Ravi Belagere
Welcome to my website
“ಕನಸೇ..."
ಹೊಸ ವರ್ಷದ ದಿನ ನಾನು ಆಫೀಸಿನಲ್ಲಿ ಒಬ್ಬನೇ ಕುಳಿತು ಸಿದ್ಧಪಡಿಸಿಕೊಂಡ ಹೊಸ ಸಿ.ಡಿ ಬದುಕಿನಲ್ಲಿ ಕನಸು ಎಂಬುದೇ ವಿಚಿತ್ರವಾದದ್ದು. ನೀವು ಮನೆ ಕಟ್ಟಿ ಅಥವಾ ಬಿಡಿ. ‘ಕನಸೇ...’ ಸಿ.ಡಿ. ಒಮ್ಮೆ ಕೇಳಿ ನೋಡಿ. ಯಾರಿಗೆ ಗೊತ್ತು ನಿಮ್ಮಲ್ಲಿರುವ ಯಾವುದೋ ಸುಪ್ತ ಕನಸು ಗರಿಗೆದರಿ ನಿಂತೀತು. ಕನಸೇ ಸಿ.ಡಿ. ಮಾರುಕಟ್ಟೆಯಲ್ಲಿದೆ. ಬೆಲೆ 60/- ರುಪಾಯಿ. ಆಫೀಸಿಗೇ ಬಂದು ಕೊಳ್ಳುತ್ತೀರಾ? 50/- ರುಪಾಯಿಗೆ ಸಿಕ್ಕುತ್ತೆ? ಹೊಸ ವರ್ಷದ ಆರಂಭಕ್ಕೆ ಚಿಕ್ಕದೊಂದು ಉಡುಗೊರೆ ಕಣ್ರೀ.
Home About Us Gallery Books Feedback Prarthana Contact Us

ಇಂಗಿ ಹಿಂದಕ್ಕೆ ಸರಿದ ಸಮುದ್ರದ ದೊಗರುಗಳಲ್ಲಿ ಪೈಗಂಬರರ ಓಡಾಟ

“ನಮಗಿರುವುದು ಒಂದೇ ದೇಶ. ಮುಸಲ್ಮಾನರಿಗೇನು? ನೂರು ದೇಶಗಳಿವೆ. ಕ್ರೈಸ್ತರಿಗೆ ಅರ್ಧ ಪ್ರಪಂಚವೇ ಇದೆ. ಆದರೆ for us? ಇರುವುದು ಒಂದೇ ಭಾರತ. We are Indians. ನಾವು ಹಿಂದೂಗಳಲ್ಲ, ಕ್ರೈಸ್ತರಲ್ಲ. ಮುಸ್ಲಿಮರಲ್ಲ, ಜೈನರಲ್ಲ. Just Indians. ಆದ್ದರಿಂದಲೇ ನಮಗೆ ಬೇರೆ ದೇಶವಿಲ್ಲ. ಇಲ್ಲಿ ನಮ್ಮನ್ನು ಇರಲಿಕ್ಕಾಗದಂತೆ ಮಾಡಿದರೆ, ನಾವು ಸುಮ್ಮನಿರಬಾರದು. Uಛಿ ಞ್ಠoಠಿ take revenge. ಅದು vengence'' ಹಾಗಂತ ಹೇಳಿದ್ದು ನನ್ನ ಕಾದಂಬರಿಯ ಪ್ರಮುಖ ಪಾತ್ರವಾದ ಮಾಯಿನೋ ಗಾಂಧಿ.

Actually, ಇಸ್ರೇಲಿಗಳ ಪರಿಸ್ಥಿತಿಯೂ ಅದೇ. ಅವರು ಯಹೂದಿಗಳು. ಅವರಿಗೆ ಬೇರೆ ದೇಶವಿಲ್ಲ. ಅದಕ್ಕೆಂದೇ ಈ ಪುಟ್ಟ ಭೂಮಿಯನ್ನು ಹೀಗೆ ಬಂಗಾರವೆಂಬಂತೆ ಅವಚಿ ಹಿಡಿದು ಕುಳಿತಿದ್ದಾರೆ. ಇಲ್ಲಿ ತಮ್ಮದೇ ಆದ ಸ್ವರ್ಗ ಕಟ್ಟಿಕೊಂಡಿದ್ದಾರೆ. ಅದರೊಳಗೇ ಒಂದು ನರಕ ರೂಪುಗೊಂಡಿದೆ. ನಿಮಗೆ ಗೊತ್ತು, ಮಂತ್ರಿ ಎಸ್ಸೆಂ ಕೃಷ್ಣ, “ನನ್ನಿಂದ ಏನಾಗಬೇಕು?" ಅಂತ ಕೇಳಿದಾಗ, “ಈ ಕಡೆ ಬನಶಂಕರಿಗೆ ಬಂದಾಗ ಊಟ ಮಾಡಿಕೊಂಡು ಹೋಗಿ" ಅಂತ ಹೇಳಿ ಕಳಿಸಿದ್ದೆ. ಆದರೆ ಅವರು ವಿದೇಶಾಂಗ ವ್ಯವಹಾರಗಳ ಮಂತ್ರಿಯಾದಾಗ ನಮಗೇ ಅರಿವಿಲ್ಲದೆ ಒಂದು ಮೈತ್ರಿ ಬೆಳೆಯಿತು. “ನನ್ನಿಂದ ಏನಾಗಬೇಕು?" ಅಂದಾಗ, “ ಪಾಕಿಸ್ತಾನದ ವೀಸಾ ಕೊಡಿಸಿ" ಅಂದಿದ್ದೆ.

ಐದು ವರ್ಷ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ನಾನು ಮತ್ತು ಕೃಷ್ಣ ಭೇಟಿಯಾಗಿರಲಿಲ್ಲ. ಮೊದಲ ಭೇಟಿಯಾದದ್ದೇ ಪಾಕ್ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ. ಅವರು ಈ ಟೀವಿಯಲ್ಲಿ ಬಿತ್ತರವಾಗುವ ನನ್ನ ‘ಎಂದೂ ಮರೆಯದ ಹಾಡು’ ಕಾರ್ಯಕ್ರಮದ regular ವೀಕ್ಷಕರು ಅಂತ ಗೊತ್ತಾದದ್ದೇ ಆವಾಗ. ತುಂಬ ರೆಗ್ಯುಲರ್ ಆದ ಭೇಟಿಗಳು, ಸ್ನೇಹ, ಮಾತು-ಇತ್ಯಾದಿಗಳಿಲ್ಲದೆ ಹೋದರೂ ಆಗೊಂದು ಈಗೊಂದು ಕುಶಲೋಪರಿ. ಇದ್ಯಾವುದೋ ದೇಶಕ್ಕೆ ಹೋಗುತ್ತಿದ್ದೇನೆ: ಅಮೆರಿಕಕ್ಕೆ, ಆಸ್ಟ್ರೇಲಿಯಾಕ್ಕೆ-ಬರ್ತೀರಾ? ಅಂತ ಕೇಳುತ್ತಿದ್ದರು ಕೃಷ್ಣ. ನನಗೆ ಉಳಿದ ಯಾವ ದೇಶಗಳದೂ ಉಮ್ಮೇದಿಯಿರಲಿಲ್ಲ, Of course, ಈಗ Scandinavian countries ನೋಡಿ ಬರಬೇಕೆಂಬ ಹಂಬಲ ಶುರುವಾಗಿದೆ. ಆದರೆ ಅದನ್ನೆಲ್ಲ ನನ್ನ ಹಣದಲ್ಲಿ, ನನ್ನ ಬಿಡುವಿನಲ್ಲಿ, ನನ್ನ ಶೋಕಿಗಾಗಿ ಮಾಡಿಕೊಳ್ಳಬಲ್ಲೆ. ಈಗಲ್ಲದಿದ್ದರೆ ಮತ್ಯಾವತ್ತೋ ಹೋಗಿ ಬರಬಲ್ಲೆ. ಆದರೆ ಕೆಲವು ದೇಶಗಳಿರುತ್ತವೆ. ಒಳಕ್ಕೆ ಕಾಲಿಡುವುದೇ ಕಷ್ಟ. ಅದರಲ್ಲೂ ಪತ್ರಕರ್ತನೆಂದು ಗೊತ್ತಾಗಿಬಿಟ್ಟರೆ ವೀಸಾ ಕೊಡುವುದೇ ಇಲ್ಲ.

ಇಸ್ರೇಲ್ ಅಂಥದೇ ಒಂದು ದೇಶ. ಪಕ್ಕದ ಮನೆ, ಹಿತ್ತಲು, ಅಂಗಳ, ಎದುರು ಮನೆ, ಕಡೆಗೆ ಮನೆಯೊಳಗೇ ಶತ್ರುಗಳನ್ನು ಸೃಷ್ಟಿಸಿಕೊಂಡಿರುವ ಇಸ್ರೇಲ್ ಕಳೆದ ಅರವತ್ಮೂರು ವರ್ಷಗಳಲ್ಲಿ ಏಳು ಯುದ್ಧ ಮಾಡಿದೆ. ಇನ್ನೊಬ್ಬರು ಮತ್ತೊಬ್ಬರಾಗಿದ್ದಿದ್ದರೆ ಈ ಹೊತ್ತಿಗೆ ಸರ್ವನಾಶವಾಗಿ ಬಿಡುತ್ತಿದ್ದರು. ಆದರೆ ಹೇಳಿದೆನಲ್ಲ? “ನಾವು Jews. ಯಹೂದಿಗಳು. ನಮಗೆ ಜಗತ್ತಿನಲ್ಲಿರುವುದು ಒಂದೇ ದೇಶ. Just save it. ಅವಶ್ಯಕತೆ ಬಂತಾ, if somebody wants to push you to the sea... you fight'' ಇದು ಯಹೂದಿಗಳ ಜೀವನ ಸಿದ್ಧಾಂತ. ಪಕ್ಕದಲ್ಲೇ ಮರಣಮುಖಿಯಾದ ದೇಶ ಪ್ಯಾಲಸ್ತೀನ್ ಇದೆ. ಹೆಸರಿಗೆ ಗಾಂ. ಆದರೆ ಯಾಸೀರ್ ಅರಾಫತ್ ಅತಿ ಭಯಾನಕವೆನ್ನಿಸುವಂತಹ ಹತ್ಯೆಗಳನ್ನು ಮಾಡಿಸಿದ. ಆತ್ಮಹತ್ಯಾ ಬಾಂಬ್ ಸಿದ್ಧಾಂತವನ್ನು ಅಭಿವೃದ್ಧಿಗೊಳಿಸಿ fine tune ಮಾಡಿದ. ಒಂದು ಕಾಲಕ್ಕೆ ಅರಬರು ಮತ್ತು ಇಸ್ರೇಲಿ ಯಹೂದಿಗಳು ಎಷ್ಟು ಸಾಮರಸ್ಯದಿಂದ ಬದುಕುತ್ತಿದ್ದರೆಂದರೆ, ಅವರಲ್ಲಿ ಅಂಥ ವ್ಯತ್ಯಾಸಗಳೇ ಇರಲಿಲ್ಲ. ಆದರೆ ನಮ್ಮಲ್ಲಿ ಹಿಂದು ಮತ್ತು ಮುಸ್ಲಿಮರನ್ನು ಸರಿಯಾಗಿ ಸೀಳಿಟ್ಟು ಹೋದಂತೆಯೇ ಇಲ್ಲಿ ಇವರಿಬ್ಬರನ್ನೂ ಬ್ರಿಟಿಷರು ಸೀಳಿಟ್ಟು ಹೋದರು. ಆಮೇಲೇನಿದೆ? ಕೇವಲ ಯುದ್ಧಗಳು. ಆತ್ಮಹತ್ಯಾ ಸೋಟಗಳು, ಅಪಹರಣಗಳು, ಶಾಲೆ ಮಕ್ಕಳ ಹತ್ಯೆಗಳು. Radical Islam ಎಂಬುದು ಯಹೂದಿಗಳಿಗೆ ಹೆಜ್ಜೆಗೊಮ್ಮೆ ಸಾವು ತೋರಿಸತೊಡಗಿತು.

ಹೀಗಾಗಿ ಇಸ್ರೇಲ್ ಒಳ ಮುಚ್ಚುಗದಂತಾಗಿ ಹೋಯಿತು.

“ನೀವು ಬರುತ್ತೀರಾ? ಒಂದೇ ಸುತ್ತಿನಲ್ಲಿ ದುಬೈ, ಜೋರ್ಡನ್, ಅಮ್ಮಾನ್, ಪ್ಯಾಲಸ್ತೀನ್ ಮತ್ತು ಇಸ್ರೇಲ್‌ಗಳಿಗೆ ಭೇಟಿ ನೀಡಿ ಬರಲಿದ್ದಾರೆ ಕೃಷ್ಣ. ಪತ್ರಕರ್ತರೂ ಹೆಚ್ಚಿನ ಸಂಖ್ಯೆಯಲ್ಲಿಲ್ಲ. ವೀಸಾ-ಗೀಸಾ ಜವಾಬ್ದಾರಿ ನಮ್ಮದು. ಆದರೆ ಹೊಟೇಲಿನ ಖರ್ಚು ನಿಮ್ಮದು" ಅಂದಿದ್ದರು ರಾಘವೇಂದ್ರ ಶಾಸ್ತ್ರಿ. ಕೃಷ್ಣ ಅವರನ್ನು ಈ ಇಳಿ ವಯಸ್ಸಿನಲ್ಲಿ ತುಂಬ ಚೆನ್ನಾಗಿ ನೋಡಿಕೊಳ್ಳುವ, ಅಧಿಕೃತವಾಗಿ ವಿದೇಶಾಂಗ ಮಂತ್ರಿಗಳ ಸಲಹೆಗಾರರ ಹುದ್ದೆಯಲ್ಲಿದ್ದೂ ಒಂದು ರುಪಾಯಿ nominal ಸಂಬಳ ಪಡೆಯದ, ಹುಚ್ಚು ಆದರ್ಶಗಳ, ಪಾದರಸದಂತಹ ಯುವಕ ರಾಘವೇಂದ್ರ ಶಾಸ್ತ್ರಿ. ಕಿವಿಗೆ ಇಸ್ರೇಲ್‌ನ ಶಬ್ದ ಬಿದ್ದ ಕೂಡಲೆ ಪಾಸ್‌ಪೋರ್ಟು ದಿಲ್ಲಿಗೆ ಕಳುಹಿಸಿ ನನ್ನ ಚಾಪೆ ದಿಂಬು ಸುತ್ತಿಟ್ಟುಕೊಂಡು ತಯಾರಾಗಿ ನಿಂತೆ.

Actually, ವಿದೇಶಾಂಗ ಮಂತ್ರಿಗಳ ಪ್ರಯಾಣ ದಿಲ್ಲಿಯಿಂದ ಆರಂಭವಾಗುತ್ತದೆ. ದಿಲ್ಲಿಯಿಂದ ಇಸ್ತಾನ್‌ಬುಲ್ ಮೂಲಕ ಇಸ್ರೇಲ್ ತಲುಪುವುದು ರೂಢಿ ಮತ್ತು ಕ್ಷೇಮ ಕೂಡ. ಆದರೆ ನನಗೆ, “ನೀವು ಬೆಂಗಳೂರಿನಿಂದಲೇ ಬನ್ನಿ. ಬೆಂಗಳೂರಿನಿಂದ ದೋಹಾ, ಅಲ್ಲಿಂದ ಅಮ್ಮಾನ್. ಅಮ್ಮಾನ್‌ನಲ್ಲಿ ನಾವು ರಿಸೀವ್ ಮಾಡ್ಕೋತೀವಿ. ಮುಂದೆ ಅಮ್ಮಾನ್‌ನಿಂದ ಇಸ್ರೇಲ್‌ಗೆ ರಸ್ತೆಯ ಮುಖಾಂತರ ಹೋಗೋಣ" ಅಂತ ರಾಘವೇಂದ್ರ ಶಾಸ್ತ್ರಿ ಹೇಳಿದಾಗ ಅದೂ ಸರಿಯೇ, ದಿಲ್ಲಿಯಲ್ಲಿ ಗುಡದಾ ಬಿಚ್ಚಿ ಬೀಳುವಷ್ಟು ಚಳಿಯಿದೆ, ತಪ್ಪಿಸಿಕೊಂಡಂತಾಯಿತು ಅಂದುಕೊಂಡು ಕತಾರ್ ಏರ್‌ವೇಸ್ ಮೂಲಕ ದೋಹಾಕ್ಕೆ ಹೋದೆ.

ಅಮ್ಮಾನ್‌ನಲ್ಲಿ ಕೃಷ್ಣ ಸಿಕ್ಕರು. ಅದು ಕೊಲ್ಲಿ ರಾಷ್ಟ್ರವೇ ಆದರೂ ಅಲ್ಲಿ ಪೆಟ್ರೋಲ್ ದೊಡ್ಡ ಮಟ್ಟದಲ್ಲಿ ಇಲ್ಲ. ಸೌದಿಯಂಥ ರಾಷ್ಟ್ರಗಳಲ್ಲಿ ಪೆಟ್ರೋಲೆಂಬುದು ನಲ್ಲಿ ನೀರು. ಆದರೆ ಅಮ್ಮಾನ್ ತನ್ನನ್ನು ತಾನು poor cousin of Gulf ಅಂತ ಕರೆದುಕೊಳ್ಳುತ್ತದೆ. ಸಾಕಷ್ಟು ಫಾಸೇಟ್ ಇದೆ. ಪೊಟ್ಯಾಷಿಯಂ ಇದೆ. ದೇಶದ ಮುಕ್ಕಾಲು ಭಾಗ ಗರಸು ಕಲ್ಲಿನ ಮರಳುಗಾಡೇ ಆದರೂ Dead Sea ಹತ್ತಿರಕ್ಕೆ ಹೋದಂತೆಲ್ಲ ಸಮೃದ್ಧ ಅಗ್ರಿಕಲ್ಚರ್ ಕಾಣಸಿಗುತ್ತದೆ. ಕೋಸು, ಕೊಂಚ ತೆಂಗು, ವಿಶೇಷವಾಗಿ ಹಣ್ಣುಗಳು. ರಾಶಿ ರಾಶಿ ಆಲಿವ್ ಹಣ್ಣು ಮತ್ತು ಚೆಂದಗಿನ ಹುಡುಗಿಯರು.ಇಲ್ಲಿನ ದೊರೆ ತೀರ ಕರ್ಮಠ ಮುಸಲ್ಮಾನನಲ್ಲ. ಹೆಂಗಸರು ಸಿಗರೇಟು ಸೇದಬಹುದು. ಕಾರು ಓಡಿಸಬಹುದು. ನೌಕರಿ ಮಾಡಬಹುದು ಅಂದಿದ್ದಾನೆ. ನಿಮಗೆ ದೋಹಾ ಏರ್‌ಪೋರ್ಟಿನಲ್ಲಿ ಹೆಜ್ಜೆಗೊಬ್ಬ ಕೇರಳಿಗ ಸಿಗುತ್ತಾನೆ. ನೌಕರಿ ಹುಡುಕಿಕೊಂಡು ಬರುವವನು. ಆದರೂ ಬೇರೆಯ ಗಲ್ ದೇಶಗಳಿಗೆ ಹೋಲಿಸಿದರೆ ಅಮ್ಮಾನ್ ಎಂಬ poor cousin ಮನೆಗೆ ನೌಕರಿ ಕೇಳಿಕೊಂಡು ಬರುವ ಹೊರ ದೇಶೀಯರು ಕಡಿಮೆಯೇ.

“ಬನ್ನಿ ರವೀ, ಇಲ್ಲಿ ತಂಕಾ ಬಂದಿದೀವಂತೆ. Dead Sea ನೋಡಿಯೇ ಹೋಗಿ ಬಿಡೋಣ" ಅಂದರು ಕೃಷ್ಣ. Fine. ಸಮುದ್ರದ ಒಂದು ಭಾಗವನ್ನು ಇಸ್ರೇಲ್ ಕೂಡ ಹಂಚಿಕೊಳ್ಳುತ್ತದೆ. ಆದರೆ ಅಮ್ಮಾನ್ Dead Sea ಪಕ್ಕದಲ್ಲಿ ನಿರ್ಮಿಸಿರುವ resortಗಳು ನಿಜಕ್ಕೂ ಅದ್ಭುತ. ಬೇಗ ನೋಡಿದರೆ ನಮ್ಮ ಹಂಪೆಯ ಶಿಥಿಲಗಳಂತೆ ಕಾಣುವ ಮನೆಗಳು. ಆದರೆ ರೆಸಾರ್ಟ್‌ಗಳ ಎಲ್ಲ ತರಹದ ಫೆಸಿಲಿಟಿಗಳೂ ಇಲ್ಲಿವೆ. ವಿಶೇಷವೆಂದರೆ, ಇಲ್ಲಿ ಸಮುದ್ರವೆಂಬುದು ಸಮುದ್ರ ಮಟ್ಟಕ್ಕಿಂತ ಸುಮಾರು 1800 ಅಡಿ ಕೆಳಕ್ಕಿದೆ. ಯಾವುದೋ ಕಾಲಕ್ಕೆ ಸಮುದ್ರದ ನೀರು ಇಂಗಿ ಹೋಗಿ ಹಿಂದಕ್ಕೆ recede ಆಗಿದೆ. ಸಮುದ್ರ ಮಟ್ಟಕ್ಕಿಂತ ತುಂಬ ಕೆಳಗಿರುವುದರಿಂದ ನೀರಿನಲ್ಲಿ ಭಯಂಕರ ಪ್ರಮಾಣದ ಲವಣಗಳಿವೆ. Really terrible. ಹೀಗಾಗಿ ಮನುಷ್ಯ ಈ ಸಮುದ್ರದಲ್ಲಿ ಮುಳುಗುವುದಿಲ್ಲ. ಅಂಗಾತ ಮಲಗಿ ಪೇಪರು ಓದಬಹುದು. ಆದರೆ ಲವಣಗಳ ಹೊಡೆತ ಎಷ್ಟು ತೀವ್ರವೆಂದರೆ “ಇಪ್ಪತ್ತು ನಿಮಿಷಗಳಿಗಿಂತ ಹೆಚ್ಚು ಸಮುದ್ರದಲ್ಲಿರುವುದು ನಿಷಿದ್ಧ" ಅಂತ ನಿಚ್ಚಳವಾಗಿ ಅಲ್ಲಿ ಬೋರ್ಡು ಹಾಕಿ ಬಿಟ್ಟಿದ್ದಾರೆ. ಆದರೆ ದೇಶ ವಿದೇಶಗಳಿಂದ ಜನ ಬಂದು ರೆಸಾರ್ಟ್‌ಗಳಲ್ಲಿ ಉಳಿದು ಪ್ರತಿನಿತ್ಯ Dead Seaನಲ್ಲಿ ನಿಯಮಿತವಾಗಿ ಸ್ನಾನ ಮಾಡಿ, ಆಮೇಲೆ ತಿಳಿನೀರಿನ poolನಲ್ಲಿ swim ಮಾಡಿ, ಸೂರ್ಯನಿಗೆ ಮೈ ಕೊಟ್ಟು ಮಲಗಿ ಆರೋಗ್ಯ ಸರಿ ಮಾಡಿಕೊಂಡು ಹೋಗುತ್ತಾರೆ.

“ಇಲ್ಲಿನ ರೆಸಾರ್ಟ್ ರೇಟುಗಳು?" ಕೇಳಿದೆ.

ಮೇಲಿಂದ ಕೆಳತನಕ ನೋಡಿದ ಅಮ್ಮಾನ್ ಮುಸಲನೊಬ್ಬ ‘ನಿನ್ನಂಥವನಿಗಲ್ಲ ಬಿಡು’ ಎಂಬಂತೆ ನಕ್ಕ. ‘ಅರ್ಥವಾಯಿತು ಬಿಡು’ ಎಂಬಂತೆ ಸಿಗರೇಟು ಹಚ್ಚಿ ಹೊಗೆಯುಗುಳಿದೆ. ಲವಣಗಳ ಹೊಡೆತದಿಂದಾಗಿ ಅಲ್ಲಿ ನೀನು ಹಾಗಿರಲಿ, ಜೊಂಡು ಕೂಡ ಬೆಳೆಯುವುದಿಲ್ಲ. ಆದ್ದರಿಂದ Dead Sea ಅನ್ನುತ್ತಿರಬೇಕು. ಇಂಗಿ, ಹಿಂದಕ್ಕೆ ಸರಿದಿರುವ ನೀರು ಬಿಟ್ಟು ಹೋಗಿರುವ ಖಾಲಿ ನೆಲ, ಪೊಟರೆ, ಶಿಥಿಲದಂತಹ ಖಂಡರಗಳನ್ನು ನೋಡಿದರೆ ಎದೆ ಝಲ್ಲೆನ್ನುತ್ತದೆ. ಅಂಥವುಗಳ ಮಧ್ಯೆಯೂ ಟೆಂಟ್‌ಗಳನ್ನು ಹಾಕಿಕೊಂಡು ಅಲೆಮಾರಿ ‘ಬದೋಯಿನ್ಸ್’ ಬದುಕುತ್ತಾರೆ. ಮೊಟ್ಟ ಮೊದಲು ಅವರನ್ನೂ ಸಂಘಟಿಸಿದ್ದು ಮಹಮ್ಮದ್ ಪೈಗಂಬರ್. ಅವರಿಗಾಗಿಯೇ ಹುಟ್ಟಿಕೊಂಡಿದ್ದು ಇಸ್ಲಾಂ.

ಹುಟ್ಟಿಕೊಂಡದ್ದರ ಬಗ್ಗೆ ನಮಗೇನೂ ತಕರಾರಿರಲಿಲ್ಲ. ಆದರೆ ಅಮ್ಮಾನ್‌ನಿಂದ ಕಿಂಗ್ ಹುಸೇನ್‌ನ ಬ್ರಿಡ್ಜ್ ದಾಟಿ ಇಸ್ರೇಲ್‌ನೊಳಕ್ಕೆ ಹೋಗುತ್ತೇವೆಂದರೆ, ಅಲ್ಲಿಗೂ ಬೆನ್ನತ್ತಿಕೊಂಡು ಬಂತಲ್ಲ ಇಸ್ಲಾಮ್? ದೋಹಾ, ಕತಾರ್, ಅಮ್ಮಾನ್‌ಗಳ ಮೂಲಕ ಹಾದು ಬಂದಿದ್ದಾರೆಂಬ ಕಾರಣಕ್ಕೆ ಭಾರತದಂಥ ಬಲಿಷ್ಠ, ವಿಶಾಲ ದೇಶದ, ವಿದೇಶಾಂಗ ಮಂತ್ರಿ ಎಸ್ಸೆಂ ಕೃಷ್ಣ ಅವರನ್ನೇ ಒಳಕ್ಕೆ ಬಿಟ್ಟುಕೊಳ್ಳಲು ಸುಮಾರು ಒಂದೂ ಮುಕ್ಕಾಲು ಗಂಟೆ ಹಿಂದು ಮುಂದು ನೋಡಿತು ಇಸ್ರೇಲ್ ಎಂಬ ದೇಶ! ಅಲ್ಲಿ ಪಾಸ್‌ಪೋರ್ಟ್ ವೀಸಾ, ಇಮಿಗ್ರೇಷನ್, ವಸ್ತುಗಳ ಪರಿಶೀಲನೆ ಮುಂತಾದವೆಲ್ಲ ಹುಡುಗಿಯರ ಉಸ್ತುವಾರಿಯಲ್ಲಿವೆ. ಸಿಗರೇಟು ಹಚ್ಚಿಕೊಂಡ ಇಸ್ರೇಲಿ ಹುಡುಗಿಯರು ಅದೇನು smart ಆಗಿ ವ್ಯವಹರಿಸುತ್ತಾರೆ ಗೊತ್ತೆ? ನಿಮ್ಮ ಬೆಲ್ಟು, ಪರ್ಸು, ಕೂಲಿಂಗ್ ಗ್ಲಾಸು, ಪಾಸ್‌ಪೋರ್ಟು, ಹಣ, ಕೆಮೆರಾ, ಅದರ ಲೆನ್ಸು, ಅದರೊಳಗಿನ ಬ್ಯಾಟರಿ ಎಲ್ಲ ಬಿಚ್ಚಿಸುತ್ತಾರೆ. ತೊಟ್ಟ ಜಾಕೀಟೂ ಬಿಚ್ಚಿಸುತ್ತಾರೆ. ಚಡ್ಡಿಯ ಹೊರತಾಗಿ ಎಲ್ಲ ಬಿಚ್ಚಿಸಿ, ಕಡೆಗೆ shoe ಕೂಡ ಮಷೀನಿನ ಮೂಲಕ scan ಮಾಡಿ ಇನ್ನೇನು ಮುಗಿಯಿತು ಎಂಬಷ್ಟರಲ್ಲಿ,

“ಅಲ್ಲ, ಮಿಸ್ತರ್ ರವೀ... ನೀವು ದೋಹಾ-ಅಮ್ಮಾನ್‌ಗಳಿಗೆಲ್ಲ ಹೋಗಿದ್ರಲ್ಲ? ಅಲ್ಲಿ ಯಾರ‍್ಯಾರನ್ನ meet ಮಾಡಿದಿರಿ? ಏನು ಮಾತುಕತೆ ಮುಸಲರೊಂದಿಗೆ?" ಎಂದು ಪಕ್ಕಕ್ಕೆ ಕರೆದೊಯ್ದು ಹುಡುಗಿಯೊಬ್ಬಳು ಕೇಳಿದ್ದಳು.

ಇದು ಅವರ ಪರಿಸ್ಥಿತಿ. ಇಡೀ ದೇಶ ಒಂಥರಾ paranoid moodನಲ್ಲಿದೆ. ಪ್ರತಿಯೊಬ್ಬನೂ ಶತ್ರುವಿನಂತೆ ಕಾಣುತ್ತಾನೆ. ಯಾವ ನಿಮಿಷಕ್ಕೆ ಏನು ಗತಿಯೋ? ಪ್ರತಿ ಹುಡುಗಿಯೂ ಜೀವನದಲ್ಲಿ ಕನಿಷ್ಠ ಇಪ್ಪತ್ತು ತಿಂಗಳು ಮಿಲಿಟರಿಯಲ್ಲಿರಬೇಕು. ಗಂಡಸರಿಗೆ ಮೂರು ವರ್ಷ ಕಡ್ಡಾಯ. ಅನಂತರವೂ ಆಗಾಗ ಕರೆದು ತರಬೇತಿ ಕೊಡುತ್ತಿರುತ್ತಾರೆ. Crash course. ಮೇಲಿಂದ ಮೇಲೆ ಯುದ್ಧಗಳಾಗಿವೆ. ಇಸ್ರೇಲ್ ಮತ್ತು ಪ್ಯಾಲಸ್ತೀನದ ಮಧ್ಯೆ ಅಕ್ಷರಶಃ ಗೋಡೆ ಕಟ್ಟಿ ಬಿಟ್ಟಿದ್ದಾರೆ. ಅದಕ್ಕೆ ತಂತಿ ಬೇಲಿ. ಬೇಲಿಗೆ ಕರೆಂಟು ಹಾಯಿಸುತ್ತಾರೆ. ಆದರೂ ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಪ್ಯಾಲಸ್ತೀನಿಯನ್ನರು ಇಸ್ರೇಲಿಗಳತ್ತ ಸ್ನೈಪರ್ ಹರಿಸುತ್ತಾರೆ. ಇವರು ಆ ಕಡೆಗೆ ಹೋಗಿ ನೋಡುವುದೂ ಇಲ್ಲ. ಹೊಗೆ ಎಲ್ಲಿಂದ ಬಂತು ಅಂತ ಗಮನಿಸುತ್ತಾರೆ. ಉಳಿದದ್ದೆಲ್ಲ ವಿಡಿಯೋ ಗೇಮು. ಒಂದು ಬಟನ್ ಒತ್ತಿದರೆ ಸ್ನೈಪರ್ ಹಾರಿಸಿದ ಪ್ಯಾಲಸ್ತೀನಿಯ ಅಂಡಿನೊಳಕ್ಕೆ ನುಗ್ಗುತ್ತದೆ ಇಸ್ರೇಲಿ ಮಿಸೈಲ್: ಅಂಥ ನೈಪುಣ್ಯ!

ಇದು ಕೂಡ paranoiaದ ಒಂದು ಭಾಗವೇ. ವಿಪರೀತ ಯುದ್ಧ ಜಾಗೃತಿ, ಪರಿಣತಿ, ಎಚ್ಚರ : ಎಲ್ಲವುದಕ್ಕೂ ಮೂಲ ಭಯ. ಇವರ ಬಹುದೊಡ್ಡ ದುರಂತವೆಂದರೆ ಸಾವಿರಾರು ಮುಸ್ಲಿಮರು, ಪ್ಯಾಲಸ್ತೀನಿಯನ್ನರು ಇಸ್ರೇಲ್‌ನ ಜೆರೂಸಲೆಮ್ ಮತ್ತು ಟೆಲ್ ಅವೀವ್‌ನಂಥ ನಗರಗಳಲ್ಲೇ ಇದ್ದಾರೆ. ಅವರನ್ನು ಹೊರಹಾಕಲು ಸಾಧ್ಯವಿಲ್ಲ. ಒಂದು ಮನೆಯ ಮೇಲೆ ಕಪ್ಪು ಬಣ್ಣದ ನೀರಿನ ಟ್ಯಾಂಕ್ ಇದ್ದರೆ, ಅದು ಪ್ಯಾಲಸ್ತೀನಿಯನ್ನರದು. ಬಿಳೀ ಟ್ಯಾಂಕ್ ಇದ್ದರೆ, ಆ ಮನೆ ಇಸ್ರೇಲಿಯದು. ಅಪ್ಪಿತಪ್ಪಿ ಕೂಡ ಭಾರತದ ಅಥವಾ ಯಾವುದೇ ದೇಶದ ಮುಸ್ಲಿಮರಿಗೆ ಇಸ್ರೇಲಿಗಳು ವೀಸಾ ಕೊಡುವುದಿಲ್ಲ. ಕೆಲಸ ಕೊಡುವುದಿಲ್ಲ. ಭಾರತದವರಿಗೆ ಇವರು ಕೊಡುವ ಕೆಲಸವಾದರೂ ಏನು? ಕೇವಲ care taking sectorನಲ್ಲಿ ಕೆಲಸ.

ಹೇಳಿದೆನಲ್ಲ? ಏಳು ಯುದ್ಧಗಳನ್ನು ನೋಡಿದ ಸೌಭಾಗ್ಯ ಇಸ್ರೇಲಿನದು. ಹೀಗಾಗಿ ಮನೆಗೊಬ್ಬ ಅಂಗವಿಕಲ. ಕೆಲವರಿಗೆ ಕಾಲಿಲ್ಲ. ಕೈಯಿಲ್ಲ. ಬಾಂಬಿನೊಂದಿಗೆ ಕಣ್ಣು ಸಿಡಿದು ಹೋಗಿವೆ. ಮತ್ತೆ ಕೆಲವರಿಗೆ ಯುದ್ಧದ ಪರಿಣಾಮವಾಗಿ ಮತಿ ವಿಕಲ್ಪ. ಇದೆಲ್ಲ ಸಾಲದೆಂಬಂತೆ ಯಹೂದಿಗಳಿಗೆ ಅದ್ಯಾರದೋ ಶಾಪವಿದೆಯಂತೆ. ಇಲ್ಲಿ ಹುಟ್ಟುವ ಅನೇಕ ಮಕ್ಕಳು ಅಂಗವಿಕಲರಾಗಿ ಹುಟ್ಟುತ್ತಾರೆ. ಅವರನ್ನು ನೋಡಿಕೊಳ್ಳಲಿಕ್ಕೆ ಜನ ಬೇಕು. ಗಂಟೆಗೆ ಇಷ್ಟು ಎಂಬ ಲೆಕ್ಕದಲ್ಲಿ eಜ್ಟಿಛಿ ಮಾಡುತ್ತಾರೆ. ಕೆಲವರು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಾರೆ. ನಂಬಿಕೆ ಕುದುರಿತಾ? ಇಡೀ ಮನೆ ನಮ್ಮವರ ಸುಪರ್ದಿಗೆ ಬಿಟ್ಟು ಕೊಡುತ್ತಾರೆ. ಅವರ ಕಾರು, ಕ್ರೆಡಿಟ್ ಕಾರ್ಡು, ಮನೆಯ ಕೀಲಿ ಎಲ್ಲ ಇವರ ಕೈಯಲ್ಲೇ. ವಾರವಿಡಿ ಜೊತೆಯಲ್ಲಿರಬೇಕು. ಒಂದು ದಿನ ಶಬ್ಬತ್: ಪೂರ್ತಿ ರಜೆ. ಆದರೆ ನೀವು ಕೊಡೋ ಗಂಟೆಗೂಲಿ ಸಾಲದು ನಾನು ಹೊರಗೆ ಕೆಲಸ ಮಾಡಿಕೊಳ್ಳುತ್ತೇನೆ. ವಾರಕ್ಕೊಮ್ಮೆ ಬಂದು ನಿಮ್ಮ ಕೆಲಸ ಮಾಡಿ ಕೊಡುತ್ತೇನೆ ಅಂತ ಭಾರತದ ಹುಡುಗ ಹೇಳಿದರೆ ಅದಕ್ಕೂ hire. ಆದರೆ ಈಗ ನಿಯಮ ಉಲ್ಟಾ. ಭಾರತದ ಹುಡುಗನೇ ಇಸ್ರೇಲಿ ಅಂಗವಿಕಲ ಮಾಲೀಕನಿಗೆ ತಿಂಗಳಿಗಿಷ್ಟು ಅಂತ ಹಣ ಕೊಡಬೇಕು. ಆಗ ಆತ ಒಂದು ಇಂಟೀರಿಯರ್ ಮಿನಿಸ್ಟ್ರಿಯಲ್ಲಿ ಸಹಿ ಹಾಕುತ್ತಾನೆ. ಈ ಹುಡುಗ ಅಕಸ್ಮಾತ್ ಬೇರೆ ಕಡೆ ಕೆಲಸ ಮಾಡುವಾಗ ಸಿಕ್ಕಿ ಬಿದ್ದರೆ ಅಂಗವಿಕಲ ಮಾಲೀಕ ಫೋನು ಮಾಡುತ್ತಾನೆ, “ಇಲ್ಲ, ಅವನನ್ನು ನಾನೇ ಕಳಿಸಿದ್ದೆ. ಇಲ್ಲಿ ಇವತ್ತು ರಜೆ ಕೊಟ್ಟಿದ್ದೆ!"

ಹೀಗೆ ನಡೆಯುತ್ತದೆ ಬದುಕು ಇಸ್ರೇಲ್‌ನಲ್ಲಿ. ಹಾಗಂತ ಇದು ಚೆನ್ನಾಗಿಲ್ಲವಾ? ನಾನು ಯಾಕೆ ಹಾಗನ್ನಲಿ? ಎಸ್ಸೆಂ ಕೃಷ್ಣ ಅವರು ತಮ್ಮ ಗುಂಪಿನೊಂದಿಗೆ ಹಿಂತಿರುಗಿ ವಾರದ ಮೇಲಾಯಿತು. ನಾನು ಪುಸ್ತಕಗಳನ್ನ, ಮ್ಯೂಸಿಯಂಗಳನ್ನ ಹುಡುಕಿಕೊಂಡು ತಿರುಗುತ್ತಲೇ ಇದ್ದೇನೆ. ಪ್ರತಿ ದೇಶವೂ ನನ್ನನ್ನು ಹೊಚ್ಚ ಹೊಸ ಅಪರಿಚಿತ ಹೆಂಗಸಿನಂತೆ, ಒಲಿಯಬಲ್ಲ ಪ್ರೇಯಸಿಯಂತೆ ಆಕರ್ಷಿಸುತ್ತದೆ. I am crazy.

ನಿಮ್ಮವನು
ಆರ್.ಬಿ.

Read Archieves of 21 January, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books