ, ಅಷ್ಟೇ ಬೆಚ್ಚನೆಯ ಆರೈಕೆಯಲ್ಲಿ ಚೆಂದಗೆ ಬೆಳೆದ ಹುಡುಗ ಅದ್ಯಾವ ಮಾಯೆಯಲ್ಲೋ ಒಬ್ಬರನ್ನೊಬ್ಬರು ಪ್ರೀತಿಸತೊಡಗುತ್ತಾರೆ. ಅಲ್ಲಿಂದ ಶುರುವಾಗುತ್ತೆ ಅವರ ಪ್ರೇಮ ಯಾತ್ರೆ. ಫೆಬ್ರವರಿ 14 ನಿಮ್ಮ ಗೆಳೆಯ ಅಥವಾ ಗೆಳತಿಯನ್ನು ಭೇಟಿಯಾದಾಗ ಪ್ರೀತಿಯಿಂದ ‘ಒಲವೇ’ ಸಿಡಿ ಕೊಡಿ. ಅಷ್ಟೇ ಅಲ್ಲ, ಇಬ್ಬರೂ ಒಟ್ಟಿಗೇ ಕೂತ್ಕೊಂಡು ಸಮಾಧಾನವಾಗಿ ಕೇಳಿ. Be sure. ನಿಮ್ಮ ಒಲವು ಫಲಿಸುತ್ತೆ. ಮನಸು ಮುದಗೊಳ್ಳುತ್ತೆ. ಆಮೇಲೆ ಯಾವತ್ತೇ ಮನಸ್ಸಿಗೆ ಬೇಕೆನ್ನಿಸಿದರೂ ನೀವು ‘ಒಲವೇ...’ ಸಿಡಿ ಕೇಳ್ತಾನೇ ಇರ‍್ತೀರಿ...
Home About Us Gallery Books Feedback Prarthana Contact Us

ಇನ್ನೂ ದೊಡ್ಡದಾದ್ದೇನೋ ಮಾಡಬೇಕು ಎಂದ ಹುಡುಗನ ಜೊತೆ ಆ ಮೂರು ದಿನ!

ಇಲ್ಲ,


ಬೇರೇನಾದರೂ ಮಾಡಬೇಕು. ಇದು ಸಾಲದು. ದುಡ್ಡು ಸಿಕ್ಕಿದೆ ನಿಜ. ಹೆಸರು, ಕೀರ್ತಿ, ಅವಾರ್ಡು, ಸಮಾಧಾನ ಎಲ್ಲ ಸಿಕ್ಕಿದೆ. ಆದರೆ ಮನಸ್ಸು ಆಸೆಬುರುಕ ಮುಂಡೇದು. ನನ್ನ ತಾಕತ್ತಿಗೆ ಇಷ್ಟೇನಾ? ಎಂತೆಂಥವರೆಲ್ಲ ಏನೇನಾಗಿದ್ದಾರೆ? ಲಕ್ಷಗಟ್ಟಲೆ ಸರ್ಕ್ಯುಲೇಷನ್ ಇರೋ ಪತ್ರಿಕೆಗಳವರು ಕೋಟಿಗಟ್ಟಲೆ ಜಾಹೀರಾತು ದುಡೀತಾರೆ. ಸಾವಿರ, ಒಂದೂವರೆ ಸಾವಿರ strengthಇರೋ ಶಾಲೆಯವರು ಕೋಟ್ಯಂತರ donation ಎಬ್ಬುತ್ತಾರೆ. ಅಂಥದರಲ್ಲಿ ನಾನು ನೆಟ್ಟಗೊಂದಿಷ್ಟು ಕೋಟಿ ಹಣ ಮಾಡದೆ, ಬರೀ ಎಪ್ಪತ್ತು ಪುಸ್ತಕ ಬರೆದು ಗುಡ್ಡೆ ಹಾಕಿ, ಹೆಗಲು ಎಗರಾಕಿಕೊಂಡು, ಎಂಟು ವರ್ಷಕ್ಕೆ ನನ್ಮಗ ದಂಟು ಅನ್ನೋಹಂಗೆ ಏನೋ ಮಹಾ ಸಾಧನೆ ಮಾಡಿದ್ದೇನೆ ಎಂಬಂತೆ ಬೀಗುವುದು ಸರಿಯಾ?


“ಅಪ್ಪಾ, ನೀನು ತುಂಬ ಅಲ್ಪ ತೃಪ್ತ" ಅಂತ ಕರ್ಣ ಒಮ್ಮೆ ಅನ್ನುವುದರೊಂದಿಗೆ ಈ ಭಾವ ಬಲವಾಗಿ ಹೋಯಿತು.
""You always swim in a small pond' ಎಂಬುದು ಗಿರೀಶ್ ಹಂಪಾಳಿಯ ಥೇಟು ಬಣಜಿಗ ಕಾಮೆಂಟು. ಹದಿನೇಳು ವರ್ಷಗಳಲ್ಲಿ ‘ಹಾಯ್ ಬೆಂಗಳೂರ್!’ ಬೆಳೆದದ್ದು, ಅದೇ ಹದಿನೇಳು ವರ್ಷಗಳಲ್ಲಿ ಇನೋಸಿಸ್ ಬೆಳೆದದ್ದು ಲೆಕ್ಕ ಹಾಕಿ ಮಾತನಾಡುವವನು ಅವನು. ಒಬ್ಬ ನೌಕರನನ್ನು ಕೆಲಸಕ್ಕೆ ತೆಗೆದುಕೊಂಡರೆ, ಅವನಿಗೆ ಕೊಡುವ ಸಂಬಳವಷ್ಟೆ ಅಲ್ಲ, ಅವನು ಸ್ಕೂಟರು ನಿಲ್ಲಿಸುವ ಜಾಗದ ಬಾಡಿಗೆ, ಛೇರು, ಮುಂದಿನ ಟೇಬಲ್ಲು, ನೆತ್ತಿಯ ಮೇಲಿನ ಲೈಟು, ಫ್ಯಾನು, ಫೋನು, ಕುಡಿಯುವ ನೀರು, ಬಳಸುವ ಲಿಫ್ಟು, ಒರೆಸುವ ಟಿಷ್ಯೂ ಪೇಪರು-ಎಲ್ಲ ಲೆಕ್ಕ ಹಾಕಿ ಅವನ ಕಿಮ್ಮತ್ತಿಷ್ಟು, ಅವನಿಂದ ಆಗುವ ಕೆಲಸಕ್ಕೆ ನಾವು ಕೊಡುವುದಿಷ್ಟು ಅಂತ ಲೆಕ್ಕ ಹಾಕಿ, ಅದರ ಆಧಾರದ ಮೇಲೆ ಒಂದು ಕೆಲಸಕ್ಕೆ ಇಂತಿಷ್ಟು ಅಂತ ತನ್ನ ಕ್ಲಯಿಂಟುಗಳಿಂದ ವಸೂಲಿ ಮಾಡುತ್ತದೆ ಇನೋಸಿಸ್ ಅಥವಾ ವಿಪ್ರೋ. ಇವುಗಳನ್ನೆಲ್ಲ ನೋಡಿ, ಅನುಭವಿಸಿ, ಇವುಗಳಲ್ಲಿ ದುಡಿದು ಬಂದವರು ಗಿರೀಶ್‌ನಂಥ ಹುಡುಗರು. ಕರ್ಣನಿಗೆ ಪ್ರಾರ್ಥನಾ ಶಾಲೆ small pond ಅನ್ನಿಸಿದ್ದರೆ ಆಶ್ಚರ್ಯವಿಲ್ಲ. ನನ್ನ ಪಾಲಿಗೆ ಆರು ಸಾವಿರದ ಏಳು ನೂರೂ ಚಿಲ್ರೆ ಮಕ್ಕಳು ಓದುತ್ತಿರುವ ‘ಪ್ರಾರ್ಥನಾ’ ಅಗಾಧವಾದದ್ದು ನಿಜ. ಆದರೆ ಅವನಿಗೆ? ಅವನ ವಯಸ್ಸು, ಶಕ್ತಿ, ತಾಕತ್ತು, ಕನಸುಗಾರಿಕೆಗೆ ಅದು ಚಿಕ್ಕದೇ. ಹೀಗಾಗಿ ಬೇರೇನಾದರೂ ಮಾಡ್ತೀನಿ ಅಂತ ಕಾಡತೊಡಗಿದ.


ನಿಮಗೆ ಗೊತ್ತು. ನಾನು ಸಂಸಾರವೊಂದನ್ನು ಬಿಟ್ಟು ಬೇರೇನನ್ನೂ ಪಾರ್ಟ್‌ನರ್ನಲ್ಲಿ ಮಾಡುವವನಲ್ಲ. ನನ್ನ ಹಿರಿ ಗೆಳೆಯ ಮಹಾನ್ ಉತ್ಸಾಹಿ. ಅವನು ಕಟ್ಟಡ ಕಟ್ಟುತ್ತಾನೆ. ಮನೆ ಕಟ್ಟಿಸಿ ಮಾರುತ್ತಾನೆ. ಜಿಮ್ ನಡೆಸುತ್ತಾನೆ. ಕಾಫಿ ಡೇ ತರಹದ ಹೊಟೇಲು ನಡೆಸುತ್ತಾನೆ. ಅಲ್ಲೆಲ್ಲೋ ಕಾಫಿ ತೋಟ ಕೊಂಡಿದ್ದಾನೆ. ಇತ್ತೀಚೆಗೆ ಗಾಂಬಜಾರ್‌ನಲ್ಲಿ ಮುಗಿಲೆತ್ತರದ ಮಳಿಗೆ ಖರೀದಿಸಿದ್ದಾನೆ. ಅವನ ಸಾಹಸಗಳ ಪಟ್ಟಿ ದೊಡ್ಡದಿದೆ. ನಾನು ಹೆಚ್ಚೆಂದರೆ ಎರಡು ಸಲ ಅವನ ಕಾಫಿ ಅಂಗಡಿಗೆ, ನಾಲ್ಕಾರು ಸಲ ಕಾಫಿ ತೋಟಕ್ಕೆ ಹೋಗಿದ್ದೇನೆ. ಉಳಿದಂತೆ ಈಗ ನನ್ನ ಪುಸ್ತಕದ ಅಂಗಡಿ ಅವನ ಕಟ್ಟಡದಲ್ಲಿದೆ. ಅದಕ್ಕೆ ಬಾಡಿಗೆ ಕೊಡುತ್ತಿದ್ದೇನೆ.
ಇನ್ನು ಕಿಟ್ಟಿ : ಅವನದು ಅಪ್ಪಟ ಸಿನೆಮಾ ಪ್ರಪಂಚವಾದರೂ ಮನಸ್ಸಿನಿಂದ ವಕ್ಕಲಿಗ. ಭೂಮಿ, ತೋಟ, ಜಮೀನು ಅಂತ ಮಾತಾಡುತ್ತಿರುತ್ತಾನೆ. ಅವನವು ಎರಡೇ ಎರಡು ಸಿನೆಮಾ ನೋಡಿದ್ದೇನೆ. ಇದಿಷ್ಟರ ಹೊರತಾಗಿ ನನಗೆ ಯಾರೊಂದಿಗೂ ವ್ಯವಹಾರ-ಹಣಕಾಸಿನ ಸಂಬಂಧ-ಲೇವಾದೇವಿಗಳಿಲ್ಲ. ಕುಟುಂಬದ ಹುಡುಗರು ನೀವು ವ್ಯಾಪಾರ-ವ್ಯವಹಾರ ಮಾಡಬೇಡಿ. ಸಂಬಂಧಗಳು ಹಾಳಾಗುತ್ತವೆ. ಚಿಕ್ಕಪುಟ್ಟ ಕೈಗಡಗಳನ್ನು ತಗೋಬೇಡಿ ಅಂತ ಹೇಳಿ ಬಿಟ್ಟಿದ್ದೇನೆ. ತನ್ನ ಅಕೌಂಟಿನಲ್ಲೇ ಹಣ ಇದ್ದರೂ ಲಲಿತೆ, ಹತ್ತು ಸಾವಿರ ರುಪಾಯಿಬೇಕೆಂದರೆ ನನಗೇ ಫೋನು ಮಾಡುತ್ತಾಳೆ. ಇಂಗ್ಲಂಡಿನಲ್ಲಿ ಓದಿ ಬಂದ ಕರ್ಣನಿಗೆ ‘ಪ್ರಾರ್ಥನಾ’ದಲ್ಲಿ ಡೆಪ್ಯೂಟಿ ಸೆಕ್ರೆಟರಿ ನೌಕರಿಯಿದೆ. ಸಂಬಳವಿದೆ. ತುಂಬ ಚಿಕ್ಕ ಮೊತ್ತದ ಚೆಕ್‌ಗಳಿಗೆ ಸಹಿ ಹಾಕುವ ಸ್ವಾತಂತ್ರ್ಯವಿದೆ. ಆದರೆ ಶುದ್ಧ ಕೋಮಟಿಗನಂತೆ ತಿಜೋರಿಯ ಬೀಗದ ಕೈ ನಾನೇ ಇಟ್ಟುಕೊಂಡಿದ್ದೇನೆ. ಎಲ್ಲ ಸೇರಿಸಿದರೆ ಕೆಲವೇ ಕೋಟಿಗಳಲ್ಲಿ ಮುಗಿದು ಹೋಗುವ ವ್ಯವಹಾರವೇ ಆದರೂ ನನ್ನ ಕಣ್ಣಳತೆಯಾಚೆಗೆ ಕಡ್ಡಿ ಕದಲುವಂತಿಲ್ಲ. ದಾಂಡೇಲಿಯ ಆಸ್ತಿ ಕೂಡ ನನ್ನ ಮೋಜಿಗೆ, ವಿಶ್ರಾಂತಿಗೆ, fancyWæ, in fact ಕೊನೆಗಾಲಕ್ಕೆ ಅಂತ ಮಾಡಿಕೊಂಡಿರುವುದೇ ಹೊರತು ಅಲ್ಲಿಂದ ಈ ತನಕ ನನಗೆ ಬಂದಿರುವುದು ಅಂತ absolutely ಏನೂ ಇಲ್ಲ.


ಇದಿಷ್ಟೂ ನನ್ನ financial ಸ್ಥಿತಿ ಗತಿ. ಇಂಥದರಲ್ಲಿ ಈ ಹುಡುಗ ಕರ್ಣ “ನಾನು ಬೇರೇನೋ ಮಾಡ್ತೀನಿ" ಅಂದಾಗ ನಿಜಕ್ಕೂ ಯೋಚನೆಗೆ ಬಿದ್ದೆ. ಇವನಿಗೆ ಬೆಂಗಳೂರಿನಲ್ಲೇ ಇನ್ನೊಂದು ಶಾಲೆ ಆರಂಭಿಸಲು ಹೇಳಲಾ? ಅವನು ಪತ್ರಕರ್ತನಲ್ಲ. ಬರವಣಿಗೆಯೆಡೆಗೆ ಆಕರ್ಷಿತನಾದವನೂ ಅಲ್ಲ. ಇಂಗ್ಲಂಡಿನಿಂದ ಬಂದಾಗ ಬಳ್ಳಾರಿಯ mining ಭಯಂಕರ boomನಲ್ಲಿತ್ತು. ಅದರ ಬಗ್ಗೆ ಅವನು ಕೇಳಿದ್ದ. ಅದೇ ಟೈಮಿಗೆ ನನ್ನ ಜನ್ಮದ ಗೆಳೆಯ ಸುರೇಶ್ ಶೆಟ್ಟಿ ಬಳ್ಳಾರಿಯಿಂದ ಬಂದಿದ್ದ. ಅವನಿಗೆ ಮೂರೂ ಇವೆ : Wining, dining and mining. ಅರ್ಥವಿಷ್ಟೆ : Wine shopಗಳಿವೆ. ಊಟದ ಹೊಟೇಲಿವೆ. ಮೈನ್ಸೂ ಇವೆ. ಅವನೊಂದಿಗೆ ಮೈನ್ಸ್ ಕುರಿತು ಮಾತನಾಡುವುದನ್ನು ಕರ್ಣ ಕೇಳಿಸಿಕೊಂಡನಲ್ಲ?
""Why not me?' ಅಂದ.
“ನೀನು ಜನಾರ್ದನ ರೆಡ್ಡಿಗೆ ಒಂದು ಮಾತು ಹೇಳಿದರೆ ಸಾಕು. ರೈಸಿಂಗ್ ಕಾಂಟ್ರಾಕ್ಟ್ ಕೊಡಿಸ್ತಾನೆ. ಕರ್ಣ ಕೊಂಚ ಕಷ್ಟಪಟ್ಟು ಬಿಸಿಲಲ್ಲಿ ಓಡಾಡಿದರೆ ಸಾಕಷ್ಟು ಹಣ ದುಡೀಬಹುದು" ಅಂದಿದ್ದ ಸುರೇಶ್. ಈ ಹುಡುಗ ಅವತ್ತಿನಿಂದ ಕುಣಿಯತೊಡಗಿದ.
ಮೊದಲನೆಯದಾಗಿ ನನಗೆ ಮೈನಿಂಗ್ ಗೊತ್ತಿಲ್ಲ. ರೈಸಿಂಗ್ ಕಾಂಟ್ರಾಕ್ಟ್ ಅಂದರೇನು? ತಿಳಿಯದು. ಅದನ್ನು ಆ ಉರಿ ಬಿಸಿಲಲ್ಲಿ, ಬಳ್ಳಾರಿಯ ಭಯಂಕರ ಬೆಟ್ಟಗಳಲ್ಲಿ ಅಲೆದು ಕರ್ಣ ನಿಭಾಯಿಸಬಲ್ಲನಾ? I doubt. ಎಷ್ಟರ ಮಟ್ಟಿಗೆ ಅದು legal? ನಾನು ಅರಿಯೆ. ಎಲ್ಲಕ್ಕಿಂತ ಹೆಚ್ಚಿಗೆ ನನ್ನ ತಕರಾರಿದ್ದುದು ಜನಾರ್ದನರೆಡ್ಡಿಯನ್ನು ಕಂಡು, ನನ್ನ ಮಗನಿಗಿದು ಕೊಡಿಸು ಅಂತ ಕೇಳುವುದಕ್ಕೆ. ಉಹುಂ! “ಸುರೇಶಾ, ಇದನ್ನ ಅವನ ತಲೆಗೆ ಹಾಕಬೇಡ ಸುಮ್ಮನಿರು" ಅಂದೆ.
“ಬೇಡ ಬಿಡಿ, ಕಡೇ ಪಕ್ಷ ಆ ಮನುಷ್ಯ ಹ್ಯಾಗಿದಾನೆ ಅಂತ ಒಂದ್ಸಲ ನೋಡ್ತೀನಿ. I just want to meet him. ತುಂಬ ಕೇಳಿದೀನಿ ಅವರ ಬಗ್ಗೆ. ಚಿಕ್ಕ ವಯಸ್ಸಿನಲ್ಲಿ ಏನೆಲ್ಲ ಸಾಧನೆ ಮಾಡಿದ್ದಾರೆ?" ಅಂತ ಬೆನ್ನತ್ತಿದ ಕರ್ಣ. ನ್ಯಾಯಾಲಯಕ್ಕೆ ಸಂಬಂಸಿದಂತೆ ನಾನೊಮ್ಮೆ ಬಳ್ಳಾರಿಗೆ ಹೋಗುವುದಿತ್ತು. ಸರಿ, ಇವನನ್ನು ಭೇಟಿ ಮಾಡಿಸಿದ ಹಾಗೂ ಆಯ್ತು, ನಾನು ಬೆಳೆದ ಊರಾದ್ದರಿಂದ ಅವರಿವರನ್ನು ಪರಿಚಯಿಸಿದ ಹಾಗೂ ಆಯ್ತು ಅಂದುಕೊಂಡೆ. ಹೊರಡುವ ಮುನ್ನ ಜನಾರೆಡ್ಡಿಯ ಕಡೆಯವರನ್ನು ಸಂಪರ್ಕಿಸಿದೆ. ನನ್ನ ಬಳಿ ಆತನ ನಂಬರೂ ಇರಲಿಲ್ಲ. ಆತ ಯಾವ ನಂಬರನ್ನೂ ಖಾಯಂ ಆಗಿ ಇಟ್ಟುಕೊಳ್ಳುವುದಿಲ್ಲ. ಸಂಪರ್ಕವಿರುವ ಪ್ರಸಂಗ ಬಂದರೆ ತಾನೇ ಫೋನು ಮಾಡುತ್ತಿದ್ದ. ಅದೊಂಥರಾ under worldನವರ "I will be in touch with you' ಅಂದಹಾಗೆ. ಜನಾರೆಡ್ಡಿ ಊರಲ್ಲೇ ಇರ‍್ತಾರೆ. ನೀವು ಮನೆಗೆ ಬರಬೇಕಂತೆ, ಸಿಕ್ತಾರಂತೆ ಅಂತ ಸಂದೇಶ ಬಂತು.


ಕೋರ್ಟಿನ ಕೆಲಸ ಮುಗಿಸಿ ‘ಹೊಟೇಲ್ ಬಾಲಾ’ದಲ್ಲಿ ರೂಮು ಮಾಡಿ ನನ್ನ ಕೆಲವು ಆಪ್ತರನ್ನು ಹೊಟೇಲಿಗೇ ಕರೆಸಿ ಕರ್ಣನಿಗೆ ಪರಿಚಯಿಸಿದೆ. ಕೆಲವು ಬೀದಿಗಳಿಗೆ ಕರೆದೊಯ್ದೆ. ಅಲ್ಲಿ ಗೋವಿಂದು ಹೋಟ್ಲಿಗೆ ‘ನಾನು ಬಳ್ಳಾರಿಗೆ ಬಂದಿದ್ದೇನೆ’ ಅಂತ ಮೆಸೇಜು ಕಳಿಸಿದೆ. ನನ್ನ ಹೊಟ್ಟೆಬಾಕತನ ಗೋವಿಂದುವಿಗೆ ಗೊತ್ತು. ಒಂದು ಕುರಿಯ ದೇಹದ ಅಷ್ಟೂ ಭಾಗಗಳ samples ತೆಗೆದು ಅದ್ಭುತವಾಗಿ ಬೇಯಿಸಿ, ಹುರಿದು ನಾನಾ ತರಹದ ಅಡುಗೆ ಮಾಡಿ ನಾನಿರುವಲ್ಲಿಗೇ ಕಳಿಸಿಬಿಡುತ್ತಾನೆ ಗೋವಿಂದು. ಎದುರಿಗೆ ತಂದು ಹರವಿದ ಐಟಮ್ಮುಗಳನ್ನ ನೋಡಿಯೇ ಕರ್ಣ ದಂಗು ಬಡಿದು ಹೋಗಿದ್ದ. "Eating all this and at this early hours?' ಅಂದು ಚಪ್ಪರಿಸಿ ತಿಂದ.


In fact, ಆ ಹೊತ್ತಿಗೆ ನಾನು ಅವನೊಂದಿಗೆ ಬಳ್ಳಾರಿಯ ಬಗ್ಗೆ, ಅಲ್ಲಿನ ರಾಜಕಾರಣದ ಬಗ್ಗೆ, ಜನಾರ್ದನ ರೆಡ್ಡಿ ಕುಟುಂಬದ ಬಗ್ಗೆ, ಅವರೊಂದಿಗೆ ನನಗಿರುವ ಅತ್ಯಂತ ಔಪಚಾರಿಕವಾದ, non committed ಸಂಬಂಧದ ಬಗ್ಗೆ, legal ಅಲ್ಲದ ಯಾವುದನ್ನೂ ನಾನು ಮಾಡುವುದಿಲ್ಲ ಮತ್ತು ಮಾಡಗೊಡುವುದಿಲ್ಲ ಎಂಬ ಬಗ್ಗೆ ಎಷ್ಟು ವಿವರವಾಗಿ ಹೇಳಿದ್ದೆನೆಂದರೆ ಅವನ ಮನಸ್ಸಿನಲ್ಲಿ ರೈಸಿಂಗ್ ಕಾಂಟ್ರಾಕ್ಟ್‌ನ ಕನಸೇ ಕರಗಿ ಹೋಗಿ, ಕೇವಲ ಜನಾರ್ದನ ರೆಡ್ಡಿಯನ್ನು ಭೇಟಿ ಮಾಡುವ ಉತ್ಸಾಹವಷ್ಟೇ ಉಳಿದಿತ್ತು.


ನೋಡಿ, ಇಂಥ ವಿಷಯಗಳಲ್ಲಿ ತಂದೆಯರಿಗೆ, ಅದರಲ್ಲೂ ನನ್ನಂಥ ತಂದೆಯರಿಗೆ ಈ ಸಮಸ್ಯೆ ಇದಿರಾಗುತ್ತದೆ. ಅಪ್ಪ ನನಗೆ ಸ್ವತಂತ್ರವಾಗಿ ಏನನ್ನೂ ಮಾಡಲು ಬಿಡುವುದಿಲ್ಲ. ಮುನ್ನುಗ್ಗಲು ಬಿಡುವುದಿಲ್ಲ. Dummy ಮಾಡಿ ಕೂಡಿಸಿಬಿಡುತ್ತಾರೆ. ಸ್ವಂತವಾಗಿ ನಾನು ಏನನ್ನಾದರೂ ಮಾಡುವುದು ಯಾವಾಗ? ಇವನು ಸಾಯೋತನಕ ಹೀಗೇ ಇವನ ಛತ್ತರಿಕೆಯ ಕೆಳಗೇ ಇರಬೇಕಾ ಅನ್ನಿಸಿಬಿಡುತ್ತದೆ. ಕರ್ಣನಿಗೆ ಈಗಾಗಲೇ ಹಾಗನ್ನಿಸಿದೆ. ತುಂಬ ದಿನ ಅದನ್ನು ನಾನು ಮುಂದಕ್ಕೆ ಹೋಗಲು ಬಿಟ್ಟರೆ ಉತ್ಸಾಹವೆಲ್ಲ ಕುಗ್ಗಿ ಹೋಗಿ ಹುಡುಗ ನಿಷ್ಕ್ರಿಯನಾಗಿಬಿಡುತ್ತಾನೆ. ಹಾಗಂತ, ಕೋಟಿಗಟ್ಟಲೆ ಹಣ ಕೈಗಿಟ್ಟು ಏನು ಬೇಕಾದರೂ ಮಾಡಿಕೋ ಅನ್ನಲಿಕ್ಕೂ ಆಗುವುದಿಲ್ಲ. ನನ್ನ ಅಳಿಯಂದಿರು ಏನನ್ನು ಮಾಡಲಿಕ್ಕೂ ಸ್ವತಂತ್ರರು. ಆದರೆ ನನ್ನ ಮಗ pub ತೆರೆದರೆ “ಕರ್ಣ pub ಮಾಡಿದ" ಅನ್ನುವುದಿಲ್ಲ. “ರವಿ ಬೆಳಗೆರೆ ಮಗ pub ಮಾಡಿದ. Dance bar ಮಾಡಿದ" ಅನ್ನುತ್ತಾರೆ. ಅವನಿಗೆ ಅದನ್ನೆಲ್ಲ ಕ್ರಮೇಣ convince ಮಾಡಿದ್ದೇನೆ. ನೀನು ಹೊರಗೆ ಸಿಗರೇಟು ಸೇದಿದರೆ ಕೇವಲ ಬೆಳಗೆರೆಯ ಮಗ ಸೇದ್ತಾನೆ ಅನ್ನೋದಿಲ್ಲ. “ಪ್ರಾರ್ಥನಾದ Deputy Secretary ಸೇದ್ತಾನೆ" ಅಂತಾರೆ ಎಂಬುದನ್ನು ತಿಳಿ ಹೇಳಿದ್ದೇನೆ.


ಅವನಾದರೂ ತೀರ emotional ಅಲ್ಲದ ತಣ್ಣಗಿನ ಮನಸ್ಸಿನ ಹುಡುಗ. ಎಲ್ಲವನ್ನೂ ತಿಳಿದುಕೊಳ್ಳುತ್ತಾನೆ. ಅವತ್ತು ‘ಹೊಟೇಲ್ ಬಾಲಾ’ದ ಕೋಣೆಯಲ್ಲಿ ನಾವು ಲೋಕಾಭಿರಾಮವಾಗಿ ಹರಟುತ್ತಾ ಕುಳಿತಾಗ ಫೋನು ಬಂದಿತ್ತು.


“ಜನಾರ್ದನ ರೆಡ್ಡಿಯವರು ಕೊಂಚ busy. ಅವರು free ಆದ ಕೂಡಲೆ ನಿಮಗೆ call ಮಾಡ್ತಾರಂತೆ"


Fine. ಇನ್ನೊಂದೆರಡು ಕಡೆ ಹೋಗಿ ಬರುವುದಿತ್ತು. ಮತ್ತಿಬ್ಬರನ್ನು ಕಾಣುವುದಿತ್ತು. ಅದೆಲ್ಲ ಮುಗಿಸಿಕೊಂಡೆವು. ಸಾಯಂಕಾಲವಾದರೂ ಫೋನು ಬರಲಿಲ್ಲ. ನಾನು ಮೊದಲ ಸಲ ಎಲ್ಲಿಗಾದರೂ ಹೋದರೆ ಅಲ್ಲಿನ ವಾತಾವರಣ, ಸೆಕ್ಯುರಿಟಿ, ಮನೆಯ ಒಡೆಯನಿದ್ದಾಗಿನ ಸಂದಡಿ, ಒಡೆಯನಿಲ್ಲದಾಗಿನ ಸಡಿಲ, ಕುಟುಂಬದವರಿದ್ದಾಗಿನ ವಾತಾವರಣ ಇವುಗಳನ್ನೆಲ್ಲ ಐದೆಂಟು ನಿಮಿಷಗಳಲ್ಲಿ study ಮಾಡಿಬಿಟ್ಟಿರುತ್ತೇನೆ. ಬಾಲಾ ಹೊಟೇಲಿಗೆ ಹಿಂತಿರುಗುವ ಹಾದಿಯಲ್ಲೇ ಜನಾರೆಡ್ಡಿಯ ಮನೆಯಿದೆ. ಕಾರು ಕೊಂಚ ನಿಧಾನ ಮಾಡಿ ಇಣುಕಿ ನೋಡಿದೆ. I was sure. ಆತ ಒಳಗಿದ್ದ. ಸಹಾಯಕನಿಗೆ ಫೋನು ಮಾಡಿದೆ.
“ಸಾಹೇಬರು ಮನೇಲಿಲ್ಲ. ಯಾವಾಗ ಬರ‍್ತಾರೋ ಗೊತ್ತಿಲ್ಲ. ಇವತ್ತು ಸಿಗೋದು ಡೌಟು. ನೀವು ನಾಳೆ ಟ್ರೈ ಮಾಡುವುದು ಬೆಟರು" ಎಂಬ ಉತ್ತರ ಬಂತು.
ಕರ್ಣನಿಗೆ ಏನನ್ನೂ ಹೇಳಲಿಲ್ಲ. ಹೊಟೇಲಿಗೆ ಹೋಗಿ ಸ್ನಾನ ಮಾಡಿ, ಉಂಡು ಮಲಗಿದೆ. ನನಗೆ ತುಂಬ ಕಿರಿಕಿರಿಯಾಗುವುದು ಅಂದರೆ, ಯಾರಿಗಾಗಿಯೋ ಕಾಯುವುದು. ಕೆಲವೊಮ್ಮೆ ಕಾಯುವುದು ಅನಿವಾರ್ಯವಾಗುತ್ತದೆ. ವೈದ್ಯರಿಗಾಗಿ, ಶಾಲೆಯಲ್ಲಿ ಮಕ್ಕಳ ಅಡ್ಮಿಷನ್ನಿಗಾಗಿ, ತುಂಬ busy ಇರುವ ಲೇಖಕ ಅಥವಾ ಪತ್ರಕರ್ತರಿಗಾಗಿ-fine. ಕಾಯುತ್ತೇನೆ. ಆದರೆ ಮಂತ್ರಿ ಮಾಗಧರಿಗೆ ಕಾಯುವುದು ನನ್ನ ಜನ್ಮದಲ್ಲೇ ರೂಢಿಯಾಗಿಲ್ಲ. ನಾನೇನೋ ತುಂಬ special ಅಂತಲ್ಲ. ನನಗೆ ಅವರಿಂದ ಆಗಬೇಕಾದ್ದು ಏನೂ ಇರುವುದಿಲ್ಲ. ಅದರಲ್ಲೂ ಜನಾರ್ದನ ರೆಡ್ಡಿ!


ಆತ, ಮೊದಲ ಸಲ ಶ್ರೀರಾಮುಲು ಚುನಾವಣೆ ಗೆದ್ದಾಗ ಅವನನ್ನು ಕರೆದುಕೊಂಡು ನನ್ನ ಆಫೀಸಿಗೆ ಬಂದಿದ್ದ. ಇಬ್ಬರಿಗೂ ನಾನು ವಯಸ್ಸಿನಲ್ಲಿ ಹಿರಿಯ. ಅಣ್ಣಾ ಅಂತಲೇ ಮಾತು. ಬಂದವರೇ ಕಾಲಿಗೆ ನಮಸ್ಕಾರ ಮಾಡಿದರು. ಇದೆಲ್ಲ ಮುಜುಗುರ ಮಾಡಬೇಡಿ ಅಂದಿದ್ದೆ. ಮುಂದೆ ಸೋಮಶೇಖರ ರೆಡ್ಡಿ ಪರವಾಗಿ ಚುನಾವಣಾ ಪ್ರಚಾರಕ್ಕೆಂದು ಬಳ್ಳಾರಿಗೆ ಹೋದಾಗ ಕಾರ್ಪೊರೇಟರುಗಳ ಸಭೆಯಲ್ಲಿ ಅಷ್ಟೂ ಜನ ಕಾರ್ಪೊರೇಟರುಗಳೆದುರಿನಲ್ಲಿ ಜನಾರ್ದನರೆಡ್ಡಿ ನನ್ನ ಕಾಲಿಗೆ ನಮಸ್ಕರಿಸಿದ್ದ. ಅದು ಬಳ್ಳಾರಿಗರ tradition ಕೂಡ ಹೌದು. ಆನಂತರ ಆರೆಂಟು ಬಾರಿ ಭೇಟಿಯಾದಾಗಲೂ ಸೌಜನ್ಯದಿಂದಲೇ ನಡೆದುಕೊಂಡಿದ್ದ.


ಈಗ ನಾನು ಬಳ್ಳಾರಿಗೆ ಬಂದಿದ್ದೇನೆ. ಜೊತೆಯಲ್ಲಿ ಮಗನನ್ನು ಕರೆ ತಂದಿದ್ದೇನೆ. ಎರಡೂ ಜನಾರ್ದನ ರೆಡ್ಡಿಗೆ ಗೊತ್ತು. ಆತ ಮನೆಯಲ್ಲಿದ್ದಾನೆಂಬುದು ನನಗೆ ತುಂಬ ಚೆನ್ನಾಗಿ ಗೊತ್ತಿತ್ತು. ಮತ್ತು ಆಗ ರಾಜಕೀಯವಾದ ಚಟುವಟಿಕೆಗಳಾಗಲೀ, ವಿಪರೀತ turmoilಗಳಾಗಲೀ ಇರಲಿಲ್ಲ. ಐದು ನಿಮಿಷ ಭೇಟಿಯಾಗಿ ನನ್ನ ಮಗನನ್ನು ಮಾತನಾಡಿಸಿದ್ದಿದ್ದರೆ ನಾವೇನೂ ಆತನ ಅರ್ಧ ರಾಜ್ಯ ಕೇಳುತ್ತಿರಲಿಲ್ಲ. ಮರುದಿನ ನಾನು ಬೆಂಗಳೂರಿಗೆ ಹಿಂತಿರುಗಲೇಬೇಕಿತ್ತು. ಜೊತೆಯಲ್ಲಿದ್ದ ಸುರೇಶ್ ಶೆಟ್ಟಿಗೆ ನನ್ನ ಅಸಹನೆ ಅರ್ಥವಾಗತೊಡಗಿತ್ತು. ಜನಾರೆಡ್ಡಿ ಮನೆಯಲ್ಲೇ ಇದ್ದಾನೆಂಬುದನ್ನು ಅವನೂ ಖಚಿತಪಡಿಸಿದ್ದ. ಕರ್ಣನಿಗೆ ಬೇಸರವಾಗದಿರಲಿ ಅಂತ ಮನೆಗೆ ಊಟಕ್ಕೆ ಕರೆದೊಯ್ದ.


ನೀವು ನಂಬಲಿಕ್ಕಿಲ್ಲ. ಕಾಯಲು ನಮಗೆ ಬೇರೇನೂ ಕಾರಣವಿರಲಿಲ್ಲ: ಕರ್ಣನ ಹೊರತು. ಕಾಯಿಸುವುದಕ್ಕೆ ಜನಾರ್ದನ ರೆಡ್ಡಿಗೆ ಏನು ಕಾರಣವಿತ್ತೋ? ಆತನಿಗೆ ಗೊತ್ತು. ಪೂರ್ತಿ ಮೂರು ದಿನ ಕಾಯಿಸಿದ.


"My son, I am sorry. We are leaving" ಅಂದವನೇ ಜನಾರೆಡ್ಡಿಯ ಸಹಾಯಕನಿಗೊಂದು ಕೊನೆಯ ಥ್ಯಾಂಕ್ಸ್ ಹೇಳಿ ಹೊರಟುಬಿಟ್ಟೆ.
ನಾನೇ ಹಿಂದೊಮ್ಮೆ ಬರೆದದ್ದು ನೆನಪಾಗಿತ್ತು:


“ಅವರ‍್ಯಾರೋ ತುಂಬ ಶ್ರೀಮಂತರು ಎಂಬ ಕಾರಣಕ್ಕೆ ನಾವೇಕೆ ಬಡವರಾಗಬೇಕು?"


ಅದಾದನಂತರ ನಾನು ಅನೇಕ ಸಲ ಬಳ್ಳಾರಿಗೆ ಹೋಗಿದ್ದೇನೆ. ಅದೇ ‘ಹೊಟೇಲ್ ಬಾಲಾ’ದಲ್ಲಿ ಉಳಿದಿದ್ದೇನೆ. ಅದೇ ರಸ್ತೆಯಲ್ಲಿ ಓಡಾಡಿದ್ದೇನೆ. ಜನಾರ್ದನ ರೆಡ್ಡಿಯ ಮನೆಯ ಕಡೆಗೆ ತಿರುಗಿಯೂ ನೋಡಿಲ್ಲ. ಆತ ನನಗೆ ಸಿಕ್ಕಿಯೂ ಇಲ್ಲ. ನಾಲ್ಕಾರು ಸಲ ‘ಜನಶ್ರೀ’ ಛಾನಲ್‌ಗೆ ಹೋದೆ. ಆತ ಅಲ್ಲಿಗೆ ಬರುವುದಿಲ್ಲವೆಂದರು. ಅದೇ ಒಳ್ಳೆಯದು ಅಂದುಕೊಂಡೆ. ಇತ್ತೀಚೆಗೊಮ್ಮೆ ಸೋಮಶೇಖರ ರೆಡ್ಡಿ ಆಫೀಸಿಗೆ ಬಂದಿದ್ದ. ಆತ ನೇರ ಮಾತಿನ ಕೆಲಸಗಾರ, ನಿಗರ್ವಿ. ಗಂಟೆಗಟ್ಟಲೆ ಕುಳಿತು ಮಾತನಾಡಿದ. ಶ್ರೀರಾಮುಲು ಅಪರೂಪಕ್ಕೊಮ್ಮೆ ಫೋನಿಗೆ ಸಿಗುತ್ತಾನೆ.


ನಿನ್ನೆ ಪುಸ್ತಕದ ಮಳಿಗೆ ಉದ್ಘಾಟನೆಯಲ್ಲಿ, ನಂತರ ಪುಸ್ತಕ, ಸಿ.ಡಿಗಳ ಬಿಡುಗಡೆಯಲ್ಲಿ ಚಂದ್ರಶೇಖರ ಕಂಬಾರರು, ಲಕ್ಷ್ಮೀನಾರಾಯಣ ಭಟ್ಟರು, ದೊಡ್ಡರಂಗೇಗೌಡರು, ಬೆಳಗೆರೆ ಕೃಷ್ಣಶಾಸ್ತ್ರಿಗಳು, ಭುವನೇಶ್ವರಿ ಹೆಗಡೆ, ರಘುಪತಿ ವಕೀಲರು, ಅಂಬರೀಷ್, ರವಿಚಂದ್ರನ್ ಮುಂತಾದವರ ಸಾಲಿನಲ್ಲಿ ಕುಳಿತಿದ್ದೆ. ಎದುರಿಗೆ ಸುಮಾರು ಐದು ಸಾವಿರ ಜನ.


ಯಾರೂ ಅಂಥ ಶ್ರೀಮಂತರಲ್ಲ.


ಆದರೆ ಅವರಿಗೆಲ್ಲ ಶ್ರೀಮಂತಿಕೆಯನ್ನ ಮತ್ತು ಶ್ರೀಮಂತರನ್ನ ಹೇಗೆ ದೂರವಿಡಬೇಕು ಎಂಬುದು ಗೊತ್ತಿದೆ. “ನಿಂಗೆ ಗೊತ್ತಾಯಿತಾ ಕರ್ಣಾ" ಎಂಬಂತೆ ನೋಡಿದೆ. ಹುಡುಗ ನಕ್ಕ.

-ನಿಮ್ಮವನು
ಆರ್.ಬಿ.

Read Archieves of 13 February, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books