Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ಅತಿಚಿಕ್ಕ ಡೀಟೈಲ್ಸೇ ಆದರೂ ಕೊಡುವ ಹೊಡೆತ ದೊಡ್ಡದು

ಅಂಥ ವಿದ್ಯೆಯೇನಲ್ಲ.

ಆದರೆ ಎಲ್ಲರಿಗೂ ಅದು ಬರುವುದಿಲ್ಲ. ನಾನು ವರ್ಷಗಟ್ಟಲೆ ಪ್ರಯತ್ನ ಪಟ್ಟು ಅದನ್ನು ರೂಢಿಸಿಕೊಂಡಿರುವುದು ಹೌದು. ಆದರೆ ಅದು ನನಗೆ ಗೊತ್ತಿಲ್ಲದೆಯೇ ಆದ ಪ್ರಯತ್ನ. ಬಹುಶಃ ಅದು ನನ್ನೊಳಗಿನ ಬರಹಗಾರನ ಛಿಛಿb ಆಗಿತ್ತು. ಪತ್ರಿಕೋದ್ಯಮಕ್ಕೆ ಬರುವುದಕ್ಕೆ ಮುಂಚೆಯೇ ನಾನು ಅದನ್ನು ರೂಢಿಸಿಕೊಂಡಿದ್ದೆ. ಈಗನ್ನಿಸುತ್ತದೆ:ಅದನ್ನು ಹಾಗೆ ರೂಢಿಸಿಕೊಂಡಿದ್ದರಿಂದಲೇ ನನ್ನಲ್ಲಿ ಶ್ರದ್ಧೆ ಬೆಳೆಯಿತು. ಶ್ರದ್ಧೆಯೊಂದಿಗೆ ಸಹಜವಾಗಿ ಬೆಳೆಯುವಂತಹುದು ನೆನಪಿನ ಶಕ್ತಿ. ಅಂಥದೊಂದು ‘ವಿದ್ಯೆ’ಯನ್ನು ಇಂಗ್ಲಿಷಿನಲ್ಲಿ attention to the details ಅನ್ನುತ್ತಾರೆ.

ತುಂಬ ಆರ್ಡಿನರಿಯಾದ ಒಂದು ಉದಾಹರಣೆ ಕೊಡೋದಾದರೆ, ಹೆಣ್ಣು ನೋಡೋದು. ನಾವೆಲ್ಲ ಚಿಕ್ಕವರಿದ್ದಾಗ ನನ್ನ ಸೋದರ ಸಂಬಂ ಅಕ್ಕಂದಿರನ್ನು ನೋಡಲು ಯಾರಾದರೂ ಬರುತ್ತಾರೆ ಅಂದರೆ ಸಾಕು : ಅದು ಅಕ್ಷರಶಃ ಹಬ್ಬವೇ. ನನ್ನ ಅಕ್ಕಂದಿರ ವಿಷಯ ಬಿಡಿ : ಅವರು ಇನ್ನಿಲ್ಲದ ಮುತುವರ್ಜಿಯಿಂದ ಸಿಂಗರಿಸಿಕೊಳ್ಳುತ್ತಿದ್ದರು. ಆದರೆ ಮನೆಯ ಹುಡುಗರಾದ ನಾವು ಚಿಳ್ಳೆಪಿಳ್ಳೆಗಳು? ನಾವೂ ಮಟ್ಟಸವಾಗಿ ಕಾಣಬೇಕಿತ್ತಲ್ಲವೆ? ಕೆಂಡ ಹಾಕಿದ ತಂಬಿಗೆಗೆ ಬಟ್ಟೆಯ ಹಿಡಿಕೆ ಸುತ್ತಿ ಅದರಿಂದ ಚಡ್ಡಿ ಅಂಗಿ ಇಸ್ತ್ರಿ ಮಾಡಿ, ಮಾಸಿದ ನೆತ್ತಿಗೆ ಎಣ್ಣೆ ಹಚ್ಚಿ, ಗೆರೆ ಕೊರೆದಂತೆ ಬೈತಲೆ ತೆಗೆದು ತಲೆ ಬಾಚಿ ನಮಗೂ ಮಾಘ ಸ್ನಾನದ ಸಿಂಗಾರ. ಆದರೆ ನಮಗಿರುತ್ತಿದ್ದುದೆಲ್ಲ ನೋಡಲು ಬರುವವರ ಜೊತೆಗೆ ನಮಗೂ ತಿನ್ನಲು ಕೊಡುತ್ತಿದ್ದ ಉಪ್ಪಿಟ್ಟು-ಕೇಸರಿಭಾತ್‌ನ ಕಡೆಗೆ ಗಮನ. ಹಾಗೆ ಅಕ್ಕಂದಿರನ್ನು ನೋಡಲು ಯಾರೇ ಬಂದರೂ ನಮ್ಮ ಬೀದಿಯ ಒಂದು ಅಜ್ಜಿ ನಮ್ಮ ಮನೆಗೆ ಬರುತ್ತಿತ್ತು. ಆಕೆಯ ಹೆಸರು ನರಸಮ್ಮ. ನಾವು ನರಸಮ್ಮವ್ವ ಅನ್ನುತ್ತಿದ್ದೆವು. ಕುಳ್ಳನೆಯ, ಚುರುಕುಗಣ್ಣಿನ, ಸಕೇಶಿ ವೃದ್ಧೆ.

ಇವತ್ತಿಗೆ ಅಂಥ ಸಂಪ್ರದಾಯಗಳು ನಶಿಸಿ ಹೋಗಿವೆ. ಆದರೆ ಎದುರಿಗೆ ಗಂಡು ಬಂದು ಕುಳಿತಾಗ ಅಲ್ಲಿದ್ದವರಿಗೆಲ್ಲ ಮದುವೆಯಾಗಲಿರುವ ಹುಡುಗಿಯೇ ತಿಂಡಿ, ಚಹ ತಂದು ಕೊಡಬೇಕು. ಉದ್ದೇಶವಿಷ್ಟೆ : ಹುಡುಗಿಯ ನಡಿಗೆ ಸರಿಯಿದೆಯಾ? ಕುಂಟುತ್ತಾಳಾ? ನಡೆಯುವಾಗ ಸೀರೆ ಶಬ್ದವಾಗುತ್ತದಾ? ಶಬ್ದವಾದರೆ ಅದು ಕೆಲವರಿಗೆ ಅಸಮ್ಮತ. ಆಮೇಲೆ ಎಲ್ಲರ ಮಧ್ಯೆ ಕೂತು ಒಂದು ಹಾಡು ಹೇಳಮ್ಮ ಅನ್ನುತ್ತಿದ್ದರು. ಹಾಡು ಬರುತ್ತಿತ್ತೋ ಇಲ್ಲವೋ : ಒಂದು ದೇವರ ನಾಮ ಹಾಡುತ್ತಿದ್ದಳು. ಉದ್ದೇಶವಿಷ್ಟೆ : ಹುಡುಗಿಗೆ ಉಗ್ಗು (ಗುಕ್ಕು) ಅಥವಾ ತೊದಲು, ಕೆಲವು ಅಕ್ಷರಗಳ ಉಚ್ಚಾರಣೆ ಬಾರದಿರುವಿಕೆ-ಇಂಥದ್ದೇನಾದರೂ ದೋಷವಿದೆಯಾ?

ಇದೆಲ್ಲ ನಮ್ಮ ಕಣ್ಣೆದುರಿಗೆ ಆಗುತ್ತಿದ್ದಂಥವು. ಹುಡುಗಿಯನ್ನು ಒಳಕ್ಕೆ ಕರೆದೊಯ್ದು ಅಕ್ಷರಶಃ ದಾರವೊಂದನ್ನು tapeನಂತೆ ಬಳಸಿ ಅವಳ ಉದ್ದ, ಗಾತ್ರ, ಸೊಂಟ, ಕೈಗಳ ಉದ್ದ, ಕಾಲಿನ ಉದ್ದ-ಹೀಗೆ ಪ್ರತಿಯೊಂದನ್ನೂ ಅಳೆದು ಬಿಡುತ್ತಿದ್ದರು. ಇನ್ನೂ ವಿಲಕ್ಷಣವೆಂದರೆ, ಹುಡುಗಿಗೆ ಗಂಡನಾಗಲಿರುವವನ ತಾಯಿ, ಅಂದರೆ ಭಾವೀ ಅತ್ತೆ ಅಕ್ಷರಶಃ ಬಚ್ಚಲಿನಲ್ಲಿ ಬೆತ್ತಲೆ ಕೂಡಿಸಿ ಸ್ನಾನ ಮಾಡಿಸಿ ಬಿಡುವ ಸಂಪ್ರದಾಯವಿತ್ತು. ಅಕಸ್ಮಾತ್ ಹುಡುಗಿಗೆ ತೊನ್ನು, ಇಸುಬು, ವಿಕಾರವಾಗಿ ಕಾಣುವ ಗುರುತು ಇತ್ಯಾದಿಗಳಿದ್ದರೆ? ಕನ್ಯಾ ಪರೀಕ್ಷೆಯೆಂಬ ಈ ವಿಲಕ್ಷಣ ಸಂಪ್ರದಾಯದಲ್ಲಿ ಏನೆನೆಲ್ಲ ನಡೆಯುತ್ತಿತ್ತೋ ಭಗವಂತ ಬಲ್ಲ.

ಆದರೆ ಇದೆಲ್ಲ ನಡೆಯುವ ಹೊತ್ತಿಗೆ ಈ ನರಸಮ್ಮಜ್ಜಿ ಬಂದಿರುತ್ತಿದ್ದಳಲ್ಲ? ಆಕೆ ಹುಡುಗಿಯನ್ನು ನೋಡಲು ಬಂದ ಬೀಗರ ತಲಾಷು-ತರದೂದು ಮಾಡಿ ಬಿಡುತ್ತಿದ್ದಳು. ಈ ಕುಟುಂಬ ಎಲ್ಲಿಯದು? ಈಗ ಬಂದಿರುವವರೆಲ್ಲ ಯಾರು? ಮಧ್ಯದ ಸೊಸೆಯೇಕೆ ಬಂದಿಲ್ಲ? ಮನೆಯಲ್ಲಿ ಏನಾದರೂ ಅಕಾಲದ ಮೃತ್ಯುಗಳಾಗಿವೆಯೇ? ಆಗಿದ್ದರೆ ಏನು ಕಾರಣ? ಆಸ್ತಿ ಎಷ್ಟಿದೆ? ಭಾಗ ಆದರೆ ಈ ಹುಡುಗನಿಗೆ ಎಷ್ಟು ಉಳಿಯುತ್ತದೆ? ಇವನ ವರಮಾನವೇನು? ಯಾಕೋ ಸಿಗರೇಟಿನ ವಾಸನೆ ಬರುತ್ತಿದ್ದಂತಿತ್ತಲ್ಲ? ನಡೆಯುವಾಗ ಯಾಕೆ ಜೋಲುತ್ತಾನೆ? ಮೊದಲಿಂದಲೂ ಹೀಗೇ ತೆಳ್ಳಗಾ? ಬೇರೆ ಕಾರಣವಿದೆಯಾ? ಹೀಗೆ ಮಾತುಮಾತಿನಲ್ಲೇ ನೂರೆಂಟು ಪ್ರಶ್ನೆ ಕೇಳಿ ನಮ್ಮ ಹುಡುಗಿಗೆ ಇವನು ಸರಿಯಾದ ಗಂಡ ಹೌದೋ ಅಲ್ಲವೋ, ಕೊಡಲಿಕ್ಕೆ ಆ ಮನೆ ಸರಿಯಾದದ್ದೋ ಅಲ್ಲವೋ? ಗಂಡಿನ ಕಡೆಯವರು ತಮ್ಮ ಒಪ್ಪಿಗೆ ಸೂಚಿಸುವುದಕ್ಕೆ ಮೊದಲೇ ನರಸಮ್ಮಜ್ಜಿ ``ಹೇ, ನಮ್ಮ ಹುಡುಗಿಗೆ ಈಡಲ್ಲ ಬಿಡು`` ಎಂದು ತೀರ್ಪು ಕೊಟ್ಟುಬಿಡುತ್ತಿದ್ದಳು. ಅಂದಿನ ಸಮಾಜವೂ ಚಿಕ್ಕದಿತ್ತು. ಎಂಬತ್ತು ವರ್ಷ ಬದುಕಿದ ನರಸಮ್ಮಜ್ಜಿಗೆ ಹೆಚ್ಚಿನ ಕುಟುಂಬಗಳು ಖುದ್ದಾಗಿ ಗೊತ್ತಿದ್ದವು. ಆದರೂ amazing ಎಂಬ ರೀತಿಯಲ್ಲಿ ಅಜ್ಜಿ ತನ್ನ attentive to the details ಎಂಬ ವಿದ್ಯೆ ಬಳಸುತ್ತಿದ್ದಳು.

ನೀವು ಕಮ್ಯಾಂಡೋ ತರಬೇತಿಗೆ ಅಥವಾ ಬೇಹುಪಡೆಗಳ ತರಬೇತಿಗೆ ಸೇರಿದರೆ ನಿಮಗೆ ಮೊದಲು ಕಲಿಸುವುದೇ ಅದನ್ನ. ಒಂದು ಕೋಣೆ ಹೊಕ್ಕರೆ, ಒಬ್ಬ ವ್ಯಕ್ತಿಯನ್ನು ನೋಡಿದರೆ, ಒಂದು ಪ್ರದೇಶಕ್ಕೆ ಹೋದರೆ ಕೆಲವೇ ಕ್ಷಣ (ನಿಮಿಷಗಳಲ್ಲಿ)ಗಳಲ್ಲಿ ಅದರ ಅಷ್ಟೂ ವಿವರಗಳು ನಿಮಗೆ ಗೊತ್ತಿರಬೇಕು. ಇದು ಶತ್ರುವಿನೆಡೆಗೆ ಕೈಗೊಳ್ಳಬೇಕಾದ ಜಾಗರೂಕತೆಯ ಸಂಗತಿ. ಯಾವುದೋ ಒಂದು particular ಸಂಗತಿ, ವ್ಯಕ್ತಿ ಅಥವಾ ವಸ್ತುವಿನ ಮೇಲೆ ಒಂದು ಕ್ಷಣ ಕೂಡ ಜಾಸ್ತಿ ಹೊತ್ತು ನಿಮ್ಮ ಕಣ್ಣು ಕೇಂದ್ರೀಕೃತವಾದರೆ ಕೆಲಸ ಕೆಟ್ಟಂತೆಯೇ.

ಇಂಥದೊಂದು ವಿದ್ಯೆಯನ್ನು ಅರಿವಿಲ್ಲದೆಯೇ ಕಲಿತು (ಅಥವಾ ಹಾಗೆ ಕಲಿತಿದ್ದೇನೆ ಅಂತ ಭಾವಿಸಿ)ಪತ್ರಿಕೋದ್ಯಮಕ್ಕೆ, ಬರವಣಿಗೆಗೆ ಬಂದ ನಾನು ಎಂಥ poor observer ಎಂಬುದು ನನಗೆ ಅರ್ಥವಾದದ್ದು ವಿಲಿಯಮ್ ಡಾರ್ಲಿಂಪ್ಲ್ಲ್‌ನ ಪುಸ್ತಕಗಳನ್ನು ಓದಿದಾಗ. ನಾನು ಹೋದ ಊರು, ದೇಶಗಳಿಗೆ ಆತನೂ ಹೋಗಿದ್ದಾನೆ. ಆದರೆ ಆತ ಗಮನಿಸಿದ ಸಂಗತಿಗಳೇ ಬೇರೆ. ನನ್ನ ಗ್ರಹಿಕೆಗಳೇ ಬೇರೆ. ಆತನನ್ನು ಓದಿದಾಗ ಛೆ, ಇದು ನನ್ನ ಕಣ್ಣಿಗೆ ಬೀಳಲೇ ಇಲ್ಲವಲ್ಲಾ ಅನ್ನಿಸಿದ್ದು ಸಾವಿರ ಸಲ. ನಾನು ಹೊಟ್ಟೆ ಕಿಚ್ಚು ಪಡುವ ಏಕೈಕ ಪತ್ರಕರ್ತ-ಲೇಖಕ ಡಾರ್ಲಿಂಪ್ಲ್.

ನೀವು ಇದೇ ವಿದ್ಯೆಯನ್ನು ನಿಮ್ಮ ದೈನಂದಿನ ಬದುಕಿಗೆ ಅನ್ವಯಿಸಿಕೊಂಡು ನೋಡಿ. ನಮ್ಮ ಗಮನಿಸುವಿಕೆ ಅದೆಷ್ಟು ಅಡಸಾ-ಬಡಸಾ ಇರುತ್ತದೆ ಎಂಬುದು ನಮಗೇ ಗೊತ್ತಾಗುತ್ತದೆ. ಮನೆ ಕಟ್ಟಿಸಿರುತ್ತೇವೆ: ಎಲ್ಲ ಕಟ್ಟಿಸಿದ ಮೇಲೆ ಈ ರೂಮು ತೀರ ಇರುಕಾಯಿತು ಅನ್ನಿಸುತ್ತದೆ. ಅಂಗಡಿಯಿಂದ ತಂದ ಮೇಲೆ ಈ ಬಣ್ಣದ ಅಂಗಿ ನನಗೆ ಒಪ್ಪುವುದಿಲ್ಲ ಅನ್ನಿಸುತ್ತದೆ. ಫೀ ಕಟ್ಟಿಯಾದ ಮೇಲೆ ಮಗುವನ್ನು ಬೇರೆ ಶಾಲೆಗೆ ಸೇರಿಸಬೇಕಿತ್ತು ಅನ್ನಿಸುತ್ತದೆ. ಮದುವೆಯಾದ ನಂತರ ಇವನಿಗಿಂತ ಒಳ್ಳೆಯ ಗಂಡ ಸಿಗಬಹುದಿತ್ತು ಅಂದುಕೊಳ್ಳುತ್ತೇವೆ. ಫರ್ನೀಚರು ಕೊಂಡ ಮೇಲೆ, ಇದು ಈ ಮನೆಗೆ ಹೊಂದುವುದಿಲ್ಲ ಅನ್ನಿಸುತ್ತದೆ.

ಇಂಥವು, ನೌಕರನೊಬ್ಬನನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಹಿಡಿದು ಅಡುಗೆ ಮನೆಗೆ ಮಿಕ್ಸಿ ತರುವ ತನಕ ಎಲ್ಲ ವಿಷಯಗಳಲ್ಲೂ ಎಲ್ಲರ ಜೀವನದಲ್ಲೂ ಸಂಭವಿಸಿರುತ್ತವೆ. ಅದಕ್ಕೆ ಕಾರಣವಿಷ್ಟೆ. ನಾವು ಯಾವುದನ್ನೂ minute ಆಗಿ ಗಮನಿಸಿರುವುದಿಲ್ಲ. ಮೇಲ್ನೋಟಕ್ಕೆ ಇದೆಲ್ಲ ಮಾಮೂಲೇ ಅನ್ನಿಸಬಹುದು. ತೀರ ಅಷ್ಟೆಲ್ಲ ವಿಚಾರ ಮಾಡುತ್ತ ಕೂಡಲು ಸಮಯವೆಲ್ಲಿದೆ ಅನ್ನಬಹುದು. ಸಾವಿರ ಕಾರಣ ನೀಡಬಹುದು. ‘ಗಂಡ-ಹೆಂಡತಿ ಅನ್ನೋದು ದೇವರು ಹಾಕಿದ ಗಂಟು’ ಅಂತ ಇಡೀ ಗಂಟನ್ನು ದೇವರೆಡೆಗೆ ಎತ್ತಿ ಹಾಕಿ ಬಿಡಬಹುದು. ಆದರೆ ನಾವು detailsನ ವಿಷಯಕ್ಕೆ ಬಂದಾಗ ಮಾಡುವ ತಪ್ಪುಗಳನ್ನು ಒಪ್ಪಿಕೊಳ್ಳದಿದ್ದರೆ, ತಿದ್ದಿಕೊಳ್ಳದಿದ್ದರೆ ದೊಡ್ಡ ಹೊಡೆತ ತಿನ್ನಬೇಕಾಗುತ್ತದೆ.

ಅಲ್ಲವೆ?
-ರವೀ

Read Archieves of 17 December, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books