Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ಜೋಯಿಡಾದ ಕಾಡಿನಿಂದ ಧಾರವಾಡದ ಅಮ್ಮನ ಮನೆಗೆ ಬಂದು...

ಉಲ್ಲಾಸವಿದೆ.

ಅಜಮಾಸು ಎರಡು ವರ್ಷಗಳ ನಂತರ ನನ್ನ ಜೊಯಿಡಾದ ಕಾಡುಗಳಿಗೆ, ಕಾಳೀನದಿಯ ಹೊಕ್ಕಳಿಗೆ, ಆ ಮೌನದೊಳಕ್ಕೆ ಕಾಲದ್ದಿ ಬಂದ ಸಂತೋಷ. ಇನ್ನೂ ದೊಡ್ಡ ಮಟ್ಟದಲ್ಲಿ ಎಲೆಯುದುರಲು ಶುರುವಾಗಿಲ್ಲ. ಹೀಗಾಗಿ ಕಾಡಿಗಿನ್ನೂ ಹಸಿರು ಪತ್ತಲ. ಆಗಲೇ ದಿವ್ಯವಾದ ಚಳಿ ಬಿಟ್ಟಿದೆ. ಜಾವಕ್ಕೇ ಎದ್ದು ಕೊಂಚ ಜೇನು ಕುಡಿದು, ಒಂದರ ಮೇಲೊಂದು ಎರಡು ಸ್ವೆಟರು ಹಾಕಿಕೊಂಡು ಬರೆಯಲು ಕುಳಿತರೆ ಇಳಿ ಸಾಯಂಕಾಲದ ತನಕ ಬರೆಯುವ ಸುಖ. ಈ ಬಾರಿ ಕಣ್ಣಳತೆ ದೂರದಲ್ಲಿ ಪುಟ್ಟದೊಂದು ಕೆರೆಯಿತ್ತು. ಫಿಜೂಲಾಗಿ ಹರಿದು ಹೋಗುತ್ತಿದ್ದ ಹೆಸರಿಲ್ಲದ ಹಳ್ಳವೊಂದಕ್ಕೆ ಒಡ್ಡು ಕಟ್ಟಿ ಉಡುಪುಡಿ ಎಂಬ ಅಕಾರಿ ಎಂದೋ ನಿರ್ಮಿಸಿದ ಚಿಕ್ಕ ಕೆರೆ. ಈಗವರು ಕುಂದಾಪುರ, ಮುರ್ಡೇಶ್ವರ, ಹೊನ್ನಾವರ ಸೀಮೆಗಳಲ್ಲಿ ಹಿರಿಯ ಅರಣ್ಯಾಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಎಷ್ಟೋ ವರ್ಷಗಳ ಹಿಂದೆ ಅವರು ಹಳ್ಳಕ್ಕೆ ಒಡ್ಡು ಕಟ್ಟಿ ರೂಪಿಸಿದ ಕೆರೆಯಲ್ಲಿ ಬೆಳಗಿನ ಹೊತ್ತಿನಲ್ಲಿ ಆನೆಯಿಂದ ಹಿಡಿದು ಜಿಂಕೆ-ಕಡವೆಗಳ ತನಕ ದೊಡ್ಡ ಪ್ರಾಣಿ ಸಂಕುಲ ಬಂದು ನೀರು ಕುಡಿದು ಹೋಗುತ್ತವೆ. ಮೊನ್ನೆ ಎಳೆ ಬಿಸಿಲಿನಲ್ಲಿ ಕೂತು ಬರೆಯುತ್ತಿದ್ದವನು ನಾಯಿಯೊಂದರ ಆರ್ತನಾದ ಕಿವಿಗೆ ಬಿದ್ದಂತಾಗಿ ಎಲ್ಲೋ ಚಿರತೆಯೊಂದು ನಾಯಿಯನ್ನು ಹಿಡಿದಿರಬೇಕು ಅಂದುಕೊಳ್ಳುತ್ತಿದ್ದೆ. ಅಷ್ಟರಲ್ಲಿ ನರಸಿಂಹ, ``ಅಣ್ಣಾ ಅಣ್ಣಾ... ಬೇಗ ನೋಡಿ" ಅಂದ.

ನೋಡಿದರೆ ಕೆರೆಯಲ್ಲಿ ಎರಡು ಎದೆಯೆತ್ತರದ ಕಡವೆ ಗಾಬರಿಗೊಂಡು ನಿಂತಿವೆ. ಒಂದು ಕಡವೆ ಮರಿ ಕಂಗಾಲಾಗಿ ನಡುಗುತ್ತಿದೆ. ಅವುಗಳನ್ನು ಅಟಕಾಯಿಸಿಕೊಂಡಿರುವುದು ಆರೇಳು ಸೀಳು ನಾಯಿಗಳ ಒಂದು ಗುಂಪು. ನಿಜಕ್ಕೂ ಕಾಡಿನಲ್ಲಿ ಚಿರತೆ ಅಥವಾ ಹುಲಿಗಿಂತ deadly ಆದದ್ದು ಸೀಳು ನಾಯಿಗಳ pack. ಅವು ಕೆಲಬಾರಿ ಇಪ್ಪತ್ತು ಮೂವತ್ತು ಸೇರಿ ಗುಂಪಾಗಿ ಬರುತ್ತವೆ. ಸತ್ತ ಪ್ರಾಣಿಯನ್ನು ತಿನ್ನುವುದಿಲ್ಲ. ಪ್ರಾಣಿಯೊಂದು ಹೆದರಿ ಓಡುತ್ತಿರುವಾಗ ಬೆನ್ನತ್ತಿ ಹರಿಹರಿದುಕೊಂಡು ತಿಂದುಬಿಡುತ್ತವೆ. ಕೆಲವೇ ನಿಮಿಷಗಳಲ್ಲಿ ಒಂದು ಭಾರೀ ಗಾತ್ರದ ಕಡವೆಯ ಎಲುಬು ಕೂಡ ಉಳಿದಿರುವುದಿಲ್ಲ. ಹೀಗಾಗಿ ಸೀಳು ನಾಯಿಗಳ ಗುಂಪಿಗೆ ಹುಲಿಯಂಥವೂ ಹೆದರುತ್ತವೆ. ನಾನು ಜೊಯಿಡಾದ ಕಾಡಿನಲ್ಲಿ ಒಂದಷ್ಟು ಜಮೀನು ಕೊಂಡಿದ್ದೇನೆ. ಕೋನಡಾ ಎಂಬ ಗ್ರಾಮದ ಹತ್ತಿರ. ಜಮೀನಿನಲ್ಲಿ ಪುಟ್ಟದೊಂದು ಮನೆಯೂ ಇದೆ. ಆದರೆ ಇವತ್ತಿನ ತನಕ ಅಲ್ಲಿ ಒಂದು ಸಿವುಡು ಕೊತ್ತಂಬರಿ ಬೆಳೆಯಲು ಆಗಿಲ್ಲ. ಏನು ಬೆಳೆಯಲು ಹೋದರೂ ಕಾಡೆಮ್ಮೆ ತುಳಿದು ಖಲಾಸು ಮಾಡಿಬಿಡುತ್ತದೆ. ಅದು ಬಿಡಿ, ಆ ಜಮೀನಿನ ಮನೆಯಲ್ಲಿ ಇರಲಿಕ್ಕೆ ಯಾವ ಕುಟುಂಬವೂ ಸಿದ್ಧವಿಲ್ಲ. ಅದಕ್ಕಿರುವ ಒಂದೇ ಕಾರಣವೆಂದರೆ ಸೀಳು ನಾಯಿಗಳ ಭಯ. ಈತನಕ ಸೀಳು ನಾಯಿ ಮನುಷ್ಯರನ್ನು ಬೇಟೆಯಾಡಿವೆಯಾ? ಗೊತ್ತಿಲ್ಲ.

ಜೊಯಿಡಾದ ಕಾಡಿನಲ್ಲಿ ನಾನು ಸೀಳು ನಾಯಿ ನೋಡಿದ್ದು ಕೂಡ ಮೊನ್ನೆಯೇ. ಬಂಡೀಪುರದ ಕಾಡಿನಲ್ಲಿ ಅವುಗಳ ಹಿಂಡು ನೋಡಿದ್ದೇನೆ. ಅವುಗಳ ಬಗ್ಗೆ ಕೃಪಾಕರ ಮತ್ತು ಸೇನಾನಿ `pack` ಅಂತಲೇ ಒಂದು ಸಾಕ್ಷ್ಯಚಿತ್ರ ಮಾಡಿದ್ದಾರೆ. ಕೇಳಿದ್ದೇನೆಯೇ ಹೊರತು ನೋಡಲಾಗಲಿಲ್ಲ. ಒಮ್ಮೆ ನೋಡಬೇಕು. ಮೊನ್ನೆ ನನ್ನೆದುರಿಗೇ ಮೂರರ ಪೈಕಿ ಒಂದು ಕಡವೆಯನ್ನು ಅವು ಮುಗಿಸಿದವು. ನಾನು ಕೆಮೆರಾ ಎತ್ತಿಕೊಂಡು ಬರುವ ಹೊತ್ತಿಗೆ ಕೆರೆಯಲ್ಲಿದ್ದುದು ಕೊಂಚ ನೆತ್ತರು ಮತ್ತು ಮೌನ.

ಜೊಯಿಡಾದಲ್ಲಿ ಬರೆಯಲು ಕುಳಿತರೆ ವಾರ-ತಾರೀಕು ಎರಡೂ ಮರೆತುಹೋಗುತ್ತವೆ. ಈ ಸಲ ಮಳಗಾಂವಕರರ ಬಂಗಲೆಗೂ ಹೋಗಲಿಲ್ಲ. ಹುಡುಗರು ದಾಂಡೇಲಿಯ ಸಂತೆಗೆ ಹೋಗಿ ಮತ್ತೆ ಮೀನು, ಪಾಂಫ್ರೆಟ್ ಮುಂತಾದವನ್ನು ತಂದು ಅಡುಗೆ ಮಾಡುತ್ತಿದ್ದರು. ಕಣ್ಣ ಬೆಳಕು ನಿಚ್ಚಳವಾಗಿರುವವರೆಗೂ ಸುಮ್ಮನೆ ತಲೆ ತಗ್ಗಿಸಿ ಬರೆಯುವುದಷ್ಟೆ ಕೆಲಸವಾಗಿತ್ತು. ಪುಣ್ಯಕ್ಕೆ ಅಲ್ಲಿ ಮೊಬೈಲು ತಾಕುತ್ತಿರಲಿಲ್ಲ. ಕೈಯಲ್ಲಿ ಹೊಸ ಕೆಮೆರಾ ಇತ್ತಾದರೂ ಬರೆಯುವ ಹುಕಿಯಲ್ಲಿದ್ದುದರಿಂದ ಫೊಟೋ ಕೂಡ ತೆಗೆಯಲಾಗಲಿಲ್ಲ. ಅಲ್ಲಿ ಮಳಗಾಂವಕರರು ಹೋದ ಮೇಲೆ ನನಗೆ ಸ್ನೇಹಿತರೂ ಇಲ್ಲದಂತಾಗಿದೆ. ಮೊದಲಿದ್ದ ಅರಣ್ಯಾಕಾರಿಗಳೂ ಈಗಿಲ್ಲ. ಇಷ್ಟಕ್ಕೂ ಏಕಾಂತ ಬಯಸಿ ಹೋದವನಿಗೆ ಯಾರದಾದರೂ ಸಾಂಗತ್ಯ ಏಕೆ ಬೇಕು. ನಿಮಗೆ ಆಶ್ಚರ್ಯವಾಗಬಹುದು. ಅಲ್ಲೇ ದಾಂಡೇಲಿಯ ಹತ್ತಿರದಲ್ಲಿ ಅಣಶಿ ಎಂಬ ಜಾಗವೊಂದಿದೆ. ಹಿಂದೆ ಡಿಎಫ್‌ಓ ಆಗಿದ್ದ ಮನೋಜ್ ಕುಮಾರ್ ಅವರು ಅಲ್ಲೊಂದು ಅದ್ಭುತವಾದ ಫೊಟೋ ತೆಗೆದಿದ್ದರು. ಹುಲಿಯೊಂದು ಹಸುವನ್ನು ಆಗಷ್ಟೆ ಹಿಡಿದು ಅದರ ಗೋಮಾಳೆಗೆ ಬಾಯಿ ಹಾಕುತ್ತಿರುವ ಫೊಟೋ. ಅಷ್ಟು ಅದ್ಭುತವಾದ ಕಾಡಿದೆ ಅಣಶಿಯ ಸುತ್ತ. ಅಲ್ಲಿಗೆ ಈ ಹಿಂದೆ ಗುಲ್ಜಾರ್ ಬಂದಿದ್ದರಂತೆ. ಕೆಲವು ದಿನ ಒಬ್ಬರೇ ತಂಗಿದ್ದು ಒಂದು ಸಿನೆಮಾದ script ಮಾಡಿಕೊಂಡು ವಾಪಸು ಹೋಗಿದ್ದರು. ಕಾಡು, ಮೌನ, ಕತ್ತಲು, ಏಕಾಂತ- ಈ ಹುಚ್ಚು ಯಾರನ್ನೂ ಬಿಟ್ಟಿಲ್ಲ. ತೇಜಸ್ವಿಯಂತೂ ಮನುಷ್ಯರ ಸಹವಾಸವೇ ಬೇಡವೆಂದು ನಿರ್ಧರಿಸಿ ಮೂಡಿಗೆರೆಯ ಕಾಡ ಮಧ್ಯೆ ತೋಟ ಸೇರಿಕೊಂಡಿದ್ದರು. ಲಂಕೇಶರು ಬೆಂಗಳೂರಿನ ಏಕತಾನತೆ ತಪ್ಪಿಸಿಕೊಳ್ಳಲಿಕ್ಕೆ ಅಂತಲೇ ಬಹುಶಃ ತೋಟ ಖರೀದಿಸಿದ್ದರು. ಅಂತಹ ಮೌನಗಳನ್ನು ಹುಡುಕಿಕೊಂಡು ಶಿವರಾಮ ಕಾರಂತರೂ ಆಗಾಗ ವಲಸೆ ಹೋಗುತ್ತಿದ್ದರು. ಅನಂತಮೂರ್ತಿಯವರಿಗೂ ಮೈಸೂರಿನ ಬಳಿ ತೋಟವಿದೆಯೆಂದು ಕೇಳಿದ್ದೇನೆ. ಶ್ರೀಕೃಷ್ಣ ಆಲನಹಳ್ಳಿಗೆ ತೋಟ-ಕಾಡು ಭಯಂಕರ ಅಬ್ಸೆಷನ್‌ಗಳಾಗಿದ್ದವು. ತೀರಿಕೊಳ್ಳುವುದಕ್ಕೆ ಕೆಲ ವರ್ಷಗಳಿಗೆ ಮುಂದೆ ಡಿ.ಆರ್.ನಾಗರಾಜ್ ಒಂದು ತೋಟ ಮಾಡಿದ್ದರು. ನನಗೆ ಈಗಲೂ ಗೆಳೆಯರು ಸಜೆಸ್ಟ್ ಮಾಡುತ್ತಿರುತ್ತಾರೆ: ಬೆಂಗಳೂರಿನ ಆಸುಪಾಸಿನಲ್ಲೇ ಒಂದು ತೋಟ ಖರೀದಿಸು ಅಂತ. ಸೋಮವಾರ ಪೇಟೆಯ ಮಿತ್ರರಾದ ಚಂದ್ರಕಾಂತ್ ಮತ್ತು ಸುಚರಿತ ಅವರ ತೋಟದ ಮನೆಯಲ್ಲೇ ಹೋಗಿ ಇರುವಂತೆ ಅನೇಕ ಸಲ ಹೇಳಿದ್ದಾರೆ. ಆದರೆ ತೋಟ-ವ್ಯವಸಾಯ ನನ್ನ ಆಕರ್ಷಣೆಗಳಲ್ಲ. ಕಾಡು ಅಂದರೆ ಜೀವ ಚಡಪಡಿಸುತ್ತದೆ. ಬಹುಶಃ ಅಂದುಕೊಂಡದ್ದಕ್ಕಿಂತ ಹೆಚ್ಚಿನ ದುಡ್ಡು ಬಂದು ಮನೆ-ಶಾಲೆ-ಆಫೀಸು ಮುಂತಾದವುಗಳನ್ನು ಐವತ್ತು ತುಂಬುವ ಮೊದಲೇ ಖರೀದಿಸಿದ್ದರಿಂದಲೋ ಏನೋ, ಮತ್ತೇನನ್ನೂ ಖರೀದಿಸಲು ಮನಸು ಒಲ್ಲದು. ನಾನು ಈ ವಿಷಯಗಳಲ್ಲಿ ಅಲ್ಪ ತೃಪ್ತ. ಎಲ್ಲೋ ಕಾಡ ಮಧ್ಯೆ ಉಳಿದುಕೊಂಡು, ಕಸುವು ಇದ್ದಷ್ಟು ದೂರಕ್ಕೆ ನಡೆದು ಹೋಗಿ, ನಾಲ್ಕು ಫೊಟೋ ತೆಗೆದು, ಚಳಿಯ ರುಚಿ ಸವಿಯುತ್ತಲೇ ಜೋಡಿಸಿದ ಕಟ್ಟಿಗೆಯ camp fire ಮುಂದೆ ಕುಳಿತು, ಹಗಲ ಬೆಳಕಿನಲ್ಲಿ ತುಂಬ ಹೊತ್ತು ಬರೆಯುತ್ತ ಕುಳಿತಿದ್ದು ನಾಲ್ಕು ದಿನ ಕಳೆದು ಮತ್ತೆ ಈ ಕಾಂಕ್ರೀಟು ಕಾಡಿಗೆ ಹಿಂತಿರುಗಿ ಬಿಟ್ಟರೆ ಅಷ್ಟೇ ಸಮಾಧಾನ.

ಈ ಬಾರಿ ಬೆಂಗಳೂರಿಗೆ ಹಿಂತಿರುಗುವ ಹೊತ್ತಿಗೆ ಚಿಕ್ಕದೊಂದು ದುರ್ವಾರ್ತೆ ಕಾದಿತ್ತು. ನಾನು ಏಳೆಂಟು ವರ್ಷಗಳಿಂದ ಸಾಕಿಕೊಂಡಿದ್ದ ಅಷ್ಟೂ ನಾಯಿಗಳನ್ನು ಉಮೇಶ ಕೊಟ್ಟು ಬಿಟ್ಟಿದ್ದ. ತುಂಬ ಇಷ್ಟದಿಂದ ತಂದುಕೊಂಡ ನಾಯಿಮರಿಗಳವು. ಶೆರ್ಲಿ, ಕರ್ಲಿ, ಇರ್ಲಿ, ಯಡ್ಡಿ, ಬ್ಯಾಗಿ, ಮ್ಯಾಗಿ, ಬಾಬಿ, ಕುಳ್ಳ ನಂಜೇಗೌಡ, ಮಹಮ್ಮದ್ ಅಲಿ, ಸೋನಿಯಾ, ಕಲ್ಪಿ, ಜೂಡಿ- ಹೀಗೆ ಸುಮಾರು ಹದಿನೆಂಟು ನಾಯಿ. ಆದರೆ ಇತ್ತೀಚಿನ ದಿನಗಳಲ್ಲಿ ಅವುಗಳೊಂದಿಗೆ ಆಡಲಿಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ. ಡೇನ್, ಪಗ್, ಜರ್ಮನ್ ಷೆಪರ್ಡ್, ಅಪ್ಸು ಹೀಗೆ ಅನೇಕ ಜಾತಿಯ, ತಳಿಗಳ ನಾಯಿಗಳವು. ಆದರೆ ಅವುಗಳ ಮರಿಗಳನ್ನು ಮಾರಲು ನಾನು ಯಾವತ್ತೂ ಪ್ರಯತ್ನಿಸಲಿಲ್ಲ. ತೀರ ನಾಯಿಗಳ ಸಂತೋಷದ ಫಲಗಳನ್ನು ಮಾರಲು ನಿಲ್ಲುವುದು ಮನುಷ್ಯತ್ವವಲ್ಲ. ಹೀಗಾಗಿ ಅವುಗಳಿಂದ ನನಗೆ ಆದಾಯವೂ ಇರಲಿಲ್ಲ. ಜೊತೆಗೆ ಮೇಂಟೆನೆನ್ಸ್ ಎಂಬುದು ಸುಮ್ಮನೆ ಅಲ್ಲ. ಅವುಗಳನ್ನು ನೋಡಿಕೊಳ್ಳುವುದಕ್ಕೆ ಅಂತಲೇ ಒಬ್ಬ ಆಳು, ಪ್ರತೀ ವಾರ ಬಂದು ಪರೀಕ್ಷೆ-ಚಿಕಿತ್ಸೆ ಮಾಡಲಿಕ್ಕೆ ಒಬ್ಬ ಡಾಕ್ಟರು. ಅವುಗಳಿಗೆ ಪ್ರತಿ ನಿತ್ಯ ಮಾಂಸ ಒದಗಿಸುವ ವ್ಯವಸ್ಥೆ, ಇಂಜೆಕ್ಷನ್ನುಗಳು- ಹೀಗೆ ಅದೊಂದು ದೊಡ್ಡ ಪರಿವಾರವೇ ಆಗಿತ್ತು. ಆಫೀಸಿನ ಮೇಲೆ ಸಾಲಾಗಿ ಅವುಗಳಿಗೆ ಗೂಡು ಕಟ್ಟಿಸಿದ್ದೆ. ಸಮಸ್ಯೆಯೆಂದರೆ ಅವುಗಳಲ್ಲಿ ಕೆಲವು ಕೊಂಚ ಉಗ್ರವಾದವಾಗಿದ್ದವು. ಒಂದು ಅಪ್ಸು ಜಾತಿಯ ನಾಯಿಮರಿಯನ್ನು ಧಾರವಾಡದಿಂದ ತಂದಿದ್ದೆ. ಯಾವಪರಿ ಸಿಡುಕುವ ನಾಯಿಯೆಂದರೆ ಅದಕ್ಕೆ ತಮಾಷೆಯಾಗಿ `ಯಡ್ಡಿ` ಅಂತ ಹೆಸರಿಟ್ಟಿದ್ದೆ. ಮೇಲೆ ನಾಯಿಗಳ ಕೆನಲ್‌ಗೆ ನಾನು ಮತ್ತು ಅವುಗಳನ್ನು ನಿತ್ಯ ನೋಡಿಕೊಳ್ಳುವ ದಲಿದತ್ತ ಭಟ್ಟ ಎಂಬ ಗೂರ್ಖಾಲಿ ಬ್ರಾಹ್ಮಣನನ್ನು ಹೊರತುಪಡಿಸಿ ಮತ್ಯಾರೂ ಕಾಲಿಡುವಂತಿರಲಿಲ್ಲ.ಕೆಲವು ನಿಜಕ್ಕೂ wild ಆಗಿದ್ದವು. ನಾನು ಹೋದರೆ ಅವಕ್ಕೆ ಮೈಮೈ ಅಡರುವ ಸಂಭ್ರಮ. ಒಮ್ಮೆ ಹೋದರೆ ಕನಿಷ್ಠ ಎರಡು ತಾಸು ಅವುಗಳೊಂದಿಗೆ ಆಡಬೇಕು. ಇಳಿದು ಬಂದ ಮೇಲೆ ಕನಿಷ್ಠ ಒಂದು ತಾಸು ಸ್ನಾನ ಮಾಡಬೇಕು. ನಾಯಿ ಕಚ್ಚಲೇ ಬೇಕೆಂದಿಲ್ಲ. ಅವುಗಳ saliva (ಜೋಲ್ಲು) ಕೂಡ ತುಂಬ ಅಪಾಯಕಾರಿ. ದಲಿದತ್ತ ಭಟ್ಟನಿಗೆ ಅವೆಷ್ಟು ಸಲ ಕಚ್ಚಿದ್ದವೋ. ಅವನು ಗಾಯಕ್ಕೆ ಕೊಂಚ ರಮ್ ಸುರಿದುಕೊಂಡು ಸುಮ್ಮನಾಗಿ ಬಿಡುತ್ತಿದ್ದ. ನಾನೇ ಬಯ್ದು ಡಾಕ್ಟರನ್ನು ಕರೆಸಿ ಇಂಜೆಕ್ಷನ್ ಕೊಡಿಸುತ್ತಿದ್ದೆ.

ಅವನದು `ಸರ್ವ ರೋಗಾನಿಕೂ ಸಾರಾಯಿ ಮದ್ದು` ಎಂಬ `ಗುಂಡು` ಸಿದ್ಧಾಂತ. ಆದರೆ ಒಂದು ಹೆಮ್ಮೆಯೆಂದರೆ, ಏಳು ವರ್ಷಗಳಲ್ಲಿ ಅವನು ಒಂದೇ ಒಂದು ದಿನ ರಜೆ ಹಾಕಲಿಲ್ಲ. ಒಂದೇ ಒಂದು ಹೊತ್ತು ನಾಯಿಗಳಿಗೆ ಊಟ ಹಾಕದೆ ತಾನು ಊಟ ಮಾಡಲಿಲ್ಲ. ಅಷ್ಟು ಪ್ರೀತಿಯಿಂದ ಅವುಗಳನ್ನು ನೋಡಿಕೊಂಡ. ಕಾಲಕಾಲಕ್ಕೆ ಟoo ಮಾಡಿಸುತ್ತಿದ್ದ. ಖುದ್ದು ನಿಂತು ಅವುಗಳ ಹೆರಿಗೆ ಮಾಡಿಸಿ ಬಾಣಂತಿತನ ಮಾಡುತ್ತಿದ್ದ. ಕೆಲಸವಷ್ಟೆ ಅಲ್ಲ: ಅವನು ಏನನ್ನೂ ಕದಿಯುತ್ತಿರಲಿಲ್ಲ. ಇದೆಲ್ಲದರ ಜೊತೆಗೆ ಬ್ಯಾಂಕಿಗೆ ಹೋಗಿ ಬರೋದು, ಪೋಸ್ಟ್ ತರುವುದು, ನನಗೆ ಊಟ ತರುವುದು-ಹೀಗೆ ಎಲ್ಲವನ್ನೂ ಮಾಡುತ್ತಿದ್ದ. ಆದರೇನು ಮಾಡಲಿ? ನಾನು ಖುದ್ದಾಗಿ ಒಮ್ಮೆಯೂ ಅವುಗಳ ಮೈದಡವದೆ ಇದ್ದು ಬಿಡುವ ಪರಿಸ್ಥಿತಿಯಲ್ಲಿ ಅವುಗಳನ್ನು ಇಟ್ಟುಕೊಂಡು ಏನು ಮಾಡೋದು? ಸುಮ್ಮನೆ ಜಂಬ ಕೊಚ್ಚಿಕೊಳ್ಳಲಿಕ್ಕೆ ಸಾಕಬೇಕಾ? `ಉಮೇಶ, ಚೆನ್ನಾಗಿ ನೋಡಿಕೊಳ್ಳುವವರಿದ್ದರೆ ಅವುಗಳನ್ನು ಕೊಟ್ಟುಬಿಡು. ಆದರೆ ನಾನು ಊರಲ್ಲಿ ಇಲ್ಲದಾಗ ಕೊಡು. ಮನಸ್ಸಿಗೆ ನೋವಾಗುತ್ತದೆ` ಅಂದಿದ್ದೆ.
ದಾಂಡೇಲಿಯಿಂದ ಹಿಂತಿರುಗಿ ಧಾರವಾಡ ತಲುಪಿದ ಸ್ವಲ್ಪ ಹೊತ್ತಿಗೆ `ಅಣ್ಣಾ, ಎಲ್ಲವನ್ನು ಕಳಿಸಿದೆ` ಅಂತ ಫೋನು ಮಾಡಿದ್ದ ಉಮೇಶ. ಹಾಗೆ ಮುಗಿಯಿತು ಶ್ವಾನ ಪುರಾಣ.

ಯಾಕೋ ಗೊತ್ತಿಲ್ಲ ಧಾರವಾಡದಲ್ಲಿ ಒಂದು ದಿನ ಇರೋಣ ಅನ್ನಿಸಿತ್ತು. ಎಂದಿನಂತೆ ಅಶೋಕ ಶೆಟ್ಟರನನ್ನ, ಡಾ.ಪಾಂಡುರಂಗಿಯವರನ್ನ ಕಾಣುವ ಬಯಕೆ. ಅಷ್ಟರಲ್ಲಿ ಈ ಹುಡುಗಿ ಸಾರಿಕಾ ಫೋನ್ ಮಾಡಿದ್ದಳಲ್ಲ? ಸಾರಿಕಾ ನನಗೆ ಪ್ರೀತಿಯ, ತಮಾಷೆಯ, ಚೇಷ್ಟೆಯ ಗೆಳತಿ. ಅವಳು ಖ್ಯಾತ ಕೊಳಲು ವಾದಕ ಪ್ರವೀಣ ಗೋಡಖಿಂಡಿಯ ಪತ್ನಿ. ಮೂಲತಃ ಧಾರವಾಡದವಳು. ನಿಜಕ್ಕೂ ಬುದ್ಧಿವಂತೆ ಮತ್ತು ಒಳ್ಳೆಯ ನಟಿ. ಮುಖ್ಯವಾಗಿ, ಅಭಿರುಚಿಯಿರುವ ಹೆಣ್ಣುಮಗಳು. ``ಇಲ್ಲೇ ಬಂದೀರಂತಲ್ಲ? ನಾನು ತವರು ಮನೀಗೆ ಬಂದಿದ್ದೆ. ಅಕ್ಕ ತಂಗಿಯರೆಲ್ಲ ಸೇರಿದ್ದೇವೆ. ಕೊನೆಯವಳ ಮದುವೆ. ಕಾರ್ಡು ಕೊಡುವ ಸಂಭ್ರಮ" ಅಂದಳು. ಅವಳ ತಂದೆ ರವೀಂದ್ರ ಡಂಬಳ. ಅವರು ತುಂಬ ವರ್ಷ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿದ್ದವರು. ಮನೆಯ ತುಂಬ ಹೆಣ್ಣುಮಕ್ಕಳು. ಎಲ್ಲರಿಗೂ ವಿದ್ಯೆ, ಸಂಸ್ಕಾರ, ಸಾಹಿತ್ಯ, ಸಂಗೀತದ ಅಭಿರುಚಿ ಕಲಿಸಿದವರು. ಈಗ ಬೆಂಗಳೂರಿನಲ್ಲೇ ಪ್ರವೀಣ ಗೋಡಖಿಂಡಿ ಮತ್ತು ಸಾರಿಕಾಳ ಮನೆಯ ಪಕ್ಕದಲ್ಲೇ ವಾಸವಿದ್ದಾರೆ. ಅವರೂ ಧಾರವಾಡದಲ್ಲೇ ಇದ್ದಾರೆ ಅಂದಾಗ ಎಲ್ಲರನ್ನೂ ಭೇಟಿಯಾದಂತಾಯಿತು ಅಂದುಕೊಂಡು ಹೊರಟೆ. ಯಥಾಪ್ರಕಾರ ಉತ್ತರ ಕರ್ನಾಟಕದ ಆತಿಥ್ಯ. ಅವರ ಪತ್ನಿಯ ತಂಗಿಯ ಮನೆಯಲ್ಲಿದ್ದರು. ಒಂದಷ್ಟು ಹೊತ್ತು ಹರಟೆ, ಶುದ್ಧ ಮನಸ್ಸುಗಳ ನಗು. ಸ್ವಲ್ಪ ಹೊತ್ತಿನ ನಂತರ ರವಿ ಕುಲಕರ್ಣಿಗೆ ಹೇಳಿದೆ: ಅವ್ವನ ಮನೆಗೆ ಹೋಗೋಣ.

ಅವರು ಏನು ಮಾಡುತ್ತಿದ್ದರೋ ಗೊತ್ತಿಲ್ಲ. ನನ್ನನ್ನು ಬಾಗಿಲಲ್ಲಿ ನೋಡಿದ ಕೂಡಲೆ ಅವಾಕ್ಕಾದವರು, ``ರವೀ, ಹಿಂಗೇನೋ ಸರ್ಪ್‌ರೈಸ್ ಕೊಡೋದೂ...?" ಅಂತ ಥೇಟು ಅಮ್ಮನ ಹಾಗೆ ಅವಚಿಕೊಂಡರು ಮಾಲತಿ ಪಟ್ಟಣಶೆಟ್ಟಿ. ನಾನು ತುಂಬ ಗೌರವಿಸುವ, ಇಷ್ಟಪಡುವ ಹೆಣ್ಣುಮಗಳು ಆಕೆ. ಅವರಿಗೀಗ ಎಪ್ಪತ್ತು ವರ್ಷ. ಕಳೆದ ಸುಮಾರು ಮೂವತ್ತೆರಡು ವರ್ಷಗಳಿಂದ ಸ್ಥಿರವಾಗಿ ಕಾಲೂರಿ ನಿಂತು, ಒಬ್ಬಂಟಿಯಾಗಿ- single parent ಆಗಿ ತಮ್ಮಿಬ್ಬರು ಮಕ್ಕಳನ್ನು ತುಂಬ ಚೆನ್ನಾಗಿ ಬೆಳೆಸಿ, ಸಾಹಿತ್ಯಿಕವಾಗಿಯೂ ಔನ್ನತ್ಯ ಸಾಸಿದ ಗಟ್ಟಿ ವ್ಯಕ್ತಿತ್ವದ ಹೆಣ್ಣು ಮಗಳು ಅವರು. ಅವರನ್ನು ನೋಡುತ್ತಿದ್ದರೆ ನನಗೆ ಅಮ್ಮನದೇ ನೆನಪಾಗುತ್ತದೆ. ಒಂಟಿತನವೆಂಬುದು ಎಷ್ಟೊಂದು ಕಷ್ಟದ, ಎಷ್ಟು ಕ್ರೂರವಾದ ಶಾಪ? ಮಾಲತಿ ಪಟ್ಟಣಶೆಟ್ಟಿ ರಜತಗಿರಿಯ ಅಪಾರ್ಟ್‌ಮೆಂಟಿನಲ್ಲಿ ಒಬ್ಬರೇ ಇದ್ದಾರೆ. ಮಗ-ಸೊಸೆ ಅಮೆರಿಕದಲ್ಲಿದ್ದಾರೆ. ಮಗಳು ಸೀಮಾ ತುಂಬ ಬುದ್ಧಿವಂತೆ. ಆಕೆ ಗಂಡನೊಂದಿಗೆ ಬಹುಶಃ ಸಿಂಗಪೂರ್‌ನಲ್ಲಿದ್ದಾಳೆ. ನಾನು ಹೋದಾಗ ಅಮೆರಿಕದಿಂದ ಮಗ ಫೋನ್ ಮಾಡಿದ್ದ. ಮೊಮ್ಮಗಳು ಮಧ್ಯೆ ಮಧ್ಯೆ `ಅಜ್ಜೀ... ಅಜ್ಜೀ` ಅನ್ನುತ್ತಿದ್ದಳು. ಈ ತಾಯಿಗೆ ಅದೆಂಥ ಸಂಭ್ರಮವೋ! ``ಮನೀಗೆ ಯಾರು ಬಂದಾರೆ ಅಂತ ಗೊತ್ತದೇನೂ? ರವೀ ಬಂದಾನ. ರವಿ ಬೆಳಗೆರೇ..." ಅಂತ ಮಗನಿಗೆ ಹೇಳುತ್ತಿದ್ದರು. ನನಗಾದರೂ ಅಮ್ಮನ ಮನೆಗೆ ಹೋದಷ್ಟೇ ಆನಂದವಾಗಿತ್ತು. ಈ ಬದುಕೇ ಹೀಗೆ. ಎಲ್ಲೆಲ್ಲಿಯವೋ ಋಣಾನುಬಂಧಗಳನ್ನು ಹುಡುಕಿಕೊಳ್ಳುತ್ತದೆ.

``ಯಾಕೆ ಭಾಳ ಸೊರಗೀದೀ. ಇನ್ನು ತೆಳ್ಳಗಾಗಿದ್ದು ಸಾಕು ರವೀ. ಚೆಂದಾಗಿ ನಿದ್ದಿ ಮಾಡು. ಬರೆದಿದ್ದು ಸಾಕು. ಆರೋಗ್ಯ ನೋಡಿಕೋ... ಇರು, ನಿನಗೇನಾದರೂ ಮಾಡಿಕೊಡ್ತೀನಿ" ಅಂದರು. ತಿನ್ನುವ ಮನಸ್ಸು, ಹಸಿವು ಎರಡೂ ಇದ್ದವು. ಆದರೆ ಕೇವಲ ರೊಟ್ಟಿ-ಪಲ್ಯಗಳಿಗೆ compromise ಆಗುವ ಸ್ಥಿತಿಯಲ್ಲಿ ನಾನಿರಲಿಲ್ಲ. ರವಿ ಕುಲಕರ್ಣಿಗೆ ಮೊದಲೇ ಹೇಳಿಟ್ಟಿದ್ದೆ. ಒಂದಷ್ಟು ಕುರಿ-ಕೋಳಿ ತಿನ್ನಿಸು. ನನಗೆ ಹುಬ್ಬಳ್ಳಿಯ ಪಟ್ಟೇಗಾರರ ಅಡುಗೆಯೇ ಬೇಕು. ಬೆಂಗಳೂರಿನಲ್ಲಿ ಅದು ಭಿಕ್ಷೆ ಬೇಡಿದರೂ ಸಿಗುವುದಿಲ್ಲ. ಒಂದೂಕಾಲು ವರ್ಷದಿಂದ ಮುದ್ದೆ-ಸೊಪ್ಪು ತಿಂದು ರೋಸಿದ್ದೇನೆ. ಸಾಕು ಡಯೆಟ್ಟು. ಎಪ್ಪತ್ತು ಕೇಜಿಗೆ ಇಳಿಸಿದ್ದೇನೆ, ನೂರಾ ಆರು ಕೇಜಿಯ ತೂಕವನ್ನ. ಒಂದೊಳ್ಳೆ ಊಟ ಮಾಡಿಸು ಅಂದಿದ್ದೆ. ಅಶೋಕ ಶೆಟ್ಟರ್‌ನನ್ನು ಭೇಟಿಯಾಗುವ ಹಂಬಲ ಹಾಗೇ ಉಳಿಯಿತು. ರಾತ್ರಿ ಊಟ ಮಾಡಿದವನು ಹೊರಟು ಬಿಟ್ಟೆ. ಧಾರವಾಡ ಆಗಲೇ ಗಾಢ ನಿದ್ರೆಯಲ್ಲಿತ್ತು.

ಮಧ್ಯರಾತ್ರಿಯಲ್ಲಿ ಯಾವುದೋ ಧಾಬಾದ ಮುಂದೆ ನಮ್ಮ ಹುಡುಗರು ಚಹ ಕುಡಿಯಲು ಕಾರು ನಿಲ್ಲಿಸಿದಾಗ ಕೆಳಗಿಳಿದು ಸಿಗರೇಟು ಹಚ್ಚಿ ನಿಂತೆ. ಬಹುಶಃ ಒಂದು ಬಸ್ಸನ್ನೂ ಅಲ್ಲಿ ಚಹಕ್ಕೆಂದೇ ನಿಲ್ಲಿಸಲಾಗಿತ್ತು. ಅದರ ಕಿಟಕಿಯೊಳಗಿನಿಂದ ಹಣಿಕಿದ ಮಧ್ಯವಯಸ್ಕರು ಇಳಿದು ಬಂದು,

``ನೀವು... ನೀವೇ ಅಲ್ರೀ?" ಅಂದರು.

``ಹೌದು... ನಾನು ನಾನೇ" ನಗುತ್ತಾ ಹೇಳಿದೆ.

``ನಿಮ್ಮನ್ನ ಗುಲಬರ್ಗಾದಾಗ ನೋಡಿದ್ದೆ... ಅಜಮಾಸು ಇಪ್ಪತ್ತೈದು ವರ್ಷದ ಹಿಂದೆ" ಅಂದಾಗ ಮಾತ್ರ ಆಶ್ಚರ್ಯವೆನ್ನಿಸಿತ್ತು. ನಾನು ಕಳೆದ ಹದಿನೈದು ವರ್ಷಗಳಲ್ಲಿ ಗುಲಬರ್ಗಾಕ್ಕೆ ಅನೇಕ ಸಲ ಹೋಗಿದ್ದೇನೆ. ಭೀಮಾತೀರದ ಹಂತಕರ ಕುರಿತು ಬರೆಯುವಾಗಲಂತೂ ಆ ಜಿಲ್ಲೆಯ ಮೂಲೆ ಮೂಲೆ ತಿರುಗಿಬಿಟ್ಟೆ. ಇವತ್ತಿಗೂ ಬಿಜಾಪುರ-ಗುಲಬರ್ಗಾ ಜಿಲ್ಲೆಯ ಅತಿ ಸಾಮಾನ್ಯ ಹಳ್ಳಿಗರೂ ನನ್ನನ್ನು ಗುರುತಿಸುತ್ತಾರೆ. ಆದರೆ ಇವರು ಇಪ್ಪತ್ತೈದು ವರ್ಷಗಳ ಹಿಂದಿನ ಮಾತಾಡುತ್ತಿದ್ದಾರೆ. ಪೊರಪಾಟಾಗಿರಬೇಕು. ಇಪ್ಪತ್ತೈದು ವರ್ಷಗಳ ಹಿಂದೆ ಯಾವ ಪತ್ರಿಕೆಯಲ್ಲೂ ನನ್ನ ಫೊಟೋ ನಾನೇ ನೋಡಿರಲಿಲ್ಲ.
``ಇಲ್ರೀ, ನನಗ ನೆನಪೈತಿ. ನಾನೊಂದು ಪ್ರೆಸ್ಸಿನೊಳಗೆ ಆಗ ಬೈಂಡಿಂಗ್ ಮಾಡತಿದ್ದೆ. ಆವಾಗ ಕ್ರಾಂತಿ ಪತ್ರಿಕೆ ಸಂಪಾದಕ ಸಿದ್ಧರಾಮೇಶ್ ಅವರ ಮರ್ಡರ್ ಆಗಿತ್ತು. ನೀವು ಅವರ ಮನೀ ಮಂದೀಗೆ ಸಮಾಧಾನ ಹೇಳಿ ವರದಿ ಮಾಡಲಿಕ್ಕೆ ಬಂದಿದ್ರಿ. ಅವಾಗ `ಪ್ರಜಾಪ್ರಭುತ್ವ` ಅಂತ ಒಂದು ಪೇಪರ್ ಬರ್ತಿತ್ತು. ನೀವು ಬರೆದಿದ್ದು ನೆನಪೈತಿ. ಆ ಮೇಲೆ ನಿಮ್ದೇ ಪೇಪರು ಮಾಡಿದ್ರಲ್ರೀ..." ಎಂದು ಆತ ಎಷ್ಟು ನಿಚ್ಚಳವಾಗಿ ಮಾತನಾಡತೊಡಗಿದ್ದನೆಂದರೆ, ಅಬ್ಬಾ... ಈ ಮನುಷ್ಯನ ನೆನಪಿನ ಶಕ್ತಿಯೇ ಅನ್ನಿಸಿತು.

ಕೊಲೆಯಾದ ಸಿದ್ಧರಾಮೇಶ್ ಮನೆಗೆ ಹೋದದ್ದು ನನಗೆ ನೆನಪಿದೆ. `ಪ್ರಜಾಪ್ರಭುತ್ವ` ಎಂಬ ಹೆಸರಿನ ಪತ್ರಿಕೆಗೆ ವರದಿ ಮಾಡುತ್ತಿದ್ದುದೂ ನೆನಪಿದೆ. ಬರೆದರೆ ಅದು ಧಾರಾವಾಹಿಯೇ ಆದೀತು.

ಹಾಗಂತ ಅಂದುಕೊಳ್ಳುವಷ್ಟರಲ್ಲೇ ಆತನ ಬಸ್ಸು ಹೊರಟಿತು. ಆತನ ಹೆಸರೂ ಕೇಳಲಾಗಲಿಲ್ಲ.

-ನಿಮ್ಮವನು
ಆರ್. ಬಿ

Read Archieves of 28 November, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books