Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ಇವತ್ತಿನ ಪತ್ರಕರ್ತರ ಸಂತೆಯಲ್ಲಿ ಎಲ್ಲಾದರೂ ಒಬ್ಬ ಸಂತ ಹುಟ್ಟಿಯಾನೇ?

ಇದೊಂದು ಇಂಟೆರೆಸ್ಟಿಂಗ್ ಆದ, ಚರ್ಚೆಯಾಗಲೇಬೇಕಾದ, ಆದರೆ ಕಳವಳವನ್ನೂ ಹುಟ್ಟಿಸುವಂತಹ ಸಂಗತಿ.

ಇದು ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಬಂಸಿದ ಸಂಗತಿ. ನಾವೆಲ್ಲ, ಅಂದರೆ ಹೆಚ್ಚಿನ ಪತ್ರಕರ್ತರು ತಿಂಗಳಲ್ಲಿ ಒಂದಷ್ಟು ದಿನ ಒಂದಲ್ಲ ಒಂದು ನ್ಯಾಯಾಲಯದಲ್ಲಿ ಕೈ ಕಟ್ಟಿಕೊಂಡು ನಿಲ್ಲಲೇ ಬೇಕಾಗುತ್ತದೆ. ಕೆಲವು ನ್ಯಾಯಾಶರು ಕಡೇ ಪಕ್ಷ `ಆರೋಪಿ`ಗಳಾದ ನಮ್ಮನ್ನು ಕೂಡಲು ಹೇಳುತ್ತಾರೆ. ಇನ್ನು ಕೆಲವು ನ್ಯಾಯಾಲಯಗಳಲ್ಲಿ ಚಪ್ಪಲಿ ಹೊರಗೇ ಬಿಚ್ಚಿಟ್ಟು ಹೋಗಿ ಕಟಕಟೆಯಲ್ಲಿ ನಿಲ್ಲಬೇಕು. ನಮಗಿಂತ ಮುಂಚೆ ಆ ಕಟಕಟೆಯಲ್ಲಿ ಒಬ್ಬ ಕೊಲೆಗಡುಕ ನಿಂತಿರುತ್ತಾನೆ, ವೇಶ್ಯೆ ನಿಂತು ಹೋಗಿರುತ್ತಾಳೆ, ಲಂಚ ತಿಂದು ಸಿಕ್ಕು ಬಿದ್ದ ಗುಮಾಸ್ತ ನಿಂತು ಹೋಗಿರುತ್ತಾನೆ. ಆಯಿತು, ನ್ಯಾಯಾಲಯದ ಮುಂದೆ ನಾವೆಲ್ಲರೂ ಸಮಾನರೇ. ಕಟಕಟೆಯಲ್ಲಿ ನಿಂತರೆ ತಪ್ಪೇನಿದೆ? ನಿಲ್ಲೋಣ. ಆದರೆ ಪ್ರಶ್ನೆ ಅದಲ್ಲ. ಪತ್ರಿಕೋದ್ಯಮವನ್ನು ಭಾರತದಲ್ಲಿ fourth estate ಅಂತ ಕರೆಯಲಾಗುತ್ತಿತ್ತು. ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಮತ್ತು ಪತ್ರಿಕಾರಂಗ- ಹೀಗೆ, ನಾಲ್ಕು ಆಧಾರ ಸ್ತಂಭಗಳು ಪ್ರಜಾಪ್ರಭುತ್ವಕ್ಕೆ ಎಂಬ ಮಾತಿತ್ತು. ಆದರೆ ಬದಲಾಗಿರುವ ಪರಿಸ್ಥಿತಿ ನೋಡಿ. ಶಾಸಕಾಂಗಕ್ಕೆ ತನ್ನದೇ ಆದ ಜವಾಬ್ದಾರಿ ಮತ್ತು ರಕ್ಷಣೆ ಇದೆ. ಕಾರ್ಯಾಂಗಕ್ಕೆ ಜವಾಬ್ದಾರಿ, ಅಕಾರ ಇವೆ. ನ್ಯಾಯಾಂಗಕ್ಕೂ ನಿರ್ದಿಷ್ಟ ವ್ಯಾಪ್ತಿ, ಕರ್ತವ್ಯ, ಅಕಾರ ಮತ್ತು ಸೀಮಿತತೆ ಇದೆ. ಇವೆಲ್ಲವೂ ನಮ್ಮ ಸಂವಿಧಾನದಲ್ಲೇ ಇವೆ. ಈ ಅಂಗಗಳು ಜವಾಬ್ದಾರಿ ಮರೆತಾಗ ಅವುಗಳಿಗೆ ಶಿಕ್ಷೆಯಿದೆ. ಅಂತೆಯೇ ಅವುಗಳ ಮೇಲೆ ಅತಿಕ್ರಮಣವಾದಾಗ, ಅತಿಕ್ರಮಿಸಿದವರನ್ನು ದಂಡಿಸುವ ಅಕಾರವನ್ನೂ ಹೊಂದಿವೆ. ಆದರೆ ಇದ್ಯಾವುದೂ ಇಲ್ಲದೆ ಪಾಪಿ ಪರದೇಸಿಯಂತಿರುವುದು ಪತ್ರಿಕಾರಂಗ.

ಇತ್ತೀಚೆಗೆ ಒಂದು ಘಟನೆ ನಡೆಯಿತು. ಕಲ್ಕತ್ತಾದ ನ್ಯಾಯಾಶ ಜಸ್ಟೀಸ್ ಪಿ.ಬಿ.ಸಾವಂತ ಅವರು ಪ್ರಾವಿಡೆಂಟ್‌ಫಂಡ್ ಪ್ರಕರಣದಲ್ಲಿ ಅಕ್ರಮವೆಸಗಿದ್ದಾರೆ ಎಂದು ಆಪಾದಿಸಲಾಗಿದೆ ಎಂದು ವಿವರಿಸುತ್ತಾ, Times Now ಎಂಬ ಛಾನಲ್ ನಿವೃತ್ತ ನ್ಯಾಯಮೂರ್ತಿ ಪಿ.ಬಿ.ಸಾವಂತ್ ಅವರ ಫೊಟೋ ತೋರಿಸತೊಡಗಿತು. ಇಡೀ ದೇಶಕ್ಕೇ ಗೊತ್ತಿರುವ ಸಂಗತಿಯೆಂದರೆ ನಿವೃತ್ತ ನ್ಯಾಯಮೂರ್ತಿ ಪಿ.ಬಿ.ಸಾವಂತ್ ಅವರು ಅತ್ಯಂತ ಸರಳ ಹಾಗೂ ನಿಸ್ಪೃಹ ವ್ಯಕ್ತಿ. ಜೀವಮಾನದಲ್ಲಿ ಎಂದೂ ಕಳಂಕ ಹೊತ್ತವರಲ್ಲ. ಲಂಚ ಪ್ರಕರಣದ ಸುದ್ದಿಯಲ್ಲಿ ಅವರ ಫೊಟೋ ತೋರಿಸಿ ಬಿಡುವುದು ನಿಜಕ್ಕೂ ಅಪರಾಧ. ಅದು ಖಂಡನಾರ್ಹ ಹಾಗೂ ಶಿಕ್ಷಾರ್ಹ. ಆದರೆ ಎಷ್ಟು ಶಿಕ್ಷೆ? ನೀವು ನಂಬಲಿಕ್ಕಿಲ್ಲ, Times Now ಛಾನಲ್‌ಗೆ ನ್ಯಾಯಾಲಯ ಮಾನನಷ್ಟ ಮೊಕದ್ದಮೆಯಲ್ಲಿ ವಿಸಿದ್ದು ಒಂದು ನೂರು ಕೋಟಿ ರುಪಾಯಿ ದಂಡ! ಆ ಪೈಕಿ ಇಪ್ಪತ್ತು ಕೋಟಿ ಈಗ ಕಟ್ಟಬೇಕು. ಉಳಿದ 80 ಕೋಟಿ ಬ್ಯಾಂಕ್ ಗ್ಯಾರಂಟಿ ನೀಡಬೇಕು.

ಪತ್ರಿಕೋದ್ಯಮವೆಂಬುದು ಅವಸರದ ಹೆರಿಗೆ. ಅದರಲ್ಲೂ ಇವತ್ತಿನದು ಭಯಂಕರವಾದ, cut throat ಎನ್ನಿಸುವಂಥ ಸ್ಪರ್ಧಾತ್ಮಕ ಪರಿಸ್ಥಿತಿ. ಟೇಬಲ್ಲಿಗೆ ಬಂದ ಸುದ್ದಿಯನ್ನು ಒಮ್ಮೆ ಕಣ್ಣಾಡಿಸಿ. ತಕ್ಷಣ ಅಚ್ಚಿಗೆ ತಳ್ಳುವುದೋ, ಟೀವಿ ನಿರೂಪಕರ ಬಾಯಿಗೆ ನೂಕುವುದೋ ಮಾಡಲೇಬೇಕು. ಏನೇ ಪ್ರಯತ್ನ ಪಡುತ್ತೇವೆ ಅಂದರೂ ಪ್ರತೀಸಲ, ಪ್ರತೀ ಸುದ್ದಿ ಖಚಿತ ಪಡಿಸಿಕೊಳ್ಳಲು ಆಗುವುದಿಲ್ಲ. ಅಷ್ಟೆಲ್ಲ ಸಿಬ್ಬಂದಿಯೂ ಪತ್ರಿಕಾಲಯಗಳಲ್ಲಿ ಇರುವುದಿಲ್ಲ. ಅಲ್ಲದೆ ಫೊಟೋಗಳ ವಿಷಯದಲ್ಲಿ ಪೊರಪಾಟುಗಳಾಗುವುದು-ತುಂಬಾನೇ ಸಹಜ. ಪತ್ರಿಕೋದ್ಯಮಕ್ಕೆ ವಿಪರೀತ ಗ್ಲಾಮರ್ ಬಂದಿರುವ ಈ ದಿನಗಳಲ್ಲಿ ಪ್ರತೀ ವರ್ಷ ನೂರಾರು ಹುಡುಗರು, ಹುಡುಗಿಯರು ಕೆಲಸಕ್ಕೆ ಬರುತ್ತಿರುತ್ತಾರೆ. ಅವರಲ್ಲಿ ಅನನುಭವಿಗಳು, ಅಪ್ರಬುದ್ಧರೇ ಜಾಸ್ತಿ. ವರ್ಷಗಟ್ಟಲೆ court beat reporting ಮಾಡಿದವರಿಗೆ ನ್ಯಾಯಮೂರ್ತಿಗಳ ಹೆಸರು, ಮುಖ ಪರಿಚಯ ಇರುತ್ತದೆ. ಆದರೆ Times Nowನಲ್ಲಿ ಅವತ್ತು ಸುದ್ದಿ ಬಿತ್ತರಿಸಲು ಕುಳಿತವರಿಗೆ ನ್ಯಾಯಮೂರ್ತಿ ಪಿ.ಬಿ.ಸಾವಂತ್‌ರ ಫೊಟೋ ಗುರುತಿಸುವುದು ಸಾಧ್ಯವಾಗದೆ ಅನಾಹುತ ನಡೆದುಹೋಗಿದೆ. ಆದದ್ದು ತಪ್ಪು ಅಂತ ಗೊತ್ತಾದ ಕೂಡಲೆ ಸತತವಾಗಿ ಐದು ದಿನ Times Now Channel ಜಸ್ಟೀಸ್ ಸಾವಂತ್ ಅವರ ಕ್ಷಮೆ ಕೇಳಿದೆ. ಇಷ್ಟಾದರೂ ಛಾನಲ್‌ನ ಮೇಲೆ ನೂರು ಕೋಟಿ ದಂಡ ವಿಸಿದರೆ ಗತಿಯೇನು?

ಇಂಥ ತಪ್ಪುಗಳು ಪತ್ರಿಕೆಗಳಲ್ಲಿ ಪ್ರತಿ ನಿತ್ಯ ಆಗುತ್ತಿರುತ್ತವೆ. ಡಯಾಲಿಸಿಸ್‌ನ ಮೇಲೆಯೇ ತುಂಬ ದಿನ ಜೀವಿಸಿದ್ದ ಜಯಪ್ರಕಾಶ್ ನಾರಾಯಣ್ ಇನ್ನೂ ಬದುಕಿರುವಾಗಲೇ ಅವರು ತೀರಿಕೊಂಡರು ಅಂತ ಸರ್ಕಾರಿ ಸ್ವಾಮ್ಯದ ಆಕಾಶವಾಣಿಯಲ್ಲೇ ಬಿತ್ತರವಾಗಿತ್ತು. ನಮ್ಮದೇ ಪತ್ರಿಕೆಯಲ್ಲಿ ರೂಪಿಣಿ ಸಾವಿನ ಸುದ್ದಿ ಪ್ರಕಟವಾದಾಗ ನನ್ನ ಅಷ್ಟೂ `ಶತ್ರು` ಸಮೂಹ ನನ್ನ ಮೇಲೆ ಮುರಕೊಂಡು ಬಿದ್ದಿತ್ತು. ಇನ್ನು ಮುದ್ರಣ ದೋಷಗಳಂತೂ ಪತ್ರಿಕೆಗಳಿಗೆ ಅಂದಿನ ಶಾಶ್ವತ ಶನಿಗಳು. ಒಮ್ಮೆ `ವಿಜಯ ಕರ್ನಾಟಕ`ದಲ್ಲಿ ``ಮದುವೆ ಮನೆಯಲ್ಲಿ ಆದ ಗಲಾಟೆಯನ್ನು ಪೊಲೀಸ್ ಅಕಾರಿಯು ಎರಡೂ ತರಡಿನವರನ್ನು ಒಂದುಗೂಡಿಸಿ ಸರಿ ಮಾಡಿದರು" ಎಂದು ವರದಿಯಾಗಿತ್ತು. ಆಗ ಸಂಪಾದಕರಾಗಿದ್ದ ವಿಶ್ವೇಶ್ವರ ಭಟ್ಟರು ಮತ್ತು ನಾನು ಕುಳಿತು ಆ ಬಗ್ಗೆ ಅರ್ಧಗಂಟೆ ನಕ್ಕಿದ್ದೆವು. ಟೀವಿ ನಿರೂಪಕರ ಭಾಷೆ, `ಅ`ಕಾರ `ಹ`ಕಾರ, ವಿಕಾರಗಳ ಬಗ್ಗೆ ದಿನವಿಡೀ ಹೇಳಿದರೂ ಮುಗಿಯದ ಜೋಕುಗಳಿವೆ. ಇಂಥವಕ್ಕೆಲ್ಲ ಕಾರಣವಿಷ್ಟೆ: ಪತ್ರಿಕೋದ್ಯಮಕ್ಕೆ ಬರುವ ಹುಡುಗರು ಚೆನ್ನಾಗಿ ಓದಿಕೊಂಡು, ಸಿದ್ಧತೆ ಮಾಡಿಕೊಂಡು ಬಂದಿರುವುದಿಲ್ಲ. ತಿದ್ದಲು ಹೋದರೆ ಅವರಿಗೆ I know syndrome. ಪ್ರತಿಯೊಂದೂ `ನಂಗೊತ್ತು ನಂಗೊತ್ತು` ಎಂಬ ಅಹಂಕಾರ.

ಇಷ್ಟಾದರೂ ಪತ್ರಿಕೋದ್ಯಮದಿಂದ ಒಟ್ಟಾರೆಯಾಗಿ ದೇಶಕ್ಕೆ ಉಪಯೋಗ, ಉಪಕಾರ ಆಗಿಲ್ಲವೆ? ಸ್ಪೆಕ್ಟ್ರಮ್ ಹಗರಣ, ಕಾಮನ್ ವೆಲ್ತ್ ಗೇಮ್ಸ್ ಹಗರಣ, ಆದರ್ಶ್ ಕಟ್ಟಡದ ಹಗರಣ, ಸೈನ್ಯದಲ್ಲಿನ ಲಂಚಕೋರತನ, ನ್ಯಾಯಾಂಗದಲ್ಲಿನ ಲಂಚಕೋರತನ, ಗಣಿ ಹಗರಣ, ಟೆಲಿಫೋನ್ ಟ್ಯಾಪಿಂಗ್ ಹಗರಣ, ಮಂತ್ರಿಗಳ ಲೈಂಗಿಕ ಹಗರಣಗಳು, ಖೊಟ್ಟಿ ಎನ್‌ಕೌಂಟರುಗಳು, ಭೂಗತ ಪ್ರಪಂಚದ ವ್ಯವಹಾರ, ಡ್ರಗ್ ಮತ್ತು human trafficking ಹೀಗೆ ಒಂದೇ ಎರಡೇ? ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಅಸ್ಥಿರಗೊಂಡಿದ್ದಿದ್ದರೆ, ಮೌನವಾಗಿದ್ದಿದ್ದರೆ, ಕಳ್ಳ ಹಾದಿ ಹಿಡಿದಿದ್ದಿದ್ದರೆ ಇವೆಲ್ಲವೂ ಎಂದೋ ದಫನ್ ಆಗಿ ಮಣ್ಣು ಸೇರಿಬಿಡುತ್ತಿದ್ದವು. ಹಗರಣಗಳನ್ನ, ಗಲಭೆಗಳನ್ನ, ರಹಸ್ಯಗಳನ್ನ ಹೊರತೆಗೆಯಲು ಹೋದ ಪತ್ರಕರ್ತರು ಒದೆ ತಿಂದಿದ್ದಾರೆ. ಅವರ ಕೆಮೆರಾಗಳು ನುಚ್ಚು ನೂರಾಗಿವೆ. ಕೆಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಅಸಲಿ ಸಮಸ್ಯೆಯೆಂದರೆ ಪತ್ರಿಕೆ ಅಥವಾ ಟೀವಿಗಳು ತಮ್ಮ ವರದಿಗಾರಿಕೆಯನ್ನ, ವಿಮರ್ಶೆಯನ್ನು ಎಲ್ಲಿಯ ತನಕ ಒಯ್ಯಬಹುದು? ಎಲ್ಲಿಗೆ ಅದನ್ನು ನಿಲ್ಲಿಸಬೇಕು? Where is the line? ಇದನ್ನು ನಿರ್ಧರಿಸುವವರು ಯಾರು? ಯಾವುದನ್ನು ಬರೆದರೆ ಅಥವಾ ಯಾವುದರ ಬಗ್ಗೆ ಮಾತನಾಡಿದರೆ ಅದು ನ್ಯಾಯಾಂಗ ಅಥವಾ ಕಾರ್ಯಾಂಗ ಅಥವಾ ಶಾಸಕಾಂಗದ ಹಕ್ಕುಗಳಿಗೆ ಚ್ಯುತಿಯೆಸಗಿದಂತಾಗುತ್ತದೆ? ಒಂದು ಹತ್ಯೆ ಅಥವಾ ಹಲ್ಲೆ ನಡೆದಾಗ ಅದನ್ನು ತಕ್ಷಣ ವರದಿ ಮಾಡುವುದು ಪತ್ರಿಕೆಗಳ ಕೆಲಸ. ಮೊನ್ನೆ ನಡೆದ ಶರದ್‌ಪವಾರ್ ಕಪಾಳ ಮೋಕ್ಷದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಅವನ್ಯಾರೋ ತಲೆ ಕೆಟ್ಟ ಸಿಖ್ ಯುವಕ ಕೇಂದ್ರಮಂತ್ರಿಯೂ, ಪರಮ ಬಲಿಷ್ಠನೂ ಆದ ಪವಾರ್‌ರ ಕಪಾಳಕ್ಕೆ ಬಾರಿಸಿದ. ಅದು ಅನೇಕರ ಸಮ್ಮುಖದಲ್ಲಿ ಆದ ಘಟನೆ. ಆದರೆ `ಹೀಗೆ ಪವಾರ್ ಕೆನ್ನೆಗೆ ಹೊಡೆಯಲಾಯಿತು` ಎಂದಷ್ಟೆ ಬರೆಯಬೇಕಾ? ಪಕ್ಕದಲ್ಲಿದ್ದವನು `ಹೀಗ್ಹೀಗೆ ಆಯಿತು` ಎಂದು ವಿವರಿಸಿದ ಅಂತ ಬರೆಯಬಹುದಾ? ಹಾಗೆ ಬರೆದದ್ದೇ ಆದರೆ, ``ಪತ್ರಿಕಾರಂಗದವರು ಸಾಕ್ಷೀದಾರರನ್ನು ಮಾತನಾಡಿಸುವ ಮೂಲಕ ನ್ಯಾಯಾಂಗದ ಪರಿಯೊಳಕ್ಕೆ ಕಾಲಿಡುತ್ತಿದ್ದಾರೆಂಬ ತಕರಾರು ಕೇಳಿ ಬರುತ್ತದೆ. ಈ ಹಿಂದೆ ನಡೆದ ಒಂದು ಕೊಲೆ ಕೇಸು ನಿಮಗೆ ನೆನಪಿಸುತ್ತೇನೆ. ಶುಭಾ ಎಂಬ ಹುಡುಗಿ ತಾನು ಮದುವೆಯಾಗಬೇಕಿದ್ದ ಹುಡುಗನನ್ನು ತನ್ನ ಗೆಳೆಯನ ಕೈಲಿ ಕೊಲ್ಲಿಸುತ್ತಾಳೆ. ಪೊಲೀಸರು ಅವಳನ್ನು ಬಂಸಿದಾಗ ಹಂತಕರ ಪೈಕಿ ಒಬ್ಬ ಕೆಮೆರಾದ ಮುಂದೆ ನಿಂತು ``ಏನ್ ಮಾಡೋದು ಹೇಳಿ? ಒಂದು ಬೀಸಿದೆ ಮಚ್ಚಿನಲ್ಲಿ. ಅವನು ಸತ್ತೇ ಹೋಗಿಬಿಟ್ಟ" ಅನ್ನುತ್ತಾನೆ. ಇದು ಮುಂದೆ ನ್ಯಾಯಾಲಯದಲ್ಲಿ ಸಾಕ್ಷ್ಯವನ್ನಾಗಿ ಬಳಸಿಕೊಳ್ಳಲಾಗುತ್ತದೆ. ಕೆಮೆರಾಮನ್, ವರದಿಗಾರ್ತಿ ಇಬ್ಬರೂ ಸಾಕ್ಷಿದಾರರಾಗುತ್ತಾರೆ. ಶುಭಾ ಮತ್ತು ಇತರೆ ಹಂತಕರಿಗೆ ಜೀವಾವ ಶಿಕ್ಷೆಯಾಗುತ್ತದೆ. ಆದರೆ ಇದು ನ್ಯಾಯಾಂಗದ ಪರಿಯೊಳಕ್ಕೆ ಪತ್ರಕರ್ತರು ಕಾಲಿಟ್ಟಂತಾಯಿತಾ? ಅಥವಾ ಅವನ ಹೇಳಿಕೆ extra judicial confession (ನ್ಯಾಯಾಲಯದ ಪರಿಯಿಂದ ಹೊರಗೆ ಒಬ್ಬರೆದುರು ಮಾಡಿಕೊಂಡ ತಪ್ಪೊಪ್ಪಿಗೆ)ಯಾಗಿ ಪರಿಗಣಿಸಲ್ಪಟ್ಟು ಅದರ ಆಧಾರದಮೇಲೆ ಅವರಿಗೆ ಶಿಕ್ಷೆಯಾಯಿತಾ?

ತೀರ್ಮಾನಿಸುವುದು ಹೇಗೆ? ಯಾರು?

ಪತ್ರಿಕೋದ್ಯಮಗಳು ನಮಗೆ ನಾವೇ ಒಂದು ನೀತಿ, ನಿಯಮ, ನಿಯಂತ್ರಣ ಹೇರಿಕೊಳ್ಳಬೇಕು ಎಂಬುದೊಂದು ವಾದವಿದೆ. ಆದರೆ ಇವತ್ತು ಮೀಡಿಯಾ ಎಂಬುದು ಪತ್ರಕರ್ತರ ಕೈಯಲ್ಲೆಲ್ಲಿದೆ? ಎಲ್ಲೋ ಒಂದೆರಡು ಸಂಸ್ಥೆಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲ ಮಾಧ್ಯಮಗಳೂ ಒಂದೋ ರಾಜಕಾರಣಿಗಳ ಕೈಲಿವೆ: ಅಥವಾ ವ್ಯಾಪಾರಿಗಳ ಕೈಯಲ್ಲಿವೆ. `ಸನ್` ಗ್ರೂಪಿನ ಒಡೆತನ ಮಾರನ್ ಕುಟುಂಬದ್ದು. ಕಲೈನಾರ್ ಟೀವಿ ಕರುಣಾನಿ-ಕನಿಮೋಳಿ ಒಡೆತನದ್ದು. `ಜನಶ್ರೀ` ರೆಡ್ಡಿಗಳದು. `ಸಮಯ` ಮುರುಗೇಶ್ ನಿರಾಣಿ ಮತ್ತು ಯಡ್ಡಿ ಅಂಡ್ ಸನ್ಸ್‌ಗೆ ಸೇರಿದ್ದು. ಜಯಲಲಿತಾಳದೇ ಒಂದು ಟೀವಿ ಇದೆ. `ಸುವರ್ಣ` ರಾಜೀವ್ ಚಂದ್ರಶೇಖರರದು. `ಕಸ್ತೂರಿ` ಕುಮಾರಸ್ವಾಮಿಯದು. ರಾಜ್ಯಮಟ್ಟದಿಂದ-ರಾಷ್ಟ್ರಮಟ್ಟದ ತನಕ ಅಂಬಾನಿಗಳು ಮತ್ತು ರಹೇಜಾಗಳಂಥ ಸಿರಿವಂತ ದೊರೆಗಳ ಕೈಯಲ್ಲಿ ಮೀಡಿಯಾ ಇದೆ. ಒಂದು ಕಡೆಯಿಂದ ಗಮನಿಸುತ್ತ ಬನ್ನಿ: ಒಂದೋ ಈ ಮೀಡಿಯಾ ಧಣಿಗಳ ಪೈಕಿ ಅನೇಕರು ಜೈಲಿಗೆ ಹೋಗಿದ್ದಾರೆ. ಕೆಲವರು ಜಾಮೀನಿನ ಮೇಲಿದ್ದಾರೆ. ಮತ್ತೆ ಕೆಲವರು ಜೈಲಿಗೆ ಹೋಗುವ ಹಾದಿಯಲ್ಲಿದ್ದಾರೆ.

ಇವರೆಲ್ಲರೂ ಮೀಡಿಯಾ ಒಡೆತನಕ್ಕೆ ಬಂದದ್ದು ಇದರಲ್ಲಿನ ಹಣ ಮತ್ತು ಗ್ಲಾಮರ್ ನೋಡಿ. ಪ್ರತಿಯೊಬ್ಬರಿಗೂ ತಂತಮ್ಮ ಇತರೆ ಇಂಡಸ್ಟ್ರಿಗಳನ್ನ, ವ್ಯಾಪಾರವನ್ನ ರಕ್ಷಿಸಿಕೊಳ್ಳುವ ಇರಾದೆ. ಆ ಕಾರಣಕ್ಕಾಗಿಯೇ ರಾಜಕೀಯಕ್ಕೂ ಬಂದರು. ಕೈಯಲ್ಲೊಂದು ಪತ್ರಿಕೆ ಅಥವಾ ಟೀವಿ ಇದ್ದರೆ ಎಂಥ ಹಗರಣವನ್ನಾದರೂ ಮುಚ್ಚಿ ಹಾಕಿ ಬಚಾವಾಗಿ ಬಿಡುವ ಧೈರ್ಯ. ಅದರಲ್ಲಿ ಕೆಲವರು ಯಶಸ್ವಿಯೂ ಆದರು. ಆಗುತ್ತಿದ್ದಾರೆ. ಇಂಥವರ ಕೈಯಲ್ಲಿ ಮೀಡಿಯಾ ಇರುವಾಗ ಅದರಲ್ಲಿ ಕೆಲಸ ಮಾಡುವವರು ನೀತಿ, ನಿಯಮ, ನಿಯಂತ್ರಣ ಇಂಥವುಗಳನ್ನು ಹೇರಿಕೊಳ್ಳುವುದಾದರೂ ಹೇಗೆ?

ಇದೆಲ್ಲದರ ಪರಿಣಾಮ ಏನಾಗಿದೆಯೆಂದರೆ ಜನಕ್ಕೆ ಒಟ್ಟಾರೆಯಾಗಿ ಮಾಧ್ಯಮಗಳ ಮೇಲೆ ನಂಬಿಕೆ ಹೋಗತೊಡಗಿದೆ. ಒಂದು ಕಾಲಕ್ಕೆ ಪತ್ರಿಕೆಗಳಲ್ಲಿ ಪ್ರಕಟವಾದದ್ದೆಲ್ಲ ಸತ್ಯ ಎಂದು ಜನರು ನಂಬುತ್ತಿದ್ದರು. ಟೀವಿಯಲ್ಲಿ ತೋರಿಸಿದ್ದೇ ಖರೆ ಎಂಬ ವಿಶ್ವಾಸವಿತ್ತು. ಈಗ ಅದು ಚೆದುರತೊಡಗಿದೆ. ಇನ್ನು `ಅಪ್ಪ-ಅಮ್ಮ` ಎರಡೂ ಇಲ್ಲದ ತುಂಟ ಮಕ್ಕಳಂಥ ಫೇಸ್ ಬುಕ್, ಟ್ವೀಟರ್‌ಗಳು ಒಂದು ವಲಯದ ಜನರನ್ನು ಹಿಡಿದಿಟ್ಟಿವೆ. ಅವೂ ತುಂಬ ಶಾಶ್ವತವಲ್ಲ. ಸ್ವಪ್ರತಿಷ್ಠೆಯ updateಗಳು, ಫೊಟೋಗಳು, ಕದ್ದ ಹೇಳಿಕೆಗಳು, ಸುಳ್ಳು ಸುದ್ದಿಗಳು, ಸುಳ್ಳೇ ಹುಟ್ಟಿಕೊಳ್ಳುವ ಅಭಿಮಾನಿಗಳು, ಒಂದೇ click ಮೂಲಕ ಮುರಿದು ಹಾಕಿ ಬಿಡಬಲ್ಲ ಸಂಬಂಧಗಳು-ಎಲ್ಲ ಬೊಗಳೆ ಅನ್ನಿಸಿ ಬಿಡುತ್ತದೆ.

ಮೊದಲೆಲ್ಲ ಜನರು ರಾಜಕಾರಣಿಗಳನ್ನ ಗೌರವಿಸುತ್ತಿದ್ದರು. ಆಮೇಲೆ ಅವರಿಗೆ ಹೆದರತೊಡಗಿದರು. ಕಪಾಳಕ್ಕೆ ಹೊಡೆದು, ಚಪ್ಪಲಿ ಎಸೆಯಲಾರಂಭಿಸಿದ್ದಾರೆ.

ಈ ಪರಿಸ್ಥಿತಿ ಪತ್ರಕರ್ತರಿಗೆ ಬರಬಾರದಲ್ಲ?

-ರವಿ ಬೆಳಗೆರೆ

Read Archieves of 03 December, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books