Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ಕೊಳಕು ಫ್ರಾಕ್‌ನ ಹುಡುಗಿ ಮತ್ತು ಅತಿಥಿಯ ಚಾಕೊಲೇಟ್

``ನಿಮ್ಮಲ್ಲಿ ಯಾರು ಚೆನ್ನಾಗಿ ಪದ್ಯ ಓದ್ತೀರೋ ಅವರಿಗೆ ಒಂದು ಚಾಕೊಲೇಟ್ ಕೊಡ್ತೀನಿ" ಎಂದು ಆ ಮುಖ್ಯ ಅತಿಥಿ ಘೋಷಿಸಿದರು. ಅಲ್ಲಿದ್ದುದೆಲ್ಲ ಅನಕ್ಷರಸ್ಥ ವೇಶ್ಯೆಯರ ಮನೆಗಳಿಂದ ರಕ್ಷಿಸಲ್ಪಟ್ಟ ಮಕ್ಕಳು. ಅವರಲ್ಲಿ ಕೆಲವರು ಬಾಲ್ಯದ ಜೊತೆಗೇ ಎಚ್.ಐ.ವಿಯನ್ನೂ ತಂದುಕೊಂಡ ಹತಭಾಗ್ಯರು. ಚೆನ್ನಾಗಿ ಪದ್ಯ ಓದಿದ ಮೂವರು ಮಕ್ಕಳಿಗೆ ಅತಿಥಿ ಚಾಕೊಲೇಟ್ ಕೊಟ್ಟರು. ಸಮಾರಂಭ ಮುಗಿದ ಮೇಲೆ ನಾಲ್ಕನೆಯ ಹುಡುಗಿ ಅವರ ಬಳಿಗೆ ಹೋಗಿ ಕೇಳಿದಳು.

``ಅಂಕಲ್, ನಾನು ಫ್ರಾಕ್ ಎತ್ತಿ ತೋರಿಸ್ತೀನಿ. ನಂಗೆ ಚಾಕೊಲೇಟ್ ಕೊಡ್ತೀರಾ?"

ಆ ಘಟನೆಯನ್ನು ಓದಿದಾಗ ಮಧ್ಯಾಹ್ನ ಕೋಣೆಯಲ್ಲಿ ಒಬ್ಬನೇ ಇದ್ದೆ. ತಡೆಯಲಾಗದೆ ಅತ್ತು ಬಿಟ್ಟೆ. ಮೊನ್ನೆ ನವೆಂಬರ್ ೧೪. ಮಕ್ಕಳ ದಿನಾಚರಣೆ. ಮಕ್ಕಳ ಬಗ್ಗೆ ಏನಾದರೂ ಬರೆಯೋಣವೆನ್ನಿಸಿತ್ತು. ಓದಲೆಂದು ಕೆಲವು ಪುಸ್ತಕ ಎತ್ತಿಟ್ಟುಕೊಂಡಿದ್ದೆ. ಆದರೆ ಮನಸ್ಸು `ಹಿಮಾಗ್ನಿ`ಯಲ್ಲಿ ತೇಲಿ ಮುಳುಗುತ್ತಿದೆ. ಬೆಂದು ನರಳುತ್ತಿದೆ. ಬೇರೆ ಏನನ್ನೂ ಓದಲಾಗಲಿಲ್ಲ. ನಿನ್ನೆ ಸುಮ್ಮನೆ ಒಂದು ಪುಸ್ತಕದ ಮೇಲೆ ಕಣ್ಣಾಡಿಸಿದೆ. ಅದರಲ್ಲಿ ಹೈದರಾಬಾದ್‌ನ `ಪ್ರಜ್ವಲಾ` ಎಂಬ ಎಚ್.ಐ.ವಿ ಪೀಡಿತ ಮಕ್ಕಳನ್ನು ಸಾಕುವ ಸಂಸ್ಥೆಯ ಬಗ್ಗೆ ಬರೆಯಲಾಗಿತ್ತು. ಅದರಲ್ಲಿತ್ತು ಈ ಚಾಕೊಲೇಟ್ ಮತ್ತು ಫ್ರಾಕ್‌ನ ಪ್ರಸಂಗ.


ಈ ದುರಂತಕ್ಕೆ ಏನು ಹೇಳುವುದು? ಮಕ್ಕಳು ಅಂದ ಕೂಡಲೆ ನೆನಪಾಗುವುದು ಚಾಕೊಲೇಟ್. ಆದರೆ ಜಗತ್ತಿನಲ್ಲಿ ಸಾವಿರಾರು ಮಕ್ಕಳು ರೇಪ್ ಆಗುವುದು ಚಾಕೊಲೇಟ್ ಕೊಡಿಸುತ್ತೇನೆಂದು ಹೇಳಿ ಕರೆದೊಯ್ಯುವ ಕ್ರೂರಿಗಳಿಂದ. ಅವರು ಅಪರಿಚಿತರೇ ಆಗಿರಬೇಕೆಂದಿಲ್ಲ. ಪಕ್ಕದ ಮನೆಯ ಅಂಕಲ್‌ಗಳು, ಸೋದರ ಮಾವಂದಿರು, ಮೇಷ್ಟ್ರುಗಳು, ಚಿಕ್ಕಪ್ಪಂದಿರು, ಅಜ್ಜಂದಿರು, ಅಣ್ಣಂದಿರು-ಯಾರು ಬೇಕಾದರೂ ಆಗಬಹುದು. ಕಾಮದ ಮತ್ತು ತೃಷೆಯ ಜಗತ್ತು ಎಷ್ಟು ಮಧುರವೋ ಅಷ್ಟೇ ಕ್ರೂರ ಮತ್ತು ಭೀಭತ್ಸ. ಮಕ್ಕಳ ರೇಪ್‌ನ ಬಗ್ಗೆ ಪಿಂಕಿ ವಿರಾನಿ ಎಂಬ ಪತ್ರಕರ್ತೆ Bitter chacolate ಎಂಬ ಪುಸ್ತಕ ಬರೆದಿದ್ದಾಳೆ. ಅದನ್ನು ಓದಿದ ನೆನಪಾಯಿತು. ಒಂದು ಮಗು ಪದೇಪದೆ ರೇಪ್‌ಗೆ, ದುರ್ಬಳಕೆಗೆ ಒಳಗಾದಾಗ ಅದರ ಮನಸು ಹೇಗೆ ಮೌಲ್ಡ್ ಆಗಿ ಬಿಡುತ್ತದೆ ಅಂದರೆ ಅದಕ್ಕೆ ಚಾಕೊಲೇಟ್ ಅಂದ ಕೂಡಲೆ ಫ್ರಾಕ್‌ನ ನೆನಪಾಗಿ ಬಿಡುತ್ತದೆ. ಇಂಥ ದುರಂತಕ್ಕೆ ಏನನ್ನಬೇಕು? ನವೆಂಬರ್ ತಿಂಗಳು ಬಂತೆಂದರೆ ನಮ್ಮ ಸರ್ಕಾರ ಪತ್ರಿಕೆಗಳಿಗೆ ಜಾಹೀರಾತು ಸುರಿಯುತ್ತದೆ. ರೇಡಿಯೋಗಳಲ್ಲಿ ಟೀವಿಗಳಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಮಾತು ಓತಪ್ರೋತ. ಕೆಲವು NGOಗಳು ಮಕ್ಕಳ ಕೊಳಕು ದಿರಿಸು, ಚಿಂಪರುಗೂದಲು, ಕಾರ್ಮಿಕರಾಗಿ ದುಡಿಯುವ ವಿಡಿಯೋಗಳು-ಇವುಗಳನ್ನು ತೋರಿಸಿ ಕೋಟಿಗಟ್ಟಲೆ ಹಣ ಮಾಡಿಬಿಡುತ್ತವೆ. ಆದರೆ ಒಂದು ಮಗುವಿನ ಮನಸ್ಸನ್ನು ಚಾಕೊಲೇಟ್ ಮತ್ತು ಫ್ರಾಕ್‌ನಿಂದ ಬೇರ್ಪಡಿಸುವುದು ಹೇಗೆ? ಯಾರಾದರೂ ಯೋಚಿಸುತ್ತಾರಾ?

ನಾನು ದಿನ ಬೆಳಗಾದರೆ ಸಾವಿರಾರು ಮಕ್ಕಳ ಚಿಲಿಪಿಲಿ ಕೇಳಿಸಿಕೊಳ್ಳುತ್ತೇನೆ. ಸಾಹಿತಿಯಾಗಿ ಮಕ್ಕಳಿಗೆ ಸಂಬಂಸಿದಂತೆ ನಾನು ಏನೂ ಬರೆದಿಲ್ಲ. ಪತ್ರಕರ್ತನಾಗಿ ಕಳ್ಳ ನನ್ಮಕ್ಕಳ ಬಗ್ಗೆ ಬರೆದದ್ದೇ ಜಾಸ್ತಿ. ಆದರೆ ಆರೂವರೆ ಸಾವಿರ ಮಕ್ಕಳಿಗೆ ಓದಲಿಕ್ಕೆ ಶಾಲೆ ಮಾಡಿ ಕೊಟ್ಟಿದ್ದೇನೆ. ಅದು ಸಮಾಧಾನದ ಸಂಗತಿ. ಮೊನ್ನೆ ಯಾವುದೋ ಸಭೆಯಲ್ಲಿ ಮಾತನಾಡುತ್ತ ಹೇಳಿದೆ : ಸಚಿವ ಕಾಗೇರಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಬಗ್ಗೆ ಮಾತನಾಡುತ್ತಿದ್ದಾರೆ. ನನ್ನ ಕೈಗೆ ಬರೀ ಹದಿನೈದು ಸರ್ಕಾರಿ ಶಾಲೆ ಕೊಟ್ಟು ನೋಡಲಿ. ಅವರಿಗೆ ಹೇಳಿ ಕೊಡ್ತೇನೆ : ಶಾಲೆ ನಡೆಸುವುದು ಹೇಗೆ ಅಂತ!

ಅದೇನೇ ಆದರೂ ಚಾಕೊಲೇಟ್ ಕೇಳಿದ ಆ ಕೊಳಕು ಫ್ರಾಕ್‌ನ ಮಗುವಿನ ಚಿತ್ರ ಮರೆಯಲಾಗುತ್ತಿಲ್ಲ.

-ಬೆಳಗೆರೆ

Read Archieves of 28 November, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books