Ravi Belagere
Welcome to my website
ಬೇರೆ ಏನೇ ಕೆಲಸವಿರಲಿ, ಎಲ್ಲ ಬದಿಗಿಟ್ಟು ಫೆಬ್ರವರಿ 5ಕ್ಕೆ ಕಿಸೆಯಲ್ಲೊಂದಷ್ಟು ಕಾಸಿಟ್ಟುಕೊಂಡು, ಮನಸ್ಸಿನ ತುಂಬ ಪ್ರೀತಿಯಿಟ್ಟುಕೊಂಡು ಬಂದು ಬಿಡಿ. ಹಿರಿಯ ಲೇಖಕ-ಕಲಾವಿದರಿರುತ್ತಾರೆ. ಫೊಟೋ, ಆಟೋಗ್ರಾಫು, ಹರಟೆ, ಬಿಸ್ಸಿ ಕಾಫಿ, ನನ್ನ ಹ್ಯಾಪ ನಗೆ, ಬಿಗಿ ಅಪ್ಪುಗೆ! ಫೆಬ್ರವರಿ 5, 2012ರ ಸಂಜೆ 4:30ಕ್ಕೆಲ್ಲ ಗಾಂಧಿಬಜಾರ್‌ಗೆ ಬಂದು ಬಿಡಿ. BBC ಉದ್ಘಾಟನೆ 4:30ಕ್ಕೆ ಮುಗಿದು, ಪದ್ಮನಾಭನಗರದ ಗ್ರೌಂಡಿನ ಕಾರ್ಯಕ್ರಮ ಸಂಜೆ 6ಕ್ಕೆ ಆರಂಭವಾಗಲಿದೆ. ಎರಡಕ್ಕೂ ನಿಮಗೆ ಉಚಿತ ಸ್ವಾಗತ. ಬಾಗಿಲಲ್ಲಿ ಕಾತರದಿಂದ ನಿಂತು ಕಾಯುವವನು ನಾನು, ನಿಮ್ಮವನು.
Home About Us Gallery Books Feedback Prarthana Contact Us

ಇಸ್ರೇಲ್‌ನ ಸೆಕ್ಯೂರಿಟಿಯವರು ಬೂಟೇಕೆ ಬಿಚ್ಚಿಸುತ್ತಾರೆಂದರೆ...

ಅಂಥ ಸಭೆ ನಡೆಯುತ್ತಿರುತ್ತವೆ.

‘ಪತ್ರಿಕೆ’ ಪ್ರಿಂಟಿಗೆ ಕಳಿಸಿ ನಮ್ಮ ಡಾ.ಸುಬ್ಬರಾಯರನ್ನೋ, ಗೆಳೆಯ ದೀಪಕ್ ಶೆಟ್ಟಿಯನ್ನೋ, ದೇಶದಲ್ಲಿದ್ದರೆ ಗಿರೀಶ್ ಹಂಪಾಳಿಯನ್ನೋ, ಗೆಳೆಯ ನಾಗರಾಜ್ ಹವಾಲ್ದಾರನನ್ನೋ ಕರೆಸಿ ರಾತ್ರಿ ಒಂದಷ್ಟು ಹೊತ್ತು ಹರಟುತ್ತೇನೆ. ಅಂಥ ವಿಶೇಷವೇನಿಲ್ಲ. ಲೋಕಾಭಿರಾಮ. ಆದರೆ ಫಾಯಿದೆಯಿಲ್ಲದೆ ನಾನು ಲೋಕಾಭಿರಾಮವನ್ನೂ ಮಾಡಲೊಲ್ಲೆ. ಅದು ಕೇವಲ ಕಾಡು ಹರಟೆಯಾಗಲಿದೆ ಅನ್ನಿಸಿದರೆ, ಆರಾಮ್ ಸೇ ನನ್ನ ಪುಸ್ತಕ ಹಿಡಿದುಕೊಂಡು ಕುಳಿತು ಬಿಡುತ್ತೇನೆ. ಅದರಲ್ಲೂ ಮೊನ್ನೆ ಇಸ್ರೇಲ್‌ನಿಂದ ಅನಾಮತ್ತು ಮೂವತ್ತೆಂಟು ಪುಸ್ತಕ ತಂದುಕೊಂಡಿದ್ದೇನೆ. ನನ್ನ ಪ್ರಚಂಡ ಪ್ರೀತಿಯ ಲೇಖಕ ಈಲಿ ವೀಸಲ್‌ನ ಆತ್ಮಚರಿತ್ರೆಯ ಎರಡು ಭಾಗಗಳು ಕಣ್ಣೆದುರಿಗೇ ಇವೆ. ಒಂದರ ಹೆಸರು : ‘ಎಲ್ಲ ನದಿಗಳೂ ಸಮುದ್ರದೆಡೆಗೆ ಓಡುತ್ತವೆ.’ ಇನ್ನೊಂದರ ಹೆಸರು ‘ಸಮುದ್ರ ಯಾವತ್ತಿಗೂ ತುಂಬುವುದಿಲ್ಲ’. ಶುದ್ಧ ಕಾಮುಕನೊಬ್ಬನನ್ನು ತುಂಬಿದ ಸ್ತನಗಳು ಆಕರ್ಷಿಸುವಂತೆ ಅವೆರಡೂ ಪುಸ್ತಕಗಳು ನನ್ನನ್ನು ಆಕರ್ಷಿಸುತ್ತಿವೆ. ಆದರೂ ಬಹಳ ದಿನಗಳ ನಂತರ ಗೆಳೆಯರು ಸಿಕ್ಕಿದ್ದರು. ಹರಟೆಗೆ ಬಿದ್ದಿದ್ದೆ. ಜೊತೆಗೆ ಸಣ್ಣಗೆ notes ಮಾಡಿಕೊಳ್ಳುತ್ತಿದ್ದೆ. ಮಾತಿನ ಮಧ್ಯೆ ನಮ್ಮ ಡಾಕ್ಟರು think out of the box ಚಿಟ್ಡ ಅಂದರು.
ಮನಸು ಗಕ್ಕನೆ ನಿಂತಿತು.

ಅನುಕರಣೆ ಎಂಬುದು ನಮಗೆ ಜನ್ಮತಃ, ರಕ್ತಗತ ಮತ್ತು ನಿಸರ್ಗ ಸಹಜವಾಗಿ ಬಂದಿರುತ್ತದೆ. ನಮಗೇ ಗೊತ್ತಿಲ್ಲದೆ ಚಿಕ್ಕ ಮಕ್ಕಳಿದ್ದಾಗ ಜೊತೆಗಿನ ಮಕ್ಕಳನ್ನ, ಕೊಂಚ ದೊಡ್ಡ ಮಕ್ಕಳನ್ನ, ನಮ್ಮ ಹಿರಿಯರನ್ನ ಅನುಕರಿಸುತ್ತ ಒಂದೊಂದನ್ನೇ ಕಲಿಯುತ್ತ ಬೆಳೆಯುತ್ತೇವೆ. ನನ್ನ ಅಮ್ಮ ನನ್ನ ಎರಡೂ ಕೆನ್ನೆ ಹಿಡಿದುಕೊಂಡು ಮೊದಲು ತಲೆಗೂದಲನ್ನು ಇಡಿಯಾಗಿ ಎತ್ತಿ ಮೇಲಕ್ಕೆ ಬಾಚಿ, ಆನಂತರ ಬೈತಲೆ ತೆಗೆದು ಇಬ್ಭಾಗ ಮಾಡುತ್ತಿದ್ದಳು. ಅದು ಆಕೆ ತಲೆ ಬಾಚುತ್ತಿದ್ದ ವಿಧಾನ. ಇವತ್ತಿಗೂ ನಾನು ಬಾಚಿಕೊಳ್ಳುವುದೇ ಹಾಗೆ. ಸ್ನಾನ ಮಾಡಿಸುವಾಗ ಮೊದಲು ಮೈಗೆ ನೀರು ಸುರಿದು, ಕತ್ತಿನ ಹಿಂಬದಿಯಿಂದ ಸೋಪು ಹಚ್ಚಿ ಆನಂತರ ಮೈಗೆಲ್ಲ ಸೋಪು ಹಚ್ಚಿ, ಕೊನೆಗೆ ಮುಖಕ್ಕೆ ಸೋಪು ಹಚ್ಚುತ್ತಿದ್ದಳು. ಇವತ್ತಿಗೂ ನನ್ನ ಸ್ನಾನದ ಬಗೆ ಬದಲಾಗಿಲ್ಲ. ಹದಿನೆಂಟು ವರ್ಷಗಳ ಹಿಂದೆ ನನಗೆ ಬಚ್ಚನ್ ಕಾರನ್ನು ಹೇಗೆ ಓಡಿಸಬೇಕು ಎಂದು ಹೇಳಿ ಕೊಟ್ಟಿದ್ದನೋ, ಅಕ್ಷರಶಃ ಹಾಗೇ ಇವತ್ತಿಗೂ ಓಡಿಸುತ್ತೇನೆ. ಇವು ಅನುಕರಣೆಗಳು, ಅಭ್ಯಾಸಗಳು. ಅದೇಕೋ ಏನೋ ಇವನ್ನು ನಾವು ಬದಲಿಸಿಕೊಳ್ಳಲು ಹೋಗುವುದಿಲ್ಲ. ಸ್ನಾನ ಮುಗಿಸಿ ಮೈಯೊರೆಸಿಕೊಂಡ ಮೇಲೆ ಮೊದಲು ಚಡ್ಡಿಯಾ? ಬನೀನಾ? ಯಾವುದು ಹಾಕಿಕೊಳ್ಳುತ್ತೇವೆ? ಅದೂ ಅಭ್ಯಾಸವೇ? ಪ್ರಜಾವಾಣಿ ಕೈಗೆತ್ತಿಕೊಂಡು ತಕ್ಷಣ ಓದುವುದು ಹೆಡ್ಡಿಂಗಾ? ದಿನ ಭವಿಷ್ಯವಾ? ಅದೂ ರೂಢಿಯೇ.
ಆದರೆ thinking out of the box ಎಂಬುದು ಬೇರೆಯದೇ ಸಂಗತಿ. ಒಂದು ಸೀರಿಯಲ್ thinking out of the box ಆಗುತ್ತದೆ. ಗಮನಿಸಿ ನೋಡಿ, ಎಲ್ಲ ಛಾನಲ್‌ಗಳಲ್ಲೂ ಅದೇ ತರಹದ ಸುಮಾರು ನಲವತ್ತು ಸೀರಿಯಲ್ಲುಗಳು ಗೊಳೋ ಅಂತ ಸಾವಿರಾರು ದಿನ ಓಡತೊಡಗುತ್ತವೆ. ಇನ್ನೊಬ್ಬನ್ಯಾರೋ ಹೊಸದಾಗಿ ಯೋಚಿಸಿ, ಹೊಸದೇನನ್ನೋ ಮಾಡಿ, ಅದು hit ಆಗಿ, ಮತ್ತೆ ಅದೇ ತರಹದ ನಲವತ್ತು ಸೀರಿಯಲ್‌ಗಳು ಸಾವಿರಾರು ದಿನ ಲಗಾಟಿ ಹಾಕತೊಡಗುವ ತನಕ! ಈ ನಿಯಮ ಸಿನೆಮಾಗಳಿಗೆ, ಅಂಗಿ-ಪ್ಯಾಂಟುಗಳ ಡಿಸೈನ್‌ಗಳಿಗೆ, ಕ್ರಾಪುಗಳಿಗೆ, ಬೂಟುಗಳಿಗೆ, ಮಳಿಗೆಗಳಿಗೆ, ಬಕೀಟು, ಮಗ್ಗು, ಕಡೆಗೆ ನೆಲ ಗುಡಿಸುವ ಪೊರಕೆಗಳಿಗೂ ಅನ್ವಯವಾಗುತ್ತದೆ. ಕಾರಣವಿಷ್ಟೆ : thinking out of the box ಚಿಟ್ಡ ಎಂಬ ಹುಳು ಎಲ್ಲರನ್ನೂ ಕಚ್ಚುವಂಥ ಹುಳುವಲ್ಲ.
ನಾನು ‘ಹಾಯ್ ಬೆಂಗಳೂರ್!’ ಆರಂಭಿಸಿದಾಗ ಇದೆಂಥ ಹೆಸರು? ಇದೆಂಥ ಪತ್ರಿಕೆ? ಏನಿದು ಹೆಡ್ಡಿಂಗ್? ಮಟಾಷ್ ಅಂದರೇನು? ಕನ್ನಡ ಹಿಂಗೂ ಬರೀತಾರಾ? ಖಾಸ್‌ಬಾತ್ ಅಂತ ಯಾಕಿಟ್ರಿ? ಇದು ಲಂಕೇಶ್ ಪತ್ರಿಕೆ ಥರ ಇರುತ್ತಾ? ಯಾವ ಥರಾ ಇರುತ್ತೆ? ಇವೇ ಮುಂತಾದ ಪ್ರಶ್ನೆ ಇದಿರಾದವು. ಯಾರೂ ಕೂಡ ‘ಇವನ್ಯಾರೋ ಇರುವುದನ್ನು ಬಿಟ್ಟು ಬೇರೆಯದೇನನ್ನೋ ಯೋಚಿಸುತ್ತಿದ್ದಾನೆ’ ಎಂದು ಭಾವಿಸಲಿಲ್ಲ. ಯಾರೂ hopeful ಆಗಿರಲಿಲ್ಲ. ಆಗಲೇ ಲಂಕೇಶ್ ತುಂಬಾ ಯಶಸ್ವಿಯಾಗಿದ್ದರು. ಅವರಾದರೂ ಸುಮಾರು ಮೂವತ್ತು ವರ್ಷಗಳ ಹಿಂದೆ ರೂಢಿಗತವಾದದ್ದನ್ನ ಬಿಟ್ಟು, ಹೊಸ ಹಾದಿ ಹಿಡಿದು, ಗುಂ-ಬಂ ಅಂತ ಬರೆದು, ಪತ್ರಿಕೆಯನ್ನು ಜಾಹೀರಾತಿಲ್ಲದಂತೆಯೂ-ಬಣ್ಣವಿಲ್ಲದಂತೆಯೂ ಮಾಡಬಹುದು ಎಂದು ಸಾಬೀತು ಮಾಡಿದ್ದರು. ಅದರರ್ಥhe was a trend setter. ನಾನು ಅದನ್ನೂ ಮೀರಿ, ಅದನ್ನೂ ಮುರಿದು ಇನ್ನೊಂದು trend set ಮಾಡಬೇಕಿತ್ತು. Boxನ ಆಚೆಗೆ ಅವರು ಯೋಚಿಸಿದ್ದರು. ಅವರ ಚಿಟ್ಡನ ಆಚೆಗೆ ನಾನು ಜಿಗಿಯಬೇಕಿತ್ತು.

ಸಿನೆಮಾದಲ್ಲಿ ನೋಡಿ? ಉಪೇಂದ್ರ ಆ ಕೆಲಸ ಮಾಡಿದ. ಯೋಗರಾಜ ಭಟ್ಟರು ಮಾಡಿದರು. ಸೂರಿ ಮಾಡಿದ. ಹಾಗಂತ ನಮ್ಮೆಲ್ಲರಿಗಿಂತ ಮುಂಚೆ ಪತ್ರಿಕೋದ್ಯಮ ಇರಲಿಲ್ಲವಾ? ಸಿನೆಮಾ ಇರಲಿಲ್ಲವಾ? ಖಂಡಿತ ಇದ್ದವು. ಲಂಕೇಶ್, ನಾನು, ಯೋಗರಾಜ ಭಟ್ ಅಥವಾ ಸೂರಿ ಎಲ್ಲಿಂದಲೋ ಭಯಂಕರ ಹಣ ತಂದು ಸುರಿದು ಹೊಸದೇನನ್ನೋ ಮಾಡಿದೆವಾ? No way. ನಮ್ಮ ಪೈಕಿ ಯಾರಲ್ಲೂ ಹಣವಿರಲಿಲ್ಲ. ಕೈಯಲ್ಲಿ ಹಣವಿಟ್ಟುಕೊಂಡು ಚಿಟ್ಡನ ಆಚೆಗೆ ಜಿಗಿದು ಇತ್ತೀಚಿನ ವರ್ಷಗಳಲ್ಲಿ ವಿಕ್ರಮ ಸಾಸಿದ ಮಿತ್ರನೆಂದರೆ ರವಿಚಂದ್ರನ್. ಉಳಿದಂತೆ ನಾವೆಲ್ಲ, ಹಂಸಲೇಖ ಸೇರಿದಂತೆ, ಕೇವಲ ಹೈವೇ ಬಿಟ್ಟು ಮುಳ್ಳಕಂಟಿಯ ಮಧ್ಯೆ ಮೈಕೈ ಪರಚಿಕೊಂಡು ನಮ್ಮದೇ ಹಾದಿ ಕಂಡುಕೊಂಡವರೇ.

ನಾನು ಈ ಮಾತನ್ನು ಕೇವಲ ಸಿನೆಮಾ, ಪತ್ರಿಕೋದ್ಯಮ, ಟೀವಿ ಸೀರಿಯಲ್ಲು, ನಾಟಕ ಇತ್ಯಾದಿಗಳ ಬಗ್ಗೆ ಅಂದರೆ, ಬೌದ್ಧಿಕ ವ್ಯವಹಾರಗಳ ಪ್ರಪಂಚಕ್ಕೆ ಸಂಬಂಸಿದಂತೆ ಮಾತನಾಡುತ್ತಿಲ್ಲ. ಒಬ್ಬ ಗೃಹಿಣಿಯನ್ನೇ ತೆಗೆದುಕೊಳ್ಳಿ. ಮಾಡುವ ಉಪ್ಪಿಟ್ಟಿಗೆ, ಪ್ರತಿನಿತ್ಯದಂತಲ್ಲದೆ ಒಂದಷ್ಟು ಕಾಯಿತುರಿಯ ಜೊತೆಗೆ ಮುಲ್ಲಂಗಿ ಅಥವಾ ಬೀಟ್‌ರೂಟ್ ತುರಿ ಹಾಕಿ ನಿಂಬೆ ಹಿಂಡಿದರೆ ‘ಠ್ಠ’ ಎಂಬಂಥ ರುಚಿ ಬರುತ್ತದೆ. ಬೆಂಗಳೂರಿನ food streetಗೆ ಒಮ್ಮೆ ಹೋಗಿ ನೋಡಿ. ದೋಸೆಯೊಳಗೆ ಚಿತ್ರಾನ್ನ ಇಟ್ಟು ಕೊಡುತ್ತಾನೆ. ಅವರೆ ಕಾಯಿ ಚಿತ್ರಾನ್ನ ಅಂತಾನೆ. Thums upಗೆ chat masala ಹೀಗೆ ನೂರೆಂಟು combinationಗಳನ್ನು ಮಾಡಿ ಗುಲ್ಕನ್‌ಗೆ ಬೆಣ್ಣೆ-ಬಾಳೆ ಹಣ್ಣು ಸೇರಿಸಿ ಇನ್ನೊಂದು ‘ಚ್ಟ’ ಮಾಡಿ ಕೊಟ್ಟು ‘ಹೇಗೆ?’ ಎಂಬಂತೆ ಕಾಸಿಗೆ ಕೈ ಚಾಚುತ್ತಾರೆ.

Well, ಬರೀ ನೀರು ದೋಸೆಯನ್ನು ತಿಳಿಸಾರಿನಲ್ಲಿ ಅದ್ದಿಕೊಂಡು ತಿಂದರೂ ಹೊಟ್ಟೆ ತುಂಬುತ್ತದೆ. ಆದರೆ ತಿಳಿಸಾರಿಗೆ ಇಂಗಿನ ವಗ್ಗರಣೆ ಹಾಕಿ, ತುಪ್ಪ ಚಿಮುಕಿಸಿ, ಕೊಂಚ ಆರಿದ ಮೇಲೆ ನಿಂಬೆ ಹಿಂಡಿ ಅದರಲ್ಲಿ ನೀರ ದೋಸೆಯ ಪದರುಗಳನ್ನು ತೋಯಿಸಿ ಬಾಯಿಗಿಟ್ಟುಕೊಂಡರೆ ಅದರ ವೆರೈಟಿ ಮುದ ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ನಾನು ಇಷ್ಟೊಂದು ದೇಶ ತಿರುಗಿದೆನಲ್ಲ? Thinking out of the box ಎಂಬುದು ಅನೇಕ ಕಡೆ ಕಣ್ಣಿಗೆ ಗೋಚರವಾಗುತ್ತಿಲ್ಲ. ಅದರಲ್ಲೂ ಇಸ್ರೇಲ್‌ನಲ್ಲಿ. ಅದೊಂಥರಾ ನಿರಂತರವಾಗಿ ಭಯಗೊಂಡಿರುವ ದೇಶ. ಅದು ಶತ್ರುವಿನಿಂದ, ಭಯೋತ್ಪಾದಕರಿಂದ, ಉಗ್ರರಿಂದ, ಪಕ್ಕದಲ್ಲೇ ಇರುವ ಹಮಾಸ್ ಮತ್ತು ಹಿಜ್ಬೊಲ್ಲಾಗಳಿಂದ ತಪ್ಪಿಸಿಕೊಳ್ಳಲು ಹೆಣಗುತ್ತಿರುವ ದೇಶ. ಒಂದೊಂದು ದಾಳಿ, ಒಂದೊಂದು ಸೋಟ ನಡೆದಾಗಲೂ ಅದು ಇನ್ನೊಮ್ಮೆ ನಡೆಯಲು ಸಾಧ್ಯವೇ ಆಗದಂತೆ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುತ್ತದೆ. ಆದರೆ ಟೆರರಿಸ್ಟು? He thinks. Thinks out of the box.

ಅವನು ಹೊಸದೇನನ್ನೋ ಹುಡುಕುತ್ತಾನೆ.

ಖಂಡಿತ ಗೆಲ್ಲುತ್ತಾನೆ. ಉಳಿದೆಲ್ಲ ದೇಶಗಳಲ್ಲಿ ಬೆಲ್ಟ್ ಬಿಚ್ಚಿಸುತ್ತಾರೆ, ಧರಿಸಿದ ಕೋಟ್ ಅಥವಾ ಜಾಕೆಟ್ ಬಿಚ್ಚಿಸುತ್ತಾರೆ : ಸೆಕ್ಯುರಿಟಿ ಯಂತ್ರದ ಮೂಲಕ ಹಾಯಿಸುವ ಮುನ್ನ. ಆದರೆ ಇಸ್ರೇಲ್‌ನಲ್ಲಿ shoe ಬಿಚ್ಚಿಸುತ್ತಾರೆ. ಏಕೆಂದರೆ, shoe bomb ಸೋಟಗೊಂಡಿತ್ತು! ನನ್ನನ್ನು ಅಕ್ಷರಶಃ ನಿಲ್ಲಿಸಿ ಪ್ಯಾಂಟು-ಅಂಗಿ ಬಿಚ್ಚಿಸಿದರು. ಇದೇನಿದು ಆಪರೇಷನ್ನಿನ ಮಾರ್ಕು? ಏನಾದರೂ micro chip ಇರಿಸಿದ್ದಾರಾ? Film ಮಡಗಿದ್ದಾರಾ? ಪಿಂಡ! ಅದ್ಯಾತರದೂ ಇಲ್ಲ ಅಂತ convince ಮಾಡಿ ಹೊರ ಬರುವ ಹೊತ್ತಿಗೆ ನೂರು ಹೊಸ ಯೋಚನೆಗಳು ತೋಚಿದ್ದವು. ಹೀಗೆಲ್ಲ ಮಾಡಬಹುದಲ್ಲವೆ? ನನ್ನ ಹೊಸ ಕಾದಂಬರಿಯ ಸೂತ್ರಗಳವು. Thinking out of the box.

ಈಗಂತೂ ನೀವು ಅವರಿವರು ಮಾಡಿದುದನ್ನು ಮಾಡಿದರೆ ಗೆಲುವು ಸಾಧ್ಯವೇ ಇಲ್ಲ. ಅಕಸ್ಮಾತ್ ಗೆದ್ದರೆ, ಅವರಿವರು ಗೆದ್ದಷ್ಟು ಅಥವಾ ಅದರ ಅರ್ಧದಷ್ಟು ಗೆಲ್ಲುತ್ತೀರಿ. ಕೆಲಬಾರಿ ಅದೂ ಇಲ್ಲ. ನೀವು ಮಾಡುವ ಕೆಲಸ ಎಂತಹುದೇ ಇರಲಿ, ಉಳಿದವರಿಗಿಂತ ವಿಭಿನ್ನವಾಗಿ ಮಾಡಿ. ಆದರೆ ಅರ್ಥಪೂರ್ಣವಾಗಿ ಮಾಡಿ ಮತ್ತು perfect ಆಗಿ ಮಾಡಿ. ಗುಲ್ಲಕ್!

-ರವೀ

Read Archieves of 30 January, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books