Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ಯಶಸ್ಸಿನ ಹಿಂದೆ ಹೊರಟವ ಕನಸು ಕಾಣಬೇಕು, ಕಣ್ಣೀರನ್ನೂ ಹಾಕಬೇಕು!

‘ಬ್ಯಾಂಕ್‌ನಿಂದ ಸಾಲ ತಗೊಂಡಿದ್ದೆ. ಸ್ನೇಹಿತರ ನೆರವು ಪಡೆದಿದ್ದೆ. ಹೆಂಡತಿಯ ಒಡವೆಗಳನ್ನು ಅಡವಿಟ್ಟೆ. ಪಿತ್ರಾರ್ಜಿತ ಆಸ್ತಿ ಮಾರಿದೆ. ಇಷ್ಟೆಲ್ಲ ಮಾಡಿ ಬಿಜಿನೆಸ್ ಶುರು ಮಾಡಿದೆ. ಸ್ವಾಮೀಜಿಗಳಿಂದ ಉದ್ಘಾಟನೆ ಮಾಡಿಸಿದೆ. ಮೂವತ್ತು ಜನಕ್ಕೆ ನೌಕರಿ ಕೊಟ್ಟೆ. ಆಫೀಸು ದೊಡ್ಡದಿತ್ತು. ಕನಸುಗಳೂ ಜಾಸ್ತಿಯೇ ಇದ್ದವು. ಮೊದಲ ಒಂದು ವರ್ಷ ಎಲ್ಲವೂ ಚೆನ್ನಾಗೇ ಇತ್ತು. ಆಮೇಲೆ ಎಲ್ಲಿ ಏನು ಯಡವಟ್ಟಾಯ್ತೋ ಗೊತ್ತಿಲ್ಲ. ಬಿಜಿನೆಸ್ಸು ಕೈ ಕಚ್ಚಲು ಶುರುಮಾಡ್ತು. ದಿನಕ್ಕೊಂದು ಸೋಲು ಜೊತೆಯಾಯ್ತು. ಹೀಗೇ ಮುಂದುವರಿದರೆ ಪಾಪರ್ ಆಗಿಬಿಡ್ತೀನಿ ಅನ್ನಿಸ್ತು. ಹಾಗಾಗೋದು ಬೇಡ ಅನ್ನಿಸಿದ ದಿನವೇ ಕಂಪನಿಯನ್ನು ಮಾರಿಬಿಟ್ಟೆ...’
ಹೀಗೆ ಹೇಳುವವರು ಎಲ್ಲ ಊರುಗಳಲ್ಲೂ ಸಿಗುತ್ತಾರೆ. ಅವರ ಮಾತಿನ ಹಿಂದೆ ನೋವಿರುತ್ತದೆ. ವಿಷಾದವಿರುತ್ತದೆ. ಗೊಂದಲವಿರುತ್ತದೆ. ಅದರ ಮಗ್ಗುಲಲ್ಲೇ ಒಂದು ಪ್ರಶ್ನೆಯೂ ಇರುತ್ತದೆ: ಕನಸುಗಳೊಂದಿಗೇ ನಡೆದು ಹೋದರೂ ಯಶಸ್ಸು ಸಿಗೋದಿಲ್ಲವಲ್ಲ ಯಾಕೆ?

ನಿಜ ಹೇಳಬೇಕೆಂದರೆ-ಯಶಸ್ಸೆಂಬುದು ಯಾವತ್ತೂ ಒಂದೇ ಕ್ಷಣದಲ್ಲಿ ಜತೆಯಾಗುವುದಿಲ್ಲ. ಯಶಸ್ಸು ಪವಾಡವಲ್ಲ. ಲಾಟರಿಯಲ್ಲ. ದೇವರ ಕೊಡುಗೆಯಲ್ಲ. ದಿಢೀರನೆ ಒಲಿದು ಬರುವ ಅದೃಷ್ಟವಲ್ಲ. ಯಶಸ್ಸು ಎಂಬುದು ಪರಿಶ್ರಮಕ್ಕೆ ಸಲ್ಲುವ ಪ್ರತಿಫಲ. ಒಳ್ಳೆಯತನಕ್ಕೆ ಸಿಗುವ ಕಂದಾಯ. ಹಗಲಿರುಳೂ ಸುರಿಸಿದ ಬೆವರಿಗೆ ಸಿಗುವ ಬೋನಸ್. ಹೀಗೆಂದ ಮಾತ್ರಕ್ಕೆ ಬಿಜಿನೆಸ್‌ನಲ್ಲಿ ವಿಫಲರಾದವರೆಲ್ಲ ಶ್ರಮಪಡಲಿಲ್ಲ, ಬೆವರು ಹರಿಸಲಿಲ್ಲ ಎಂದು ಅರ್ಥವಲ್ಲ. ಗೆಲ್ಲಬೇಕೆಂಬ ಅವಸರದಲ್ಲಿ ಕೆಲವು ವಿಷಯಗಳನ್ನೇ ಅವರು ಮರೆತಿರುತ್ತಾರೆ. ಬೇಕಿದ್ದರೆ ಗಮನಿಸಿ ನೋಡಿ: ಬಿಗ್ ಬಿಜಿನೆಸ್ ಶುರು ಮಾಡುವ ಎಷ್ಟೋ ಮಂದಿಗೆ ಮಾರ್ಕೆಟಿಂಗ್ ಬಗ್ಗೆ ಗೊತ್ತಿರುವುದಿಲ್ಲ. ತಮ್ಮ ಉತ್ಪನ್ನವನ್ನು ಹೇಗೆ ಪ್ರೊಮೋಟ್ ಮಾಡಬೇಕೆಂದು ತಿಳಿದಿರುವುದಿಲ್ಲ. ವ್ಯವಹಾರ ಆರಂಭಿಸಿದ ಎರಡೇ ತಿಂಗಳಲ್ಲಿ ಒಂದು ಅಪಾಯ ಎದುರಾದರೆ ಅದರಿಂದ ಪಾರಾಗುವ ದಾರಿ ಗೊತ್ತಿರುವುದಿಲ್ಲ. ಗಿಮಿಕ್ ಮಾಡದಿದ್ದರೆ ಗೆಲುವು ಕಷ್ಟ ಎಂದು ಅವರಿಗೆ ಗೊತ್ತಿರುತ್ತದೆ. ಆದರೆ ಗಿಮಿಕ್ ಮಾಡುವ ಮನಸ್ಸೇ ಅವರಿಗೆ ಇರುವುದಿಲ್ಲ.

ಇಂಥ ವೆರೈಟಿಯ ಜನ, ಭ್ರಮೆಯೊಂದಿಗೆ ಬದುಕುತ್ತಿರುತ್ತಾರೆ. ದೊಡ್ಡಸ್ತಿಕೆಯ ಪ್ರದರ್ಶನಕ್ಕೆಂದು ಹಿಂದೆ ಮುಂದೆ ಯೋಚಿಸದೆ ನೌಕರರ ನೇಮಕ ಮಾಡಿಕೊಂಡಿರುತ್ತಾರೆ. ಹತ್ತು ಮಂದಿಯ ಮುಂದೆ ಬೀಗಬೇಕು ಎಂಬ ಒಂದೇ ಕಾರಣದಿಂದ ಫಳಫಳ ಕಾಗದದಲ್ಲಿ ತಮ್ಮ ಫ್ಯಾಕ್ಟರಿ, ಅಂಗಡಿಯ ಪ್ರಾರಂಭೋತ್ಸವದ ಆಹ್ವಾನ ಪತ್ರಿಕೆ ಪ್ರಿಂಟು ಹಾಕಿಸಿರುತ್ತಾರೆ. ತಮಗೆ ಯಾರ‍್ಯಾರೆಲ್ಲ ಪರಮಾಪ್ತರು ಎಂದು ‘ತೋರಿಸಿಕೊಳ್ಳುವ’ ಆಶಯದಿಂದ ಒಬ್ಬ ರಾಜಕಾರಣಿಯನ್ನೋ, ಸ್ವಾಮೀಜಿಯನ್ನೋ, ಚಿತ್ರನಟನನ್ನೋ ಕರೆತಂದಿರುತ್ತಾರೆ. ಪ್ರಾರಂಭೋತ್ಸವವನ್ನು ಅದ್ದೂರಿಯಾಗಿಯೇ ಮಾಡಿರುತ್ತಾರೆ. ಈಗ ಅರ್ಥ ಮಾಡಿಕೊಳ್ಳಿ: ಈ ಆಹ್ವಾನಪತ್ರಿಕೆ, ರಾಜಕಾರಣಿಯ ಒಡ್ಡೋಲಗ, ಸ್ವಾಮಿಗಳ ಮೆರವಣಿಗೆ, ಚಿತ್ರನಟನ ಹೊಟೇಲಿನ ಬಿಲ್ಲು, ಹಾರ-ತುರಾಯಿ ಇತ್ಯಾದಿಗೆಲ್ಲ ಆಗುವ ಖರ್ಚಿದೆಯಲ್ಲ? ಅದು ಯಾವತ್ತೂ ಮರಳಿ ಬರುವುದಿಲ್ಲ. ಹೀಗೆಂದ ಮಾತ್ರಕ್ಕೆ ಬಿಜಿನೆಸ್ ಮಾಡುವವರು ಅದ್ದೂರಿತನಕ್ಕೆ ಮೊರೆ ಹೋಗಬಾರದು ಎಂಬುದು ನನ್ನ ವಾದವಲ್ಲ. ಒಂದು ಸಮಾರಂಭ ಮಾಡಬೇಕು ಮತ್ತು ಅದನ್ನು ಅದ್ದೂರಿಯಾಗಿಯೇ ಮಾಡಬೇಕು ಎಂಬುದು ನಿಮ್ಮ ಆಸೆಯಾಗಿದ್ದರೆ, ಅದನ್ನು ಬಿಜಿನೆಸ್ ಆರಂಭಿಸಿದ ಒಂದೆರಡು ವರ್ಷದ ನಂತರ ಮಾಡಿದರೆ ಚೆಂದ. ಹದಿನೈದಿಪ್ಪತ್ತು ಮಂದಿ ನೌಕರರ ನೇಮಕಾತಿ ವಿಷಯಕ್ಕೂ ಈ ಮಾತು ಅನ್ವಯವಾಗುತ್ತದೆ. ಏಕೆಂದರೆ, ಕೆಲವೇ ನೌಕರರೊಂದಿಗೆ, ಕಡಿಮೆ ಬಜೆಟ್‌ನಲ್ಲಿ ಒಂದು ಬಿಜಿನೆಸ್ ಆರಂಭಿಸಿದರೆ, ಖರ್ಚು ಕಡಿಮೆ ಇರುತ್ತದೆ. ಒಂದು ವೇಳೆ ‘ಲಾಸ್’ ಆದರೆ, ಆಗ ಲಾಸ್‌ನ ಪ್ರಮಾಣ ಕೂಡ ಕಡಿಮೆಯೇ ಇರುತ್ತದೆ. ಇಂಥ ಸಂದರ್ಭದಲ್ಲಿ ಯಾಕೋ ಸರಿ ಹೋಗಲಿಲ್ಲ ಎಂದು ಬಿಜಿನೆಸ್‌ನಿಂದ ಹಿಂದೆ ಸರಿಯುವುದು ಸುಲಭ. ಲಾಸ್‌ನ ಪ್ರಮಾಣ ಚಿಕ್ಕದಿದ್ದಾಗ, ಅದರಿಂದ ಚೇತರಿಸಿಕೊಳ್ಳುವುದೂ ಸುಲಭ. ಹೀಗೆ ಮಾಡುವ ಬದಲು ಯಾರನ್ನೋ ಮೆಚ್ಚಿಸಲು ಹೋದರೆ, ಇನ್ಯಾರನ್ನೋ ಅನುಕರಿಸಲು ಹೋದರೆ ‘ಲಾಸ್’ನ ಹಿಂದೆ ಹಿಂದೆಯೇ ನಡೆದು ಹೋಗಬೇಕಾಗುತ್ತದೆ.

ಇಲ್ಲಿ ಎಲ್ಲರೂ ಅರ್ಥ ಮಾಡಿಕೊಳ್ಳಲೇಬೇಕಾದ ಮತ್ತೊಂದು ವಿಷಯವೂ ಇದೆ. ಏನೆಂದರೆ, ಒಂದು ಸಾಹಸ, ಬಿಜಿನೆಸ್, ಉದ್ದಿಮೆ ಆರಂಭಿಸಲು ಹೊರಟವನು-ವಿಪರೀತ ಆತ್ಮವಿಶ್ವಾಸ ಹೊಂದಿರಬೇಕು. ನಾನು ಹೀರೋ. ನನಗೆ ನಾನೇ ಮಾದರಿ. ನಾನು ಗೆಲ್ಲುವುದಕ್ಕೆಂದೇ ಬಂದವನು. ಸೋಲೆಂಬುದು ನನ್ನ ಬದುಕಲ್ಲಿ ಹೀಗೆ ಬಂದು ಹಾಗೆ ಹೋಗಿಬಿಡುವ ಬಿಸಿಲುಮಳೆ ಅಷ್ಟೆ ಎಂದು ಗಟ್ಟಿಯಾಗಿ ನಂಬಿರಬೇಕು. ಇದೇ ಮಾತನ್ನು ಒಳಮನಸ್ಸಿಗೂ ಹೇಳಿರಬೇಕು. ಹೀಗೆ ಮಾಡದೇ ಹೋದಲ್ಲಿ ಒಂದು ಪುಟ್ಟ ಸೋಲಿಗೂ ಮನಸ್ಸು ಕಂಗಾಲಾಗುತ್ತದೆ. ಬೆಚ್ಚಿ ಬೀಳುತ್ತದೆ. ನಂತರದ ಪ್ರತಿ ಹೆಜ್ಜೆಯಲ್ಲೂ ಸೋಲಿನ, ಅಪ ಯಶಸ್ಸಿನ ಭಯದಲ್ಲೇ ಉಳಿಯುತ್ತದೆ. ಪರಿಣಾಮ, ಯಾವುದೇ ಹೊಸ ಪ್ರಯತ್ನಕ್ಕೂ ಮನಸ್ಸು ಸಂಭ್ರಮದಿಂದ ಮುಂದಾಗುವುದೇ ಇಲ್ಲ. ಅರೆಮನಸ್ಸಿನಿಂದ ಕೆಲಸ ಮಾಡಿದ್ದೇ ಕಾರಣವಾಗಿ, ದೊಡ್ಡ ಮಟ್ಟದ ಯಶಸ್ಸು ಕೈ ಹಿಡಿಯುವುದೂ ಇಲ್ಲ.

ಈ ಮಾತಿಗೆ ಒಂದು ಉದಾಹರಣೆ ಕೇಳಿ: ನನ್ನ ಪರಿಚಯದ ಡಾಕ್ಟರೊಬ್ಬರಿದ್ದಾರೆ. ಎಂಟು ವರ್ಷಗಳ ಹಿಂದೆ ದಾವಣಗೆರೆಯಲ್ಲಿ ಅವರೊಂದು ನರ್ಸಿಂಗ್ ಹೋಂ ಆರಂಭಿಸಿದರು. ಅವರ ಕೈ ಗುಣದ ಬಗ್ಗೆ ಜನರಿಗೆ ನಂಬಿಕೆಯಿತ್ತು. ಮೊದಮೊದಲು ನರ್ಸಿಂಗ್ ಹೋಂ ಚೆನ್ನಾಗಿಯೇ ನಡೆಯತೊಡಗಿತು. ರೋಗಿಗಳ ಸಂಖ್ಯೆ ವಿಪರೀತ ಹೆಚ್ಚಿದಾಗ ಹಣಕಾಸು ವ್ಯವಹಾರ ನೋಡಿಕೊಳ್ಳಲೆಂದು ಒಂದಿಬ್ಬರು ನೌಕರರನ್ನು ನೇಮಿಸಿಕೊಳ್ಳಲಾಯಿತು. ಆ ವೈದ್ಯರಿಗೆ ಎಲ್ಲರನ್ನೂ ನಂಬಿ ಬಿಡುವಂಥ ಮನಸ್ಸಿತ್ತು. ಅವರು ಹೊಸ ನೌಕರರನ್ನು ನಂಬಿದರು. ಹಣಕಾಸಿನ ವಿಷಯವನ್ನು ಅಕೌಂಟ್ಸ್ ವಿಭಾಗಕ್ಕೆ ಬಿಟ್ಟು ತಾವು ಔಷಗಳ, ಆಪರೇಷನ್ನಿನ, ರೋಗಿಗಳ ಸಂಕಟದ ಮಾತುಗಳ ಮಧ್ಯೆ ಕಳೆದು ಹೋದರು. ಕೆಲವೇ ದಿನಗಳಲ್ಲಿ ಅಕೌಂಟ್ಸ್ ವಿಭಾಗದ ನೌಕರರಿಂದ ರಾಮನ ಲೆಕ್ಕ -ಕೃಷ್ಣನ ಲೆಕ್ಕ ಬಂತು! ಓಹ್, ಏನೋ ಎಡವಟ್ಟಾಗುತ್ತಿದೆ ಎಂದುಕೊಂಡು ಈ ವೈದ್ಯರು ಅಕೌಂಟ್ಸ್ ವಿಭಾಗಕ್ಕೆ ಹೋಗಿ ವಿಚಾರಣೆಗೆ ನಿಂತರೆ, ಆ ಇಬ್ಬರೂ ಬ್ಬೆಬ್ಬೆಬ್ಬೆ ಎಂದು ತೊದಲಿದರು. ಮರುದಿನ ಎಲ್ಲ ಲೆಕ್ಕ ಕೊಡ್ತೇವೆ ಅಂದವರು, ರಾತ್ರೋರಾತ್ರಿ ಊರು ಬಿಟ್ಟು ಪರಾರಿಯಾದರು. ಚೆಕ್‌ಗಳ ದುರ್ಬಳಕೆಯಾಗಿತ್ತು. ಪರಿಣಾಮ, ಭಾರೀ ಪ್ರಮಾಣದ ಲಾಸ್ ಈ ವೈದ್ಯರ ಕೈ ಹಿಡಿಯಿತು. ದಾವಣಗೆರೆಗೇ ಹೆಸರಾಗಿದ್ದ ನರ್ಸಿಂಗ್ ಹೋಂಗೆ ಅದೊಂದು ದಿನ ಬೀಗ ಬಿತ್ತು.

ಇಷ್ಟಾದರೂ ಆ ವೈದ್ಯರು ಗಾಬರಿಯಾಗಲಿಲ್ಲ. ತಾಳ್ಮೆ ಕಳೆದುಕೊಳ್ಳಲಿಲ್ಲ. ಊರು ಬಿಟ್ಟು ಹೋಗಲಿಲ್ಲ. ತಲೆ ತಪ್ಪಿಸಿಕೊಂಡು ತಿರುಗಲಿಲ್ಲ. ಬದಲಿಗೆ, ನರ್ಸಿಂಗ್ ಹೋಂ ಇತ್ತಲ್ಲ; ಅದೇ ಏರಿಯಾದಲ್ಲಿ ಬಾಡಿಗೆ ಮನೆ ಮಾಡಿದರು. ಮನೆಯೊಳಗೇ ಇದ್ದ ಇರುಕ್ಕು ರೂಮನ್ನೇ ಶಾಪ್ ಮಾಡಿಕೊಂಡರು. ಅಟೆಂಡರ್, ನರ್ಸ್, ಡಾಕ್ಟರ್... ಈ ಮೂರೂ ಪಾತ್ರವನ್ನು ತಾವೇ ನಿರ್ವಹಿಸಿದರು. ಹಳೆಯ ಸಾಲವನ್ನೆಲ್ಲ ಸ್ವಲ್ಪ ಸ್ವಲ್ಪವಾಗಿ ತೀರಿಸಿದರು. ಎಂಥ ಸಂದರ್ಭದಲ್ಲೂ ಚಿಕಿತ್ಸೆಗೆ ದುಬಾರಿ ಬಿಲ್ ಹಾಕಲಿಲ್ಲ. ಮುಂದೆ ಏನಾಯಿತೆಂದರೆ, ಒಂದೆರಡು ವರ್ಷಗಳಲ್ಲಿ ಎಲ್ಲ ಸಾಲವೂ ತೀರಿತು. ಒಂದಷ್ಟು ಲಾಭ ಕೈ ಸೇರಿತ್ತು. ಸಾಲವೆಲ್ಲಾ ಮುಗಿದ ತಕ್ಷಣ ಆ ವೈದ್ಯರು ಮತ್ತಷ್ಟು ಉತ್ಸಾಹದಿಂದ ದುಡಿಮೆಗೆ ನಿಂತರು. ನಂತರ, ತಾವು ಬಾಡಿಗೆಗಿದ್ದ ಮನೆಯನ್ನೇ ಖರೀದಿಸಿದರು. ಅದರ ಮೇಲೆ ನರ್ಸಿಂಗ್ ಹೋಂ ಕಟ್ಟಿಸಿದರು. ತಮಾಷೆಯೆಂದರೆ, ಜನ ಆಗಲೂ- ಡಾಕ್ಟರ್‌ಗೆ ಲಾಟರಿ ಹೊಡೆಯಿತು, ಅದೃಷ್ಟ ಕೈ ಹಿಡಿಯಿತು ಎಂದೆಲ್ಲ ಮಾತಾಡಿಕೊಂಡರು.

ಒಂದು ಯಶಸ್ಸಿಗಾಗಿ ಆ ವೈದ್ಯ ಹಗಲಿರುಳೂ ದುಡಿದಿದ್ದ. ಹಳೆಯದನ್ನು ನೆನೆದು ಬಿಕ್ಕಳಿಸಲು ಹೊರಟವನು-ರೋಗಿಯ ಮುಖ ಕಂಡಾಕ್ಷಣ ನಗೆಯ ಮುಖವಾಡ ಹಾಕಿದ್ದ. ಗೆಲ್ಲಬೇಕು ಎಂಬ ಒಂದೇ ಹಟದಿಂದ ತನ್ನ ಪ್ರೈವೆಸಿಗೆ ಕತ್ತರಿ ಹಾಕಿಕೊಂಡಿದ್ದ. ಒಂದೊಂದು ಸಂದರ್ಭದಲ್ಲಿ ಬೆಳಗಿಂದ ಸಂಜೆಯವರೆಗೂ ಒಬ್ಬೇ ಒಬ್ಬ ರೋಗಿಯೂ ಬಾರದೆ ಹೋದಾಗ ಮೌನವಾಗಿ ಕಂಬನಿ ಮಿಡಿದಿದ್ದ. ಬಿಕ್ಕಳಿಕೆಯ ಮಧ್ಯೆ ಹಾಗೇ ಜೊಂಪು ಹತ್ತಿದಾಗ ಒಂದು ಚೆಂದದ ಕನಸು ಕಂಡಿದ್ದ. ಕೌಟುಂಬಿಕ ಕಾರ್ಯಕ್ರಮಗಳಿಂದ ದೂರವೇ ಉಳಿದು ಬಂಧುಗಳಿಂದ ಅನ್ನಿಸಿಕೊಂಡಿದ್ದ. ಮುಂದೊಂದು ದಿನ ಅವನು ಯಶಸ್ಸಿನ ಟ್ರ್ಯಾಕ್‌ಗೆ ಮರಳಿ ಬಂದಾಗ, ಅದೇ ಜನ ‘ಆತನ ಹಣೇಬರ ಚೆನ್ನಾಗಿದೆ’ ಎಂದರು.

ನೆನಪಿಡಿ: ಯಶಸ್ಸು ಎಂಬುದು ದೇವರ ಕರುಣೆಯಿಂದಾಗಲೀ, ಸ್ವಾಮೀಜಿಗಳ ಆಶೀರ್ವಾದ(?)ದಿಂದಾಗಲೀ, ಹಸ್ತದಲ್ಲಿರುವ ರೇಖೆಗಳ ಬಲದಿಂದಾಗಲೀ ಬರುವುದಿಲ್ಲ. ಗೆಲ್ಲಲು ಹೊರಟವನು ಕನಸನ್ನೂ ಕಾಣಬೇಕು, ಕಣ್ಣೀರನ್ನೂ ಹಾಕಬೇಕು. ಅಲ್ಲವೆ?

-ರವೀ

Read Archieves of 23 November, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books