Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ಮಕರ ಸಂಕ್ರಾಂತಿಯ ದಿನ ಸೂರ್ಯ ಪಥ ಬದಲಿಸುವ ಘಳಿಗೆ

ಜನವರಿ 14.

ಶನಿವಾರದ ಮಕರ ಸಂಕ್ರಾಂತಿಯ ಸಂಜೆ ಆರು ಗಂಟೆಯ ಘಳಿಗೆ. ನನ್ನ ಪಾಲಿಗೆ ಅದು ಅತ್ಯಂತ ಮಹತ್ವಪೂರ್ಣವಾದ ದಿನ. ಏಕೆಂದರೆ ಅವತ್ತು ನೀವೆಲ್ಲ ಸಿಗುತ್ತೀರಿ. ಬಾಯ್ತುಂಬ ಎಳ್ಳು-ಬೆಲ್ಲ.
‘ಹಿಮಾಗ್ನಿ’ ಅವತ್ತು ಬಿಡುಗಡೆಯಾಗಲಿದೆ.

ಸರಿಯಾಗಿ ಒಂದು ವರ್ಷದ ಮೇಲೆ ಒಂದೂವರೆ ತಿಂಗಳಾದವು ನಿಮ್ಮನ್ನೆಲ್ಲ ನೋಡಿ, ಮಾತನಾಡಿ. ‘ಕಾಮರಾಜ ಮಾರ್ಗ’ ಮತ್ತು ‘ಅನಿಲ್ ಲಾಡ್ ಹಾಗೂ ನಲವತ್ತು ಕಳ್ಳರು’ ಎಂಬೆರಡು ಪುಸ್ತಕಗಳ ನಂತರ ನಾನು ಆಲ್ ಮೋಸ್ಟ್ ಭೂಗತನಾಗಿದ್ದೆ, ಪುಸ್ತಕಗಳ ಮಟ್ಟಿಗೆ. ಅನಾರೋಗ್ಯ, ಎಂಥದೋ ಖಿನ್ನತೆ, ತೂಕವಿಳಿಸಿಕೊಳ್ಳುವ ಹುಚ್ಚು ಹಂಬಲ, ಸಿಕ್ಕದ್ದನ್ನು ಓದುವ ಹಪಹಪಿ, ದೇಶ-ವಿದೇಶಗಳ ಪ್ರಯಾಣ-ಹೀಗೆ ಕೂತು ಕುಂಡಿಯೂರಿ ಬರೆಯುವುದು ಸಾಧ್ಯವೇ ಆಗಿರಲಿಲ್ಲ.

ಮರದ ಟೊಂಗೆಗಳ ಮಧ್ಯದ ಬಿಸಿಲಿನಲ್ಲಿ ಸುಮ್ಮನೆ ಸೋಮಾರಿಯಾಗಿ ಕುಳಿತಿದ್ದ ಮಂಗಕ್ಕೆ ಒಂದು tail twister ಬೇಕಾಗಿತ್ತು. ಬಾಲ ಹಿಂಡಿ ಅಂಡು ಚಿಗುಟುವ ಕೆಲಸ. ಅದನ್ನು ಮಾಡಿದ್ದು ಉತ್ತರ ಕನ್ನಡದ ಬಪ್ಪನ ಕೇರಿಯವರಾದ ದತ್ತಾತ್ರಯ ಹೆಗಡೆ. ಅದನ್ನವರು ಜರ್ಮನಿಯಲ್ಲಿ ಕುಳಿತೇ ಮಾಡಿದರು. ಆಗ ಉರಿಯತೊಡಗಿದ್ದೇ, ‘ಹಿಮಾಗ್ನಿ’. ಅದನ್ನು ಮುಗಿಸುವ ಹೊತ್ತಿಗೆ ಸಾಕು ಬೇಕಾಗಿತ್ತು. ಆದರೆ ನಿಜಕ್ಕೂ ಒಂದು ಆಂಬೀಷಿಯಸ್ ಪುಸ್ತಕ ಬರೆದು ಮುಗಿಸಿದ ಸಮಾಧಾನ. ಈಗ ಮುದ್ರಣ ಆರಂಭವಾಗಿದೆ. ಜನವರಿ 14ಕ್ಕೆ ಸಂಜೆ ಇಲ್ಲೇ ಪದ್ಮನಾಭ ನಗರದ ‘ಅಟಲ ಬಿಹಾರಿ ವಾಜಪೇಯಿ’ ಮೈದಾನದಲ್ಲಿ ಬಿಡುಗಡೆ ಮಾಡುತ್ತಿದ್ದೇನೆ.

ನನ್ನ ಪ್ರಿಯ ಮಿತ್ರ ಪ್ರಕಾಶ್ ರೈ ಪುಸ್ತಕ ಬಿಡುಗಡೆ ಮಾಡಲು ಒಪ್ಪಿದ್ದಾನೆ. ಅದೇ ದಿನ ‘ಉಡುಗೊರೆ’ ಪುಸ್ತಕವೂ ಬಿಡುಗಡೆಯಾಗಲಿದೆ. ಒಂದು ಸಿ.ಡಿ.? Yes, ಅದನ್ನೂ ಕೊಡುತ್ತೇನೆ. ಇದು ಪ್ರಾಮಿಸ್.
ಇನ್ನೊಂದು ಮುಖ್ಯಸಂಗತಿಯೆಂದರೆ,

ಅಂದೇ, ಜನವರಿ 14ರ ಬೆಳಿಗ್ಗೆ ಹತ್ತು ಗಂಟೆಗೆ ಗಾಂಧಿ ಬಜಾರ್‌ನಲ್ಲಿ ನನ್ನ ಪುಸ್ತಕ ಮಾರಾಟದ ಮಳಿಗೆ ‘ಬಿ.ಬಿ.ಸಿ’ ಉದ್ಘಾಟನೆಯಾಗಲಿದೆ. ಗಾಂಧಿ ಬಜಾರ್‌ಗೆ ನಾನಿಟ್ಟ ಹೆಸರು ‘ಹೂವು ಹಣ್ಣಿನ ಬೀದಿ’. ಅಲ್ಲಿಂದ ನೀವು ಹೂವು-ಹಣ್ಣಿನ ಅಂಗಡಿಗಳನ್ನು ತೆರವು ಮಾಡಿಸಿ ಬಿಟ್ಟರೆ ಉಳಿಯೋದು ಏನೂ ಇಲ್ಲ. ಹೂವು ಕೊಳ್ಳಲಿಕ್ಕೆ, ಹಣ್ಣು ಕೊಳ್ಳಲಿಕ್ಕೆ, ವಿದ್ಯಾರ್ಥಿ ಭವನದಲ್ಲಿ ದೋಸೆ ತಿನ್ನಲಿಕ್ಕೆ, ರೋಟಿಘರ್‌ನಲ್ಲಿ ಊಟ ಮಾಡುವುದಕ್ಕೆ ಬಂದಾಗ ಬೆಳಗೆರೆಯ ಈ ಪುಟ್ಟ ಪುಸ್ತಕದ ಅಂಗಡಿ ‘ಬೆಳಗೆರೆ ಬುಕ್ಸ್ ಅಂಡ್ ಕಾಫಿ’ ನೆನಪಾದರೆ ಸಾಕು.

ಕೇವಲ ನನ್ನ ಪುಸ್ತಕವನ್ನಲ್ಲ, ಕನ್ನಡ-ಇಂಗ್ಲಿಷಿನ ಸಮಸ್ತ ಲೇಖಕರವೂ ಪುಸ್ತಕಗಳನ್ನ ಹಾಗೂ ಸಿಡಿಗಳನ್ನ ಅಲ್ಲಿ ಮಾರಾಟ ಮಾಡಲಾಗುವುದು: ಬೆಳಗ್ಗೆ 9ರಿಂದ ರಾತ್ರಿ 9ರ ತನಕ. ಕೆಲವು ಸಂಜೆಗಳಲ್ಲಿ ಬಿಡುವಾದಾಗ ನಾನೇ ಬಂದು ಪುಸ್ತಕ ಮಾರಲು ಕುಳಿತಿರುತ್ತೇನೆ. ಉಚಿತ ಕಾಫಿಯ ಜೊತೆಗೆ, ನೀವು ಬಯಸಿದ್ದೇ ಆದರೆ ನನ್ನದೊಂದು ಆಟೋಗ್ರಾಫ್. ಪ್ರತೀವಾರ ಕನ್ನಡದ ಹಿರಿಯ ಸಾಹಿತಿಯೊಬ್ಬರನ್ನು ಕರೆಯಿಸಿ, ಒಂದು ಸಂಜೆ ಅವರೊಂದಿಗೆ ಹರಟುವ, ಅವರ ಪುಸ್ತಕಕ್ಕೆ ಆಟೋಗ್ರಾಫ್ ತೆಗೆದುಕೊಳ್ಳುವ, ಫೊಟೋ ತೆಗೆಸಿಕೊಳ್ಳುವ ವ್ಯವಸ್ಥೆಯನ್ನೂ ಮಾಡಲಿದ್ದೇನೆ.
ಒಟ್ಟಿನಲ್ಲಿ, ಬೆಳಿಗ್ಗೆ ಹತ್ತು ಗಂಟೆಗೆ ನೀವು ಗಾಂ ಬಜಾರ್‌ಗೆ ಬರುತ್ತೀರಿ. ಅಂಗಡಿಯನ್ನು ಕಷ್ಟಪಟ್ಟು ಹುಡುಕುವ ಪ್ರಶ್ನೆಯೇ ಇಲ್ಲ. ಆ ಕಡೆಯಿಂದ ಬಂದರೆ ವಿಶ್ವ ಪ್ರಸಿದ್ಧ ‘ವಿದ್ಯಾರ್ಥಿ ಭವನ’ದಿಂದ ಐದನೆಯ ಮಳಿಗೆ. ಈ ಕಡೆಯಿಂದ ಬಂದರೆ ‘ರೋಟಿ ಘರ್’ನಿಂದ ಎರಡನೆಯ ಮಳಿಗೆ. ದಯವಿಟ್ಟು ಬನ್ನಿ.

ಪದ್ಮನಾಭನಗರದೊಳಕ್ಕೆ, ದೇವೆಗೌಡರ ಪೆಟ್ರೋಲ್ ಬಂಕ್ ದಾಟಿ ಬಂದರೆ ಒಂದು ಪುಟ್ಟ ಸರ್ಕಲ್ ಸಿಗುತ್ತದೆ. ಅದರ ಬಲಕ್ಕಿರುವುದೇ ಬಯಲು. ನಿಮಗೆ ಮೆಜೆಸ್ಟಿಕ್‌ನಿಂದ 12B, ಮಾರ್ಕೆಟ್‌ನಿಂದ ಬರಲು 15A ಹಾಗೂ ಉತ್ತರಹಳ್ಳಿಗೆ ಹೋಗುವ 210 ನಂಬರಿನ ಅಷ್ಟೂ ಸೀರೀಸ್‌ನ ಬಸ್ಸುಗಳೂ ಬರುತ್ತವೆ.

ಬಂದೇ ಬರುತ್ತೇನೆಂದು ನಿರ್ಧರಿಸಲು ನೀವು ಸಿದ್ಧರಿರಬೇಕಷ್ಟೆ.

ಬರಮಾಡಿಕೊಳ್ಳಲು ಮತ್ಯಾರು ಬೇಕು, ನಾನೇ ಇರುತ್ತೇನೆ!

-ಬೆಳಗೆರೆ

Read Archieves of 17 December, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books