Ravi Belagere
Welcome to my website
ಬೇರೆ ಏನೇ ಕೆಲಸವಿರಲಿ, ಎಲ್ಲ ಬದಿಗಿಟ್ಟು ಫೆಬ್ರವರಿ 5ಕ್ಕೆ ಕಿಸೆಯಲ್ಲೊಂದಷ್ಟು ಕಾಸಿಟ್ಟುಕೊಂಡು, ಮನಸ್ಸಿನ ತುಂಬ ಪ್ರೀತಿಯಿಟ್ಟುಕೊಂಡು ಬಂದು ಬಿಡಿ. ಹಿರಿಯ ಲೇಖಕ-ಕಲಾವಿದರಿರುತ್ತಾರೆ. ಫೊಟೋ, ಆಟೋಗ್ರಾಫು, ಹರಟೆ, ಬಿಸ್ಸಿ ಕಾಫಿ, ನನ್ನ ಹ್ಯಾಪ ನಗೆ, ಬಿಗಿ ಅಪ್ಪುಗೆ! ಫೆಬ್ರವರಿ 5, 2012ರ ಸಂಜೆ 4:30ಕ್ಕೆಲ್ಲ ಗಾಂಧಿಬಜಾರ್‌ಗೆ ಬಂದು ಬಿಡಿ. BBC ಉದ್ಘಾಟನೆ 4:30ಕ್ಕೆ ಮುಗಿದು, ಪದ್ಮನಾಭನಗರದ ಗ್ರೌಂಡಿನ ಕಾರ್ಯಕ್ರಮ ಸಂಜೆ 6ಕ್ಕೆ ಆರಂಭವಾಗಲಿದೆ. ಎರಡಕ್ಕೂ ನಿಮಗೆ ಉಚಿತ ಸ್ವಾಗತ. ಬಾಗಿಲಲ್ಲಿ ಕಾತರದಿಂದ ನಿಂತು ಕಾಯುವವನು ನಾನು, ನಿಮ್ಮವನು.
Home About Us Gallery Books Feedback Prarthana Contact Us

ಪ್ರೇಮಿಗಳ ದಿನಾಚರಣೆಯಂದು ನೀವು ಅವಳಿಗೆ ಕೊಡಲಿಕ್ಕೊಂದು ಸಿ.ಡಿ.ಬೇಕಾ?

“ರಿಮ್ ಝಿಮ್ ಗಿರೇ ಸಾವನ್...
ಸುಲಗ್ ಸುಲಗ್ ಜಾಯೇ ಮನ್..."

ಅಂತ ಹಾಡು ಝೇಂಕರಿಸುತ್ತಿದ್ದರೆ ಮನಸಿನಲ್ಲಿ Valentrines day ಗಾಗಿ ಸಿದ್ಧಗೊಳ್ಳುತ್ತಿರುವ ಸಿ.ಡಿಯ scriptನ ಸಾಲುಗಳು ಸುಮ್ಮನೆ ತಂತಾನೆ ಗೋಚರವಾಗುತ್ತವೆ. ಐವತ್ಮೂರರ ನಾನು ಇಪ್ಪತ್ಮೂರರ ಹುರುಪಿನೊಂದಿಗೆ ಹೆಡೆಯೆತ್ತುತ್ತೇನೆ. ಯೌವನದ ಯಾವುದೋ ನೆನಪು, ಕೊಟ್ಟ ಮೊದಲ ಮುತ್ತು, ಆದ ಮೊದಲ ಸ್ಪರ್ಶ, ಚಿಮ್ಮಿದ ಮೊದಲ ಸ್ಖಲನ,ಬಿದ್ದ ಮೊದಲ ಸ್ವಪ್ನ, ಪ್ರೀತಿಯ ಆ ಎಕ್ಸೈಟ್‌ಮೆಂಟು... ಎಲ್ಲವೂ ಕೆಲವು ಸಾವಿರ ಸಾವಿರ ಹಾಡುಗಳೊಂದಿಗೆ ತಳಿಕೆ ಹಾಕಿಕೊಳ್ಳದೆ ಹೋಗಿದ್ದಿದ್ದರೆ ನಾನು ಅಷ್ಟೆಲ್ಲ ವರ್ಷ ‘ಎಂದೂ ಮರೆಯದ ಹಾಡು’ ನಡೆಸಿಕೊಡಲು ಸಾಧ್ಯವಿರುತ್ತಿರಲಿಲ್ಲ. ಇವತ್ತಿಗೂ ಅವಡುಗಚ್ಚಿ ಕುಳಿತರೆ ‘ಲವ್‌ಲವಿಕೆ’ ಬರೆಯಲು ಸಾಧ್ಯವಾಗುತ್ತದೆ. I know, I am young at heart. Stopped counting my age after eighteen.

ಫೆಬ್ರುವರಿ ಹದಿನಾಲ್ಕನ್ನೇ ಏಕೆ ಪ್ರೇಮಿಗಳ ದಿನಾಚರಣೆ ಅನ್ನುತ್ತಾರೋ? ಗೊತ್ತಿಲ್ಲ. ನನ್ನ ಪಾಲಿಗೆ ಅದು ‘ದಿನಾ...ಚರಣೆ’. ಮೊಬೈಲ್‌ನಲ್ಲಿ ನನ್ನವಳ ಹೆಸರು ಸುಮ್ಮನೆ flash ಆದರೆ ಸಾಕು ಎದೆ ಢವಗುಡುತ್ತದೆ. ಮನುಷ್ಯ ಯಾವ ವಯಸ್ಸಿನಲ್ಲೂ ಪ್ರೀತಿಯ, ಆತುರತೆಯ, ಆಸೆಯ, ಮಿಲನದ ಈ ಕಕ್ಕುಲತಿಯನ್ನು ಕಳೆದುಕೊಳ್ಳಬಾರದು. ನಿಮಗೂ ಗೊತ್ತಿದೆ: ‘ಹಾಯ್ ಬೆಂಗಳೂರ್’ ಪತ್ರಿಕೆ ಕೆಲ ವರ್ಷ ಪ್ರೇಮಿಗಳ ದಿನಾಚರಣೆಯ ಸಂದರ್ಭದಲ್ಲಿ ಪುಟ್ಟ ಪುಟ್ಟ ಪುಸ್ತಿಕೆಗಳನ್ನು ವಿಶೇಷವಾಗಿ ಮುಖ್ಯ ಸಂಚಿಕೆಯೊಂದಿಗೆ ಹದಿನಾರು ಪುಟ, ಮೂವತ್ತೆರಡು ಪುಟ ಅಂತ ವಿತರಿಸುತ್ತಿತ್ತು. ಆಮೇಲೆ ನನ್ನ ಸೋಮಾರಿತನ, ನನ್ನ ಹ್ಯಾಪತನ, ಇತರೆ ಕೆಲಸ, ಸುತ್ತಾಟ, ಸಿನೆಮಾ, ಟೀವಿ, ಅನಾರೋಗ್ಯಗಳಿಂದಾಗಿ, ಎಲ್ಲಕ್ಕಿಂತ ಹೆಚ್ಚು ನಾನು ಕಳ್ಳಾಟಕ್ಕೆ ಬಿದ್ದಿದ್ದರಿಂದಾಗಿ ಈ ಅಭ್ಯಾಸ ತಪ್ಪಿ ಹೋಗಿತ್ತು. ‘ಓ ಮನಸೇ...’ ಪತ್ರಿಕೆ ನಡೆಯುತ್ತಿದ್ದಾಗಲಂತೂ ನಾನು ರಾಜ್ಯದ ಲಕ್ಷಾಂತರ ಕೋಟ್ಯಂತರ ಹುಡುಗ ಹುಡುಗಿಯರ ಪಾಲಿಗೆ ಅಣ್ಣ-ಅಪ್ಪ-ಚಿಕ್ಕಪ್ಪ-ಮಾಮ ಮತ್ತು ಲವ್ ಗುರು.

ನಿಜ ಹೇಳಬೇಕೆಂದರೆ, ಪ್ರೇಮದ ಕುರಿತಾದ ನನ್ನ ಅಷ್ಟೂ ಬರಹಗಳು, ಮಾತು-ಅವೆಲ್ಲ ನನ್ನದೇ ವಿಫಲ ಪ್ರೇಮದ ಹಳವಂಡಗಳಾಗಿದ್ದವು. ಚೆನ್ನಾಗಿ ಬಿ.ಎ., ಎಂ.ಎ., ಓದಿ ಪತ್ರಿಕೋದ್ಯಮ ತಿಳಿದುಕೊಂಡು ‘ಪತ್ರಿಕೆ’ ಆರಂಭಿಸಿದವನು ಯಶಸ್ವಿಯಾಗುತ್ತಿದ್ದನೋ ಇಲ್ಲವೋ? ಹಸಿರು ನೆರಿಗೆ ಲಂಗದ ಅನಾಮಧೇಯ ಹುಡುಗಿಯೊಬ್ಬಳನ್ನು ಪ್ರೀತಿಸಿ, ಕನಸು ಕಂಡು, ಏಳು ವರ್ಷ ಕೈ ಕೈ ಹಿಡಿದು ಸುತ್ತಿ, ಯಾವತ್ತೂ ನಮ್ಮಿಬ್ಬರಿಗೆ ಹುಟ್ಟದ ಮಕ್ಕಳಿಗೆ ಹೆಸರಿಟ್ಟು , ಕಡೆಗೆ ಅದಷ್ಟೂ ಪ್ರೇಮ ಒಂದೇ ಹೊಡೆತಕ್ಕೆ ಕುಸಿದು ಬಿದ್ದು ಇದ್ದಕ್ಕಿದ್ದಂತೆ ಕಬೋಜಿಯಾಗಿ ಹೋದವನು ನಾನು. ಆಮೇಲೆ practical ಆಗಿ ಯೋಚಿಸಿ, ‘ಹೋದರೆ ಹೋದಳು, ಬದುಕು ಕಟ್ಟಿಕೊಳ್ಳೋಣ: ಇವಳಲ್ಲದಿದ್ದರೆ ಇನ್ನೊಬ್ಬಳು ಸಿಗುತ್ತಾಳೆ’ ಅಂತ ಅಂದುಕೊಂಡು ಬದುಕಿದ್ದಿದ್ದರೆ ಮತ್ತೇನಾಗುತ್ತಿದ್ದೆನೋ? ನನ್ನ ಕೈಗೆ ಆ ಘಟ್ಟದಲ್ಲಿ ಸಿಗಬಾರದ ಎರಡು ವಸ್ತುಗಳು ಸಿಕ್ಕವು: ಪುಸ್ತಕ ಮತ್ತು ಸಿಗರೇಟು. ಕೈಗೆ ಸಿಕ್ಕ ಪುಸ್ತಕ ಓದಿದೆ. ಮುಖ್ಯವಾಗಿ ಪ್ರೇಮಕ್ಕೆ, ಬದುಕಿಗೆ, ಮನುಷ್ಯನ ದುಃಖಕ್ಕೆ ಸಂಬಂಸಿದ ಪುಸ್ತಕಗಳು. ಜೊತೆಗೆ ಗ್ಯಾಲನುಗಟ್ಟಲೆ ಷರಾಬು ಕುಡಿದೆ. ನೊಂದದ್ದನ್ನು ಮರೆಯಲು ಕುಡಿದೆನಾ? ಮರೆತು ಹೋದೆನೇನೋ ಅಂದುಕೊಂಡು ನಡೆದದ್ದನ್ನೆಲ್ಲ ಮೆಲುಕು ಹಾಕಲು ಕುಡಿದೆನಾ? God knows. ಲೈಬ್ರರಿಗಳಲ್ಲಿ, ಪತ್ರಿಕಾ ಕಚೇರಿಗಳಲ್ಲಿ, ಷರಾಬಿನ ಅಡ್ಡೆಗಳಲ್ಲಿ ಅನಾಮತ್ತು ಹದಿನಾರು ವರ್ಷ ಕಳೆದು ಹೋದವು. ಕಡೆಗೆ ‘ಇದು ಆಗದಲ್ಲ, ಹೋಗೋದಲ್ಲ’ ಅಂತ ತಲೆ ಕೊಡವಿ ‘ಹಾಯ್ ಬೆಂಗಳೂರ್!’ ಎಂಬ ವಿಲಕ್ಷಣ ಹೆಸರಿನ ಪತ್ರಿಕೆ ಪ್ರಾರಂಭಿಸಿದಾಗ handy ಆಗಿ ಕೈಗೆ ಸಿಕ್ಕದ್ದು ನನ್ನ ಜ್ಞಾನವಲ್ಲ, ಪತ್ರಿಕೋದ್ಯಮದ ಅನುಭವವಲ್ಲ, ಶಾಣ್ಯಾತನವಲ್ಲ, ಮತ್ಯಾವ ಅಕಾಡೆಮಿಕ್ ಬುದ್ಧಿವಂತಿಕೆಯೂ ಅಲ್ಲ: ಅದು ‘ಪ್ರೇಮ’.

‘ಪತ್ರಿಕೆ’ಯ ಪುಟಗಳಲ್ಲಿ ಕೇವಲ ಅಂಡರ್‌ವರ್ಲ್ಡ್‌ನ ನೆತ್ತರು, ಕೊಲೆಗಳ ವಿವರಗಳು ಜಿನುಗುತ್ತಿದ್ದರೆ ಇದು ಮತ್ತೊಂದು ಕ್ರೈಂ ಪತ್ರಿಕೆಯಾಗುತ್ತಿತ್ತು. ಕೇವಲ ಭ್ರಷ್ಟಾಚಾರ-ರಾಜಕೀಯ ಬರೆದಿದ್ದರೆ ಅಂಥವಾಗಲೇ ಕನ್ನಡದಲ್ಲಿ ಮರಕ್ಕೊಂದು ಪತ್ರಿಕೆ ಇದ್ದವು. ನಾನು ಮನುಷ್ಯನ ಪ್ರೀತಿಯ ಬಗ್ಗೆ ಬರೆಯತೊಡಗಿದೆ. ಅಮ್ಮನ ಪ್ರೀತಿ, ಗೆಳತಿಯ ಪ್ರೀತಿ, ದೊರೆಯದ ಪ್ರೀತಿ, ಉಸಿರುಗಟ್ಟಿಸುವ ಪ್ರೀತಿ, ಕೋತಿ ಪ್ರೀತಿ, ಪ್ರಶಾಂತ ನದಿಯಂಥ ಪ್ರೀತಿ, ಅದರಲ್ಲಿನ ತಬ್ಬಲಿತನ, ಆ ಚಡಪಡಿಕೆ, ಅದರ ಸುತ್ತ ಹೊಮ್ಮಿದ ಹಾಡು, ಸಾಹಿತ್ಯ, ಸಿನೆಮಾ-ಹೀಗೆ ಬರೆದಾಗಲೇ ‘ಪತ್ರಿಕೆ’ಯನ್ನು ಯುವತಿ-ಯುವಕರು, ಗೃಹಿಣಿಯರು, ತಾಯಂದಿರು, ವಿಧವೆಯರು, ಗೃಹಸ್ಥರು ಇಷ್ಟಪಟ್ಟರು. ‘ಪತ್ರಿಕೆ’ಯ ಗೆಲುವಿನ ಹಿಂದಿನ ರಹಸ್ಯಗಳ ಪೈಕಿ ಇದೂ ಒಂದು.

ಆದರೆ ‘ಮನಸೇ...’ ಸಿ.ಡಿ. ಮಾಡಿದೆ ನೋಡಿ? ಅದು ನನ್ನ ಮಟ್ಟಿಗೆ ಬೇರೆಯದೇ ಅನುಭವ. ಕೆಲವು ದಿನ ನನ್ನ ಅಂಕಣಕಾರನಾಗಿದ್ದವನು ನಾಗಿ, ನಾಗರಾಜ ಹವಾಲ್ದಾರ್. ಅವನು ಧಾರವಾಡದಲ್ಲಿ ನಾನು ಎಂ.ಎ., ಮಾಡುತ್ತಿದ್ದಾಗ ನನ್ನ ಕಿರಿಯ ಸಹಪಾಠಿ. ನನ್ನದೇ ಜಿಲ್ಲೆಯ ಹೊಸಪೇಟೆಯವನು. ನಮ್ಮಂತೆ ಅಶಿಸ್ತಿರಲಿಲ್ಲ. ಅಕೆಡೆಮಿಕ್ ಶ್ರದ್ಧೆ ಇತಿಹಾಸದೆಡೆ ಇತ್ತು. ಅದಕ್ಕಿಂತ ಹೆಚ್ಚಾಗಿ ಹಿಂದೂಸ್ತಾನಿ ಸಂಗೀತದೆಡೆಗೆ ಒಲವಿತ್ತು. ಭಾವಗೀತೆ ಹಾಡುತ್ತಿದ್ದ. ಭೀಮಸೇನ ಜೋಶಿಯವರ ಹುಚ್ಚಿತ್ತು. ಮುಂದೆ ಬದುಕಿನ ಧಕ್ಕಡಿ-ತಿಕ್ಕಡಿಯಲ್ಲಿ ಎಲ್ಲಿ ಕಳೆದುಹೋದನೋ ಗೊತ್ತಿಲ್ಲ. ಎಲ್ಲೋ ಮೈಸೂರಿನಲ್ಲಿ ಒಮ್ಮೆ ತೇಲಿದ. ಡಾಕ್ಟರೇಟ್ ಮಾಡುತ್ತಿದ್ದೇನೆಂದ. ಅವನ ಟೆಲಿಫೋನ್ ನಂಬರ್ ಸಿಕ್ಕಿತು. ‘ಪತ್ರಿಕೆ’ಯ ಕೆಲಸವೆಲ್ಲ ಮುಗಿದು ಕೆಲವು ಗೆಳೆಯರು ಬಿಡುವಾಗಿ ಕುಳಿತಾಗ ನಾಗಿ ನೆನಪಾಗಿ ‘ಅಣ್ಣಾ, ಬಾರೋ, ನಿನ್ನ ದನಿ ಕೇಳಿ ಭಾಳ ದಿನ ಆಗ್ಯದೆ’ ಅಂದ ಕೂಡಲೆ ಇದ್ದ ಕೆಲಸ ಬಿಟ್ಟು ಕಚೇರಿಗೆ ಬರುತ್ತಿದ್ದ. ನನ್ನ ಪ್ರೀತಿಯ ರಾಗಗಳಾದ ಲಲತ್ ಮತ್ತು ತೋಡಿ ಹಾಡುತ್ತಿದ್ದ. ತುಂಬ ನಿರಹಂಕಾರಿಯಾದ, ನಿಜಕ್ಕೂ ಪಾಂಡಿತ್ಯಪೂರ್ಣ ಸಂಗೀತಗಾರನಾದ, ಭೀಮಸೇನ ಜೋಶಿ ಮತ್ತು ಮಾಧವ ಗುಡಿ ಅವರಲ್ಲಿ ಕಲಿತ ನಾಗರಾಜ ಹವಾಲ್ದಾರ್ ಅಮೆರಿಕೆಯಲ್ಲಿಯೂ ಶಿಷ್ಯರನ್ನು ಹೊಂದಿದ್ದಾನೆ. ಅಲ್ಲಿಗೆ ತಿಂಗಳುಗಟ್ಟಲೆ ಹೋಗಿ ಬರುತ್ತಿರುತ್ತಾನೆ.

ಅಂಥದರಲ್ಲಿ ‘ಮನಸೇ...’ ಸಿ.ಡಿ ಮಾಡ್ತಿದೀನಿ, ಅದರ script ನನ್ನದು, ಅದಕ್ಕೆ ಸಂಗೀತ ನಿನ್ನದು ಮತ್ತು ಕೇಳುಗರ ಮನಸ್ಸಿಗೆ ತಟ್ಟುವಂತೆ ಅಪೂರ್ವವಾದ ಏರಿಳಿತಗಳುಳ್ಳ ಆಲಾಪ್‌ಗಳನ್ನು ಮಾಡುವ ಹೊಣೆ ನಿನ್ನದು. ಅದಕ್ಕೆ ಎಷ್ಟು ಹಣ ಕೊಡಬೇಕು ಹೇಳು?" ಅಂತ ಕೇಳಿದಾಗ,
“ಹಡಿಸ್ತು ಹಣ, ಮೊದಲು script ready ಮಾಡು" ಅಂದಿದ್ದನಾಗಿ.
ಅವತ್ತು ನಾನು ಅಂದುಕೊಂಡಿರಲಿಲ್ಲ: ‘ಮನಸೇ...’ ಎಂಬ ಅರವತ್ತು ನಿಮಿಷಗಳ ಧ್ವನಿ ಮುದ್ರಿಕೆ ಕೇಳುಗರನ್ನು ಅಷ್ಟು ತೀವ್ರವಾಗಿ, ಹಾಗೆ impress ಮಾಡಬಹುದು ಅಂತ. ಅದಕ್ಕಾಗಿ ಒಂಚೂರು ಸಿದ್ಧತೆ ಬೇಕು. ಕೆಲವು ದಿನ ಸ್ಟೀಲಿನ ಪಾತ್ರೆಯ ನೀರಿನಲ್ಲಿ ಹುಣಸೇ ಹಣ್ಣು ನೆನೆದಂತೆ ಒಂದು ಭಾವ ನೆನೆಯಬೇಕು. ಏನೋ ಕಾಡು ಹರಟೆಯಲ್ಲ. ಸುಮ್ಮನೆ ಮೈಕಿನೆದುರು ಕೂಡಲಾಗುವುದಿಲ್ಲ. ಇಡೀ ದಿನ ಕುಳಿತು ಅಂದುಕೊಂಡದ್ದರ notes ಮುಂದಿಟ್ಟುಕೊಂಡು ಶ್ರದ್ಧೆಯಿಂದ ಹದಿನಾರು-ಹದಿನೆಂಟು ಪುಟಗಳ script ಮಾಡಿಕೊಳ್ಳಬೇಕು. ಆ ಮೇಲೆ ಒಂದು ನಿದ್ರೆ ಮಾತ್ರೆ ತೆಗೆದುಕೊಂಡು ಮಿನಿಮಮ್ ನಾಲ್ಕು ತಾಸು ಮಲಗಬೇಕು. ಚೆನ್ನಾಗಿ ಮಲಗೆದ್ದ ಮೇಲೆ ಧ್ವನಿ soft ಆಗಿ, ಏರಿಳಿತಗಳಿಗೆ ಹೇಳಿಮಾಡಿಸಿದಂತೆ ಶ್ರುತಿಗೊಂಡು, deep ಆಗಿ, ನಮಗೇ ಖುಷಿ ಕೊಡುವಂತಾಗಿರುತ್ತದೆ. ಆಗ ಹೋಗಿ, ಖಡಕ್ಕಾದ ಒಂದು ಕಾಫಿ ಕುಡಿದು, ಎರಡು ಸಿಗರೇಟೆಳೆದು, ಮೈಕಿನ ಮುಂದೆ ಏಕಾಗ್ರತೆಯಿಂದ ಕೂಡಬೇಕು.
ಈಗ ಕೂತಿದ್ದೇನೆ.

ಇದೆಲ್ಲ ಮಾಡಿ ಕುಳಿತಿದ್ದೇನೆ.

‘ಒಲವೇ...’ ಎಂಬುದು ನನ್ನ ಸಿ.ಡಿಯ ಹೆಸರು. ಪುಸ್ತಕಗಳ ಸಂಖ್ಯೆ ‘ಹಿಮಾಗ್ನಿ’ಯೊಂದಿಗೆ ಅರವತ್ತೊಂಭತ್ತಕ್ಕೆ ಬಂದು ನಿಂತಿದೆ. ಮನಸೇ..., ಕನಸೇ..., ನಂತರ ‘ಒಲವೇ...’ : ಇದು ಮೂರನೆಯ ಸಿ.ಡಿ. ಸುಮ್ಮನೆ ಮಾತನಾಡುತ್ತ ಹೋಗಿದ್ದೇನೆ. ನನ್ನ ಕಣ್ಣೆದುರಿಗೆ ಕೇವಲ ನೀವಿದ್ದೀರಿ. ಪ್ರೇಮಿಗಳು. ಈಗಷ್ಟೆ ಪಿಸುಮಾತು ಪ್ರಾರಂಭಿಸಿರುವವರು, ಅವಳ ‘ಹ್ಞಾಂ’ ಗಾಗಿ ಕಾದವರು, ಅವನು ‘ಪ್ಲೀಸ್’ ಅಂದದ್ದು ಕೇಳಿಸಿಕೊಂಡು ಬೀಗುತ್ತಿರುವವರು, ಬಂದ ಮೆಸೇಜು ಇಟ್ಟುಕೊಳ್ಳಲೂ ಆಗದೆ ಡಿಲೀಟೂ ಮಾಡಲಾಗದೆ ಚಡಪಡಿಸುತ್ತಿರುವವರು, ನಿನ್ನೆ ಸಿಕ್ಕವರು, ನಾಳೆ ಸಿಗಲಿರುವವರು, ಎಲ್ಲೋ ಕಳೆದು ಹೋದವರು, ಯಾವುದೋ ಸಾಗರದಾಚೆಗಿನ ದೇಶದಲ್ಲಿರುವವರು, ಎದುರಿಗೇ ಇದ್ದರೂ ‘ಐ ಲವ್ ಯೂ’ ಅಂತ ಹೇಳಲಾಗದವರು, ಹೇಳಿದ್ದಕ್ಕೆ ಉತ್ತರ ನಿರೀಕ್ಷಿಸುತ್ತಿರುವವರು, ಊರಿಗೆಲ್ಲ ನೀವು ಪ್ರೀತಿಸುತ್ತಿರುವುದು ಗೊತ್ತಿದ್ದರೂ ನಿಮಗೇ ಇನ್ನೂ ಹೇಳಿಕೊಳ್ಳಲು ಸಾಧ್ಯವಾಗದಿರುವವರು, ಗೊತ್ತಾದರೆ ಅಪ್ಪ ಏನಂತಾನೋ ಅಂತ ಆತಂಕಗೊಳ್ಳುತ್ತಿರುವವರು, ಅದೇನೇ ಆಗಲಿ-ಎರಡೂ ಕಡೆಯವರನ್ನೂ ಒಪ್ಪಿಸಿ ಮದುವೆಯಾಗೋಣ ಎಂದು ತೀರ್ಮಾನಿಸಿದವರು, ಈಗಾಗಲೇ ಎಂಗೇಜ್‌ಮೆಂಟ್ ಮುಗಿಸಿಕೊಂಡು ಮದುವೆಯ ಡೇಟಿಗೆ ಕಾಯುತ್ತಿರುವವರು, ನಮ್ಮ ಮದುವೆ ಸಾಧ್ಯವೇ ಇಲ್ಲ ಎಂದು ಗೊತ್ತಿದ್ದರೂ ಮನಸ್ಸಿನ ಅಪ್ಪಣೆಗೆ ಸಿಲುಕಿ ಪ್ರೀತಿಸುತ್ತಿರುವವರು, ಯಾವ ಕ್ಷಣದಲ್ಲಿ ಈ ಸಂಬಂಧ ಮುರಿದು ಬೀಳುತ್ತದೋ ಎಂದು ಆತಂಕಗೊಂಡಿರುವವರು, ಮುರಿದುಬಿದ್ದ ಮುದ್ದು ಬೊಂಬೆಯಂತಹ ಪ್ರೀತಿಯನ್ನು ನೆನೆದು ಹಳ ಹಳಿಸುತ್ತಿರುವವರು, ಅವನೊಂದು sorry ಹೇಳಿದ್ದಿದ್ದರೆ ಎಲ್ಲ ಸರಿ ಹೋಗುತ್ತಿತ್ತು ಅಂದುಕೊಳ್ಳುತ್ತಿರುವವರು, ಅವಳು ಅಮ್ಮನಿಗೆ ಹೇಳಿಕೊಂಡರೆ ಅಷ್ಟೇ ಸಾಕು ಅಂದುಕೊಳ್ಳುತ್ತಿರುವವರು...

Yes, ನೀವೆಲ್ಲ ಇದ್ದೀರಿ.

ನಿಮ್ಮೆಲ್ಲರನ್ನೂ ಇಟ್ಟುಕೊಂಡು ಸಿದ್ಧಪಡಿಸಿರುವುದೇ ‘ಒಲವೇ’ ಸಿ.ಡಿ. ನನ್ನ ಗೆಳೆಯ ನಾಗಿ ಅದ್ಭುತವಾದ ಸಂಗೀತ ಮಾಡಿದ್ದಾನೆ. ನಿಮ್ಮನ್ನು ಫಕ್ಕನೆ ಮುದಗೊಳಿಸುವ ಕನ್ನಡ-ಹಿಂದಿ ಹಾಡುಗಳನ್ನ, ಕವಿತೆಗಳನ್ನ, ಹಿರಿಯ ಕವಿಗಳ ದನಿಯನ್ನ ಅಲ್ಲಲ್ಲಿ ಬಳಸಿದ್ದೇನೆ. ನೀವು ಜನ್ಮದಲ್ಲಿ ಯಾರನ್ನಾದರೂ ಪ್ರೀತಿಸಿದ್ದೀರೋ ಇಲ್ಲವೋ ಗೊತ್ತಿಲ್ಲ. ಆದರೆ ‘ಒಲವೇ’ ಸಿ.ಡಿ ಕೇಳಿದ ಮೇಲೆ ನೀವು ಪ್ರೀತಿಸದೆ ಇರಲಾರಿರಿ. ನೀವಿದನ್ನು ಯಾರಿಗಾದರೂ ಫೆಬ್ರುವರಿ ಹದಿನಾಲ್ಕರಂದು ಉಡುಗೊರೆಯಾಗಿ ಕೊಟ್ಟಿರೋ? ಅವರು ನಿಮ್ಮನ್ನು ಪ್ರೀತಿಸಿಯೇ ಪ್ರೀತಿಸುತ್ತಾರೆ ಎಂಬ ಗ್ಯಾರಂಟಿ ನಾನು ಕೊಡಲಾರೆ. ಆದರೆ ನೀವು ಅವರನ್ನು ಪ್ರೀತಿಸಿದ್ದೀರಿ ಎಂಬುದಂತೂ ಅವರಿಗೆ ಗೊತ್ತಾಗಿಯೇ ಗೊತ್ತಾಗುತ್ತದೆ. ಅಷ್ಟು ಮಾತ್ರ ಹಂಡ್ರೆಡ್ ಪರ್ಸೆಂಟ್ sure.

ಪ್ರೀತಿ ಹುಟ್ಟಲಿಕ್ಕೆ ಸಿ.ಡಿ.ಯೇ ಬೇಕಾಗಿಲ್ಲ. ಒಂದು ನೆನಪು ಸಾಕು. ಭಾವ ಸಾಕು. ಒಂದು glance ಸಾಕು. ಒಂದು ಟೆಲಿಫೋನ್ call ಸಾಕು. Mis directed ಆಗಿ ಬಂದ ಒಂದು message ಸಾಕು. ನಮ್ಮ ಬಗ್ಗೆ ಅವಳ ಎದುರು ಇನ್ಯಾರೋ ಆಡಿದ ಮಾತು ಸಾಕು. ಕೇಳಿದ ಒಂದು ಹಾಡು, ನೋಡಿದ ಒಂದು ಸಿನೆಮಾ, ಕೂತ ಬಸ್ಸು, ಮಾಡಿದ ಚಾರಣ, ಜೊತೆಗಿದ್ದ ಆಫೀಸು, ಒಟ್ಟಿಗಿದ್ದ ಪ್ರಯಾಣದ ಹೊತ್ತು: Enough. ‘ಕಲ್ಲು ಕರಗುವ ಸಮಯ’ ಇಂಥದೇ ಅಂತ ಹೇಳುವುದು ಹೇಗೆ? ಪ್ರೀತಿ ಕೂಡ ಅಷ್ಟೆ.

ಆದರೆ ಇಂಥ ಕ್ಷಣಭಂಗುರ ಪ್ರೀತಿ ಹುಟ್ಟಿದಂತೆಯೇ ಹುಟ್ಟಿ, ಇನ್ನೇನು ಘನಗೊಂಡಿತು ಅಂದುಕೊಳ್ಳುವಷ್ಟರಲ್ಲಿ ಅರೆ, ಅದೆಲ್ಲಿ ಮಾಯವಾಯಿತು? ಕನ್ನಡಿಯಲ್ಲಿ ಕಂಡ ಆ ಚೆಂದನೆಯ ಹುಡುಗ ಅದ್ಯಾವ ಗವಾಕ್ಷಿಯಿಂದ ಎದ್ದು ಹೋದ, ಯಾವ ತೆರೆದ ಕಿಟಕಿ? ಜಂಗುಳಿಯ ಯಾವ ತಿರುವಿನಲ್ಲಿ ಕಿರುಬೆರಳು ಹಿಡಿದ ಹುಡುಗಿ ತಪ್ಪಿಸಿಕೊಂಡಳು? ಅವಳೇಕೆ ಈಗ ಮೆಸೇಜು ಕಳಿಸುತ್ತಿಲ್ಲ. ತೀರ call receive ಮಾಡದ ನಿರ್ದಯತೆಯಾ? ಮನಸ್ಸಿಗೆ ಏನೋ ಚಡಪಡಿಕೆ. ಇಂಥ ಸಂದರ್ಭದಲ್ಲಿ ನಾನು ಬೇಕು ಪುರೋಹಿತ. ಚಿಕ್ಕದೊಂದು ಜಗಳವಾಯಿತಾ? ಮಾತು ಬಿಟ್ಟರಾ? ಮುನಿಸು ಮೂಡಿತಾ? ಊರಿಗೆ ಹೊರಟು ಹೋದಳಾ? ನನ್ನ ‘ಒಲವೇ’ ಸಿ.ಡಿ. ನಿಮ್ಮಿಬ್ಬರ ಮಧ್ಯೆ ಒಂದು ಪಕ್ಕಾ ಸಿಮೆಂಟಿಂಗ್ ಫ್ಯಾಕ್ಟರ್.

ಪ್ರೇಮದ ಹಂತ ದಾಟಿ, ಮದುವೆಯಾದ ನಂತರವೂ ಇದೊಂದು ಅರವತ್ತು ನಿಮಿಷಗಳ ಧ್ವನಿ ಮುದ್ರಿಕೆ ನಿಮ್ಮ ಜೊತೆಯಲ್ಲಿರಬೇಕು. ಅದು ನನ್ನ ಆಸೆ. Love is eternal. ಅದನ್ನು ಜೋಪಾನ, ಜೋಪಾನ ಉಳಿಸಿಕೊಂಡು ಬರುವುದರಲ್ಲೇ ಜಾಣತನವಿದೆ. ನಿಜ, ನಾನು ನನ್ನ ಮೊದಲ ಪ್ರೇಮವನ್ನು ಉಳಿಸಿಕೊಳ್ಳಲಾಗಲಿಲ್ಲ. ಆದರೆ ನೊಂದವನಿಗೆ ಮಾತ್ರ ಬೀಳುವ ಎರಡನೆಯ ಏಟಿನಿಂದ ತಪ್ಪಿಸಿಕೊಳ್ಳುವ ಎಚ್ಚರವಿರುತ್ತದೆ. ಎಡವಿದ ಕಾಲಿಗೆ, ಎಡವಿದ ಬೆರಳಿಗೆ ತುದಿಯಲ್ಲೇ ಕಣ್ಣು. ಹೀಗಾಗಿ ತುಂಬ ಶ್ರದ್ಧೆಯಿಂದ, ಚೆಂದಗೆ ಸಿದ್ಧ ಪಡಿಸಿದ್ದೇನೆ.
ಫೆಬ್ರವರಿ ಐದರ ಸಂಜೆ ನಿಮ್ಮ ಕೈಗೆ ಸಿ.ಡಿ.ಸಿಗುತ್ತದೆ. ಫೆಬ್ರವರಿ ಹದಿನಾಲ್ಕು ವ್ಯಾಲಂಟೈನ್ಸ್ ಡೇ. ಅವತ್ತು ನಿಮ್ಮ ಗೆಳತಿಗೆ, ಪ್ರಿಯತಮೆಗೆ, ಹುಡುಗನಿಗೆ, ಮದುವೆಯಾಗಲಿರುವವರಿಗೆ, ನಿಶ್ಚಿತಾರ್ಥವಾಗಿರುವವರಿಗೆ, ಅಕಸ್ಮಾತ್ ದೂರ ದೂರಿನಲ್ಲಿರುವವರಿಗೆ ಇದನ್ನು ಉಡುಗೊರೆಯಾಗಿ ತಲುಪಿಸಿ. ನೀವು ಯಾರಿಗಾದರೂ propose ಮಾಡಬೇಕಾ? ಸಿ.ಡಿ.ಪರೋಕ್ಷವಾಗಿ ಆ ಕೆಲಸವನ್ನು ಮಾಡುತ್ತದೆ. ಜೊತೆಗೆ ಒಂದು ಚೆಂದನೆಯ ಕೆಂಪು ಗುಲಾಬಿಯ ಹೂವು ಮತ್ತು ಸಿ.ಡಿ. ಕೊಟ್ಟು ನೋಡಿ. ಗೆಳತಿಯ ಅಥವಾ ಗೆಳೆಯನ ಮುಖದಲ್ಲಿ ಒಪ್ಪಿಗೆಯ ನಗೆ ಕಂಡರೆ just thank me.. ನನಗೆ ಪ್ರೇಮಿಗಳ ಮನಸು ಅರ್ಥವಾಗುತ್ತದೆ.

ನೀವು ಮನಸೇ... ಕನಸೇ... ಗೆಲುವೇ... ಒಲವೇ... ಈ ನಾಲ್ಕೂ ಸಿ.ಡಿ.ಗಳನ್ನು ಫೆಬ್ರವರಿ ಐದರಂದು ಗಾಂಧಿಬಜಾರ್‌ನಲ್ಲಿ ಉದ್ಘಾಟನೆಯಾಗಲಿರುವ ನನ್ನ ‘ಬೆಳಗೆರೆ ಬುಕ್ಸ್ ಅಂಡ್ ಕಾಫಿ’ (BBC) ಅಂಗಡಿಯಲ್ಲಿ ಸಂಜೆ ನಾಲ್ಕೂ ಮೂವತ್ತಕ್ಕೆ ಕೊಳ್ಳಬಹುದು. ಅಥವಾ ಸಂಜೆ ಆರಕ್ಕೆ ಪದ್ಮನಾಭನಗರದ ಗ್ರೌಂಡಿನಲ್ಲಿ ನಡೆವ ಸಮಾರಂಭದಲ್ಲಿ ಕೊಳ್ಳಬಹುದು. ನಿಮ್ಮ ಊರಿನಲ್ಲೇ ಸಿ.ಡಿ. ಮಾರುವ ಅಂಗಡಿಗಳಲ್ಲಿ ಅಥವಾ ನಮ್ಮ ಅಕೃತ ಏಜೆಂಟರಲ್ಲಿ ಕೊಳ್ಳಬಹುದು. ಪ್ರೇಮಿಗಳ ದಿನಾಚರಣೆಯಂದು ಚಾಕೊಲೇಟು ಕೊಡಿಸಿದೆ, ವಾಚು ಕೊಡಿಸಿದೆ, ಓಲೆ ಕೊಡಿಸಿದೆ, ಲಂಗ ಅಂಗಿ ಕೊಡಿಸಿದೆ, ಬೊಕೆ ಕೊಟ್ಟೆ, ಡೈರಿ ಕೊಟ್ಟೆ ಅನ್ನೋದಕ್ಕಿಂತ ಮನೆಯಲ್ಲಿ ಕೂಡ ಮುಜುಗುರವಾಗದಂತೆ ಒಬ್ಬ ಹುಡುಗಿ ಅಥವಾ ಒಬ್ಬ ಹುಡುಗ ಅರಾಮಾಗಿ ಕೇಳಬಲ್ಲ ‘ಒಲವೇ...’ ಸಿ.ಡಿ ಉಡುಗೊರೆಯಾಗಿ ಕೊಡುವುದಿದೆಯಲ್ಲ?

ಅದು ಅರ್ಥಪೂರ್ಣ.

There is nothing negative in this.

ಇದರಷ್ಟೇ ಅರ್ಥಪೂರ್ಣವಾದದ್ದು ‘ಉಡುಗೊರೆ’ ಪುಸ್ತಕ. ಅದನ್ನು ಯಾರಿಗೆ ಯಾರು ಬೇಕಾದರೂ, ಯಾವುದೇ ಸಂದರ್ಭದಲ್ಲಾದರೂ ಪ್ರೀತಿಯಿಂದ ಕೊಡಬಹುದು. ಮದುವೆ ಮನೇಲಿ ಏನು ಕೊಡಬೇಕೆಂದು ತೋಚದೆ ಬಿಳೀ ಪಾಕೀಟಿನಲ್ಲಿ ಐದು ನೂರರ ನೋಟೋ, ಒಂದು ಹೂವಿನ ಬೊಕೆಯೋ ಕೊಟ್ಟು ಬರುವ ಬದಲು ಈ ಅರ್ಥಪೂರ್ಣ ಪುಸ್ತಕ ಕೊಡಿ. ಇದರಲ್ಲಿ ನನ್ನ ಬರಹದಿಂದ ಆಯ್ದ, ಜೀವನಾನುಭವದ ಅರ್ಥಪೂರ್ಣ ಸಾಲುಗಳಿವೆ. ಯಾವುದೇ ಇಂಗ್ಲಿಷ್ ಪುಸ್ತಕಕ್ಕಿಂತ ಬ್ಯೂಟಿಫುಲ್ ಆದ ಪ್ರಿಂಟಿಂಗ್ ಇದೆ. ಇನ್ನು ಅರವತ್ತು ವರ್ಷ ಕಾಯ್ದನಂತರ ಮಾತ್ರ ಸಿಗಬಹುದಾದ ಬಿದಿರ ಹೂಗಳ ಅಪರೂಪದ ಚಿತ್ರಗಳಿವೆ: ನಾನೇ ತೆಗೆದಂಥವು. ಆ ‘ಉಡುಗೊರೆ’ ಪುಸ್ತಕ ಕೂಡ ಅವತ್ತು ನನ್ನ ಅಂಗಡಿಯಲ್ಲಿ, ನಮ್ಮ ಸಂಜೆಯ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಿ ಖರೀದಿಗೆ ಸಿಗುತ್ತದೆ. ಎಸೆಸೆಲ್ಸಿ ಪಾಸಾದ ಹುಡುಗನಿಂದ ಹಿಡಿದು, ಹಸೆಮಣೆ ಏರಲಿರುವ ಹುಡುಗ-ಹುಡುಗಿಯ ತನಕ, ಜೀವನದಲ್ಲಿ ನೊಂದ ವಿಧವೆಯ ತನಕ ನೀವು ಯಾರಿಗೆ ಬೇಕಾದರೂ ‘ಉಡುಗೊರೆ’ಯಾಗಿ ನೀಡಬಹುದಾದ ಅರ್ಥಪೂರ್ಣ ಪುಸ್ತಕ.
ಇದೆಲ್ಲ ಒತ್ತಟ್ಟಿಗಿರಲಿ.

ನಿಮ್ಮನ್ನೆಲ್ಲ ನೋಡಿ ಶತಮಾನಗಳೇ ಆಗಿವೆ. ನಿಮ್ಮ ಮನೆಯವರೊಂದಿಗೆ, ಗೆಳೆಯ ಗೆಳತಿಯರೊಂದಿಗೆ, ಪರಿಚಿತರೊಂದಿಗೆ ಫೆಬ್ರುವರಿ ಐದರಂದು ಅಂಗಡಿ ಉದ್ಘಾಟನೆಗೆ, ಸಂಜೆ ಕಾರ್ಯಕ್ರಮಕ್ಕೆ ಏನೂ ನೆಪ ಹೇಳದೆ, ದಯವಿಟ್ಟು ಬನ್ನಿ. ಒಂದು ಪುಸ್ತಕ ಜಾತ್ರೆ, ಓದುಗ ಹಬ್ಬ, ಸಂಗೀತ ಸಂಜೆ, ಆತ್ಮೀಯ ಮಿಲನ ನಡೆದು ಹೋಗಲಿ.

ಹೊಸ ವರ್ಷ, ಸಂಕ್ರಾಂತಿ, ನಿಮ್ಮ ಕಳಕಳೆಯ ಮುಖ, ನನ್ನ ಬಳುಕ್ಕು ದೇಹ-
What a combination!

ಬರ‍್ತೀರಲ್ಲ?

-ನಿಮ್ಮವನು
ಆರ್.ಬಿ

Read Archieves of 30 January, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books