Ravi Belagere
Welcome to my website
ಇದು 2012ರ ಫೆಬ್ರವರಿ 14ರ ವ್ಯಾಲಂಟೈನ್ಸ್ ಡೇಗೆ ಸಮಸ್ತ ಪ್ರೇಮಿಗಳಿಗಾಗಿ ನಾನು ಕೊಡುತ್ತಿರುವ ಅಕ್ಕರೆಯ gift : ‘ಒಲವೇ...’. ಅರವತ್ತು ನಿಮಿಷಗಳ ಅರ್ಥಪೂರ್ಣ ಧ್ವನಿ ಮುದ್ರಿಕೆ. ಅಪ್ಪ-ಅಮ್ಮನ ನೆರಳಲ್ಲಿ ಮುದ್ದಾಗಿ ಬೆಳೆದ ಹುಡುಗಿ, ಅಷ್ಟೇ ಬೆಚ್ಚನೆಯ ಆರೈಕೆಯಲ್ಲಿ ಚೆಂದಗೆ ಬೆಳೆದ ಹುಡುಗ ಅದ್ಯಾವ ಮಾಯೆಯಲ್ಲೋ ಒಬ್ಬರನ್ನೊಬ್ಬರು ಪ್ರೀತಿಸತೊಡಗುತ್ತಾರೆ. ಅಲ್ಲಿಂದ ಶುರುವಾಗುತ್ತೆ ಅವರ ಪ್ರೇಮ ಯಾತ್ರೆ. ಫೆಬ್ರವರಿ 14 ನಿಮ್ಮ ಗೆಳೆಯ ಅಥವಾ ಗೆಳತಿಯನ್ನು ಭೇಟಿಯಾದಾಗ ಪ್ರೀತಿಯಿಂದ ‘ಒಲವೇ’ ಸಿಡಿ ಕೊಡಿ. ಅಷ್ಟೇ ಅಲ್ಲ, ಇಬ್ಬರೂ ಒಟ್ಟಿಗೇ ಕೂತ್ಕೊಂಡು ಸಮಾಧಾನವಾಗಿ ಕೇಳಿ. Be sure. ನಿಮ್ಮ ಒಲವು ಫಲಿಸುತ್ತೆ. ಮನಸು ಮುದಗೊಳ್ಳುತ್ತೆ. ಆಮೇಲೆ ಯಾವತ್ತೇ ಮನಸ್ಸಿಗೆ ಬೇಕೆನ್ನಿಸಿದರೂ ನೀವು ‘ಒಲವೇ...’ ಸಿಡಿ ಕೇಳ್ತಾನೇ ಇರ‍್ತೀರಿ...
Home About Us Gallery Books Feedback Prarthana Contact Us

ಕವಿಗಳಿಗೆ ಕೋಟ್ಯಂತರ ಕೊಟ್ಟಿದ್ದು ನಿಜವೇ : ಆದರೆ ಯಾರ ಮನೆಯದು ಕೊಟ್ಟಿರಿ?

ಇದು ಕೆಲವಷ್ಟು ವರ್ಷಗಳ ಹಿಂದಿನ ಮಾತು. ಕರ್ನಾಟಕದ ಮಂತ್ರಿಯೊಬ್ಬರು ಧಾರವಾಡಕ್ಕೆ ಹೋಗಿದ್ದರು. ``ನೋಡ್ರೀ, ಅದ್ಯಾರು ದಾ.ರಾ.ಬೇಂದ್ರೆ? ಕವಿಗಳಂತಲ್ಲ? ಅವರ ಮನೇಗೆ ಹೋಗಿ ಒಂದು ಹಾರ ಹಾಕಿ ಬಂದು ಬಿಡೋಣ. ವ್ಯವಸ್ಥೆ ಮಾಡ್ರಿ`` ಎಂದು ಅಧಿಕಾರಿಯೊಬ್ಬರಿಗೆ ತಿಳಿಸಿದರು.

``ಸರ್, ಬೇಂದ್ರೆಯವರು ತೀರಿಕೊಂಡಿದ್ದಾರೆ...`` ಅಂದರು

ಅಧಿಕಾರಿ.

``ಹಾಗಾದ್ರೆ, ಅವರ ಮಿಸೆಸ್ಸಿಗೇ ಹಾಕಿ ಬಂದು ಬಿಡೋಣ. ಹಾರ ತರಿಸ್ರೀ...`` ಅಂದರು ಮಂತ್ರಿಗಳು.

``ಸರ್, ಅವರೂ ಇಲ್ಲ. ತೀರಿಕೊಂಡಿದ್ದಾರೆ!`` ಎಂಬ ಉತ್ತರ ಬಂತು.

ಅಂಥ ಹಿರಿಯ ಮಹಾಕವಿ ದತ್ತಾತ್ರಯ ರಾಮಚಂದ್ರ ಬೇಂದ್ರೆ (ದ.ರಾ.ಬೇಂದ್ರೆ) ಅವರ ಹೆಸರು ದಾ.ರಾ.ಬೇಂದ್ರೆ ಅಲ್ಲ ಎಂಬುದು ಕೂಡ ಗೊತ್ತಿರದಿದ್ದ ಆತ ಕರ್ನಾಟಕದ ಮಂತ್ರಿ! Mostly, ಅದು ಬಂಗಾರಪ್ಪನವರ ಬಲಗೈ ಬಂಟರಂತಿದ್ದ ಎಸ್.ರಮೇಶ್ ಅಲಿಯಾಸ್ ಸ್ಲಂ ರಮೇಶ್ ಇರಬೇಕು ಎಂಬ ನೆನಪು ನನ್ನದು.

ಇನ್ನೊಂದು ಸಂದರ್ಭ : ಉತ್ತರ ಕರ್ನಾಟಕದವರೇ ಒಬ್ಬರು ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ, ಬೇಂದ್ರೆಯವರ ಮನೆಗೆ ಹೋಗಿ ನಮಸ್ಕಾರ ಮಾಡಿ ``ನನ್ನಿಂದ ಏನಾದರೂ ಆಗೋದಿದ್ರೆ ಹೇಳ್ರಿ`` ಅಂದಿದ್ದರು. ಅದಕ್ಕೆ ಸಿಡುಕಿದ ಬೇಂದ್ರೆ, ``ನಿನ್ನಿಂದ ನನಗೆ ಏನು ಆಗಬೇಕಾಗ್ಯದೋ? ನಿನ್ನ ಕೆಲಸ ಏನದೆ, ಅದನ್ನ ನೋಡಿಕೊಂಡು ಹೋಗು ಸಾಕು...`` ಅಂದಿದ್ದರು.

ಒಬ್ಬ ಬೇಂದ್ರೆಯವರಷ್ಟೆ ಅಲ್ಲ : ಆಗಿನ ಇಂಟಲೆಕ್ಚುವಲ್ ಸಮೂಹವೇ ಹಾಗಿತ್ತು. ಮೈಸೂರು ಮಹಾರಾಜರನ್ನು ಕುವೆಂಪು ಮಾರು ದೂರದಲ್ಲಿಟ್ಟಿದ್ದರು. ಸ್ವತಃ ಅರಸರ ಮನೆಯವರಾಗಿದ್ದ ಸುಬ್ರಹ್ಮಣ್ಯ ರಾಜೇ ಅರಸು ಅವರು ಅರಸು ಮನೆತನವನ್ನೇ ಧಿಕ್ಕರಿಸಿ ‘ಚದುರಂಗ’ರಾಗಿ ಚಿರಕಾಲ ಬಾಳಿದರು. ಕಟ್ಟೀಮನಿ, ತರಾಸು, ಬೀಚಿ, ಅನಕೃ ಮುಂತಾದವರು ರಾಜಕಾರಣಿಗಳನ್ನು ಹೆಗಲು ಮುಟ್ಟಗೊಟ್ಟಿರಲಿಲ್ಲ. ಆದರೆ ತಾವು ನಂಬಿಯೂ ನಂಬದ ಬ್ರಾಹ್ಮಣ್ಯವೋ, ಇದ್ದ ಹಳೆಯ ಸೋಷಲಿಸ್ಟ್ ನಂಟೋ-ಗೊತ್ತಿಲ್ಲ. ಮೊಟ್ಟ ಮೊದಲ ಬಾರಿಗೆ ಅನಂತಮೂರ್ತಿಯವರು ರಾಮಕೃಷ್ಣ ಹೆಗಡೆಯವರೊಂದಿಗೆ ಬಹಿರಂಗವಾಗಿಯೇ hobnobing ಆರಂಭಿಸಿದರು. ಕಡೆಗೆ ಅನಂತಮೂರ್ತಿ ಮತ್ತು ರಾಮಕೃಷ್ಣ ಹೆಗಡೆಯವರ ಸ್ನೇಹ ಅಪರೋಕ್ಷವಾಗಿ ಇಡೀ ದಲಿತ-ಬಂಡಾಯ ಚಳವಳಿಯನ್ನೇ ನುಂಗಿ ನೀರು ಕುಡಿಯಿತು ಎಂಬ ಆಪಾದನೆಯೂ ಕೇಳಿ ಬಂತು.

ಮುಂದಿನ ದಿನಗಳ ಸಂಗತಿಯೇ ಬೇರೆಯಾಯಿತಲ್ಲ? ಸಿದ್ಧಲಿಂಗಯ್ಯ, ಬರಗೂರು ರಾಮಚಂದ್ರಪ್ಪ, ಹನುಮಂತಯ್ಯ, ಚಂದ್ರಶೇಖರ ಪಾಟೀಲ ಸೇರಿದಂತೆ ಅನೇಕ ಸಾಹಿತಿಗಳು ಸರಕಾರಿ ಸಾವಿರಾರು ನದಿಗಳಲ್ಲಿ ತೇಲಿ ಹೋದರು. ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಒಮ್ಮೆ ಭಾಷಣ ಮಾಡುತ್ತಾ ``ಎಸ್.ಬಂಗಾರಪ್ಪ ಅಂದರೆ ಸಾರೆಕೊಪ್ಪದ ಬಂಗಾರಪ್ಪ ಅಲ್ಲ, ಅವರು ಯಾವುದಕ್ಕೂ No ಅನ್ನದ Yes ಬಂಗಾರಪ್ಪ`` ಅಂದರು. ಸಿದ್ಧಲಿಂಗಯ್ಯನವರಂತೂ ಯಡಿಯೂರಪ್ಪನನ್ನು ``ಅಭಿನವ ಬಸವಣ್ಣ`` ಅಂದರು. ನಮ್ಮ ನಾಡಿನ ಮತ್ತು ಸಾರ್ವಜನಿಕರ ಪುಣ್ಯ. ಸಿದ್ಧಲಿಂಗಯ್ಯನವರು ಕೃಷ್ಣಯ್ಯ ಶೆಟ್ಟಿಯನ್ನು ``ಮಾಲೂರಿನ ಮಹಾನ್ ಪುರಂದರ ದಾಸ`` ಅಂತಲೂ, ಕಟ್ಟಾ ಸುಬ್ರಹ್ಮಣ್ಯ ನಾಯ್ಡುವನ್ನು ``ಕುಚ್ಚಿನ ಟೋಪಿ ಧರಿಸಿದ ಕೈವಾರ ತಾತಯ್ಯ`` ಅಂತಲೂ, ಹಾಲಪ್ಪನನ್ನು ``ಅರ್ಧರಾತ್ರಿಯ ಮರ್ದನ ದೇವೇಂದ್ರ`` ಅಂತಲೂ ಕರೆಯಲಿಲ್ಲ.
ಇವತ್ತು ಅಕಾಡೆಮಿಗಳ ನೇಮಕಾತಿಗೆ, ಪ್ರಶಸ್ತಿಗಳಿಗೆ ಸಾಲುಗಟ್ಟಿ ಸರಕಾರದೆದುರು ನಿಂತ ಮಹಾನ್ ಸಾಹಿತಿಗಳ ಪಟ್ಟಿಯೇ ಇದೆ. ಸಂತೋಷವೆಂದರೆ, ಇವೆಲ್ಲವುಗಳಿಂದಲೂ ದೂರ ಉಳಿದು ಕಡೆತನಕ ನಿಷ್ಠುರರಾಗಿ ನಡೆದುಕೊಂಡ ಪಿ.ಲಂಕೇಶ್, ದೇವನೂರ ಮಹಾದೇವ ಮುಂತಾದವರು ನಮ್ಮ ಪಾಲಿಗೆ, ನನ್ನಂಥವರ ಪಾಲಿಗೆ ಇವತ್ತಿಗೂ ಸಾಹಿತಿಯಾದವನೊಬ್ಬ ಹೇಗೆ ಬದುಕಬೇಕು ಎಂಬುದನ್ನು ತೋರಿಸಿದ್ದಾರೆ.

ವರ್ಷಗಟ್ಟಲೆ ಸೋಷಲಿಸ್ಟ್ ಚಳವಳಿಯಲ್ಲಿ ಜೊತೆಗಿದ್ದ ಪ್ರಕಾಶ್ ಗ್ರಾಮ ನೈರ್ಮಲ್ಯೀಕರಣ ಮತ್ತು ಮನೆಗೊಂದು ಪಾಯಖಾನೆ ಆಗಬೇಕು ಎಂದು ವಾದಿಸಿದರು. ಅವರನ್ನು ಗೇಲಿ ಮಾಡುವ ಪ್ರಸಂಗ ಬಂದಾಗ, ``ಕಕ್ಕಸ್ ಪ್ರಕಾಶ್`` ಅಂತಲೇ ಲಂಕೇಶ್ ಬರೆಯುತ್ತಿದ್ದರು. ಅದೇ ಸೋಷಲಿಸ್ಟ್ ಚಳವಳಿಯಲ್ಲಿ ಆತ್ಮೀಯರಾಗಿದ್ದ ಜೆ.ಎಚ್.ಪಟೇಲರನ್ನು ಗೇಲಿ ಮಾಡುವಾಗ ‘ಸೆರಗಿನ ಹಿಂದೆ ಪಟೇಲ’ ಎಂದು ಕರೆಯುತ್ತಿದ್ದರು. ನಿಜಕ್ಕೂ ಹತ್ತಿರದವರಾಗಿದ್ದ ಮಾಜಿ ಮಂತ್ರಿ ಹಾಗೂ ಸಂಸದ ವಿಶ್ವನಾಥ್ ವಿರುದ್ಧ ಕುರಿ ಬಲಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದುದಕ್ಕೆ ಮೈಸೂರಿನ ರಾಮದಾಸ್ ಅವರು ಬಹಿರಂಗ ಹೋರಾಟವನ್ನೇ ಹಮ್ಮಿಕೊಂಡಿದ್ದರು. ಇವೆಲ್ಲ ತಾತ್ವಿಕವಾಗಿ ಎಷ್ಟು ಸರಿಯಾಗಿರುತ್ತಿದ್ದ issueಗಳು ಎಂಬ ಮಾತು ಬೇರೆ. ಆದರೆ ಒಬ್ಬ ರಾಜಕಾರಣಿಯನ್ನು ವಿರೋಸುವ, ಗೇಲಿ ಮಾಡುವ, ಕೆಣಕುವ, ಎಚ್ಚರಿಸುವ ಹಕ್ಕು ಸಾಹಿತಿಗಳಿಗೆ ಇರುತ್ತಿತ್ತು. ಅದಕ್ಕೆ ಬೇಕಾದ ನೈತಿಕತೆ ಕೂಡ.

ಆದರೆ ಇವತ್ತು ವಿಧಾನ ಪರಿಷತ್ತಿನಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ಗೋವಿಂದ ಕಾರಜೋಳ ಅವರು ಸಾಹಿತಿಗಳ ವಿರುದ್ಧ ಕಿಡಿ ಕಾರಿದ್ದಾರೆ. ``ಇವರಿಗೆ ನಾವು ಕೋಟಿಗಟ್ಲೆ ಹಣ ಕೊಟ್ಟು ಇವರಿಂದ ಬೈಯಿಸಿಕೊಳ್ಳಬೇಕೇನು?`` ಅಂತ ಕೇಳಿದ್ದಾರೆ. ``ಸಾಹಿತ್ಯ ಅಕಾಡೆಮಿ, ಪರಿಷತ್ತು ರಾಜಕಾರಣಿಗಳಿಗೆ ಏನೂ ಗೊತ್ತಿಲ್ಲ ಎಂದು ಭಾವಿಸಿದಂತಿದೆ. ಗಂಗಾವತಿಯಲ್ಲಿ ನಡೆದ ಸಮ್ಮೇಳನದಲ್ಲಿ ಸಾಹಿತಿಗಳು ವಿಪರೀತ ಟೀಕೆ ಮಾಡಿದ್ದಾರೆ. ಇದರಿಂದ ನೋವಾಗಿದೆ`` ಎಂದು ಬಿಜೆಪಿಯ ಅಶ್ವತ್ಥ ನಾರಾಯಣ ಮಾತನಾಡಿದ್ದಾರೆ. ತಕ್ಷಣ ``ಸಾಹಿತಿಗಳ ವಿರುದ್ಧ ಕಡಿವಾಣ ಹಾಕಲು ಆಲೋಚನೆ ಮಾಡಬೇಕು``’ ಎಂದು ಕಾರಜೋಳ ಗುಡುಗಿದ್ದಾರೆ. ``ಸಾಹಿತಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು`` ಎಂದು ಸಚಿವ ಸೋಮಣ್ಣ ತಿದಿಯೊತ್ತಿದ್ದಾರೆ.

ಒಂದು ಚಿಕ್ಕ ಮಾತು.

ಅಕಾರ ವಹಿಸಿಕೊಂಡ ನಂತರ ಸುಮಾರು ಎರಡು ವರ್ಷ ಯಡಿಯೂರಪ್ಪ ಕನ್ನಡ ಸಂಸ್ಕೃತಿ ಇಲಾಖೆಗೆ ಒಬ್ಬ ಮಂತ್ರಿಯನ್ನೇ ನೇಮಿಸಿರಲಿಲ್ಲ. ಸ್ವತಃ ಗೋವಿಂದ ಕಾರಜೋಳರು ದುಷ್ಟರಲ್ಲ ಎಂಬುದು ನನಗೆ ಗೊತ್ತು. ಗಂಗಾವತಿಯಲ್ಲಿ ರಾಜಕಾರಣಿಗಳನ್ನ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನಮ್ಮ ಕವಿ ಸಾಹಿತಿಗಳು ಚುಚ್ಚಿದ್ದು, ಕೆಣಕಿದ್ದು, ಬೈದಿದ್ದು-ಪತ್ರಿಕೆಗಳಲ್ಲಿ ಓದಿದ್ದೇನೆ. ಕನ್ನಡದ ಕೆಲಸಕ್ಕೆ ಹಿಂಜರಿಯುವ ಶಾಸಕರನ್ನು ಸೋಲಿಸಿ ಎಂಬ ಮಾತನ್ನು ಸ್ವತಃ ಸಿ.ಪಿ.ಕೆ ಹೇಳಿದ್ದನ್ನೂ ಓದಿದ್ದೇನೆ. ಇಂಥವೇ ಮಾತುಗಳನ್ನು ಇನ್ನಷ್ಟು ಸಾಹಿತಿಗಳು ಆಡಿರಬಹುದು. ‘ಹಾಗಾದರೆ ಪ್ರತಿ ರಾಜಕಾರಣಿಯೂ ಭ್ರಷ್ಟ ಎಂಬುದನ್ನು ಜನರ ಮನದಲ್ಲಿ ಬಿತ್ತುತ್ತೀರಾ? ನಾವು ನಾಳೆ ಶಾಸನ ಸಭೆಗೆ ಬರುವ ನೈತಿಕತೆ ಉಳಿಸಿಕೊಳ್ಳುವುದಾದರೂ ಹೇಗೆ?’ ಎಂದು ಸೋಮಣ್ಣ ಕೇಳಿದುದನ್ನು ಗಮನಿಸಿದರೆ ಇಡೀ ರಾಜಕಾರಣೀ ಸಮೂಹದ ಸಮಸ್ಯೆಯೇನು ಎಂಬುದು ಅರ್ಥವಾಗುತ್ತದೆ. ಎಲ್ಲೋ ವೈ.ಎಸ್.ವಿ.ದತ್ತ ಮತ್ತು ಸುದರ್ಶನ್‌ರಂಥವರು ಸಾಹಿತ್ಯ, ಪ್ರಜಾಪ್ರಭುತ್ವ, ಟೀಕೆಯ ಹಿಂದಿನ ಸಾಹಿತಿಗಳ ಮನಸು ಮತ್ತು ವಿಷಾದ ಅರ್ಥ ಮಾಡಿಕೊಂಡು ಮಾತನಾಡಿದ್ದಾರೆ.

Fine, ನಿಜವಾದ ಸಮಸ್ಯೆಯೇನೆಂದರೆ ಒಟ್ಟಾರೆಯಾಗಿ ರಾಜಕಾರಣಿಗಳಿಗೆ ಮುಖಭಂಗವಾಗಿದೆ. ಸುರೇಶ್ ಕಲ್ಮಾಡಿ, ಎ.ರಾಜಾ, ಕನಿಮೋಳಿ, ಹಾಲಪ್ಪ, ಕಟ್ಟಾ ನಾಯ್ಡು, ಅವನ ಮಗ, ಖುದ್ದು ಯಡಿಯೂರಪ್ಪ, ಕೃಷ್ಣಯ್ಯ ಶೆಟ್ಟಿ ಮುಂತಾದವರು ಸಾಲುಗಟ್ಟಿ ಜೈಲಿಗೆ ಹೋದದ್ದು ನೋಡಿದಾಗ ಉದ್ಭವಿಸದಿದ್ದ ಈ ನೈತಿಕತೆಯ ಪ್ರಶ್ನೆ ರಾಜಕಾರಣಿಗಳಿಗೆ ಸಾಹಿತಿಗಳ ಮಾತು ಕೇಳಿದಾಗಷ್ಟೆ ಉದ್ಭವವಾಯಿತೇ? ಜೈಲಿನಿಂದ ಹೊರಬಿದ್ದ ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ಮೆರೆದಾಗ, ಅವರಿಗಾಗಲೀ ಅವರನ್ನು ಮೆರೆಸಿದವರಿಗಾಗಲೀ ಇರದಿದ್ದ ನೈತಿಕತೆಯ ಪ್ರಶ್ನೆ ಈಗ ಸಾಹಿತಿಗಳ ಮಾತು ಕೇಳಿದಾಗ ಅಬ್ಬರಿಸಿ ಎದ್ದು ನಿಂತಿತೆ?

ಒಂದು ಕ್ಷಣ ನಿಲ್ಲಿ : ಅತ್ಯಂತ ಸಂಪನ್ನರಾದ ಸಿ.ಪಿ.ಕೆ. ಜಾಗದಲ್ಲಿ ಶಿವರಾಮ ಕಾರಂತರು ಸಮ್ಮೇಳನಾಧ್ಯಕ್ಷರಾಗಿದ್ದಿದ್ದರೆ ಅವರು ಯಾವ ಧಾಟಿಯಲ್ಲಿ ಮಾತನಾಡುತ್ತಿದ್ದರು ಎಂಬುದನ್ನು ನೆನಪಿಸಿಕೊಳ್ಳಿ. ಲಂಕೇಶರಿದ್ದಿದ್ದರೆ? ಸಾಹಿತ್ಯ ಎಂಬುದು ಕೇವಲ ಕತೆ ಕಾದಂಬರಿಯಲ್ಲ. ರಾಜಕಾರಣವೂ ಸೇರಿದಂತೆ ಬದುಕಿನ ಹಾಗೂ ಜಗತ್ತಿನ ಪ್ರತಿಯೊಂದನ್ನೂ ಒಳಗೊಂಡ, ಒಳಗೊಳ್ಳುವಂತಹ ಅಗಾಧ ಚೇತನ. ಓದುವ ಕವಿ ಹಕ್ಕಿಯ ಬಗ್ಗೆ ಓದಿದಂತೆಯೇ ಜೈಲು ಹಕ್ಕಿ ಮಂತ್ರಿಗಳ ಬಗ್ಗೆಯೂ ಕವಿತೆ ಓದಬಹುದು. ಕಡಿವಾಣ, ಮೂಗುದಾರ, ಕಾಂಡೋಮು ಹಾಕಲು ಇವರ‍್ಯಾರು? ತನ್ನ ಅಂತರಂಗದ ತಪಸ್ಸು, ಚಿಂತನೆ, ಮಂಥನಗಳನ್ನು ಕುರಿತು ಬರೆದಂತೆಯೇ ಒಬ್ಬ ಕವಿ-ಲೇಖಕ ತನ್ನ ಸುತ್ತಲಿನ ಸಮಾಜ, ಜಾತಿ ಪದ್ಧತಿ, ಕನ್ನಡದ ಸ್ಥಿತಿಗತಿ, ಅಣ್ಣಾ ಹಜಾರೆಯ ಚಳವಳಿ, ಗಣಿ ಹಗರಣ, ಅಮೆರಿಕದ ಸೋಗಲಾಡಿತನ-ಹೀಗೆ ಏನನ್ನು ಬೇಕಾದರೂ, ಹೇಗೆ ಬೇಕಾದರೂ ವ್ಯಕ್ತಪಡಿಸಿಯಾನು. ಅದಕ್ಕೊಂದು ರೂಪು ನೀಡಿಯಾನು. ಅವನು ಬರೆದದ್ದಕ್ಕೆ ಕಲೆಯ ಚೌಕಟ್ಟು ಇದ್ದರೆ ಅದು ಕಲಾಕೃತಿ. ಇರದೆ ಹೋದರೆ, ಅದರ ಕಿಮ್ಮತ್ತು ತೀರ್ಮಾನಿಸಿ ಕಸದ ಬುಟ್ಟಿಗೆ ವಿಮರ್ಶಕ ಹಾಕುತ್ತಾನೆ. ಅಷ್ಟೆ.

ನಮ್ಮ ಸಮ್ಮೇಳನಗಳ ನಿಜವಾದ ಸಮಸ್ಯೆಯೆಂದರೆ, ಇವು ಸರ್ಕಾರಿ ಕೃಪಾ ಪೋಷಿತ ಕನ್ನಡದ ಹೆಸರಿನ ಜಾತ್ರೆಗಳು. ನಲ್ಲೂರು ಪ್ರಸಾದ್ ಯಾವ ಜಾಯಮಾನದ ಸಾಹಿತಿಯೋ? ಎಂಥ ಶ್ರೇಷ್ಠ ಕವಿಗಳೋ? ನಾನು ಕಾಣೆ. ಆದರೆ ಅಂಥವರು ಕನ್ನಡ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷರಾದಾಗ ಅವರು ಕನ್ನಡದ ಸಂಗತಿ ಹೆಚ್ಚೂ ಕಡಿಮೆ ಮರೆತು ಬಿಡುತ್ತಾರೆ. ಕ.ಸಾ.ಪ ಅಧ್ಯಕ್ಷರಿಗೆ ಮಿನಿಸ್ಟರ್ ದರ್ಜೆಯ ಸ್ಥಾನಮಾನ ಕೊಡಬೇಕು, ಇನ್ನಷ್ಟು ಭತ್ಯೆ ಕೊಡಬೇಕು-ಇತ್ಯಾದಿಗಳ ಪಟ್ಟಿಯಿಟ್ಟುಕೊಂಡು ಕಾರಜೋಳ, ಯಡ್ಡಿ, ಸದಾನಂದ ಗೌಡ ಮುಂತಾದವರ ಬೆನ್ನು ಬಿದ್ದು ಅಲೆಯುವ ಇವರಿಗೆ ಮಂತ್ರಿ ಮಾಗಧರ ಬಗ್ಗೆ ಆರಾಧನೆ ಆರಂಭವಾಗಿ ಬಿಡುತ್ತದೆ. ಸಮ್ಮೇಳನಗಳನ್ನು ನಡೆಸಲಿಕ್ಕೆ ಕೋಟ್ಯಂತರ ಅನುದಾನ ಕೇಳುತ್ತಾರೆ. ಅದು ಸಿಕ್ಕೂ ಸಿಗುತ್ತದೆ.

ಆದರೆ ಸಮ್ಮೇಳನದಲ್ಲಿ ಏನನ್ನು ಚರ್ಚಿಸಬೇಕು? ಅದಕ್ಕೆ ಯಾರನ್ನು ಕರೆಸಬೇಕು? ಎಂಬ ಪ್ರಶ್ನೆ ಬಂದಾಗಲೇ ಈ ಪಾಕಡಾಗಳ ಕೆಲಸ ಆರಂಭವಾಗಿಬಿಡುತ್ತದೆ. ಈ ಸಲದ ಆಹ್ವಾನ ಪತ್ರಿಕೆಯನ್ನೇ ನೋಡಿದೆನಲ್ಲ? ಸಮರ್ಥರು, ಯೋಗ್ಯರು ಅನ್ನಿಸಿಕೊಳ್ಳುವಂಥ ಹತ್ತು ಜನರಾದರೂ ಸಾಹಿತಿಗಳು, ಚಿಂತಕರು ಅದರಲ್ಲಿ ಇದ್ದಾರಾ? ಯಾರು ನಿರ್ದಾಕ್ಷಿಣ್ಯವಾಗಿ ಮಾತನಾಡುವುದಿಲ್ಲವೋ, ಯಾರು ಸರ್ಕಾರಕ್ಕೆ ಅಪ್ರಿಯರಲ್ಲವೋ, ಯಾರು ಅರ್ಧ ಕುಕ್ಕಿದ ಹೇನಿನಂತೆ ಮಾತನಾಡಿ ಸುಮ್ಮನಾಗುತ್ತಾರೋ-ಅಂಥವರನ್ನೇ ಆಯ್ದು ಗೋಷ್ಠಿಗಳಿಗೆ ಹಾಕುತ್ತಾರೆ. ಪ್ರತಿ ಗೋಷ್ಠಿಗೂ ಒಬ್ಬ ಸ್ವಾಮಿಯ ‘ದಿವ್ಯ ಸಾನ್ನಿಧ್ಯ’ ಕಂಪಲ್ಸರಿ. ‘ಕೌಟುಂಬಿಕ ಸಾಮರಸ್ಯ’ ಅಂತ ಇಟ್ಟುಕೊಳ್ಳುವ ಒಂದು ಗೋಷ್ಠಿಯ ಜೊತೆಗೇ ‘ಲೋಕಪಾಲ ಮಸೂದೆಯ ಸಾಧಕ ಬಾಧಕಗಳು’ ಅಂತಲೂ ಒಂದು ಇಟ್ಟುಕೊಳ್ಳಬಹುದಲ್ಲ? ಉಹುಂ, ಅಂಥವುಗಳ ಬಗ್ಗೆ ಅಲ್ಲಿ ಮಾತೇ ಇರುವುದಿಲ್ಲ. ಏಕೆಂದರೆ, ಸಮ್ಮೇಳನಗಳಿಗೆ ಕಾಸು ಕೊಡುವವರೇ ಲೋಕಪಾಲ ಹತ್ಯೆಗೆ ಹಪಹಪಿಸುತ್ತಿರುವ ಶಿಶುಪಾಲರು! ಇದೆಲ್ಲದರ ಮಧ್ಯೆಯೂ ಒಬ್ಬ ತುಂಟ ಕವಿ, ಚತುರ ಭಾಷಣಕಾರ ಸರ್ಕಾರದ ವಿರುದ್ಧ, ರಾಜಕಾರಣಿಗಳ ವಿರುದ್ಧ ಒಂದು ಮಾತನಾಡಿದರೆ-ಗೋವಿಂದ ಪ್ರಭುವಿಗೆ ಮೈಯೆಲ್ಲ ಖಾರ-ಸೋಮಣ್ಣನೆಂಬ ‘ನೈತಿಕಾ’ವಧೂತರಿಗೆ ಜೋಳದ ತೆನೆ ಕೊಡವಿದ ಅನುಭವ.

ಇದಕ್ಕೆಲ್ಲ ಇರುವುದು ಒಂದೇ ಉತ್ತರ. ಸರ್ಕಾರಿ ಕೃಪಾ ಪೋಷಿತ ಸಮ್ಮೇಳನಗಳನ್ನು ಸಾಹಿತಿಗಳು ನಿಷ್ಠುರವಾಗಿ ತಿರಸ್ಕರಿಸಬೇಕು, ಧಿಕ್ಕರಿಸಬೇಕು, ದೂರ ಉಳಿಯಬೇಕು. ಸಾಹಿತ್ಯ ಪರಿಷತ್ತನ್ನು ಖಂಡಿತವಾಗ್ಯೂ ಆರು ಕೋಟಿ ಜನ ಸಲುಹಬಲ್ಲರು. ಅದು ಸರ್ಕಾರದ ಮುಂದೆ ಮಂಡಿಯೂರುವುದನ್ನು ನಿಲ್ಲಿಸಬೇಕು. ಇಷ್ಟಾಗಿ ಗೋವಿಂದ ಕಾರಜೋಳರಿಗೆ ನನ್ನದು ಒಂದು ಪ್ರಶ್ನೆ :

``ಕೋಟ್ಯಂತರ ರುಪಾಯಿ ಕೊಟ್ಟು ಇವರ ಕೈಲಿ ಬೈಸಿಕೊಳ್ಳಬೇಕಾ`` ಅಂದಿದ್ದಾರೆ.

ಕೋಟ್ಯಂತರ ಕೊಟ್ಟಿರಿ ನಿಜ. ಯಾರ ಮನೆಯದು ಕೊಟ್ಟಿರಿ?

ಮುಂದಿನ ಸಮ್ಮೇಳನದಲ್ಲಾದರೂ ಉತ್ತರ ಹೇಳಿ.

-ರವಿ ಬೆಳಗೆರೆ

Read Archieves of 19 December, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books