Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ಮುಸಲ್ಮಾನರ ಸಂತ ಹಾಜಿ ಅಲಿಯ ಚಾದರದ ಚುಂಗು ಚುಂಬಿಸಿ ಮತ್ತೆ...

ವಿಮಾನವಿಳಿದಾಗ just ಬೆಳಗಿನ ಎಂಟು ಗಂಟೆ. ಸರಿಯಾಗಿ ಒಂದು ವರ್ಷದ ಹಿಂದೆ ಇದೇ ದಿನ ಗೋವೆಯಲ್ಲಿದ್ದೆ. ಈ ಬಾರಿ ಮುಂಬಯಿ. ನನ್ನ ಪಾಲಿಗೆ ನವೆಂಬರ್ ಇಪ್ಪತ್ತೈದು ಬದುಕಿನಲ್ಲಿ ದೊಡ್ಡ ತಿರುವು ನೀಡಿದ ದಿನ. ಪ್ರತೀ ವರ್ಷ ಅವತ್ತಿನ ದಿನ ಎಲ್ಲಾದರೂ ದೂರ, ಯಾವುದಾದರೂ ಊರು, ಸಮುದ್ರ, ಹಿಲ್ ಸ್ಟೇಷನ್- ಹೀಗೆ ಏನಾದರೊಂದು ಹುಡುಕಿಕೊಂಡು ಹೊರಟು ಬಿಡುತ್ತೇನೆ. ಅವತ್ತೊಂದು ದಿನ ಬೇರೇನೂ ಕೆಲಸ ಮಾಡುವುದಿಲ್ಲ. ದಿನ ಪತ್ರಿಕೆಯನ್ನೂ ಓದುವುದಿಲ್ಲ ಅಂತ ಆಣೆ. ಇಪ್ಪತ್ನಾಲ್ಕರಂದು ಹೊರಡಲು ನಿರ್ಧರಿಸಿದ್ದೆ, ವಿಮಾನದ ಟಿಕೆಟ್ಟೂ ಬುಕ್ ಆಗಿತ್ತು. ಆದರೆ ಮುಂಬಯಿಯಲ್ಲಿ ಇಳಿದಾಗಲೇ ನೆನಪಾದದ್ದು. ಜೇಬಿನಲ್ಲಿ ಎಂಟಾಣೆ ಕೂಡ ಇಲ್ಲ! ಈ ವಿಷಯಗಳಲ್ಲಿ ನಾನು ಈ ಪರಿ ಅಶಿಸ್ತಿನ, ಮೂರ್ಖ.

ಬೇರೆ ದಾರಿ ಏನಿದೆ?

ನನಗೆ ಇರುವ ಆಪದ್ಬಾಂಧವ ಅವನೊಬ್ಬನೇ: ಸುರೇಶ್ ಶೆಟ್ಟಿ. ಅವನಿಗೇ ಫೋನು ಮಾಡಿ `ಗುರುವೇ...` ಅಂದೆ. ಅವನಿಗೂ ಗೊತ್ತು. ನಾನು ಜನ್ಮಕ್ಕಂಟಿದ ಶನಿಯಂತಹ ಗೆಳೆಯ. ``ಆಯ್ತಪ್ಪಾ... ಮೊದಲು ಕಾರು ಹತ್ತು. ಕಾರು ಕಳಿಸಿದ್ದೇನೆ. ಯಥಾಪ್ರಕಾರ ನಿನಗೋಸ್ಕರ ಹೊರಗಡೆ ತಿವಾರಿ ಕಾಯುತ್ತಿದ್ದಾನೆ. ನನ್ನದೇ ಕಾರು. ನನ್ನವನೇ ಡ್ರೈವರ್ ಸಿಕಂದರ್. ನಿನಗೆ ಬಾಂದ್ರಾದ `ರಂಗ್ ಶಾರದಾ` ಹೊಟೇಲಿನಲ್ಲಿ ರೂಮು ಮಾಡಿದ್ದೇನೆ. ನೀನು ತಲುಪುವ ಹೊತ್ತಿಗೆ ನಿನ್ನ ಖರ್ಚಿಗೆ ಹಣ ಅಲ್ಲಿಗೆ ತಲುಪಿರುತ್ತದೆ. ನನ್ನ ತಮ್ಮ ಬರುತ್ತಾನೆ. Enjoy your stay'' ಅಂದಿದ್ದ ಸುರೇಶ್.

ಮೂವತ್ತು ವರ್ಷಗಳ ಹಿಂದೆಯೂ ಇದೇ ಸ್ಥಿತಿ. ಆಗ ಸುರೇಶ್ ಶೆಟ್ಟಿ ಚಿಕ್ಕದೊಂದು ಕ್ಯಾಂಟೀನ್ ನಡೆಸುತ್ತಿದ್ದ ಬಳ್ಳಾರಿಯಲ್ಲಿ. ಇಳಿ ಸಾಯಂಕಾಲದ ಖರ್ಚಿಗೆ ಅವನಿಗೇ ಅನೇಕ ಸಲ ಗಂಟುಬೀಳುತ್ತಿದ್ದೆ. ಇವತ್ತು ಸುರೇಶ್ ಕೋಟ್ಯಶ. ನಾನೂ ಬಡವನಲ್ಲ. ಆದರೆ ನನ್ನ ಯಡವಟ್ಟುಗಳಿಗೆ ಅವನೇ ತಲೆ ಕೊಡಬೇಕು. ದುರಂತವೆಂದರೆ ನಾನು ವಿಸಿಟಿಂಗ್ ಕಾರ್ಡು, ಐಡೆಂಟಿಟಿ ಕಾರ್ಡು ಹಾಳುಬಿದ್ದು ಹೋಗಲಿ : ಒಂದು ಕ್ರೆಡಿಟ್ ಕಾರ್ಡೂ ಇಟ್ಟುಕೊಳ್ಳುವವನಲ್ಲ. ಕಂಪ್ಯೂಟರಿಗೆ ಪುಸ್ತಕ ತರಿಸಿಕೊಳ್ಳಲಿಕ್ಕೆ ಅಂತ ಇಟ್ಟುಕೊಂಡಿರುವ ಒಂದೇ ಒಂದು ಕ್ರೆಡಿಟ್ ಕಾರ್ಡು ಹೇಗೆ ಬಳಸಬೇಕು ಅಂತ ನನಗೆ ಗೊತ್ತಿಲ್ಲ. ಅದೇನದು ATM? ನನ್ನ ಜನ್ಮದಲ್ಲೇ ಆ ರೊಕ್ಕದ ಯಂತ್ರದ ಮುಂದೆ ನಿಂತಿಲ್ಲ. ನನ್ನ ಪಾಲಿಗೆ ಸುರೇಶ್‌ನೇ ATM. ಹೊಟೇಲು ತಲುಪಿದ ಹತ್ತು ನಿಮಿಷಕ್ಕೆ ಸುರೇಶ್ ಕುಟುಂಬದ ಸಭ್ಯನಂತೆಯೇ ಇರುವ ದಿನೇಶ್ ಶೆಟ್ಟಿ ಬಂದು ಎರಡು ಪಿಡಿಕೆ ಹಣ ಕೈಗಿಟ್ಟು ``ಮತ್ತೆ ಫೋನ್ ಮಾಡಿ ಹಣ ಬೇಕಾದ್ರೆ, ಆಯ್ತಾ?" ಅಂದ. ಇಷ್ಟಕ್ಕೂ ಎಷ್ಟು ಖರ್ಚು ಮಾಡಲಿದ್ದೇನೆ? ಗೊತ್ತಿರಲಿಲ್ಲ.

ಹೊಟೇಲಿನಲ್ಲಿ ಒಂದು quick shower ಮುಗಿಸಿ ಹೊರಬಿದ್ದವನು ಅದೇಕೆ ಹಾಗೆ ಹೇಳಿದೆನೋ ಗೊತ್ತಿಲ್ಲ: ನನ್ನನ್ನು ಸಿದ್ಧಿವಿನಾಯಕ ದೇವಸ್ಥಾನಕ್ಕೆ ಕರೆದುಕೊಂಡು ಹೋಗು ಅಂತ ಡ್ರೈವರ್ ಸಿಕಂದರ್‌ಗೆ ಹೇಳಿದ್ದೆ. ನನಗೂ ದೇವರಿಗೂ ಒಂದು ಚೂರೂ ಆಗುವುದಿಲ್ಲ. ಆದರೆ ಒಂದು ಅಕಾಡೆಮಿಕ್ ಆಸಕ್ತಿ ನನಗೆ ದೇವರು, ದೆವ್ವ, ತಂತ್ರ, ಮಂತ್ರ, paranormal ಇತ್ಯಾದಿಗಳ ಬಗ್ಗೆ ಮೊದಲಿನಿಂದಲೂ ಇದೆ. ದೇವರ ಸನ್ನಿಯಲ್ಲಿ ಮನುಷ್ಯನ ವರ್ತನೆಯನ್ನು ನೋಡುವ ಆಸೆ. ನಿಮಗೆ ನಗು ಬರಬಹುದು. ಒಮ್ಮೆ ತಿರುಪತಿಗೆ ಹೋಗಿ, ಕೊಂಚ ಎತ್ತರದಲ್ಲಿ ಕುಳಿತು ಸುಮ್ಮನೆ ಜನರ ಫೊಟೋ ತೆಗೆಯುತ್ತ ಹೋಗಬೇಕು. ಏನಿರುತ್ತೆ ಅಲ್ಲಿ? ಬರೀ ಬೋಳು ತಲೆಗಳು. ಆದರೆ ಮುಂಬಯಿಯ ಸಿದ್ಧಿವಿನಾಯಕ ದೇವಸ್ಥಾನದ ಮುಂದೆ, ಕಾರಿನಲ್ಲೇ ಬೂಟು ಬಿಚ್ಚಿಟ್ಟು ನಡೆದು ಹೋದೆ, ಬೇರೆಯದೇ ಆಸಕ್ತಿಯೊಂದಿಗೆ. ``ವಹಾಂ ಕೆಮೆರಾ allowed ನಹೀ ಹೈ" ಎಂದು ತಿವಾರಿ ಮೊದಲೇ ಹೇಳಿದ್ದ. ಒಳಕ್ಕೆ ಕಾಲಿಡುವ ಮುನ್ನವೇ ಪೊಲೀಸರ ದರ್ಶನ. ಸಿದ್ಧಿವಿನಾಯಕನ ಗಾತ್ರದಲ್ಲೇ ಇರುವ ಪೇದೆಯೊಬ್ಬ ಬಂದು ಮೆಟಲ್ ಡಿಟೆಕ್ಟರ್ ಹಿಡಿದು ಯಾವ ಹೆಂಡತಿಯೂ ತನ್ನ ಗಂಡನ ಮೈ ತಡಕಿರಲಿಕ್ಕಿಲ್ಲ: ಹಾಗೆ ತಡಕಿಬಿಟ್ಟ. ಇಡೀ ಮುಂಬಯಿ ಒಂಥರಾ ಬಾಂಬ್‌ಗಳ ಭಯದಲ್ಲಿ, ಒಂದು paranoid ಸ್ಥಿತಿಯಲ್ಲಿ ಬದುಕುತ್ತಿದೆ. ಒಳಕ್ಕೆ ಹೋದವನಿಗೆ ಆ ಜನ ಸಮುದ್ರ ನೋಡಿಯೇ ಸಿದ್ಧಿವಿನಾಯಕನ ಸಹವಾಸ ಸಾಕು ಅನ್ನಿಸಿಬಿಟ್ಟಿತ್ತು. ಆದರೆ ಸಿದ್ಧಿವಿನಾಯಕನ ಮುಂದಿನ `ಕ್ಯೂ` ಕೂಡ ಒಂಥರಾ ಮುಂಬಯಿಯ ಲೋಕಲ್ ಟ್ರೇನ್‌ನಂತಹುದು. ನೀವು ಅಲ್ಲಿ ರೈಲು ಹತ್ತಲೇಬೇಕು ಅಂತಿಲ್ಲ. ಸುಮ್ಮನೆ ನಿಂತರೆ ಸಾಕು. ಹಿಂದಿನಿಂದ ನೂಕಿಕೊಂಡು ಬಂದುಬಿಡುವ ಜನ ನಿಮಗೆ ಗೊತ್ತಾಗದೆ ಡಬ್ಬಿ ಹತ್ತಿಸಿ ಬಿಡುತ್ತಾರೆ. ಇಳಿಯುವುದೂ ಅಷ್ಟೇ ಸುಲಭ. ಆದರೆ ಈ push and move ಪದ್ಧತಿ ಸಿದ್ಧಿವಿನಾಯಕನ ಮುಂದೂ ಸಲ್ಲುತ್ತದೆ ಅಂತ ಗೊತ್ತಿರಲಿಲ್ಲ. ನಾನು ನಡೆಯುತ್ತ, ನೂಕಿಸಿಕೊಳ್ಳುತ್ತ, ತುಯ್ಯುತ್ತ ಜನರನ್ನು ಸುಮ್ಮನೆ ಗಮನಿಸುತ್ತ ನಡೆದೆ. ನಡೆಯುತ್ತಲೇ ಇದ್ದೆ.

ಆದರೆ ಸಿದ್ಧಿವಿನಾಯಕನ ಮುಂದೆ ನಿಂತ ಕ್ಷಣ ಇತ್ತಲ್ಲ? ಒಮ್ಮೆಲೆ ಕಾಲ ಸ್ತಂಭಿಸಿದಂತಾಯಿತು. ಯಾಕೋ ಗೊತ್ತಿಲ್ಲ. ಕಣ್ಣಲ್ಲಿ ಧಾರಾಕಾರ ನೀರು. ಎದುರಿಗಿರುವುದು ಕಲ್ಲಿನದೋ, ಮಣ್ಣಿನದೋ ಮೂರ್ತಿ. ಅದರ ಪ್ರಭಾವಳಿ ಬೆಳ್ಳಿಯದು, ಬಂಗಾರದ್ದು. ಎಲ್ಲವೂ man made. ಆದರೆ ಸಿದ್ಧಿವಿನಾಯಕನ ಮುಂದೆ ನಿಂತ ಆ ಲಕ್ಷಾಂತರ ಜನ? ಅವರ ಭಕ್ತಿ? ಆ ನಂಬಿಕೆ? ಒಂದು ಪುಟ್ಟ man made ಪುತ್ಥಳಿಗೆ ಅಷ್ಟೊಂದು ಶಕ್ತಿ ಇದೆಯಾ? ಇದೆಲ್ಲ ನಿಜವಾ? ಬೇಡಿದ್ದು ಕೊಡುತ್ತಾನಾ ಸಿದ್ಧಿವಿನಾಯಕ? ಮನುಷ್ಯನ ನಂಬಿಕೆಯನ್ನು ಹೀಗೆ, ಇಷ್ಟು ಪ್ರಬಲವಾಗಿ ಇನ್‌ಫ್ಲುಯೆನ್ಸ್ ಮಾಡಬಲ್ಲ ತಾಕತ್ತಾ ಅವನದು? ಅದೂ ಭ್ರಮೆಯಾ?

ಅಲ್ಲಿ ಯಾರೋ ಕೈ ಮುಗಿಯುತ್ತಿದ್ದರು. ಅಲ್ಲೇ ಕಟ್ಟೆಯ ಮೇಲೆ ತಲೆಯಿಟ್ಟು ಕಣ್ಮುಚ್ಚಿ ನಿಲ್ಲುತ್ತಿದ್ದರು. ಒಂದು ಹಸುಗೂಸು, ಹೆಚ್ಚೆಂದರೆ ಹತ್ತು ದಿನಗಳದಿರಬೇಕು. ಅದನ್ನು ಆ ಬಾಣಂತಿ ಪೂಜಾರಿಯ ಕೈಗೆ ಕೊಟ್ಟಳು. ಆತ ಒಮ್ಮೆ ಸಿದ್ಧಿವಿನಾಯಕನಿಗೆ ಮುಟ್ಟಿಸಿ ವಾಪಸು ಕೊಟ್ಟ. ಆ ಪುಟ್ಟ ತಾಯಿಯ ಕಣ್ಣಲ್ಲಿ ಯಾವುದೋ ತೃಪ್ತಿ, ಎಂಥದೋ ಶಾಂತಿ. ಜೊತೆಯಲ್ಲಿದ್ದ ಆಕೆಯ ಗಂಡ ಕಣ್ಣು ಮುಚ್ಚಿ ನಿಂತು ಪರವಶನಾಗಿದ್ದ. ಎರಡು ನಿಮಿಷ ಸುಮ್ಮನೆ ನಿಂತೆ. ನನಗೇ ಗೊತ್ತಿಲ್ಲದೆ ಕಣ್ಣು ಧಾರಾಕಾರ. ನಾನು ನಾಸ್ತಿಕ. ನಾಸ್ತಿಕತೆ ಕೂಡ man made. ನಾನು ಸಿದ್ಧಾಂತಪೂರ್ವಕವಾಗಿ, ಅನೇಕ ವರ್ಷ ಚರ್ಚಿಸಿ, ಚಿಂತಿಸಿ, ಚಾರುವಾಕನಿಂದ ಹಿಡಿದು ಕಾರ್ಲ್ ಮಾರ್ಕ್ಸ್ ನ ತನಕ ಓದಿ, ಶೃಂಗೇರಿಯಿಂದ ಹಿಡಿದು ಹಿಮಾಲಯದ ತನಕ ಹೋಗಿ, ವಿಬದ್ಧವಾಗಿ ಮತ್ತು ವೈಜ್ಞಾನಿಕವಾಗಿ ದೇವರಲ್ಲಿ ವಿಶ್ವಾಸ ಕಳೆದುಕೊಂಡವನು. ಆದರೆ ಇದೇಕೆ ಹೀಗೆ ನಿಂತು ಅಳುತ್ತಿದ್ದೇನೆ?

ನಾನು ದೇವರಲ್ಲಿ ಏನೂ ಬೇಡಬೇಕಿರಲಿಲ್ಲ. ಪೂಜಾರಿ ಕೊಟ್ಟ ಹೂವು ಕಿಸೆಯಲ್ಲಿಟ್ಟುಕೊಂಡೆ. ಯಾರೋ ಹಿಂದಿನಿಂದ ನೂಕಿದರು. ಮುಂದಕ್ಕೆ ನಡೆದೆ. ಅಲ್ಲಿದ್ದವರೊಬ್ಬರು ಹಣೆಗೆ ತಿಲಕವಿಟ್ಟರು. ಕೈಗೊಂದು ದಾರ ಕಟ್ಟಿದರು. ನಾನು ಕಿಸೆಯಿಂದ ತೆಗೆದ ನೋಟು ನೂರರದಾಗಿತ್ತು. ಕೊಟ್ಟ ಮರುಕ್ಷಣ ಯಾರೋ ಹಿಂದಿನಿಂದ ನೂಕಿದರು. ಅಲ್ಲಿಗೆ ಸಿದ್ಧಿವಿನಾಯಕನ ಪ್ರಸಂಗ ಮುಗಿದಿತ್ತು. ``ಇಲ್ಲಿ ಇವತ್ತು ಜನ ಕಡಿಮೆ. ಹಬ್ಬಗಳಲ್ಲಿ ಬಂದರೆ ಕನಿಷ್ಠ ಪಕ್ಷ ಐದು ಲಕ್ಷ ಜನ ಸೇರುತ್ತಾರೆ. ನೀವು ನಂಬಲಿಕ್ಕಿಲ್ಲ. ಅಮಿತಾಬ್, ಅಭಿಷೇಕ್, ಜಯಾ ಮತ್ತು ಐಶ್ವರ್ಯ ರೈ ಬಚ್ಚನ್ ತಮ್ಮ ಮನೆಯಿಂದ ಇಲ್ಲಿಗೆ ನಡೆದುಕೊಂಡು ಬಂದಿದ್ದರು. ಪ್ರತೀ ಸಲ ಕೋರ್ಟಿಗೆ ಹೋಗುವಾಗ ಸಂಜಯ್‌ದತ್ ಇಲ್ಲಿಗೆ ಬಂದೇ ಹೋಗುವುದು. ತೆಂಡೂಲ್ಕರ್ ಬರುತ್ತಾನೆ..." ಸುರೇಶನ ತಮ್ಮ ಹರೀಶ್ ಶೆಟ್ಟಿ ವಿವರಿಸುತ್ತಿದ್ದ. ನನ್ನ ಮನಸು ಮತ್ತೇನೋ ಯೋಚಿಸುತ್ತಿತ್ತು.

``ಸಿಕಂದರ್ ಭಾಯೀ, ಮುಝೆ ಹಾಜಿ ಅಲಿ ಜಾನಾ ಹೈ" ಅಂದೆ.

ಅಚ್ಚರಿಯ ಸಂಗತಿಯೆಂದರೆ ಸಿದ್ಧಿವಿನಾಯಕನ ದರ್ಶನದ ನಂತರ ನಾನು ಮುಂಬಯಿಯ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋದೆ. ಅಲ್ಲೂ ಜನ, ಕಿಲೋಮೀಟರುಗಟ್ಟಲೆ ಕ್ಯೂ ಇತ್ತು. ಚಿನ್ನದ ವಿಗ್ರಹಗಳಿಗೆ ಬೆಳ್ಳಿಯ ಪ್ರಭಾವಳಿ. ಎಲ್ಲ ಸರಿ, ಆದರೆ ನನಗೆ ಏನೂ ಅನ್ನಿಸಲಿಲ್ಲ. ಸುಮ್ಮನೆ ವಿಗ್ರಹದ ಎದುರು ನಿಂತು ಹೊರಬಂದೆ. ಅಲ್ಲಿಂದ ಕಣ್ಣಳತೆಯ ದೂರದಲ್ಲೇ ಇದೆ ಹಾಜಿ ಅಲಿ ದರ್ಗಾ. ನಾನು ಕರ್ನಾಟಕದ, ಪಾಕಿಸ್ತಾನದ ಅನೇಕ ದರ್ಗಾಗಳನ್ನು ನೋಡಿದ್ದೇನೆ. ಮಡಿವಂತ ಕರ್ಮಠ ಮುಸಲ್ಮಾನರು ದರ್ಗಾಗಳಿಗೆ ಹೋಗುವುದಿಲ್ಲ. ಆದರೆ ದರ್ಗಾಗಳು ಮುಸಲ್ಮಾನರಿಗೆ ಮಾತ್ರ ಸೀಮಿತವಲ್ಲ. ಅವು ಮೂಲತಃ ಸೂಫಿ ಸಂತರ ಸಮಾಗಳು. ಆ ಸಂತರನ್ನು `ಪೀರ್`ಗಳೆನ್ನುತ್ತಾರೆ.

ಹಾಗೆ ಇದ್ದ ಒಬ್ಬ ಪೀರ್‌ನ ಮೂಲ ಹೆಸರು ಸೈಯದ್ ಹಾಜಿ ಅಲಿ ಷಾಹ್ ಬುಖಾರಿ. ಆತ ಉಜ್ಜೆಕಿಸ್ತಾನದ ದೊಡ್ಡ ವ್ಯಾಪಾರಿ. ಆದರೆ ಧರ್ಮಕ್ಕೆ, ಸೂಫಿ ಸಿದ್ಧಾಂತಕ್ಕೆ ಮರುಳಾಗಿ ತನ್ನಲ್ಲಿ ಇದ್ದುದನ್ನೆಲ್ಲ ಬಡಬಗ್ಗರಿಗೆ ದಾನ ಮಾಡಿ ಜಗತ್ತು ಸುತ್ತಿ ಕಡೆಗೆ ಬಂದು ಮುಂಬಯಿಯಲ್ಲಿ ನೆಲೆಗೊಂಡ. ಆತನದು ಶುದ್ಧ ಫಕೀರನ ಜೀವನ. ಒಮ್ಮೆ ದಾರಿಯಲ್ಲಿ ಹೋಗುತ್ತಿದ್ದವನಿಗೆ, ಕೈಯಲ್ಲಿ ಬರಿಯ ಪಾತ್ರೆ ಹಿಡಿದು ನಿಂತು ಅಳುತ್ತಿದ್ದ ಹೆಂಗಸು ಕಾಣಿಸಿದಳು. ``ಅಂಗಡಿಯಿಂದ ಎಣ್ಣೆ ತರುತ್ತಿದ್ದೆ. ಕೈ ಜಾರಿ ಬಟ್ಟಲಿನಿಂದ ಎಲ್ಲ ಚೆಲ್ಲಿ ಹೋಯಿತು. ಮನೆಗೆ ಹೋದರೆ ಗಂಡ ಬಡಿಯುತ್ತಾನೆ..."

ಅಂದಳು. ಹಾಜಿ ಅಲ್ಲಿ ಎಣ್ಣೆ ಬಿದ್ದಿದ್ದ ನೆಲಕ್ಕೆ ಹೆಬ್ಬೆರಳು ಹಾಕಿ ಮೀಟಿದನಷ್ಟೆ. ಎಣ್ಣೆ ಊಟೆಯಾಗಿ ಚಿಮ್ಮಿತು. ಅಳುತ್ತಿದ್ದ ಹೆಂಗಸು ಪಾತ್ರೆ ತುಂಬಿಕೊಂಡು ಸಂತೋಷದಿಂದ ಹೋದಳು. ಪವಾಡ ಮಾಡಿದ್ದನ್ನು ಕಂಡ ಜನ ಹಾಜಿ ಅಲಿಯ ನಿಲುವಂಗಿಯ ಚುಂಗಿಗೆ ಮುತ್ತು ಕೊಟ್ಟು ಕಣ್ಣಿಗೊತ್ತಿಕೊಂಡು ಕೊಂಡಾಡಿದರು. ಆದರೆ ಖುದ್ದು ಹಾಜಿ ಅಲಿ ನೊಂದಿದ್ದ: ಭೂಮಿಯನ್ನು ಬೆರಳಲ್ಲಿ ಎಟ್ಟಿದ್ದಕ್ಕಾಗಿ. ಭೂಮಿಯನ್ನು ನೋಯಿಸುವುದುಂಟೆ? ಅದೇ ಒಂದು ಕೊರಗಿನಂತಾಗಿ ಹಾಜಿ ಅಲಿ ಖಾಯಿಲೆ ಬಿದ್ದ. `ನಾನು ಸತ್ತ ಮೇಲೆ ಶವವನ್ನು ಅರಬ್ಬೀ ಸಮುದ್ರ ತೀರದಲ್ಲಿ ಹೂತು ನನ್ನನ್ನು ಮರೆತು ಬಿಡಿ` ಎಂದು ಸುತ್ತಲಿನವರಿಗೆ ಹೇಳಿದ. ಅಂಥ ಪೀರ್‌ಗೂ ಕೊನೆಯ ಆಸೆಯಿತ್ತು: ಮೆಕ್ಕಾ ಯಾತ್ರೆಯ ಆಸೆ. ಮೆಕ್ಕಾಕ್ಕೆ ಹೋದವನು ಅಲ್ಲೇ ತೀರಿಕೊಂಡ. ಅಚ್ಚರಿಯೆಂದರೆ, ಆತನ ಶವ ಕೆಲವೇ ದಿನಗಳಲ್ಲಿ ಮುಂಬಯಿಯ ತೀರಕ್ಕೆ ಬಂದು ತಲುಪಿತ್ತು.

ಇವತ್ತು ಆತನ ಸಮಾಯೇ ಹಾಜಿ ಅಲಿ ದರ್ಗಾ ಆಗಿದೆ. ಮುಂಬಯಿಯ ವೋರ್ಲಿಯಲ್ಲಿ ನೀವು ನಿಂತರೆ ಒಂದಷ್ಟು ಭೂಮಿ ಸಮುದ್ರದೊಳಕ್ಕೆ ಚಾಚಿಕೊಂಡಿರುವುದು ಕಾಣುತ್ತದೆ-ಆ ಚಾಚಿಕೊಂಡ ಭೂಮಿಯ ತುತ್ತುದಿಯಲ್ಲೇ ಹಾಜಿ ಅಲಿಯ ಸಮಾ. ಅದರ ಸುತ್ತ ಕಟ್ಟಿದ ಅದ್ಭುತವಾದ ಪರ್ಷಿಯನ್ ಮಾದರಿಯ ದರ್ಗಾ. ಶುಕ್ರವಾರಗಳಂದು ಸುಮಾರು ನಲವತ್ತು ಸಾವಿರ ಜನ ಬರುತ್ತಾರೆ. ವೋರ್ಲಿಯ ರಸ್ತೆಯಿಂದ ಸಮುದ್ರ ಮಧ್ಯದ ರಸ್ತೆಯಲ್ಲಿ ಸುಮಾರು ಐದುನೂರು ಮೀಟರು ನಡೆಯಬೇಕು. ನಸೀಬು ನೆಟ್ಟಗಿದ್ದರೆ ರಸ್ತೆ ನಿರಾಳವಾಗಿರುತ್ತದೆ. ಇಲ್ಲದಿದ್ದರೆ ಸಮುದ್ರ ಉಕ್ಕಿ ಬಂದು ಹಾಜಿ ಅಲಿ ದರ್ಗಾ ಅಕ್ಷರಶಃ ದ್ವೀಪದಂತಾಗಿ ಬಿಡುತ್ತದೆ. ಅಲ್ಲಿನ ಜನಕ್ಕೆ ಸಮುದ್ರ ಉಕ್ಕುವ ದಿನ, ಸಮಯಗಳು ಗೊತ್ತು. ನಾನು ಹೋದಾಗ ಸಮುದ್ರ ಪ್ರಶಾಂತವಾಗಿತ್ತು. ದರ್ಗಾದಲ್ಲಿ ತೀರ ಅತೀ ಅನ್ನಿಸುವಷ್ಟು ಜಂಗುಳಿಯಿರಲಿಲ್ಲ. ಹೋಗಿ ಕ್ಯೂನಲ್ಲಿ ನಿಂತೆ. ಕೈಯಲ್ಲಿ ಒಂದು ಹೂವಿನ ಮಾಲೆ ಮತ್ತು ಹಸಿರು ಚಾದರ ಒಯ್ದಿದ್ದ ಚೀಲವಿತ್ತು. ಅದನ್ನು ಹಾಜಿ ಅಲಿಯ ಸಮಾಯ ಮುಂದೆ ನಿಂತವರು ಇಸಿದುಕೊಂಡು ಸಮಾಗೆ ಹೊದಿಸಿ ಹೂವಿನ ಹಾರ ಹಾಕುತ್ತಾರೆ. ಅದೆಲ್ಲ ವ್ಯವಹಾರ ನೋಡಿಕೊಳ್ಳುವಾತ ಒಬ್ಬ `ಮುಜಾವರ್` ಇರುತ್ತಾನೆ.
ನಾನು ಜೀನ್ಸ್ ಪ್ಯಾಂಟು, ಮೇಲೊಂದು ಷರಟು ಹಾಕಿಕೊಂಡು, ತಲೆಗೆ ಮುಸಲ್ಮಾನರು ಧರಿಸುವ ಕಿಂಡಿ ಕಿಂಡಿ ಟೋಪಿ ಧರಿಸಿದ್ದೆ. ಸಿದ್ಧಿವಿನಾಯಕನ ಗುಡಿಯ ಟೀಕಾ ಇನ್ನೂ ಹಣೆಯ ಮೇಲೇ ಇತ್ತು. ನನ್ನನ್ನು ಅನತಿ ದೂರದಿಂದ ನೋಡಿದವನೇ ದರ್ಗಾದ ಮುಜಾವರ್ ಬಂದು `ಆಪ್ ಇಧರ್ ಆಯಿಯೇ` ಅಂದ. ಕ್ಯೂದಿಂದ ಹೊರಕ್ಕೆ ಕರೆದವನು ಇದ್ದ ಜನರನ್ನೆಲ್ಲ ಸರಿಸಿ ನನ್ನನ್ನು ಪ್ರತ್ಯೇಕವಾಗಿ ಸಮಾಯ ಮುಂದೆ ನಿಲ್ಲಿಸಿದ. ``ಅವರ ಕೈಗೆ ಚಾದರ ಕೊಡಬೇಕಿಲ್ಲ. ನೀನೇ ಹೊದಿಸು" ಅಂದ. ತುಂಬ strange ಸಂಗತಿಯದು. ಚಾದರವನ್ನು ದರ್ಗಾದ ಜನರೇ ಸಾಮಾನ್ಯವಾಗಿ ಹೊದಿಸುತ್ತಾರೆ. ಆದರೆ ನನಗೆ ಸ್ವತಂತ್ರವಾಗಿ ಚಾದರ ಹೊದಿಸುವ ಅವಕಾಶ! ಅದೇಕೋ ಗೊತ್ತಿಲ್ಲ, ಶ್ರದ್ಧೆಯಿಂದ ಹೊದಿಸಿದೆ. ನನಗೆ ದರ್ಗಾಗಳ ಸಂಪ್ರದಾಯ ಗೊತ್ತು. ನಾವು ಹೊದಿಸಿದ ನೂರಾರು ಚಾದರಗಳ ಕೆಳಗೆ ಒಂದು ಒರಟಾದ ಕೆಂಪು-ಹಸಿರು ಮಿಶ್ರಿತ ಮೂಲ `ಚದ್ದರ್` ಇರುತ್ತದೆ. ಅದರ ಚುಂಗಿಗೆ ಮುತ್ತು ಕೊಡಬೇಕು. ಅದು ಸಂಪ್ರದಾಯ. ಅಷ್ಟೇ ಅಲ್ಲ, ಮನಸ್ಸಿನಲ್ಲಿ ಏನೇ `ಮನ್ನತ್` ಮಾಡಿಕೊಂಡು ಆ ಹಾಜಿ ಅಲಿ ಎಂಬ ಪೀರ್‌ನ ಸಮಾಯ ಮೇಲಿನ ಚದ್ದರ್‌ನ ಚುಂಗು ಚುಂಬಿಸಿದರೆ ಮನಸ್ಸಿನ ಆಸೆ ಪೂರೈಸುತ್ತದೆ. ನನಗೆ ಯಾವ ಆಸೆ? ಯಾವ `ಮನ್ನತ್`? ಆದರೂ ಬಾಗಿ ಚಾದರದ ಚುಂಗು ಚುಂಬಿಸಿದೆ.

ಆಗ ಚುಳ್ಳೆಂದವು ಕಣ್ಣು.

ನಾನು ತುಂಬ ಹೊತ್ತು ಹಾಜಿ ಅಲಿಯ ಪಾದದ ಕಡೆಯ ಚುಂಗು ಚುಂಬಿಸುತ್ತಲೇ ಇದ್ದೆ. ಮುಜಾವರ್ ಹೆಗಲು ತಟ್ಟಿದ. ಎಬ್ಬಿಸಿಕೊಂಡು ಕರೆದೊಯ್ದು ಸಮಾಯ ತಲೆಯ ಭಾಗದಲ್ಲಿ ನಿಲ್ಲಿಸಿದ. ಅದು ಮತ್ತೊಂದು ಸಂಪ್ರದಾಯ, ಮತ್ತೊಂದು ಅಪರೂಪದ, ಯಾರಿಗೂ ಸಿಗದ ಅವಕಾಶ. ಅಲ್ಲಿ ಸಮಾಯ ಮೇಲೆ ಹೊದಿಸಿದ `ಚದ್ದರ್`ನ ಕೊಂಚ ಮೇಲೆತ್ತಿ ಅದರೊಳಕ್ಕೆ ತಲೆಯಿಡಲು ಅವಕಾಶ ಮಾಡಿ ಕೊಡುತ್ತಾರೆ. ಅದು ಹಾಜಿ ಅಲಿಯ ಹಣೆಗೆ ಮುತ್ತಿಡುವಂಥ ಅನುಭವ. ಆಗ ಬಂತು ನೋಡಿ: ಉಮ್ಮಳಿಸಿ ಅಳತೊಡಗಿದೆ. ಯಾಕೆ? ನನಗೆ ಗೊತ್ತಿಲ್ಲ. ಅಲ್ಲಿರುವುದು ಸಮಾ. ಸಂತ ಹಾಜಿ ಅಲಿ ಸತ್ತು ಹೋದದ್ದು 1431ರಲ್ಲಿ. ಆತನ ಎಲುಬೂ ನೆಲದಲ್ಲಿ ಉಳಿದಿರಲಾರದು. ನಾನು ಮುಸಲ್ಮಾನನಲ್ಲ. ನನಗೆ ಇಂಥ ಯಾವುದರಲ್ಲೂ ನಂಬಿಕೆಯಿಲ್ಲ. ಆದರೆ ಯಾಕೆ ಭಾವುಕನಾಗುತ್ತೇನೆ. ಹೀಗೇಕೆ ಉಮ್ಮಳಿಸಿ ಅಳು ಬರುತ್ತದೆ. ಭಗವಂತನ ಅಸ್ತಿತ್ವದಲ್ಲೇ ನಂಬಿಕೆಯಿಲ್ಲದ ಪರಮ ನಾಸ್ತಿಕನಿಗೆ ಇದೆಂಥ ಭಾವಾವೇಶ. ನನಗೆ ಯಾವುದೂ ಅರ್ಥವಾಗಲಿಲ್ಲ. ಮನುಷ್ಯನ ಮನೋಪ್ರಪಂಚವೇ ವಿಚಿತ್ರ. ಪ್ರತಿಯೊಂದಕ್ಕೂ ತರ್ಕವಿರುವುದಿಲ್ಲ. ಇರಬೇಕಾಗಿಯೂ ಇಲ್ಲ. ನಾನು ದರ್ಗಾದಿಂದ ಹೊರ ಬಂದಾಗಲೂ ಕಣ್ಣೀರು ಹರಿಯುತ್ತಲೇ ಇದ್ದವು.

``ಐಸಾ ಹೋತಾ ಹೈ" ಅಂದು ಬೆನ್ನು ತಡವಿದ ಮುಜಾವರ್. ಆತ ವಯಸ್ಸಿನಲ್ಲಿ ಹಿರಿಯ. ನಾನು ಕೊಂಚ ಹಣ ಕೊಡಲು ಮುಂದಾದೆ. ಎಷ್ಟು ಖಡಾಖಂಡಿತವಾಗಿ ನಿರಾಕರಿಸಿದನೆಂದರೆ, ``ನಿಮ್ಮನ್ನು ಕರೆದೊಯ್ದು ಚಾದರದ ಚುಂಗು ಮುಟ್ಟಿಸಿದುದಕ್ಕಾಗಿ ಹಣ ತೆಗೆದುಕೊಂಡರೆ ಸಂತ ಹಾಲಿ ಅಲಿ ನನ್ನನ್ನು ಕ್ಷಮಿಸಿಯಾನಾ?" ಎಂದು ಕೇಳಿ ಬಿಟ್ಟ. ಆದರೆ ನನ್ನನ್ನೇಕೆ ವಿಶೇಷವಾಗಿ ಕರೆದೊಯ್ದು ಅದನ್ನೆಲ್ಲ ಮಾಡಿಸಿದೆ? ಹಾಗಂತ ಕೇಳಿದೆ.

``ಆಂಖೋ ಕೀ ನೂರ್! ನಿನ್ನ ಕಣ್ಣಲ್ಲಿನ ಹೊಳಪು, ಪ್ರಾಮಾಣಿಕತೆ-ಅಷ್ಟೆ. ಹಾಜಿ ಅಲಿಗೆ ಯಾರನ್ನು ಕರೆಸಿಕೊಳ್ಳಬೇಕು ಅಂತ ಗೊತ್ತು. ಹೋಗಿ ಬಾ. ಒಳ್ಳೆಯದಾಗಲಿ" ಅಂದ. ವೋರ್ಲಿಯ ಮುಖ್ಯ ರಸ್ತೆಯ ತನಕ ಹುಚ್ಚು ಆವೇಶ ಮೈ ಹೊಕ್ಕವನಂತೆ ಹೆಜ್ಜೆ ಹಾಕಿದೆ. ಚದ್ದರ್‌ನ ಚುಂಗಿನ ಆ ತರಕು ನನ್ನ ತುಟಿಗಳ ಮೇಲಷ್ಟೆ ಅಲ್ಲ : ಮನಸ್ಸಿನ ಮೃದುವಿನ ಮೇಲೂ ಶಾಶ್ವತವಾಗಿ ಮೂಡಿದೆ ಅನ್ನಿಸಿತು. ಹಾಗಂತ ನಾನು ಆಸ್ತಿಕನಾದೆನಾ? ದೇವರಲ್ಲಿ ನಂಬಿಕೆ ಹುಟ್ಟಿತಾ? No chance.

ಮುಂಬಯಿಯಲ್ಲಿ ಕಳೆದ ಮೂರು ದಿನ ನಿಜಕ್ಕೂ ಚೆನ್ನಾಗಿದ್ದವು. ಅದೊಂದು ನಿಜವಾದ ಮಾಯಾನಗರಿ. ಅಲ್ಲಿ ಸಿದ್ಧಿವಿನಾಯಕನಿದ್ದಾನೆ. ಮಹಾಲಕ್ಷ್ಮಿಯ ಕಣ್ಣಳತೆಯಲ್ಲೇ ಹಾಜಿ ಅಲಿ ದರ್ಗಾ ಇದೆ. ಘೋರ ಪಾತಕ ನಡೆಸುವ ಅಂಡರ್‌ವರ್ಲ್ಡ್ ಇದೆ. ಸಾಲು ಸಾಲು ಹಾದರದ ಪಂಜರಗಳಿವೆ. ಸ್ಟಾರ್ ಹೊಟೇಲುಗಳಲ್ಲಿಯೂ ಜೀವ ಭಯವಿದೆ. ರಸ್ತೆ ಬದಿಯಲ್ಲಿ ನಿಂತು ವಡಾ-ಪಾವ್ ತಿನ್ನುವವನಿಗೆ ಬಿಂದಾಸ್ ಸ್ವಾತಂತ್ರ್ಯವಿದೆ. ಅಲ್ಲಿ ಅಂಬಾನಿಯೂ ಇದ್ದಾನೆ. ಆರ್ಥರ್ ರೋಡ್ ಜೈಲಿನಲ್ಲಿ ನರಹಂತಕ ಕಸಬ್ ಕೂಡ ಇದ್ದಾನೆ. ಇಡೀ ಸಿನೆಮಾ ಇಂಡಸ್ಟ್ರಿ ಅಲ್ಲಿದೆ. ನೂರಾರು ಸ್ಲಮ್‌ಗಳಿವೆ. ಮುಗಿಲೆತ್ತರದ ಬಂಗಲೆಗಳಿವೆ. ನನ್ನ ಹೊಟೇಲಿಗೆ ಹಿಂತಿರುಗುವಾಗ ಬ್ಯಾಂಡ್ ಸ್ಟ್ಯಾಂಡ್‌ನಲ್ಲಿ ಒಂದು ದೊಡ್ಡ ಗೇಟಿನ ಮನೆ ತೋರಿಸಿದ ಸಿಕಂದರ್, ``ಇದು ಶಾರುಕ್ ಖಾನ್‌ನ ಮನೆ" ಅಂದ.
ಅದರ ಹೆಸರು `ಮನ್ನತ್`.

ನನಗೆ ಚಿತ್ತಾಲರ ಮನೆ ನೋಡಬೇಕೆನ್ನಿಸಿತ್ತು. ಆದರೆ ಚಿತ್ತಾಲರು ಯಾರೆಂಬುದು ಸಿಕಂದರ್‌ಗೆ ಗೊತ್ತಿರಲಿಲ್ಲ. ಸ್ವಲ್ಪ ಹೊತ್ತು ಬ್ಯಾಂಡ್ ಸ್ಟ್ಯಾಂಡ್ ಎದುರಿನ ಸಮುದ್ರದ ಕಟ್ಟೆಯ ಮೇಲೆ ಕುಳಿತು ಎದ್ದು ಬಂದೆ. ಅದು ಅಮಾವಾಸ್ಯೆಯ ರಾತ್ರಿ. ಸಮುದ್ರ ಯಾಕೋ ನನ್ನ ಮನಸ್ಸಿನಂತೆಯೇ ಅಶಾಂತಿಯಿಂದ, ಅಸಹನೆಯಿಂದ ತುಯ್ಯುತ್ತಿತ್ತು. ಅದರ ಮನಸ್ಸಿನಲ್ಲಿ ಏನಿದೆಯೋ? ನನಗಾದರೂ ಹೇಗೆ ಗೊತ್ತಾಗಬೇಕು?

-ನಿಮ್ಮವನು
ಆರ್.ಬಿ.

Read Archieves of 03 December, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books