Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ಅವಳನ್ನು ವಿದೇಶದಲ್ಲಿ ಹೆಂಡತಿ ಅಂದ: ಅವಳು ಚಾಪೆ ದಿಂಬು ತಂದು ಕುಂತಳು

ಒಂದು ಜವಾಬ್ದಾರಿಯುತ ಭಾಷಣಕ್ಕೆ ನೆಹರೂ ಸಿದ್ಧರಾಗುತ್ತಿದ್ದುದು ಹೌದು. ತಾವೇ ಕುಳಿತು ಭಾಷಣವನ್ನು ಬರೆಯುತ್ತಿದ್ದರು. ಆದರೆ ಕೆಲವೊಮ್ಮೆ ಆ ಕ್ಷಣದ ಅನುಭೂತಿಗೆ ಒಳಗಾಗಿ ಅವರು ಆಡುತ್ತಿದ್ದ ಮಾತುಗಳು ಇತಿಹಾಸದಲ್ಲಿ ದಾಖಲೆಯಾಗಿಬಿಟ್ಟಿವೆ. ಅವತ್ತು ಗಾಂಧಿಜಿ ಹತ್ಯೆಯಾದಾಗ ಅವರು ರಾಷ್ಟ್ರವನ್ನು ಉದ್ದೇಶಿಸಿ ಆಡಿದ ಮೊದಲ ಮಾತು: “The light has gone” ಎಂಬುದು ಅವರಿಗೇ ಹೊಳೆದ ಅರ್ಥಗರ್ಭಿತ ಶೋಕ ಸಂದೇಶ.

ಒಮ್ಮೆ ನೆಹರೂ ಕಚೇರಿಯಲ್ಲಿದ್ದಾಗ ಅವರಲ್ಲಿಗೆ ಹೋಗಿ “ಈ ಮನುಷ್ಯ ದಶಕಗಳಿಂದ ದುಡಿಯುತ್ತಿದ್ದಾನೆ. ಪ್ರಾಮಾಣಿಕ. ನಿಮ್ಮ ತಂದೆಯವರಿಗೂ ಸೇವೆ ಸಲ್ಲಿಸಿದ್ದಾನೆ. ಪಾಪ ಬಡವ. ಅವನನ್ನೇಕೆ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನ ಅಭ್ಯರ್ಥಿಯನ್ನಾಗಿ ಮಾಡಬಾರದು?" ಅಂದೆ.

“ಯಾರನ್ನ?" ಕೇಳಿದರು ಪುಸ್ತಕದಿಂದ ತಲೆಯೆತ್ತದೆ.

“ಎಸ್.ಡಿ.ಉಪಾಧ್ಯಾಯ ಅವರನ್ನ!" ಅಂದೆ.

“ಪಾರ್ಲಿಮೆಂಟಿಗೆ ಬಂದು ಅವನೇನು ಮಾಡುತ್ತಾನೆ? ತೀರ ನಿಷ್ಪ್ರಯೋಜಕ ಮನುಷ್ಯ. Singularly unsuitable” ಅಂದರು ನನ್ನತ್ತ ನೋಡಿ. ಮತ್ತೆ ನೆಹರೂ ಅವರ ಡೆಂಟಿಸ್ಟ್ ಎನ್.ಎನ್.ಬೆರಿ ಅವರ ಬಳಿಗೆ ಕರೆದೊಯ್ಯುವಾಗ ನಾನು ಉಪಾಧ್ಯಾಯರ ಪ್ರಸ್ತಾಪ ಮಾಡಿ “ನಿಮ್ಮ ಕಾಂಗ್ರೆಸ್ ಎಂ.ಪಿ.ಗಳಲ್ಲಿ ಐವತ್ತು ಪರ್ಸೆಂಟಿನಷ್ಟು ಜನ ಉಪಾಧ್ಯಾಯರಷ್ಟೇ ನಿರುಪಯುಕ್ತರಿದ್ದಾರೆ. ಉಪಾಧ್ಯಾಯರ ಯೋಗ್ಯತೆ ನೋಡಿ ಅವರನ್ನು ಕುರ್ಚಿಗೆ ತರಬೇಕಿಲ್ಲ. ಆದರೆ ಮನುಷ್ಯನ ಪ್ರಾಮಾಣಿಕತೆಗೊಂದು ಬೆಲೆ ಸಂದಾಯವಾಗಬೇಕು" ಅಂದೆ. “ಆಯ್ತು. ಅವನಿಗೊಂದು ಕ್ಷೇತ್ರ ಹುಡುಕಿಸು" ಅಂದರು ನೆಹರೂ. ಅದನ್ನಾಗಲೇ ನಾನು ಮಾಡಿದ್ದೆ. ವಿಂಧ್ಯ ಪ್ರದೇಶದ ಸಾತ್ನಾದಿಂದ ಆಯ್ಕೆಯಾಗಲು ಅನುವು ಮಾಡಿಕೊಡಲಾಯಿತು. ನೆಹರೂ ಮನೆಯ ನಿಯತ್ತಿನ ಉದ್ಯೋಗಿ ಎಸ್.ಡಿ.ಉಪಾಧ್ಯಾಯ ಭಾರತದ ಪಾರ್ಲಿಮೆಂಟ್ ಸದಸ್ಯರಾಗಿ ಅನೇಕ ಸಲ ಚುನಾಯಿತರಾದರು. ಇಡೀ ಪಾರ್ಲಿಮೆಂಟಿನಲ್ಲಿ ಒಂದೇ ಒಂದು ಮಾತೂ ಆಡದೆ ಅಷ್ಟು ವರ್ಷ ಕುಳಿತದ್ದಕ್ಕೆ ಸರ್ಕಾರ ಹಣ ನೀಡಿತೆಂದರೆ ಅದು ಉಪಾಧ್ಯಾಯರಿಗೆ ಮಾತ್ರ. ಈಗ ವಯಸ್ಸಾಗಿದೆ. ಜೀವನ ನಿರ್ವಹಣೆಗೆ ತಿಂಗಳಿಗೆ ಐನೂರು ರುಪಾಯಿ ಪಿಂಚಣಿ ಪಡೆಯುತ್ತಿದ್ದಾರೆ. ಅದೇ ಸಮಾಧಾನ.

ನೆಹರೂರೊಂದಿಗಿನ ನನ್ನ ಸಂಬಂಧ ಒಮ್ಮೊಮ್ಮೆ ಅತಿರೇಕಕ್ಕೆ ಹೋಗುತ್ತಿತ್ತು. ಅವರು ವಿನಾಕಾರಣ ರೇಗಿದಾಗ ನಾನು ತಿರುಗಿಬಿದ್ದು ಮಾತನಾಡಿದೆ. ಎರಡು ದಿನ ಮುನಿಸಿಕೊಂಡಿದ್ದೆ. ಆಮೇಲೆ ನೆಹರೂ ಹೇಳಿ ಕಳಿಸಿದರು: ನಕ್ಕರು. ಸಂಧಾನ ಮಾಡಿಕೊಳ್ಳುವ ರೀತಿಯದು. “ನನ್ನದೇ ತಪ್ಪು. ನಿಮ್ಮನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಬೇಕಿತ್ತು. ನಿಮಗೆ ಮೂರ್ಖತನ, ಅಲ್ಪತನ ಮತ್ತು ಅಶ್ಲೀಲತೆ ಕಂಡರೆ ಆಗುವುದಿಲ್ಲ. ಅಂಥ ಕಾರಣಗಳಿಗೆ ಮಾತ್ರ ರೇಗುತ್ತೀನಿ. ಮೊನ್ನೆ ಏನು ಬೇಸರವಾಗಿತ್ತೋ, ಬಿಡಿ, ಕ್ಷಮಿಸಿ" ಅಂದೆ. ನೆಹರೂ ನಕ್ಕರು.

ಅವರಿಂದ ಅಥವಾ ಸರ್ಕಾರದ ಯಾವುದೇ ಮಂತ್ರಿ-ಅಧಿಕಾರಿಯಿಂದ ನಾನು ಯಾವುದೇ ಕೆಲಸ ಮಾಡಿಸಿಕೊಂಡಿಲ್ಲ. ನಿಜ, ಅನ್ಯಾಯವಾಗಿದ್ದವರ ಸಂಗತಿ ನೆಹರೂ ಗಮನಕ್ಕೆ ತಂದು ಅದನ್ನು ಸರಿಪಡಿಸಿ ಸಹಾಯ ಮಾಡಿದ್ದೇನೆ. ಅನೇಕರು ಎಂ.ಪಿ.ಗಳಾಗಲಿಕ್ಕೆ, ಮಂತ್ರಿಗಳಾಗಲಿಕ್ಕೆ, ರಾಜ್ಯಪಾಲರಾಗಲಿಕ್ಕೆ, non official ರಾಯಭಾರಿಗಳಾಗಲಿಕ್ಕೆ ನಾನು ಕಾರಣನಾಗಿದ್ದೇನೆ. ಆದರೆ ಅವರ‍್ಯಾರೂ ನನ್ನ ಸಂಬಂಗಳಲ್ಲ. ನೆಹರೂಗೆ ಈ ಬಗ್ಗೆ ನಿಚ್ಚಳವಾಗಿ ಗೊತ್ತಿತ್ತು: ಕೆಲವು ಸಲ ಅವರು ನನ್ನ ನಿರ್ಧಾರವನ್ನು ಒಪ್ಪುತ್ತಿರಲಿಲ್ಲ. ಆದರೆ ಯಾವತ್ತಿಗೂ ನನ್ನ ಬಗ್ಗೆ ಅವರು ಅನುಮಾನಿಸಲಿಲ್ಲ. ಗೆಳೆಯನಂತೆ, ಸಹೋದ್ಯೋಗಿಯಂತೆ ನೋಡಿಕೊಂಡರು. ಇನ್ಯಾವ ರೀತಿಯಲ್ಲೂ ನನ್ನನ್ನು ನೋಡಿಕೊಳ್ಳಲು ಸಾಧ್ಯವಿಲ್ಲವೆಂಬುದು ಅವರಿಗೆ ಮೊದಲಿನಿಂದಲೂ ಗೊತ್ತಿತ್ತು. ಹ್ಞಾಂ, ಕೆಲವೊಮ್ಮೆ ಒಂದಷ್ಟು ಜನ ಪ್ರಮುಖ ಹುದ್ದೆಗಳಿಗೆ ಆಯ್ಕೆಯಾಗುವುದನ್ನು ನಾನು ತಪ್ಪಿಸಿದ್ದೂ ಹೌದು. ನೆಹರೂ ಅವರು ತಮ್ಮ ಸೋದರಿ ವಿಜಯಲಕ್ಷ್ಮಿ ಪಂಡಿತ್‌ರನ್ನು ರಾಯಭಾರಿಯನ್ನಾಗಿ ನೇಮಿಸಿದ ಮೇಲೆ, ಭಾವಮೈದುನ ಜಿ.ಪಿ.ಹೂಥೀಸಿಂಗ್‌ರನ್ನು ಮಲಯಾಕ್ಕೆ ಕಮೀಶನರನ್ನಾಗಿ ನೇಮಿಸುವ ತೀರ್ಮಾನಕ್ಕೆ ಬಂದರು. “ಇದನ್ನು ಹೇಗಾದರೂ ತಡೆಯಿರಿ. ಆ ಮನುಷ್ಯ ಆ ಸ್ಥಾನಕ್ಕೆ ಯೋಗ್ಯನಲ್ಲ" ಎಂದು ಕಾಮನ್‌ವೆಲ್ತ್‌ನ ಇಬ್ಬರು ಅಧಿಕಾರಿಗಳು ನನ್ನನ್ನು ಖಾಸಗಿಯಾಗಿ ಕಂಡು ವಿನಂತಿಸಿದರು. ಹಾಗಂತ ನೆಹರೂಗೆ ಹೇಳುವುದು ಕಷ್ಟವಿತ್ತು.
ಆದರೆ ನಾನು ಹೂಥೀಸಿಂಗ್‌ಗೆ ಹೇಳಿದೆ.

“ನೋಡಿ ನೀವು ಇಷ್ಟು ಬುದ್ಧಿವಂತರು. ಅಂಥ ಶ್ರೀಮಂತರು. ಓದಿಕೊಂಡವರು. ಮಲಯಾದಲ್ಲಿ ನಿಮಗೆ ಕೊಡುತ್ತಿರುವುದು ಕೇವಲ ಒಂದು ಡಿಪ್ಲೊಮಾಟ್ ಹುದ್ದೆ. ಅದು ಮೊದಲ ದರ್ಜೆ ಅಂಬಾಸಿಡರ್‌ನ ಸಮಾನದ ಹುದ್ದೆಯೂ ಅಲ್ಲ. ಇರುವುದಕ್ಕಿಂತ ಕಡಿಮೆ ದರ್ಜೆಯ ಬದುಕಿಗೆ ಹೋಗಲಿಚ್ಛಿಸುತ್ತೀರಾ?" ಅಂದುಬಿಟ್ಟೆ. ಅವತ್ತೇ ಸಂಜೆ ಆತ ನೆಹರೂಗೆ ತಾನು ಮಲಯಾಕ್ಕೆ ಹೋಗುವುದಿಲ್ಲವೆಂದು ತಿಳಿಸಿಯೂ ಬಿಟ್ಟ. ಒಟ್ಟಿನಲ್ಲಿ ಗುಣೋತ್ತಮ್ ಪುರುಷೋತ್ತಮ್ ಹೂಥೀಸಿಂಗ್‌ರ ಮಲಯಾ ಹುದ್ದೆ ತಪ್ಪಿಸಿದ್ದಾಗಿತ್ತು. ನೆಹರೂ ಅವರ ಘನತೆಗೆ ಬರಬಹುದಾದ ಕುಂದನ್ನೂ ತಪ್ಪಿಸಿದುದಾಗಿತ್ತು. ಅನೇಕ ದಿನಗಳ ನಂತರ ಪಾಲಮ್ ಏರ್‌ಪೋರ್ಟಿಗೆ ಹೋಗುವ ದಾರಿಯಲ್ಲಿ ಈ ವಿಷಯವನ್ನು ನೆಹರೂಗೆ ಹೇಳಿದೆ. ನಕ್ಕರು.

ಕೆಲವೇ ದಿನಗಳಿಗೆ ಮುಂಚೆ ಕೇರಳದಿಂದ ನನ್ನ ಹಿರಿಯಕ್ಕನ ಮಗ ಬಂದಿದ್ದ. ಅಕ್ಕನಿಗೆ ವೃದ್ಧಾಪ್ಯ, ಬಡತನ. ಅವಳ ಮಗ ವಿದ್ಯಾವಂತನಾಗಿದ್ದ. ಸೆಕ್ರೆಟೇರಿಯಟ್‌ನಲ್ಲಿ ಕೆಲಸವೂ ಖಾಲಿಯಿತ್ತು. ಆದರೆ ಅವನ ಟಿಕೀಟಿಗೆ ದಾರಿ ಖರ್ಚಿಗೆ ಹಣ ಕೊಟ್ಟು ವಾಪಸು ಕಳಿಸಿದೆ. ಅಕ್ಕ ತುಂಬ ನೊಂದುಕೊಂಡಿದ್ದಳು. ಈ ವಿಷಯವನ್ನು ಏರ್‌ಪೋರ್ಟಿಗೆ ಹೋಗುವ ದಾರಿಯಲ್ಲಿ ಹೇಳಿದೆ. ನೆಹರೂ ಸಿಟ್ಟಾದರು. “ಆದರೆ ನೀವೇ ಹೇಳಿದ್ದಿರಿ. ಸಾರ್ವಜನಿಕ ಜೀವನದಲ್ಲಿ ನಾವು ನಿಚ್ಚಳವಾಗಿದ್ದರಷ್ಟೆ ಸಾಲದು: ಅದನ್ನು ಸಾರ್ವಜನಿಕರಿಗೆ ಗೊತ್ತು ಮಾಡಿಸಬೇಕು" ಅಂದೆ. ಅವರು ಮತ್ತೆ ನಕ್ಕರು.

ಮುಂದೆ 1955ರ ಸುಮಾರಿಗೆ ನೆಹರೂ ಸರ್ಕಾರದ ರಾಜ್ಯಮಂತ್ರಿಯೊಬ್ಬ ಫಜೀತಿಗೆ ಒಳಗಾದ. ಆತ ಶ್ರೀಮಂತ. ಮಕ್ಕಳೊಂದಿಗ. ಸಂಯುಕ್ತ ರಾಷ್ಟ್ರದ ಜನರಲ್ ಅಸೆಂಬ್ಲಿಗೆ ಆತನನ್ನು ಕಳಿಸಲಾಗಿತ್ತು. ರಸಿಕ ಮನುಷ್ಯ ಜೊತೆಗೊಬ್ಬ ಹುಡುಗಿಯನ್ನು ಕರೆದುಕೊಂಡು ನಾನಾ ದೇಶಗಳ ಹೊಟೇಲುಗಳಲ್ಲಿ ತಂಗಿ “ನಾವಿಬ್ಬರೂ ದಂಪತಿಗಳು" ಅಂತ ರಿಜಿಸ್ಟರುಗಳಲ್ಲಿ ಬಳಸಿದ್ದ. ಆದರೆ ಹಿಂತಿರುಗಿದ ಕೆಲವು ದಿನಗಳಿಗೆಲ್ಲ ಆ ಹುಡುಗಿ ಚಾಪೆ-ಟ್ರಂಕಿನ ಸಮೇತ ಬಂದು ಮಂತ್ರಿ ಮಹಾಶಯನ ಮನೆಯಲ್ಲಿ ಕುಳಿತಳಲ್ಲ? ಹೆಂಡತಿಯಾಗಿ ಅಲ್ಲದಿದ್ದರೂ ಸರಿ: ನೌಕರಳಾಗಿ ಇರ‍್ತೇನೆ ಎಂಬ ಹಟ. ಮಂತ್ರಿಯ ಹೆಂಡತಿ ಕಿಡಿ ಕಿಡಿ. ಮಂತ್ರಿಗೆ ಎಲ್ಲ ಕಡೆಗೆ ಬೆವರು. ಕಡೆಗೂ ಅವಳನ್ನ ಮಂತ್ರಿಯ ಮನೆಯಿಂದ ಹೊರ ಹಾಕಿದರು. ಅವಳು ಅದ್ಹೇಗೋ ಬಂದು ದಿಲ್ಲಿಯ ವೆಸ್ಟರ್ನ್ ಕೋರ್ಟ್‌ನಲ್ಲಿ ರೂಮು ಹಿಡಿದಳು. ಅನೇಕ ಮುಖ್ಯಸ್ಥರ ಮುಂದೆ ದೂರು ಹೇಳಿಕೊಂಡಳು. ಕಡೆಗೆ ನೆಹರೂರವರ ಕಾರಿಗೆ ಅಡ್ಡ ಬಂದು ಅವರಿಗೆ ತನ್ನ ಗೋಳು ಹೇಳಿಕೊಂಡಳು. ಪಕ್ಕದಲ್ಲೇ ಕುಳಿತಿದ್ದ ನನಗೆ ಆ ಮಂತ್ರಿಗೆ ಬರ ಹೇಳು ಎಂದಷ್ಟೆ ಹೇಳಿದರು ನೆಹರೂ.

ಮರುದಿನ ನಾನು ಫೋನು ಮಾಡಿದ ಕೂಡಲೆ ಆ ಮಂತ್ರಿ ಮಹಾಶಯ ಬಂದ. ಅವತ್ತು ಶನಿವಾರವಾದ್ದರಿಂದ ಪಾರ್ಲಿಮೆಂಟ್ ಸೆಷನ್ ಇರಲಿಲ್ಲ. ನಾನು ಕೇಳಿದ್ದಕ್ಕೆಲ್ಲ ಆತ ಒಪ್ಪಿಕೊಂಡ. ಆತನ ಕೈಗೊಂದು ಹಾಳೆ ಕೊಟ್ಟು, “ಪ್ರಧಾನ ಮಂತ್ರಿಗಳನ್ನುದ್ದೇಶಿಸಿ ಮಂತ್ರಿಮಂಡಲದಿಂದ ವ್ಯಕ್ತಿಗತ ಕಾರಣಗಳಿಂದಾಗಿ ರಾಜೀನಾಮೆ ನೀಡುತ್ತಿದ್ದೇನೆ ಅಂತ ಬರೆಯಿರಿ" ಅಂದೆ. ಆತ ಬರೆದೂ ಬಿಟ್ಟ. ಆಯ್ತು, ಸೋಮವಾರದಂದು ಪಾರ್ಲಿಮೆಂಟ್ ಹೌಸ್‌ನ ನನ್ನ ಕೋಣೆಯಲ್ಲಿ ನಮ್ಮಿಬ್ಬರಿಗೂ ಪರಿಚಿತರಾದ ಎಂ.ಪಿ.ಕೂಡ ಆಗಿದ್ದ ಯು.ಎಸ್.ಮಲ್ಲಯ್ಯ ಅವರನ್ನು ಕರೆದುಕೊಂಡು ಬಂದು ಕಾಣು ಅಂದೆ. ಮಲ್ಲಯ್ಯನವರಿಗೆ ಇಡೀ ಹಗರಣದ ವಿವರಗಳು ಗೊತ್ತಿದ್ದವು.


“ನೋಡಯ್ಯಾ, ಮನುಷ್ಯನ ಹಾರ್ಮೋನುಗಳು, ವಾಂಛೆಗಳು ಎಸಗುವ ತಪ್ಪಿನ ಬಗ್ಗೆ ನಾನು ತೀರ್ಪು ನೀಡಲಾರೆ. ಆದರೆ ಹೋದ ಕಡೆಯಲ್ಲೆಲ್ಲಾ ಅವಳನ್ನು ಹೆಂಡತಿ ಅಂತ ಬರೆಸಿ ಮೆರೆದಿದ್ದೀಯ. ಅದು ಅಕ್ಷಮ್ಯ. ನಿನ್ನನ್ನು ಬ್ಲಾಕ್‌ಮೇಲ್ ಮಾಡಲೆಂದೇ ಯಾರೋ ಅವಳನ್ನು ಚಾಪೆ ದಿಂಬಿನ ಸಮೇತ ಕಳಿಸಿದ್ದಾರೆ. ಈಗ ಅವಳನ್ನು ದಿಲ್ಲಿಯಿಂದ ಹೊರ ಹಾಕದ ಹೊರತು ನಿನಗೆ ನೆಮ್ಮದಿಯಿಲ್ಲ. ಮಲ್ಲಯ್ಯನವರು ನಿನಗೂ ಸ್ನೇಹಿತರು. ಅವರು ಮನಸ್ಸು ಮಾಡಿದರೆ ಪೀಡೆಯನ್ನು ಹೊರ ಹಾಕಿಯಾರು" ಅಂದೆ. ಮಂತ್ರಿ ದೀನ ನೇತ್ರನಾಗಿ ಮಲ್ಲಯ್ಯನವರೆಡೆಗೆ ನೋಡಿದ. ಆ ಕಾಲಕ್ಕೆ ಅದು ದೊಡ್ಡ ಮೊತ್ತವೇ. ಆದರೆ ಮಂತ್ರಿ ಶ್ರೀಮಂತ. ದೇಹ ಋಣ ತೀರಿಸದೆ ಇಟ್ಟುಕೊಳ್ಳುವಂತಿಲ್ಲ. ಐವತ್ತು ಸಾವಿರ ರುಪಾಯಿಗಳಿಗೆ ಇಡೀ ಹಗರಣ ಫೈಸಲು ಮಾಡಿ, ಎರಡೇ ದಿನಗಳಲ್ಲಿ ಆಕೆಯನ್ನು ಚಾಪೆ-ದಿಂಬಿನ ಸಮೇತ ದಿಲ್ಲಿಯಿಂದ ಹೊರಬೀಳುವಂತೆ ಮಾಡಿದ್ದರು ಮಲ್ಲಯ್ಯ. ಇದೆಲ್ಲವನ್ನೂ ನೆಹರೂ ಅವರಿಗೆ ವಿವರಿಸಿ ಮಂತ್ರಿ ಕೊಟ್ಟಿದ್ದ ರಾಜೀನಾಮೆ ಪತ್ರವನ್ನು ನೆಹರೂಗೆ ಕೊಟ್ಟೆ.

ಈ ಬಾರಿ ಅವರು ನಗಲಿಲ್ಲ. ರಾಜಿನಾಮೆಯನ್ನು ಅಂಗೀಕರಿಸಲೂ ಇಲ್ಲ. ರಸಿಕ ಮಂತ್ರಿ ಬಚಾವಾದನಷ್ಟೆ ಅಲ್ಲ: ಉದ್ಧಾರವೂ ಆದ. ಇಂದಿರಾಗಾಂಧಿ ಕಾಲದಲ್ಲಿ ಕ್ಯಾಬಿನೆಟ್ ಮಂತ್ರಿಯಾದ. ಆಗಿನ್ನೂ ಯುವಕನಾಗಿದ್ದ ಸಂಜಯ್‌ಗಾಂಧಿಯನ್ನು ತನ್ನ ರಾಜ್ಯಕ್ಕೆ ಕರೆದೊಯ್ದು ಸುತ್ತಾಡಿಸಿ ರಾಜಕೀಯ ದೀಕ್ಷೆ ಕೊಡಿಸಿದ. ಒಂದು ಸಾರ್ವಜನಿಕ ಸರ್ಕಾರಿ ಸಮಾರಂಭದಲ್ಲಿ ತುಂಬ ಹೆಮ್ಮೆಯಿಂದ “ನಾನು ನಿಮ್ಮ ತಾತನವರಿಗೆ ಸೇವೆ ಸಲ್ಲಿಸಿದ್ದೇನೆ. ನಿಮ್ಮ ತಾಯಿಯವರ ಆಳಾಗಿದ್ದೇನೆ. ನಿನಗೂ ಆಳಾಗುತ್ತೇನೆ!" ಎಂದು ಎದೆ ಎದೆ ಬಡಿದುಕೊಂಡು ಹೇಳಿದ್ದ.

ಯಾರು ಈ ರಸಿಕ ನಾಯಕ? ಬನ್ಸೀಲಾಲ್ ಇರಬಹುದಾ? ಮಥಾಯ್ ಹೇಳುವುದಿಲ್ಲ.

*ಬಿಡಿ. ಕೆಲವು ವಿಷಯಗಳಲ್ಲಿ ನನ್ನ ನಿಲುವು, ಸ್ವಭಾವ ಬದಲಾಗುವುದೇ ಇಲ್ಲ. ನಾನು ಯಾವುದೇ ವ್ಯಕ್ತಿಯನ್ನು ಸೈಕೋಫ್ಯಾನ್ಸಿಯ ಮಟ್ಟಕ್ಕೆ ಹೋಗಿ ಪ್ರೀತಿಸಲಾರೆ. ಹೊಗಳಲಾರೆ. ಸಾರ್ವಜನಿಕ ಜೀವನದಲ್ಲಿ ಎಚ್.ಬಿ.ಕಾಮತ್, ರಾಮ್ ಮನೋಹರ್‌ಲೋಹಿಯಾ ಅಥವಾ ರಾಜ್‌ನಾರಾಯಣ್ ಮಾಡಿದ ಟೀಕೆಗಳಿಗಿಂತ ಖಾಸಗಿಯಾಗಿ ನಾನು ನೆಹರೂ ಅವರಿಗೆ ಟೀಕೆ ಮಾಡಿ ಕಿರಿಕಿರಿಯಾಗಲು ಕಾರಣನಾಗಿದ್ದೇನೆ.

ಒಮ್ಮೆ ಲಂಡನ್‌ನ ಇಂಡಿಯಾ ಹೌಸ್‌ನಲ್ಲಿ ಭಾರತದ ಪರವಾಗಿ ಒಂದು ರಿಸೆಪ್ಷನ್ ಇಟ್ಟುಕೊಳ್ಳಲಾಗಿತ್ತು. ಅದಕ್ಕೆ ಗೌರವಾನ್ವಿತ ಅಟ್ಲೀ ಸಮೇತ ಅನೇಕ ಪ್ರಮುಖರು ಬಂದಿದ್ದರು. ಆದರೆ ಮಹಾಶಯ ನೆಹರೂ ಉಳಿದ್ಯಾರೆಡೆಗೂ ತಿರುಗಿ ನೋಡದೆ ಮೌಂಟ್ ಬ್ಯಾಟನ್‌ನ ಹೆಂಡತಿಯೊಂದಿಗೆ ಒಂದು ಮೂಲೆಯಲ್ಲಿ ಹರಟುತ್ತ ನಿಂತುಬಿಟ್ಟಿದ್ದ. ‘ಮಾರಾಯಾ, ಬಂದವರೆಲ್ಲ ಇದನ್ನೇ ಗಮನಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಹೇಗಾದರೂ ಮಾಡಿ ಅವರಿಬ್ಬರ ಹರಟೆಗೆ ಭಂಗ ತಂದು ನೆಹರೂ ಅವರ ಚಿತ್ತ ಇತರರೆಡೆಗೆ ತಿರುಗುವಂತೆ ಮಾಡು" ಎಂದು ಖುದ್ದಾಗಿ ವಿ.ಕೆ.ಕೃಷ್ಣ ಮೆನನ್ ನನಗೆ ಬಂದು ಹೇಳಿದರು. ನಾನು ಮೆನನ್‌ರನ್ನೇ ಕೆಕ್ಕರಿಸಿ ನೋಡಿದೆ. ಹಾಗೆ ಭಂಗ ತರುವ ಹಕ್ಕು ನನಗೇನಿದೆ? ಮೇಲಾಗಿ, ಈ ಪಾರ್ಟಿ ಕೊಟ್ಟಿರುವಾತನೇ ಮೆನನ್. ನೆಹರೂ ಅವರ ಗಮನ ಎಲ್ಲರೆಡೆಗೆ ತಿರುಗುವಂತೆ ಮಾಡುವ ಜವಾಬ್ದಾರಿ ಕೇವಲ ಅವರ ಮೇಲಿತ್ತು. ಆದರೆ ಕೃಷ್ಣ ಮೆನನ್‌ಗೆ ಅಂಥ ಧೈರ್ಯವಿರಲಿಲ್ಲ.

ಅವತ್ತು ರಾತ್ರಿ ನೆಹರೂ ಉಳಿದಿದ್ದ ಕೋಣೆಗೆ ಒಂದು ಪುಟ್ಟ ಚೀಟಿ ಕಳಿಸಿದೆ. ಸಂಜೆಯ ಪಾರ್ಟಿಯಲ್ಲಿ ಜನ ಅನುಮಾನದಿಂದ ಮಾತನಾಡಿಕೊಳ್ಳುತ್ತಿದ್ದರು. ಅನವಶ್ಯಕ ಗಾಸಿಪ್‌ಗೆ ಏಕೆ ನೀವು ಕಾರಣರಾಗಬೇಕು? ನಾಳೆ ನಾಡಿದ್ದು ಮತ್ತೆರಡು ಇಂಥವೇ ಪಾರ್ಟಿಗಳಿವೆ ಎಂದಷ್ಟೆ ಬರೆದಿದ್ದೆ. Fine, ಈ ಬಗ್ಗೆ ನೆಹರೂರೊಂದಿಗೆ ನೇರವಾಗಿ ಮಾತನಾಡಿ ಅವರನ್ನು ಕಿರಿಕಿರಿಗೆ ಒಳಪಡಿಸುವ ಇಚ್ಛೆ ನನಗಿರಲಿಲ್ಲ. ನಾನು ಬರೆದ ಪುಟ್ಟ ಚೀಟಿಯನ್ನು ಅಷ್ಟು ದೊಡ್ಡ ವ್ಯಕ್ತಿತ್ವದ ನೆಹರೂ ತಪ್ಪು ತಿಳಿಯುತ್ತಾರೆ ಅಂತಲೂ ನನಗೆ ಅನ್ನಿಸಿರಲಿಲ್ಲ. ಆದರೆ ಮುಂದಿನ ಎರಡು ದಿನಗಳ ಪಾರ್ಟಿಗಳಲ್ಲಿ ನೆಹರೂರ ವರ್ತನೆ ಅದ್ಭುತವಾಗಿತ್ತು. ಇದೆಲ್ಲದರ ಅರ್ಥವಿಷ್ಟೆ: ನಾನು ಮತ್ತು ನನ್ನ ಉದ್ದೇಶ ಪ್ರಾಮಾಣಿಕವಾಗಿರುವಾಗ ನೆಹರೂ ಆಗಲೀ, ಮತ್ತೊಬ್ಬರಾಗಲೀ ಸಿಟ್ಟು ಮಾಡಿಕೊಂಡರೆ ನಾನು care ಮಾಡಬೇಕಾಗಿಲ್ಲ.

*ನೆಹರೂ ಬಗ್ಗೆ ಬರೆಯಲು ಕುಳಿತವನು ಗಾಂಧಿಜಿ ಬಗ್ಗೆ ಬರೆಯದೆ ಇರಲು ಸಾಧ್ಯವೇ ಇಲ್ಲ. ನನಗೆ ಗಾಂಧಿಜಿಯವರ ಪರಿಚಯವಿತ್ತು. ಆದರೆ ಉದ್ದೇಶಪೂರ್ವಕವಾಗಿಯೇ ಅವರಿಂದ ನಾನು ದೂರ ಉಳಿದೆ. ನನಗೆ ಅವರ ಹಿರಿಮೆ ಗೊತ್ತಿತ್ತು. ಆದರೆ ಅವರ ವ್ಯಕ್ತಿತ್ವದಲ್ಲಿನ ವೈರುಧ್ಯತೆಗಳು ನನ್ನಲ್ಲಿ ನಿರಾಸೆ, ಆಶ್ಚರ್ಯ ಉಂಟು ಮಾಡುತ್ತಿದ್ದವು. I was baffled by him. ಹೆಚ್ಚಿನ ಸಲ ನೆಹರೂ ಅವರಿಂದ ಸಂದೇಶ ಒಯ್ದು ತಲುಪಿಸುವ ಮಟ್ಟಿಗೆ ನನ್ನ ಮತ್ತು ಬಾಪೂಜಿಯವರ ಸಂಬಂಧ ಉಳಿದಿರುತ್ತಿತ್ತು.

ಒಂದು ವಿಚಿತ್ರ ಕಾರಣಕ್ಕಾಗಿ ನನಗೆ ಬಾಪೂ ಪರಿಚಯವಾಗಿತ್ತು. ಹಿಂದೆ 194೭ರಲ್ಲಿ ನನಗೊಬ್ಬ ವಿದೇಶಿ ಮಿತ್ರ ಚಿಕ್ಕದಾದ, ಮುದ್ದಾದ, ದಂತದ ಬಣ್ಣದ ಟ್ರಾನ್ಸಿಸ್ಟರ್ ಉಡುಗೊರೆಯಾಗಿ ಕೊಟ್ಟಿದ್ದ. ಸ್ವಿಚ್ ಆನ್ ಮಾಡಿದ ಕೂಡಲೆ ರೇಡಿಯೋ ಮಾತನಾಡುತ್ತಿತ್ತು. ಅದರ ಮೇಲಿನ ಮುಚ್ಚಳ ಮುಚ್ಚುತ್ತಿದ್ದಂತೆಯೇ ಗಪ್‌ಚುಪ್. ಮೊದಲ ಬಾರಿಗೆ ನೋಡಿದಾಗ ನೆಹರೂ ಚಿಕ್ಕ ಮಗುವಿನಂತೆ ಅದನ್ನಿಟ್ಟುಕೊಂಡು ಆಡತೊಡಗಿದರು. ನಾನು ಅವರ ಆಸೆ ಕಂಡು ಅದನ್ನು ಅವರಿಗೇ ಕೊಟ್ಟುಬಿಟ್ಟೆ. ಪ್ರತಿನಿತ್ಯ ಷೇವ್ ಮಾಡಿಕೊಳ್ಳುವಾಗ ನೆಹರೂ ಅದರಲ್ಲಿ ಬರುತ್ತಿದ್ದ ವಾರ್ತೆಗಳನ್ನು ಕೇಳುತ್ತಿದ್ದರು. ಕೆಲವೊಮ್ಮೆ ಅದನ್ನು ಹಿಡಿದುಕೊಂಡು ಕೆಳಮನೆಗೂ ಇಳಿದು ಬರುತ್ತಿದ್ದರು. ಒಮ್ಮೆ ಅವರು ಆ ಟ್ರಾನ್ಸಿಸ್ಟರ್‌ನ ಬಗ್ಗೆಯೂ, ನನ್ನ ಬಗ್ಗೆಯೂ ಗಾಂಧಿಜಿಯವರೊಂದಿಗೆ ಮಾತನಾಡಿದ್ದರು. ಆ ಹೊತ್ತಿಗಾಗಲೇ ನನ್ನ ಬಗ್ಗೆ ಬಾಪುವಿಗೆ ರಾಜಕುಮಾರಿ ಅಮೃತ್‌ಕೌರ್‌ರಿಂದ ವಿಷಯ ಗೊತ್ತಾಗಿತ್ತು.

“ನೋಡೂ, ಗಾಂಧಿಜಿ ಇತ್ತೀಚೆಗೆ ಯಾವತ್ತೂ ರೇಡಿಯೋ ಕೇಳಿಲ್ಲವಂತೆ. ಒಮ್ಮೆ ಸಾಯಂಕಾಲ ಮಹಾತ್ಮರು ಉಳಿಯುತ್ತಿದ್ದಂಥ ಬಿರ್ಲಾ ಭವನಕ್ಕೆ ಹೋಗಿ ಅವರಿಗೆ ನಿನ್ನ ರೇಡಿಯೋದಲ್ಲಿ ವಾರ್ತೆ ಕೇಳಿಸು" ಎಂದು ನೆಹರೂ ಹೇಳಿದ್ದರಿಂದ ನಾನು ಟ್ರಾನ್ಸಿಸ್ಟರ್‌ನೊಂದಿಗೆ ಬಿರ್ಲಾ ಭವನಕ್ಕೆ ಹೋದೆ. ಗಾಂ ತಮ್ಮೆದುರಿಗೆ ನೆಲದ ಮೇಲೆ ಕೂಡುವಂತೆ ಹೇಳಿದರು. ಸರಿಯಾಗಿ ಸಂಜೆ ಆರಕ್ಕೆ ರೇಡಿಯೋ ಹಚ್ಚಿದೆ. ಒಂದು ನಿಮಿಷ ಅದನ್ನು ಕೇಳಿದವರೇ “ನಿಲ್ಲಿಸು ಇದನ್ನು, ಇವತ್ತಿನ ದಿನಮಾನದಲ್ಲಿ ಯಾರಾದರೂ ಪ್ರಜ್ಞೆ ಇಟ್ಟುಕೊಂಡು ಮಾತನಾಡುತ್ತಾರಾ?’ ಸಿಡುಕಿದರು ಗಾಂಧಿ.

ಅವು ಭುಗಿಲೆದ್ದ ಹಿಂದೂ-ಮುಸ್ಲಿಂ ದ್ವೇಷದ ದಿನಗಳು.

ನನಗೆ ಗಾಂಜಿಯ ಬಗ್ಗೆ ಬೇಸರ ಹುಟ್ಟಲಿಕ್ಕೆ ಕಾರಣಗಳಿದ್ದವು. ಮೊದಲನೆಯದಾಗಿ, ಅವರು ಬಿಟ್ಟೂ ಬಿಡದೆ ‘ರಾಮರಾಜ್ಯ’ದ ಕುರಿತು ಮಾತನಾಡುತ್ತಿದ್ದರು. ಎಲ್ಲಿಯ ರಾಮರಾಜ್ಯ? ಭಾರತದಲ್ಲಿ ಕೋಟ್ಯಂತರ ಮುಸ್ಲಿಮರಿದ್ದಾರೆ. ಅವರಿಗೆ ರಾಮ ಯಾರು? ರಾಮರಾಜ್ಯ ಎಂತಹುದು? ಅದರಿಂದಾಗಿಯೇ ಮುಸ್ಲಿಮರು ಗಾಂಧಿವಾದದಿಂದ ದೂರವಾದರು. ಅಂಥದ್ದೇ ತಪ್ಪನ್ನು ಅವರು ‘ಗೋ ಪೂಜೆ’ಯ ಬಗ್ಗೆ ಪ್ರತಿನಿತ್ಯ ಮಾತಾಡಿ, ತಮ್ಮ ‘ಹರಿಜನ’ ಪತ್ರಿಕೆಯಲ್ಲಿ ಬರೆದು ತಪ್ಪು ಮಾಡಿದರು. ಮುಸ್ಲಿಮರಷ್ಟೇ ಅಲ್ಲ, ಲಕ್ಷಾಂತರ ಭಾರತೀಯ ಹಿಂದೂಗಳೂ ಹಸುವಿನ ಮಾಂಸ ತಿನ್ನುವವರಿದ್ದು ಅವರಿಗೆ ಗಾಂಧಿಜಿಯ ನಿಲುವು ಇಷ್ಟವಾಗಿರಲಿಲ್ಲ. ಇನ್ನು ವಿವಾಹಿತರಲ್ಲಿ ಬ್ರಹ್ಮಚರ್ಯ ಪಾಲನೆ! ಎಲ್ಲೋ ಕೆಲವರು ಮೊರಾರ್ಜಿ ದೇಸಾಯಿಯಂಥವರು ಹೆಂಡತಿಯನ್ನಿಟ್ಟುಕೊಂಡೂ ಬ್ರಹ್ಮಚರ್ಯ ಪಾಲಿಸಿದರು. ಉಳಿದವರು ಕೆಲಕಾಲ ದೇಹೋಪವಾಸ ಮಾಡಿ ಅವರ ಸಹವಾಸ ಸಾಕೆಂದರು. ಮತ್ತೆ ಕೆಲವರಿಗೆ ಮಾನಸಿಕ ಸಮಸ್ಯೆಗಳಾದವು.

ಭಾರತದಲ್ಲಿ ಖಿಲಾಫತ್ ಚಳವಳಿಯನ್ನು ಗಾಂಧಿಜಿ ಬೆಂಬಲಿಸಿದ್ದು ತಪ್ಪು. ನನಗವರು ಅವಕಾಶವಾದೀ ಮೂರ್ಖರಂತೆ ಕಾಣಿಸಿದರು. ಅದಕ್ಕಿಂತ ಅವೈಜ್ಞಾನಿಕ ಹೇಳಿಕೆ ಅನ್ನಿಸಿದ್ದು 1934ರಲ್ಲಿ ಬಿಹಾರದಲ್ಲಿ ಭೂಕಂಪನವಾದಾಗ. ‘ಸವರ್ಣೀಯರು ದಲಿತರನ್ನು ಮುಟ್ಟದೆ ಇರುವುದರಿಂದಲೇ ಭೂಕಂಪನವಾಯಿತು’ ಅಂದರು ಗಾಂಧಿ.
ಗಾಂಧಿ ಕೆಲವು ಬಾರಿ ತುಂಬ ಕ್ರೂರಿಯಾಗಿ ಬಿಡುತ್ತಿದ್ದರು. ಒಬ್ಬ ಕಾಂಗ್ರೆಸ್ ಕಾರ್ಯಕರ್ತ ತನಗೆ ಒಪ್ಪಿಸಲಾದ ಹಣಕ್ಕೆ ಸಮರ್ಪಕವಾದ ಲೆಕ್ಕ ಕೊಡುವುದರಲ್ಲಿ ವಿಫಲನಾದ. ಅವನು ನಿಷ್ಠಾವಂತ ಮತ್ತು ಹಣ ದುರುಪಯೋಗವಾಗಿಲ್ಲ ಅಂತ ತಿಳಿದನಂತರವೂ ಗಾಂಧಿಜಿ ಅವನನ್ನು ಆ ಕೆಟ್ಟ ಬೇಸಿಗೆಯಲ್ಲಿ ತನ್ನ ನೂರು ಮೈಲಿ ದೂರದ ಊರಿಗೆ ಬರಿಗಾಲಲ್ಲಿ ಹೋಗಿ ಬರುವ ಅಮಾನುಷ ಶಿಕ್ಷೆ ನೀಡಿದರು. ಇದನ್ನು ಗಮನಿಸಿದ ಸಿ.ಎಫ್.ಆಂಡ್ರೂಸ್ ಆ ಯುವಕನಿಗೆ ಗುಟ್ಟಾಗಿ ರೈಲಿನ ಖರ್ಚು ಕೊಟ್ಟು ಕಳಿಸಿದ್ದರು!

ಗಾಂಧಿಯ ಹಿಂದೀ ಪರವಾದ ವಾದ ನನಗೆ ಸಮ್ಮತವಾಗಿರಲಿಲ್ಲ. ಅವರು ವೈಸ್‌ರಾಯ್-ಗವರ್ನರ್ ಜನರಲ್ ಮೌಂಟ್ ಬ್ಯಾಟನ್‌ಗೆ ತನ್ನ ತರಕಾರಿ ತಾನೇ ಬೆಳೆದುಕೊಂಡು, ತಮ್ಮ ಶೌಚ ತಾವೇ ಸ್ವಚ್ಛಗೊಳಿಸಿಕೊಳ್ಳಬೇಕೆಂದು ಹೇಳಿದ್ದರು. ಹಾಲೆಂಡ್ ಮತ್ತು ಬೆಲ್ಜಿಯಂಗಳನ್ನು ಪುಡಿಗಟ್ಟಿ ರಕ್ತ ಕುಡಿಯುತ್ತಾ ಬರುತ್ತಿದ್ದ ಹಿಟ್ಲರ್‌ನ ಬಗ್ಗೆ “ಛೇ, ಅವನು ಒಳ್ಳೆಯ ಮನುಷ್ಯ. ನೀವು ಸುಮ್ಮನಿದ್ದುಬಿಡಿ. ಅವನೂ ಸುಮ್ಮನಾಗುತ್ತಾನೆ" ಎಂದು ಬ್ರಿಟಿಷ್ ವೈಸ್‌ರಾಯ್ ಲಿನ್‌ಲಿಥ್‌ಗೋ ಅವರಿಗೆ ಪತ್ರ ಬರೆದಿದ್ದರು. ಅದಿರಲಿ, ಗಾಂಧಿ ಬೋಸಿದ ಆರ್ಥಿಕ ನೀತಿ ಅನುಕರಿಸಿದರೆ ಭಾರತ ಶಿಲಾಯುಗಕ್ಕೆ ಮರಳೀತು. ಈ ಬಗ್ಗೆ ನೆಹರೂ ಯಾರನ್ನಾದರೂ ಚರ್ಚೆಗೆ ಕಳಿಸಿದರೆ ಗಾಂಧಿಜಿ ಗೋಡೆಯಂತೆ ಕುಳಿತುಬಿಡುತ್ತಿದ್ದರು. “ಈ ಮನುಷ್ಯನನ್ನು ಬಡವನನ್ನಾಗಿ ಇಡಲು ದಿನಕ್ಕೆ ಎಷ್ಟು ದುಡ್ಡು ಖರ್ಚಾಗುತ್ತದೆ ಅಂತ ಬಹಳ ಜನಕ್ಕೆ ಗೊತ್ತಿರಲಾರದು" ಅಂತ ಸ್ವತಃ ಸರೋಜಿನಿ ನಾಯ್ಡು ಹೇಳಿದ್ದರು. ಗಾಂಧಿ ಎಂಥ ಅವೈಜ್ಞಾನಿಕ ಮನುಷ್ಯ ಅಂದರೆ “ನನಗೆ ರಾಮನಲ್ಲಿ ಸಂಪೂರ್ಣ ಭಕ್ತಿಯಿಲ್ಲವಾದ್ದರಿಂದ ನನ್ನ ಉಪವಾಸ ಕಾಲದಲ್ಲಿ ಮೂತ್ರದಲ್ಲಿ ಅಸಿಟೋನ್ ಅಂಶ ಕಾಣಿಸಿಕೊಂಡಿದೆ" ಅಂತ ಹೇಳಿದ್ದರು. ದುರಂತವೆಂದರೆ, ದೇಶ ಇಬ್ಭಾಗವಾದಾಗ ಮಾನಭಂಗಕ್ಕೆ ಒಳಗಾದ ಹೆಂಗಸರಿಗೆ ನಾಲಿಗೆ ಕಚ್ಚಿಕೊಂಡು ಪ್ರಾಣ ಹೋಗುವತನಕ ಉಸಿರು ಬಿಗಿದುಕೊಂಡು ಸಾಯಿರಿ ಅಂತ ಹೇಳಿದ್ದರು ಗಾಂಧಿ. ಅವರು ಬ್ರಹ್ಮಚರ್ಯ, ಲಿಂಗ ನಿಗ್ರಹ ನಂಬುತ್ತಿದ್ದರೇ ಹೊರತು ಫ್ಯಾಮಿಲಿ ಪ್ಲಾನಿಂಗ್ ಅಲ್ಲ. ಮನುಷ್ಯನ ಅವಶ್ಯಕತೆಗಳು ಅವರಿಗೆ ಅರ್ಥವೇ ಆಗುತ್ತಿರಲಿಲ್ಲ.

ನನಗೆ ಗಾಂಧಿಜಿಯಿಂದ ಅಹಿಂಸೆ, ಋಜು ಜೀವನ, ನಿಷ್ಕಾಮ ಕರ್ಮ, ದಯೆ, ಶತ್ರುಗಳನ್ನು ಪ್ರೀತಿಸುವುದು ಮುಂತಾದವನ್ನೆಲ್ಲ ಕಲಿಯಬೇಕಿರಲಿಲ್ಲ. ಎರಡು ಸಾವಿರ ವರ್ಷಗಳ ಹಿಂದೆ ಕ್ರೈಸ್ತ ಇದನ್ನು ಬೋಸಿದ್ದ. ನಾನು ಅದನ್ನು ಅರ್ಥ ಮಾಡಿಕೊಂಡೇ ಬೆಳೆದ ಕ್ರೈಸ್ತ.

(ಮುಂದುವರೆಯುತ್ತದೆ)

Read Archieves of 24 November, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books