Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ಉರಿಯುವ ಕೊರಡಿನ ಕೆಂಡದ ಪಕ್ಕದಲ್ಲಿ ಹೆಂಡತಿಯ ತೋಳ ಮೇಲೆ ಮಲಗಿ...

``ಕಳೇಬರದ ಕಾಲುಗಳು!``

ಅಂದರೆ ಚಿಕನ್ ಲೆಗ್ ಪೀಸ್!

ಹಾಗಂತ ಅಂದ ತಕ್ಷಣ ಶಿರಸಿಯ ನಾಗರಾಜ ನಾರ್ವೇಕರ್ ನಗತೊಡಗಿದ. ಅವನು ಸೈಂಧವನಂತೆ ಆರಡಿ ಎತ್ತರವಿರುವ, ಭಯಂಕರ ಉತ್ಸಾಹಿಯಾದ, ಯಾವುದೇ ನಿರೀಕ್ಷೆಗಳಿಲ್ಲದೆ ಅನೇಕ ಪ್ರಖ್ಯಾತರೊಂದಿಗೆ ಸಂಬಂಧವಿರಿಸಿಕೊಂಡ, ಕಲಾವಂತರ ಮನೆತನದ ನಿಸ್ಪೃಹ ಹುಡುಗ. ಅವನ ಬಗ್ಗೆ ನನಗೆ ಖುಷಿಯಾಗಲಿಕ್ಕೆ ಇರುವ ಒಂದು ಮುಖ್ಯ ಕಾರಣವೆಂದರೆ, ಅವನಿಗೆ ಜೋಕುಗಳು ತಕ್ಷಣ ಅರ್ಥವಾಗುತ್ತವೆ. ಎರಡನೆಯ ಕಾರಣವೆಂದರೆ, ನಾನು ಪಕ್ಕದ ರೂಮಿನಲ್ಲೇ ಕುಳಿತಿದ್ದೇನೆ ಮತ್ತು ಬರೆಯುತ್ತಿದ್ದೇನೆ ಅಂದರೆ, ಶಿರಸಿಯ ಮಾರಿಕಾಂಬೆಯೇ ಆದೇಶಿಸಿದರೂ ನನ್ನ ಕೋಣೆಗೆ ಬಂದು disturb ಮಾಡುವುದಿಲ್ಲ.

ಈ ಬಾರಿ ನಾನು ನನಗೇ ಆಶ್ಚರ್ಯವಾಗುವಷ್ಟು ದಿನ ದಾಂಡೇಲಿ ಕಾಡಿನಲ್ಲಿದ್ದೆ. ಜೊಯಿಡಾದ ಗಿಡಗಳು ಎಲೆ ಬಿಚ್ಚತೊಡಗಿವೆ. ಅದನ್ನು ದಾಟಿ ಹತ್ತೇ ಹತ್ತು ಕಿಲೋಮೀಟರ್ ಮುಂದಕ್ಕೆ ಹೋದರೆ ಡಿಗ್ಗಿಯ ಕಾಡು ಶುರುವಾಗುತ್ತದೆ. ಎಂಥ ವಿಚಿತ್ರವೆಂದರೆ ಡಿಗ್ಗಿ ಅಷ್ಟು ಹತ್ತಿರವಿದ್ದರೂ ಅದು ಜೊಯಿಡಾದ ಕಾಡುಗಳಿಗಿಂತ ತುಂಬ ವಿಭಿನ್ನವಾದ ನಿತ್ಯ ಹರಿದ್ವರ್ಣದ ಕಾಡು. ಅದು ವರ್ಷವಿಡೀ ಒಣಗುವುದಿಲ್ಲ. ಕೆಲವೆಡೆ ಸೂರ್ಯನ ಕಿರಣವೇ ಬೀಳದಂಥ ದಟ್ಟ ಕಾನನ. ಅಲ್ಲಿನ ಚಳಿಯ ಬಗ್ಗೆ ಬರೆದರೆ ಅದೇ ಒಂದು ಕಥೆಯಾದೀತು.
ಜೊಯಿಡಾದಲ್ಲಿ ನನ್ನನ್ನು ಗುರುತಿಸುವವರು, ಕಾರಿಳಿದ ತಕ್ಷಣ ಅಮರಿಕೊಳ್ಳುವವರು ತುಂಬ ಕಡಿಮೆ. ಅಲ್ಲಿನವರು ಹೆಚ್ಚಾಗಿ ಕೊಂಕಣಿಗಳು. ಅವರಿಗೆ ಗೋವೆಯೊಂದಿಗೆ ಶತ ಶತಮಾನಗಳ ಸಂಬಂಧವಿದೆ. ಆದರೆ ಈಗ ಜೊಯಿಡಾ ಎಂಬುದು ತಾಲೂಕು ಕೇಂದ್ರ. ಹೀಗಾಗಿ ಕನ್ನಡ ಬಲ್ಲ ತಹಸೀಲ್ದಾರರು, ಗುಮಾಸ್ತರು ಜೊಯಿಡಾದಲ್ಲಿ ನೆಲೆಗೊಂಡಿದ್ದಾರೆ. ನಿಮಗೆ ಗೊತ್ತಿರಬಹುದು: ಕರ್ನಾಟಕದಲ್ಲೇ ಅತ್ಯಂತ ವಿಶಾಲವಾದ ತಾಲೂಕು ಜೊಯಿಡಾ. ಆದರೆ ಜನಸಂಖ್ಯೆ ತೀರ ಕಡಿಮೆ. ಬೆಂಗಳೂರಿಗೆ ನೇರವಾಗಿ ಒಂದು ಬಸ್ಸಿಲ್ಲ. ರಸ್ತೆಗಳು, ಭಗವಂತನಿಗೇ ಪ್ರೀತಿ. ಕಾಡಿನ ಆಳದಲ್ಲಿ ಅಲ್ಲಲ್ಲಿ ಗುಡಿಸಲುಗಳಿವೆ. ಜನ ಬತ್ತ-ಬಾಳೆ ಬೆಳೆಯುತ್ತಾರೆ. ಕುಯಿಲು ಆಗಿ ಕೆಲಸ ಮುಗಿಯಿತೆಂದರೆ, ಗುಂಪುಗುಂಪಾಗಿ ಜನ ಗೋವೆಗೆ ವಲಸೆ ಹೋಗುತ್ತಾರೆ. ಅಲ್ಲಿ ಅವರಿಗೆ ನೌಕರಿ ಒದಗಿಸಲಿಕ್ಕೆಂದೇ ಜನರಿದ್ದಾರೆ. ಅವರಲ್ಲಿಗಷ್ಟೆ ಹೋಗುವ ಜೊಯಿಡಾದ ಕೆಲವು ಹಳ್ಳಿಗರಿದ್ದಾರೆ. ಜನ ಸಂಖ್ಯೆ ತೀರ ಕಡಿಮೆ ಇರುತ್ತದೆಂಬ ಮತ್ತು ಅಷ್ಟಾಗಿ transport facilityಗಳು ಇಲ್ಲವೆಂಬ ಕಾರಣಕ್ಕಾಗಿಯೇ ಒಬ್ಬರಿಗೊಬ್ಬರು ಪರಿಚಯವಾಗುವುದಿಲ್ಲ. ಅಂಥ ಹಿರಿಯ ಲೇಖಕ ಮನೋಹರ ಮಳಗಾಂವಕರ್ ಹಾಗೆ ಸುಮಾರು ತೊಂಬತ್ತಾರು ವರ್ಷ ತಮ್ಮ ತಾಲೂಕಿನ ಮಂದಿಗೇ ಪರಿಚಯವಿಲ್ಲದಂತೆ ಬದುಕಲು ಸಾಧ್ಯವಾದದ್ದು, ಏಕಾಂತ ಅನುಭವಿಸಲಿಕ್ಕೆ ಅವಕಾಶ ದೊರೆತದ್ದು, ಅಕ್ಷರಶಃ, ಯೋಗಿಯಂತೆ ಬದುಕಿದ್ದು ಸಾಧ್ಯವಾಗಲು ಇದೇ ಕಾರಣ ಅಂತ ಈಗ ಅನ್ನಿಸುತ್ತದೆ.
ನಾನು ದಾಂಡೇಲಿಯ ಕಾಡಿನಲ್ಲಿ ಕುಳಿತು ಬರೆಯುತ್ತಿದ್ದಾಗಲೇ ರವಿ ರೇಡ್‌ಕರ್ ಬಂದು ಭೇಟಿಯಾದದ್ದು. ರೇಡ್‌ಕರ್‌ಗಿನ್ನೂ ನಲವತ್ತೈದರ ಆಸುಪಾಸಿನ ವಯಸ್ಸು. ಒಂದೇ ಒಂದು ದುರಭ್ಯಾಸವೂ ಇಲ್ಲದ, ನಿರಂತರವಾಗಿ ಹೊಲ ಗದ್ದೆ-ತೋಟಗಳಲ್ಲಿ ಕೆಲಸ ಮಾಡಿದ, ದೈಹಿಕವಾಗಿ ಎಕ್ಸಲೆಂಟ್ ಸಾಮರ್ಥ್ಯವಿರುವ ರವಿ ರೇಡ್ಕರ್ ಇಡೀ ಜೊಯಿಡಾದ ಪ್ರತಿ ಹಳ್ಳಿ, ಪ್ರತಿ ಮರ ಪರಿಚಯವಿರುವ ಹುಡುಗ. ಯಾರು ಸರ ಹೊತ್ತಿನಲ್ಲಿ ಕರೆದರೂ ಹೋಗಿ ಅವರ ಕೆಲಸ ಮಾಡಿಕೊಡುವ ಸಹಜ ಸಮಾಜ ಮಿತ್ರ. ಆತನಿಗಿರುವ ಗೆಳೆತನ, ಪರಿಚಯ, networkಗಳ ಅಗಾಧತೆಯನ್ನು ನೋಡಿ ನಾನು ನಿಜಕ್ಕೂ ದಂಗು ಬಡಿದಿದ್ದೆ. ‘ಬನ್ನಿ, ಒಮ್ಮೆ ನನ್ನ ಜಮೀನಿರುವ ಪಾಂಜೋಲಿಗೆ ಕರೆದೊಯ್ಯುತ್ತೇನೆ’ ಅಂದ ರೇಡ್ಕರ್ ತನ್ನ ಜೀಪಿನಲ್ಲೇ ಕರೆದೊಯ್ದ. ಕೊಂಚ ಹೊತ್ತು ದಾರಿಯಲ್ಲಿ ಕಾಳೀ ನದಿಗೆ ಕಟ್ಟಲಾದ ಸೂಪಾ ಡ್ಯಾಮ್‌ನ ಹಿನ್ನೀರಿನಲ್ಲಿ ನಿಂತು ಕಾಲು ತೋಯಿಸಿಕೊಂಡೆ. ಅದಕ್ಕೆ ಹತ್ತಿರದಲ್ಲೇ ಇರುವ ನಾಗೋಡಾ ಕ್ರಾಸ್‌ನಿಂದ ಸರಿಯಾಗಿ ಎಣಿಸಿ ಆರು ಕಿಲೋಮೀಟರು ದೂರದಲ್ಲಿದೆ ಪಾಂಜೋಲಿ. ಒಂದೋ ಎರಡೋ ಮನೆಗಳಿರುವ ಊರಿನೊಳಕ್ಕೆ ನಾನು ಹೋಗಲಿಲ್ಲವಾದರೂ ಪಾಂಜೋಲಿಯಲ್ಲಿ ರವಿ ರೇಡ್ಕರ್‌ನ ಜಮೀನು ನೋಡಿ ದಂಗು ಬಡಿದು ಬಿಟ್ಟೆ. ಅದೊಂದು ನಿಸರ್ಗ ನಿರ್ಮಿತ ಅದ್ಭುತ.
ಇಡೀ ಕರ್ನಾಟಕದ ಕೃಷಿ ಒಂದು ತೆರನಾದದ್ದಾದರೆ, ಉತ್ತರ ಕನ್ನಡದ ಕೃಷಿ ಮತ್ತು ತೋಟಗಾರಿಕೆಯ ಶೈಲಿಯೇ ಬೇರೆ. ಅಲ್ಲಿ ಎರಡು ಬೆಟ್ಟಗಳ ಮಧ್ಯೆ ಒಂದು ಕಣಿವೆ ಸಹಜವಾಗಿಯೇ ನಿರ್ಮಾಣವಾಗಿರುತ್ತದೆ. ಬೆಟ್ಟಗಳೆಂದರೇನು? ಅವೂ ಕಾಡುಗಳೇ. ಕಣಿವೆಯಲ್ಲಿ ಚಿಕ್ಕ ಚಿಕ್ಕ ಝರಿಗಳು ಹರಿದು ಇಡೀ ನೆಲ ತೋಯಿಸುತ್ತವೆ. ಅಲ್ಲಿ ಯಾವತ್ತಿಗೂ ನೀರಿಗೆ ಬರವಿಲ್ಲ. ಬೋರ್‌ವೆಲ್‌ಗಳು ಕೆಲವೆಡೆ ವಿಫಲವಾದರೂ, ಅಗೆದ ಬಾವಿಗಳು ಬಲು ಬೇಗ ನೀರಿನ ಊಟೆ ಚಿಮ್ಮಿಸುತ್ತವೆ. ಈ ಹುಡುಗ ರವಿ ರೇಡ್ಕರ್ ರಾಜಕೀಯ, ಸಮಾಜ ಸೇವೆ ಅಂತ ಬಿದ್ದು ಜಮೀನನ್ನು ಅಭಿವೃದ್ಧಿ ಪಡಿಸಿಲ್ಲ. ಎಲ್ಲಿಂದಲೋ ಹರಿದು ಬರುವ ಝರಿ ಅಲ್ಲೊಂದು ಸಹಜವಾದ ಪುಟ್ಟ ಕೆರೆ ನಿರ್ಮಾಣ ಮಾಡುತ್ತದೆ. ಅದಕ್ಕೊಂದು ಚಿಕ್ಕ ಗೇಟಿನಂತಹುದು ಮಾಡಿ ಬೇಕಾದಾಗ ನೀರು ಸಂಗ್ರಹಿಸಿ, ಬೇಕಾದಾಗ ಜಮೀನಿಗೆ ನೀರು ಹಾಯಿಸಿಕೊಳ್ಳಬಹುದು. ಎಲ್ಲ ಸೇರಿ ಮೂರೂವರೆ ಎಕರೆಯಷ್ಟಿದೆ ಅಂದ ರೇಡ್ಕರ್.

ಆದರೆ ಆತನ ಬಗ್ಗೆ ನನಗೆ ನಿಜಕ್ಕೂ ಹೊಟ್ಟೆ ಕಿಚ್ಚಿದ್ದದ್ದು, ಆ ಜಮೀನಿನಲ್ಲಿದ್ದ ಮನೆ ನೋಡಿ. ಅದು ಬಂಗಲೆಯಲ್ಲ. ಬಹುಶಃ ರೆಗ್ಯುಲರ್ ಆದ ಇಟ್ಟಿಗೆಯದೂ ಅಲ್ಲ. ಮಣ್ಣ ಗೋಡೆಯ ಚಿಕ್ಕ ಮನೆ. ಅದರ ಕಿಂಡಿಯಂತಹ ಕಿಟಕಿಯೊಳಗಿನಿಂದ ನಮ್ಮ ಹುಡುಗನೊಬ್ಬನನ್ನು ಹೋಗಿಸಿ ಹಿತ್ತಿಲು ಬಾಗಿಲು ತೆಗೆಸಿ ನೋಡಿದೆ. ಒಂದು ಸೌದೆ ಇಟ್ಟುಕೊಳ್ಳಲು ಮಾಡಿದ ತಡಸಲಿನಂತಹುದು. ಅಲ್ಲೇ ಒಂದು ನೀರು ಕಾಯಿಸುವ ಹಂಡೆ ಇಡಲಿಕ್ಕೆ ಬೇಕಾದ ಒಲೆ. ಒಳಕ್ಕೆ ಹೋದರೆ ಯಥಾಪ್ರಕಾರ ಮಣ್ಣ ಒಲೆಯಿರುವ ಅಡುಗೆ ಮನೆ. ದಾಟಿದರೆ ಒಂದು ಮಂಚ, ಒಂದು ಟೀಪಾಯಿ, ಚಿಕ್ಕದೊಂದು ಪುಸ್ತಕದ ರ‍್ಯಾಕ್ ಇಟ್ಟುಕೊಳ್ಳಬಹುದಾದ living room. ಅದಕ್ಕೂ ಮುಂದೆ ಕತ್ತಲ ಗವಿಯಂಥ, ಒಂದು ಕಿಂಡಿ ಬಿಟ್ಟರೆ ಮತ್ತೇನೂ ಇಲ್ಲದ ವರಾಂಡ, ಅಷ್ಟೆ.

ಉಹುಂ, ಅದಲ್ಲ ಮನೆಯ ಆಕರ್ಷಣೆ. ಅದರ ಆಕರ್ಷಣೆಯಿದ್ದುದು ಅಂಗಳದಲ್ಲಿ. ಅಲ್ಲೊಂದು ನಳನಳಿಸುವ ಅದ್ಭುತವಾದ ಸಪೋಟಾ ಗಿಡ. ಅನತಿ ದೂರದಲ್ಲಿ ದಟ್ಟ ನೆರಳು ಚೆಲ್ಲುವ ನಾನಾ ಜಾತಿಯ ಮರಗಳು. ಅವುಗಳ ನೆರಳೇ ಸಾಕು ನನ್ನಂಥ ಆಸೆಬುರುಕ ಬರಹಗಾರನ ಅಭಿಲಾಷೆ ಗರಿಗೆದರುವುದಕ್ಕೆ. ಹೆಚ್ಚೇನೂ ಬೇಕಾಗಿಲ್ಲ. ಹತ್ತಿರದಲ್ಲೇ ಕೆರೆಯಿದೆ. ಅಲ್ಲಿಂದ ಒಂದು ಪೈಪ್ ಜಗ್ಗಿಕೊಂಡು ಸ್ನಾನಕ್ಕೆ, ಕುಡಿಯುವ ನೀರಿಗೆ ನಲ್ಲಿ ಮಾಡಿಸಿಕೊಂಡು, ನೀರು ಬರಲು ಚಿಕ್ಕದೊಂದು ಪಂಪ್ ಕೂಡಿಸಿಕೊಂಡುಬಿಟ್ಟರೆ ಸಾಕು. ಹೇಗಿದ್ದರೂ ಮನೆಗೆ ಕರೆಂಟಿದೆ. ಒಂದು ಪ್ಲಾಸ್ಟಿಕ್ ಟೇಬಲ್ಲು, ಒಂದು ಪ್ಲಾಸ್ಟಿಕ್ ಕುರ್ಚಿ ಒಯ್ದಿಟ್ಟುಕೊಂಡು ಬಿಟ್ಟರೆ ಮರದ ನೆರಳಿನಲ್ಲಿ ಬೆಳಗಿನ ಸೂರ್ಯ ಕಿರಣ ಬಿದ್ದ ಕ್ಷಣದಿಂದ ಸಂಜೆ ಬೆಳಕು ಆತ್ಮಹತ್ಯೆ ಮಾಡಿಕೊಳ್ಳುವ ತನಕ ಬರೆಯುತ್ತಿರಬಹುದು. ಊಟದ್ದೇನು? ಯಾರಾದರೂ ಹುಡುಗರು ಬಂದು ಅಡುಗೆ ಮಾಡಿ ಹಾಕುತ್ತಾರೆ. ಬೇಡವೆನ್ನಿಸಿದರೆ, ಬರೀ ಆರು ಕಿಲೋಮೀಟರು ದೂರದ ಜೊಯಿಡಾಕ್ಕೆ ಹೋಗಿ ಒಂದಷ್ಟು ಊಟ ಕಟ್ಟಿಸಿಕೊಂಡು ಬಂದರಾಯ್ತು. ಮಳೆಗಾಲದಲ್ಲಿ ಮಾತ್ರ ಪಾಂಜೋಲಿಗೆ ಹೋಗುವ ಇಡೀ ರಸ್ತೆ ಮುಳುಗಿ ಹೋಗುತ್ತದೆ. ಸೂಪಾ ಡ್ಯಾಮ್‌ನಿಂದಾಗಿ ಈಗಾಗಲೇ ಅನೇಕ ಹಳ್ಳಿಗಳು ಮುಳುಗಡೆಯಾಗಿ, ಪಾಂಜೋಲಿಯಂತಹ ಅಳಿದುಳಿದ ಕೆಲವು ಹಳ್ಳಿಗಳಿವೆ. ಇಂಟರೆಸ್ಟಿಂಗ್ ಸಂಗತಿಯೆಂದರೆ, ಅಲ್ಲಿ ರಸ್ತೆ ಮುಳುಗುತ್ತಿದ್ದಂತೆಯೇ ಸರ್ಕಾರ ಜನರನ್ನು ಒಯ್ಯಲಿಕ್ಕೆ, ಅವರ ಹಳ್ಳಿಗಳಿಗೆ ತಲುಪಿಸಲಿಕ್ಕೆ ಚಿಕ್ಕ ಚಿಕ್ಕ ದೋಣಿಗಳ ವ್ಯವಸ್ಥೆ ಮಾಡುತ್ತದೆ. ಒಮ್ಮೆ ರೇಡ್ಕರ್‌ನ ಜಮೀನಿನಲ್ಲಿರುವ ಆ ಮಣ್ಣ ಮನೆ ಸೇರಿಕೊಂಡುಬಿಟ್ಟರೆ ಸಾಕು. ಒಳಗೆ ಮಣ್ಣ ಗೋಡೆಯ ಹಿಂದೆ ಕುಳಿತು ಹೊರಗೆ ಸುರಿಯುವ ಮುಸಲ ಧಾರೆಯನ್ನು, ಒಂದೇ ಸಮನೆ ರಪರಪನೆ ಬೀಳುವ ಆ ಮಳೆಯನ್ನು ನೋಡುತ್ತಾ, ಹುಚ್ಚು ಬಂದಾಗ ಹೊರಕ್ಕೆ ಓಡಿ ಮಳೆಯಲ್ಲಿ ತೊಯ್ಯುತ್ತಾ, ಚಳಿ ಕಾಡಿದಾಗ ಹಂಡೆಯಡಿಯ ಒಲೆಯೊಳಗಿನ ಧಗ್ಗ ಬೆಂಕಿಯ ಮುಂದೆ ಕೂಡುತ್ತಾ, ಮತ್ತೆ ಬರೆಯುತ್ತಾ, ಮತ್ತೆ ಓಡುತ್ತಾ, ಬೇಕೆನ್ನಿಸಿದ-ಬೇಡೆನ್ನಿಸಿದ ಯಾರನ್ನೂ ನೋಡದೆ, ಭೇಟಿಯಾಗದೆ ಸುಮ್ಮನೆ ಒಬ್ಬನೇ ಬದುಕುವುದರಲ್ಲಿ ಅದಿನ್ನೆಂಥ ಮಜವಿದೆ!

``ರೇಡ್ಕರ್, ನನಗೆ ಜಮೀನು-ಜಾಪತ್ರೆ, ಅಡಿಕೆ, ಅದರ ಬೆಳೆ, ಲಾಭ-ಏನೆಂದರೆ ಏನೂ ಬೇಡ. ನನಗೆ ಅದೊಂದು ಮಣ್ಣ ಮನೆ ಕೊಟ್ಟು ಬಿಡಿ... ದಮ್ಮಯ್ಯ`` ಅಂದೆ.

ರೇಡ್ಕರ್ ನಕ್ಕರು.

ಆಗಲೇ ಮಧ್ಯಾಹ್ನ ಮೀರಿತ್ತು. ನಾವು ಡಿಗ್ಗಿಗೆ ಹೋಗಬೇಕೆಂದುಕೊಂಡು ಹೊರಬಿದ್ದವರು. ಆದರೆ ಡಿಗ್ಗಿ ಕಾಡಿನ ತುದಿಯಲ್ಲಿ ಕಾಳಿ ನದಿಯ ಉಗಮವಿದೆ. ಜಗತ್ತಿನಲ್ಲಿ ಬಹುಶಃ ಅದೊಂದೇ ಕಪ್ಪು ನದಿ. ಅದಕ್ಕೆಂದೇ ‘ಕಾಳಿ’ ಅನ್ನುತ್ತಾರೆ. ಕೆಲವು ಸಾವಿರ ಹೆಕ್ಟೇರುಗಳಿಗೆ ಜೀವ ಜಲ ಉಣಿಸುವ ಕೃಷ್ಣಧಾರೆ. ಆದರೆ ಡಿಗ್ಗಿಯ ಅಂತರಾಳ ಮುಟ್ಟಿ ಹಿಂತಿರುಗುವ ಹೊತ್ತಿಗೆ ತುಂಬ ತಡವಾಗಿಬಿಡುತ್ತದೆ. ಈ ಹಿಂದೆ ಎರಡು ಸಲ ನಾನು ಕಾಳಿ ನದಿಯ ಉಗಮ ನೋಡಿದ್ದೇನೆ. ಬದಲಿಗೆ ಡಿಗ್ಗಿ ಕಾಡಿನಲ್ಲೇ ಇರುವ ಕುಡುಬಿಗಳ ಹಳ್ಳಿಗೆ ಹೋಗೋಣ ಅಂದೆ. ಡಿಗ್ಗಿ ಕಾಡಿನಲ್ಲೇ ಇದೆ ಡೇರಿಯಾ ಎಂಬ ಹಳ್ಳಿ. ಹಳ್ಳಿ ಅನ್ನೋದಕ್ಕಿಂತ ಹೆಚ್ಚಾಗಿ, ಅದೊಂದು ಮನೆ. ಅಲ್ಲಿ ಇವತ್ತಿಗೂ ಇರುವುದು ಕೇವಲ ಕುಡುಬಿ ಜನಾಂಗದವರು. ತಮಾಷೆಯೆಂದರೆ ಡೇರಿಯಾ ಕುಟುಂಬದ ಮೂಲ ಮನೆ ಅದೆಷ್ಟು ನೂರು ವರ್ಷಗಳಷ್ಟು ಹಳೆಯದೋ, ಗೊತ್ತಿಲ್ಲ. ಆ ಮನೆಯಲ್ಲಿ ವಾಸಿಸುತ್ತಿದ್ದ ಒಂದೇ ಕುಟುಂಬದ ಸದಸ್ಯರ ಸಂಖ್ಯೆ ಒಂದುನೂರ ಇಪ್ಪತ್ತಾರು! ಈಗ ಅವರು ಮನೆ ಕಿರಿದಾಯಿತೆಂಬ ಒಂದೇ ಕಾರಣಕ್ಕೆ ನಾಲ್ಕಾರು ಸ್ವತಂತ್ರವಾದ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಇರುವ ಜಮೀನಿನ ತಂಟೆಗೆ ಹೋಗಿಲ್ಲ. ಅದರಲ್ಲಿ ಪಾಲಾಗಿಲ್ಲ.

ಕುಡುಬಿಗಳು ಕರ್ನಾಟಕ ಮತ್ತು ಗೋವೆಯ ಕೆಲಭಾಗದಲ್ಲಿ ನೆಲೆಗೊಂಡಿರುವ ಬುಡಕಟ್ಟಿನ ಜನ. ಮೊನ್ನೆ ಮೊನ್ನೆಯ ತನಕ ಅವರ ಹೆಂಗಸರು ಕುಪ್ಪುಸ ತೊಡುತ್ತಿರಲಿಲ್ಲ. ಅವರ ಹೆಸರುಗಳಲ್ಲಿ ಈಗೀಗ ಬದಲಾವಣೆ ಬಂದಿದೆಯಾದರೂ ಮೊದಲಿನ ಹೆಸರುಗಳು ಇವತ್ತಿಗೂ ಇಂಪು. ಬಳಸು, ವರ್ಣೋ, ಪಾಂಗೋ, ಗಣಸು, ಸುಕ್ರೋ, ಖುಷ್, ರೆಡಿಯೋ, ವೆಂಕೋ, ಎಸು, ಅಬೋಲೆ, ಮೋಗರೆ, ಚಾಪೆ, ಗುಲಾಬಿ ಇಂಥ ಹೆಸರುಗಳ ಪೈಕಿ ಒಂದನ್ನು ನನ್ನ ಮಗನಿಗೆ ಅಥವಾ ಮಗಳಿಗೆ ಇಡಬೇಕೆನಿಸಿದ್ದು ಅವರ ಬಾಯಲ್ಲಿ ಅದನ್ನೆಲ್ಲ ಕೇಳಿದಾಗಲೇ. ವಿಚಿತ್ರವೆಂದರೆ ಶುದ್ಧ ಮಾಂಸಾಹಾರಿಗಳಾದ ಕುಡುಬಿಗಳು ಕೋಳಿ, ಕುರಿ, ದನ-ಇಂಥ ಸಾಕು ಪ್ರಾಣಿಗಳನ್ನು ತಿನ್ನುವುದಿಲ್ಲ. ಅವರು ಮಾಂಸ ಬೇಕೆನ್ನಿಸಿದರೆ ಬೇಟೆಯೇ ಆಡಬೇಕು. ಹೆಚ್ಚು ಕಡಿಮೆ ಪ್ರತಿ ಮನೆಯಲ್ಲೂ ಕೋವಿಗಳಿವೆ. ಆದರೆ ಈಗೀಗ ಬೇಟೆಯ ಹುಚ್ಚು ಬಿಟ್ಟು ಹೋಗಿದೆ. ಮೀನು ಹಿಡಿಯುತ್ತಾರೆ, ಕಾಳಿಯಲ್ಲಿ. ಸಿಕ್ಕರೆ ಅಲ್ಲೊಂದು ಇಲ್ಲೊಂದು ಜಿಂಕೆ, ಕಡವೆ, ಚರ್ಮ-ಗಿರ್ಮ ಮಾರುವ ಅನ್ಯಾಯಕ್ಕೆ ಕೈಯಿಟ್ಟವರೇ ಅಲ್ಲ.

ನನಗೆ ವಿಚಿತ್ರ ಮತ್ತು ಆನಂದ ಒಟ್ಟಿಗೆ ಅನುಭವಿಸಿದಂತಾಗಿದ್ದುದು ಜಯಾನಂದ ಡೇರೆಕರ್ ಎಂಬ ಹುಡುಗನನ್ನ ಭೇಟಿಯಾದಾಗ. ಹತ್ತಿರದಿಂದ ನೋಡಿದರೆ ಬೆಂಗಳೂರಿನ ಹೊಟೇಲೊಂದರಲ್ಲಿ ಟೇಬಲ್ಲು ಒರೆಸುವ ಹುಡುಗನಂತೆ ಕಾಣುವ, ಐದೂವರೆ ಅಡಿ ಎತ್ತರದ, ಹೆಚ್ಚೆಂದರೆ ನಲವತ್ತಾರು ಕೆಜಿ ತೂಗುವ ಜಯಾನಂದ ಡೇರೆಕರ್‌ನನ್ನು ನಾನು ಯಾಕೆ ಕಾಯುತ್ತಿದ್ದೇನೋ ಗೊತ್ತಿಲ್ಲ. ಅಷ್ಟು ಹೊತ್ತಿಗೆ ನನಗೆ ಅವನದೇ ಮನೆಯಲ್ಲಿ ಊಟ ಹಾಕಿದ್ದರು. ಅಂಥ ಪಲ್ಯ, ಸಾರು, ಚಟ್ನಿ, ಬಿಸಿ ಬಿಸಿಯಾದ ಉಕ್ಕರಿಸಿದ ರೊಟ್ಟಿ ಮುಂತಾದವುಗಳನ್ನು ನಾನು ತಿಂದೇ ಶತಮಾನವಾಗಿತ್ತು.
ಇನ್ನೂ ಜಾಸ್ತಿ ಹೊತ್ತು ಉಳಿದರೆ ಡಿಗ್ಗಿ ಕಾಡು ದಾಟಿ, ಅಲ್ಲಿಂದ ದಾಂಡೇಲಿಗೆ ತಲುಪಲಿಕ್ಕೆ ತುಂಬ ತಡವಾದೀತು ಅನ್ನಿಸುತ್ತಿತ್ತು. ಅಷ್ಟರಲ್ಲಿ ಒಂದು ಮಾಸಿದ ಅಂಗಿ, ಇಸ್ತ್ರಿ ಕೆಟ್ಟ ಪ್ಯಾಂಟು ಹಾಕಿಕೊಂಡು ಹತ್ತಿರಕ್ಕೆ ಬಂದ ಯುವಕನೊಬ್ಬ. ``ಸರ್, ನನ್ನ ಹೆಸರು ಜಯಾನಂದ ಡೇರೆಕರ್`` ಅಂದ. ಒಮ್ಮೆ ಅವನನ್ನ ಸುಮ್ಮನೆ ತಬ್ಬಿಕೊಂಡು ಬಿಟ್ಟೆ. ಕಾರಣವಿಷ್ಟೆ- ಅತ್ಯಂತ ಹಿಂದುಳಿದ, ಕುಡುಬಿ ಬುಡಕಟ್ಟಿನ, ಇವತ್ತಿಗೂ ಕೂಲಿಗಾಗಿ ಗೋವೆಗೆ ವಲಸೆ ಹೋಗುವ ಪಂಗಡಕ್ಕೆ ಸೇರಿದ ಜಯಾನಂದ ಪದವಿ, ಸ್ನಾತಕೋತ್ತರ ಪದವಿ ಎರಡನ್ನೂ ಪಡೆದು ಈಗ ಡಾಕ್ಟರೇಟ್ ಡಿಗ್ರಿಗಾಗಿ ಕೆಲಸ ಮಾಡುತ್ತಿದ್ದಾನೆ. ಅದಕ್ಕಿಂತ ಖುಷಿ ಪಡಲಿಕ್ಕೆ ಕಾರಣವೇನಿದೆ? ಜಯಾನಂದ ಎಲ್ಲೋ ಹೋಗಿದ್ದ. ಅವನು ಬರುವುದಕ್ಕೆ ಮುಂಚೆ ಒಮ್ಮೆ ನನಗೆ ಅವನ study room ತೋರಿಸು ಎಂದು ಅವನ ತಮ್ಮ ರವಿ ಡೇರೆಕರ್‌ನನ್ನು ಕೇಳಿದ್ದೆ.

ರೂಮಾ ಅದು?

study room ಹಾಗಿರಲಿ: ಅಲ್ಲಿ ಕುಳಿತು ದಿನಪತ್ರಿಕೆ ಓದಲೂ ಅಸಾಧ್ಯ. ಅಂಥದರಲ್ಲಿ ಈ ಹುಡುಗ ತನ್ನ doctoral thesisಗೆ ಕೆಲಸ ಮಾಡುತ್ತಾನೆಂದರೆ, ಅದಲ್ಲವೆ ಗಂಡು ಮಾತು?

``ರವೀ, ನನ್ನನ್ನು ಒಮ್ಮೆ ನಿಮ್ಮ ತಂದೆ ತಾಯಿ ಮಲಗುವ ಕೋಣೆಗೆ ಕರೆದೊಯ್ದು ತೋರಿಸ್ತೀಯಾ?`` ಅಂತ ಜಯಾನಂದನ ತಮ್ಮ ರವಿ ಡೇರೆಕರ್‌ನನ್ನು ಕೇಳಿದ್ದೆ. ಅವನು ಕರೆದೊಯ್ದ.

ಅಲ್ಲಿ ಮಂಚ ಕೂಡ ಇರಲಿಲ್ಲ. ನೆಲದ ಮೇಲೆ ಅತ್ಯಂತ ಸಾಮಾನ್ಯ ಜಮಖಾನ, ಕೌದಿಯಂತಹುದು ಹಾಸಿಕೊಂಡು ಮಲಗಬೇಕು. ಆಶ್ಚರ್ಯವೆಂದರೆ, ಅವರು ಮಲಗುವ ಜಾಗಕ್ಕೆ ಸುಮಾರು ಮೂರು ಅಡಿ ದೂರದಲ್ಲಿ ಒಂದು ಅರ್ಧ ಉರಿದು ಆರಿದ, ತೊಡೆ ಗಾತ್ರದ ಕೊರಡು ಇತ್ತು.

``ಇದೇನು?`` ಅಂದೆ.

``ಸರ್, ಇಲ್ಲಿ ಯಾರೂ ಬೆಡ್‌ರೂಮಿನಲ್ಲಿ ಉರಿಯುವ ಕೊರಡು ಇಲ್ಲದೆ ಮಲಗೋದಿಲ್ಲ. ಅದರಲ್ಲೂ ವಯಸ್ಸಿನವರು. ಇಲ್ಲಿಯ ಚಳಿ ಭಯಂಕರ. ಬಹುಶಃ ಅವರ ಮೂಳೆಗಳಿಗೂ ಆ ಬಿಸಿ ಬೇಕು. ಒಂದು ಕೊರಡು ಹಚ್ಚಿಡುತ್ತಾರೆ. ಧಗ ಧಗ ಉರಿಯುವುದಿಲ್ಲ. ಆದರೆ ರಾತ್ರಿಯಿಡೀ ಕೆಂಡ ಸುಡುತ್ತಿರುತ್ತದೆ. ಕೋಣೆಯನ್ನು ಬೆಚ್ಚಗಿಟ್ಟಿರುತ್ತದೆ. ಅವರಿಗಿದು ಬೇಕೇ ಬೇಕು`` ಅಂದ ರವಿ ಡೇರೆಕರ್.

ಬದುಕೆಂದರೆ ಇದೇ ಅಲ್ಲವಾ? ನಮ್ಮ ಎಸಿಗಳು, ರೂಮ್ ಹೀಟರುಗಳು- ಇವೆಲ್ಲ ಎಂಥ ಬುರ್ನಾಸು ಐಡಿಯಾಗಳು. ನಾವು ಸುಖಕ್ಕೆ, ಶ್ರೀಮಂತಿಕೆಗೆ, ಚಟಕ್ಕೆ, ಅದರ ಪ್ರದರ್ಶನಕ್ಕೆ ಗಂಟು ಬಿದ್ದಿದ್ದೇವೆ.
ಉರಿಯುವ ಕೊರಡಿನ ಪಕ್ಕದಲ್ಲಿ ಮಲಗಿ, ಹೆಂಡತಿಯ ತೋಳ ಮೇಲೆ ತಲೆಯಿಟ್ಟು ಮಲಗುವ ಆ ಕುಡುಬಿ ಮುದುಕ ನನಗೆ ಎಷ್ಟೊಂದು ಸಂಗತಿ ಹೇಳಿದ್ದ!

-ನಿಮ್ಮವನು
ಆರ್.ಬಿ

Read Archieves of 19 December, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books