Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ಬೆಂಕಿ ಕಣ್ಣಿನ ಜಿಂಕೆಯ ಬೆನ್ನತ್ತಿ ಹೊರಟವನ ಮಾತು

ನಿಜಕ್ಕೂ ಜೀವ ಹೈರಾಣ.

ಕಾದಂಬರಿ ಮುಗಿಸಿದ ಮೇಲೆ ಅದರ ಸುಸ್ತು ಅರಿವಿಗೆ ಬರುತ್ತಿದೆ. ಬರವಣಿಗೆ ಅನ್ನೋದು ನಿಜಕ್ಕೂ devilish ಕ್ರಿಯೆ. ಏನೂ ಮಾಡದಿದ್ದರೂ ದೇಹ ವಿಪರೀತ ಸತುವು ಮತ್ತು ಗ್ಲೂಕೋಸು ಬೇಡುತ್ತದೆ, ಖರ್ಚಾಗುತ್ತದೆ. ಮೊದಲಿಂದಲೂ ಹೀಗೇ ದಯ್ಯ ಹಿಡಿದವನಂತೆ ಕುಳಿತು ಬರೆಯುತ್ತಿದ್ದೆ. ಈಗ ವಯಸ್ಸಾಗುತ್ತಿರುವುದಕ್ಕೋ ಏನೋ, ಕೊಂಚ ಸುಸ್ತು, ಜೂಗರಿಕೆ ಕಾಣಿಸಿಕೊಳ್ಳುತ್ತದೆ. ಇಷ್ಟೆಲ್ಲ ಆದರೂ ಬರೆಯುವ ಮೋಜು ಸಾಯುವುದಿಲ್ಲ. ಮನಸ್ಸಾಗಲೇ ಇನ್ನೊಂದು ಸುತ್ತಿನ ಬರವಣಿಗೆಯ ಮದನ ಕ್ರಿಯೆಗೆ ಅನುವಾಗುತ್ತಿದೆ. In fact, ಕೆಲವೆಲ್ಲ ಸಬ್ಜೆಕ್ಟುಗಳು ರೈಲಿನಲ್ಲಿ ಸಿಕ್ಕ ಅಪರಿಚಿತನಂತೆ ಕಲ್ಪನೆಯ ಖಾತೆಯಲ್ಲಿ ಜಮೆಯಾಗಿ ತಮ್ಮ ಪಾಡಿಗೆ ತಾವು ಬೆಳೆಯುತ್ತಿರುತ್ತವೆ. ಎಲ್ಲೋ ಕುಳಿತು, ಯಾವುದೋ ಪುಸ್ತಕ ಓದುವಾಗ, ಫಕ್ಕನೆ ಅವು ಇದಿರಿಗೆ ನಿಂತು ನೀನು ಬರೆಯಲೇ ಬೇಕು ಅಂತ ಹಟ ಹಿಡಿದು ಬಿಡುತ್ತವೆ. ಈಗ ಹಾಗೆ ಹಟ ಹಿಡಿದು ಇದಿರಿಗೆ ನಿಂತಿರುವುದು ಹೊಸ ಕಾದಂಬರಿ : ‘ಬೆಂಕಿ ಕಣ್ಣಿನ ಜಿಂಕೆ’.

ಈ ಕಾದಂಬರಿಯಲ್ಲಿ ನಾನೇ ಪಾತ್ರ ವಹಿಸಬೇಕು : ರವಿ ಬೆಳಗೆರೆಯಾಗಿ, ಪತ್ರಕರ್ತನಾಗಿ. ಒಂದು ಸಿಟ್ಟಿಂಗ್‌ಗೆ ಅರವತ್ತು ಪೇಜು ಅಂತ ಇಟ್ಟುಕೊಂಡರೂ ನಾಲ್ಕು ಸಿಟ್ಟಿಂಗ್‌ಗಳಲ್ಲಿ ಮುಗಿಯಬಹುದಾದಂಥ ಚೆಂದನೆಯ ಕಾದಂಬರಿಯದು. ಈ 2011ರಲ್ಲಿ ಅನುಭವಿಸಿದ ಸೋಮಾರಿತನ, ಎಂಥದೋ ಡಿಪ್ರೆಷನ್ನು, ನಿರಾಸಕ್ತಿ-ಎಲ್ಲ ಕೊಡವಿಕೊಂಡು ಬರೆಯಲು ಕೂಡುತ್ತಿದ್ದೇನೆ. ನೀವು ಒಳ್ಳೆಯ ಫಸಲು ನಿರೀಕ್ಷಿಸಬಹುದು. ಮೇಲಾಗಿ ಮೊನ್ನೆ ಜರ್ಮನಿಯಿಂದ ಮತ್ತೆ ಕುಟುಂಬ ಸಮೇತ ಬಂದ ದತ್ತ ಹೆಗಡೆ ಹಾಗೂ ಇಂಗ್ಲಂಡಿನಿಂದ ಬಂದ ಕಾವ್ಯ ಒಂದು ರಾಶಿ ನುಣುಪಾದ ಹಾಳೆಗಳ ಅದ್ಭುತವಾದ ನೋಟ್ ಬುಕ್‌ಗಳನ್ನು ತಂದು ಕೊಟ್ಟಿದ್ದಾರೆ. ಭಾರತದಲ್ಲಿ ಏನೇ ಹುಡುಕಿದರೂ ಸಿಕ್ಕದ stabilo ಪೆನ್ನುಗಳ ಒಂದಿಡೀ ಸಿವುಡು ತಂದುಕೊಟ್ಟಿದ್ದಾರೆ ದತ್ತ. ಇನ್ನು ಬರೆಯುವುದಷ್ಟೆ ನಿನ್ನ ಕೆಲಸ ಎಂದು ಗೆಳೆಯರು ಅಪ್ಪಣೆ ಕೊಡುವ ವಿಧಾನಗಳಿವು. I love them.

‘ಬೆಂಕಿ ಕಣ್ಣಿನ ಜಿಂಕೆ’ ಬರೆಯಲಿಕ್ಕೆ ಅದ್ಭುತವಾದ ಜಾಗ ಕೂಡ ಸಿಕ್ಕಿದೆ. ಅದು ನಿತ್ಯ ಹರಿದ್ವರ್ಣದ ಕಾಡು. ಕೆಲವು ನೂರು ವರ್ಷಗಳ ಹಿಂದಿನ ಬಳ್ಳಿಗಳು ಅಕ್ಷರಶಃ ಮರಗಳಂತೆ, ಆ ಗಾತ್ರಕ್ಕೆ ಬೆಳೆದು ಬಿಟ್ಟಿವೆ. ಅಲ್ಲಿ ಊಟದ ಸಮಸ್ಯೆಯಿಲ್ಲ. ರವಿ ರೇಡ್ಕರ್‌ನ ಮನೆ ಆರು ಕಿಲೋ ಮೀಟರು ದೂರದಲ್ಲಿದೆ. ನರಸಿಂಹನ ‘ಕಾಡುಮನೆ’ ಹನ್ನೆರಡು ಕಿಲೋ ಮೀಟರು ದೂರದಲ್ಲಿದೆ. ಮೊನ್ನೆ ಹುಬ್ಬಳ್ಳಿಯಲ್ಲಿ ಗೆಳೆಯರೊಬ್ಬರ ಮನೆಗೆ ಹೋದಾಗ ಒಂದು folding ಟೇಬಲ್ ಮತ್ತು ಛೇರು ನೋಡಿದೆ. ಜೊಯಿಡಾದ ಬಳಿಯ ಪಾಂಜೋಲಿ ಕಾಡಿಗೆ ಒಯ್ದು ಮರವೊಂದರ ಕೆಳಗೆ ಹಾಕಿಕೊಂಡು ಕೂತು ಬರೆಯಲಿಕ್ಕೆ ಅದ್ಭುತವಾಗಿದೆ ಅನ್ನಿಸಿತು. ಇಡೀ ಛೇರು-ಟೇಬಲ್ಲು ಮಡಚಿದರೆ ಒಂದು ಪುಟ್ಟ ಸೂಟ್‌ಕೇಸಿನಷ್ಟಾಗುತ್ತದೆ. ಇದರ ಕಿಮ್ಮತ್ತು ಎಷ್ಟು ಅಂತ ಹುಬ್ಬಳ್ಳಿಯ ಗೆಳೆಯರನ್ನು ಕೇಳಿದೆ. “ನನಗೂ ಗೊತ್ತಿಲ್ಲ : ಸೊಸೆ ತಂದಿದ್ದಾಳೆ" ಅಂದರು ಗೆಳೆಯರು. ಆಕೆಯನ್ನೇ ರೇಟು ಕೇಳಲು ಹೇಳಿದೆ. “Guess ಮಾಡಿ ನೋಡೋಣ?" ಅಂದರು ಆಕೆ. “ಅಷ್ಟು ಬುದ್ಧಿ ಇದ್ದಿದ್ದರೆ ನಾನ್ಯಾಕಮ್ಮಾ ಪತ್ರಕರ್ತನಾಗುತ್ತಿದ್ದೆ?" ಅಂತ ತಮಾಷೆ ಮಾಡಿದೆ. ಕಡೆಗೆ ಅದು ಸುಮಾರು ಐದು ಸಾವಿರ ಚಿಲ್ರೆ ಅಂತ ಗೊತ್ತಾದಾಗ, “ಬರೆಯಲಿಕ್ಕೆ ಅಣ್ಣನಿಗೆ ತಂಗಿ ಕೊಟ್ಟ ಗಿಫ್ಟು ಅಂದ್ಕೋತೀನಿ’ ಎಂದು ಛೇರು-ಟೇಬಲ್ಲು ಮಡಚಿದೆ. ಆಕೆ ಏನಂದುಕೊಂಡರೋ ಗೊತ್ತಿಲ್ಲ. ಯಾವತ್ತು ಹೋಗಿ ಪಾಂಜೋಲಿಯ ಕಾಡಿನಲ್ಲಿ ಕೂತು ಟೇಬಲ್ಲು ಹರವಿಕೊಂಡು ಕುಳಿತು ಬರೆದೇನು ಅಂತ ಚಡಪಡಿಸುತ್ತಿದ್ದೇನೆ. ಅಂದಹಾಗೆ, ನಾನು ಆ ಛೇರು-ಟೇಬಲ್ಲು ತಂದದ್ದು ವಿಜಯ ಸಂಕೇಶ್ವರರ ಮನೆಯಿಂದ.

‘ಹಿಮಾಗ್ನಿ’ ನಾನು ಅಂದುಕೊಂಡಂತೆಯೇ ಸಿದ್ಧಗೊಳ್ಳುತ್ತಿದೆಯಾದರೂ ಬಿಡುಗಡೆಯ ದಿನಾಂಕ ಕೊಂಚ ಮುಂದಕ್ಕೆ ಹೋಗಬಹುದಾ ಅನಿಸುತ್ತದೆ. ಪದ್ಮನಾಭನಗರದ ಗ್ರೌಂಡು ನಾನು ಪುಸ್ತಕ ಬಿಡುಗಡೆಗೆ ಆಯ್ಕೆ ಮಾಡಿಕೊಂಡಿದ್ದೆ. ಆದರೆ ಅವತ್ತು ಸ್ಥಳೀಯರು ಸಂಕ್ರಾಂತಿಗೆ ಸಂಬಂಸಿದಂತೆ ಜನಪದ ಜಾತ್ರೆ ಪ್ರತೀ ವರ್ಷ ಮಾಡುತ್ತಾರೆ. ಅವರ ಸಂಪ್ರದಾಯ ಮುರಿಯುವ ಮನಸು ನನಗಿಲ್ಲ. ಆದರೆ ತುಂಬ ದಿನ ಮುಂದಕ್ಕೆ ಹಾಕದೆ ಆದಷ್ಟೂ ಬೇಗ ಬಿಡುಗಡೆ ಮಾಡುತ್ತೇನೆ. ಬೇಸರ ಮಾಡಿಕೊಳ್ಳಬೇಡಿ.

-ಬೆಳಗೆರೆ

Read Archieves of 30 December, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books