Ravi Belagere
Welcome to my website
ಬೇರೆ ಏನೇ ಕೆಲಸವಿರಲಿ, ಎಲ್ಲ ಬದಿಗಿಟ್ಟು ಫೆಬ್ರವರಿ 5ಕ್ಕೆ ಕಿಸೆಯಲ್ಲೊಂದಷ್ಟು ಕಾಸಿಟ್ಟುಕೊಂಡು, ಮನಸ್ಸಿನ ತುಂಬ ಪ್ರೀತಿಯಿಟ್ಟುಕೊಂಡು ಬಂದು ಬಿಡಿ. ಹಿರಿಯ ಲೇಖಕ-ಕಲಾವಿದರಿರುತ್ತಾರೆ. ಫೊಟೋ, ಆಟೋಗ್ರಾಫು, ಹರಟೆ, ಬಿಸ್ಸಿ ಕಾಫಿ, ನನ್ನ ಹ್ಯಾಪ ನಗೆ, ಬಿಗಿ ಅಪ್ಪುಗೆ! ಫೆಬ್ರವರಿ 5, 2012ರ ಸಂಜೆ 4:30ಕ್ಕೆಲ್ಲ ಗಾಂಧಿಬಜಾರ್‌ಗೆ ಬಂದು ಬಿಡಿ. BBC ಉದ್ಘಾಟನೆ 4:30ಕ್ಕೆ ಮುಗಿದು, ಪದ್ಮನಾಭನಗರದ ಗ್ರೌಂಡಿನ ಕಾರ್ಯಕ್ರಮ ಸಂಜೆ 6ಕ್ಕೆ ಆರಂಭವಾಗಲಿದೆ. ಎರಡಕ್ಕೂ ನಿಮಗೆ ಉಚಿತ ಸ್ವಾಗತ. ಬಾಗಿಲಲ್ಲಿ ಕಾತರದಿಂದ ನಿಂತು ಕಾಯುವವನು ನಾನು, ನಿಮ್ಮವನು.
Home About Us Gallery Books Feedback Prarthana Contact Us

ಜೀವನದ ಮಹತ್ತರ ತಿರುವಿನಲ್ಲಿ ನಿಂತು ಒಳ್ಳೇದಾಗ್ಲಿ ಕಣೋ ಅನ್ನಿ!

ಎರಡು ಅಪರೂಪದ ಪುಸ್ತಕಗಳು ಎರಡು ಅತ್ಯಾಧುನಿಕ ಮಷೀನುಗಳ ಮೇಲೆ ಪ್ರಿಂಟಾಗುತ್ತಿದ್ದರೆ ಆ ಶಬ್ದ ಕೇಳಲಿಕ್ಕೇ ಚೆಂದ. ಇಂಕಿನ ಘಮ, ಕವರ್ ಪೇಜುಗಳ ಬಣ್ಣ, ಫೊಟೋಗಳು, ಈ ಬಾರಿ ಪುಸ್ತಕಗಳಿಗಾಗಿ ಬಳಸಿರುವ ವಿಶೇಷ ಕಾಗದ-ಎಲ್ಲ ಒಂಥರಾ ಝಗಮಗದ ಸಂಭ್ರಮ. ‘ಹಿಮಾಗ್ನಿ’ ಕಾದಂಬರಿಯಂತೂ ಪೂರ್ತಿ 520 ಪುಟಗಳಷ್ಟಾಯಿತು. ನನ್ನ ಉಳಿದೆಲ್ಲ ಪುಸ್ತಕಗಳಿಗಿಂತ ದೊಡ್ಡದು. Fat, laborious, interesting, thriller ಅದು. ಸೋನಿಯಾ ಗಾಂಧಿಗೆ ಕನ್ನಡ ಬಂದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತೋ ಅಂದುಕೊಳ್ಳುತ್ತೇನೆ. ಈಗಾಗಲೇ ‘ಹಿಮಾಗ್ನಿ’ಯ ಹನ್ನೆರಡು ಸಾವಿರ ಪ್ರತಿಗಳಿಗೆ ಆರ್ಡರು ಬಂದಿದೆ. ‘ಉಡುಗೊರೆ’ ಪುಸ್ತಕದ ಐದು ಸಾವಿರ ಪ್ರತಿಗಳು ಬಿಡುಗಡೆಯಾದ ಒಂದೇ ವಾರದಲ್ಲಿ ಉಡೀಸ್! ಲೇಖಕನೊಬ್ಬ ಮುದ್ದು ಮಾಡಿಸಿಕೊಳ್ಳುವುದೆಂದರೆ ಹೀಗೇ ಅಲ್ಲವೆ?

ನಾನು ಮದುವೆಗೆ ಮುನ್ನ ಸುಮ್ಮನೆ ನೆಪವಿಟ್ಟುಕೊಂಡು ಹೆಣ್ಣಿನ ಮನೆಗೆ ಹುಡುಗಿಯನ್ನು ನೋಡಿ ಬರುವ ಮುಚ್ಚಟೆಯ ಹುಡುಗನಂತೆ ನನ್ನ ಗಾಂಧಿ ಬಜಾರ್‌ನ ಪುಸ್ತಕದ ಅಂಗಡಿ ‘ಬೆಳಗೆರೆ ಬುಕ್ಸ್ ಅಂಡ್ ಕಾಫಿ’ಗೆ ಹೋಗಿ ಹೋಗಿ ಬರುತ್ತಿದ್ದೇನೆ. ಅಂಗಡಿ ತುಂಬ ಚೆಂದಗೆ ಸಿಂಗರಗೊಂಡಿದೆ. ಒಂದು ಕಡೆಯಿಂದ ಗಾಜಿನ ರ‍್ಯಾಕ್‌ಗಳು, ಇನ್ನೊಂದೆಡೆ ಕಟ್ಟಿಗೆಯ ರ‍್ಯಾಕ್‌ಗಳು, ಮೂಲೆಯಲ್ಲಿ ಕೌಂಟರ್, ಪಕ್ಕದಲ್ಲೇ ಕಾಫಿ ವ್ಯವಸ್ಥೆ, ಕೂಡಲಿಕ್ಕೆ ಪುಟ್ಟ ಸೋಫಾ, ಮತ್ತೊಂದೆಡೆ ಸಿ.ಡಿ.ಗಳ ರ‍್ಯಾಕ್‌ಗಳು, ನಮ್ಮ ಹಿರಿಯ ಕವಿ ಕಲಾವಿದರು ಮಾತನಾಡುತ್ತಿರುವ, ಹಾಡುತ್ತಿರುವ ದೃಶ್ಯಗಳು ನಿರಂತರವಾಗಿ ತೇಲಿ ಬರುವಂತೆ ಕಾಣುವ ವಿಶಾಲವಾದ ಟೀವಿಗಳು, ನನಗೇ ಅಂತ ಒಂದು ಪುಟ್ಟ ಛೇಂಬರು, ನೀವು ಪುಸ್ತಕ ನೋಡುತ್ತಾ-ತಿರುವುತ್ತಾ ನಿಂತಾಗ ಕಿವಿಗೆ ಬೀಳುವ ಇಂಪಾದ ಸಭ್ಯ ಸಂಗೀತ... ಆಹ್! ಅಂಗಡಿಯ ಆ ಸಿಂಗಾರವೇ ಬೇರೆ ಬಿಡಿ. ಇಡೀ ರಸ್ತೆಗೆ, ಅಂದರೆ ಸುಮಾರು ಮುನ್ನೂರು ಅಡಿ ಉದ್ದಕ್ಕೆ ಅವತ್ತು red carpet ಹಾಕಿಸಲಿದ್ದೇನೆ. ಭರ್ಜರಿ ನಾಗಸ್ವರ, ಓಲಗ, ಮೇಳ. ಕನ್ನಡದ ಕವಿ-ಲೇಖಕ-ಕಲಾವಿದರು ಮೆರವಣಿಗೆಯಲ್ಲಿ ನಡೆದು ಬಂದು ಹೂವು-ಹಣ್ಣಿನ ರಸ್ತೆಯಲ್ಲಿ ಬೆಳಗೆರೆಯ ಪುಸ್ತಕದ ಅಂಗಡಿಯನ್ನು ಫೆಬ್ರವರಿ 5ರಂದು ಉದ್ಘಾಟಿಸಲಿದ್ದಾರೆ. ಬದುಕಿನುದ್ದಕ್ಕೂ ಅಕ್ಷರ ಮಾರಿ ಬದುಕಿದವನು: ಈಗ ಅಕ್ಷರಶಃ ಬೀದಿ ಬದಿಯಲ್ಲಿ ಅಂಗಡಿಯಿಟ್ಟು ಪುಸ್ತಕ ಮಾರಲು ಅಣಿಯಾಗುತ್ತಿದ್ದೇನೆ. ನನ್ನ ಜೀವನದ ಈ ಮಹತ್ತರ ತಿರುವಿನಲ್ಲಿ, ರಸ್ತೆಯಂಚಿನಲ್ಲಿ ನೀವು ನಿಂತು ‘ಒಳ್ಳೆಯದಾಗಲಿ ಕಣೋ...’ ಎಂದು ಹಾರೈಸದಿದ್ದರೆ ಹೇಗೆ? ಬೇರೆ ಏನೇ ಕೆಲಸವಿರಲಿ, ಎಲ್ಲ ಬದಿಗಿಟ್ಟು ಫೆಬ್ರವರಿ 5ಕ್ಕೆ ಕಿಸೆಯಲ್ಲೊಂದಷ್ಟು ಕಾಸಿಟ್ಟುಕೊಂಡು, ಮನಸ್ಸಿನ ತುಂಬ ಪ್ರೀತಿಯಿಟ್ಟುಕೊಂಡು ಬಂದು ಬಿಡಿ. ಹಿರಿಯ ಲೇಖಕ-ಕಲಾವಿದರಿರುತ್ತಾರೆ. ಫೊಟೋ, ಆಟೋಗ್ರಾಫು, ಹರಟೆ, ಬಿಸ್ಸಿ ಕಾಫಿ, ನನ್ನ ಹ್ಯಾಪ ನಗೆ, ಬಿಗಿ ಅಪ್ಪುಗೆ! ಫೆಬ್ರವರಿ 5, 2012ರ ಸಂಜೆ 4.30ಕ್ಕೆಲ್ಲ ಗಾಂಧಿಬಜಾರ್‌ಗೆ ಬಂದು ಬಿಡಿ. ರೋಟಿ ಘರ್ ಪಕ್ಕದ್ದೇ BBC ಅಂಗಡಿ. ನಮ್ಮ ಅಂಗಡಿಯಿಂದ ಮುಂದಕ್ಕೆ ನಡೆದರೆ ಐದನೆಯದೇ ಜಗತ್ಪ್ರಸಿದ್ಧ ‘ವಿದ್ಯಾರ್ಥಿ ಭವನ’.

ಇಲ್ಲಿ ಅಂಗಡಿ ಉದ್ಘಾಟನೆಯ ಶಾಸ್ತ್ರ ಮುಗಿಸಿಕೊಂಡವರೇ ನೇರವಾಗಿ ಪದ್ಮನಾಭನಗರದ 12B ಬಸ್‌ಸ್ಟಾಪ್ ಪಕ್ಕದ ಅಟಲ್ ಬಿಹಾರಿ ಬಯಲು ರಂಗಮಂದಿರಕ್ಕೆ ಹೋಗೋಣ. ಅಲ್ಲಿ ಭವ್ಯ ಸಂಗೀತ-ಪುಸ್ತಕ ಬಿಡುಗಡೆ. ಹಿರಿಯ ಅತಿಥಿಗಳ-ಕಲಾವಿದರ ಮಾತು. ಪುಸ್ತಕ ಮಾರಾಟ. Once again ನಾನು. ಹಿಮಾಗ್ನಿ, ಉಡುಗೊರೆ, ಖಾಸ್‌ಬಾತ್ 2004, ಬಾಟಮ್ ಐಟಮ್ 6 ಮತ್ತು ಹೊಸ ಸಿ.ಡಿ.ಗಳಾದ ಕನಸೇ..., ಗೆಲುವೇ, ಒಲವೇ... ಇವಿಷ್ಟೂ ಅವತ್ತು ಬಿಡುಗಡೆಯಾಗಲಿವೆ. ಜೊತೆಗೆ ನಮ್ಮ ಅಣ್ಣಂದಿರ ತಲೆಮಾರಿಗೆ ಸೇರಿದ, ಈಗ ಅಮೆರಿಕದಲ್ಲಿ ನೆಲೆಗೊಂಡಿರುವ, ಅಪರೂಪದ ಕತೆಗಾರ ಡಾ.ಟಿ.ಎನ್.ಕೃಷ್ಣರಾಜು ಅವರ ‘ಕಥೆಗಳು ಮತ್ತು ಕಾದಂಬರಿ’ ಪುಸ್ತಕ ಕೂಡ ಬಿಡಗಡೆಯಾಗಲಿದೆ. ಈ ತನಕ ‘ಭಾವನಾ ಪ್ರಕಾಶನ’ ನನ್ನ ಮಿತ್ರರಾದ ಸುರೇಂದ್ರನಾಥ್ (ಸೂರಿ), ಚಂದ್ರಶೇಖರ ಆಲೂರು, ಬೆಳಗೆರೆ ಕೃಷ್ಣಶಾಸ್ತ್ರಿ, ಚಿದಾನಂದ ಸಾಲಿ-ಇವರ ಹೊರತಾಗಿ ಮತ್ಯಾರ ಕೃತಿಗಳನ್ನೂ ಪ್ರಕಟಿಸಿರಲಿಲ್ಲ. ಈಗ ಅನೇಕ ದಿನಗಳ ನಂತರ ಡಾ.ಕೃಷ್ಣರಾಜು ಅವರ ಕೃತಿ ಪ್ರಕಟಿಸುತ್ತಿದ್ದೇವೆ. ಅಪರೂಪಕ್ಕೆ ಬರೆದರೂ, ತುಂಬ ಕಡಿಮೆ ಬರೆದರೂ ಮನಸ್ಸಿಗೆ ತಟ್ಟುವಂತೆ ಬರೆಯುವ ಟಿ.ಎನ್.ಕೃಷ್ಣರಾಜು ಅವರು ಕನ್ನಡದ ವಿಮರ್ಶಕರಿಂದ ತುಂಬ ಮೆಚ್ಚುಗೆ ಪಡೆದ ಲೇಖಕರು. ಹಿರಿಯ ಕವಿ ಗೋಪಾಲಕೃಷ್ಣ ಅಡಿಗರ ಮಗಳ ಗಂಡ ಮತ್ತು ನಾನು ಗೌರವಿಸುವ ಹಿರಿಯ ವಕೀಲರಾದ ರಘುಪತಿ ಅವರ ಅಣ್ಣ. ಹೀಗಾಗಿ, ಶ್ರದ್ಧೆಯಿಂದ ಅವರ ಪುಸ್ತಕವನ್ನು ನಾನೇ ಕೇಳಿ ಪ್ರಕಟಿಸುತ್ತಿದ್ದೇನೆ.


ಒಂದರ್ಥದಲ್ಲಿ ತುಂಬ ದಿನಗಳ ನಂತರ ಒಂದು ಪುಸ್ತಕ ಜಾತ್ರೆ ನಡೆಯಲಿದೆ.

ನೀವು ಬರಬೇಕು. ಬರಲೇಬೇಕು.

BBC ಉದ್ಘಾಟನೆ 4.30ಕ್ಕೆ ಮುಗಿದು, ಪದ್ಮನಾಭನಗರದ ಗ್ರೌಂಡಿನ ಕಾರ್ಯಕ್ರಮ ಸಂಜೆ 6ಕ್ಕೆ ಆರಂಭವಾಗಲಿದೆ. ಎರಡಕ್ಕೂ ನಿಮಗೆ ಉಚಿತ ಸ್ವಾಗತ. ಬಾಗಿಲಲ್ಲಿ ಕಾತರದಿಂದ ನಿಂತು ಕಾಯುವವನು ನಾನು, ನಿಮ್ಮವನು.

-ಬೆಳಗೆರೆ

Read Archieves of 30 January, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books