Ravi Belagere
Welcome to my website
ಬೇರೆ ಏನೇ ಕೆಲಸವಿರಲಿ, ಎಲ್ಲ ಬದಿಗಿಟ್ಟು ಫೆಬ್ರವರಿ 5ಕ್ಕೆ ಕಿಸೆಯಲ್ಲೊಂದಷ್ಟು ಕಾಸಿಟ್ಟುಕೊಂಡು, ಮನಸ್ಸಿನ ತುಂಬ ಪ್ರೀತಿಯಿಟ್ಟುಕೊಂಡು ಬಂದು ಬಿಡಿ. ಹಿರಿಯ ಲೇಖಕ-ಕಲಾವಿದರಿರುತ್ತಾರೆ. ಫೊಟೋ, ಆಟೋಗ್ರಾಫು, ಹರಟೆ, ಬಿಸ್ಸಿ ಕಾಫಿ, ನನ್ನ ಹ್ಯಾಪ ನಗೆ, ಬಿಗಿ ಅಪ್ಪುಗೆ! ಫೆಬ್ರವರಿ 5, 2012ರ ಸಂಜೆ 4:30ಕ್ಕೆಲ್ಲ ಗಾಂಧಿಬಜಾರ್‌ಗೆ ಬಂದು ಬಿಡಿ. BBC ಉದ್ಘಾಟನೆ 4:30ಕ್ಕೆ ಮುಗಿದು, ಪದ್ಮನಾಭನಗರದ ಗ್ರೌಂಡಿನ ಕಾರ್ಯಕ್ರಮ ಸಂಜೆ 6ಕ್ಕೆ ಆರಂಭವಾಗಲಿದೆ. ಎರಡಕ್ಕೂ ನಿಮಗೆ ಉಚಿತ ಸ್ವಾಗತ. ಬಾಗಿಲಲ್ಲಿ ಕಾತರದಿಂದ ನಿಂತು ಕಾಯುವವನು ನಾನು, ನಿಮ್ಮವನು.
Home About Us Gallery Books Feedback Prarthana Contact Us

ಬೆಳಗು ಸಂಜೆಗಳಲ್ಲಿ ಸಂಭ್ರಮವೆಲ್ಲ ಸತ್ತು ಬಿದ್ದ ಘಳಿಗೆ!

ಬೆಳ್ಳ ಬೆಳಿಗ್ಗೆ ಕೆಟ್ಟ ಸುದ್ದಿ.

ಉಳಿದ ಪತ್ರಿಕೆಗಳಲ್ಲಿ ಇದು ಪುಟ್ಟ ವಾರ್ತೆ. ಟೀವಿಗಳಲ್ಲಿ ಚಿಕ್ಕ bit. ಬೆಂಗಳೂರಿನ ಒಂದು ವರ್ಗದವರಿಗೆ ಅಸಲು ಏನಾಯಿತೆಂಬುದು ಗೊತ್ತೇ ಆಗಿರಲಿಕ್ಕಿಲ್ಲ. ಕೆಲವರು ಉದ್ಗರಿಸಿರಲೂ ಬಹುದು: Fine man... dirty fellows are driven out!
ಆದರೆ ಹಾಗಾಗಿಲ್ಲ.

ಗಾಂಧಿ ಬಜಾರ್ ಎಂಬ ಶುದ್ಧ ಮಧ್ಯಮ ವರ್ಗದ ಇಕ್ಕೆಲಗಳಲ್ಲೂ ಇದ್ದ ನೂರಾರು ಹೂವು ಹಣ್ಣು, ತರಕಾರಿ, ದವನ, ಮರುಗದ ರಸ್ತೆ ಬದಿಯ ಅಂಗಡಿಗಳನ್ನು ಬೆಂಗಳೂರು ಮಹಾನಗರ ಪಾಲಿಕೆಯ ಅಕಾರಿಗಳು ನಿನ್ನೆ ರಾತ್ರಿ ಕೇವಲ ಮೂರು ತಾಸಿನಲ್ಲಿ ಬುಲ್‌ಡೋಜರು ಹಚ್ಚಿ ನೆಲ ಸಮ ಮಾಡಿ ಬಿಟ್ಟಿದ್ದಾರೆ. ನೆನಪು ಮಾಡಿಕೊಳ್ಳಿ, ಅಲ್ಲಿ ಸಂಕ್ರಾಂತಿ ಬಂತೆಂದರೆ ಕಬ್ಬಿನ ಜಲ್ಲೆ ಮಾರುತ್ತಿದ್ದರು. ಸೀಜನ್ನು ಬದಲಾದಂತೆಲ್ಲ ಹಣ್ಣು ಬದಲಾಗುತ್ತಿದ್ದವು. ಮಾವು, ಕಿತ್ತಳೆ, ಬಾಳೆ, ಹಲಸು, ಅವರೆ, ಅವರೆ ಕಾಳು, ತಳ್ಳು ಗಾಡಿಯ ಮೇಲೆ ಏನುಂಟು ಏನಿಲ್ಲ. ಹಬ್ಬವಿರಲಿ ಬಿಡಲಿ: ಪ್ರತೀ ಸಂಜೆ ಗಾಂಧಿ ಬಜಾರಿನಲ್ಲಿ ಒಂದು ಸಂಭ್ರಮ ಏರ್ಪಡುತ್ತಿದ್ದುದೇ ಈ ಹೂವು ಹಣ್ಣಿನ ಅಂಗಡಿಗಳಿಂದಾಗಿ. ಗೃಹಿಣಿಯರು ಹೂವು ಒಯ್ಯಲು ಬರುತ್ತಿದ್ದರು. ಜೊತೆಯಲ್ಲಿ ಮಕ್ಕಳು. ಹುಡುಗಿಯರಿಗೆ ಚಿಕ್ಕ ಪುಟ್ಟ ಷಾಪಿಂಗ್. ಮಧ್ಯಮ ವರ್ಗದ, ಚಿಕ್ಕ ಪಾಕೀಟಿನ ಮಂದಿಗೆ ಹೇಳಿ ಮಾಡಿಸಿದ ಸ್ಥಳ. ಹೆಚ್ಚಿನದೇನೂ ಕೊಳ್ಳಲಿಕ್ಕಿಲ್ಲದಿದ್ದರೂ, ನಾಲ್ಕು ಹೆಜ್ಜೆ ನಡೆದಾಡಿ ವಿದ್ಯಾರ್ಥಿ ಭವನಕ್ಕೆ ಹೋಗಿ ಕಾಫಿ ಕುಡಿದು ಅಥವಾ ರೋಟಿ ಘರ್‌ನಲ್ಲಿ ತಿಂಡಿ ತಿಂದು ಮನೆಯತ್ತ ನಡೆದರೆ ಮನಸಿಗೆ ಅದೇ ಆನಂದ. ಹೆಚ್ಚು ಖರ್ಚಿಲ್ಲದ middle class entertainment.
ಕೊಂಚ ಇರುಕಾಗುತ್ತಿತ್ತು. ನಿಜ. ಸಂದಣಿಯಾಗುತ್ತಿತ್ತು. ಫುಟ್‌ಪಾತು ದಾಟಿ ಅಂಗಡಿಗಳು ರಸ್ತೆಗೆ ಮೈ ಚಾಚಿಕೊಂಡಿದ್ದವು. ಹಬ್ಬದ ದಿನಗಳಲ್ಲಿ ಮತ್ತೂ ವಿಸ್ತಾರ. ಓಡಾಡಲಿಕ್ಕೆ ಕಷ್ಟವಾಗುತ್ತಿತ್ತು. ಟ್ರಾಫಿಕ್ಕು ಇಕ್ಕಟ್ಟಾಗಿ ಕಾರುಗಳಂತೂ ಬಂಪರ್ ಟು ಬಂಪರ್. ಆದರೆ ಈ ಪರಿಸ್ಥಿತಿ ಬೆಂಗಳೂರಿನಲ್ಲಿ ಎಷ್ಟು ಕಡೆ ಇಲ್ಲ? ಅಲ್ಲದೆ ಬೆಂಗಳೂರಿನ ಮಲ್ಲೇಶ್ವರ, ಮಲ್ಲೇಶ್ವರದ ಎಂಟನೇ ಕ್ರಾಸು, ಜಯನಗರದ ಫೋರ್ತ್ ಬ್ಲಾಕು, ರಾಜಾಜಿನಗರದ ರಾಮ ಮಂದಿರ-ಇವೆಲ್ಲ ನಮ್ಮ ಮಹಾನಗರಿಯ cultural centres. ಇಲ್ಲಿ ಏನೂ ಘಟಿಸಬೇಕಿಲ್ಲ. ಆದರೆ ಇವುಗಳ ಇರುವಿಕೆಯೇ ಒಂದು ಚೆಂದ. ಮಾಸ್ತಿ ವೆಂಕಟೇಶ ಅಯ್ಯಂಗಾರರು, ಲಂಕೇಶ್, ಸುಮತೀಂದ್ರ ನಾಡಿಗ, ಗೋಪಾಲ ಕೃಷ್ಣ ಅಡಿಗರು, ನಿಸ್ಸಾರ್ ಅಹ್ಮದ್, ನರಸಿಂಹ ಸ್ವಾಮಿಗಳು, ಬಿ.ಸಿ.ರಾಮಚಂದ್ರ ಶರ್ಮ, ವೈಯೆನ್ಕೆ ಇವರೆಲ್ಲ ಸೇರುತ್ತಿದ್ದ, ಓಡಾಡುತ್ತ inspire ಆಗುತ್ತಿದ್ದ, ಗಾಂಧಿ ಬಜಾರ್‌ನ ಬೆಳಗು, ಗಾಂಧಿ ಬಜಾರ್‌ನ ಸಂಜೆ, ಮನಸು ಗಾಂಧಿ ಬಜಾರ್ ಅಂತೆಲ್ಲ ಬರೆಯುತ್ತಿದ್ದ ಒಂದು ಬಹು ಪುರಾತನ ಬೀದಿ. ಈ ಬೀದಿಯ ಅತಿ ಮುಖ್ಯ ಆಕರ್ಷಣೆಯೇ ಹೂವು-ಹಣ್ಣಿನ ಅಂಗಡಿಗಳ ಸಾಲು. ನಾನು ಬೆಂಗಳೂರಿಗೆ ಬಂದ ಈ ಹದಿನೆಂಟು ವರ್ಷಗಳಲ್ಲಿ ಎಂ.ಜಿ.ರೋಡಿಗೆ ಹೋದುದಕ್ಕಿಂತ ಹೆಚ್ಚಾಗಿ ಗಾಂಧಿ ಬಜಾರಿಗೆ ಹೋಗಿದ್ದೇನೆ. ಅದರ ಫುಟ್‌ಪಾತಿನ ಮೇಲೆಯೇ ನಾನು ಮೊದಲು ಗೋಪಾಲಕೃಷ್ಣ ಅಡಿಗರನ್ನು ಭೇಟಿಯಾದದ್ದು. ಅಲ್ಲೇ ಸುಮತೀಂದ್ರ ನಾಡಿಗರ ಪುಸ್ತಕದ ಅಂಗಡಿಯಿತ್ತು. ಕನ್ನಡದ ಬಹುತೇಕ ಬರಹಗಾರರನ್ನು ನಾನು ಮೊದಲು ಭೇಟಿಯಾದದ್ದೇ ಅಲ್ಲಿ.

ಇವತ್ತು ಬನ್ನಿ: ಈ ಕಡೆ ಬಸವನಗುಡಿ ಕ್ಲಬ್‌ನಿಂದ ಹೊರಟರೆ ಎಡಕ್ಕೆ ಬಿ.ಎಸ್.ವಿ ಕಲ್ಯಾಣ ಮಂಟಪವಿದೆ. ಬಾಲಾಜಿ ಟೂರ‍್ಸ್ ಝೆರಾಕ್ಸ್ ಅಂಗಡಿ, ಶಿವಸಾಗರ್ ಹೊಟೇಲು, ಪ್ರಮುಖ್ ಬಾರು, ಕಾರ್ಪೊರೇಶನ್ ಬ್ಯಾಂಕಿನ ಎಟಿಎಮ್ ಕೌಂಟರ್, ಬಾಟಾ ಚಪ್ಲಿ ಅಂಗಡಿ, ಫುಡ್ ವರ್ಲ್ಡ್, ಪ್ರಶಾಂತ್ ಹೊಟೇಲು, ರೋಟಿ ಘರ್, ನನ್ನ ಬಿ.ಬಿ.ಸಿ ಅಂಗಡಿ, ದರ್ಶನ್ ಸಿಲ್ಕ್ಸ್, ಮೆಡಿಕಲ್ ಸ್ಟೋರ‍್ಸ್, ಸ್ವೀಟ್ಸ್ ಅಂಗಡಿ, ವಿದ್ಯಾರ್ಥಿ ಭವನ, ಖಾದಿಮ್ಸ್ ಚಪ್ಪಲಿ ಅಂಗಡಿ, ಒಂದು ಗ್ರಂಥಿಗೆ ಅಂಗಡಿ, ಪುಸ್ತಕದಂಗಡಿ, ಸೂಪರ್ ಬಜಾರು, ಐಸ್ ಥಂಡರ್, ಪರಿಮಳ ಕಾಂಡಿಮೆಂಟ್ಸ್, ಶ್ರೀ ಕೃಷ್ಣ ಕ್ಲಾಥ್ ಷಾಪ್, ಮತ್ತಷ್ಟು ಬಟ್ಟೆ ಅಂಗಡಿ, ಪುಡ್ ಪ್ರಾಡP, ವಿನಾಯಕ ಮೆಡಿಕಲ್ಸ್, ಒಂದು ಬಂಗಾರದಂಗಡಿ, ಧೋಬಿ ಷಾಪು, ಮೊಬೈಲ್ ಷಾಪು-ನೋಕಿಯಾ, ಅಂಕಿತ ಪುಸ್ತಕ ಮಳಿಗೆ, ಮೆಗಾ ಮಾರ್ಟು, ಟೈಲರ್ ಅಂಗಡಿ, ಖಾದಿ ಅಂಗಡಿ, ಮುತ್ತೂಟ್ ಫೈನಾನ್ಸು, ಮಣಪ್ಪುರಂ ಗೋಲ್ಡ್ ಸಾಲದ ಅಂಗಡಿ, ಏರ್‌ಟೆಲ್ ಸೆಂಟರು... ಇಂಥವೆಲ್ಲ ಯಾವುದೇ ನಗರದ ಯಾವುದೇ ಬೀದಿಯಲ್ಲಿ ಇರಬಹುದಾದಂತಹ ಅಂಗಡಿಗಳೇ ತಾನೆ?

ಆ ಕಡೆ ರಾಮಕೃಷ್ಣಾಶ್ರಮದ ಕಡೆಯಿಂದ ಬಂದರೂ ಅಷ್ಟೆ: ಬಟ್ಟೆ ಅಂಗಡಿ, ಸ್ಪೋಕನ್ ಇಂಗ್ಲಿಷು ಹೇಳಿಕೊಡುವ ಕ್ಲಾಸು, ಬೇಕರಿ, ಮಲಮೂತ್ರ ಪರೀಕ್ಷಿಸುವ ಡಯಾಗ್ನಸ್ಟಿಕ್ ಸೆಂಟರು, ಒಂದು ಫಾರ್ಮಸಿ, ನ್ಯೂ ಆತಿಥ್ಯ ಹೊಟೇಲು, ಗಣೇಶ ಜ್ಯೂಸ್ ಅಂಗಡಿ, ರಿಲಯನ್ಸ್ ಮೊಬೈಲ್ ಅಂಗಡಿ, ಅಶ್ವಗಂಧ ಲೇಹ್ಯ ಮಾರುವ ಆಯುರ್ವೇದಿಕ್ ಷಾಪು, ಮಕ್ಕಳಿಗಾಗಿ ಇಂಕಿ-ಪಿಂಕಿ, ಉಡುಪಿ ಕೃಷ್ಣ ಭವನ, ಕಾಂಚೀಪುರಂ ಸೀರೆ, ಕೊಂಚ ಪರ್‌ಫ್ಯೂಮು, ಅತ್ತ ಆಭರಣ, ಹುಡುಗೀರಿಗೊಂದು ಪ್ಯಾಂಟೀಸ್ ಷಾಪು, ಹುಡುಗರಿಗೆ ಕಟ್ಟಿಕೊಳ್ಳಲು ವಾಚು, ಅವರ ಟೈಮು ಸರಿಯಾಗಿರಬೇಕಷ್ಟೆ, ಭರ್ತಿ ಸೀರೆಯಂಗಡಿಗಳಿವೆ. ಮಿಲಿಟರಿ ಹೊಟೇಲಿದೆ, ಸ್ಟೇಟ್ ಬ್ಯಾಂಕಿನ ATM ಇದೆ. ಕಾಫಿ ಡೇ ಇದೆ, ಪಾರ್ಟಿ ಹಾಲ್ ಇದೆ, ಪಾನ್ ಬೀಡಾ ಇದೆ.

ಆದರೆ ಕೊಳ್ಳೋಣವೆಂದರೆ ಮಡದಿಗಾಗಿ ದವನ, ಮರುಗ? ಒಂದು ಮೊಳ ಹೂವು? ಮಗುವಿಗೊಂದು ಕಿತ್ತಳೆ? ಗಾಂಧಿ ಬಜಾರ್‌ನಲ್ಲಿ ಹೆಚ್ಚಿನವರು ಪೊಬ್ಬತಿ ಸಿಲ್ಕ್ಸ್‌ನಲ್ಲಿ ರೇಷ್ಮೆ ಸೀರೆ ತರಲು ಹೋಗುತ್ತಿರಲಿಲ್ಲ. ಗೆಳೆಯರನ್ನು ಭೇಟಿಯಾಗಲು ಅದು ಪ್ರಶಸ್ತ ಜಾಗ. ಅಲ್ಲೇ ಒಂದೆಡೆ ನಿಂತು ರಸ್ತೆ ಬದಿಯ ಎಳನೀರು ಕುಡಿಯುತ್ತಿದ್ದೆವು. ಹಣ್ಣು ಸುಲಿದು ತಿನ್ನುತ್ತಿದ್ದೆವು. ಒಂದಾ ಎರಡಾ ಹಣ್ಣು? ಮಾವು, ಬಾಳೆ, ಕಿತ್ತಳೆ, ಮೋಸಂಬಿ, ಹಲಸು ಇತ್ಯಾದಿಗಳ ಮಾತು ಬಿಡಿ. ರಸ್ತೆ ಬದಿಯಲ್ಲೇ ನಿರ್ಲಜ್ಜ ನಿರ್ಲಜ್ಜ ತಿನ್ನಬಹುದಾದ ತಾಟಿನಿಂಗು? ಅದನ್ನೆಲ್ಲಿ ಹುಡುಕಿಕೊಂಡು ಹೋಗುವುದು? ಒಬ್ಬನ್ಯಾರೋ ಸೊಟ್ಟಗಣ್ಣಿನ ಮುದುಕ ತಂದು ಅಲ್ಲೇ ಮೆಲುದನಿಯಲ್ಲಿ ನಿಲ್ಲಿಸಿ ಅಂಗಲಾಚಿ ಮಾರುವ, ಕೆಲಸಕ್ಕೆ ಬಾರದ ರುಪಾಯಿಗೆ ಮೂರು ಊದಿನ ಕಡ್ಡಿ, ಅದರ ಘಮದಿಂದಲೇ ಬಾಯಲ್ಲಿ ನೀರೂರಿಸುವ ಖರಬೂಜಾ, ನನ್ನಂಥ ಡಯಾಬಿಟೀಸ್‌ಗಳಿಗೆ ಅಮೃತ ಸಮಾನವಾದ ಪಪ್ಪಾಯ, ಎಂಥ ಅರಸಿಕನಲ್ಲೂ ವಾಂಛೆ ಮೂಡಿಸುವ ಬೆಟ್ಟದ ನೆಲ್ಲಿಕಾಯಿ, ತುಳಸಿ ಗಿಡ, ಬಾಳೆದೆಲೆ, ಪೂಜೆ ಸಾಮಾನು, ಹಸೀ ಬಾಳೆಎಲೆ, ಕಮಲದ ಹೂವು, ಬಸಳೆ ಸೊಪ್ಪು, ಬ್ಯಾಲದ ಹಣ್ಣು, ಹುಣಸೆಕಾಯಿ, ಜೀರಿಗೆ, ಮೆಣಸು, ಮಾವಿನ ಶುಂಠಿ, ಕಿರು ನೆಲ್ಲಿಕಾಯಿ, ಒಂದೆಲಗದ ಸೋಪ್ಪು, ಬಿಡಿ ಮಲ್ಲಿಗೆ, ಜಾಜಿ ಮಲ್ಲಿಗೆ, ಸೇವಂತಿಗೆ, ಸಂಪಿಗೆ, ನಂದಿ ಬಟ್ಟಲು, ತಾವರೆ ಹೂವು, ಕಣಗಲೆ, ಈಶ್ವರನ ಪೂಜೆಗೆಂದೇ ಬಳಸುವ ಬಿಳೀ ಹೂವು, ಉಪ್ಪಿನ ಕಾಯಿಗೆ ಬಳಸುವ ಮಾವಿನ ಕಾಯಿ, ಅದರ ಹೆಚ್ಚಿದ ಹೋಳು, ಗೌರಿ ಪೂಜೆಗೆ ಬಳಸುವ ಬಾಗಿನದ ಮೊರ, ದೀಪಾವಳಿಯ ಹಣತೆ - Name it, you get it ಎಂಬಂತಿದ್ದದ್ದು ನನ್ನ ಗಾಂಧಿ ಬಜಾರ್.

ಒಂದು ಹಬ್ಬ ಬಂದರೆ, ಇಂಥದ್ದು ಬೇಕು ಅಂದ ಕೂಡಲೆ South Bangaloreನವರಿಗೆ ನೆನಪಾಗುತ್ತಿದ್ದುದೇ ಗಾಂಧಿ ಬಜಾರ್. ಅದರಲ್ಲಿನ ವಸ್ತುಗಳ, ರಸ್ತೆ ಬದಿಯ ಅಂಗಡಿಗಳ ಸಾಮಾನು ಮತ್ತು ಹಣ್ಣು-ತರಕಾರಿಗಳಲ್ಲಿ ಬದಲಾವಣೆ ಕಾಣಿಸಿತೆಂದರೆ, ಓ... ಸೀಝನ್ನು ಬದಲಾಯಿತು ಅಂತ ಗೊತ್ತಾಗುತ್ತಿತ್ತು. ಅದು ನಮ್ಮ cultureನ ಒಂದು ಭಾಗವಾಗಿತ್ತು: ಒಂದು ಅಂಗವಾಗಿತ್ತು. ಸಂಕೇತವಾಗಿತ್ತು. ಆದರೆ ಗ್ಲೋಬಲೈಸೇಷನ್‌ನ ಅಗೋಚರ ಕರಾಳ ಹಸ್ತ ನಮ್ಮನ್ನೆಲ್ಲ ಹೇಗೆ ಗೊತ್ತೇ ಆಗದಂತೆ shopping mallಗಳಿಗೆ, super marketಗಳಿಗೆ ನೂಕಿ ಬಿಡತೊಡಗಿದೆ ನೋಡಿ? ಗಾಂಧಿ ಬಜಾರ್ ಸುತ್ತ ಮುತ್ತ under pass ಅಥವಾ over bridge ಮತ್ತು fly overಗಳಾಗಲಿವೆ. ಹೀಗಾಗಿ ಈ ಬಡಪಾಯಿ ಮಧ್ಯಮ ವರ್ಗದ ಬೀದಿಯಲ್ಲಿ ಟ್ರಾಫಿಕ್ ಜಾಸ್ತಿಯಾಯಿತು. ವಿಪರೀತ ಕಾರುಗಳು. ಹಾಗಾದರೇದನು ಮಾಡಬೇಕು? ಕಾಸಿಗೆ, ಕೊಸರಿಗೆ, ಕಂತು ಕಟ್ಟಲು ಗತಿಯಿಲ್ಲದವನಿಗೂ ಕೂಡ ಕರೆ ಕರೆದು, ಅಟ್ಟಿಸಿಕೊಂಡು ಹೋಗಿ ಕಾರು ಖರೀದಿಸಲು ಸಾಲ ಕೊಡುವ ಹರಾಮಖೋರ ಮಲ್ಟಿ ನ್ಯಾಷನಲ್ ಬ್ಯಾಂಕುಗಳ ಮುಕಳಿಯ ಮೇಲೆ ಒದ್ದು ಕಾರುಗಳ ಸಂಖ್ಯೆ ಕಡಿಮೆ ಮಾಡುವ ತಾಕತ್ತಂತೂ ಇಲ್ಲ. ಉಳಿದ ದಾರಿಯೆಂದರೆ, ಫುಟ್‌ಪಾತಿನ ಮೇಲೆ ಹೂವು ಹಣ್ಣು ಮಾರುವವರನ್ನು ರಾತ್ರೋರಾತ್ರಿ ಬುಲ್‌ಡೋಜರ್ ಇಟ್ಟು ಉಡಾಯಿಸಿಬಿಡುವುದಷ್ಟೆ: Finish. ಬೆಂಗಳೂರು ಸಿಂಗಪೂರ್ ಆಗುವುದೆಂದರೆ ಇಷ್ಟೆ. ಮನೆಯ ಪಡಸಾಲೆಯಲ್ಲಿ ಕುಳಿತಿರುತ್ತಿದ್ದ ಅಮ್ಮ ದಾರಿಗೆ ಓಡಾಡುವಾಗ ಅಡ್ಡ ಬರುತ್ತಾಳೆಂಬ ಕಾರಣಕ್ಕೆ ರೆಟ್ಟೆ ಹಿಡಿದೆಳೆದು ಪಾಯಖಾನೆಯ ಪಕ್ಕದ waste roomಗೆ ಬಿಸಾಡಿದ ಹಾಗೆ. ನಗರ ಪಾಲಿಕೆಯವರು ಆ ಕೆಲಸ ಮಾಡಿಬಿಟ್ಟರು.

ನಿಜ, ಅಂಗಡಿಗಳವರು ಲಕ್ಷಗಟ್ಟಲೆ ಸುರಿದು advance ಕೊಟ್ಟು, ಅಥವಾ ಕೋಟ್ಯಂತರ ಸುರಿದು ಕಟ್ಟಡ ಕೊಂಡು, ಅದಕ್ಕೆ ಮತ್ತಷ್ಟು ಸುರಿದು ಇಂಟೀರಿಯರ‍್ಸ್ ಮಾಡಿಸಿ, ಮಾಲು ತರಿಸಿ, ದೊಡ್ಡ ಬಂಡವಾಳ ಹೂಡಿ ವ್ಯಾಪಾರ ಆರಂಭಿಸಿರುತ್ತಾರೆ. ಮೊದಲ ಸಮಸ್ಯೆಯೆಂದರೆ, ಅಂಗಡಿಗೆ ಹೊರಗಿನಿಂದ visibilityಯೇ ಕಡಿಮೆ. ಗಾಂಧಿ ಬಜಾರ್‌ನ ಇನ್ನೊಂದು ಆಕರ್ಷಣೆಯೆಂದರೆ, ಅಲ್ಲಿ ರಸ್ತೆಯ ಇಕೆಲಗಳಲ್ಲೂ ಮರಗಳಿವೆ. ಅವು ಚೆಂದವೂ ಹೌದು. ಅವುಗಳಿಂದ ತೊಂದರೆಯಿರುವುದೂ ಹೌದು. ಅವುಗಳ ಮರೆಯಲ್ಲಿ ಅಂಗಡಿಗಳ ಬೋರ್ಡುಗಳು ಕಾಣುವುದಿಲ್ಲ. ಇದರಿಂದಾಗಿ, ಕೆಲವರಿಗೆ ವ್ಯಾಪಾರವಾಗುತ್ತಿರಲಿಲ್ಲ. ಇನ್ನೊಂದು ಸಮಸ್ಯೆ ಹಣ್ಣಿನ ಅಂಗಡಿಗಳು ಎಷ್ಟು ಕಿಕ್ಕಿರಿದಿರುತ್ತಿದ್ದವೆಂದರೆ, ಅವುಗಳನ್ನು ದಾಟಿಕೊಂಡು ನೀವು ಹೋಗಬೇಕಾದ ಅಂಗಡಿಗೆ ಹೋಗುವುದೇ ದುಸ್ತರವಾಗುತ್ತಿತ್ತು. ನಾನು ಅನೇಕ ಸಲ ದೂರದಲ್ಲಿ ಕಾರು ನಿಲ್ಲಿಸಿ, ಸಂದಿಯಲ್ಲಿ ನುಸುಳಿ ಫುಟ್‌ಪಾತಿನಲ್ಲಿ ಜಾಗ ಮಾಡಿಕೊಂಡು ಸಿಂಗರಗೊಳ್ಳುತ್ತಿರುವ ನನ್ನ ಅಂಗಡಿಗೆ ಹೋಗಿ ಮುಟ್ಟುತ್ತಿದ್ದೆ. ಈಗ ಆ ರಗಳೆ ಇಲ್ಲ. ರಸ್ತೆಯಿಂದ ನೇರವಾಗಿ ಅಂಗಡಿಯೊಳಕ್ಕೆ ಬಂದುಬಿಡಬಹುದು. ಆದರೆ I miss. I miss the fruit stalls. ಹೋದಾಗಲೆಲ್ಲ ಆ ಅಂಗಡಿಯವರು ಮಾತನಾಡಿಸುತ್ತಿದ್ದರು. “ದಿನಾ ಟೀವಿಯಲ್ಲಿ ನೋಡ್ತಾ ಇದ್ವಿ. ಈಗ ಇಲ್ಲೇ ಬರ‍್ತೀರಂತಲ್ಲ? ಖುಷಿಯಾಗುತ್ತೆ" ಅನ್ನುತ್ತಿದ್ದರು. ಅವರಿಗೆ ನಾಳೆಯಿಂದ ಊಟಕ್ಕೆ ತೊಂದರೆಯಿದೆ. ನಗರ ಪಾಲಿಕೆಯವರು ಒಂದು ಪರ್ಯಾಯ ವ್ಯವಸ್ಥೆ ಕೂಡ ಮಾಡಿಲ್ಲ.

ನಾನು ಪದ್ಮನಾಭನಗರಕ್ಕೆ ಹದಿನೆಂಟು ವರ್ಷಗಳ ಹಿಂದೆ ಬಂದಾಗ ಸರ್ಕಲ್ ಸಂಜೆ ಏಳರ ಹೊತ್ತಿಗೆ ನಿರ್ಜನವಾಗುತ್ತಿತ್ತು. ಈಗ ರಾತ್ರಿ ಹತ್ತಕ್ಕೆ ಸಿಗ್ನಲ್ ಬಳಿ ಕಾರು ನಿಂತರ್ರ‍ೆ ಪುಟ್ಟ ಹುಡುಗಿಯೊಬ್ಬಳು ಮಾರು ಹೂವು ಹಿಡಿದುಕೊಂಡು “ಮನೇಲಿ ಅಕ್ಕಂಗೆ ಹೂವು ತಗೊಂಡೋಗಿ ಅಂಕಲ್" ಅಂತ ಓಡಿ ಬರುತ್ತಾಳೆ. ಒಬ್ಬ ಗೃಹಸ್ಥ ಸ್ಕೂಟರು ನಿಲ್ಲಿಸಿ ಫುಟ್‌ಪಾತ್‌ನ ಮೇಲೆ ಗುಡ್ಡೆ ಹಾಕಿಕೊಂಡು ಮಾರುವ ಅವರೆ ಕಾಳು ಕೊಳ್ಳುತ್ತಿರುತ್ತಾನೆ. ಅದೇನೂ ದೊಡ್ಡ shopping mall ಅಲ್ಲ. ಮಾರ್ಕೆಟ್ ಅಲ್ಲ. ಅದು ಕ್ರಮೇಣ ಬೆಳೆದ ನಮ್ಮ ಸಂಸ್ಕೃತಿಯ ಒಂದು ಭಾಗ. ಅವರನ್ನು ಆ ಜಾಗದಿಂದ ಒದ್ದೋಡಿಸಿ ಬಿಟ್ಟರೆ ನಗರ ಪಾಲಿಕೆ ಘನಂದಾರಿ ಕೆಲಸ ಮಾಡಿದಂತಾಯಿತಾ? ರಸ್ತೆ ವಿಸ್ತರಣೆಯ ಹೆಸರಿನಲ್ಲಿ ಬೆಂಗಳೂರಿನಲ್ಲಿ ನೂರಾರು ಪತ್ರಿಕೆ ಮಾರುವ stallಗಳನ್ನು ಒಡೆದು ಹಾಕಿದರು. ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಲೇ ಇಲ್ಲ. ಪತ್ರಿಕೆಗಳ circulation ವ್ಯತ್ಯಯವಾಯಿತು. ರಸ್ತೆಗಳು ವಿಸ್ತಾರವಾದವಾ? ಯಾವ ಸುಡುಗಾಡೂ ಆಗಲಿಲ್ಲ. ಮರಗಳನ್ನು ಕಡಿದು ಹಾಕಿದರು. ಅಗೆದ ಅಂಡರ್‌ಪಾಸ್‌ಗಳು ಅಫಘನಿಸ್ತಾನದ ಕುಹರಗಳಂತೆ ವರ್ಷಾಂತರಗಳಿಂದ ಬಾಯಿ ಬಿಟ್ಟುಕೊಂಡೇ ಇವೆ.
ಈಗ ಯಾರೂ ಎಲ್ಲೂ ಹೂವು ಹಣ್ಣು ತರಕಾರಿ ಮಾರಬಾರದು. ಗಮನಿಸಿ ನೋಡಿ, ಮೊದಲಿನಂತೆ ಮನೆಗಳ ಬಳಿಗೆ ತಳ್ಳುಗಾಡಿಯಲ್ಲಿ ತರಕಾರಿ ಮಾರಲು ಬರುವುದೇ ಇಲ್ಲ ಜನ. ಎಲ್ಲರೂ mallಗಳಿಗೆ ಹೋಗುತ್ತೇವೆ. Heritage freshಗಳಿವೆ, ನಾಮಧಾರೀಸ್‌ಗಳಿವೆ. ತರಕಾರಿ ಕೊಂಚ ಕೊಳೆತರೆ ಶುದ್ಧ ಡ್ರೈನೇಜಿನ ವಾಸನೆ. ಏಕೆಂದರೆ ಅದಿಷ್ಟೂ ತರಕಾರಿ ಬೆಳೆಯುವುದು ಬೆಂಗಳೂರಿನ ಡ್ರೈನೇಜ್ ನೀರಿನ ಪಕ್ಕದಲ್ಲಿ. ಅದೇ ನೀರಿನೊಂದಿಗೆ.
ಕಡೆಗೆ ನಾವು ಎಲ್ಲಿಗೆ ಬಂದು ಮುಟ್ಟುತ್ತಿದ್ದೇವೆ.

“ಹೂವು-ಹಣ್ಣಿನ ರಸ್ತೆಯಲ್ಲಿ ಬೆಳಗೆರೆಯ ಪುಸ್ತಕದ ಅಂಗಡಿ" ಅಂತ ಬ್ಯಾನರ್ ಬರೆಸಿ ಹಾಕಿದ್ದೆ.
ಇವತ್ತು ಬ್ಯಾನರ್ ಅಷ್ಟೆ ಉಳಿದಿದೆ.

-ರವಿ ಬೆಳಗೆರೆ

Read Archieves of 30 January, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books