Ravi Belagere
Welcome to my website
ಇದು 2012ರ ಫೆಬ್ರವರಿ 14ರ ವ್ಯಾಲಂಟೈನ್ಸ್ ಡೇಗೆ ಸಮಸ್ತ ಪ್ರೇಮಿಗಳಿಗಾಗಿ ನಾನು ಕೊಡುತ್ತಿರುವ ಅಕ್ಕರೆಯ gift : ‘ಒಲವೇ...’. ಅರವತ್ತು ನಿಮಿಷಗಳ ಅರ್ಥಪೂರ್ಣ ಧ್ವನಿ ಮುದ್ರಿಕೆ. ಅಪ್ಪ-ಅಮ್ಮನ ನೆರಳಲ್ಲಿ ಮುದ್ದಾಗಿ ಬೆಳೆದ ಹುಡುಗಿ, ಅಷ್ಟೇ ಬೆಚ್ಚನೆಯ ಆರೈಕೆಯಲ್ಲಿ ಚೆಂದಗೆ ಬೆಳೆದ ಹುಡುಗ ಅದ್ಯಾವ ಮಾಯೆಯಲ್ಲೋ ಒಬ್ಬರನ್ನೊಬ್ಬರು ಪ್ರೀತಿಸತೊಡಗುತ್ತಾರೆ. ಅಲ್ಲಿಂದ ಶುರುವಾಗುತ್ತೆ ಅವರ ಪ್ರೇಮ ಯಾತ್ರೆ. ಫೆಬ್ರವರಿ 14 ನಿಮ್ಮ ಗೆಳೆಯ ಅಥವಾ ಗೆಳತಿಯನ್ನು ಭೇಟಿಯಾದಾಗ ಪ್ರೀತಿಯಿಂದ ‘ಒಲವೇ’ ಸಿಡಿ ಕೊಡಿ. ಅಷ್ಟೇ ಅಲ್ಲ, ಇಬ್ಬರೂ ಒಟ್ಟಿಗೇ ಕೂತ್ಕೊಂಡು ಸಮಾಧಾನವಾಗಿ ಕೇಳಿ. Be sure. ನಿಮ್ಮ ಒಲವು ಫಲಿಸುತ್ತೆ. ಮನಸು ಮುದಗೊಳ್ಳುತ್ತೆ. ಆಮೇಲೆ ಯಾವತ್ತೇ ಮನಸ್ಸಿಗೆ ಬೇಕೆನ್ನಿಸಿದರೂ ನೀವು ‘ಒಲವೇ...’ ಸಿಡಿ ಕೇಳ್ತಾನೇ ಇರ‍್ತೀರಿ...
Home About Us Gallery Books Feedback Prarthana Contact Us

ಮೂರೂ ಮಂತ್ರಿಗಳ ಮನೆಯವರನ್ನು ಕೂಡಿಸಿ ಆ ವಿಡಿಯೋ ತೋರಿಸೋಣವಾ?

“ಮಾರಾಯಾ, ನೀನು ಬರೆದ 389 ಪುಟಗಳ ‘ಕಾಮರಾಜಮಾರ್ಗ’ ಕಾದಂಬರಿ ಈ ಬಿಜೆಪಿ ಸರ್ಕಾರ ಇರುವ ತನಕ, ಅಷ್ಟೇಕೆ, ಈ ಯಡ್ಡಿ ಸಂತತಿ ಜೀವಂತವಿರುವ ತನಕ ಪ್ರಸ್ತುತ. ಇವರಿಗೆ ಜಗತ್ತಿನಲ್ಲಿ ಯಾವುದೂ ಹೇಸಿಗೆಯಲ್ಲ, ವರ್ಜ್ಯವಲ್ಲ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಎಸ್ಸೆಮ್ಮೆಸ್ ಕಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಅನೇಕ ಶಾಸಕರು ರಸಿಕರು. ಬೇಲಿ ಹಾರುವವರು. ನನಗೆ ವಿವರಗಳು ಗೊತ್ತಿವೆ. ಅದಿರಲಿ. ಆದರೆ ಸದನದಲ್ಲಿ ಕುಳಿತು ಹೆಂಗಸರ ತೊಡೆ ತೋಳು, ರೇಪು ಮುಂತಾದವನ್ನು ನೋಡುತ್ತ ಸಿಕ್ಕಿ ಹಾಕಿಕೊಂಡಿರುವ ಲಕ್ಷ್ಮಣ ಸವದಿ ಎಂಬ ಲೂಜು ಲಾಡಿಯ ಚಂಡಾಲ ಅಥಣಿಯವನು. ನೆನಪಿರಲಿ, ಬಿಜೆಪಿಯ, ಅದರಲ್ಲೂ ಆರೆಸ್ಸೆಸ್ಸಿನ ಕಟ್ಟಾ ಬ್ರಹ್ಮಚಾರಿ ಹಾಗೂ ಪ್ರಾಮಾಣಿಕ ನಾಯಕರಾದ ಭಾವುರಾವ ದೇಶಪಾಂಡೆಯವರು ನಿಂತು ನಿಂತು ಸೋಲುತ್ತಿದ್ದ ಕ್ಷೇತ್ರ ಅಥಣಿ. ಕಡೆಗೆ ಅವರು ಎಮರ್ಜೆನ್ಸಿಯ ನಂತರ ಇನ್ನೊಬ್ಬ ಕಚ್ಚೆ ಹರುಕ ಡಿ.ಕೆ.ನಾಯ್ಕರ್ನ ವಿರುದ್ಧ ಸ್ಪರ್ಧಿಸಿ ಗೆದ್ದರು. ಅಂಥ ಭಾವುರಾವ ದೇಶಪಾಂಡೆ ಕ್ಷೇತ್ರವಾದ ಅಥಣಿಯಿಂದ ಬಂದ ಲಕ್ಷ್ಮಣ ಸವದಿಗೆ ಕಡೇ ಪಕ್ಷ ಒಂದು ಪೋಲಿ ಕ್ಲಿಪಿಂಗ್ ಖಾಸಗಿಯಾಗಿ ನೋಡಬೇಕು ಎಂಬ ಎಚ್ಚರವೂ ಇಲ್ಲ.

ಇನ್ನು ಸಿ.ಸಿ.ಪಾಟೀಲ. ಇವನು ನರಗುಂದದವನು. ಕರ್ನಾಟಕದಲ್ಲಿ ಸಂಘ ಪರಿವಾರದ ಮೊದಲ ಧ್ವಜ ಊರಿದ ಜಗನ್ನಾಥರಾವ್ ಜೋಶಿ ಎಂಬ ಆಜನ್ಮ ಬ್ರಹ್ಮಚಾರಿ ಹಾಗೂ ಶುದ್ಧ ಹಸ್ತ ಹೋರಾಟಗಾರ- ರಾಜಕಾರಣಿ ನರಗುಂದದವರು. ಅಲ್ಲಿಯವನೇ ಪಾಟೀಲ. Of course, ಇವರು ಎರಡೂ ಕ್ಷೇತ್ರಗಳಿಗೆ ವಲಸಿಗರು. ಸಂಘಪರಿವಾರವಾದ ಬಿಜೆಪಿಗೂ ವಲಸಿಗರು ಮತ್ತು ಹೊಲಸಿಗರು. ಇವರಿಗೆ ಬ್ರಹ್ಮಚರ್ಯ, ಸ್ತ್ರೀಯರೆಡೆಗೆ ಗೌರವ, ನಾಚಿಕೆ, ಮಾನ, ನಿಯತ್ತು-ಕೇಳಲೇಬೇಡಿ. ಹಗಲು ಕುಡುಕ ಪಾಟೀಲ ಹದಿಮೂರು ರುಪಾಯಿಯ ಹೆಂಗಸನ್ನು ತೋರಿಸಿದರೂ ಮೂರು ಮೈಲಿ ನಡೆದು ಹೋಗಿ ಮಲಗುತ್ತಾನೆ.

ಕೃಷ್ಣ ಪಾಲೇಮಾರ್ಗೆ ಈ ತನಕ ಮರಳು ಮಾಫಿಯಾ, ಬಿಲ್ಡರ್ ಮಾಫಿಯಾ ಇತ್ಯಾದಿಗಳ ಹಿನ್ನೆಲೆಯಿತ್ತು. ಈಗ ಈ ರಾದ್ಧಾಂತ ಹೊರಬಿದ್ದಿದೆ. ಪೋಲಿ ಚಿತ್ರ ನೋಡಿ, ಎಂ.ಎಂ.ಎಸ್ ಮಾಡಿ ಮಂತ್ರಿಗಿರಿ ಕಳೆದುಕೊಂಡಿದ್ದಾನೆ.
ಇಲ್ಲಿ ನಾನು ಪ್ರಸ್ತಾಪಿಸುವ, ಸೂಚಿಸುವ ಎರಡು ಸಂಗತಿಗಳಿವೆ.

“ಸವದಿ, ಪಾಟೀಲ್ ಮತ್ತು ಪಾಲೇಮಾರ್ ಅವರೇ, ಖರ್ಚು ನಾವು ಕೊಡುತ್ತೇವೆ. ನಿಮ್ಮ ಮನೆ ಮುಂದೆ ವಿಶಾಲವಾದ ಎಲ್‌ಸಿಡಿ ಟೀವಿ ಹಾಕಿಸೋಣ. ನಿಮ್ಮ ಹೆಂಡತಿ, ಮಕ್ಕಳು, ಸೊಸೆಯಂದಿರು ಎಲ್ಲರನ್ನೂ ಜೊತೇಲಿ ಕೂಡಿಸಿಕೊಂಡು ನೀವು ಸದನದಲ್ಲಿ ಯಾವ ಕ್ಲಿಪಿಂಗ್ ನೋಡಿದಿರೋ ಅದನ್ನು ಇಪ್ಪತ್ನಾಲ್ಕು ನಿಮಿಷ ನೋಡಿ. ಆಮೇಲೆ ನಿಮ್ಮ ಮನೆಯವರು ತಲೆಯೆತ್ತಿಕೊಂಡು ರಸ್ತೆಯಲ್ಲಿ ಓಡಾಡುತ್ತಾರಾ? ಹೋಗಲಿ, ನಿಮ್ಮನ್ನು ಗೌರವಿಸುತ್ತಾರಾ? ಕೇಳಿ!"

ಎರಡನೆಯ ಸಂಗತಿ,
ಇಡೀ ಪ್ರಕರಣ, was it a trap? ಏಕೆಂದರೆ ಲಕ್ಷ್ಮಣ ಸವದಿ, ಪಾಟೀಲ ಮತ್ತು ಪಾಲೇಮಾರ್- ಮೂರೂ ಜನ ಯಡಿಯೂರಪ್ಪನ ಕಟ್ಟಾ ಬೆಂಬಲಿಗರು. ಈಗ ಪ್ರಕಟವಾಗಿರುವ, ಬಿತ್ತರವಾಗಿರುವ, ಚಲಾವಣೆಯಲ್ಲಿರುವ ವಿಡಿಯೋ ಕ್ಲಿಪಿಂಗ್ ಮತ್ತು ಅದನ್ನು ಮೂವರು ಮಂತ್ರಿಗಳು ನೋಡುತ್ತಿರುವಿಕೆಯೇನಿದೆಯಲ್ಲ? ಇದು ಮೊದಲ ದಿನದ್ದಲ್ಲ. ಈ ಕ್ಲಿಪಿಂಗ್ ಮತ್ತು ಇದೇ ತೆರನಾದ clippingಗಳು ಮಂತ್ರಿಗಳ, ಶಾಸಕರ ಫೋನುಗಳಲ್ಲಿ ಅಲೆದಾಡುತ್ತಲೇ ಇದ್ದವು. ಆದರೆ ಮೇಲ್ಮನೆಯಲ್ಲಿದ್ದ ಲಕ್ಷ್ಮಣ ಸವದಿಯನ್ನು ಬೇಕೆಂತಲೇ ವಿಧಾನಸಭೆಗೆ ಕರೆಸಿಕೊಂಡು ವಿಡಿಯೋ ತೋರಿಸಿ trap ಮಾಡಲಾಯಿತು ಎಂಬುದು ಶುದ್ಧ ಸುಳ್ಳು. ಏಕೆಂದರೆ, ಕರೆಸಿದುದು ಸ್ಪೀಕರ್ ಬೋಪಯ್ಯ. ಅವರು ಯಡ್ಡಿ ವಿರೋ ಪಾಳೆಯದವರಲ್ಲ. ಅಕಸ್ಮಾತ್, ಇವರು ಮೂವರು ಕ್ಲಿಪಿಂಗ್ ನೋಡುತ್ತಿದ್ದುದನ್ನು ಟೀವಿಯವರ ಕೈಲಿ shoot ಮಾಡಿಸಿ trap ಮಾಡಿಸಬೇಕೆಂದು ಯಾರಾದರೂ ಬಯಸಿದ್ದೇ ಆದರೆ, ಅದು ಯಡ್ಡಿ ವಿರೋ ಬಣದವರದೇ ಮಸಲತ್ತಾಗಿರಲು ಸಾಧ್ಯ. ನಾನು ಅಂಥದೊಂದು ಮಸಲತ್ತನ್ನು ತಳ್ಳಿ ಹಾಕುವುದಿಲ್ಲ. ಟೀವಿ ಛಾನಲ್‌ಗಳವರ ಕೆಮೆರಾಗಳ ಮಧ್ಯದಲ್ಲೇ ತಮ್ಮದೊಂದು ಕೆಮೆರಾ ಇಟ್ಟುಕೊಂಡು zoom ಮಾಡಿ ಕುಳಿತು, ಸವದಿ ಅಥವಾ ಪಾಟೀಲ್ ಅಥವಾ ಪಾಲೇಮಾರ್ ಕೈಗೆ ಕ್ಲಿಪಿಂಗ್ ಬಂದ ಕೂಡಲೆ ಗಮನಿಸಿ, ಉಳಿದವರನ್ನು ಅಲರ್ಟ್ ಮಾಡಿ ಈ ಮಂತ್ರಿಗಳ ಪೋಲಿ ಚೇಷ್ಟೆ ಜಗಜ್ಜಾಹೀರು ಮಾಡಲು ಯಡ್ಡಿ ವಿರೋ ಬಣ plan ಮಾಡಿದ್ದರೂ ಅದರಲ್ಲಿ ಆಶ್ಚರ್ಯವಿಲ್ಲ. ಅದರಲ್ಲಿ ಸದಾನಂದಗೌಡರ ಕೈ ಇದೆಯಾ? I doubt. ಆತ ತೀರ ಆ ಮಟ್ಟದ ದುಷ್ಟ ಚೇಷ್ಟೆಗಳನ್ನು ಕಲಿತಂತಿಲ್ಲ.

ಇರಲಿ, ವಿಡಿಯೋ ಕ್ಲಿಪಿಂಗ್ ನೋಡುವುದು, ಅದರಲ್ಲೂ ಯಾವುದೋ ಲೈಂಗಿಕ ಕ್ರಿಯೆಯ ವಿಡಿಯೋ ದೃಶ್ಯ ನೋಡುವುದು ಮಹಾಪರಾಧವಲ್ಲ. ಮೂರೂ ಜನ ವಯಸ್ಕರೇ. ಕಾನೂನು ಏನೇ ಹೇಳಬಹುದು. ಅದಿರಲಿ, ಆದರೆ ಒಬ್ಬ ಮಂತ್ರಿ ಸದನಕ್ಕೆ ಯಾಕೆ ಬರುತ್ತಾನೆ? ಜವಾಬ್ದಾರಿ ಏನು? ಅವನಿಗಾಗಿ ನಮ್ಮ ತೆರಿಗೆ ಹಣ ಎಷ್ಟು ಖರ್ಚಾಗುತ್ತದೆ? ಅವನ ಮಾತು, ಚಟುವಟಿಕೆ, ಚಿಂತನೆ, ವಾದ, ಪ್ರತಿಭಟನೆ, ಮೌನ, ಕಡೆಗೆ ಅವನ ಉತ್ತರ- ಎಲ್ಲದಕ್ಕೂ ನಾವು ಹಣ ಮತ್ತು ನಮ್ಮ ನಂಬಿಕೆಯನ್ನು ಕೊಟ್ಟಿರುತ್ತೇವಲ್ಲವೆ? ಸದನದಲ್ಲಿ ನಿದ್ರೆ ಮಾಡುತ್ತಾರೆ. ಫೋನಿನಲ್ಲಿ ಮಾತನಾಡುತ್ತಾರೆ. ಪರಸ್ಪರ ಹರಟುತ್ತಾರೆ. ಸುಮ್ಮನೆ ಅಟೆಂಡೆನ್ಸು ಸಹಿ ಹಾಕಿ ಹೊರಟು ಹೋಗುತ್ತಾರೆ. ಒಂದೇ ಒಂದು ಮಾತೂ ಆಡದೆ ಐದು ವರ್ಷ ಕುಳಿತು ಎದ್ದು ಹೋಗುತ್ತಾರೆ. ಕುಡಿದು ಬರುತ್ತಾರೆ. ಅಲ್ಲೇ ಕುಳಿತು flaskಗಳಲ್ಲಿ ಕುಡಿಯುತ್ತಾರೆ. ಗಲಾಟೆ ಮಾಡುತ್ತಾರೆ. ಅಂಗಂಗಿ ಹರಿದುಕೊಳ್ಳುತ್ತಾರೆ. ಮಾರ್ಷಲ್‌ಗಳಿಂದ ಎತ್ತಿ ಹೊರ ಹಾಕಿಸಿಕೊಳ್ಳುತ್ತಾರೆ. ಪರಸ್ಪರ ಚೀಟಿ ಬರೆದು ರವಾನೆ ಮಾಡಿಕೊಳ್ಳುತ್ತಾರೆ. ಅಲ್ಲೇ ಅರ್ಜಿ ಹಿಡಿದು ಮಂತ್ರಿಗಳಿಂದ ಟ್ರಾನ್ಸ್ ಫರುಗಳಿಗೆ ಸಹಿ ಮಾಡಿಸಿಕೊಳ್ಳುತ್ತಾರೆ. ಸಿಟ್ಟಿಗೆದ್ದು ‘ಅಮ್ಮ ಅಕ್ಕ’ ಅಂತ ಬೈದುಕೊಳ್ಳುತ್ತಾರೆ. ‘ನಮ್ಮೂರಿಗೆ ಬನ್ನಿ, ಸೀರೆ ಬಿಚ್ಚಿ ಹೊಡೀತೀವಿ’ ಅಂತ ಬೈದುಕೊಳ್ಳುತ್ತಾರೆ. ಮೈಮೇಲೆ ಏರಿ ಹೋಗುತ್ತಾರೆ. ಭಂಗಿ ಕುಡಿದು ಬಂದ ಮಹಾನ್ ಯೋಗಿಗಳಂತೆ ತುಟಿ ಬಿಚ್ಚದೆ ಕುಳಿತು ಎದ್ದು ಹೋಗುತ್ತಾರೆ. ಎಲ್ಲ ನೋಡಿದ್ದೇವೆ.

ಮಂತ್ರಿಗಳು ತಮ್ಮ ಖಾತೆಗೆ ಸಂಬಂಸಿದ ಪ್ರಶ್ನೆ ಬಂದಾಗ ಹಾಜರಿರುವುದೇ ಇಲ್ಲ. ಕೆಲವು ಸಲ ಮಂತ್ರಿ ಉತ್ತರ ಕೊಡುತ್ತಾನೆ. ಪ್ರಶ್ನೆ ಕೇಳಿದ ಶಾಸಕನೇ ಇರುವುದಿಲ್ಲ. ಪ್ರಶ್ನೆ ಮೊದಲೇ ಕೇಳಲಾಗಿರುತ್ತದೆ. ಆದರೆ ಅದು ಪ್ರಸ್ತಾಪಕ್ಕೇ ಬಾರದಂತೆ ಒಳ ಒಪ್ಪಂದಗಳಾಗಿರುತ್ತವೆ. ಒಂದು ಪ್ರಶ್ನೆಗೆ ಕೆಲವು ಡಜನ್ ಐಎಎಸ್, ಐಪಿಎಸ್ ಅಧಿಕಾರಿಗಳು, ಕೆಲವು ನೂರು ಕಾರಕೂನರು ಹಗಲಿರುಳು ಕೆಲಸ ಮಾಡಿ ಉತ್ತರ ಸಿದ್ಧ ಪಡಿಸುತ್ತಾರೆ. ಅದರ ಪ್ರಸ್ತಾಪವೇ ಆಗುವುದಿಲ್ಲ. ಆಗಲೇಬೇಕಾದ ಅತಿ ಮುಖ್ಯ ಚರ್ಚೆಗಳು ಸದನದೊಳಗಿನ ಜಗಳ, ಧರಣಿ, walk out, ಕೋರಮ್‌ನ ಕೊರತೆ ಮುಂತಾದವುಗಳಿಂದ ಆಗುವುದೇ ಇಲ್ಲ. ಕೆಲವು ಸಲ ಸದನದ ಸ್ಪೀಕರ್ ಅನ್ನಿಸಿಕೊಂಡ ಮನೆಯ ಯಜಮಾನ ಹ್ಯಾಪನಂತೆ, ಹೆಬಗನಂತೆ ವರ್ತಿಸಿ ಆ ಸ್ಥಾನಕ್ಕೇ ಅವಮಾನ ಮಾಡುತ್ತಾನೆ.

ನಾವು ಎಲ್ಲ ನೋಡಿದ್ದೇವೆ.
ನೆನಪಿರಲಿ, ನಾವು ಮಹಾನ್ ನಾಯಕರಾದ ಗೋಪಾಲಗೌಡ, ಶಂಕರೇಗೌಡ, ದೇವರಾಜ್ ಅರಸು, ವಾಟಾಳ್ ನಾಗರಾಜ್, ರಾಮಕೃಷ್ಣ ಹೆಗಡೆ, ಪ್ರಕಾಶ್, ನಜೀರ್ ಸಾಬ್, ಎ.ಕೆ.ಸುಬ್ಬಯ್ಯ, ಎಂ.ಸಿ.ನಾಣಯ್ಯ, ಉಮರಬ್ಬ, ಲಕ್ಷ್ಮೀಸಾಗರ್ರಂಥವರನ್ನೂ ನೋಡಿದ್ದೇವೆ.
ಈಗ ನೋಡುತ್ತಿರುವುದೇನು?

ಕೋಟ್ಯಂತರ ರುಪಾಯಿಗಳ ದುಡ್ಡಿಗೆ, ಸೈಟುಗಳಿಗೆ, ಹೆಂಗಸರಿಗೆ, ಸಚಿವರ ಬಹಿರಂಗ ಮುತ್ತು-ಮೈಥುನದ ದೃಶ್ಯಗಳಿಗೆ, ಸ್ವತಃ ಮುಖ್ಯಮಂತ್ರಿಯಾಗಿದ್ದವನ ರಹಸ್ಯ ಲೈಂಗಿಕ ಜೀವನಕ್ಕೆ, ಮಠಗಳ ಹೂಂಕಾರಕ್ಕೆ, ಗಣಿ ಒಡೆಯರ ಠೇಂಕಾರಕ್ಕೆ, ಶುದ್ಧ ನಾಯಿ ನರಿಗಳಂತಹ ಲಂಪಟರಾದ ಸವದಿ, ಪಾಟೀಲ, ಪಾಲೇಮಾರ್ರಂಥವರ ಬಹಿರಂಗ ಎಂಟರ್ಟೈನ್‌ಮೆಂಟಿಗೆ ಬಲಿಯಾಗಿ ಹೋದ ಸರ್ಕಾರವನ್ನ. ಒಂದು ಕಡೆಯಿಂದ ನೋಡುತ್ತ ಬನ್ನಿ. ಸಾಲು ಸಾಲು ಮುಖಗಳಿವೆ. ಯಾರಿಗಾದರೂ ನೈತಿಕತೆ, ಮಾನ, ಮರ್ಯಾದೆ ಇದೆಯಾ?

ಲೋಕಾಯುಕ್ತ ವರದಿಯಲ್ಲಿ ಕೇವಲ ಒಂದು ಕಡೆ ತನ್ನ ಹೆಸರು ಪ್ರಸ್ತಾಪವಾಗಿ, ಅದರಿಂದಾಗಿ ಮಂತ್ರಿ ಪದವಿ ಹೋಯಿತು ಎಂಬ ಕಾರಣಕ್ಕಾಗಿ ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಟ್ಟು ಅದರ ಹಿಂದಿನ ಉದ್ದೇಶವೇನೇ ಇರಲಿ- ಮತ್ತೆ ಚುನಾವಣೆಗೆ ನಿಂತು “ ಇದು ಸ್ವಾಭಿಮಾನಿ ಚುನಾವಣೆ" ಅಂತ ಘೋಷಿಸಿದವನು ಶ್ರೀರಾಮುಲು. “ಅದರ ಹಿಂದಿನ ಉದ್ದೇಶವೇನೇ ಇರಲಿ" ಅಂತ ಸ್ಪಷ್ಟವಾಗಿ ಹೇಳಿದ್ದೇನೆ. ಇವತ್ತು ಸವದಿ, ಪಾಟೀಲ ಮತ್ತು ಪಾಲೇಮಾರ್ ನಿಜಕ್ಕೂ ಆ ಕೆಲಸ ಮಾಡಬೇಕು. ಅದಕ್ಕೆ ಯಾವ ಪೋತಪ್ಪ ನಾಯ್ಕನ ಲೋಕಾಯುಕ್ತ ರಿಪೋರ್ಟೂ ಬೇಕಾಗಿಲ್ಲ. ಅವರ ಕಣ್ಣೆದುರಿಗೇ, ಅವರೇ ನೋಡಿದ ಕ್ಲಿಪಿಂಗ್ ಇದೆ. ಬೇಕಾದರೆ ಚುನಾವಣೆಯ ಪ್ರಚಾರಕ್ಕೆ ಅದನ್ನೇ ಬಳಸಲಿ.

ಈ ಮಧ್ಯೆ ರಾಜ್ಯಪಾಲರ ಪಾತ್ರವೇನು? ಮಂತ್ರಿಗಿರಿಯನ್ನು ಪಕ್ಷ ಕಿತ್ತುಕೊಂಡಿದೆ. ಆದರೆ ಶಾಸಕರಾಗಿ ಮುಂದುವರೆಯಬೇಕೆ? ಇಷ್ಟಕ್ಕೂ ಈ ಪರಿ ಹಗರಣಗಳಿಗೆ ಸಿಲುಕಿರುವ ಬಿಜೆಪಿ ಸರ್ಕಾರ ಇನ್ನೂ ಎರಡು ವರ್ಷ ಮುಂದುವರೆಯಬೇಕೆ?

ಕೇಂದ್ರ ಸರ್ಕಾರ ಒಂದು ನಿರ್ಧಾರ ತೆಗೆದುಕೊಳ್ಳಬೇಕು.

The State is fed up.

-ರವಿ ಬೆಳಗೆರೆ

Read Archieves of 13 February, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books